ಐತಿಹಾಸಿಕ ವೈದಿಕ ಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈದಿಕ ಕಾಲದ ಉತ್ತರಾರ್ಧದಲ್ಲಿದ್ದ ಉತ್ತರಭಾರತದ ಭೂಪಟ.ವೈದಿಕ ಶಾಖೆಗಳಿದ್ದ ಸ್ಥಳಗಳನ್ನು ಹಸಿರು ಬಣ್ಣದಲ್ಲಿ ತೋರಿಸಲಾಗಿದೆ.

ವೇದಗಳ ಕಾಲದ ಧರ್ಮ ( ವೇದಿಸಂ ಎಂದೂ ,ವೈದಿಕ ಬ್ರಾಹ್ಮಣತ್ವ ವೆಂದೂ ಅಥವಾ, ಭಾರತೀಯ ಪುರಾತತ್ವದ ವಿಷಯಾನ್ವಿತವಾದಾಗ, ಸರಳವಾಗಿ ಬ್ರಾಹ್ಮಣತ್ವ ವೆಂದೂ ಕರೆಯಲ್ಪಡುತ್ತದೆ[೧])ವು ಚರಿತ್ರೆಯ ಪುಟಗಳಲ್ಲಿ ಹಿಂದೂಧರ್ಮಕ್ಕಿಂತಲೂ ಪುರಾತನವಾದುದಾಗಿದೆ.[೨] ಅದರ ಆಚರಣಾವಿಧಾನ(ಪೂಜಾವಿಧಾನ)ವು ನಾಲ್ಕು ವೇದಗಳ ಮಂತ್ರಗಳ ಭಾಗಗಳಲ್ಲಿ ಬಿಂಬಿತವಾಗಿದ್ದು, ಈ ನಾಲ್ಕೂ ವೇದಗಳು ಸಂಸ್ಕೃತಭಾಷೆಯಲ್ಲಿ ಬರೆಯಲಾಗಿವೆ. ಪುರೋಹಿತವರ್ಗವು ನಿರ್ದೇಶಿಸಿದ ರೀತಿಯಲ್ಲಿ ಧಾರ್ಮಿಕ ಸಂಸ್ಕಾರಗಳು ನಡೆಸಲಾಗುತ್ತಿದ್ದವು ಹಾಗೂ ಇಂತಹ ಸಂಸ್ಕಾರಗಳಲ್ಲಿ ಆಗಾಗ್ಗೆ ಬಲಿ ನೀಡುವ ಕ್ರಮಗಳೂ ಇರುತ್ತಿದ್ದವು. ಹಿಂದೂಧರ್ಮದಲ್ಲಿ ಇಂದಿಗೂ ಈ ವಿಧವಾದ ಪೂಜಾವಿಧಿಯು ಹೆಚ್ಚಿನ ಬದಲಾವಣೆಗಳಿಲ್ಲದೆ ಮುಂದುವರಿದಿದೆ; ಆದರೆ, ಸಂಪ್ರದಾಯಬದ್ಧರಾದ ಶ್ರೌತಿಗಳ ಪೈಕಿ ಒಂದು ಸಣ್ಣ ಭಾಗ ಮಾತ್ರ ಬಾಯಿಪಾಠದ ಮೂಲಕ ಕಲಿತ ಮಂತ್ರಗಳನ್ನು ಸಂಪ್ರದಾಯರೀತ್ಯಾ ಪಠಿಸುತ್ತಾರೆ.

ವೈದಿಕ ಕಾಲದಲ್ಲಿ ವೈದಿಕ ಸಂಸ್ಕೃತದಲ್ಲಿ ರಚಿತವಾದ ಕೃತಿಗಳಲ್ಲಿ ಪ್ರಮುಖವಾದುವೆಂದರೆ ನಾಲ್ಕು ವೈದಿಕ ಸಂಹಿತೆಗಳು, ಆದರೆ ಬ್ರಹ್ಮಣಗಳು, ಅರಣ್ಯಕಗಳು, ಹಾಗೂ ಕೆಲವು ಹಳೆಯ ಉಪನಿಷತ್ ಗಳು(Bṛhadāraṇyaka, ಛಾಂದೋಗ್ಯ, ಜೈಮಿನೀಯ ಉಪನಿಷತ್ ಬ್ರಹ್ಮಣ) ಸಹ ಈ ಕಾಲಘಟ್ಟದಲ್ಲಿ ವಿರಚಿತವಾದವು ಎನ್ನಲಾಗಿದೆ. 16 ಅಥವಾ 17 ಶ್ರೌತ ಪೂಜಾರಿಗಳು ಮತ್ತು ಪುರೋಹಿತರು ಆಚರಿಸುವ ವಿಧಿಗಳು ಮತ್ತು ಬಲಿಗಳನ್ನೊಳಗೊಂಡ ಪೂಜಾಕ್ರಮಗಳನ್ನು ವೇದಗಳು ದಾಖಲಿಸುತ್ತವೆ.. ಸಾಂಪ್ರದಾಯಿಕ ದೃಷ್ಟಿಕೋನದಲ್ಲಿ ನೋಡಿದಾಗ, ಋಗ್ವೇದದ ಮಂತ್ರಗಳು ಮತ್ತು ಇತರ ವೈದಿಕ ಮಂತ್ರಗಳನ್ನು ದೇವತೆಗಳೇ ಋಷಿಗಳಿಗೆ ದರ್ಶನ ಮಾಡಿಸಿದಂತಹವಾಗಿವೆ; ಆ ಋಷಿಗಳನ್ನು ವೇದಗಳ "ಕರ್ತೃಗಳು" ಎನ್ನುವ ಬದಲಿಗೆ, ಭವಿಷ್ಯವಾದಿಗಳೆಂದೋ ಅಥವಾ ವೇದಗಳನ್ನು "ಆಲಿಸುವವರು" ಎಂದೋ ಕರೆಯಲಾಗುತ್ತಿತ್ತು. (ಶೃತ ಎಂದರೆ "ಆಲಿಸಲ್ಪಟ್ಟದ್ದು" ಎಂದರ್ಥ"). ಅಲ್ಲದೆ, ವೇದಗಳನ್ನು "ಅಪೌರುಷೇಯ" ಎನ್ನಲಾಗುತ್ತದೆ; ಎಂದರೆ ಇವುಗಳು ಪುರುಷರಿಂದ (ಮಾನವರಿಂದ) ರಚಿತವಾದುವಲ್ಲ ಎಂದರ್ಥ. ಅಪೌರುಷೇಯವೆಂದಾದ ಮೇಲೆ ಅವುಗಳು ಸರ್ವಕಾಲಕ್ಕೂ ಬದಲಾಗದ ಸ್ವರೂಪದಲ್ಲೇ ಮುಂದುವರಿಯುತ್ತವೆ ಎಂಬುದು ಸ್ಪಷ್ಟ.

