ಮಾಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಗಡಿ
ತಾಲ್ಲೂಕು
ರಂಗನಾಥ ಸ್ವಾಮಿ ದೇಗುಲ(Ranganatha Swamy temple)
ರಂಗನಾಥ ಸ್ವಾಮಿ ದೇಗುಲ(Ranganatha Swamy temple)
Country ಭಾರತ
Stateಕರ್ನಾಟಕ (Karnataka)
Districtರಾಮನಗರ ಜಿಲ್ಲೆ (Ramanagara district)
Elevation
೯೨೫ m (೩,೦೩೫ ft)
Population
 (2001)
 • Total೨೫,೦೦೦
Languages
 • Officialಕನ್ನಡ Kannada
Time zoneUTC+5:30 (IST)

ಮಾಗಡಿಯು ಬೆಂಗಳೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿದ್ದು, 2007ರಲ್ಲಿ ರಚನೆಗೊಂಡ ರಾಮನಗರ ಜಿಲ್ಲೆಯಲ್ಲಿ ಒಂದು ತಾಲ್ಲೂಕು ಕೇಂದ್ರವಾಗಿದೆ. 913 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿತ್ತು ಆದರೆ ತಾವರೆಕೆರೆ ಹೋಬಳಿಯನ್ನು ಮಗಡಿಯಿಂದ ಬೆಂಗಳೂರಿಗೆ ಸೇರ್ಪಡೆ ಮಾಡಿದ ನಂತರ 795ಚ.ಕಿ.ಮೀ ಹೊಂದಿದೆ.

ಬೆಂಗಳೂರಿನ ನಿರ್ಮಾತೃ ಮಾಗಡಿ ಕೆಂಪೇಗೌಡನ ಊರು. ಪುರಾಣ ಕಾಲದ ಮಾಂಡವ್ಯ ಮಹರ್ಷಿಗಳ ತಪೋಭೂಮಿಯು ಕೂಡ ಇದೇ ಮಾಗಡಿ. ಕೆಂಪೇಗೌಡನು ತನ್ನ ಆಳ್ವಿಕೆಯ ಪ್ರದೇಶದ ಮಹಾಗಡಿಯನ್ನಾಗಿ ಇದನ್ನು ಮಾಡಿಕೊಂಡಿದ್ದು ಕಾಲ ಕ್ರಮೇಣ ಇದು ಉಚ್ಚಾರದಲ್ಲಿ ಮಾಗಡಿಯಾಗಿದೆ. ವಿಜಯನಗರದ ಅರಸರಲ್ಲಿ ಸಾಮಂತನಾಗಿದ್ದ ಕೆಂಪೇಗೌಡನು ತನ್ನ ಪೌರುಷ ಪರಾಕ್ರಮಗಳಿಂದಲೇ ಹೆಸರುವಾಸಿಯಾಗಿದ್ದನು. ಆ ಕಾಲದಲ್ಲಿ ರಾಜ್ಯದ ಬಲವರ್ಧನೆಗಾಗಿ ಹಾಗು ರಾಜ್ಯ ಖಜಾನೆ ಸುಭದ್ರಪಡಿಸಲೋಸುಗ ಕಟ್ಟಿದ ಕೋಟೆಯನ್ನು ಇಂದಿಗೂ ಮಾಗಡಿಯಲ್ಲಿ ಕಾಣಬಹುದಾಗಿದೆ. ಕೆಂಪೇಗೌಡ ಬೆಂಗಳೂರು ಕಟ್ಟಿದ ಕಾಲಕ್ಕೆ ಅಂದರೆ 16 ನೇ ಶತಮಾನದ ಸುಮಾರಿಗೆ ಕೆಂಪೇಗೌಡರ ಆಳ್ವಿಕೆಯ ಭಾಗಗಳಿಗೆ ಮಾಗಡಿ ಪಟ್ಟಣವೇ ರಾಜಧಾನಿಯಾಗಿತ್ತು ಎನ್ನುತ್ತದೆ ಇತಿಹಾಸ. ಶಿವಗಂಗೆ, ಸಾವನದುರ್ಗ, ಮಾಗಡಿ ಕೋಟೆ, ಮಾಗಡಿ ರಂಗನಾಥ ದೇವಾಲಯ, ಸೋಮೇಶ್ವರ ದೇಗುಲ ಕುದೂರಿನ ಏಕಶಿಲಾ ಬೆಟ್ಟ ಮುಂತಾದ ಪ್ರವಾಸೀ ಕೇಂದ್ರಗಳನ್ನು ಹೊಂದಿದೆ.

