ವಿಷಯಕ್ಕೆ ಹೋಗು

ಎಮಲ್ಷನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  1. ಎರಡು ಬೆರೆಯದ ದ್ರವಗಳು, ಇನ್ನೂ ಎಮಲ್ಸೀಕರಿಸಿಲ್ಲ
  2. ವಸ್ತು I ರಲ್ಲಿ ಚದುರಿದ ವಸ್ತು II ರ ಎಮಲ್ಷನ್
  3. ಅಸ್ಥಿರವಾದ ಎಮಲ್ಷನ್ ಹಂತಹಂತವಾಗಿ ಬೇರ್ಪಡುತ್ತದೆ
  4. ವಸ್ತು I ಮತ್ತು ವಸ್ತು IIರ ನಡುವಿನ ಸಂಧಿಸ್ಥಳದ ಮೇಲೆ ಬಾಹ್ಯತಲ ಸಾಂದ್ರತಾಹ್ರಾಸಕವು (ಕಣಗಳ ಸುತ್ತಲೂ ರೂಪರೇಖೆಯಿದೆ) ತನ್ನನ್ನು ತಾನು ಸ್ಥಾಪಿಸಿಕೊಂಡು ಎಮಲ್ಷನನ್ನು ಸ್ಥಿರೀಕರಿಸುತ್ತದೆ

ಒಂದು ದ್ರವವನ್ನು ಕುರಿತು ಅಮಿಶ್ರಣೀಯವಾದ (ಇಮ್ಮಿಸಿಬಲ್) ಇನ್ನೊಂದು ದ್ರವದಲ್ಲಿ ಮೊದಲಿನ ದ್ರವದ ಪರಿಕ್ಷೇಪಣ. ಆಲಿವ್ ಎಣ್ಣೆ ಮತ್ತು ನೀರು ಪರಸ್ಪರ ಮಿಳಿತವಾಗುವುದಿಲ್ಲ. ಇಂಥ ದ್ರವ ಜೋಡಿಯನ್ನು ತೀವ್ರವಾಗಿ ಕುಲುಕಿದಾಗ ಒಂದು ದ್ರವ ಸೂಕ್ಷ್ಮಹನಿಗಳ ರೂಪದಲ್ಲಿ ಮತ್ತೊಂದರಲ್ಲಿ ಪರಿಕ್ಷೇಪಿತವಾಗುವುದು. ಇಂಥ ನಿಕಟ ದ್ರವಮಿಶ್ರಣವೇ ಎಮಲ್ಷನ್. ಹನಿಗಳಾಗಿ ಹಂಚಿಹೋಗಿರುವ ದ್ರವವನ್ನು ಪರಿಕ್ಷೇಪಿತ ವಸ್ತುವೆಂದೂ (ಡಿಸ್ಪರ್ಸ್ಡ್ ಫೇಸ್) ಅದನ್ನು ಲೀನಮಾಡಿಕೊಂಡಿರುವ ಮತ್ತೊಂದು ದ್ರವವನ್ನು ಪರಿಕ್ಷೇಪಣ ಮಾಧ್ಯಮವೆಂದೂ (ಡಿಸ್ಪರ್ಶನ್ ಮೀಡಿಯಂ) ಪರಿಗಣಿಸಲಾಗುವುದು. ಸಾಮಾನ್ಯವಾಗಿ ಒಂದು ದ್ರವ ನೀರಾಗಿದ್ದು ಮತ್ತೊಂದು ಎಣ್ಣೆಯಂಥ ವಸ್ತುವಾಗಿರುವ ಸಂದರ್ಭಗಳೇ ಹೆಚ್ಚು. ಹೀಗಾಗಿ ನೀರು-ಎಣ್ಣೆ ಎಮಲ್ಷನುಗಳೆಂದು ಎರಡು ಸ್ಥೂಲ ವರ್ಗಗಳಾಗಿ ವಿಭಾಗಿಸುವುದು ರೂಢಿ. ಎಣ್ಣೆ ಪರಿಕ್ಷೇಪಣ ಮಾಧ್ಯಮವಾಗಿದ್ದರೆ ನೀರು/ಎಣ್ಣೆ ಎಮಲ್ಷನ್ ಎನಿಸಿಕೊಳ್ಳುತ್ತದೆ. ಇದಕ್ಕೆ ಬೆಣ್ಣೆ ಮತ್ತು ಕೋಲ್ಡ್ ಕ್ರೀಮ್ ಉದಾಹರಣೆಗಳು. ನೀರು ಪರಿಕ್ಷೇಪಣ ಮಾಧ್ಯಮವಾಗಿದ್ದರೆ ಎಣ್ಣೆ/ನೀರು ಎಮಲ್ಷನ್ ಪ್ರಾಪ್ತವಾಗುವುದು. ಇದಕ್ಕೆ ಹಾಲು, ವ್ಯಾನಿಷಿಂಗ್ ಕ್ರೀಮ್, ಸ್ಕಾಟ್ಸ್ ಎಮಲ್ಷನ್, ಫೆನೈಲ್ ಮತ್ತು ಲೈಸಾಲ್ ನಿದರ್ಶನಗಳು.