ಪೂಜಾವಿಧಿಯಲ್ಲಿ ಮೂಲವಸ್ತುಗಳಾದ ಬೆಂಕಿ ಮತ್ತು ನದಿಗಳ ಪೂಜೆ, ನಾಯಕನಂತಹ ಲಕ್ಷಣಗಳುಳ್ಳ ಇಂದ್ರನಂತಹ ದೇವತೆಗಳ ಪೂಜೆ, ಮಂತ್ರಗಳ ಉಚ್ಚಾರ ಮತ್ತು ಬಲಿಕೊಡುವ ವಿಧಿಗಳು ಸೇರಿರುತ್ತಿದ್ದವು. ಕುಲೀನಜನಗಳ (ಕ್ಷತ್ರಿಯರ) ಮತ್ತು ಕೆಲವು ಶ್ರೀಮಂತ ವೈಶ್ಯರ ಪರವಾಗಿ ಮಹತ್ತರವಾದ ಪೂಜಾವಿಧಿವಿಧಾನಗಳನ್ನು ಪೂಜಾರಿಗಳು ನೆರವೇರಿಸುತ್ತಿದ್ದರು. ಜನಗಳು ಮನೆ ತುಂಬ ಮಕ್ಕಳು, ಮಳೆಮ ಪಶುಸಂಪತ್ತು (ಐಶ್ವರ್ಯ), ದೀರ್ಘಾಯಸ್ಸು ಮತ್ತು ಗತಿಸಿದ ನಂತರ ಪೂರ್ವಜರು ಸೇರಿದಂತಹ ಸ್ವರ್ಗದ ಪ್ರಾಪ್ತಿಗಾಗಿ ಪ್ರಾರ್ಥಿಸುತ್ತಿದ್ದರು. ಈ ವಿಧವಾದ ಪೂಜಾಕ್ರಮವು ಇಂದಿಗೂ ಹಿಂದೂಧರ್ಮದಲ್ಲಿ ಉಳಿಸಿಕೊಳ್ಳಲಾಗಿದ್ದು, ಇದರ ಅಂಗವಾಗಿ ಪುರೋಹಿತರು (ಪೂಜಾರಿಗಳು) ಸಮೃದ್ಧಿ, ಐಶ್ವರ್ಯ ಮತ್ತು ಎಲ್ಲರ ಹಿತಕ್ಕಾಗಿ ವೇದಗಳನ್ನು ಪಠಿಸುತ್ತಾರೆ. ಆದರೆ, ವೇದಗಳಲ್ಲಿ ಉಲ್ಲೇಖಿತವಾದ ಮೂಲ ದೇವತೆಗಳ ಜಾಗದಲ್ಲಿ ನಂತರದಲ್ಲಿ ಪೌರಾಣಿಕ ಸಾಹಿತ್ಯದಲ್ಲಿ ಕಂಡುಬಂದ ದೇವತೆಗಳನ್ನು ಪೂಜಿಸುವುದು ಕ್ರಮವಾಗಿದೆ.

ವೈದಿಕ ಧರ್ಮದ ಮೂಲ ತತ್ವಗಳು ಮೂಲ-ಇಂಡೋ-ಇರಾನಿಯನ್-ಧರ್ಮದ ಕಾಲಕ್ಕೂ ಹಾಗೂ ಅದಕ್ಕೂ ಮುಂಚಿನ ಮೂಲ-ಇಂಡೋ-ಯೂರೋಪಿಯನ್ ಧರ್ಮದ ಕಾಲಕ್ಕೂ ತಮ್ಮ ಬೇರುಗಳನ್ನು ಪಸರಿಸಿಕೊಂಡಿವೆ. ಈ ವೇದಿಕ (ವೈದಿಕ)ಕಾಲವು ಸುಮಾರು 500 BCಯಲ್ಲಿ ಕೊನೆಗೊಂಡಿತೆಂದು ಗಣಿಸಲಾಗಿದ್ದು, ವೈದಿಕ ಧರ್ಮವು ಕ್ರಮೇಣ ಹಿಂದೂಧರ್ಮದ ವಿವಿಧ ವರ್ಗಗಳಾಗಿ ಮಾರ್ಪಾಡಾದುದಲ್ಲದೆ, ಮುಂದಿನ ದಿನಗಳಲ್ಲಿ ಪೌರಾಣಿಕ ಹಿಂದೂಧರ್ಮವಾಗಿ ವೃದ್ದಿಗೊಂಡಿತು.[ಸೂಕ್ತ ಉಲ್ಲೇಖನ ಬೇಕು] ವೈದಿಕ ಧರ್ಮವು ಬೌದ್ಧಧರ್ಮ ಮತ್ತು ಜೈನಧರ್ಮದ ಮೇಲೂ ತನ್ನ ಪ್ರಭಾವ ಬೀರಿತು.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ, ಐತಿಹಾಸಿಕ ವೈದಿಕ ಧರ್ಮವು ಭಾರತೀಯ ಪರ್ಯಾಯದ್ವೀಪದ ಕೆಲವು ಮೂಲೆಗಳಲ್ಲಿ ಅಂತೆಯೇ ಉಳಿದುಕೊಂಡಿತು; ಉದಾಹರಣೆಗೆ ಕೇರಳದ ನಂಬೂದಿರಿ ಬ್ರಾಹ್ಮಣರು, ದೇಶದ ಇತರ ಭಾಗಗಳಲ್ಲಿರುವವರು ನಾಶವೇ ಆಗಿಹೋಗಿರುವುದೆಂದು ನಂಬಿರುವಂತಹ ಹಲವಾರು ಪ್ರಾಚೀನ ಶ್ರೌತ ಆಚರಣೆಗಳನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ.