ಸಾವನದುರ್ಗವು ಮಾಗಡಿಯಿಂದ 13 ಕಿ.ಮೀ. ದೂರದಲ್ಲಿದ್ದು, ಏಕಶಿಲಾ ಬೆಟ್ಟವಾಗಿದೆ ಹಾಗೂ 4022 ಅಡಿ ಎತ್ತರವಿದೆ. ಇಲ್ಲಿ ಚೋಳರ ಕಾಲದ ವೀರಭದ್ರಸ್ವಾಮಿ ಹಾಗೂ ಲಕ್ಷೀನರಸಿಂಹ ದೇವಾಲಯಗಳಿವೆ. ಸಾವನದುರ್ಗದ ಹಳೆಯ ಹೆಸರು ಸಾವಿನದುರ್ಗ ಎಂದು ಎಂಬ ಉಲ್ಲೇಖವಿದೆ. ಏಕೆಂದರೆ ಟಿಪ್ಪು ಸುಲ್ತಾನ್ ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಘೋರ ಅಪರಾದ ಮಾಡಿದರೆ ಅವರನ್ನು ಈ ಬೆಟ್ಟದ ಮೇಲಿನಿಂದ ಕೆಳಕ್ಕೆ ತಳ್ಳಿಸುತ್ತಿದ್ದನೆಂದು ಹೇಳಲಾಗುತ್ತದೆ.ಕಲ್ಲುದೇವನಹಳ್ಳಿ ಗ್ರಾಮದಲ್ಲಿ ಮಹದೇಶ್ವರ ದೇವಾಲಯವಿದೆ ಅಲ್ಲದೆ ಕೆಂಪೆಗೌಡರಿಗೆ ಬೆಣ್ಣೆಕೊಡುತಿದ್ದ ಬೆಣ್ಣೆ ಹೊನ್ನಮ್ಮ ಕಲ್ಲುದೇವನ ಹಳ್ಳಿ ಗ್ರಾಮದವಳು ಆಕೆಯನ್ನು ಆಕೆಯ ವಂಶಜರೇ ಆಕೆಯ ಶೀಲದಬಗ್ಗೆ ಅನುಮಾನಿಸಿ ಆಕೆಯು ಕೆಂಪೆಗೌಡರಿಗೆ ಬಣ್ಣೆ ತೆಗೆದುಕೊಂಡು ಹೋಗುವಾಗ ಆಕೆಯನ್ನು ಕಾಡಿನಲ್ಲಿ ಕೊಲೆ ಮಾಡಲಾಯಿತು ಆಕೆಯನ್ನು ಕೊಂದಜಾಗ ಕಾಲ ಪ್ರಮೇಣ ಕೊಂಡಹಳ್ಳಿ ಯಾಗಿ ಕರೆಯಲಾಗುತಿದೆ ನಂತರ ಬೆಣ್ಣೆ ಹೊನ್ನಮ್ಮನ ಹೆಸರು ಶಾಶ್ವತವಾಗಿ ಉಳಿಯಲು ಕೆಂಪೆಗೌಡರು ಆಕೆಯ ಉಟ್ಟೂರಾದ ಕಲ್ಲುದೇವನ ಹಳ್ಳಿಯಲ್ಲಿ ಕೆರೆಯನ್ನು ಕಟ್ಟಿಸುತ್ತಾರೆ ಆದರೆ ಕೆರೆಯ ಕೋಡಿ ಸುಭದ್ರವಲ್ಲದ ಕಾರಣ ಕೆರೆ ಹೊಡೆದು ಹೋಗುತ್ತದೆ.(ಕೆರೆಯ 3/4ಬಾಗ ಇನ್ನು ಉಳಿದಿದೆ) ನಂತರ ಹೊನ್ನಮ್ಮನ ಗಂಡ ಕರಿಗೌಡನ ವಾಸ ಸ್ಥಳ (ಕರಿಗೌಡನ ದೊಡ್ಡಿ)ಯಲ್ಲಿ ಕರೆಯನ್ನು ಕಟ್ಟಲಾಗಿದೆ.ಬೆಣ್ಣೆ ಹೊನ್ನಮನ ಸಮಾದಿ ಕಲ್ಲುದೇವನ ಹಳ್ಳಿ ಗೂಳಯ್ಯ ನವರ ಮಗ ನಾಗಣ್ಣನವರ ಜಮೀನಿನಲ್ಲಿ ಇದೆ ಎಂದು ಮಾಜಿ ಸೈನಿಕ ಕೆ.ಟಿ.ಜಯಶಂಕರ್ ತಿಳಿಸಿದ್ದಾರೆ. ಸಾತನೂರು ಪುಂಡರಿಕವಿಠಲದಾಸರ ಜನ್ಮಸ್ಥಳ ಇವಿಷ್ಟೇ ಅಲ್ಲದೆ ಕನ್ನಡ-ತೆಲುಗು ಭಾಷೆಗಳಲ್ಲಿ ವಚನಗಳನ್ನು ರಚಿಸಿ, ಬಸವಣ್ಣನವರ ವಚನಗಳನ್ನು ತೆಲುಗು ಭಾಷಿಗರಿಗೆ ತಿಳಿಯುವಂತೆ ಮಾಡಿದ ಖ್ಯಾತ ವಚನಕಾರ 'ಪಾಲ್ಕುರಿಕೆ ಸೋಮನಾಥ'ರ ಸಮಾಧಿ ಸ್ಥಳವೆಂದು ನಂಬಲಾಗಿರುವ ಕಲ್ಯ ಗ್ರಾಮವು ಮಾಗಡಿಯ ಬಳಿಯೇ ಇದೆ.

