ವಿಷಯಕ್ಕೆ ಹೋಗು

ಒಲಂಪಿಕ್ ಕ್ರೀಡಾಕೂಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಒಲಂಪಿಕ್ಸ್‌ ಇಂದ ಪುನರ್ನಿರ್ದೇಶಿತ)
ಪ್ರಪಂಚದ ಐದು ಖಂಡಗಳನ್ನು ಬಿಂಬಿಸುವ ಒಲಂಪಿಕ್ ಚಕ್ರಗಳು

ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ. ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು. ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮೂಲ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ನಂತರ ಕ್ರಿ.ಶ. ೩೯೩ರವರೆಗೆ ಇದು ಮುಂದುವರೆಯಿತು. ಕಾರಣಾಂತರಗಳಿಂದ ನಿಂತುಹೋದ ಈ ಕ್ರೀಡಾಕೂಟವನ್ನು ಮತ್ತೆ ಪುನರಾರಂಭಿಸುವುದರಲ್ಲಿ ಆಸಕ್ತಿ ತೋರಿದವನು ಗ್ರೀಸ್ ದೇಶದ ಕವಿ ಹಾಗೂ ಪತ್ರಿಕಾ ಸಂಪಾದಕನಾಗಿದ್ದ ಪನಾಜಿಯೋಟಿಸ್ ಸೌಟ್ಸಾಸ್ ಎಂಬವನು. ಮುಂದೆ ೧೮೫೯ರಲ್ಲಿ ಇವಾಂಜೆಲಾಸ್ ಝಪ್ಪಾಸ್ ಎಂಬುವವನು ನವೀನಕಾಲದ ಪ್ರಪ್ರಥಮ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ ವನ್ನು ಪ್ರಾಯೋಜಿಸಿದನು. ೧೮೯೪ರಲ್ಲಿ ಫ್ರಾನ್ಸ್ ದೇಶದ ಗಣ್ಯನಾದ ಬ್ಯಾರನ್ ಪಿಯರಿ ದ ಕೂಬರ್ತಿಯು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದನು. ಈ ಸಂಸ್ಥೆಯ ವತಿಯಿಂದ ಮೊದಲನೆಯ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸಲಾಯಿತು.[] ಅಂದು ಕೆಲವೇ ರಾಷ್ಟ್ರಗಳು ಪಾಲ್ಗೊಂಡಿದ್ದ ಒಲಿಂಪಿಕ್ ಕ್ರೀಡಾಕೂಟ ಇಂದು ಹೆಚ್ಚೊಕಡಿಮೆ ವಿಶ್ವದ ಎಲ್ಲಾ ದೇಶಗಳೂ ಭಾಗವಹಿಸುವಷ್ಟರ ಮಟ್ಟಿಗೆ ಅಗಾಧವಾಗಿ ಬೆಳೆದಿದೆ. ಉಪಗ್ರಹ ಸಂಪರ್ಕದ ವ್ಯವಸ್ಥೆಯಿಂದಾಗಿ ಜಗತ್ತಿನ ಮೂಲೆಮೂಲೆಗಳಿಗೂ ಈ ಕೂಟದ ನೇರಪ್ರಸಾರ ಸಾಧ್ಯವಾಗಿದ್ದು ಒಲಿಂಪಿಕ್ ಕ್ರೀಡಾಕೂಟ ಇಂದು ಅಪಾರಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದೆ. ಅತ್ಯಂತ ಇತ್ತೀಚಿನ ಬೇಸಗೆಯ ಒಲಿಂಪಿಕ್ ಕ್ರೀಡಾಕೂಟ 2022ರಲ್ಲಿ ಬೀಜಿಂಗ್ ನಗರದಲ್ಲಿ ಹಾಗೂ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟ ಕೂಡಾ ಸುಮಾರು ೬ ತಿಂಗಳ ಬಳಿಕ ಇದೇ ನಗರದಲ್ಲಿ ನಡೆಯಿತು. ಮುಂದಿನ ಬೇಸಗೆ ಕ್ರೀಡಾಕೂಟ ೨೦೨೪ ರಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿ ನಡೆಯಲಿದೆ. ಮುಂದಿನ ಚಳಿಗಾಲದ ಕ್ರೀಡಾಕೂಟ ಇಟಲಿಮಿಲಾನ್ ನಗರದಲ್ಲಿ ೨೦೨೬ರಲ್ಲಿ ನಡೆಯಲಿದೆ.

ಪ್ರಾಚೀನ ಒಲಿಂಪಿಕ್ಸ್

[ಬದಲಾಯಿಸಿ]
ಒಲಂಪಿಯಾದಲ್ಲಿರುವ ಪ್ರಾಚೀನ ಒಲಂಪಿಕ್ ಕ್ರೀಡೆಗಳು ನಡೆಯುತ್ತಿದ್ದ ಸ್ಟೇಡಿಯಂ

ಗ್ರೀಕರು ಮನುಕುಲಕ್ಕೆ ಕೊಟ್ಟ ಅಪುರ್ವ ಸಾಂಸ್ಕೃತಿಕ ಕಾಣಿಕೆ ಎಂದರೆ ಒಲಿಂಪಿಕ್ ಕ್ರೀಡೆಗಳು. ಪುರಾತನ ಗ್ರೀಸಿನ ಒಲಿಂಪಿಯದಲ್ಲಿ ಅಖಿಲ ಹೆಲನಿಕ್ ಜನಪ್ರಿಯ ಉತ್ಸವಗಳಾಗಿ ಹಲವು ಶತಮಾನಗಳ ಕಾಲ ವಿಜೃಂಭಿಸಿದವು. ಆಧುನಿಕ ಯುಗದಲ್ಲಿ ವಿಶ್ವದ ಸಮಸ್ತ ರಾಷ್ಟ್ರಗಳ ಸ್ನೇಹವರ್ಧನೆಯ ಸಾಧನವಾಗಿ ದೊಡ್ಡ ಪ್ರಮಾಣದಲ್ಲಿ ಪುನರವತರಿಸಿರುವ ಅಂತಾರಾಷ್ಟ್ರೀಯ ಸ್ಪರ್ಧೆಗಳು (ಒಲಿಂಪಿಕ್ ಗೇಮ್ಸ್‌) ಪ್ರ.ಶ.ಪು. 776ರಲ್ಲಿ ಆರಂಭವಾದವೆಂದು ನಂಬಿಕೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಈ ಉತ್ಸವದಿಂದ ಇನ್ನೊಂದು ಉತ್ಸವದವರೆಗಿನ ಅವಧಿಯನ್ನು ಒಲಿಂಪಿಕ್ ಶಕವೆಂದೇ (ಒಲಿಂಪಿಯಾಡ್) ಕರೆಯುವ ವಾಡಿಕೆಯಿತ್ತು. ಪ್ರತಿಯೊಂದು ಒಲಿಂಪಿಕ್ ಶಕದ ಉದಯದ ಆಚರಣೆಯಾಗಿ ಒಲಿಂಪಿಕ್ ಕ್ರೀಡೋತ್ಸವವನ್ನು ಆಚರಿಸಲಾಗುತ್ತಿತ್ತು. ಒಲಿಂಪಿಯದ ದೇವಸ್ಥಾನದ ಧಾರ್ಮಿಕ ವಿಧಿಗೂ ಒಲಿಂಪಿಕ್ ಕ್ರೀಡೆಗೂ ಹತ್ತಿರದ ಸಂಬಂಧವಿದ್ದರೂ ಇದು ಕೇವಲ ವಿಧಿಯಾಗಿಯೇ ಕೊನೆಗೊಳ್ಳುತ್ತಿರಲಿಲ್ಲ. ಕ್ರೀಡಾ ಸ್ಪರ್ಧೆಗಳ ಜೊತೆಗೆ ಅಲ್ಲಿ ಭಾಷಣ, ಸಂಗೀತ, ಕಾವ್ಯ ಸ್ಪರ್ಧೆಗಳನ್ನೂ ಏರ್ಪಡಿಸಲಾಗುತ್ತಿತ್ತು. ಪ್ರಾರಂಭದಲ್ಲಿ ಒಲಿಂಪಿಕ್ ಉತ್ಸವ ಕೇವಲ ಒಂದು ದಿನದ ಕಾರ್ಯಕ್ರಮವಾಗಿತ್ತು. ಆಗ ನಡೆಯುತ್ತಿದ್ದುದಾದರೂ ಒಂದೇ ಸ್ಪರ್ಧೆ; ಕ್ರೀಡಾಂಗಣದ (ಸ್ಟೇಡಿಯಂ) ಉದ್ದಕ್ಕೆ (181.8 ಮೀ) ಓಟ. ಕ್ರಮೇಣ ಸ್ಪರ್ಧೆಗಳ ಸಂಖ್ಯೆ ಹೆಚ್ಚಿತು. ಚಕ್ರದ (ಡಿಸ್ಕಸ್) ಎಸೆತ, ಈಟಿಯ (ಜಾವೆಲಿನ್)ಎಸೆತ, ಅಗಲನೆಗೆತ (ಬ್ರಾಡ್ಜಂಪ್), ಮುಷ್ಟಿ ಕಾಳಗ (ಬಾಕ್ಸಿಂಗ್), ಕುಸ್ತಿ, ಪೆಂಟಾಥ್ಲಾನ್, ರಥಗಳ ಸ್ಫರ್ಧೆ ಮುಂತಾದವು ಸೇರಿಕೊಂಡುವು. ಧಾರ್ಮಿಕ ವಿಧಿಗಳನ್ನೂ ಒಳಗೊಂಡು ಏಳು ದಿನಗಳ ಉತ್ಸವವಾಗಿ ಇದು ಬೆಳೆಯಿತು. ಮೊದಮೊದಲು ಗ್ರೀಕರಿಗೆ ಮಾತ್ರ ಸ್ಪರ್ಧೆಗೆ ಪ್ರವೇಶವಿತ್ತು. ಆದರೆ ಎಲ್ಲ ಗ್ರೀಕ್ ವಸಾಹತುಗಳಿಂದಲೂ ಸ್ಫರ್ಧಿಗಳು ಬರುತ್ತಿದ್ದರು. ಉತ್ಸವ ಕಾಲದಲ್ಲಿ ಸ್ಪರ್ಧಿಗಳು ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗುವಂತೆ ಶಾಂತ ವಾತಾವರಣವನ್ನು ಏರ್ಪಡಿಸಲಾಗುತ್ತಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಲೂ ಅದನ್ನು ವೀಕ್ಷಿಸಲೂ ಸ್ತ್ರೀಯರಿಗೆ ಅವಕಾಶವಿರಲಿಲ್ಲ. ಡೆಮೆಟರಿನ ಪುಜಾರಿಣಿಗಳು ಮಾತ್ರ ಈ ನಿಯಮಕ್ಕೆ ಅಪವಾದ; ಅವರು ಕ್ರೀಡೆಗಳನ್ನವಲೋಕಿಸಬಹುದಿತ್ತು. ಈ ನಿಯಮವನ್ನುಲ್ಲಂಘಿಸಿದ ಮಹಿಳೆಗೆ ಮರಣ ದಂಡನೆ ವಿಧಿಸುತ್ತಿದ್ದರು. ಸ್ಪರ್ಧೆಯ ಪಾವಿತ್ರ್ಯವನ್ನು ಕಾಪಾಡುತ್ತೇವೆ; ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತೇವೆ; ನ್ಯಾಯವಾದ ತೀರ್ಪು ನೀಡುತ್ತೇವೆ-ಎಂದು ಸ್ಪರ್ಧೆ ಪ್ರಾರಂಭವಾಗುವ ಮುನ್ನ ಎಲ್ಲ ಸ್ಪರ್ಧಿಗಳೂ ಅವರ ಕುಟುಂಬದವರೂ ಶಿಕ್ಷಕರೂ ತೀರ್ಪುಗಾರರೂ ಪ್ರತಿಜ್ಞಾವಿಧಿ ಸ್ವೀಕರಿಸಬೇಕಿತ್ತು.

ಆಗಿನ ಕಾಲದಲ್ಲಿ ಒಲಿಂಪಿಕ್ ಕ್ರೀಡೆಗಳು ಬಹಳ ಗೌರವದ ಸ್ಥಾನ ಪಡೆದಿದ್ದುವು. ತಂತಮ್ಮಲ್ಲೇ ಬಡಿದಾಡುತ್ತಿದ್ದ ಗ್ರೀಕ್ ರಾಷ್ಟ್ರಗಳು ಉತ್ಸವ ಕಾಲದಲ್ಲಿ ಪರಸ್ಪರ ಸಹಕರಿಸುತ್ತಿದ್ದುದೂ ಅವು ಚತುರ್ವರ್ಷೀಯ ಕಾಲಚಕ್ರವನ್ನು ಪುರಸ್ಕರಿಸಿದ್ದೂ ಇದಕ್ಕೆ ಸಾಕ್ಷಿ. ಒಲಿಂಪಿಕ್ ಸ್ಪರ್ಧೆಯಲ್ಲಿ ಗೆದ್ದವರಿಗೆ ಲಭಿಸುತ್ತಿದ್ದುದಾದರೂ ಏನು? ಕಾಡು ಆಲಿವ್ ಮರದ ಎಲೆಗಳ ರೆಂಬೆಯ ಕಿರೀಟ. ಆದರೆ ಈ ಗೌರವಕ್ಕಾಗಿಯೇ ದೊರೆಗಳೂ ಸಾಮಾನ್ಯರೂ ಸಮಾನರಾಗಿ ಸ್ಪರ್ಧಿಸುತ್ತಿದ್ದರು. ರೋಮನ್ ಚಕ್ರವರ್ತಿ ನೀರೋ ಕೂಡ ಈ ಮರ್ಯಾದೆಗಾಗಿ ಹಾತೊರೆದನಂತೆ. ಸ್ಪರ್ಧೆಗಳಲ್ಲಿ ವಿಜಯಗಳಿಸಿದವರನ್ನು ರಾಷ್ಟ್ರವೀರರೆಂದು ಗೌರವಿಸಲಾಗುತ್ತಿತ್ತು. ಅವರ ಸಾಹಸಗಳು ಕಾವ್ಯಕ್ಕೆ ವಸ್ತುವಾಗುತ್ತಿದ್ದುವು; ಸಂಗೀತಕ್ಕೆ ಸ್ಪೂರ್ತಿ ನೀಡುತ್ತಿದ್ದುವು, ವಿಜಯಿಯ ಮೈಕಟ್ಟನ್ನೂ ಗಾಡಿಯನ್ನೂ ಶಿಲ್ಪಿಗಳು ಅಮೃತಶಿಲೆಯಲ್ಲಿ ಶಾಶ್ವತವಾಗಿ ಸೆರೆ ಹಿಡಿದಿಡುತ್ತಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸುವುದು ಗೆಲ್ಲುವುದಕ್ಕಾಗಿ ಮಾತ್ರವಲ್ಲ, ಆಡುವುದಕ್ಕಾಗಿ-ಎಂಬುದು ಇಲ್ಲಿಯ ಧ್ಯೇಯ. ಕ್ರೀಡಾಪಟುವಿನ ನಿಜಮನೋಧರ್ಮ, ಆಟವಾಡುವ ಶೈಲಿಯ ಸೊಬಗು-ಇವಕ್ಕೆ ಇಲ್ಲಿ ಪ್ರಾಧಾನ್ಯ.

ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಹಲವಷ್ಟು ದಂತಕಥೆಗಳು ಹಾಗೂ ಊಹಾಪೋಹಗಳಿವೆ. ಇವುಗಳ ಪೈಕಿ ಅತಿ ಜನಪ್ರಿಯವಾದ ಕತೆಯೊಂದರ ಪ್ರಕಾರ - ಹೆರಾಕ್ಲಿಸ್ ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಸೃಷ್ಟಿಕರ್ತನು[]. ಇವನು ತನ್ನ ತಂದೆ ಸ್ಯೂಸ್ ನ ಗೌರವಾರ್ಥವಾಗಿ ೧೨ ಕ್ರೀಡಾಂಗಣಗಳನ್ನು ನಿರ್ಮಿಸಿ ಕೂಟವನ್ನು ನಡೆಸಿದನು. ಈ ಕತೆಯ ಪ್ರಕಾರ ಈತನು ನೇರದಾರಿಯಲ್ಲಿ ೪೦೦ ಬಾರಿ ದಾಪುಗಾಲನ್ನಿಟ್ಟು ಕ್ರಮಿಸಿ ಆ ದೂರವನ್ನು ಒಂದು ಸ್ಟೇಡಿಯಸ್ ಎಂದು ಕರೆದನು. ಈ ದೂರವನ್ನೇ ರೋಮನ್ನರು ಸ್ಟೇಡಿಯಮ್ ಹಾಗೂ ಆಂಗ್ಲರು ಸ್ಟೇಜ್ ಎಂದು ಹೆಸರಿಸಿದರು. ಇಂದು ಕೂಡಾ ಆಧುನಿಕ ಕ್ರೀಡಾಂಗಣದ ಟ್ರ್ಯಾಕ್ ನ ಸುತ್ತಳತೆ ೪೦೦ ಮೀ. ಇರುವುದು. ಕ್ರಿ. ಪೂ. ೭೭೬ರ ಮೊದಲನೆಯ ಕ್ರೀಡಾಕೂಟದ ನಂತರ ಗ್ರೀಸ್ ದೇಶದಲ್ಲಿ ಒಲಿಂಪಿಕ್ಸ್ ಜನಪ್ರಿಯತೆ ಹೆಚ್ಚಿಸಿಕೊಂಡು ಕ್ರಿ.ಪೂ. ೬ ನೆಯ ಹಾಗೂ ೫ನೆಯ ಶತಮಾನದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿದ್ದಿತು. ಮೊದಲಿಗೆ ಕೆಲವೇ ಕ್ರೀಡೆಗಳನ್ನೊಳಗೊಂಡು ಒಂದು ದಿನದಲ್ಲಿಯೇ ಮುಗಿಯುತ್ತಿದ್ದ ಕೂಟವು ಮುಂದೆ ೨೦ರಷ್ಟು ಸ್ಪರ್ಧೆಗಳೊಂದಿಗೆ ಹಲವು ದಿನಗಳವರೆಗೆ ನಡೆಯುತ್ತಿತ್ತು. ಕ್ರೀಡೆಗಳಲ್ಲಿ ವಿಜಯ ಸಾಧಿಸಿದ ಸ್ಪರ್ಧಾಳುಗಳನ್ನು ನಾಡು ಅತ್ಯಭಿಮಾನ ಹಾಗೂ ಆದರದಿಂದ ಕಾಣುತ್ತಿತ್ತು. ಕವನಗಳ ಮತ್ತು ಪ್ರತಿಮೆಗಳ ಮೂಲಕ ಇವರನ್ನು ಅಮರರನ್ನಾಗಿಸಲಾಗುತ್ತಿತ್ತು. ಕ್ರಿ.ಪೂ. ೬ನೆಯ ಶತಮಾನದಲ್ಲಿದ್ದ ಮಿಲೋ ಎಂಬ ಕುಸ್ತಿಪಟುವು ಸತತ ೬ ಒಲಿಂಪಿಕ್ ಕ್ರೀಡಾಕೂಟ ಗಳಲ್ಲಿ ವಿಜಯ ಸಾಧಿಸಿದ್ದನು. ಈ ದಾಖಲೆಯನ್ನು ಇಂದಿನವರೆಗೂ ಸರಿಗಟ್ಟಲಾಗಿಲ್ಲ. ಗ್ರೀಸ್ ದೇಶದ ಮೇಲೆ ರೋಮನ್ನರ ಅಧಿಪತ್ಯವುಂಟಾದ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಕ್ರಮೇಣ ಅವನತಿಯತ್ತ ಸಾಗಲಾರಂಭಿಸಿತು. ಕ್ರಿಶ್ಚಿಯನ್ ಧರ್ಮವು ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಲ್ಪಟ್ಟ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಆ ಧರ್ಮದ ನಡವಳಿಕೆಗಳಿಗೆ ಅನುಗುಣವಾಗಿಲ್ಲವೆಂದು ಪರಿಗಣಿಸಲ್ಪಟ್ಟಿತು. ತರುವಾಯ ಕ್ರಿ.ಶ. ೩೯೩ರಲ್ಲಿ ರೋಮನ್ ಸಮ್ರಾಟ ಮೊದಲನೆಯ ಥಿಯೋಡೋರಸ್ ಒಲಿಂಪಿಕ್ ಕ್ರೀಡಾಕೂಟವನ್ನು ಧರ್ಮಬಾಹಿರವೆಂದು ಘೋಷಿಸಿದನು. ಹೀಗೆ ಸುಮಾರು ೧೦೦೦ ವರ್ಷಗಳ ಪರಂಪರೆಯೊಂದು ಕೊನೆಗೊಂಡಿತು.

ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕೇವಲ ಯುವಕರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದಿತು. ಕ್ರೀಡಾಕೂಟವು ಮಾನವಶರೀರದ ಸಾಧನೆಯ ದ್ಯೋತಕವೆಂದು ಪರಿಗಣಿಸಲಾಗುತ್ತಿದ್ದುದರಿಂದ ಸ್ಪರ್ಧಾಳುಗಳು ನಗ್ನರಾಗಿಯೇ ಪಾಲ್ಗೊಳ್ಳುತ್ತಿದ್ದರು. ವಿಜಯೀ ಸ್ಪರ್ಧಾಳುಗಳಿಗೆ ಆಲಿವ್ ಎಲೆಗಳಿಂದ ಮಾಡಿದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಒಲಿಂಪಿಕ್ ಜ್ಯೋತಿಯಾಗಲೀ ಒಲಿಂಪಿಕ್ ವರ್ತುಲಗಳಾಗಲೀ ಬಳಕೆಯಲ್ಲಿರಲಿಲ್ಲ. ಇವು ಮುಂದೆ ಆಧುನಿಕ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಸೇರಿಕೊಂಡವು.

ಉಗಮ- ಪುನರುತ್ಥಾನ

[ಬದಲಾಯಿಸಿ]

ಪ್ರ.ಶ.ಪು. 776ರಲ್ಲಿ ಒಲಿಂಪಿಕ್ ಶಕೆ ಆರಂಭವಾಯಿತೆಂಬುದು ಐತಿಹ್ಯವಾದರೂ ಅದಕ್ಕೂ ಹಿಂದೆಯೇ ಒಲಿಂಪಿಕ್ ಕ್ರೀಡೆಗಳು ಪ್ರಾರಂಭವಾದುವೆಂದು ಭಾವಿಸುವುದು ತಪ್ಪಾಗಲಾರದು, ಕ್ರೀಡಾಸ್ಪರ್ಧೆಗಳು ಹುಟ್ಟಿದ್ದೇ ಪುರಾತನ ಗ್ರೀಸಿನಲ್ಲಿ. ದೇವರ ಅಥವಾ ಸತ್ತ ವೀರನ ಗೌರವಾರ್ಥವಾಗಿ ಅಂಗಸಾಧನೆಯ ಸ್ಪರ್ಧೆಗಳನ್ನೇರ್ಪಡಿಸುವ ಪದ್ಧತಿಯಿಂದ ಒಲಿಂಪಿಯನ್ ಹಬ್ಬ ಬೆಳೆದು ಬಂದಿರಬಹುದು. ಆರಂಭದಲ್ಲಿ ಮೃತನ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಕ್ರೀಡೆಗಳನ್ನೇರ್ಪಡಿಸುವ ಪದ್ಧತಿಯಿದ್ದಿರಬಹುದು. (ಹೋಮರ್ ಕವಿಯ ಈಲಿಯಡಿನಲ್ಲಿ ಇಂಥ ಒಂದು ಪ್ರಸಂಗದ ವರ್ಣನೆಯಿದೆ) ಅನಂತರ ಇದು ಸಾಮೂಹಿಕವಾಗಿ ಪರಿಣಮಿಸಿ, ಒಂದು ಅವಧಿಯಲ್ಲಿ ಸತ್ತ ಎಲ್ಲ ವೀರರ ಗೌರವಾರ್ಥವಾಗಿ ಏರ್ಪಡಿಸುವ ಪದ್ಧತಿ ಬೆಳೆದು ಬಂದಿರಬಹುದು. ಇದರಿಂದ ಸ್ಪರ್ಧಿಗಳಲ್ಲಿ ನವಚೈತನ್ಯ ತುಂಬಿ ಅವರ ಯೌವ್ವನ ಪುನರ್ನವಗೊಳ್ಳುವುದೆಂದೂ ದೇವರುಗಳ ಶಕ್ತಿಗೆ ಚಾಲನೆ ದೊರಕುವುದೆಂದೂ ಸತ್ತವರಿಗೆ ನಷ್ಟವಾದ ಶಕ್ತಿ ಲಭಿಸುವುದೆಂದೂ ಭಾವಿಸಲಾಗಿತ್ತು. ಅಂಗಸಾಧನೆಯಿಂದ ಆರೋಗ್ಯ ಪ್ರಾಪ್ತಿ. ಹೋರಾಟಕ್ಕೆ ಸಿದ್ಧತೆ, ತತ್ತ್ವದರ್ಶನ ಮತ್ತು ಶೌರ್ಯಪರಾಕ್ರಮಗಳೆರಡನ್ನೂ ಏಕಪ್ರಕಾರವಾಗಿ ಪ್ರೀತಿಸುತ್ತಿದ್ದ ಗ್ರೀಕರ ಜೀವನದ ಆದರ್ಶಗಳಿಗೆ ಕ್ರೀಡೆಗಳೇ ತಳಹದಿ. ಆಯಾ ಸ್ಥಳದೇವತೆಗಳ ಗೌರವಾರ್ಥ ನಡೆಯುತ್ತಿದ್ದ ಧಾರ್ಮಿಕ ಉತ್ಸವಗಳೂ ಕ್ರೀಡಾಸ್ಪರ್ಧೆಗಳೊಂದಿಗೆ ಬೆರೆತುಕೊಂಡು ಕ್ರಮೇಣ ಒಲಿಂಪಿಯನ್ ಹಬ್ಬಕ್ಕೊಂದು ಸಾರ್ವತ್ರಿಕ ರೂಪ ಬಂದಿರಬೇಕು. ಗ್ರೀಕರ ಜೀವನ ಧೋರಣೆ ಮತ್ತು ಅವರು ಕ್ರೀಡಾಸ್ಪರ್ಧೆಗಳನ್ನು ನಡೆಸುತ್ತಿದ್ದ ವಿಧಾನಗಳು ಹೋಮರನ ಈಲಿಯಡಿನಲ್ಲಿ ವರ್ಣಿತವಾಗಿವೆ. ಯುದ್ಧದಲ್ಲಿ ವೀರಮರಣ ಪಡೆದ ಪೆಟ್ರೋಕ್ಲಸನ ಅಂತಿಮಗೌರವವಾಗಿ ಟ್ರಾಯ್ನ ಹೊರವಲಯದಲ್ಲಿ ಕೆಲವು ಕ್ರೀಡಾಸ್ಪರ್ಧೆಗಳನ್ನು ಅಕಿಲೀಸ್ ಏರ್ಪಡಿಸಿದ. ಅದರಲ್ಲಿ ಭಾಗಿಗಳು ಪ್ರೇಕ್ಷಕರು ಸೈನಿಕರು. ರಥಸ್ಪರ್ಧೆಯೇ ಮುಖ್ಯ ಘಟನೆ (ಇವೆಂಟ್). ಕುಶಲಕಲೆಗಳನ್ನರಿತ ಸುಂದರ ಹೆಣ್ಣು ಮತ್ತು 22 ಪಿಂಟ್ ಹಿಡಿಸುವ, ಕಿವಿಯಂಥ ಹಿಡಿಗಳಿರುವ ಪಾತ್ರೆ-ಇದು ಅಕಿಲೀಸ್ ಇಟ್ಟಿದ್ದ ಪ್ರಥಮ ಬಹುಮಾನ. ದೇವತೆಗಳೇ ತೀರ್ಪುದಾರರು. ಅವರಲ್ಲೂ ಪುರ್ವಾಗ್ರಹ, ಪಕ್ಷಪಾತ. ರಥಸ್ಪರ್ಧೆಯೇ ಅಲ್ಲದೆ ಮುಷ್ಟಿಕಾಳಗ, ಕುಸ್ತಿ, ಓಟ, ಬಾಣವಿದ್ಯೆ, ದ್ವಂದ್ವ ಯುದ್ಧ ಮುಂತಾದ ಇತರ ಕ್ರೀಡೆಗಳನ್ನೂ ಹೋಮರ್ ಬಣ್ಣಿಸಿದ್ದಾನೆ.

ಕವಿ ಪಿಂಡರನ ಪ್ರಕಾರ ಒಲಿಂಪಿಕ್ ಕ್ರೀಡೆಗಳನ್ನು ಸ್ಥಾಪಿಸಿದವನು ವೀರ ಹಕುರ್ಯ್‌ಲಿಸ್. ಆಜಿಯಸ್ ದೊರೆಯನ್ನು ಕೊಂದು ಈಲಿಸ್ ರಾಜ್ಯವನ್ನು ಗೆದ್ದ ಜ್ಞಾಪಕಾರ್ಥವಾಗಿ ಆತ ಇದನ್ನು ಆರಂಭಿಸಿದನಂತೆ, ರೋಗರುಜಿನಾದಿ ಉಪದ್ರವಗಳೂ ಪರಸ್ಪರ ವೈಷಮ್ಯವೂ ಕಚ್ಚಾಟವೂ ನಾಡಿನಲ್ಲೆಲ್ಲ ಹಬ್ಬಿದ್ದಾಗ, ದಿವ್ಯವಾಣಿಯ ಆಜ್ಞೆಯಂತೆ ಇಫಿಟಸ್ ಇವನ್ನು ಪ್ರಾರಂಭಿಸಿದನೆಂಬುದು ಇನ್ನೊಂದು ಐತಿಹ್ಯ. ಈ ಕಥೆಗೆ ಆಧಾರವಾಗಿ ಒಲಿಂಪಿಯದ ಹೇರಿಯಂನಲ್ಲಿರುವ ಕಂಚಿನ ಚಕ್ರವೊಂದನ್ನು ಗ್ರೀಕ್ ಪ್ರವಾಸಿ ಪಾಸೇನಿಯಸ್ ಉಲ್ಲೇಖಿಸಿದ್ದಾನೆ, ನಾನಾ ಆಟಗಳ ನಿಯಮಾವಳಿಗಳನ್ನೆ ಅಲ್ಲದೆ ಲಿಕರ್ಗಸ್ ಮತ್ತು ಇಫಿಟಸರ ಹೆಸರುಗಳನ್ನೂ ಇದರಲ್ಲಿ ಕೆತ್ತಿದೆ. ಇಯಾನ್ ಹಕುರ್ಯ್‌ಲಿಸ್ ಒಲಿಂಪಿಕ್ ಕ್ರೀಡೆಗಳ ಜನಕನೆಂದೂ ಅವನೇ ಇವಕ್ಕೆ ಈ ನಾಮಕರಣ ಮಾಡಿದವನೆಂದೂ ಒಲಿಂಪಿಯದಲ್ಲಿ ಓಟದ ಸ್ಪರ್ಧೆಗೆ ಬರಬೇಕೆಂದು ತನ್ನ ಸೋದರನಿಗೇ ಆತ ಸವಾಲು ಒಡ್ಡಿದನೆಂದೂ ಈಲಿಸಿನ ಜನದ ಪುರಾತನ ದಾಖಲೆಗಳು ಸಾರುತ್ತವೆಯೆಂದೂ ಪಾಸೇನಿಯಸ್ ಹೇಳುತ್ತಾನೆ. ಜóÆ್ಯಸ್ ದೇವತೆ ಸ್ವರ್ಗದ ಒಡೆತನಕ್ಕಾಗಿ ಕ್ರೋನಸನೊಂದಿಗೆ ಒಲಿಂಪಿಯದಲ್ಲಿ ಸೆಣಸಿ ಗೆದ್ದನೆಂದೂ ಇದರ ಸ್ಮರಣಾರ್ಥವಾಗಿ ಒಲಿಂಪಿಕ್ ಕ್ರೀಡೆಗಳು ಆರಂಭವಾದುವೆಂದೂ ಪಾಸೇನಿಯಸನಿಂದ ತಿಳಿದು ಬರುತ್ತದೆ.