ಪೂಜಾವಿಧಿಗಳು[ಬದಲಾಯಿಸಿ]

ಶ್ರೌತಯಜ್ನವೊಂದು ಆಚರಿಸಲ್ಪಡುತ್ತಿದೆ.[6]

ಇತರ ವಿಧಿಗಳಲ್ಲದೆ, ವೈದಿಕ ಧರ್ಮದಲ್ಲಿ ನಡೆಸುತ್ತಿದ್ದ ನಿರ್ದಿಷ್ಟವಾದ ವಿಧಿಗಳು ಮತ್ತು ಬಲಿಗಳೆಂದರೆ:

  • ಸೋಮ ಸಂಪ್ರದಾಯ, ಇದರ ಉಲ್ಲೇಖವು ಋಗ್ವೇದದಲ್ಲಿ ಆಗಾಗ್ಗೆ ಕಂಡುಬರುತ್ತದೆ ಹಾಗೂ ಎರಡೂ ಧರ್ಮಗಳಿಗೆ ಸಾಮಾನ್ಯವಾದ Iಭಾರತೀಯ-ಇರಾನೀ ಆಚರಣೆಯಿಂದ ಹರಿದುಬಂದಿದೆ.
  • ಅಗ್ನಿ ಕಾರ್ಯಗಳು:
    • ಅಗ್ನಿಹೋತ್ರ ಅಥವಾ ಅಗ್ನಿಗೆ ನೈವೇದ್ಯ, ಒಂದು ಸೂರ್ಯ ತಾಯಿತ,
    • ಅಗ್ನಿಚಯನ, ಅಗ್ನಿಕುಂಡವನ್ನು ತುಂಬಿಸುವಂತಹ ವಿಧಿವಿಧಾನಗಳನ್ನು ಹೊಂದಿರುವ ಪೂಜಾಕ್ರಮ.
  • ಅಗ್ನಿಸ್ತೋಮ ಅಥವಾ ಸೋಮ ಅರ್ಪಣೆ
  • ಪಾಡ್ಯ ಮತ್ತು ಹುಣ್ಣಿಮೆಗಳ ಹಾಗೂ ಮಾಸಾನ್ವಿತ (ಚಾತುರ್ಮಾಸ್ಯ) ಅರ್ಪಣೆಗಳು
  • ರಾಜಸೂಯ ಯಾಗ
  • ಅಶ್ವಮೇಧ ಅಥವಾ ಕುದುರೆ ಯಾಗ
  • ಪುರುಷಮೇಧ ಅಥವಾ ನರಬಲಿ, ವಿಶ್ವೋತ್ಪಾದನ ರೂಪದ ಪುರುಷನನ್ನು ಹೋಲುವಂತಹ, ಪುರುಷಸೂಕ್ತದಲ್ಲಿ ಉಲ್ಲೇಖಿಸಿದಂತಹ ವಿಧಿಯಲ್ಲಿ ಹಾಗೂ ಅದರ ಶ್ರೌತ ಕ್ರಮದಲ್ಲಿ ಅಶ್ವಮೇಧದಂತೆ.
  • ಅಥರ್ವಣವೇದದಲ್ಲಿ ಉಲ್ಲೇಖಿತವಾದ ಪೂಜಾವಿಧಿಗಳು ಔಷಧಿಗಳು ಮತ್ತು ಗುಣಪಡಿಸುವ ಚಿಕಿತ್ಸೆಗಳಿಗೆ ಸಂಬಂಧಿತವಾಗಿದ್ದು, ಅವು ವಾಮಾಚಾರ ಮತ್ತು ಸದಾಚಾರದಂತಹ ಯಕ್ಷಿಣಿಗೂ ಸಂಬಂಧಿತವಾಗಿವೆ.

ಅಶ್ವಮೇಧ (ಕುದುರೆ ಬಲಿ)ಯಾಗದ ರೀತಿಯ ಯಾಗವು ಕ್ರಿಸ್ತಪೂರ್ವ 2ನೆಯ ಮಿಲೆನಿಯಮ್ನ ಸಿಂತಾಷ್ಟ ಮತ್ತು ಆಂಡ್ರೋನೋವೋ ಸಂಸ್ಕೃತಿಗಳಲ್ಲೂ, ರೋಮ್ (ಅಕ್ಟೋಬರ್ ಕುದುರೆ), ಮಧ್ಯಕಾಲೀನ ಐರ್ಲೆಂಡ್, ಹಾಗೂ ಕೇಂದ್ರ ಮತ್ತು ಪೂರ್ವ ಏಷ್ಯಾದ ಭಾಗಗಳಲ್ಲೂ ಕಂಡುಬರುತ್ತದೆ. ಭಾರತದಲ್ಲಿ ಇದನ್ನು 4ನೆಯ ಶತಮಾನದವರೆಗೆ ಮುಂದುವರಿಸಲಾಯಿತೆಂದು ಆರೋಪಿಸಲಾಗಿರುವುದಷ್ಟೇ ಅಲ್ಲದೆ 18ನೆಯ ಶತಮಾನ CE ಯಲ್ಲೂ ಇದ್ದಿತೆನ್ನಲಾಗಿದೆ(ಜೈಪುರದ ಜಾವಾ ಸಿಂಘ್). ವೈದಿಕ ಕಾಲದ ಕೊನೆಕೊನೆಯಲ್ಲೇ ಸಸ್ಯಾಹಾರವು ಆಚರಣೆಯಲ್ಲಿದ್ದಿತೆನಿಸುತ್ತದೆ. ಋಗ್ವೇದದಲ್ಲಿ ಹಸುವನ್ನು ಅಘ್ನ್ಯ (ಯಾವುದನ್ನು ಕೊಲ್ಲಬಾರದೋ ಅದು) ಎಂದು ವರ್ಣಿಸಿರಿವಿದಿ ಕಾವ್ಯಸಂಬಂಧಿತವಾದುದು ಆಗಿರಬಹುದಾದರೂ,[೩] ಇತರ ಪೂಜಾವಿಧಿಗಳು ಹಾಗೂ ವಿಗ್ರಹಾರಾಧನೆಯಂತೆಯೇ ಇದೂ ಸಹ ಕೆಲವು ಸಾಮಾಜಿಕ ವಿಧಿಗಳನ್ನು ಅನುಸರಿಸುವ ರೀತಿಯನ್ನು ಬಿಂಬಿಸುವ ಯತ್ನವೂ ಆಗಿರಬಹುದು ಎನ್ನಿಸುತ್ತದೆ. ಸಮಕಾಲೀನ ಸಸ್ಯಾಹಾರಕ್ಕೆ ಪರಿವರ್ತನೆಗೊಂಡ ಪ್ರಥಮ ಹಂತಗಳು ನಂತರದ ಬ್ರಹ್ಮಣಗಳ ಮತ್ತು ಉಪನಿಷದ್ ಗಳ ಕಾಲದಷ್ಟು ಮೊದಲೇ ಕಂಡುಬಂದಿದ್ದು, ಜೈನಿಸಂ ಮತ್ತು ಬುದ್ಧಿಸಂಗಳ ಪ್ರಭಾವಗಳಿಗೊಳಗಾಗಿ ಮುಂದುವರಿದಿರುವ ಸಾಧ್ಯತೆ ಇದೆ. ವೈದಿಕ ತತ್ವಗಳ ಒಂದು ವಿಶಿಷ್ಟ ಸಾಂಸ್ಕೃತಿಕ ಎಳೆಯೇ ಬೌದ್ಧಧರ್ಮದ ಉಗಮಕ್ಕೆ ಕಾರಣವಾಯಿತೆಂಬುದು ಕೆಲವರ ಅಭಿಪ್ರಾಯವಾಗಿದೆ.[೪]