ಮಾಗಡಿ ಸುತ್ತಮುತ್ತಲಿನ ಪರಿಸರ ಮತ್ತು ಅರಣ್ಯ ಪ್ರದೇಶವನ್ನು ನವೋದಯ ಸಾಹಿತ್ಯದ ಭಾರತ ಸಂಜಾತ ಬ್ರಿಟೀಶ್ ಭೇಟೆಗಾರ 'ಕೆನಿತ್ ಆಂಡರ್ಸನ್' ಎಂಬುವರು ತಮ್ಮ 'ಹಳೆಯ ಮುನ್ನುಸಾಮಿ ಮತ್ತು ಮಾಗಡಿಯ ನರಭಕ್ಷಕ(Old Munnusamy and the man-eater of Magadi)' ಎಂಬ ಕಥಾನಕದಲ್ಲಿ ವರ್ಣಿಸಿದ್ದಾರೆ. ಇತ್ತೀಚಿಗೆ ಹೆಚ್ಚಿರುವ ನಗರೀಕರಣದ ಪ್ರಭಾವದಿಂದಲೂ ಮತ್ತು ಪರಿಸರ ಮಾಲಿನ್ಯದಿಂದಲೂ ಮಾಗಡಿ ಸುತ್ತ ಮುತ್ತಲಿನ ಅರಣ್ಯ ಸಂಪತ್ತಿನ ಜೊತೆಗೆ ಅರಣ್ಯ ಜೀವ ಸಂಕುಲವು ಅಳಿವಿನ ಅಂಚಿನಲ್ಲಿವೆ.

ಭೌಗೋಳಿಕವಾಗಿ ಕಪ್ಪು, ಕೆಂಪು ಮತ್ತು ಬಿಳಿಯ ಕಲ್ಲುಗಳಿಂದ ಕೂಡಿರುವ ಈ ತಾಲೂಕು ಕೆಂಪು ಮಣ್ಣಿನಿಂದ ಕೂಡಿದ್ದು ರಾಗಿ, ಭತ್ತ, ಅವರೆ, ಮಾವು ಇಲ್ಲಿನ ಮುಖ್ಯ ಆಹಾರ ಬೆಳೆಗಳು. ಬಹು ಭಾಗ ರೈತ ಸಮುದಾಯವೇ ಮಾಗಡಿ ತಾಲೂಕಿನಲ್ಲಿ ಇದೆ. ಸಮೀಪದಲ್ಲಿಯೇ ಇರುವ ರಾಜಧಾನಿ ಬೆಂಗಳೂರಿಗೆ ಬಹುತೇಕ ಆಹಾರ ಸಾಮಗ್ರಿಗಳು ದಿನಬಳಕೆಯ ವಸ್ತುಗಳು ಮಾಗಡಿ ತಾಲೂಕಿನಿಂದಲೇ ನಿತ್ಯ ಸರಬರಾಜು ಆಗುತ್ತವೆ.

ಇವಿಷ್ಟೇ ಅಲ್ಲದೆ ಕರ್ನಾಟಕದ ಕೆಲ ಮಹನೀಯರ ಜನ್ಮ ಭೂಮಿಯು ಕೂಡ ಮಾಗಡಿ ತಾಲೂಕು ಬೆಂಗಳೂರು ನಿರ್ಮಾತೃ ಗೌಡರಕುಲ ತಿಲಕ ಕೆಂಪೇಗೌಡರು, ಪುಂಡರಿಕವಿಠಲ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಶ್ರೀ ಶಿವಕುಮಾರ ಸ್ವಾಮಿಗಳು, ಸಾಲುಮರದ ತಿಮ್ಮಕ್ಕ ಮುಂತಾದವರು.

ಮಾಗಡಿ ಸ್ಥಳಗಳು/ಇತಿಹಾಸ[ಬದಲಾಯಿಸಿ]

ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನ ಹಾಗು ಸೋಮೇಶ್ವರ ದೇವಸ್ಥಾನಗಳು ಭಾರತೀಯ ಪುರಾತತ್ವ ಇಲಾಖೆಯ ಕರ್ನಾಟಕ ವಿಭಾಗದ ಸಂರಕ್ಷಿತ ಸ್ಮಾರಕಗಳಾಗಿವೆ. ಮಾಗಡಿ ಪಟ್ಟಣವನ್ನು ಸುಮಾರು ಕ್ರಿ .ಶ 1139 ರಲ್ಲಿ ಚೋಳರ ಆಡಳಿತ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆಯೆಂದು ಇತಿಹಾಸದಿಂದ ತಿಳಿಯುತ್ತದೆ.