ಓರ್ವ ಸಿರಿವಂತ ಗ್ರೀಕ್ ದಾನಿ ಇವಾಂಜೆಲಾಸ್ ಝಪ್ಪಾಸನು ಪ್ರಥಮ ಆಧುನಿಕ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದನು. ೧೮೭೦ ಹಾಗೂ ೧೮೭೫ರಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಿಗೆ ಬಳಸಲಾದ ಪಾನ್ ಅಥೀನಿಯನ್ ಕ್ರೀಡಾಂಗಣವನ್ನು ಈತನು ದುರಸ್ತಿಗೊಳಿಸಿದನು. ಅಲದೆ ಒಲಿಂಪಿಕ್ ಗ್ರಾಮವೊಂದನ್ನು ಸಹ ಇವನು ವ್ಯವಸ್ಥೆಗೊಳಿಸಿದನು. ಮುಂದೆ ಬ್ಯಾರನ್ ಪಿಯರಿ ದ ಕೂಬರ್ತಿಯು ೧೮೯೪ರಲ್ಲಿ ಪ್ಯಾರಿಸ್ ನಗರದಲ್ಲಿ ಜರಗಿದ ಸಮಾವೇಶವೊಂದರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಪುನರಾರಂಭಿಸುವುದರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮುಂದಿಕ್ಕಿದನು. ಈ ಸಮಾವೇಶದ ಕೊನೆಯಲ್ಲಿ ಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು. ಇದನ್ನು ಆಯೋಜಿಸುವುದರ ಸಲುವಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಲಾಯಿತು. ಗ್ರೀಸ್ ದೇಶದ ಡಿಮೆಟ್ರಿಯಸ್ ವಿಕೆಲಾಸ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊಟ್ಟಮೊದಲ ಅಧ್ಯಕ್ಷನಾದನು. ಹೀಗೆ ಪ್ರಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟ ಅಥೆನ್ಸ್ ನಗರದ ಪಾನ್ ಅಥೀನಿಯನ್ ಕ್ರೀಡಾಂಗಣದಲ್ಲಿ ೧೮೯೬ರಲ್ಲಿ ನಡೆಯಿತು. ಈ ಕೂಟದಲ್ಲಿ ಕೇವಲ ೧೪ ದೇಶಗಳ ೨೪೧ ಪುರುಷ ಕ್ರೀಡಾಳುಗಳು ಮಾತ್ರ ಪಾಲ್ಗೊಂಡಿದ್ದರು. ಆದರೆ ಆ ಕಾಲದ ಮಟ್ಟಿಗೆ ಇದು ಜಗತ್ತಿನ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರೀಡಾಕೂಟವೆಂದು ಪರಿಗಣಿಸಲ್ಪಟ್ಟಿತ್ತು. ನಾಲ್ಕು ವರ್ಷಗಳ ನಂತರ ೧೯೦೦ರಲ್ಲಿ ಪ್ಯಾರಿಸ್ ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಹಿಳಾ ಕ್ರೀಡಾಪಟುಗಳೂ ಪಾಲ್ಗೊಂಡರು. ಹೀಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಒಲಿಂಪಿಕ್ ಕ್ರೀಡಾಕೂಟ ೨೦೦೪ರಲ್ಲಿ ಅಥೆನ್ಸ್ ನಲ್ಲಿ ನಡೆದ ಕೂಟದಲ್ಲಿ ೨೦೨ ರಾಷ್ಟ್ರಗಳ ಸುಮಾರು ೧೧೦೦೦ ಕ್ರೀಡಾಳುಗಳು ಪಾಲ್ಗೊಳ್ಳುವ ಮಟ್ಟಿಗೆ ಬೆಳೆಯಿತು.

ಬೆಳವಣಿಗೆ

[ಬದಲಾಯಿಸಿ]

ಒಲಿಂಪಿಕ್ ಕ್ರೀಡೆಗಳ ಉಗಮ ಹೇಗಾಯಿತೆಂಬುದು ಸ್ಪಷ್ಟವಿಲ್ಲವಾದರೂ ಪ್ರ.ಶ.ಪು. 776ರ ಹೊತ್ತಿಗೆ ಇವು ಸ್ಥಾಪಿತವಾಗಿದ್ದುವೆಂಬುದಂತೂ ನಿಜ. ಇವುಗಳ ಸ್ಥಳ ಒಲಿಂಪಿಯ-ಪೆಲೊಪೊನೀಸಸಿನ ವಾಯವ್ಯಭಾಗ. ಆಲ್ಫಿಯಾಸ್ ಮತ್ತು ಕ್ಲೇಡಿಯಸ್ ನದಿಗಳ ಪುರ್ವ ಮತ್ತು ಉತ್ತರ ದಡಗಳ ಮೇಲೆ ಕ್ರೀಡಾಂಗಣವೂ ಜ್ಯೂಸ್ ದೇವಸ್ಥಾನವೂ ನಿರ್ಮಿತವಾಗಿದ್ದುವು. ಹೆಲನಿಕ್ ಯುಗದಲ್ಲಿ ಈ ಕ್ಷೇತ್ರ ಪ್ರಸಿದ್ಧವಾಯಿತು, ಗ್ರೀಕರ ದೈಹಿಕ ಸೌಂದರ್ಯಾರಾಧನೆಯ ಮತ್ತು ದೇಹ ಬುದ್ಧಿಗಳೆರಡರ ಸಮನ್ವಯದ ಸಂಕೇತವಾಯಿತು. ಒಲಿಂಪಿಕ್ ಕ್ರೀಡೆಗಳು ಬಹಳ ಪ್ರಸಿದ್ಧವೂ ಪ್ರಮುಖವೂ ಆದದ್ದು ಪ್ರ.ಶ.ಪು. 6ನೆಯ ಶತಮಾನದಿಂದೀಚೆಗೆ, ನಗರರಾಜ್ಯವಾದ ಪೀಸಾವೇ ಮೊದಲು ಇವನ್ನು ನಿಯಂತ್ರಿಸುತ್ತಿತ್ತು. ಆದರೆ ಪ್ರ.ಶ.ಪು. 572ರ ವೇಳೆಗೆ ನೆರೆಯ ನಗರ ರಾಜ್ಯ ಈಲಿಸ್ ಇವುಗಳ ಹಿಡಿತ ಪಡೆದುಕೊಂಡಿತು. ಕ್ರಮೇಣ ಒಲಿಂಪಿಯ ಒಂದು ಒಕ್ಕೂಟದ ಕೇಂದ್ರವಾಯಿತು. ಈ ಕ್ರೀಡೆಗಳು ಸ್ಥಳೀಯ ಪ್ರಾಮುಖ್ಯದ ವ್ಯಾಪ್ತಿಯನ್ನು ಮೀರಿ ಅಂತಾರಾಷ್ಟ್ರೀಯವೆನಿಸಿಕೊಂಡುವು. ಆಗ ಸ್ಪಾರ್ಟ ಪ್ರಬಲ ರಾಜ್ಯ. ಇದು ಈಲಿಸಿನೊಂದಿಗೆ ಸಖ್ಯ ಗಳಿಸಿಕೊಂಡಿತು. ಒಲಿಂಪಿಕ್ ಉತ್ಸವದ ಧಾರ್ಮಿಕ ವಿಧಿಗಳ ನಿಯೋಜನೆ ಈಲಿಸಿನದಾದರೆ, ಕ್ರೀಡೆಗಳ ಅಧಿಕೃತ ರಕ್ಷಣೆ ಸ್ಪಾರ್ಟದ್ದು. ಹೀಗೆ ಸ್ಪಾರ್ಟದ ಕೀರ್ತಿ ಪ್ರತಿಷ್ಠೆಗಳು ಬೆಳೆದುವು. ಯುದ್ಧಕಾಲದಲ್ಲಿ ಕೂಡ ಗ್ರೀಕ್ ಜನರು ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಲು ಮತ್ತು ಅವನ್ನು ಪ್ರೇಕ್ಷಿಸಲು ನಾನಾ ಕಡೆಗಳಿಂದ ಬರುವುದು ಸಾಧ್ಯವಾಗುವಂತೆ ಶಾಂತ ವಾತಾವರಣ ರಚಿಸಿ ಪಾಲಿಸುವ, ಸುವ್ಯವಸ್ಥೆ ಏರ್ಪಡಿಸುವ ಹೊಣೆ ಸ್ಪಾರ್ಟದ್ದಾಯಿತು, ಹೀಗೆ ಈ ಕ್ರೀಡೆಗಳು ಎಲ್ಲ ಯುದ್ಧಗಳನ್ನೂ ಭಿನ್ನತೆ ವೈಷಮ್ಯಗಳನ್ನೂ ಮೀರಿದ ಅಂತಾರಾಷ್ಟ್ರೀಯ ಸ್ನೇಹ ಸಂವರ್ಧನೆಯ ಏಕೈಕ ಸೂತ್ರವಾಗಿ ಪರಿಣಮಿಸಿದುವು. ಪ್ರ.ಶ.ಪು. 776-21ರವರೆಗೆ ವಿಜಯಿಗಳ ಪಟ್ಟಿಯಲ್ಲಿದ್ದವರು ಈಲಿಯನರು ಮತ್ತು ಅವರ ನೆರೆಹೊರೆಯವರು ಮಾತ್ರ. ಆದರೆ ಅನಂತರ ಅಥೀನಿಯನ್ನರೂ ಇತರರೂ ಪ್ರವೇಶಿಸಿದರು.

ಹೀಗೆ ಹೆಲನಿಕ್ ಏಕತೆಯ ಸಂಕೇತವಾಗಿ, ದೇಹ-ಮನಸ್ಸುಗಳ ಸುಮಧುರ ಹೊಂದಾಣಿಕೆಯ ಸಾಧನವಾಗಿ, ಜóÆ್ಯಸ್ ದೇವತೆಯ ಆರಾಧನೋತ್ಸವವಾಗಿ ಇದು ಮುಂದುವರಿಯಿತು. ಗ್ರೀಕ್ ರಾಜ್ಯಗಳ ಸ್ವಾತಂತ್ರ್ಯಹರಣವಾದ ಮೇಲೂ-ಮೆಸೆಡೋನಿಯನ್ ಮತ್ತು ರೋಮನ್ ಚಕ್ರಾಧಿಪತ್ಯಗಳ ಕಾಲದಲ್ಲಿ ಕೂಡ-ಅನಸ್ಯೂತವಾಗಿ ನಡೆದುಕೊಂಡು ಬಂದುವು. 393ರ ಅನಂತರ ಇವು ನಿಂತುಹೋದವೆಂದು 11ನೆಯ ಶತಮಾನದ ಗ್ರೀಕ್ ಲೇಖಕ ಸಿಡ್ರಿನಸ್ ಬರೆಯುತ್ತಾನೆ. ರೋಮನ್ ಚಕ್ರವರ್ತಿ ಥಿಯೊಸೋಸಿಯಸನ ಆಳ್ವಿಕೆಯ ಕಾಲದಲ್ಲಿ ಅವನ ಆಜ್ಞೆಯಂತೆ ಕ್ರೈಸ್ತರು ಅಥವಾ ಗಾಥರು ಜóÆ್ಯಸ್ ದೇಗುಲವನ್ನು ನಾಶ ಮಾಡಿದರು. ಜóÆ್ಯಸ್ ದೇವತೆಯ ವಿಗ್ರಹವನ್ನು ಕಾನ್ಸ್ಟಾಂಟಿನೋಪಲಿಗೆ ಸಾಗಿಸಲಾಯಿತು. ಅಲ್ಲಿ ಅದು 47ರಲ್ಲಿ ಅಗ್ನಿಗೆ ಆಹುತಿಯಾಯಿತು. ಅಂತೂ ಇಷ್ಟು ದೀರ್ಘಕಾಲ ಇಂಥ ಪ್ರಮಾಣದಲ್ಲಿ ಜನರ ಮೇಲೆ ಪ್ರಭಾವ ಬೀರಿದ ಮಾನವ ನಿರ್ಮಿತ ವ್ಯವಸ್ಥೆ ಇನ್ನೊಂದಿಲ್ಲ.