ಹಿಂದೂ ಧರ್ಮದ ವಿಧಿಯಾದ ಶವದಹನವು ಋಗ್ವೇದದ ಕಾಲದಿಂದಲೂ ಜಾರಿಯಲ್ಲಿರುವುದು ಕಂಡುಬರುತ್ತದೆ; ಸಿಮೆಟ್ರಿ ಹೆಚ್. ಸಂಸ್ಕೃತಿ (ಸಂಸ್ಕಾರ)ದಲ್ಲಿ ಈ ವಿಧದ ದಹನಗಳು ಮೊದಲಿನಿಂದಲೂ ಒಪ್ಪಲ್ಪಟ್ಟ ವಿಧಿಗಳಾಗಿದ್ದರೂ, ಒಂದು ನಂತರದ ಕಾಲದ ಋಗ್ವೇದೀಯ ಉಲ್ಲೇಖವಾದRV 10.15.14,ನಲ್ಲಿ "ದಹಿತ (ಅಗ್ನಿದಗ್ಧ- ) ಮತ್ತು ಸುಡಲ್ಪಡದ (ಅನಗ್ನಿದಗ್ಧ- ) ಪೂರ್ವಪಿತೃಗಳನ್ನು ಆವಾಹಿಸುವುದರ ಬಗ್ಗೆ ಉಲ್ಲೇಖವಿದೆ".

ಸರ್ವದೇವಪುರಾಣ[ಬದಲಾಯಿಸಿ]

ವೈದಿಕ ಸರ್ವದೇವಪುರಾಣವೂ ಸಹ ಗ್ರೀಕ್, ಸ್ಲಾವಿಕ್ ಅಥವಾ ಜರ್ಮನಿಕ್ ಪ್ರತಿರೂಪಿ ಧರ್ಮಗಳಂತೆಯೇ, ಮಾನವರೂಪದ ವಿಗ್ರಹಗಳು ಹಾಗೂ ವಿಗ್ರಹರೂಪ ಪಡೆದ ನೈಸರ್ಗಿಕ ಅಂಶಗಳನ್ನು ಹೊಂದಿದೆ ಮತ್ತು ಜರ್ಮನಿಕ್ ವನೀರ್ ಮತ್ತು ಈಸರ್ ಗಳಂತೆಯೇ ಎರಡು ವಿಧವಾದ ದೈವಗಳನ್ನೊಳಗೊಂಡಿದೆ, ದೇವತೆಗಳು ಮತ್ತು ಅಸುರರು. ದೇವತೆಗಳು (ಮಿತ್ರ, ವರುಣ, ಆರ್ಯಮಾನ್, ಭಗ, ಅಂಸ, ಇತ್ಯಾದಿ.) ವಿಶ್ವದ ಮತ್ತು ಸಮಾಜದ ಕ್ರಮವನ್ನು ಕಾಪಾಡುವ ದೇವತೆಗಳಾಗಿದ್ದು ವ್ಯಕ್ತಿಯಿಂದ ಹಿಡಿದು ರಾಜ್ಯಗಳು ಮತ್ತು ಪ್ರಪಂಚದವರೆಗೆ ಎಲ್ಲವನ್ನೂ ಕ್ರಮದಲ್ಲಿರಿಸುತ್ತಾರೆ. ಋಗ್ವೇದವು ಹಲವಾರು ದೇವತೆಗಳನ್ನು ಪೂಜಿಸಲು ಬೇಕಾದ ಮಂತ್ರಗಳ ಸಂಗ್ರಹವಾಗಿದ್ದು, ಪ್ರಮುಖವಾಗಿ ಪ್ರಧಾನದೇವನಾದ ಇಂದ್ರ, ಅಗ್ನಿ ಅರ್ಪಣೆಗಳನ್ನು ಸ್ವೀಕರಿಸುವ ಹಾಗೂ ದೇವತೆಗಳಿಗೆ ಸಂದೇಶ ತಲುಪಿಸುವಜ್ವಾಲೆ ಮತ್ತು ಇಂಡೋ-ಇರಾನಿಯನ್ನರು ಸೇವಿಸುವ ದೈವೀಗುಣಗಳುಳ್ಳ ಪವಿತ್ರವಾದ ಸೋಮರಸಗಳ ಬಗ್ಗೆ ಮಂತ್ರಗಳಿವೆ. ಅಷ್ಟೇ ಮುಖ್ಯವಾದುವೆಂದರೆ ವರುಣ (ಸಾಮಾನ್ಯವಾಗಿ ಮಿತ್ರನೊಂದಿಗೆ ಜೋಡಿಯಾಗಿ ಪೂಜಿಸಲಾಗುತ್ತದೆ) ಮತ್ತು "ಸಕಲ-ದೇವತೆಗಗಳ" ಗುಂಪಾದ ವಿಶ್ವದೇವತೆಗಳು.