ರಂಗನಾಥ ಸ್ವಾಮಿ ದೇವಸ್ಥಾನ
ಪುರಾಣ ಕಾಲದ ಮಾಂಡವ್ಯ ಋಷಿಗಳ ತಪೋಭೂಮಿ ಮಾಗಡಿಯಾಗಿದೆ. ಇಲ್ಲಿನ ರಂಗನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿರುವುದು ಕೂಡ ಮಾಂಡವ್ಯ ಮಹರ್ಷಿಗಳು. ಮಾಂಡವ್ಯ ಮಹರ್ಷಿಗಳ ಕಾರ್ಯಸ್ಥಾನವಾದ್ದರಿಂದ ಈ ಭಾಗಕ್ಕೆ ಮಾಂಡವ್ಯಪುರಿ ಎಂಬ ಹೆಸರಿದ್ದು ಕಾಲ ಕ್ರಮೇಣ ಮಾಗಡಿಯಾಗಿರಬಹುದು ಎಂಬ ವಾದವೂ ಇದೆ. ರಂಗನಾಥ ಸ್ವಾಮಿ ದೇವಾಲಯವನ್ನು ಪ್ರಥಮವಾಗಿ ನಿರ್ಮಾಣ ಮಾಡಿದ್ದು ಹನ್ನೆರಡನೇ ಶತಮಾನದಲ್ಲಿ ಚೋಳ ಅರಸರಿಂದ. ಅದಾಗಿ ಮುಂದೆ ಕಾಲಕ್ಕೆ ತಕ್ಕಂತೆ ಆಯಾ ರಾಜರುಗಳಿಂದ, ಪಾಳೇಗಾರರಿಂದ ದೇವಸ್ಥಾನ ಮಾರ್ಪಾಡಾಗುತ್ತಲೇ ಬಂದಿದೆ. ದೇವಸ್ಥಾನದ ಮುಂಭಾಗದಲ್ಲಿರುವ ಗರುಡ ಸ್ತಂಭ ದ ಶಾಸನದ ಪ್ರಕಾರ ದೇವಸ್ಥಾನದ ಆಕರ್ಷಣೀಯ ಗೋಪುರವನ್ನು ವಿಜಯನಗರದ ಅರಸು ಶ್ರೀ ಕೃಷ್ಣದೇವರಾಯರು ನಿರ್ಮಾಣ ಮಾಡಿಸಿದ್ದಾರೆ. ವಿಜಯನಗರ ಪತನಾನಂತರ ಮೈಸೂರು ಸಾಮ್ರಾಜ್ಯ ಆಡಳಿತಕ್ಕೆ ಒಳಪಟ್ಟ ಮಾಗಡಿಯ ರಂಗನಾಥ ಸ್ವಾಮಿ ದೇವಾಲಯಕ್ಕೆ ಟಿಪ್ಪು ಸುಲ್ತಾನ್ ಹಾಗೂ ನಂತರದ ಜಯಚಾಮರಾಜೇಂದ್ರ ಒಡೆಯರು ಕೊಡುಗೆ ನೀಡಿದ್ದಾರೆ. ಪ್ರತೀ ವರ್ಷ ಯುಗಾದಿಯ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ರಂಗನಾಥ ಸ್ವಾಮಿಯ ರಥೋತ್ಸವ ನಡೆಯುತ್ತದೆ.ಆದರೆ ಯುಗಾದಿಯ ಮರುದಿನದಿಂದಲೇ ರಂಗನಾಥ ಸ್ವಾಮಿ ದೇವಸ್ಥಾನದ ಬಯಲಿನಲ್ಲಿ ದನಗಳ ಪರಿಷೆ ಆರಂಭವಾಗುತ್ತದೆ. ಸುತ್ತಮುತ್ತಲೂ ರೈತಾಪಿ ವರ್ಗವು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದನಗಳ ಪರಿಷೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು ಮುಖ್ಯ ರಥೋತ್ಸವದ ದಿನ ದನಗಳ ಪರಿಷೆಯೂ ಕೊನೆಗೊಳ್ಳುತ್ತದೆ. ಆಕರ್ಷಣೆಯಲ್ಲಿ ದೇವಸ್ಥಾನದ ಕಲಾಕೃತಿಗಳು ಹಾಗು ವಾಸ್ತುಶಿಲ್ಪಗಳು ಇಂದಿಗೂ ಜನರನ್ನು ಸೆಳೆಯುತ್ತಿದ್ದು ಡಾ.ರಾಜ್ ಕುಮಾರ್ ಅಭಿನಯದ 'ದೇವತಾ ಮನುಷ್ಯ' ಚಿತ್ರೀಕರಣದ ಬಹುಭಾಗವನ್ನು ಇದೇ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಸಲಾಗಿದೆ.

ಸೋಮೇಶ್ವರ ದೇವಸ್ಥಾನ
ಬ್ರಿಟಿಷ್ ಇತಿಹಾಸಕಾರ ಬಿ.ಲೂಯಿಸ್ ರೈಸ್ ಉಲ್ಲೇಖಿಸುವಂತೆ ಸೋಮೇಶ್ವರ ದೇವಸ್ಥಾನವನ್ನು 1569 ರಲ್ಲಿ ಎರಡನೇ ಕೆಂಪೇಗೌಡರು ನಿರ್ಮಾಣ ಮಾಡಿಸಿದ್ದಾರೆ. ಆದರೆ ಆ ದೇವಸ್ಥಾನವು 1712 ರಲ್ಲಿ ಕೆಂಪೇಗೌಡರ ಉತ್ತರಾಧಿಕಾರಿಯಾದ ಕೆಂಪ ವೀರೇಗೌಡರು ನಿರ್ಮಾಣ ಮಾಡಿದರೆಂಬ ವಾದಗಳೂ ಇವೆ. ವಿಶಾಲವಾದ ಪ್ರಕಾರವನ್ನು ಹೊಂದಿರುವ ದೇವಸ್ಥಾನ ಆಕರ್ಷಣೀಯ ಕಂಬಗಳನ್ನು, ಗೋಪುರಗಳನ್ನು ಹೊಂದಿದೆ. ಗಂಗ ಹಾಗು ಚಾಲುಕ್ಯರ ಶೈಲಿಯ ಚಿತ್ತಾರಗಳು ಕಂಬಗಳ ಮೇಲೆ ಮೂಡಿರುವುದು ಆಗಿನ ಕಲಾವಿದರ ಕೈಚಳಕಕ್ಕೆ ಹಿಡಿದ ಕೈಗನ್ನಡಿ. ಪ್ರತೀ ವರ್ಷ ರಥಸಪ್ತಮಿಯ ದಿನ ಸೋಮೇಶ್ವರ ರಥೋತ್ಸವ ನಡೆಯುತ್ತದೆ. ದೇವಸ್ಥಾನದಿಂದ ಕೆಲವೇ ಮೀಟರುಗಳಷ್ಟು ದೂರದಲ್ಲಿ ದೊಡ್ಡ ಕಲ್ಲಿನ ಬಂಡೆಯ ಮೇಲೆ ನಂದಿಯನ್ನು ಸ್ಥಾಪಿಸಲಾಗಿದ್ದು ಅದಕ್ಕಿರುವ ಗೋಪುರ ಕೆಂಪೇಗೌಡರ ಶೈಲಿಯ ಗೋಪುರವಾಗಿದ್ದು ಮಾಗಡಿ ಪಟ್ಟಣಕ್ಕೆ ಅತೀ ಎತ್ತರದ ಬಿಂದುವಿನಲ್ಲಿದೆ. ಇಲ್ಲಿಂದ ಪೂರ್ವಕ್ಕೆ ಸಾವನದುರ್ಗದ ಬೆಟ್ಟ, ಪಶ್ಚಿಮಕ್ಕೆ ಕಲ್ಯ, ಹುತ್ರಿದುರ್ಗದ ಬೆಟ್ಟ ಹಾಗು ಉತ್ತರಕ್ಕೆ ಶಿವಗಂಗೆ ಬೆಟ್ಟಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಇವೆಲ್ಲವೂ ಕೆಂಪೇಗೌಡರ ಆಡಳಿತದಲ್ಲಿ ಕೋಟೆ ಕೊತ್ತಲಗಳನ್ನು ಹೊಂದಿದ್ದು ಮತ್ತೊಂದು ವಿಶೇಷ. ಕೆಂಪೇಗೌಡರು ತಮ್ಮ ಪ್ರಾಂತ್ಯ ಆಳ್ವಿಕೆಯ ಕಾಲದಲ್ಲಿ ಬೆಂಗಳೂರು ರಕ್ಷಣೆಗೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಗೋಪುರ ನಿರ್ಮಾಣ ಮಾಡಿದ ರೀತಿಯೇ ಬೆಂಗಳೂರೇತರ ಪ್ರದೇಶಗಳಲ್ಲಿಯೂ ಕಣ್ಗಾವಲಿಗೋಸ್ಕರ ಗೋಪುರ ನಿರ್ಮಾಣ ಮಾಡಿಸಿದ್ದರು. ಅಂತಹುದರಲ್ಲಿ ಒಂದು ಗೋಪುರ ಬಹುಶಃ ಸೋಮೇಶ್ವರ ದೇವಸ್ಥಾನ ಆವರಣದಲ್ಲಿಯೇ ಇದ್ದಿರಬಹುದೆಂದು ಊಹಿಸಲಾಗಿದೆ. ಈಗಿರುವ ನಂದಿ ವಿಗ್ರಹದ ಗೋಪುರವೇ ಆ ಗೋಪುರವೆಂದು ಕೆಲವರು ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಸುತ್ತ ಮುತ್ತಲಿನ ಪ್ರದೇಶಕ್ಕೆ ಈ ಗೋಪುರ ಎತ್ತರದಲ್ಲಿರುವುದೇ ಊಹೆಗೆ ಕಾರಣವಾಗಿದೆ.