ಒಲಿಂಪಿಕ್ ಕ್ರೀಡೆಯನ್ನು ಐದು ದಿನಗಳ ಅವಧಿಗೆ ವಿಸ್ತರಿಸಿದ್ದು 77ನೆಯ ಉತ್ಸವದಲ್ಲಿ. ಏಕದಿನದ ಸ್ಪರ್ಧೆಗಳಲ್ಲಿ ಅಭ್ಯರ್ಥಿಗಳು ಉಷಃಕಾಲದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಅವರ ಬರಿ ಮೈಗಳಿಗೆ ತೈಲ ಹಚ್ಚಲಾಗುತ್ತಿತ್ತು. ಮಟ್ಟ ನೆಲದ ಓಟದ ಪಂದ್ಯಗಳಲ್ಲಿ ಪುರ್ವಭಾವಿಯಾಗಿ (ಹೀಟ್ಸ್‌) ತಲಾ ನಾಲ್ವರನ್ನೋಡಿಸಿ, ಸೋತವರನ್ನು ಬಿಡುತ್ತಾ ಅಂತಿಮ (ಫೈನಲ್) ಹಂತಕ್ಕೆ ಸ್ಪರ್ಧಿಗಳನ್ನು, ಆರಿಸಿಕೊಳ್ಳಲಾಗುತ್ತಿತ್ತು. ಮೊದಮೊದಲು ಇರುತ್ತಿದ್ದದ್ದು ಒಂದೇ ಓಟದ ಸ್ಪರ್ಧೆ (5.25 ಮೀ) 14ನೆಯ ಒಲಿಂಪಿಯಾಡಿನಿಂದ 5.5 ಮೀ ಓಟದ ಸ್ಪರ್ಧೆ ಸೇರಿಸಲಾಯಿತು. ದೂರದ (ಡಿಲೋಕಾಸ್) ಓಟ ಸ್ಪರ್ಧೆಯನ್ನು ಸೇರಿಸಿದ್ದು 15ನೆಯ ಕ್ರೀಡೆಗಳಿಂದ. ಇದರ ದೂರ 387.5 ಮೀ, 630 ಮೀ, 1235 ಮೀ. ಕುಸ್ತಿ ಮತ್ತು ಪೆಂಟಾಥ್ಲಾನ್ ಸ್ಪರ್ಧೆಗಳನ್ನಾರಂಭಿಸಿದ್ದು 18ನೆಯ ಉತ್ಸವದಲ್ಲಿ, ಅಗಲ ನೆಗೆತ, ಈಟಿಯ ಎಸೆತ, ಚಕ್ರದ ಎಸೆತ, ಮಟ್ಟನೆಲದ ಓಟ, ಕುಸ್ತಿ-ಈ ಐದೂ ಸೇರಿ ಪೆಂಟಾಥ್ಲಾನ್ ಎನಿಸಿಕೊಳ್ಳುತ್ತಿತ್ತು. ಮುಷ್ಟಿಕಾಳಗ ಸ್ಪರ್ಧೆಯನ್ನು ಏರ್ಪಡಿಸಲಾರಂಭಿಸಿದ್ದು ಪ್ರ.ಶ.ಪು. 688ರಲ್ಲಿ (23ನೆಯ ಉತ್ಸವ). ರಥ ಸ್ಪರ್ಧೆ ಬಂದದ್ದೂ ಆ ವರ್ಷವೇ. ಕುದುರೆಸವಾರಿ ಪಂದ್ಯವನ್ನು 33ನೆಯ ಉತ್ಸವದಲ್ಲಿ (ಪ್ರ.ಶ.ಪು.648) ಏರ್ಪಡಿಸಲಾಯಿತು. ಮುಷ್ಟಿಕಾಳಗ ಮತ್ತು ಕುಸ್ತಿಗಳ ಮಿಶ್ರಣವಾದ ಪ್ಯಾನ್ಕ್ರಿಯೇಷಿಯಮನ್ನು ಪ್ರಾರಂಭಿಸಿದ್ದೂ ಆ ವರ್ಷವೇ. ಬಾಲಕರಿಗೆ ಕ್ರೀಡಾಸ್ಪರ್ಧೆಗಳನ್ನೇರ್ಪಡಿಸಿದ್ದು ಪ್ರ.ಶ.ಪು. 632ರಲ್ಲಿ, ಕಹಳೆ ಸ್ಪರ್ಧೆಗಳನ್ನು ಪ್ರ.ಶ.ಪು. 416ರಲ್ಲಿ (93ನೆಯ ಉತ್ಸವ) ಪಟ್ಟಿಯಲ್ಲಿ ಸೇರಿಸಲಾಯಿತು. ಯುದ್ಧಕವಚಧಾರಿಗಳ ಓಟದಪಂದ್ಯ ಆರಂಭಗೊಂಡಿದ್ದು ಪ್ರ.ಶ.ಪು.396ರಲ್ಲಿ. ಪ್ರ.ಶ.ಪು.490ರಲ್ಲಿ ಮ್ಯಾರಥಾನ್ ಯುದ್ಧದ ವಿಜಯದ ವಾರ್ತೆಯನ್ನು ಹೊತ್ತು ಅಲ್ಲಿಂದ ಅಥೆನ್ಸ್‌ ಪಟ್ಟಣಕ್ಕೆ ಓಡಿದ ಗ್ರೀಕ್ ಸಾಹಸವನ್ನು ನೆನಪಿಗೆ ತಂದುಕೊಡುವ ದೂರದ ಓಟದ ಪಂದ್ಯವನ್ನು (ಮ್ಯಾರತಾನ್ ರೇಸ್) ಪುರಾತನ ಕ್ರೀಡಾಸ್ಪರ್ಧೆಗಳಲ್ಲಿ ಸೇರಿಸಿಯೇ ಇರಲಿಲ್ಲವೆಂಬುದು ಸ್ವಾರಸ್ಯದ ಸಂಗತಿ.

ಪಂದ್ಯಗಳು

[ಬದಲಾಯಿಸಿ]

ವಿವಿಧ ಪಂದ್ಯಗಳು: ಪಂದ್ಯಗಳು ನಡೆಯುವುದಕ್ಕೆ ಒಂದು ತಿಂಗಳ ಹಿಂದಿನಿಂದಲೇ ಸ್ಪರ್ಧಿಗಳು ತೀವ್ರ ತರಬೇತಿ ಪಡೆಯುತ್ತಿದ್ದರು. ಚಕ್ರ ಮತ್ತು ಈಟಿಗಳು ಬಹಳ ಜನಪ್ರಿಯತೆ ಗಳಿಸಿದ್ದುವು. ಆಗಿನ ಚಕ್ರದ್ದು ಈಗಿನದಕ್ಕಿಂತ (2 ಕಿಲೊ ಗ್ರಾಂ) ಹೆಚ್ಚು ತೂಕ. ಅದನ್ನು ಎಸೆಯುತ್ತಿದ್ದದ್ದು ಒಂದು ವೃತ್ತದಿಂದಲ್ಲ; ಒಂದು ಸರಳರೇಖೆಯ ಹಿಂಬದಿಯಿಂದ. ಚಕ್ರವನ್ನೆಸೆಯುವ ಮುನ್ನ ಒಮ್ಮೆ ಪುರ್ತಿಯಾಗಿ ಸುತ್ತುವ ಬದಲು ಗ್ರೀಕ್ ಎಸೆಗಾರ ಅದನ್ನು ಎರಡೂ ಕೈಗಳಿಂದ ತಲೆಯ ಮೇಲೆತ್ತಿ, ಬಲಗೈಯಲ್ಲಿ ಅದನ್ನು ಹಿಡಿದು ಥಟ್ಟನೆ ಬಲಕ್ಕೆ ಬಾಗಿ, ಅನಂತರ ಮತ್ತೆ ಮುಂದೆ ನಡೆದು ಎಸೆಯುತ್ತಿದ್ದ. ತತ್ಪಲವಾಗಿ ಚಕ್ರ ಎಸೆಯುವವರಿಗೆ ನಡುವಿನ ಮೇಲ್ಭಾಗದಲ್ಲಿ ಹೊಟ್ಟೆಯ ಬಳಿ ಮಾಂಸಖಂಡ ಬೆಳೆಯುತ್ತಿತ್ತು. ಆ ಕಾಲದ ಪ್ರತಿಮೆಗಳಲ್ಲಿ ಇದನ್ನು ಗಮನಿಸಬಹುದು.

ಈಟಿ ಎಸೆತದಲ್ಲಿ ಶಕ್ತಿಗಿಂತ ಯುಕ್ತಿಗೂ ನಿಷ್ಕೃಷ್ಟತೆಗೂ ಪ್ರಾಧಾನ್ಯ. ಇತರರಿಗಿಂತ ಹೆಚ್ಚು ದೂರ ಎಸೆಯುವುದು ಸ್ಪರ್ಧಿಯ ಉದ್ದೇಶವಲ್ಲ. ನೆಲದ ಮೇಲಿನ ಒಂದು ನಿರ್ದಿಷ್ಟ ಗುರಿಗೆ ಹೊಡೆಯಬೇಕಿತ್ತು. ಈಟಿ ಒಂದಾಳಿನಷ್ಟು ಎತ್ತರ ಬೆರಳಿನಷ್ಟು ಸಣ್ಣಗೂ ಇದ್ದು ಬಹಳ ಹಗುರವಾಗಿತ್ತು. ಅದರ ಹಿಡಿಗೆ ಸುಮಾರು 0.6069 ಮೀ ಉದ್ದದ ಚರ್ಮದ ದಾರ ಸುತ್ತಲಾಗುತ್ತಿತ್ತು. ಪಂದ್ಯಗಾರ ಆ ದಾರದ ತುದಿಯ ವಂಕಿಯೊಳಗೆ ಬೆರಳುಗಳನ್ನು ತೂರಿಸಿ, ಈಟಿ ಬುಗರಿಯಂತೆ ಗಿರುಗಿರನೆ ತಿರುಗುತ್ತ ಧಾವಿಸುವಂತೆ ಅದನ್ನು ಎಸೆಯುತ್ತಿದ್ದ.

ಒಲಿಂಪಿಕ್ ಕ್ರೀಡೆಗಳ ಏಕೈಕ ನೆಗೆತದ ಸ್ಪರ್ಧೆಯೆಂದರೆ ಪೆಂಟಾಥ್ಲಾನಿನ ಉದ್ದನೆಗೆತ (ಲಾಂಗ್ಜಂಪ್). ಇದನ್ನು ಮಾಡುತ್ತಿದ್ದುದು ಹೇಗೆಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಸು. 2-11 ಪೌಂಡುಗಳವರೆಗೆ ತೂಗುವ ಕಲ್ಲು ಅಥವಾ ಕಂಚಿನ ಎರಡು ಡಂಬ್ಬೆಲ್ಗಳನ್ನು ಸ್ಪರ್ಧಿ ತನ್ನೆರಡು ಕೈಗಳಲ್ಲೂ ಹಿಡಿದುಕೊಳ್ಳುತ್ತಿದ್ದನೆಂಬುದು ನಮಗೆ ಗೊತ್ತು. ಡಂಬ್ಬೆಲ್ಗಳನ್ನು ಮುಂದಕ್ಕೂ ಹಿಂದಕ್ಕೂ ಜೋಕಾಲೆಯಾಡಿಸಿ, ಅನಂತರ ನೆಗೆಯುತ್ತಿದ್ದುದು ರೂಢಿ. ನೆಗೆಯುವ ಮುನ್ನ ಓಡುತ್ತಿದ್ದುದೂ ಉಂಟು. ಓಡದೆ ನೇರವಾಗಿ ನೆಗೆಯುತ್ತಿದ್ದುದೂ ಉಂಟು. ಸ್ಪರ್ಧಿಗಳು 16 ಮೀಗಳಿಗೂ ಹೆಚ್ಚು ದೂರ ನೆಗೆದರೆಂದು ವರದಿಗಳುಂಟು. ಆದರೆ ಇದು ಹೇಗೆ ಸಾಧ್ಯವಾಯಿತೆಂಬುದೇ ಬಿಡಿಸಲಾಗದ ಒಗಟು. ಬಹುಶಃ ಇದು ಕೇವಲ ಒಂದೇ ನೆಗೆತದ ದೂರವಾಗಿರಲಾರದು. ಐದು ನೆಗೆತಗಳ ಒಂದು ಸರಣಿ ಇದ್ದಿರಬೇಕು.

ಮುಷ್ಟಿಕಾಳಗ ಮತ್ತು ಕುಸ್ತಿಗಳ ಮಿಶ್ರಣವಾದ ಪ್ಯಾನ್ಕ್ರೇಷಿಯಂ ಎಂಬುದು ಈ ಎರಡೂ ಪಂದ್ಯಗಳ ಒರಟು ಅಂಶಗಳನ್ನೆಲ್ಲ ಒಳಗೊಂಡಿತ್ತು. ಗುದ್ದುವುದೂ ಒದೆಯುವುದೂ ನಿಷಿದ್ಧವಾಗಿರಲಿಲ್ಲ. ಆದರೆ ಎದುರಾಳಿಯ ಕಣ್ಣನ್ನು ಬೆರಳಿನಿಂದ ತಿವಿಯುವುದು ಕ್ರಮಬದ್ಧವಲ್ಲ. ಸ್ಪರ್ಧಿಗಳಲ್ಲೊಬ್ಬ ಸಂಪುರ್ಣ ಅಸಹಾಯಕನಾಗಿ ಶರಣಾಗುವ ಘಟ್ಟ ಮುಟ್ಟುವವರೆಗೂ ಪಂದ್ಯ ನಡೆಯುತ್ತಿತ್ತು. ಸ್ಪರ್ಧಿಯ ತೂಕದ ಬಗ್ಗೆ ಯಾವ ನಿಬಂಧನೆಯೂ ಇಲ್ಲದ್ದರಿಂದ ಹಗುರ ದೇಹಿಯಾದವ ಗೆಲ್ಲುವ ಸಂಭವ ಇರಲಿಲ್ಲ.

ಕಾರ್ಯಕ್ರಮ ಬಹುಮಾನ

[ಬದಲಾಯಿಸಿ]

ಸ್ಪರ್ಧೆಗಳನ್ನು ಇದೇ ಕ್ರಮದಲ್ಲಿ ನಡೆಸಬೇಕೆಂಬ ಪದ್ಧತಿಯೇನೂ ಇರಲಿಲ್ಲ. ಎಲ್ಲ ಸ್ಪರ್ಧೆಗಳನ್ನೂ ಯಾವಾಗಲೂ ನಡೆಸುತ್ತಿರಲಿಲ್ಲ. ಹೊಸಹೊಸ ಸ್ಪರ್ಧೆಗಳನ್ನು ಸೇರಿಸಲಾಗುತ್ತಿತ್ತು. ಗ್ರೀಕ್ ಒಲಿಂಪಿಕ್ ಕ್ರೀಡೆಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಸಾಮಾನ್ಯವಾಗಿ ಕಾರ್ಯಕ್ರಮ ಹೀಗಿರುತ್ತಿತ್ತು: ಮೊದಲನೆಯ ದಿನದಂದು ಬಲಿಗಳ ಅರ್ಪಣೆ. ಒಲಿಂಪಿಕ್ ಪ್ರತಿಜ್ಞಾವಿಧಿ ಸ್ವೀಕಾರ, ನಾನಾ ಸ್ಪರ್ಧೆಗಳಿಗೆ ಬಂದಿರುವ ಅಭ್ಯರ್ಥಿಗಳ ವಿಂಗಡಣೆ. ಎರಡನೆಯ ದಿನ ಓಟ. ಕುಸ್ತಿ, ಮುಷ್ಟಿ ಕಾಳಗ, ಪ್ಯಾನ್ಕ್ರೇಷಿಯಂ. ಪೆಂಟಾಥ್ಲಾನ್ ಮತ್ತು ಕುದುರೆ ಪಂದ್ಯಗಳಲ್ಲಿ ಹುಡುಗರ ಸ್ಪರ್ಧೆ. ಮೂರನೆಯ ದಿನ ವಯಸ್ಕರಿಗೆ ಮೀಸಲು: ಓಟ ಕುಸ್ತಿ, ಮುಷ್ಟಿಕಾಳಗ, ಪ್ಯಾನ್ಕ್ರೇಷಿಯಂ ಮತ್ತು ಸ್ಪರ್ಧೆ. ನಾಲ್ಕನೆಯ ದಿನ ಪೆಂಟಾಥ್ಲಾನ್, ರಥ ಮತ್ತು ಕುದುರೆ ಜೂಜು, ಘೋಷಣೆ ಸ್ಪರ್ಧೆ. ಐದನೆಯ ದಿನ ಮೆರವಣಿಗೆ, ಬಲಿಗಳು, ವಿಜಯಿಗಳಿಗೆ ಔತಣ, ಆಲ್ಟಿಸಿನಲ್ಲಿನ ಕಾಡು ಆಲಿವ್ ಮರದ ಎಲೆಗಳಿಂದ ಕಿರೀಟಧಾರಣೆ, ಜನಸ್ತೋಮಕ್ಕೆ ವಿಜಯಿಗಳ ದರ್ಶನ.