ಏಕತ್ವವಾದದತ್ತ ಗುರಿ[ಬದಲಾಯಿಸಿ]

ಕೆಲವರ ಅಭಿಪ್ರಾಯದಂತೆ, ಋಗ್ವೇದವು, ತನ್ನ ಪ್ರಾಥಮಿಕ ಹೊತ್ತಿಗೆಗಳಲ್ಲಿ (ಪುಸ್ತಕಗಳು 1 ಮತ್ತು 10) ಏಕತ್ವವಾದವನ್ನು ಪ್ರತಿಪಾದಿಸುವ ಮಂತ್ರಗಳನ್ನು ಹೊಂದಿವೆ; ಆದರೆ, ಅವನ್ನು - ಎಲ್ಲೆಲ್ಲಿ ಏಕತ್ವವಾದವು ಸ್ಪಷ್ಟವಾಗಿಲ್ಲವೋ, ಆಯಾ ಸಂದರ್ಭಗಳಲ್ಲಿ (ಮಂತ್ರಗಳಲ್ಲಿ) ಪ್ರತಿ ಮಂತ್ರಗಳ ಆಧಾರದ ಮೇರೆಗೆ ಅರ್ಥೈಸಬೇಕು ಸಾಮಾನ್ಯವಾಗಿ ಉಲ್ಲೇಖಿಸಲಾಗುವಂತಹವೆಂದರೆ ಒಂಟಿ ಪಾದಗಳಾದ 1.164.46,

Indraṃ mitraṃ varuṇamaghnimāhuratho divyaḥ sa suparṇo gharutmān,
ekaṃ sad viprā bahudhā vadantyaghniṃ yamaṃ mātariśvānamāhuḥ
"ಅವರು ಅವನನ್ನು ಇಂದ್ರ, ಮಿತ್ರ, ವರುಣ, ಅಗ್ನಿ ಎಂದು ಕರೆಯುತ್ತಾರೆ ಹಾಗೂ ಅವನು ಸ್ವರ್ಗಸದೃಶನಾದ ಶ್ರೇಷ್ಠ-ರೆಕ್ಕೆಗಳುಳ್ಳ ಗರುತ್ಮಾನ್.
ಒಂದೇ ಆಗಿರುವ ಭಗವಂತನನ್ನು ಋಷಿಮುನಿಗಳು ಹಲವಾರು ಹೆಸರುಗಳಿಂದ ಕರೆಯುತ್ತಾರೆ - ಅಗ್ನಿ, ಯಮ, ಮಾತರಿಸ್ವನ್."(ಅನುವಾದ. ಗ್ರಿಫಿತ್)

10.129 ಮತ್ತು 10.130, ಸೃಷ್ಟಿಕರ್ತ ಭಗವಂತನ ಕುರಿತಾದವು, ವಿಶೇಷತಃ ಪದ್ಯ 10.129.7:

iyám vísṛṣṭiḥ yátaḥ ābabhūva / yádi vā dadhé yádi vā ná / yáḥ asya ádhyakṣaḥ paramé vyóman / sáḥ aṅgá veda yádi vā ná véda
"ಅವನು, ಈ ಸೃಷ್ಟಿಯ ಪ್ರಥಮ ಮೂಲ, ಅವನು ಈ ಎಲ್ಲವನ್ನೂ ಸೃಷ್ಟಿಸಿದನೋ ಇಲ್ಲವೋ, / ಯಾರ ಕಣ್ಣು ಈ ಇಡೀ ಜಗತ್ತನ್ನು ಅತ್ಯುನ್ನತ ಸ್ವರ್ಗದಲ್ಲಿ ನಿಯಂತ್ರಿಸುತ್ತದೋ, ಅವನಿಗೆ ಇದು ಖಂಡಿತವಾಗಿ ತಿಳಿದಿದೆ, ಅಥವಾ ಪ್ರಾಯಶಃ ಅವನಿಗೆ ತಿಳಿದಿಲ್ಲ." (ಅನುವಾದ. ಗ್ರಿಫಿತ್)

Ékam sát 1.164.46cನಲ್ಲಿ; ಇದರ ಅರ್ಥ "ಒಂದೇ ಆಗಿರುವುದು" ಎಂದು. ಇಂತಹ ಹೇಳಿಕೆಗಳು ಮತ್ತು ತತ್ವಗಳಿಗೆ ಶಾಸ್ತ್ರೀಯ ಹಿಂದೂಧರ್ಮದಲ್ಲಿ ಸಾಕಷ್ಟು ಪುಷ್ಟಿ ದೊರೆಯಿತು; ಇತ್ತೀಚಿನ ಆದಿ ಶಂಕರರ ಕಾಲದಿಂದ ಹಿಡಿದು ಈ ಪುಷ್ಟಿ ದೊರೆತಿದ್ದು, ಸಮಕಾಲೀನ ಹಿಂದೂ ಧರ್ಮದಲ್ಲಿಯೂ ಏಕತ್ವವಾದವನ್ನು ಪ್ರತಿಪಾದಿಸುವ ಪಂಗಡಗಳಾದ ಆರ್ಯ ಸಮಾಜ ಹಾಗೂ ವೈಷ್ಣವಧರ್ಮ ಮತ್ತು ಶೈವಧರ್ಮದ ಕೆಲವು ಪಂಥಗಳು ಈ ಹೇಳಿಕೆಗಳು ಮತ್ತು ತತ್ವಗಳಿಗೆ ಒತ್ತು ನೀಡುತ್ತಿವೆ.

ವೈದಿಕಧರ್ಮಾನಂತರದ ಧರ್ಮಗಳು[ಬದಲಾಯಿಸಿ]

ವೈದಿಕ ಧರ್ಮವು ಕ್ರಮೇಣ ವೇದಾಂತದ ಉಗಮಕ್ಕೆ ನಾಂದಿ ಹಾಡಿತು; ವೇದಾಂತವು ಹಿಂದೂಧರ್ಮದ ಮೂಲ ಸ್ಥಾಪಕವೆಂದು ಕೆಲವರು ಅಭಿಪ್ರಾಯ ಹೊಂದಿದ್ದಾರೆ. ವೇದಾಂತವು ವೇದಗಳ 'ಸಾರಾಂಶ'ವಾಗಿದೆ. ಪ್ರಪಂಚವು ಒಂದೇ, ಜಗತ್ತೆಲ್ಲಾ ಒಂದೇ ಎಂಬ ದೃಷ್ಟಿಕೋನದಿಂದ ವೈದಿಕ ಪಂಥವನ್ನು ಅರ್ಥೈಸಲಾಗಿದ್ದು, ಬ್ರಹ್ಮನು ವಿಶ್ವವ್ಯಾಪಿ ಮತ್ತು ಉತ್ಕೃಷ್ಟನೆಂದು ಪರಿಗಣಿಸಲ್ಪಟ್ಟು, ಮಧ್ಯ ಉಪನಿಷದ್ ಗಳು ಈಶ್ವರ, ಭಗವಾನ್ ಅಥವಾ ಪರಮಾತ್ಮನ ರೂಪದಲ್ಲಿಯೂ ಇರುವನೆನ್ನಲಾಯಿತು. ಇಂದಿಗೂ ಕೆಲವು ಸಂಪ್ರದಾಯಬದ್ಧ ವೈದಿಕಶಾಲೆಗಳು ಐತಿಹಾಸಿಕವಾದ ವೈದಿಕ ಧರ್ಮದ ಕೆಲವು ಅಂಗಗಳನ್ನು ಒಂದಿನಿತೂ ಬದಲಾವಣೆಯಿಲ್ಲದೆ ಆಚರಿಸಿಕೊಂಡುಬರುತ್ತಿವೆ (ನೋಡಿ ಶ್ರೌತ, ನಂಬೂದಿರಿ).