ಸೋಮೇಶ್ವರ ದೇಗುಲದ ಕಂಬಗಳ ಮೇಲಿನ ಕಲಾಕೃತಿಗಳು

ಸಾವನದುರ್ಗ
ಏಷ್ಯಾ ಖಂಡದಲ್ಲೇ ಸಾವನ ದುರ್ಗದ ಬೆಟ್ಟ ಅತೀ ದೊಡ್ಡ ನೈಸರ್ಗಿಕ ಏಕಶಿಲಾ ರಚನೆಯಾಗಿದ್ದರೆ, ಮಧುಗಿರಿಯ ಬೆಟ್ಟ ಏಷ್ಯಾದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟವೆಂದು ಖ್ಯಾತವಾಗಿದೆ. ಸಾವನ ದುರ್ಗ ಬೆಟ್ಟ 1226 ಮೀಟರ್ ಎತ್ತರವಿದೆ. ಇಷ್ಟೇ ಅಲ್ಲದೆ ವೈಜ್ಞಾನಿಕವಾಗಿ ದಖನ್ ಪ್ರಸ್ಥ ಭೂಮಿಯಲ್ಲಿ ಮುಖ್ಯ ಭಾಗವಾಗಿದೆ. ಬೆಟ್ಟದ ಮೇಲೆ ಸುರಿದ ಮಳೆಯೆಲ್ಲ ಅರ್ಕಾವತಿ ನದಿಗೆ ಸೇರಲಿದ್ದು ಅರ್ಕಾವತಿಗೆ ಕಟ್ಟಲಾಗಿರುವ ಮಂಚನಬೆಲೆ ಜಲಾಶಯ ಕೂಡ ಸಾವನದುರ್ಗಕ್ಕೆ ಸನಿಹದಲ್ಲಿದ್ದು ಬೆಟ್ಟ ಹತ್ತಿದರೆ ಕಾಣುತ್ತದೆ. ಸಾವನದುರ್ಗದ ಬೆಟ್ಟ ಸಾಹಸಿ ಚಾರಣಿಗರಿಗೆ ಹೇಳಿ ಮಾಡಿಸಿದಂತಿದ್ದು ಕೊಂಚ ಅಪಾಯಕಾರಿ ಸ್ಥಳವೂ ಕೂಡ. ಸಾವನ ದುರ್ಗದ ಬೆಟ್ಟದ ಪಾತ್ರದಲ್ಲಿ ಎರಡು ದೊಡ್ಡ ಬೆಟ್ಟಗಳಿದ್ದು ಒಂದನ್ನು ಕರಿ ಗುಡ್ಡ ಹಾಗು ಮತ್ತೊಂದನ್ನು ಬಿಳಿಗುಡ್ಡ ಎಂದು ಕರೆಯಲಾಗುತ್ತದೆ. ಕ್ರಿ.ಶ 1340ರ 3 ನೇ ಹೊಯ್ಸಳ ಬಲ್ಲಾಳನ ಮಾಡಬಾಳ್ ನಲ್ಲಿ ದೊರಕಿರುವ ಧಾಖಲೆಯ ಪ್ರಕಾರ ಈ ಬೆಟ್ಟವನ್ನು ಸಾವಂದಿ ಎಂದು ಕರೆಯಲಾಗಿದೆ. ಸಾವನ ದುರ್ಗಾ ಎಂಬ ಹೆಸರು ಬರಲು ಇದನ್ನು ಮುಖ್ಯ ಕಾರಣವಾಗಿ ಪರಿಗಣಿಸಿದರೂ ಮತ್ತೊಂದು ವಾದವಾಗಿ ಸಮಂತರಾಯ ಎಂಬ ಹೆಸರಿನಿಂದ ಸಾವನದುರ್ಗ ಹೆಸರು ಬಂದಿದೆ ಎನ್ನಲಾಗುತ್ತಿದೆ. ಸಾಮಂತರಾಯನು ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯನಲ್ಲಿ ಸಾಮಂತ ರಾಜನಾಗಿದ್ದವನು. ಆತನಿದ್ದ ಸ್ಥಳ ಮಾಗಡಿ ಪ್ರದೇಶವೇ ಆಗಿದ್ದ ಕಾರಣ ಅವನ ಹೆಸರೇ ಬಂದಿದೆ ಎನ್ನುವ ಊಹೆಗಳಿವೆ. 1638 ರಿಂದ 1728 ರ ವರೆವಿಗೂ ಕೆಂಪೇಗೌಡರ ಎರಡನೇ ರಾಜಧಾನಿಯೇ ಆಗಿತ್ತು ಸಾವನದುರ್ಗ. ವಿಜಯನಗರ ಸಾಮ್ರಾಜ್ಯ ಪತನಾನಂತರ ಕೆಲ ಕಾಲದಲ್ಲೇ ಕೆಂಪೇಗೌಡರು ಮಡಿದಾಗ ಮೈಸೂರಿನ ದಳವಾಯಿ ಮಾಗಡಿ ಪ್ರದೇಶವನ್ನು ಆಕ್ರಮಿಸಿಕೊಂಡರು. ಅಲ್ಲಿಂದ ಮುಂದೆ ಮೈಸೂರಿನ ಟಿಪ್ಪುಸುಲ್ತಾನ್ ಆಡಳಿತಕ್ಕೆ ಒಳಪಟ್ಟ ಸಾವನ ದುರ್ಗವನ್ನು ಟಿಪ್ಪು ಸುಲ್ತಾನ್ ಶಿಕ್ಷಿಸುವ ತಾಣವಾಗಿಸಿಕೊಳ್ಳುತ್ತಾನೆ. ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಘೋರ ಅಪರಾಧ ಮಾಡಿದರೆ ಅವರನ್ನು ಬೆಟ್ಟದ ಮೇಲಿನಿಂದ ತಳ್ಳುವ ಶಿಕ್ಷೆಗೆ ಗುರಿಪಡಿಸುತ್ತಿದ್ದನಂತೆ. ಈ ಕಾರಣದಿಂದ ಈ ಸ್ಥಳಕ್ಕೆ ಸಾವಿನ ದುರ್ಗ ಎಂಬ ಹೆಸರು ಬಂದಿದ್ದು, ಮುಂದೆ ಸಾವನ ದುರ್ಗ ಎಂದಾಗಿದೆ ಎನ್ನುವುದು ಒಂದು ಊಹೆ.ಮುಂದೆ ಟಿಪ್ಪು ಸುಲ್ತಾನನಿಂದ ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಾಗಡಿ ಪ್ರದೇಶವನ್ನು ಲಾರ್ಡ್ ಕಾರ್ನ್ ವಾಲಿಸ್ ವಶಪಡಿಸಿಕೊಂಡನು. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರ ದೇವರ ಗುಡಿ ಹಾಗು ಲಕ್ಷ್ಮಿ ನರಸಿಂಹ ದೇವರ ಗುಡಿಗಳಿವೆ. ಕರ್ನಾಟಕ ಸರ್ಕಾರ ನಿಭಾಯಿಸುತ್ತಿರುವ ಸಣ್ಣ ಅರಣ್ಯ ಪ್ರದೇಶವು ಇಲ್ಲಿದೆ. 'ಎ ಪ್ಯಾಸೇಜ್ ಟು ಇಂಡಿಯಾ' ಎನ್ನುವ ಹಾಲಿವುಡ್ ಚಿತ್ರವನ್ನು ಸಾವನದುರ್ಗದ ಬೆಟ್ಟ ಪ್ರದೇಶಗಳ ಸುತ್ತ ಮುತ್ತ ಚಿತ್ರೀಕರಿಸಲಾಗಿದ್ದು ಒಂದು ಕಾಲಕ್ಕೆ ಸಾವನದುರ್ಗದಲ್ಲಿ ಅತೀ ಹೆಚ್ಚಾಗಿ ಚಿತ್ರೀಕರಣಗಳು ನಡೆಯುತ್ತಿದ್ದವು.