ವಿವರಗಳು

[ಬದಲಾಯಿಸಿ]

ಎಮಲ್ಷನಿನಲ್ಲಿರುವ ಕಣಗಳು ಕೊಲಾಯ್ಡ್ ಕಣಗಳಿಗಿಂತ ಗಾತ್ರದಲ್ಲಿ ದೊಡ್ಡವು. ಆದ್ದರಿಂದ ಸಾಮಾನ್ಯ ಸೂಕ್ಷ್ಮದರ್ಶಕ ಅಥವಾ ಭೂತಕನ್ನಡಿಯಿಂದ ಅವನ್ನು ನೋಡಬಹುದು. ಎರಡು ದ್ರವಗಳ ಪೈಕಿ ಯಾವುದು ಅಧಿಕ ಪ್ರಮಾಣದಲ್ಲಿದೆಯೋ ಅದು ಮಾಧ್ಯಮವಾಗಿ ವರ್ತಿಸಿ ಉಳಿದ ದ್ರವ ಪರಿಕ್ಷೇಪಿತವಾಗುವುದು. ಉದಾಹರಣೆಗೆ ಕೊಂಚ ನೀರನ್ನು ಹೆಚ್ಚು ನೈಟ್ರೊ ಬೆಂಜ಼ೀನಿನೊಡನೆ ಕುಲುಕಿದಾಗ ತೈಲ ಎಮಲ್ಷನೂ ಸ್ವಲ್ಪ ನೈಟ್ರೊ ಬೆನ್ಸೀನನ್ನು ತುಂಬ ನೀರಿನೊಡನೆ ಕಡೆದಾಗ ಜಲ ಎಮಲ್ಷನೂ ದೊರೆಯುವುವು.[] ಆದರೆ ಇದೇನೂ ನಿಯಮವಲ್ಲ. ಸೂಕ್ತ ಪ್ರಯೋಗ ಪರಿಸ್ಥಿತಿಯಲ್ಲಿ ೭೦% ಪರಿಕ್ಷೇಪಿತ ವಸ್ತುವಿರುವ ಸಾಂದ್ರ ಎಮಲ್ಷನುಗಳನ್ನು ತಯಾರಿಸಬಹುದು. ಈ ಮಿತಿ ಮೀರಿದರೆ ಪರಿಕ್ಷೇಪಿತಕಣಗಳು ತಮ್ಮ ಗೋಳಾಕೃತಿಯನ್ನು ಕಳೆದುಕೊಂಡು ಬಹುಫಲಕಿಗಳಾಗುತ್ತವೆ. (ಪಾಲಿಹೆಡ್ರಲ್). ಸ್ನಿಗ್ಧತೆ ಹೆಚ್ಚುತ್ತದೆ. ೩೦% ಇನ್ನೊಂದು ದ್ರವ ಪರಿಕ್ಷೇಪಿತವಾಗಿರುವ ವಿರುದ್ಧ ನಮೂನೆಯ ಎಮಲ್ಷನ್ ಆಗಿಬಿಡುವುದುಂಟು.