ವಿಜಯಿಗಳನ್ನು ರಾಷ್ಟ್ರವೀರರೆಂದು ಗೌರವಿಸಿ ಅವರ ಪ್ರತಿಮೆಗಳನ್ನು ರಚಿಸುತ್ತಿದ್ದುದು ಮಾತ್ರವೇ ಅಲ್ಲ, ಅವರಿಗೆ ತೆರಿಗೆ ವಿನಾಯಿತಿಯಿತ್ತು. ಒಲಿಂಪಿಕ್ ಕ್ರೀಡೆಗಳನ್ನು ವೃತ್ತಿಬಾಧೆಯಿಂದ ದೂರ ಇರಿಸಲಾಗಿತ್ತು. ಪ್ರೇಕ್ಷಕರಿಗಿಂತ ಸ್ಪರ್ಧಿಗಳಿಗಾಗಿಯೇ ಇವನ್ನು ಏರ್ಪಡಿಸುತ್ತಿದ್ದರು.

ಆಧುನಿಕ ಒಲಿಂಪಿಕ್ ಕ್ರೀಡೆಗಳು

[ಬದಲಾಯಿಸಿ]
ಪಿಯರಿ ಡಿ ಕೊಬರ್ತಿ, co-founder of the International Olympic Committee and its second president

ಪುರಾತನ ಒಲಿಂಪಿಕ್ ಕ್ರೀಡೆಗಳನ್ನು ಪುನರಾರಂಭಿಸಲು ಸಾಕಷ್ಟು ಪ್ರಯತ್ನಗಳು ಹಿಂದೆ ನಡೆದಿದ್ದವಾದರೂ ಆ ಕನಸು ಸಾಕಾರಗೊಂಡಿದ್ದು ಫ್ರಾನ್ಸಿನ [ಬೇರನ್ ಪಿಯರಿ ಡಿ ಕೊಬರ್ತಿ ಅವರಿಂದ. 1889ರಲ್ಲಿ ಪ್ಯಾರಿಸ್ನಲ್ಲಿ ನಡೆದ ವಸ್ತು ಪ್ರದರ್ಶನವೊಂದರಲ್ಲಿ ಪುರಾತನ ಒಲಿಂಪಿಕ್ ಕ್ರೀಡೆಗಳ ರೂಪಕಗಳನ್ನು ನೋಡಿದ ಆತ 1892ರಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾ ಸಮ್ಮೇಳನದಲ್ಲಿ ಒಲಿಂಪಿಕ್ ಕ್ರೀಡೆಗಳ ಪುನರುತ್ಥಾನದ ಸೂಚನೆ ಮಂಡಿಸಿದ. ಅದು ತಿರಸ್ಕೃತವಾಯಿತು. ಆದರೆ ನಿರಾಶನಾಗದ ಆತ, ಎರಡು ವರ್ಷಗಳ ನಂತರ, ತಾನೇ ಫ್ರಾನ್ಸಿನ ಸಾರಬಾನಿನಲ್ಲಿ ಕರೆದ ಅಂತಾರಾಷ್ಟ್ರೀಯ ಕ್ರೀಡಾ ಅಧಿವೇಶನದಲ್ಲಿ ಮತ್ತೆ ತನ್ನ ಯೋಚನೆ ಮಂಡಿಸಿದ. ಆತನ ವಿಚಾರಕ್ಕೆ ಒಪ್ಪಿಗೆ ದೊರೆಯಿತು. ಕೊಬರ್ತಿ ಮೊದಲ ಆಧುನಿಕ ಒಲಿಂಪಿಕ್ ಕ್ರೀಡೆಗಳನ್ನು 1900ರಲ್ಲಿ, ಪ್ಯಾರಿಸ್ನಲ್ಲೇ ನಡೆಸಬೇಕೆಂದು ಯೋಚಿಸಿದ್ದ. ಆದರೆ, ಗ್ರೀಕ್ ಜನರ ಒತ್ತಾಸೆಯ ಮೇರೆಗೆ 1896ರಲ್ಲಿ, ಗ್ರೀಸ್ನಲ್ಲಿ ಮೊದಲ ಒಲಿಂಪಿಕ್ ಕ್ರೀಡೆಗಳು ನಡೆದವು. ಒಲಿಂಪಿಯ ಗ್ರಾಮ ತೀರ ಹಿಂದುಳಿದ ಪ್ರದೇಶವಾಗಿದ್ದರಿಂದ, ಕ್ರೀಡೆಗಳನ್ನು ಅಥೆನ್ಸ್‌ನಲ್ಲಿ ನಡೆಸಲಾಯಿತು. 14 ರಾಷ್ಟ್ರಗಳ 241 ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಮಹಿಳಾ ಕ್ರೀಡಾಪಟುಗಳು ಇರಲಿಲ್ಲ.

ಹೀಗೆ ಆರಂಭವಾದ ಆಧುನಿಕ ಒಲಿಂಪಿಕ್ ಕ್ರೀಡಾ ಆಂದೋಲನ ಇಂದು ವಿಶ್ವದ ಅತ್ಯುನ್ನತ ಕ್ರೀಡಾಕೂಟವಾಗಿ ಬೆಳೆದಿದೆ. ಎರಡು ಮಹಾಯುದ್ಧಗಳಿಂದಾಗಿ 1916, 1940, 1944ರಲ್ಲಿ ಮಾತ್ರ ಈ ಕ್ರೀಡೆಗಳು ನಡೆಯಲಿಲ್ಲ.

ಕೊಬರ್ತಿ 1894ರಲ್ಲಿ ಒಲಿಂಪಿಕ್ ಸಮಿತಿಯ ಮೊದಲ ಸಮಾಚಾರ ಪತ್ರ ಹೊರಡಿಸಿದ. ಇಂದಿಗೂ ಅದು ಪ್ರಕಟವಾಗುತ್ತಿದೆ. ಕೊಬರ್ತಿಯ ಮಿತ್ರ ಡೈಡನ್ ಎಂಬಾತ ರೂಪಿಸಿದ ಒಲಿಂಪಿಕ್ ಧ್ಯೇಯವಾಕ್ಯ “Faster, Higher,Stronger ವನ್ನು ಈ ಸಮಾಚಾರ ಪತ್ರದಲ್ಲಿ ಪ್ರಕಟಿಸಲಾಗಿತ್ತು. `ವೇಗಯುತ, ಶಕ್ತಿಯುತ, ಉನ್ನತ’ ಎಂಬುದೇ ಇದರ ಅರ್ಥ. ಅದರಂತೆಯೇ ಒಲಿಂಪಿಕ್ ಕ್ರೀಡೆಗಳ ಗುಣಮಟ್ಟ ಏರುತ್ತಲೇ, ಹಲವಾರು ದಾಖಲೆಗಳು ಹೊರಹೊಮ್ಮಿವೆ. ಒಲಿಂಪಿಕ್ ಚಿನ್ನದ ಪದಕ. ಯಾವುದೇ ಕ್ರೀಡಾಪಟುವಿಗೂ ಜೀವನದ ಪರಮೋಚ್ಚ ಗುರಿ. ಇದು ರಾಷ್ಟ್ರದ ಪ್ರತಿಷ್ಠೆಯೂ ಹೌದು. ಒಲಿಂಪಿಕ್ ಕ್ರೀಡಾ ಧ್ವಜ ಶುಭ್ರ ಶ್ವೇತ ವರ್ಣದ್ದು. ಅದರಲ್ಲಿ ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣದ ಐದು ವರ್ತುಳಗಳ ಸರಪಳಿ. ಇವು ಏಷ್ಯ, ಆಫ್ರಿಕ, ಆಸ್ಟ್ರೇಲಿಯ, ಅಮೆರಿಕ ಮತ್ತು ಯುರೋಪ್ ಖಂಡಗಳ ಪ್ರತೀಕಗಳು.

1920ರಲ್ಲಿ ಆಂಟ್ವರ್ಪಿನಲ್ಲಿ ಒಳಾಂಗಣದ ಸ್ಕೇಟಿಂಗ್ ರಿಂಕ್ ಒಂದರಲ್ಲಿ ಕೆಲವು ಚಳಿಗಾಲದ ಸ್ಪರ್ಧೆಗಳನ್ನೇರ್ಪಡಿಸಲಾಯಿತು. 1924ರಿಂದ ಮೊದಲ್ಗೊಂಡು ಪ್ರತಿಯೊಂದು ಚತುರ್ವಾರ್ಷಿಕ ಕ್ರೀಡಾಧಿವೇಶನಕ್ಕೂ ಹಿಂದಿನ ಫೆಬ್ರುವರಿಯಲ್ಲಿ ಯಾವುದಾದರೊಂದು ಚಳಿದಾಣದಲ್ಲಿ ಸ್ಕೇಟಿಂಗ್, ಸ್ಕೀಯಿಂಗ್, ಐಸ್ ಹಾಕಿ, ಬಾಬ್ ಸ್ಲೈಡಿಂಗ್ ಮುಂತಾದ ಪಂದ್ಯಗಳನ್ನೇರ್ಪಡಿಸುವ ಕ್ರಮ ಜಾರಿಗೆ ಬಂತು. ಒಲಿಂಪಿಕ್ ಚಳಿಗಾಲದ ಕ್ರೀಡೆಗಳು ನಡೆದ ಸ್ಥಳಗಳು ಇವು; ಸ್ವಿಟ್ಸರ್ಲೆಂಡಿನ ಸೇಂಟ್ ಮಾರಿಟ್ಸ್‌ (1928), ನ್ಯೂಯಾರ್ಕಿನ ಲೇಕ್ ಪ್ಲೇಸಿಡ್ (1932), ಜರ್ಮನಿಯ ಗಾರ್ಮಿಷ್-ಪಾರ್ಟೆನ್ ಕರ್ಚೆನ್ (1936), ಮತ್ತೆ ಸೇಂಟ್ ಮಾರಿಟ್ಸ್‌ (1948), ನಾರ್ವೆಯ ಆಸ್ಲೊ (1952), ಇಟಲಿಯ ಕಾರ್ಟಿನ ಡಿ ಅಂಪೆಟ್ಜೊó (1956), ಕ್ಯಾಲಿಪೋರ್ನಿಯದ ಸ್ಕ್ವಾವ್ಯಾಲಿ (1960) ಆಸ್ಟ್ರಿಯದ ಇನ್ಸ್‌ಬ್ರುಕ್ (1964) ಮತ್ತು ಫ್ರಾನ್ಸಿನ ಗ್ರಿನೋಬಲ್ (1968). ಅಮೆರಿಕದ ಹಿರಿಮೆ: ಆಧುನಿಕ ಒಲಿಂಪಿಕ್ ಕ್ರೀಡೆಗಳಲ್ಲಿ ಅಮೆರಿಕದ್ದು ಅತಿ ದೊಡ್ಡ ಸಾಧನೆ. ಮೊಟ್ಟಮೊದಲ ಒಲಿಂಪಿಕ್ಸ್‌ನಲ್ಲಿ ಅಂದರೆ, 1896ರಲ್ಲಿ 11 ಚಿನ್ನದ ಪದಕಗಳೊಡನೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ ಅಮೆರಿಕ, 1906 ಮತ್ತು 1908ರಲ್ಲಿ ಎರಡನೇ ಸ್ಥಾನಕ್ಕೆ ಇಳಿದಿತ್ತಾದರೂ, ಅದಕ್ಕೆ ಪುರ್ಣ ಪ್ರಮಾಣದ ಪೈಪೋಟಿ ಎದುರಾಗಿದ್ದು 1936ರಲ್ಲಿ. ಬರ್ಲಿನ್ನಲ್ಲಿ ನಡೆದ ಆ ಒಲಿಂಪಿಕ್ ಕ್ರೀಡೆಗಳಲ್ಲಿ ಆತಿಥೇಯ ಜರ್ಮನಿ 33 ಚಿನ್ನದ ಪದಕಗಳೊಡನೆ ಮೊದಲ ಸ್ಥಾನ ಗಳಿಸಿದರೆ, ಅಮೆರಿಕ 24 ಚಿನ್ನದ ಪದಕಗಳೊಡನೆ ಎರಡನೆಯ ಸ್ಥಾನ ಗಳಿಸಿತ್ತು. 1952ರಲ್ಲಿ ಮೊದಲಬಾರಿಗೆ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿದ ಸೋವಿಯತ್ ಒಕ್ಕೂಟ, 22 ಚಿನ್ನದ ಪದಕಗಳನ್ನು ಗೆಲ್ಲುವುದರೊಂದಿಗೆ ಅಮೆರಿಕಕ್ಕೆ(40 ಚಿನ್ನ) ತೀವ್ರ ಪೈಪೋಟಿ ನೀಡಿತು. 1956ರಲ್ಲಿ ಅಗ್ರಸ್ಥಾನಕ್ಕೇರಿದ ಸೋವಿಯತ್ ಒಕ್ಕೂಟ (37 ಚಿನ್ನ), 1960ರಲ್ಲೂ (43 ಚಿನ್ನ) ಮೊದಲ ಸ್ಥಾನ ಕಾಯ್ದುಕೊಂಡಿತು.

1964ರಲ್ಲಿ ಮರಳಿ ಅಗ್ರಸ್ಥಾನ ಪಡೆದ ಅಮೆರಿಕ (36 ಚಿನ್ನ) 1968ರಲ್ಲೂ ಮೊದಲ ಸ್ಥಾನ (45 ಚಿನ್ನ) ಕಾಯ್ದುಕೊಂಡಿತು. ಆದರೆ 1972, 1976 ಮತ್ತು 1980ರ ಒಲಿಂಪಿಕ್ ಕ್ರೀಡೆಗಳಲ್ಲಿ ಸೋವಿಯತ್ ಒಕ್ಕೂಟ ತನ್ನ ಹಿರಿಮೆ ಮೆರೆಯಿತು. 1980ರಲ್ಲಿ ಮಾಸ್ಕೊದಲ್ಲಿ ನಡೆದ ಕ್ರೀಡೆಗಳನ್ನು ಅಮೆರಿಕ ಬಹಿಷ್ಕರಿಸಿದರೆ, 1984ರ ಲಾಸ್ ಏಂಜಲೀಸ್ ಕ್ರೀಡೆಗಳನ್ನು ಸೋವಿಯತ್ ಒಕ್ಕೂಟ ಬಹಿಷ್ಕರಿಸಿತು. 1988ರಲ್ಲಿ ಸೋಲ್ ಕ್ರೀಡೆಗಳಲ್ಲಿ ಮತ್ತೆ ಸೋವಿಯತ್-ಅಮೆರಿಕ ಎದುರಾಳಿಗಳಾದವು. ಸೋವಿಯತ್ ಜೊತೆ ಪುರ್ವ ಜರ್ಮನಿಯ ಕ್ರೀಡಾಪಟುಗಳೂ ಉತ್ತಮ ಸಾಧನೆ ತೋರಿ, ಅಮೆರಿಕವನ್ನು ಮೂರನೇ ಸ್ಥಾನಕ್ಕೆ ದೂಡಿದವು. 1992ರ ಬಾರ್ಸಿಲೊನಾ ಕ್ರೀಡೆಗಳಲ್ಲೂ ಸೋವಿಯತ್ಗೆ ಮೊದಲ ಸ್ಥಾನ. ಅಮೆರಿಕ ಎರಡನೇ ಸ್ಥಾನ ಗಳಿಸಿತು.