ವೇದಾಂತವು ಇನ್ನೂ ರಚಿತವಾಗುತ್ತಿದ್ದ ಶತಮಾನಗಳಲ್ಲಿ ವೇದಾಂತವನ್ನು ವಿರೋಧಿಸಿದ ಹಾಗೂ ಬೆಂಬಲಿಸಿದ ಸಂಪ್ರದಾಯಗಳು ವಿಕಾಸಗೊಂಡವು. ಈ ಪಂಗಡಗಳೇ ಕ್ರಮವಾಗಿ ನಾಸ್ತಿಕ ಮತ್ತು ಆಸ್ತಿಕ ಪಂಗಡಗಳು.

  • ಆಸ್ತಿಕ ಸಂಪ್ರದಾಯಗಳಿಗೆ ಭಾರತದಲ್ಲಿ ಹಿಂದೂಧರ್ಮವು ಒಂದು ನೆರಳನ್ನು ನೀಡುವಂತಹ (ಛತ್ರಿಯಂತಹ) ಪದವಾಗಿದೆ (ನೋಡಿ ಹಿಂದೂಧರ್ಮದ ಚರಿತ್ರೆ).
    • ಪುರಾಣಗಳು, ಸಂಸ್ಕೃತ ಮಹಾಕಾವ್ಯಗಳು[೫]
    • ಹಿಂದೂ ತತ್ವಶಾಸ್ತ್ರದ ಶಾಸ್ತ್ರೀಯ ವಿದ್ಯಾಲಯಗಳು
    • ಶೈವಪಂಥ
    • ವೈಷ್ಣವ ಧರ್ಮ
    • ಭಕ್ತಿ
    • ಶ್ರೌತ ಸಂಪ್ರದಾಯಗಳು, ವೈದಿಕ ಧರ್ಮದ ಮೂಲರೂಪದ ಬಹುತೇಕ ಅಂಶಗಳನ್ನು ಸಂರಕ್ಷಿಸಿಕೊಂಡುಬಂದಿವೆ.

ಭಾರತದ ಕಬ್ಬಿಣದ ಕಾಲದಲ್ಲಿನ ವೈದಿಕ ಬ್ರಾಹ್ಮಣತ್ವವು, ಭಾರತದ ಪೂರ್ವ ಉತ್ತರ ಭಾಗದಲ್ಲಾದರೂ, ವೈದಿಕೇತರ (ನಾಸ್ತಿಕ ) ಶ್ರಮಣ ಸಂಪ್ರದಾಯದೊಂದಿಗೆ ಸರಿಸಮೀಪ ಪ್ರತಿಕ್ರಿಯಿಸುತ್ತಾ, ಜೊತೆಯಲ್ಲಿಯೇ ಚಾಲ್ತಿಯಲ್ಲಿದ್ದಿತು ಎಂದು ನಂಬಲಾಗಿದೆ.[೬][೭][೮][೯] ಇವು ವೇದಧರ್ಮದ ನೇರ ಬೆಳವಣಿಗೆಗಳಾಗಿರಲಿಲ್ಲ, ಬದಲಿಗೆ ಬ್ರಾಹ್ಮಣ ಸಂಪ್ರದಾಯಗಳೊಂದಿಗೆ ಪರಸ್ಪರ ಪ್ರಭಾವವನ್ನು ಬೀರುವಂತಹ ಚಳುವಳಿಗಳಾಗಿದ್ದವು.[೬] ಈ ಕೆಳಕಂಡ ಧರ್ಮಗಳು ಶ್ರಮಣ ಸಂಪ್ರದಾಯದಿಂದ ಉಗಮವಾದಂತಹ ಧರ್ಮಗಳು:

  • ಜೈನಧರ್ಮ, ರೂಢೀಗತವಾಗಿ ಕ್ರಿಸ್ತಪೂರ್ವ 9ರಿಂದ-8ನೆಯ ಶತಮಾನದಲ್ಲಿ, ಪಾರ್ಶ್ವರ ಕಾಲದಲ್ಲಿ. ಇಪ್ಪತ್ತೆರಡು ಇತಿಹಾಸ-ಪೂರ್ವ (ಪ್ರಾಚೀನ) ತೀರ್ಥಂಕರರಬಗ್ಗೆ ಜಿನಧರ್ಮದಲ್ಲಿ ಉಲ್ಲೇಖಗಳಿವೆ. ಈ ದೃಷ್ಟಿಕೋನದಲ್ಲಿ ಕಂಡಾಗ, ಜೈನಧರ್ಮವು ಮಹಾವೀರನ ಕಾಲದಲ್ಲಿ ಉಚ್ಛ್ರಾಯ ಪರಿಸ್ಥಿತಿಯನ್ನು ತಲುಪಿತ್ತು (ವಾಡಿಕೆಯಂತೆ ಕ್ರಿಸ್ತಪೂರ್ವ 6ನೆಯ ಶತಮಾನವೆನ್ನಲಾಗಿದೆ).
  • ಬೌದ್ಧಧರ್ಮ, (ಸಾಮಾನ್ಯವಾಗಿ) ca.ಕ್ರಿಸ್ತಪೂರ್ವ 500; ಭಾರತದಲ್ಲಿ ಕ್ರಿಸ್ತಶಕ 5ರಿಂದ 12ನೆಯ ಶತಮಾನದಲ್ಲಿ ಇಳಿಮುಖವಾಗಿ ಪೌರಾಣಿಕ ಬ್ರಾಹ್ಮಣತ್ವವು ತಲೆಯೆತ್ತಿತು.