ಎಮಲ್ಷನ್‍ನ ನಮೂನೆ

[ಬದಲಾಯಿಸಿ]

ಎಮಲ್ಷನ್ ನಮೂನೆಯ ನಿರ್ಣಯದಲ್ಲಿ ಎರಡು ದ್ರವಗಳ ಮೇಲ್ಮೈ ಒತ್ತಡದ (ಸರ್ಫೇಸ್ ಟೆನ್ಷನ್) ಪಾತ್ರ ಕಡೆಗಣಿಸುವಂತಿಲ್ಲ. ನೀರಿನ ಮೇಲ್ಮೈ ಒತ್ತಡ ಹೆಚ್ಚಾಗಿದ್ದರೆ ಅದು ಗೋಳಾಕೃತಿಯ ಹನಿಗಳಾಗಲು ಹವಣಿಸುವುದು. ಆಗ ನೀರು ಎಣ್ಣೆ ಎಮಲ್ಷನ್ ಬರುವುದು ಹೆಚ್ಚು ಸಂಭವನೀಯ. ಕೆಳಕಂಡ ಸರಳ ಪ್ರಯೋಗಗಳಿಂದ ಎಮಲ್ಷನ್ ನಮೂನೆಯನ್ನು ಪತ್ತೆ ಹಚ್ಚಬಹುದು. (i) ಸಾರಗುಂದಿಸುವಿಕೆ (ಡೈಲ್ಯೂಶನ್). ಎಮಲ್ಷನಿಗೆ ನೀರು ಸೇರಿಸಿದಾಗ ಅದು ಸರಾಗವಾಗಿ ಲೀನವಾದರೆ ಎಣ್ಣೆ/ನೀರು ನಮೂನೆಯೆಂದೂ ಬೇರೊಂದು ಪದರವಾಗಿ ಉಳಿದರೆ ನೀರು/ಎಣ್ಣೆ ನಮೂನೆಯೆಂದೂ ಗುರುತಿಸಬಹುದು. (ii) ಬಣ್ಣ ಪ್ರಯೋಗ. ತೈಲ ದ್ರಾವ್ಯವಾದ ಬಣ್ಣವೊಂದನ್ನು ಎಮಲ್ಷನಿನೊಂದಿಗೆ ಕುಲುಕಲಾಗುವುದು. ಸೂಕ್ಷ್ಮದರ್ಶಕದಲ್ಲಿ ಒಂದು ತೊಟ್ಟನ್ನು ಪರೀಕ್ಷಿಸಿದಾಗ ಬಣ್ಣದ ಹನಿಗಳು ಕಂಡರೆ ಎಣ್ಣೆ/ನೀರು ನಮೂನೆಯಿರಬೇಕು. ಪೂರಾ ಹಿನ್ನೆಲೆಯೇ ವರ್ಣರಂಜಿತವಾಗಿ ಗೋಚರಿಸಿದರೆ ವಿರುದ್ಧ ನಮೂನೆಯ ಎಮಲ್ಷನ್ ಎಂದು ಖಚಿತವಾಗುತ್ತದೆ. (iii) ತೈಲದ ಎಮಲ್ಷನ್ ಎಣ್ಣೆಯ ಮೇಲೆ ಸುಲಭವಾಗಿ ಹರಡುವುದು. ನೀರಿನ ಮೇಲೆ ಹರಡುವುದಿಲ್ಲ. (iv) ತೈಲ ಎಮಲ್ಷನುಗಳಿಗೆ ಸ್ನಿಗ್ಧತೆ ಹೆಚ್ಚು ; ವಿದ್ಯುದ್ವಾಹಕ ಗುಣ ಕಡಿಮೆ.