ಸಾವನದುರ್ಗ ಬೆಟ್ಟ

ಕೆಂಪೇಗೌಡರ ಸಮಾಧಿ[ಬದಲಾಯಿಸಿ]

ಕೆಂಪೇಗೌಡರು 1565 ರಲ್ಲಿ ನಡೆದ ತಾಳೀಕೋಟೆ ಯುದ್ಧದಲ್ಲಿ ವಿಜಯನಗರವನ್ನು ಬೆಂಬಲಿಸಿ ತಮ್ಮ ಪುತ್ರನೂ ಒಳಗೊಂಡಂತೆ ಸುಮಾರು 2000 ಸೈನಿಕರ ತುಕಡಿಯನ್ನು ವಿಜಯನಗರಕ್ಕೆ ಕಳುಹಿಸಿಕೊಡುತ್ತಾರೆ. ಆದರೆ ವಿಜಯನಗರವು ದಖನ್ನಿನ ಸುಲ್ತಾನರಿಂದ ನಾಶವಾಗಿ ತಾವು ಕಳುಹಿಸಿದ್ದ ಸೈನ್ಯವೆಲ್ಲಾ ನಾಶವಾಗಿದ್ದು ತಿಳಿದ ಕೆಂಪೇಗೌಡರು ತೀವ್ರ ದುಃಖಿತರಾಗುತ್ತಾರೆ.