ಟಿಪ್ಪಣಿಗಳು[ಬದಲಾಯಿಸಿ]

  1. 2005ನೆಯ ಇಸವಿಯ ದ ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕಾ "ವೇದಿಸಂ", "ವೇದಿಕ್ ಬ್ರಾಹ್ಮನಿಸಂ(ವೈದಿಕ ಬ್ರಾಹ್ಮಣತ್ವ)" ಮತ್ತು "ಬ್ರಾಹ್ಮನಿಸಂ (ಬ್ರಾಹ್ಮಣತ್ವ)ಎಲ್ಲವನ್ನೂ ಬಳಸಿತಾದರೂ, "ವೇದಿಸಂ" ಅನ್ನು ಈ ಎಲ್ಲಕ್ಕಿಂತಲೂ ಪ್ರಾಚೀನವೆಂದು ಪರಿಗಣಿಸಿ, ಬ್ರಾಹ್ಮಣ ಕಾಲಕ್ಕಿಂತಲೂ ಹಿಂದಿನ ಕಾಲಕ್ಕೆ ಇದು ಸೇರಿದ್ದೆಂದು ಅಂದಾಜಿಸಿದ್ದಲ್ಲದೆ "ಬ್ರಾಹ್ಮನಿಸಂ(ಬ್ರಾಹ್ಮಣತ್ವ)" ಎಂದರೆ "ವೇದಿಸಂ (ವೈದೀಕ)ದಿಂದ ಜನ್ಮತಾಳಿದ ಪ್ರಾಚೀನ ಭಾರತದ ಧರ್ಮ. ಅದಕ್ಕೆ ಆ ಹೆಸರು ಬರಲು ಪ್ರಧಾನವಾಗಿ ಅದನ್ನು ಆಚರಿಸುವ ಪೂಜಾರಿಗಳಾದ ಬ್ರಾಹ್ಮಣರ ಅಂತಸ್ತು ಹಾಗೂ ಸರ್ವಶ್ರೇಷ್ಠ ಶಕ್ತಿಯಾದ ಬ್ರಹ್ಮನ ಬಗ್ಗೆ ಇರುವ ಜಿಜ್ಞಾಸೆ ಹಾಗೂ ಬ್ರಹ್ಮನಿಗೆ ಕೊಡುವ ಪ್ರಾಮುಖ್ಯತೆಗಳು ಕಾರಣವಾಗಿವೆ."
  2. ಸ್ಟಿಫಾನೀ ಡಬ್ಲ್ಯೂ. ಜೇಮೀಸನ್ ಮತ್ತು ಮೈಕೆಲ್ ವಿಝೆಲ್, ಅರವಿಂದ ಶರ್ಮರ ಸಂಪಾದಕತ್ವದ ದ ಸ್ಟಡಿ ಆಫ್ ಹಿಂದೂಯಿಸಂ. (ಹಿಂದುತ್ವದ ಅಧ್ಯಯನ) ಯೂನಿವರ್ಸಿಟಿ ಆಫ್ ಸೌತ್ ಕೆರೋಲಿನಾ ಪ್ರೆಸ್, 2003, ಪುಟ 65ರಲ್ಲಿ: "... ಈ ಕಾಲವನ್ನು ವೈದಿಕ ಹಿಂದುತ್ವವೆಂದು ಕರೆಯುವುದು ಪದಗಳ ವ್ಯತಿರೇಕವಾದಂತಾಗುಗುತ್ತದೆ, ಏಕೆಂದರೆ ವೈದಿಕ ಧರ್ಮವು ನಾವು ಸಾಮಾನ್ಯವಾಗಿ ಹಿಂದೂಧರ್ಮವೆಂದು ಕರೆಯುವ ಧರ್ಮಕ್ಕಿಂತಲೂ ಬಹಳ ವಿಭಿನ್ನವಾದುದು - ಸರಿಸುಮಾರು ಪ್ರಾಚೀನ ಹೀಬ್ರೂ ಧರ್ಮವು ಮಧ್ಯಕಾಲೀನ ಮತ್ತು ಆಧುನಿಕ ಕ್ರಿಶ್ಚಿಯನ್ ಧರ್ಮಗಳಿಗಿಂತ ವಿಭಿನ್ನವಾಗಿರುವಷ್ಟರ ಮಟ್ಟಿಗಾದರೂ. ಆದಾಗ್ಯೂ, ವೈದಿಕ ಧರ್ಮವನ್ನು ಹಿಂದುತ್ವಕ್ಕಿಂತಲೂ ಹಿಂದಿನ ಧರ್ಮವೆಂದು ಪರಿಗಣಿಸಬಹುದು."
  3. ಜೆ. ನಾರ್ಟೆನ್, ಆಕ್ಟಾ ಓರಿಯಿಂಟಾಲಿಯಾ ನೀರ್ಲಾಂಡಿಕಾ , ಲೀಡೆನ್ 1971, 120-134
  4. ಕರೇಲ್ ವೆರ್ನರ್, ದ ಲಾಂಗ ಹೇರ್ಡ್ ಸೇಜ್ in ದ ಯೋಗಿ ಎಂಡ್ ದ ಮಿಸ್ಟಿಕ್. ನಲ್ಲಿ. ಕರೇಲ್ ವೆರ್ನರ್, ಸಂ., ಕರ್ಝನ್ ಪ್ರೆಸ್, 1989, ಪುಟ 34. "ರಾಹುರ್ಕರ್ ಅವೆರಡೂ ವಿಭಿನ್ನವಾದ ಹಾಗೂ ವಿಶಿಷ್ಟವಾದ ಎರಡು 'ಸಾಂಸ್ಕೃತಿಕ ಎಳೆ'ಗಳಿಗೆ ಸೇರಿದವು ಎನ್ನುತ್ತಾರೆ ... ವೇಮನ್ ಸಹ ಪ್ರಾಚೀನ ಭಾರತದಲ್ಲಿ ಎರಡು ಸ್ಪಷ್ಟ ಪಥಗಳು ಆಧ್ಯಾತ್ಮಿಕ ಆಯಾಮಕ್ಕೆ ಇರುವುದಕ್ಕೆ ಪುರಾವೆಗಳನ್ನು ಕಂಡುಕೊಂಡರಲ್ಲದೆ ಅವನ್ನು 'ಸತ್ಯ ಮತ್ತು ಮೌನ' ದ ಸಂಪ್ರದಾಯಗಳು ಎಂದು ಕರೆದರು. ಅವರು ಅವುಗಳ ಪಥವನ್ನು ಹಳೆಯ ಉಪನಿಷತ್ತುಗಳವರೆಗೆ, ಬೌದ್ಧಧರ್ಮದ ಆರಂಭದ ಹಂತಕ್ಕೆ ಹಾಗೂ ಕೆಲವು ನಂತರದ ಸಾಹಿತ್ಯಗಳವರೆಗೆ ಸ್ಪಷ್ಟವಾಗಿ ಕಂಡುಹಿಡಿದಿದ್ದಾರೆ."