ಎಮಲ್ಷನ್‍ಕಾರಿಗಳ ವಿಧಗಳು

[ಬದಲಾಯಿಸಿ]

ಎಮಲ್ಷನುಗಳು ಬಹುಕಾಲ ಸ್ಥಿರವಾಗಿ ಉಳಿಯದೆ ಎರಡು ಪದರಗಳಾಗಿ ಬೇರ್ಪಡುವುವು. ಆದ್ದರಿಂದ ಸ್ಥಿರ ಎಮಲ್ಷನುಗಳನ್ನು ಪಡೆಯಲು ಎಮಲ್ಷನ್‌ಕಾರಿಗಳನ್ನು ಅನಿವಾರ್ಯವಾಗಿ ಬಳಸಬೇಕಾಗುತ್ತದೆ.[] ಇವುಗಳಲ್ಲಿ ಎರಡು ವಿಧ.

(i) ಎಮಲ್ಷನ್ ಎಂದರೆ ಒಂದು ದ್ರವ ಮತ್ತೊಂದರಲ್ಲಿ ಸೂಕ್ಷ್ಮ ಹನಿಗಳ ರೂಪದಲ್ಲಿ ಹರಡಿರುವಿಕೆಯಾದ್ದರಿಂದ ಎರಡು ದ್ರವಗಳ ನಡುವೆ ಇರುವ ಕ್ಷೇತ್ರದ ವಿಸ್ತೀರ್ಣ ಅಪಾರವಾಗಿರುತ್ತದೆ. ಸಂಧಿಸ್ಥಳದ[] ಒತ್ತಡವೂ (ಇಂಟರ್‌ಫೇಶಿಯಲ್ ಟೆನ್ಶನ್) ಅಧಿಕವಾಗಿರುವುದು ಸಹಜ. ಈ ಒತ್ತಡವನ್ನು ತಗ್ಗಿಸಿಕೊಳ್ಳುವ ಯತ್ನದಲ್ಲಿ ಎಮಲ್ಷನ್ ಒಡೆದು ಎರಡು ದ್ರವಗಳೂ ಬೇರ್ಪಡುತ್ತವೆ. ಸಂಧಿಸ್ಥಳದ ಒತ್ತಡವನ್ನು ತಗ್ಗಿಸಬಲ್ಲ ಮೂರನೆಯ ವಸ್ತುವೊಂದಿದ್ದರೆ, ಎಮಲ್ಷನ್ ಸ್ಥಿರವಾಗಿರಬಲ್ಲುದು ಎಂದು ಇದರಿಂದ ಸೂಚಿತವಾಗುತ್ತದೆ. ಸಾಬೂನಿಗೆ ಈ ಗುಣವಿರುವುದರಿಂದಲೇ ಅದು ಉತ್ತಮ ಎಮಲ್ಷನ್‌ಕಾರಿ ಎನಿಸಿಕೊಂಡಿದೆ. ಸಂಧಿಸ್ಥಳದ ಒತ್ತಡ ತಗ್ಗಿಸಿ ಸಾಬೂನು ಅಲ್ಲಿ ಸಂಗ್ರಹಗೊಳ್ಳುತ್ತದೆ. ಹನಿಗಳ ಸುತ್ತ ಸಾಬೂನಿನ ಕವಚ ಏರ್ಪಟ್ಟು ಅವು ಗರಣೆಗಟ್ಟುವುದು (ಕೊಯಲೇಸ್) ತಪ್ಪುವುದು. ಬಟ್ಟೆಯನ್ನು ತೊಳೆಯುವಾಗ ಅದಕ್ಕೆ ಅಂಟಿರುವ ಕೊಳೆಯನ್ನು ಮತ್ತು ಜಿಡ್ಡು ಪದಾರ್ಥಗಳನ್ನು ತತ್‌ಕ್ಷಣ ನೀರಿನಲ್ಲಿ ಎಮಲ್ಷನ್ ಮಾಡಿ ಕೊಂಡೊಯ್ಯುವುದೇ ಅದು ನಿರ್ವಹಿಸುವ ಪಾತ್ರ. ಸೋಡಿಯಂ ಓಲಿಯೇಟಿನಂಥ ಕ್ಷಾರ ಲೋಹದ ಸಾಬೂನು ನೀರು-ಸಾಬೂನು ಸಂಧಿಸ್ಥಳದ ಮೇಲ್ಮೈ ಒತ್ತಡವನ್ನು ಮಾತ್ರ ಗಣನೀಯವಾಗಿ ತಗ್ಗಿಸುವುದು. ಇದರಿಂದ ಸಾಬೂನಿನೊಡನೆ ಹೆಚ್ಚು ಸಂಧಿ ಒತ್ತಡ ಹೊಂದಿರುವ ಆಲಿವ್ ಎಣ್ಣೆ ಹನಿಗಳಾಗಿ ಎಣ್ಣೆ/ನೀರು ಎಮಲ್ಷನ್ ಉಂಟಾಗುವುದು. ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಸಿಯಂ ಓಲಿಯೇಟುಗಳು ಎಣ್ಣೆ-ಸಾಬೂನು ಸಂಧಿಸ್ಥಳದ ಒತ್ತಡವನ್ನು ಮಾತ್ರ ಗಣನೀಯವಾಗಿ ತಗ್ಗಿಸುವುವು. ಈಗ ಸಾಬೂನಿನೊಡನೆ ಹೆಚ್ಚು ಸಂಧಿ ಒತ್ತಡ ಹೊಂದಿರುವ ನೀರು ಹನಿಗಳ ರೂಪಕ್ಕೆ ಬಂದು ನೀರು/ಎಣ್ಣೆ ಎಮಲ್ಷನ್ ಲಭಿಸುವುದು.