ಆದರೆ, 1996ರಲ್ಲಿ ಮತ್ತೆ ಅಗ್ರಪಟ್ಟಕ್ಕೇರಿದ ಅಮೆರಿಕ, 2000 ಮತ್ತು 2004ರಲ್ಲೂ ಮೊದಲ ಸ್ಥಾನ ಕಾಯ್ದುಕೊಂಡಿತು. ಸೋವಿಯತ್ ಒಕ್ಕೂಟ ಛಿದ್ರಗೊಂಡಿದ್ದೇ ಇದಕ್ಕೆ ಕಾರಣವಾಯಿತು. ರಷ್ಯದ ಸ್ಪರ್ಧಿಗಳು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 1884ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಚೀನ, ಸಿಡ್ನಿ (2000) ಒಲಿಂಪಿಕ್ಸ್‌ನಲ್ಲಿ 28 ಚಿನ್ನದ ಪದಕಗಳೊಡನೆ ಮೂರನೆಯ ಹಾಗೂ ಅಥೆನ್ಸ್‌ (2004) ಒಲಿಂಪಿಕ್ಸ್‌ನಲ್ಲಿ 32 ಚಿನ್ನದ ಪದಕಗಳೊಡನೆ ಎರಡನೆಯ ಸ್ಥಾನಕ್ಕೇರಿತು. 2008ರ ಒಲಿಂಪಿಕ್ ಕ್ರೀಡೆಗಳನ್ನು ನಡೆಸಲಿರುವ ಚೀನ, ಪದಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ ಆಶ್ಚರ್ಯಪಡಬೇಕಾಗಿಲ್ಲ. ಅಥೆನ್ಸ್‌ (2004) ಒಲಿಂಪಿಕ್ಸ್‌ ಪದಕಪಟ್ಟಿಯಲ್ಲಿ ಮೊದಲ ಸ್ಥಾನದ ವಿವರಗಳು ಈ ರೀತಿ ಇವೆ. ರಾಷ್ಟ್ರ ಚಿನ್ನ ಬೆಳ್ಳಿ ಕಂಚು ಅಮೆರಿಕ 35 39 29 ಚೀನ 32 17 14 ರಷ್ಯ 27 27 38

ನಿರ್ವಹಣೆ

[ಬದಲಾಯಿಸಿ]

ಒಲಿಂಪಿಕ್ ಚಳವಳಿಯನ್ನು ನಿರ್ದೇಶಿಸುವ ಮತ್ತು ಕ್ರೀಡೆಗಳನ್ನು ನಿಯಂತ್ರಿಸುವ ಹೊಣೆ ಇರುವುದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿ (ಐ.ಓ.ಸಿ.). ಇದರ ಮುಖ್ಯ ಕಚೇರಿ ಸ್ವಿಟ್ಸರ್ಲೆಂಡಿನ ಲಾಸೇನಿನ ಮಾನ್ರೆಪಾಸ್ನಲ್ಲಿದೆ. ಸಮಿತಿ ಕೂಲಂಕಷ ವಿಚಾರಣೆ ನಡೆಸಿ ಆಜೀವ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಈ ಸಮಿತಿಯ ಒಂದು ವೈಶಿಷ್ಟ್ಯವೇನೆಂದರೆ, ಇದರ ಸದಸ್ಯರು ತಂತಮ್ಮ ರಾಷ್ಟ್ರಗಳನ್ನು ಪ್ರತಿನಿಧಿಸುವುದಿಲ್ಲ. ಪ್ರತಿಯಾಗಿ ಅವರು ಈ ಸಮಿತಿಯಿಂದ ತಂತಮ್ಮ ರಾಷ್ಟ್ರಗಳಿಗೆ ನಿಯೋಗಿಗಳಾಗಿರುತ್ತಾರೆ. ಯಾವ ರಾಷ್ಟ್ರದಿಂದಲೂ ಮೂರಕ್ಕಿಂತ ಹೆಚ್ಚು ಸದಸ್ಯರಿರತಕ್ಕದ್ದಲ್ಲ. ಸದಸ್ಯರ ಮತ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂಥ ಯಾವ ಸೂಚನೆಯನ್ನೂ ತಮ್ಮ ರಾಷ್ಟ್ರಗಳಿಂದಾಗಲಿ ಬೇರೆ ಯಾವ ಸಂಸ್ಥೆಯಿಂದಾಗಲಿ ಪುರಸ್ಕರಿಸಬಾರದು. ಈ ಸಮಿತಿಯ ಪ್ರಥಮ ಅಧ್ಯಕ್ಷ ಗ್ರೀಸ್ನ ಡಿಮಿಟ್ರಿಯಸ್ ವಿಕೆಲಾಸ್(1896-2000). ಇವರ ನಂತರ ಬ್ಯಾರೆನ್ ಪಿಯರ್ ಡಿ ಕೂಬರ್ತಿ (1925ರ ವರೆಗೆ). ಅನಂತರ ಬೆಲ್ಜಿಯಂನ ಹೆನ್ರಿ ಡಿ ಬೇಲೆಟ್ ಲ್ಯಾಟರ್ ಅಧ್ಯಕ್ಷನಾದ. 1942ರಲ್ಲಿ ಈತ ತೀರಿಕೊಂಡಾಗ ಈ ಸ್ಥಾನ ಸ್ವೀಡನಿನ ಜೆ. ಸಿಗ್ಫ್ರಿಡ್ ಎಡ್ಸ್ಟ್ರಾಂಗ್ಗೆ ಬಂತು. 1952ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಆವರಿ ಬ್ರಂಡೇಜ್ ಆಯ್ಕೆಯಾದ. ಇವರ ನಂತರ ಲಾರ್ಡ್ ಕಿಲಾನಿನ್, ಆ್ಯಂಟನಿ ಸಮರಾಂಜ್ ಅಧ್ಯಕ್ಷರಾದರು. ಈಗ ಜಾಕ್ಸ್‌ ರೋಗೆ ಅಧ್ಯಕ್ಷರು.

ಒಲಿಂಪಿಕ್ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಆ ಕ್ರೀಡೆಯನ್ನೇ ವೃತ್ತಿಯಾಗಿ ಮಾಡಿಕೊಂಡಿರಬಾರದು; ಅದು ಅವರ ಹವ್ಯಾಸವಾಗಿರಬೇಕು-ಎಂಬುದು 1988ರವರೆಗೆ ನಿಯಮವಾಗಿತ್ತು. ಅನಂತರ ವೃತ್ತಿಪರ ಕ್ರೀಡಾಪಟುಗಳಿಗೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಯಿತು.

1932ರಲ್ಲಿ ಲಾಸ್ ಏಂಜೆಲ್ಸ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡೆಗಳಿಂದೀಚೆಗೆ ಬೆಳೆದುಕೊಂಡು ಬಂದಿರುವ ಒಂದು ಪದ್ಧತಿಯೆಂದರೆ ಈ ಕ್ರೀಡೆಗಳಿಗಾಗಿಯೇ ನಿರ್ಮಿಸಲಾಗುವ ಒಲಿಂಪಿಕ್ ಗ್ರಾಮ. ನಾನಾ ರಾಷ್ಟ್ರಗಳಿಂದ ಬಂದ ಎಲ್ಲ ಸ್ಪರ್ಧಿಗಳೂ ಒಂದೇ ಕ್ಷೇತ್ರದಲ್ಲಿ ವಾಸಿಸುವುದು ಇದರಿಂದ ಸಾಧ್ಯ. ಪ್ರಾಚೀನ ಗ್ರೀಸಿನಲ್ಲಿ ಕ್ರೀಡೆಗಳು ನಡೆಯುತ್ತಿದ್ದ ಸ್ಥಳವಾದ ಒಲಿಂಪಿಯದಿಂದ ತಂದ ಪಂಜಿನಿಂದ ಕ್ರೀಡಾಕೂಟದ ಸ್ಥಳದಲ್ಲಿ ಪವಿತ್ರ ಒಲಿಂಪಿಕ್ ಜ್ಯೋತಿಯನ್ನು ಹೊತ್ತಿಸಿ, ಕ್ರೀಡಾಧಿವೇಶನದ ಕಾಲದಲ್ಲಿ ಅದನ್ನು ನಂದಾದೀಪದಂತೆ ಉರಿಸುವುದು 1936ರ ಬರ್ಲಿನ್ ಕೂಟದಲ್ಲಿ ಆರಂಭವಾದ ಸಂಪ್ರದಾಯ. ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸುವವರನ್ನು ಆಯ್ಕೆಮಾಡುವ ಹೊಣೆ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳಿಗೆ ಸೇರಿದ್ದು. ಒಲಿಂಪಿಕ್ ಸ್ಪರ್ಧೆಗಳಲ್ಲಿ ಸೇರಿಸಲಾಗಿರುವ ಎಲ್ಲ ಕ್ರೀಡೆಗಳ ರಾಷ್ಟ್ರೀಯ ಸಂಸ್ಥೆಗಳಿಗೂ ರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿ ಪ್ರಾತಿನಿಧ್ಯ ಇರತಕ್ಕದ್ದು. ಈ ಸಮಿತಿಗಳು ಸ್ವತಂತ್ರ್ಯವಾಗಿ ಸ್ವಯಂ ಆಡಳಿತಾಧಿಕಾರ ಹೊಂದಿರಬೇಕು. ರಾಜಕೀಯ ವಾಣಿಜ್ಯಿಕ ಅಥವಾ ಮತೀಯ ಒಲವುಗಳಿಗೆ ಮಣಿಯಬಾರದು. ಪ್ರತಿಯೊಂದು ಕ್ರೀಡೆಗೂ ರಾಷ್ಟ್ರೀಯ ಸಂಘಗಳ ಪ್ರತಿನಿಧಿಗಳನ್ನೊಳಗೊಂಡ ಅಂತಾರಾಷ್ಟ್ರೀಯ ಮಹಾಸಂಘವೊಂದಿರುತ್ತದೆ. ಈ ಮಹಾಸಂಘಗಳ ನಿಯಂತ್ರಣಕ್ಕೆ ಅನುಸಾರವಾಗಿ ಆಯಾ ಕ್ರೀಡೆಗಳ ಸ್ಪರ್ಧೆಗಳನ್ನೇರ್ಪಡಿಸಲಾಗುತ್ತದೆ. ಅವಕ್ಕೆ ಸಂಬಂಧಪಟ್ಟ ನಿಯಮಗಳನ್ನು ರಚಿಸುವುದೂ ಮಹಾಸಂಘಗಳ ಹೊಣೆ.

ಉತ್ಸವ ವರ್ಣನೆ

[ಬದಲಾಯಿಸಿ]
Opening ceremony of the 2020 Summer Olympics in Tokyo

ಒಲಿಂಪಿಕ್ ಕ್ರೀಡೆಗಳ ಪ್ರಾರಂಭೋತ್ಸವವೊಂದು ವೈಭವಯುತ ಸಮಾರಂಭ. ಕ್ರೀಡೆಗಳು ನಡೆಯುತ್ತಿರುವ ದೇಶದ ಅಧಿಪತಿಯ ಆಗಮನದೊಂದಿಗೆ ಉತ್ಸವ ಆರಂಭ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಆತನನ್ನು ಸ್ವಾಗತಿಸಿ, ವಿಶೇಷವಾಗಿ ನಿರ್ಮಿಸಿದ ವೇದಿಕೆಯ ಮೇಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿಯ ರಾಷ್ಟ್ರಗೀತೆಯಾದೊಡನೆಯೇ ನಾನಾ ರಾಷ್ಟ್ರಗಳ ಸ್ಪರ್ಧಿಗಳ ಪ್ರದರ್ಶನ, ಉತ್ಸವ, ನಡಿಗೆ; ಅವರವರ ರಾಷ್ಟ್ರಗಳ ಸಮವಸ್ತ್ರದುಡಿಗೆ ತೊಡಿಗೆ; ಪ್ರತಿರಾಷ್ಟ್ರದ ತಂಡದ ಮುಂದುಗಡೆ ಆ ರಾಷ್ಟ್ರದ ಧ್ವಜ, ದೊಡ್ಡ ಫಲಕವೊಂದರ ಮೇಲೆ ಆ ರಾಷ್ಟ್ರದ ಹೆಸರು, ಮೊಟ್ಟಮೊದಲು ಗ್ರೀಸ್ ತಂಡ, ಅನಂತರ ಅಕ್ಷರಾನುಕ್ರಮಣಿಕೆಯಲ್ಲಿ ಇತರ ರಾಷ್ಟ್ರಗಳ ತಂಡಗಳ ಪ್ರವೇಶ. ಪ್ರತಿ ತಂಡವೂ ಕ್ರೀಡಾಂಗಣದ ಮಾರ್ಗವನ್ನೊಮ್ಮೆ ಸುತ್ತಿದ ಮೇಲೆ ನಡುಗಡೆಯಲ್ಲಿ ನಿಲ್ಲುತ್ತದೆ. ಅದರ ಮುಂದೆ ತನ್ನ ರಾಷ್ಟ್ರಧ್ವಜ ಮತ್ತು ಹೆಸರು ಬರೆದ ಫಲಕ. ಅನಂತರ ಸಮಿತಿಯ ಅಧ್ಯಕ್ಷನಿಂದ ಸಂಗ್ರಹವಾದ ಸ್ವಾಗತ ಭಾಷಣ. ಕ್ರೀಡೆಗಳನ್ನು ಉದ್ಘಾಟಿಸಬೇಕೆಂದು ರಾಷ್ಟ್ರಮುಖ್ಯನಿಗೆ ಪ್ರಾರ್ಥನೆ. ತತ್ಕ್ಷಣವೇ ತುತ್ತೂರಿಗಳ ನಿನಾದ, ಒಲಿಂಪಿಕ್ ಧ್ವಜಾರೋಹಣ, ಬಿಡುಗಡೆಗೊಂಡ ಪಾರಿವಾಳಗಳ ಸ್ವಚ್ಛಂದ ಹಾರಾಟ. ಕುಶಾಲು ತೋಪಿನ ಸಲಾಮೀ ಅಬ್ಬರ. ಆ ಕ್ಷಣಕ್ಕೆ ಸರಿಯಾಗಿ ಕ್ರೀಡಾಂಗಣದೊಳಕ್ಕೆ ಒಲಿಂಪಿಕ್ ಜ್ಯೋತಿಯ ಆಗಮನ. ಪವಿತ್ರವಾದ ನಂದಾಜ್ಯೋತಿಪುಂಜದ ಬೆಳಗುವಿಕೆ, ಸ್ವಸ್ತಿವಾಚನ. ಒಲಿಂಪಿಕ್ ಗೀತಗಾಯನ.