  5. ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕಾ s.v. ಹಿಂದೂ ಫಿಲಾಸಫಿ : "ಮಹಾಕಾವ್ಯವಾದ ಮಹಾಭಾರತವು ಹಲವಾರು ಆರ್ಯೇತರ ಸಮುದಾಯಗಳು ಆರ್ಯರ ಆಚಾರವಿಚಾರಗಳಿಗೆ ಹೊಂದಿಕೊಳ್ಳಬೇಕಾದಂತಹ ಹೊಸ ಸಂದರ್ಭಗಳು ಉದ್ಭವಿಸಿದಾಗ ಅವಕ್ಕೆ ವೈದಿಕ ಬ್ರಾಹ್ಮಣತ್ವವು ಹೊಂದಿಕೊಳ್ಳಲು ಯತ್ನಿಸಿದುದನ್ನು ಪ್ರತಿನಿಧಿಸುತ್ತದೆ (ಆರ್ಯರ ನಂಬಿಕೆಗಳು, ಆಚಾರಗಳು ಮತ್ತು ಸಂಸ್ಥೆಗಳ ಒಕ್ಕೂಟ)."
  6. ೬.೦ ೬.೧ ಎಸ್. ಕ್ರಾಮ್ ವೆಲ್ ಕ್ರಾಫರ್ಡ್, ಎಲ್.ಎಂ. ಜೋಶಿಯವರ ವಿಮರ್ಶೆ, ಬ್ರಾಹ್ಮನಿಸಂ, ಬುದ್ಧಿಸಂ ಎಂಡ್ ಹಿಂದೂಯಿಸಂ , ಫಿಲಾಸಫಿ ಈಸ್ಟ್ ಎಂಡ್ ವೆಸ್ಟ್(1972): "ಬ್ರಾಹ್ಮಣತ್ವದ ಜೊತೆಜೊತೆಯಲ್ಲೇ ಆರ್ಯೇತರ ಶ್ರಮಾನಿಕ್ ಸಂಸ್ಕೃತಿಯೂ ಇದ್ದಿತು ಹಾಗೂ ಅದರ ಮೂಲವು ಪುರಾತನ ಇತಿಹಾಸದ ಬೇರುಗಳಲ್ಲಿದ್ದಿತು.
  7. ವೈ. ಮಾಸಿಹ್ (2000) In : ಎ ಕಂಪಾರಿಟಿವ್ ಸ್ಟಡಿ ಆಫ್ ರಿಲೀಜನ್ಸ್, ಮೋತಿಲಾಲ್ ಬನಾರಸಿ ದಾಸ್ ಪ್ರಕಾಶನ: ದೆಹಲಿ, ISBN 8120808150 ಪುಟ 18. "ಜೈನಧರ್ಮ ಮತ್ತು ಬೌದ್ಧಧರ್ಮಗಳು ವೈದಿಕ ಬಲಿಗಳನ್ನು, ವೈದಿಕ ದೇವತೆಗಳ ಪ್ರತಿಮೆಗಳನ್ನು, ದೇವತೆಗಳನ್ನು ಅಥವಾ ಜಾತಿಗಳನ್ನು ಒಪ್ಪಿದ್ದವೆಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅವು ಸಮಾನಾಂತರ ಅಥವಾ ಭಾರತದ ಸ್ಥಳೀಯ ಧರ್ಮಗಳಾಗಿವೆ ಹಾಗೂ ಆಧುನಿಕ ಕಾಲದ ಶಾಸ್ತ್ರಬದ್ಧ ಹಿಂದೂಧರ್ಮದ ಬೆಳವಣಿಗೆಗೂ ಅವು ಪೂರಕವಾಗಿವೆ."
  8. ಡಾ. ಕಲ್ಘಟ್ಗಿ, ಟಿ.ಜಿ. 1988 In: ಸ್ಟಡಿ ಆಫ್ ಜೈನಿಸಂ, ಪ್ರಾಕೃತ್ ಭಾರ್ತಿ ಅಕಾಡಮಿ, ಜೈಪುರ್
  9. ಪಿ.ಎಸ್. ಜೈನಿ, (1979), ದ ಜೈನ ಪಾಥ್ ಟು ಪ್ಯೂರಿಫಿಕೇಷನ್, ಮೋತಿಲಾಲ್ ಬನಾರಸಿ ದಾಸ್, ದೆಹಲಿ, ಪುಟ. 169 "ತಾವು ಯಾವ ಕಾಲಘಟ್ಟದಲ್ಲಿ ವೈದಿಕ ಚೌಕಟ್ಟಿನಲ್ಲಿ ಸಿಲುಕಿದರೆಂಬ ನೆನಪು ಸ್ವಯಂ ಜೈನರಿಗೇ ಇಲ್ಲ. ಅಲ್ಲದೆ, ಈ ಎರಡು ಸಂಪ್ರದಾಯಗಳನ್ನು ಬೆಸೆಯಲು ಯತ್ನಿಸುವ ಯಾವುದೇ ಸಿದ್ಧಾಂತಗಳು, ಅ-ವೈದಿಕವೂ ಹಾಗೂ ವಿಶಿಷ್ಟವೂ ಆದ ಜೈನಧರ್ಮದ ಅಂಶಗಳಾದ ಜೈನ ವಿಶ್ವೋತ್ಪತ್ತಿಶಾಸ್ತ್ರ, ಆತ್ಮ ಸಿದ್ಧಾಂತ, ಕರ್ಮ ತತ್ವ ಮತ್ತು ನಾಸ್ತಿಕತೆಗಳನ್ನು ಮೆಚ್ಚುವಲ್ಲಿ ಸೋಲುತ್ತವೆ"

ಇವನ್ನೂ ಗಮನಿಸಿ[ಬದಲಾಯಿಸಿ]

  • ವೈದಿಕ ಅರ್ಚಕವೃತ್ತಿ
  • ವೇದಗಳ ಕಾಲ
  • ಮೂಲ-ಭಾರತೀಯ-ಇರಾನೀ ಧರ್ಮ
  • ಮೂಲ-ಭಾರತೀಯ-ಯೂರೋಪಿಯನ್ ಧರ್ಮ
  • ವೇದಗಳಿಗೆ ಸಂಬಂಧಿಸಿದ ಪೌರಾಣಿಕ ಕಥೆಗಳು
  • ಇರಾನಿನ ಪೌರಾಣಿಕ ಕಥೆಗಳು
  • ಝೋರೋಸ್ಟ್ರಿಯಾನಿಸಂ

ನೋಡಿ[ಬದಲಾಯಿಸಿ]