(ii) ಸೂಕ್ಷ್ಮಕಣಗಳ ರೂಪದಲ್ಲಿರುವ ಕೆಲವು ಘನ ವಸ್ತುಗಳು ಎರಡು ದ್ರವಗಳಿಂದಲೂ ಪೂರಾ ಒದ್ದೆಯಾಗುವುದಿಲ್ಲ. ಅವೂ ಎಮಲ್ಷನ್‌ಕಾರಿಗಳಾಗಿ ವರ್ತಿಸಬಲ್ಲವು. ಇಂಥ ವಸ್ತು ಕಾಡಿಗೆ (ಸೂಟ್). ಇದರ ಕಣಗಳು ಸೀಮೆಎಣ್ಣೆಯಿಂದ ಹೆಚ್ಚು ಒದ್ದೆಯಾಗುವುದರಿಂದ ನೀರು/ಎಣ್ಣೆ ಎಮಲ್ಷನ್ ಉಂಟುಮಾಡುವುದು. ಕಾಡಿಗೆಯ ಕಣಗಳು ನೀರಿನ ಹನಿಯ ಸುತ್ತ ಹೊದಿಕೆಯಂತೆ ಹೆಣೆದುಕೊಂಡಿರುತ್ತವೆ.

ಎಮಲ್ಷನ್ ಪಡೆಯುವ ಮಾರ್ಗಗಳು

[ಬದಲಾಯಿಸಿ]

ಎಮಲ್ಷನ್ನಿನ ಸ್ಥಿರತೆಗೆ ಎಮಲ್ಷನ್‌ಕಾರಿಯ ಕವಚ ದಾರ್ಢ್ಯ ಮತ್ತು ಪರಿಕ್ಷೇಪಿತ ಕಣಗಳು ಹೊತ್ತಿರುವ ವಿದ್ಯುದಂಶ ಮುಖ್ಯಕಾರಣ. ಆದ್ದರಿಂದ ಎಮಲ್ಷನ್ ಪಡೆಯಲು ಕೆಳಕಂಡ ಮಾರ್ಗಗಳನ್ನು ಅನುಸರಿಸಬಹುದು.

  1. ಎಮಲ್ಷನ್‌ಕಾರಿಯನ್ನು ನಾಶಪಡಿಸುವ ವಸ್ತುವಿನ ಸೇರ್ಪಡೆ. ಉದಾಹರಣೆಗೆ ಸಾಬೂನನ್ನು ನಾಶಮಾಡಲು ಆಮ್ಲವನ್ನು ಉಪಯೋಗಿಸಬಹುದು.
  2. ಕಣಗಳು ಹೊತ್ತಿರುವ ವಿದ್ಯುದಂಶವನ್ನು ನಿವಾರಿಸುವ ಎಲೆಕ್ಟ್ರೊಲೈಟಿನ ದ್ರಾವಣವನ್ನೂ ಹಾಕುವುದು.
  3. ಕುದಿಸುವುದು, ಶೈತ್ಯೀಕರಣ, ಕೇಂದ್ರಾಪಗಮನ ಯಂತ್ರದ ಬಳಕೆ ಮತ್ತು ಉನ್ನತ ವಿಭವ ಪರ್ಯಾಯ ವಿದ್ಯುತ್ತಿನ ಪ್ರಯೋಗ.
  4. ನೀರು/ಎಣ್ಣೆ ಎಮಲ್ಷನಿಗೆ ನಿರ್ಜಲಕಾರಿ ಅಥವಾ ಆಲ್ಕೊಹಾಲ್ ಕೂಡಿಸುವುದು.

ಈ ಎಲ್ಲ ಅಂಶಗಳ ಪರಿಶೀಲನೆಯಿಂದ ಒಂದು ಮುಖ್ಯ ವಿಷಯ ಹೊರಬೀಳುತ್ತದೆ; ಎಮಲ್ಷನ್‌ಕಾರಿ ಪರಿಕ್ಷೇಪಿತ ಮಾಧ್ಯಮದಲ್ಲಿ ಹೆಚ್ಚು ದ್ರಾವ್ಯ ಮತ್ತು ಒದ್ದೆಯಾಗುವುದು. ಇದೇ ಬ್ಯಾನ್‌ಕ್ರಾಫ್ಟನ ನಿಯಮ.

ಎಮಲ್ಷನ್‍ಗಳ ಪಾತ್ರ

[ಬದಲಾಯಿಸಿ]

ನಿತ್ಯಜೀವನದಲ್ಲಿ ಹಾಗೂ ಕೈಗಾರಿಕೋದ್ಯಮಗಳಲ್ಲಿ ಎಮಲ್ಷನ್‌ಗಳ ಪಾತ್ರ ಹಿರಿದು. ಹಾಲು, ಮೊಟ್ಟೆಯ ಹಳದಿಭಾಗ (ಎಗ್‌ಯೋಕ್) ಎಲ್ಲ ನಿಸರ್ಗದತ್ತ ಎಮಲ್ಷನುಗಳು. ಆಹಾರ, ವೈದ್ಯಕೀಯ ಮತ್ತು ಅಂಗರಾಗ ಉದ್ಯಮಗಳಲ್ಲಿ ಎಮಲ್ಷನುಗಳನ್ನು ತಯಾರಿಸಬೇಕಾಗುತ್ತದೆ. ಇದಕ್ಕಾಗಿ ಕೊಲಾಯ್ಡ್ ಗಿರಣಿ, ವೇಗವಾಗಿ ಚಲಿಸುವ ಕಡೆಗೋಲು ಮೊದಲಾದ ಸಾಧನಗಳನ್ನು ಬಳಸುವರು. ತಯಾರಿಕಾ ತಂತ್ರದ ಅಪ್ರಧಾನ ವಿವರಗಳೂ ಎಮಲ್ಷನಿನ ಸ್ವಭಾವವನ್ನು ನಿರ್ಣಯಿಸಬಹುದಾದ್ದರಿಂದ ಈ ಬಗ್ಗೆ ಎಚ್ಚರಿಕೆ ಅಗತ್ಯ. ಪರಿಕರಗಳನ್ನು ಬೆರೆಸಿದ ಕ್ರಮ ಮಿಶ್ರಣವನ್ನು ಕಡೆದ ಕಾಲಾವಧಿ ಮತ್ತು ವೇಗ, ಉಷ್ಣತಾ ನಿಯಂತ್ರಣದಲ್ಲಾದ ಸೂಕ್ಷ್ಮ ಏರುಪೇರು ಸಹ ಎಮಲ್ಷನಿನ ಮೇಲೆ ಪ್ರಭಾವ ಬೀರುತ್ತವೆ. ಎಮಲ್ಷನ್‌ಕಾರಿಯ ಪ್ರಮಾಣ ಮುಖ್ಯವಾಗಿ ಗಮನಿಸಬೇಕಾದ ವಿಷಯ. ಕೈಗಾರಿಕೆಯಲ್ಲಿ ಪ್ರಧಾನವಾಗಿ ಬಳಸುವ ಎಮಲ್ಷನ್‌ಕಾರಿಗಳೆಂದರೆ ಸಾಬೂನು ಮತ್ತು ಜಿಲೆಟಿನ್. ವೈದ್ಯಕೀಯದಲ್ಲಿ ಅರೇಬಿಕ್ ಅಂಟಿಗೆ ಪ್ರಾಶಸ್ತ್ಯ. ಅಹಿತ ರುಚಿಯುಳ್ಳ ಔಷಧವನ್ನು ತೈಲದಲ್ಲಿ ಪರಿಕ್ಷೇಪಿಸಿ ಕುಡಿಸಿದರೆ ರೋಗಿಗೆ ಅದರ ರುಚಿ ಹತ್ತದೆ ಸಹ್ಯವಾಗಿರುವುದು. ದೇಹಗತವಾದ ಅನಂತರ ಪ್ರಯೋಗಿಸಿದ ಮದ್ದು ನಿಧಾನವಾಗಿ ಬಿಡುಗಡೆಯಾಗಿ ಕಾರ್ಯೋನ್ಮುಖವಾಗಲೆಂಬ ಅಭಿಲಾಷೆ ವೈದ್ಯನಿಗಿದ್ದರೆ, ಆಗ ಅದನ್ನು ತೈಲದಲ್ಲಿ ಎಮಲ್ಷನ್ ಮಾಡಿಕೊಡುವುದು ಪದ್ಧತಿ. ಅನೇಕ ಕೈಗಾರಿಕೆಗಳಲ್ಲಿ ಸ್ಥಿರವಾದ ಎಮಲ್ಷನುಗಳನ್ನು ಒಡೆಯುವ ಅಗತ್ಯ ಬೀಳುತ್ತದೆ. ನೀರು/ಎಣ್ಣೆ ನಮೂನೆಯ ಕಚ್ಚಾ ಪೆಟ್ರೋಲಿಯಂ, ಉಣ್ಣೆಯಿಂದ ನೂಲು ತೆಗೆಯುವಾಗ ಬರುವ ಅದರ ಕೊಬ್ಬಿನ ಎಮಲ್ಷನ್, ಸಾವಯವ ದ್ರವಗಳನ್ನು ಹಬೆ ಬಾಷ್ಪೀಭವನ ಮಾಡಿದಾಗ ಹುಟ್ಟುವ ಎಮಲ್ಷನ್, ತೈಲಯಂತ್ರಗಳಲ್ಲಿ ಸಾಂದ್ರೀಕರಿಸುವ ಎಮಲ್ಷನುಗಳನ್ನು ಒಡೆಯದೆ ಗತ್ಯಂತರವಿಲ್ಲ. ಅದಕ್ಕಾಗಿ ಹಿಂದೆಯೇ ಸೂಚಿಸಿರುವ ಅನುಕೂಲವಾದ ಯಾವ ವಿಧಾನವನ್ನಾದರೂ ಉಪಯೋಗಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Khan, A. Y.; Talegaonkar, S; Iqbal, Z; Ahmed, F. J.; Khar, R. K. (2006). "Multiple emulsions: An overview". Current Drug Delivery. 3 (4): 429–43. doi:10.2174/156720106778559056. PMID 17076645.
  2. "Emulsions: making oil and water mix". www.aocs.org. Retrieved 1 January 2021.
  3. Loi, Chia Chun; Eyres, Graham T.; Birch, E. John (2018), "Protein-Stabilised Emulsions", Reference Module in Food Science, Elsevier, doi:10.1016/b978-0-08-100596-5.22490-6, ISBN 9780081005965


ಇತರ ಮೂಲಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಎಮಲ್ಷನ್&oldid=1152850" ಇಂದ ಪಡೆಯಲ್ಪಟ್ಟಿದೆ