ವಿಜಯನಗರದ ಅರಸು ಕುಲದ ನಾಶ ಕೆಂಪೇಗೌಡರಿಗೆ ನುಂಗಲಾರದ ತುತ್ತಾಗುತ್ತದೆ, ವೈರಿಗಳ ಕಣ್ಣು ವಿಜಯನಗರದ ಸಾಮಂತ ರಾಜರುಗಳ ಮೇಲೆ ಹರಿಯುತ್ತದೆ ಎಂಬ ಸುಳಿವು ಇದ್ದ ಕೆಂಪೇಗೌಡರು ತಮ್ಮ ಆಳ್ವಿಕೆಯ ಪ್ರದೇಶಗಳ ಸುತ್ತಲೂ ಪಹರೆ ಬಿಗಿಗೊಳಿಸಲು ಮುಂದಾಗುತ್ತಾರೆ. ತಮ್ಮ ಆಳ್ವಿಕೆಯ ಗಡಿಗಳಾಗಿದ್ದ ಮಾಗಡಿ, ಶಿವಗಂಗೆ, ಹುಲಿಯೂರು ದುರ್ಗ, ಹುತ್ರಿ ದುರ್ಗ ಗಳ ಮೇಲೆ ಅತೀವ ಗಮನವಿರಿಸುತ್ತಾರೆ. ಅದೇ ಸಮಯದಲ್ಲಿ ಕುಣಿಗಲ್ ನಿಂದ ಮಾಗಡಿಗೆ ಬರುವ ಸಮಯದಲ್ಲಿ ಮಾಗಡಿಗೆ ಸಮೀಪ ಕೆಂಪಾಪುರ ಎಂಬಲ್ಲಿ ನಡೆದ ಭೀಕರ ಯುದ್ಧದಲ್ಲಿ ಕೆಂಪೇಗೌಡರು ವೀರಮರಣವನ್ನಪ್ಪಿದರು ಎಂದು ಶಾಸನದಲ್ಲಿ ಉಲ್ಲೇಖಿತವಾಗಿದೆ. ಇದುವರೆಗೂ ಇದ್ದ ಕೆಂಪೇಗೌಡರ ಸಮಾಧಿ ಸ್ಥಳದ ಬಗೆಗಿನ ಊಹಾ ಪೋಹಗಳಿಗೆ ತೆರೆ ಎಳೆಯುವಂತೆ ಕೆಂಪೇಗೌಡರ ಕುರಿತು ಅಧ್ಯಯನ ನಡೆಸುತ್ತಿದ್ದವರೊಬ್ಬರು ಸಮಾಧಿಯನ್ನು ಪತ್ತೆ ಹಚ್ಚಿದ್ದಾರೆ. ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮದಲ್ಲಿ ಬಸವಣ್ಣ ದೇವಾಲಯದ ಬಳಿಯಿರುವ ಮಂಟಪದಂತಹ ರಚನೆಯೊಂದರ ಕಲ್ಲಿನ ಮೇಲೆ "ಪಿರಿಯ ಕೆಂಪೆಯಗಉಡರಯ್ಯನವರು ಕುಣಿಗಿಲಿಂದ ಬಂದು ಯಿಬಳಿ ಜಗಳವನು ಮಾಡಿ ಅಯಿಕ್ಯವಾಗಿ ಕೈಲಾಸಕೆ ಪೋದ ಸ್ಥಳ" ಎಂದು ಕಡೆದಿರುವುದನ್ನು ಪ್ರಮುಖ ಆಧಾರವಾಗಿರಿಸಿಕೊಂಡು ಅದು ಕೆಂಪೇಗೌಡರ ಸಮಾಧಿ ಎಂದು ಧೃಡೀಕರಿಸಲಾಗಿದೆ. ಕೆಂಪೇಗೌಡರ ಸಮಾಧಿಯನ್ನು ಅವರ ಪುತ್ರ ಇಮ್ಮಡಿ ಕೆಂಪೇಗೌಡ ನಿರ್ಮಾಣ ಮಾಡಿದ್ದಾರೆ, ಶತ್ರುಗಳಿಗೆ ತಿಳಿದರೆ ಸಮಾಧಿಯನ್ನು ನಾಶಪಡಿಸಬಹುದೆಂಬ ಆತಂಕದಿಂದ ಸಮಾಧಿ ಸ್ಥಳವನ್ನು ಗೌಪ್ಯವಾಗಿರಿಸಲಾಗಿತ್ತು ಎನ್ನಲಾಗುತ್ತಿದೆ.


ಸಂಖ್ಯಾಬಲ[ಬದಲಾಯಿಸಿ]

2001ರ ಭಾರತ ಜನಗಣತಿಯ ಪ್ರಕಾರ ಮಾಗಡಿಯ ಜನಸಂಖ್ಯೆ 25031 ದಷ್ಟಿದ್ದು ಅದರಲ್ಲಿ ಶೇಕಡಾ 51 ರಷ್ಟು ಪುರುಷರಾದರೆ ಶೇಕಡಾ 49 ರಷ್ಟು ಸ್ತ್ರೀ ಪ್ರಮಾಣವಿದೆ. ಇಲ್ಲಿನ ಸರಾಸರಿ ಸಾಕ್ಷರತಾ ಪ್ರಮಾಣ ಶೇಕಡಾ 67 ರಷ್ಟಿದೆ. ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣಕ್ಕಿಂತಲೂ(59.5%) ಹೆಚ್ಚಾಗಿರುವುದು ಇಲ್ಲಿ ಗಮನಾರ್ಹ. ಪುರುಷ ಸಾಕ್ಷರತಾ ಪ್ರಮಾಣ 73% ಮತ್ತು ಸ್ತ್ರೀ ಸಾಕ್ಷರತಾ ಪ್ರಮಾಣ 60%.

ಆಕರಗಳು[ಬದಲಾಯಿಸಿ]


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಮಾಗಡಿ&oldid=1057396" ಇಂದ ಪಡೆಯಲ್ಪಟ್ಟಿದೆ