ಅದು ಮುಗಿಯುವ ವೇಳೆಗೆ ಸರಿಯಾಗಿ ಆತಿಥೇಯ ರಾಷ್ಟ್ರದ ಸ್ಪರ್ಧಿಗಳಲ್ಲೊಬ್ಬ ವೇದಿಕೆಯನ್ನೇರಿ ನಿಂತು, ‘ಈ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸುವ ನಾವು ನಿಜವಾದ ಕ್ರೀಡಾಮನೋಭಾವದಿಂದ ವರ್ತಿಸುತ್ತೇವೆ. ಕ್ರೀಡೆಯ ಕೀರ್ತಿ ಬೆಳಗುತ್ತೇವೆ, ನಮ್ಮ ತಂಡಗಳ ಗೌರವ ರಕ್ಷಿಸುತ್ತೇವೆ, ಒಲಿಂಪಿಕ್ ಕ್ರೀಡೆಗಳಿಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನೂ ಗೌರವಿಸಿ ಅದಕ್ಕೆ ಬದ್ಧರಾಗಿರುತ್ತೇವೆ-ಎಂದು ಎಲ್ಲ ಸ್ಪರ್ಧಿಗಳ ಪರವಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ’ ಎಂಬುದಾಗಿ ಅಲ್ಲಿ ಸೇರಿರುವ ಎಲ್ಲ ಸ್ಪರ್ಧಿಗಳ ಪರವಾಗಿ ಪ್ರತಿಜ್ಞಾವಚನವನ್ನೋದುತ್ತಾನೆ. ಆಗ ರಾಷ್ಟ್ರಗೀತೆಯ ಮೇಳಗಾನವಾಗುತ್ತದೆ. ಸ್ಪರ್ಧಿಗಳು ಕ್ರೀಡಾಂಗಣದಿಂದ ನಿರ್ಗಮಿಸುತ್ತಾರೆ, ಆಗ ಸ್ಪರ್ಧೆಯ ಆರಂಭ. ಮುಕ್ತಾಯ ಸಮಾರಂಭ ಅಷ್ಟೇ ಆಕರ್ಷಕ. “ನಾಲ್ಕು ವರ್ಷಗಳ ಅನಂತರ ಮುಂದಿನ ಒಲಿಂಪಿಕ್ಸ್‌ನಲ್ಲಿ ಮತ್ತೆ ಸೇರೋಣ” ಎಂದು ಐಒಸಿ ಅಧ್ಯಕ್ಷರು ಕ್ರೀಡಾಪಟುಗಳಿಗೆ ಕರೆಕೊಡುತ್ತಾನೆ. `ಒಲಿಂಪಿಕ್ ಜ್ಯೋತಿ ಮುಂದೆ ಸಾಗಲು ಹಾಗೂ ಮಾನವಕುಲದ ಒಳಿತಿಗಾಗಿ ನಿಮ್ಮ ಮನೋಲ್ಲಾಸ ಸರ್ವತ್ರ ಪಸರಿಸಲಿ’ ಎನ್ನುವ ಸಂದೇಶ ನೀಡುತ್ತಾನೆ. ತುತ್ತೂರಿ ಮೊಳಗುತ್ತದೆ. ಒಲಿಂಪಿಕ್ ಜ್ಯೋತಿಯನ್ನು ನಂದಿಸುತ್ತಾರೆ. ಒಲಿಂಪಿಕ್ ಧ್ವಜ ಕೆಳಗಿಳಿಯುತ್ತದೆ. ಐದು ತೋಪುಗಳ ಸಲಾಮ್ ಅನಂತರ ಒಲಿಂಪಿಕ್ ಗೀತೆ ಹಾಡಲಾಗುತ್ತದೆ.

ಬಹಿಷ್ಕಾರಗಳು

[ಬದಲಾಯಿಸಿ]
Countries that boycotted the 1956 Summer Olympics (shaded blue)
Countries that boycotted the 1964 Summer Olympics (shaded red)
Countries that boycotted the 1976 Summer Olympics (shaded blue)
Countries that boycotted the 1980 Summer Olympics (shaded blue)
Countries that boycotted the 1984 Summer Olympics (shaded blue)

ಖೇದದ ಸಂಗತಿಯೆಂದರೆ ಮಾನವಭ್ರಾತೃವ್ಯದ ಸಂಕೇತವಾದ ಒಲಿಂಪಿಕ್ ಕ್ರೀಡಾಕೂಟಗಳು ಕೂಡಾ ರಾಜಕೀಯದಿಂದ ಹೊರಗುಳಿಯಲಿಲ್ಲ. ವಿವಿಧ ರಾಜಕೀಯ ಕಾರಣಗಳಿಂದಾಗಿ ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ನಾನಾ ದೇಶಗಳಿಂದ ಬಹಿಷ್ಕರಿಸಲ್ಪಟ್ಟವು. ೧೯೫೬ರ ಮೆಲ್ಬರ್ನ್ ಕೂಟ , ೧೯೭೨ರ ಮ್ಯೂನಿಖ್ ಕೂಟ , ೧೯೭೬ರ ಮಾಂಟ್ರಿಯಲ್ ಕ್ರೀಡಾಕೂಟ, ೧೯೮೦ರ ಮಾಸ್ಕೋ ಕೂಟ ಮತ್ತು ೧೯೮೪ರ ಲಾಸ್ ಎಂಜಲಿಸ್ ಒಲಿಂಪಿಕ್ ಕ್ರೀಡಾಕೂಟಗಳು ಈ ರೀತಿಯ ಬಹಿಷ್ಕಾರದ ಕಹಿಯನ್ನು ಅನುಭವಿಸಿದವು.

ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಜಯ ಸಾಧಿಸುವುದು ಒಂದು ಭಾರೀ ಪ್ರತಿಷ್ಠೆಯ ಸಂಗತಿ. ಹೀಗಾಗಿ ನಾನಾ ದೇಶಗಳ ಹಲವಷ್ಟು ಕ್ರೀಡಾಳುಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆಲ್ಲಲು ಅಡ್ಡದಾರಿಗಳನ್ನು ಬಳಸುವರು. ಇವುಗಳಲ್ಲಿ ಉದ್ದೀಪನವಸ್ತುಗಳ ಬಳಕೆ ಇಂದು ಒಲಿಂಪಿಕ್ಸ್ ಗೆ ಒಂದು ದೊಡ್ಡ ಸವಾಲೆನಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಉದ್ದೀಪನವಸ್ತುಗಳ ಬಳಕೆ ನಡೆಯುತ್ತಲೇ ಇದೆ. ೧೯೮೮ರ ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕೆನಡದ ಬೆನ್ ಜಾನ್ಸನ್ ಪುರುಷರ ೧೦೦ ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಸ್ವರ್ಣಪದಕವನ್ನು ಗೆದ್ದನು. ನಂತರ ಈತನು ಉದ್ದೀಪನವಸ್ತುಗಳನ್ನು ಬಳಸಿದುದು ಪರೀಕ್ಷೆಯಲ್ಲಿ ಸ್ಥಾಪಿತವಾಗಿ ಆತನ ಸ್ವರ್ಣಪದಕವನ್ನು ಹಿಂಪಡೆದುಕೊಂಡು ಆತನನ್ನು ಕ್ರೀಡಾಸ್ಪರ್ಧೆಗಳಿಂದ ನಿಷೇಧಿಸಲಾಯಿತು. ವಿಷಾದದ ಸಂಗತಿಯೆಂದರೆ ಭಾರತದ ಕ್ರೀಡಾಪಟುಗಳೂ ಈ ವಿಷಯದಲ್ಲಿ ಶುದ್ಧರಾಗಿಲ್ಲದಿರುವುದು.

ಹಿಂಸಾಚಾರಗಳು

[ಬದಲಾಯಿಸಿ]

ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ಹಿಂಸಾಚಾರವನ್ನು ಕಂಡಿವೆ. ಅಮಾನವೀಯ ಘಟನೆಯೊಂದು ೧೯೭೨ರ ಮ್ಯೂನಿಖ್ ಕ್ರೀಡಾಕೂಟದಲ್ಲಿ ಸಂಭವಿಸಿತು. ಇಸ್ರೇಲ್ ದೇಶದ ೧೧ ಕ್ರೀಡಾಳುಗಳನ್ನು ಪ್ಯಾಲೆಸ್ಟಿನ್ ಉಗ್ರಗಾಮಿಗಳು ಒತ್ತೆಯಾಳುಗಳಾಗಿರಿಸಿಕೊಂಡರು. ಇವರನ್ನು ಬಿಡಿಸಿಕೊಳ್ಳಲು ನಡೆಸಲಾದ ವಿಫಲ ಕಾರ್ಯಾಚರಣೆಯಲ್ಲಿ ೯ ಮಂದಿ ಕ್ರೀಡಾಳುಗಳೂ ಸೇರಿದಂತೆ ಒಟ್ಟು ೧೫ ಮಂದಿ ಸಾವನ್ನಪ್ಪಿದರು. ೧೯೯೬ರ ಅಟ್ಲಾಂಟ ಕೂಟದಲ್ಲಿ ಸಂಭವಿಸಿದ ಬಾಂಬ್ ಸ್ಫೋಟವೊಂದರಲ್ಲಿ ಇಬ್ಬರು ಮರಣಿಸಿದರು.

ಟೀಕೆಗಳು

[ಬದಲಾಯಿಸಿ]

ಗಮನಿಸಬೇಕಾದ ಸಂಗತಿಯೆಂದರೆ ಈವರೆವಿಗೆನ ಹೆಚ್ಚಿನ ಒಲಿಂಪಿಕ್ ಕ್ರೀಡಾಕೂಟಗಳು ಉತ್ತರ ಅಮೆರಿಕ ಅಥವಾ ಯುರೋಪ್ ನಲ್ಲಿಯೇ ಆಯೋಜಿಸಲ್ಪಟ್ಟಿವೆ. ಕೇವಲ ಕೆಲವು ಬಾರಿ ಮಾತ್ರ ವಿಶ್ವದ ಇತರ ಭಾಗಗಳಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸುವ ಅವಕಾಶ ಒದಗಿದೆ. ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡಗಳಲ್ಲಿ ಇದುವರೆಗೆ ಒಂದು ಬಾರಿಯೂ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸಲಾಗಿಲ್ಲ. ಹೀಗಾಗಿ ಒಲಿಂಪಿಕ್ ಕ್ರೀಡಾಕೂಟಗಳು ಕೇವಲ ಉಳ್ಳವರ ಪ್ರತಿಷ್ಠೆ ಮೆರೆಸುವ ಸಲುವಾಗಿಯೇ ಇವೆ ಎಂಬ ಟೀಕೆ ಸಾಕಷ್ಟು ವ್ಯಾಪಕವಾಗಿದೆ.

ಒಲಿಂಪಿಕ್ ಧ್ವಜ

[ಬದಲಾಯಿಸಿ]

ಒಂದಕ್ಕೊಂದು ಹೆಣೆದುಕೊಂಡಿರುವ ಐದು ವರ್ತುಲಗಳು ಒಲಿಂಪಿಕ್ ಚಿಹ್ನೆ. ಈ ಐದು ವರ್ತುಲಗಳು ಪ್ರಪಂಚದ ಐದು ಜನವಸತಿಯುಳ್ಳ ಭೂಖಂಡಗಳನ್ನು ಪ್ರತಿನಿಧಿಸುತ್ತವೆ. ( ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದಾಗಿ ಪರಿಗಣಿಸಲಾಗಿದೆ). ಶ್ವೇತವರ್ಣದ ಒಲಿಂಪಿಕ್ ಧ್ವಜದಲ್ಲಿ ಈ ೫ ವರ್ತುಲಗಳು ೫ ವರ್ಣಗಳಲ್ಲಿ ಗೋಚರಿಸುತ್ತವೆ. ಕೆಂಪು,ನೀಲಿ,ಹಸಿರು,ಹಳದಿ ಹಾಗೂ ಕಪ್ಪು ಇವೇ ಆ ಐದು ವರ್ಣಗಳು.https://www.quora.com/What-do-the-colors-on-the-Olympics-symbol-mean ಅತಿ ವಿಶಿಷ್ಟ ಸಂಗತಿಯೆಂದರೆ ವಿಶ್ವದ ಪ್ರತಿಯೊಂದು ರಾ9ಷ್ಟ್ರದ ಧ್ವಜದಲ್ಲಿ ಈ ಆರು ವರ್ಣಗಳಲ್ಲಿ ( ಮೇಲಿನ ೫ ಮತ್ತು ಧ್ವಜದ ಬಿಳಿ ವರ್ಣ) ಕನಿಷ್ಠ ಒಂದಾದರೂ ಇದ್ದೇ ಇದೆ.

ಒಲಿಂಪಿಕ್ ಧ್ಯೇಯ

[ಬದಲಾಯಿಸಿ]

ಲ್ಯಾಟಿನ್ ಭಾಷೆಯ " ಸಿಟಿಯಸ್ , ಆಲ್ಟಿಯಸ್ , ಫೋರ್ಟಿಯಸ್ " ಅಂದರೆ "ಕ್ಷಿಪ್ರವಾಗಿ , ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ. ಮೊದಮೊದಲು ಸ್ಪರ್ಧೆಗಳು ಓಟ, ಜಿಗಿತ ಮತ್ತು ಭಾರ ಎತ್ತುವಿಕೆ ಅಥವಾ ಭಾರ ಎಸೆಯುವಿಕೆಗೇ ಸೀಮಿತವಾಗಿದ್ದುದರಿಂದ ಈ ಧ್ಯೇಯ ರಚಿತವಾಯಿತು. ಕೂಬರ್ತಿಯ ಪ್ರಕಾರ " ಹೇಗೆ ಜೀವನದಲ್ಲಿ ಹೋರಾಡುವುದು ಮುಖ್ಯವೇ ಹೊರತು ಜಯಿಸುವುದಲ್ಲವೋ ಹಾಗೆಯೇ ಒಲಿಂಪಿಕ್ಸ್ ನ ಅತಿಮುಖ್ಯ ಸಂಗತಿಯೆಂದರೆ ಪಾಲ್ಗೊಳ್ಳುವುದೇ ವಿನಹ ಗೆಲ್ಲುವುದಲ್ಲ. ಅವಶ್ಯ ವಿಚಾರವೆಂದರೆ ಉತ್ತಮವಾಗಿ ಹೋರಾಡುವುದು. ವಿಜಯ ಸಾಧಿಸುವುದೇ ಗುರಿ ಅಲ್ಲ."

ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರಗಳು

[ಬದಲಾಯಿಸಿ]
ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರಗಳು[]
ವರ್ಷ ಬೇಸಿಗೆಯ ಕೂಟಗಳು ಚಳಿಗಾಲದ ಕೂಟಗಳು ಯುವ ಒಲಂಪಿಕ್ ಕೂಟಗಳು
ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರ # ಅತೀಥೆಯ ನಗರ # ಅತೀಥೆಯ ನಗರ
1896 I Greece ಅಥೆನ್ಸ್, ಗ್ರೀಸ್
1900 II France ಪ್ಯಾರಿಸ್, ಫ್ರಾನ್ಸ್
1904 III ಅಮೇರಿಕ ಸಂಯುಕ್ತ ಸಂಸ್ಥಾನ ಸೇಂಟ್ ಲೂಯಿಸ್, ಯು ಎಸ್ ಎ[]
1906 III[] Greece ಅಥೆನ್ಸ್, ಗ್ರೀಸ್
1908 IV ಯುನೈಟೆಡ್ ಕಿಂಗ್ಡಂ ಲಂಡನ್, ಯುನೈಟೆಡ್ ಕಿಂಗ್‌ಡಂ
1912 V Sweden ಸ್ಟಾಖೋಂ, ಸ್ವೀಡನ್
1916 VI Germany ಬರ್ಲಿನ್, ಜರ್ಮನಿ
Cancelled due to World War I
1920 VII Belgium ಎಂಟ್ವರ್ಪ್, ಬೆಲ್ಜಿಯಂ
1924 VIII France ಪ್ಯಾರಿಸ್, ಫ್ರಾನ್ಸ್ I France ಚಾಮೋನಿಕ್ಸ್, ಫ್ರಾನ್ಸ್
1928 IX ನೆದರ್ಲ್ಯಾಂಡ್ಸ್ ಆಂಸ್ಟರ್ಡ್ಯಾಂ, ನೆದರ್ಲೆಂಡ್ಸ್ II ಸ್ವಿಟ್ಜರ್ಲ್ಯಾಂಡ್ ಸೈಂಟ್ ಮೋರ್ಟಿಜ್, ಸ್ವಿಟ್ಜರ್ಲೆಂಡ್
1932 X ಅಮೇರಿಕ ಸಂಯುಕ್ತ ಸಂಸ್ಥಾನ ಲಾಸ್ ಏಂಜೆಲ್ಸ್, , ಯು ಎಸ್ ಎ III ಅಮೇರಿಕ ಸಂಯುಕ್ತ ಸಂಸ್ಥಾನ ಲೇಕ್ ಪ್ಲಾಸಿಡ್, ಯು ಎಸ್ ಎ
1936 XI Germany ಬರ್ಲಿನ್, ಜರ್ಮನಿ IV Germany Garmisch-Partenkirchen, ಜರ್ಮನಿ
1940 XII ಜಪಾನ್ ಟೋಕ್ಯೊ, ಜಪಾನ್
Finland ಹೆಲ್ಸಿಂಕಿ, ಫಿನ್ ಲ್ಯಾಂಡ್
Cancelled due to World War II
V ಜಪಾನ್ ಸಪ್ಪೋರೊ, ಜಪಾನ್
ಸ್ವಿಟ್ಜರ್ಲ್ಯಾಂಡ್ ಸೈಂಟ್ ಮೋರ್ಟಿಜ್, ಸ್ವಿಟ್ಜರ್ಲೆಂಡ್
Germany Garmisch-Partenkirchen, ಜರ್ಮನಿ
ಎರಡನೆ ಮಹಾಯುದ್ಧದಿಂದಾಗಿ ರದ್ದು
1944 XIII ಯುನೈಟೆಡ್ ಕಿಂಗ್ಡಂ ಲಂಡನ್, ಯುನೈಟೆಡ್ ಕಿಂಗ್‌ಡಂ
Cancelled due to World War II
V ಇಟಲಿ Cortina d'Ampezzo, ಇಟಲಿ
Cancelled due to World War II
1948 XIV ಯುನೈಟೆಡ್ ಕಿಂಗ್ಡಂ ಲಂಡನ್, ಯುನೈಟೆಡ್ ಕಿಂಗ್‌ಡಂ V ಸ್ವಿಟ್ಜರ್ಲ್ಯಾಂಡ್ ಸೈಂಟ್ ಮೋರ್ಟಿಜ್, ಸ್ವಿಟ್ಜೆರ್ಲೆಂಡ್
1952 XV Finland ಹೆಲ್ಸಿನ್ಕಿ, ಫಿನ್ಲೆಂಡ್ VI ನಾರ್ವೇ ಓಸ್ಲೊ, ನಾರ್ವೆ
1956 XVI ಆಸ್ಟ್ರೇಲಿಯಾ ಮೆಲ್ಬೋರ್ನ್, ಆಸ್ಟ್ರೇಲಿಯ +
Sweden ಸ್ಟಾಕ್ ಹೋಂ, ಸ್ವೀಡನ್[]
VII ಇಟಲಿ ಕೊರ್ಟಿನ ಡಿ' ಅಮ್ ಪೆಜ್ಜೊ, ಇಟಲಿ
1960 XVII ಇಟಲಿ ರೋಮ್, ಇಟಲಿ VIII ಅಮೇರಿಕ ಸಂಯುಕ್ತ ಸಂಸ್ಥಾನ ಸ್ಕ್ವಾ ವ್ಯಾಲಿ, ಅಮೇರಿಕ ಸಂಯುಕ್ತ ಸಂಸ್ಥಾನ
1964 XVIII ಜಪಾನ್ ಟೋಕ್ಯೊ, ಜಪಾನ್ IX Austria ಇನ್ಸ್ ಬ್ರೂಕ್, ಆಸ್ಟ್ರೀಯ
1968 XIX ಮೆಕ್ಸಿಕೋ ಮೆಕ್ಸಿಕೊ ನಗರ, ಮೆಕ್ಸಿಕೊ X France ಗ್ರೆನೊಬಲ್, ಫ್ರಾನ್ಸ್
1972 XX ಪಶ್ಚಿಮ ಜರ್ಮನಿ ಮ್ಯೂನಿಕ್, ಪಶ್ಚಿಮ ಜರ್ಮನಿ XI ಜಪಾನ್ ಸಪ್ಪೊರೊ, ಜಪಾನ್
1976 XXI ಕೆನಡಾ ಮಾಂಟ್ರಿಯಲ್l, ಕೆನಡ XII ಅಮೇರಿಕ ಸಂಯುಕ್ತ ಸಂಸ್ಥಾನ ಡೆನ್ವರ್, ಯು ಎಸ್ ಎ
Austria ಇನ್ಸ್‌ಬ್ರುಕ್, ಆಸ್ಟ್ರಿಯ
1980 XXII ಸೋವಿಯತ್ ಒಕ್ಕೂಟ ಮಾಸ್ಕೊ, ಸೋವಿಯೆಟ್ ಒಕ್ಕೂಟ XIII ಅಮೇರಿಕ ಸಂಯುಕ್ತ ಸಂಸ್ಥಾನ ಲೇಕ್ ಪ್ಲಾಸಿಡ್, ಯು ಎಸ್ ಎ
1984 XXIII ಅಮೇರಿಕ ಸಂಯುಕ್ತ ಸಂಸ್ಥಾನ ಲಾಸ್ ಏಂಜಲೀಸ್, ಯು ಎಸ್ ಎ XIV Socialist Federal Republic of Yugoslavia ಸಾರಯೇವೋ, ಯುಗೊಸ್ಲಾವಿಯ
1988 XXIV ದಕ್ಷಿಣ ಕೊರಿಯಾ ಸಿಯೋಲ್, ದಕ್ಷಿಣ ಕೊರಿಯ XV ಕೆನಡಾ ಕ್ಯಾಲ್ ಗರಿ, ಕೆನಡ
1992 XXV Spain ಬಾರ್ಸಿಲೋನ, ಸ್ಪೇನ್ XVI France ಅಲ್ಬರ್ಟ್ ವಿಲ್ಲೆ, ಫ್ರಾನ್ಸ್
1994 XVII ನಾರ್ವೇ ಲಿಲ್ಲ್‌ಹ್ಯಾಮರ್, ನಾರ್ವೆ
1996 XXVI ಅಮೇರಿಕ ಸಂಯುಕ್ತ ಸಂಸ್ಥಾನ ಅಟ್ಲಾಂಟ, ಯು ಎಸ್ ಎ
1998 XVIII ಜಪಾನ್ ನಗಾನೊ, ಜಪಾನ್
2000 XXVII ಆಸ್ಟ್ರೇಲಿಯಾ ಸಿಡ್ನಿ, ಆಸ್ಟ್ರೇಲಿಯ
2002 XIX ಅಮೇರಿಕ ಸಂಯುಕ್ತ ಸಂಸ್ಥಾನ ಸಾಲ್ಟ್ ಲೇಕ್ ಸಿಟಿ, ಯು ಎಸ್ ಎ
2004 XXVIII Greece ಅಥೆನ್ಸ್, ಗ್ರೀಸ್
2006 XX ಇಟಲಿ ಟ್ಯೂರಿನ್, ಇಟಲಿ
2008 XXIX ಚೀನಾ ಬೀಜಿಂಗ್, ಚೀನಾ[][]
2010 XXI ಕೆನಡಾ ವೆನ್‌ಕೂವರ್, ಕೆನಡ I (Summer) ಸಿಂಗಾಪುರ ಸಿಂಗಾಪುರ
2012 XXX ಯುನೈಟೆಡ್ ಕಿಂಗ್ಡಂ ಲಂಡನ್, ಯುನೈಟೆಡ್ ಕಿಂಗ್ ಡಂ I (Winter) Austria ಇನ್ಸ್‌ಬ್ರುಕ್, ಆಸ್ಟ್ರಿಯ
2014 XXII ರಷ್ಯಾ ಸೋಚಿ, ರಷ್ಯಾ II (Summer) To be determined
2016 XXXI Brazil ರಿಯೊ ಡಿ ಜೆನೆರೋ, ಬ್ರೆಜಿಲ್ II (Winter) To be determined
2018 XXIII To be determined
2020 XXXII To be determined

ಗಮನಿಸಿ : ಈ ಪಟ್ಟಿಯು ಅಪೂರ್ಣ, ಮುಂದೆ ಇದನ್ನು ಸರಿಪಡಿಸಲಾಗುವುದು

ಒಲಿಂಪಿಕ್ ಜ್ಯೋತಿ

[ಬದಲಾಯಿಸಿ]

ಈಚಿನ ವರ್ಷಗಳಲ್ಲಿ ಒಲಿಂಪಿಕ್ ಜ್ಯೋತಿಯ ಶ್ರೇಷ್ಠ ಪರಂಪರೆಯೊಂದು ಆರಂಭವಾಗಿದೆ. ಪ್ರತಿ ಒಲಿಂಪಿಕ್ ಕ್ರೀಡಾಕೂಟದ ಕೆಲ ಸಮಯದ ಮುನ್ನ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮಸೂರ ಮತ್ತು ಸೂರ್ಯಕಿರಣಗಳ ಸಹಾಯದಿಂದ ದೊಂದಿಯೊಂದನ್ನು ಹಚ್ಚಲಾಗುವುದು. ಇದೇ ಒಲಿಂಪಿಕ್ ಜ್ಯೋತಿ. ಈ ಒಲಿಂಪಿಕ್ ಜ್ಯೋತಿಯನ್ನು ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರದವರೆಗೆ ಭೂಮಿಯ ಬಹುತೇಕ ರಾಷ್ಟ್ರಗಳ ಮೂಲಕ ಹಾಯಿಸಿ ಕೊಂಡೊಯ್ಯಲಾಗುವುದು. ಪ್ರತಿ ರಾಷ್ಟ್ರದ ಮೂಲಕ ಹಾದುಹೋಗುವಾಗ ಆಯಾ ದೇಶದ ಪ್ರಮುಖ ಕ್ರೀಡಾಪಟುಗಳು ಮತ್ತು ಇತರ ಗಣ್ಯರು ರಿಲೇ ಓಟದ ಮೂಲಕ ಜ್ಯೋತಿಯನ್ನು ಸಾಗಿಸುವರು. ಇದರಲ್ಲಿ ಪಾಲ್ಗೊಳ್ಳುವುದು ಒಂದು ಗೌರವದ ಹಾಗೂ ಪ್ರತಿಷ್ಠೆಯ ಸಂಗತಿ. ನಂತರ ಕೂಟದ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಕ್ರೀಡಾಂಗಣದಲ್ಲಿ ಒಂದು ದೊಡ್ಡ ಜ್ಯೋತಿಯನ್ನು ಬೆಳಗಲು ಈ ದೊಂದಿಯನ್ನು ಬಳಸಲಾಗುವುದು. ಈ ಮುಖ್ಯ ಜ್ಯೋತಿಯು ಕ್ರೀಡಾಕೂಟವು ಮುಗಿಯವರೆಗೂ ಅವಿರತವಾಗಿ ಬೆಳಗುತ್ತಲೇ ಇರುವುದು. ಒಲಿಂಪಿಕ್ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಇದನ್ನು ನಂದಿಸಲಾಗುವುದು.

ಸರ್ವ ಶ್ರೇಷ್ಠ ಪ್ರದರ್ಷನ

[ಬದಲಾಯಿಸಿ]

The IOC does not keep an official record of individual medal counts, though unofficial medal tallies abound. These provide one method of determining the most successful Olympic athletes of the modern era. Below are the top ten individual medal winners of the modern Olympics (the gender of the athlete is denoted in the "Sport" column):

ಕ್ರೀಡಾಪಟು ರಾಷ್ಟ್ರ ಕ್ರೀಡೆ ಒಲಿಂಪಿಕ್ ಬಂಗಾರ ಬೆಳ್ಳಿ ಕಂಚು ಒಟ್ಟ
Michael Phelps  ಅಮೇರಿಕ ಸಂಯುಕ್ತ ಸಂಸ್ಥಾನ Swimming (m) 2000–2008 14 0 2 16
Larissa Latynina  ಸೋವಿಯತ್ ಒಕ್ಕೂಟ Gymnastics (f) 1956–1964 9 5 4 18
Paavo Nurmi  Finland Athletics (m) 1920–1928 9 3 0 12
Mark Spitz  ಅಮೇರಿಕ ಸಂಯುಕ್ತ ಸಂಸ್ಥಾನ Swimming (m) 1968–1972 9 1 1 11
Carl Lewis  ಅಮೇರಿಕ ಸಂಯುಕ್ತ ಸಂಸ್ಥಾನ Athletics (m) 1984–1996 9 1 0 10
Bjørn Dæhlie  ನಾರ್ವೇ Cross-country skiing (m) 1992–1998 8 4 0 12
Birgit Fischer  ಪೂರ್ವ ಜರ್ಮನಿ
 Germany
Canoeing (flatwater) (f) 1980–2004 8 4 0 12
Sawao Kato  ಜಪಾನ್ Gymnastics (m) 1968–1976 8 3 1 12
Jenny Thompson  ಅಮೇರಿಕ ಸಂಯುಕ್ತ ಸಂಸ್ಥಾನ Swimming (f) 1992–2004 8 3 1 12
Matt Biondi  ಅಮೇರಿಕ ಸಂಯುಕ್ತ ಸಂಸ್ಥಾನ Swimming (m) 1984–1992 8 2 1 11

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. https://www.penn.museum/sites/olympics/olympicorigins.shtml
  2. https://www.olympic.org/ancient-olympic-games/mythology
  3. "Olympic Games" (registration required). Encyclopædia Britannica. Retrieved 2009-04-02.
  4. ಮೊದಲು ಚೀಕಾಗೊ ನಗರದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ನಂತರ ಲೂಸಿಯಾನ ದಲ್ಲಿ ನಡೆದ ವರ್ಲ್ದ್ ಫೇರ್ ಜೊತೆಯಾಗಿ ನಡೆಸಲು ಸೆಂಟ್ ಲೂಯೀಸ್ ಗೆ ಸ್ಥಳಾಂತರಿಸಲಾಯಿತು. Originally awarded to Chicago, but moved to St. Louis to coincide with the World's Fair
  5. Not recognized by the IOC
  6. Equestrian events were held in Stockholm, Sweden. Stockholm had to bid for the equestrian competition separately; it received its own Olympic flame and had its own formal invitations and opening and closing ceremonies, as with all its previous Games. "Official Report of the Equestrian Games of the XVIth Olympiad (Swedish & English)" (PDF). Los Angeles 1984 Foundation. Retrieved 2008-09-03.
  7. Equestrian events were held in China's Hong Kong. Although Hong Kong has an independent National Olympic Committee from China, the equestrian competition was an integral part of the Beijing Games; it was not conducted under a separate bid, flame, etc., as was the 1956 Stockholm equestrian competition. The IOC website lists only Beijing as the host city.
  8. "Beijing 2008". The International Olympic Committee. Retrieved 2009-01-30.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: