ವಿಷಯಕ್ಕೆ ಹೋಗು

ಉತ್ಪಾದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಪಾದನೆ

[ಬದಲಾಯಿಸಿ]

ವಿಶಾಲವಾದ ಅರ್ಥದಲ್ಲಿ 'ಉತ್ಪಾದನೆ' ಎಂದರೆ ಮಾನವನ ಬಯಕೆಗಳನ್ನು ತೃಪ್ತಿಪಡಿಸುವುದರ ಸಲುವಾಗಿ ಕೈಗೊಳ್ಳುವ ಚಟುವಟಿಕೆಗಳೆಂದು ಅರ್ಥ. ಆದರೆ ಅರ್ಥಶಾಸ್ತ್ರದಲ್ಲಿ ಅದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ಇದರನುಗುಣವಾಗಿ ಹೇಳುವುದಾದರೆ ವಸ್ತುವಿನಲ್ಲಿ ತುಷ್ಟಿಗುಣ ಸೇರಿಸುವುದಕ್ಕೆ ಉತ್ಪಾದನೆ ಎಂದು ಕರೆಯುತ್ತಾರೆ.[೧] ಅಥವಾ ಬಳಕೆಭಾಷೆಯಲ್ಲಿ ವಸ್ತುಗಳನ್ನು ತಯಾರಿಸುವುದಕ್ಕೆ 'ಉತ್ಪಾದನೆ' ಎಂದು ಕರೆಯುತ್ತಾರೆ. ಆದರೆ ಇದು ಸರಿಯಲ್ಲ. ಏಕೆಂದರೆ ಮಾನವನು ಯಾವ ವಸ್ತುಗಳನ್ನು ಸೃಷ್ಟಿಸಲಾರನು. ಎಲ್ಲ ವಸ್ತುಗಳನ್ನು ಪ್ರಕೃತಿಯೇ ಒದಗಿಸುತ್ತದೆ. ಪ್ರಕೃತಿಯು ಒದಗಿಸಿದ ವಸ್ತುಗಳ ಉಪಯುಕ್ತತೆಯನ್ನು ಹೆಚ್ಚಿಸಿ ಅವು ಮಾನವನ ಬಯಕೆಗಳನ್ನು ತೃಪ್ತಿಪಡಿಸುವಂತೆ ಮಾಡುವ ಕ್ರಿಯೆಯೇ ಉತ್ಪಾದನೆ. ವಸ್ತುಗಳ ಉಪಯುಕ್ತತೆಯನ್ನು ಹೆಚ್ಚಿಸುವುದೆಂದರೆ ಅವುಗಳ ಗುಣಮಟ್ಟವನ್ನು ಹೆಚ್ಚಿಸುವುದು. ಆದುದರಿಂದ ವಸ್ತುಗಳ ತುಷ್ಟಿಗುಣವನ್ನು ಹೆಚ್ಚಿಸಿ, ಅವುಗಳ ಪ್ರಯೋಜನವನ್ನು ಮತ್ತು ಮೌಲ್ಯವನ್ನು, ಇನ್ನೂ ಹೆಚ್ಚಾಗುವಂತೆ ಮಾಡುವುದೇ ಉತ್ಪಾದನೆಯಾಗಿದೆ. ವಸ್ತುಗಳಲ್ಲಿರುವ ತುಷ್ಟಿಗುಣವನ್ನು ಉಪಯೋಗಿಸುವುದು ಅನುಭೋಗವಾದರೆ, ವಸ್ತುಗಳಿಗೆ ತುಷ್ಟಿಗುಣ ಸೇರಿಸುವುದು ಉತ್ಪಾದನೆಯಾಗಿದೆ. ಆದರೆ ಕೇವಲ ತುಷ್ಟಿಗುಣ ಸೃಷ್ಟಿಯೇ ಉತ್ಪಾದನೆಯಾಗಲು ಸಾಧ್ಯವಿಲ್ಲ. ತುಷ್ಟಿಗುಣದ ಜೊತೆಗೆ ಮೌಲ್ಯವೂ ಹೆಚ್ಚಾಗಬೇಕು. ಆದುದರಿಂದ ಉತ್ಪಾದನೆಯೆಂದರೆ ವಸ್ತುಗಳ ಸೃಷ್ಟಿಯೆಂದು ತಿಳಿದುಕೊಳ್ಳಬಾರದು. ಏಕೆಂದರೆ ಮಾನವನು ವಸ್ತುಗಳನ್ನು ಸೃಷ್ಟಿಸಲಾರನು. ಎಲ್ಲಾ ವಸ್ತುಗಳೂ ನಿಸರ್ಗದತ್ತವಾಗಿದೆ. ನಿಸರ್ಗದಲ್ಲಿ ಸಿಗುವ ಪ್ರಯೋಜನವಿಲ್ಲದ ಅಥವಾ ಕಡಿಮೆ ಪ್ರಯೋಜನವುಳ್ಳ ವಸ್ತುಗಳಿಗೆ ತುಷ್ಟಿಗುಣ ಸೇರಿಸಿ ಅವುಗಳ ಉಪಯುಕ್ತತೆಯನ್ನು ಮೌಲ್ಯವನ್ನೂ ಹೆಚ್ಚಿಸುವುದೇ ಉತ್ಪಾದನೆಯಾಗಿದೆ. ಉದಾಹರಣೆಗೆ, ಅರಣ್ಯದಲ್ಲಿ ಅನೇಕ ಮರಗಳಿವೆ ಅವು ನಿಸರ್ಗದತ್ತವಾಗಿವೆ ಅಲ್ಲದೇ ಅಲ್ಲಿ ಅವು ನಿರುಪಯುಕ್ತವಾಗಿವೆ. ಆದರೆ ಅವುಗಳನ್ನು ಕಡಿದು, ದಿಮ್ಮಿಗಳನ್ನು ಕಾರ್ಖಾನೆಗೆ ತಂದು ಕುರ್ಚಿ, ಮೇಜುಗಳನ್ನು ತಯಾರಿಸಿದರೆ ಅವುಗಳ ಉಪಯುಕ್ತತೆ ಮತ್ತು ಮೌಲ್ಯ ಎರಡೂ ಹೆಚ್ಚಾಗುತ್ತವೆ. ಅದೇ ಪ್ರಕಾರ ಗಣಿಯಲ್ಲಿರುವ ಕಲ್ಲಿದ್ದಲು ಸಹಾ ನಿಸರ್ಗದತ್ತವಾಗಿದ್ದು, ನಿರುಪಯುಕ್ತವಾಗಿದೆ. ಅಲ್ಲಿಂದ ಅದನ್ನು ಹೊರ ತೆಗೆದು ಕಾರ್ಖಾನೆಗಳಿಗೆ ಸಾಗಿಸಿದರೆ, ಅದರ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತದೆ. ಈ ಪ್ರಕಾರ ಮಾನವನು ತನ್ನ ಬಯಕೆಗಳ ತೃಪ್ತಿಗಾಗಿ ವಸ್ತುಗಳಿಗೆ ತುಷ್ಟಿಗುಣ ಸೇರಿಸಿ, ಅದರ ಮೌಲ್ಯವನ್ನು ಹಾಗೂ ಉಪಯುಕ್ತತೆಯನ್ನು ಹೆಚ್ಚಿಸುವುದಕ್ಕೆ ಅರ್ಥಶಾಸ್ತ್ರದಲ್ಲಿ 'ಉತ್ಪಾದನೆ' ಎಂದು ಕರೆಯುತ್ತಾರೆ.[೨]

ಗ್ಲೂ ಕಾರ್ಖಾನೆ

ಉತ್ಪಾದನೆಯ ರೂಪಗಳು(Forms of Production)

[ಬದಲಾಯಿಸಿ]

ವಸ್ತುಗಳ ಉತ್ಪಾದನೆಯನ್ನು ವಿವಿಧ ರೀತಿಯಿಂದ ಮಾಡಬಹುದು.[೩] ಅವು ಯಾವುದೆಂದರೆ

ರೂಪ ತುಷ್ಟಿಗುಣ

[ಬದಲಾಯಿಸಿ]

ಒಂದು ವಸ್ತುವಿನ ನೈಸರ್ಗಿಕ ರೂಪ ಇಲ್ಲವೇ ಆಕಾರವನ್ನು ಬದಲಾಯಿಸಿದಾಗ, ಅದಕ್ಕೆ ಹೆಚ್ಚಿನ ತುಷ್ಟಿಗುಣ ಬರುತ್ತದೆ. ಉದಹರಣೆಗೆ- ದಿಮ್ಮಿಗಳನ್ನು ಕೊರೆದು, ಕುರ್ಚಿ ಮೇಜುಗಳನ್ನು ತಯಾರಿಸಿದಾಗ, ಇಲ್ಲವೆ ಹತ್ತಿಯಿಂದ ಹತ್ತಿಯ ಬಟ್ಟೆಯನ್ನು ತಯಾರಿಸಿದಾಗ ರೂಪತುಷ್ಟಿಗುಣ ನಿರ್ಮಾಣವಾಗುತ್ತದೆ.

ಸ್ಥಳ ತುಷ್ಟಿಗುಣ

[ಬದಲಾಯಿಸಿ]

ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿದಾಗ, ಸ್ಥಳ ತುಷ್ಟಿಗುಣ ನಿರ್ಮಾಣವಾಗುತ್ತದೆ. ಉದಾಹರಣೆಗೆ- ಗಣಿಯಲ್ಲಿರುವ ಕಲ್ಲಿದ್ದಲು ಅಲ್ಲೇ ಇದ್ದರೆ ಏನು ಉಪಯೋಗವಿಲ್ಲ. ಆದರೆ ಅದನ್ನು ಹೊರತೆಗೆದು ಕಾರ್ಖಾನೆಗೆ ಸಾಗಿಸಿದಾಗ ಅದರ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತವೆ. ಅದೇ ಪ್ರಕಾರ ಸಾಗರದಲ್ಲಿರುವ ಮೀನುಗಳನ್ನು ಹಿಡಿದು ಮಾರುಕಟ್ಟೆಗೆ ಸಾಗಿಸಿದಾಗ, ಅವುಗಳಿಗೆ ಸ್ಥಳ ತುಷ್ಟಿಗುಣ ಸೇರಿಸಲಾಗುತ್ತದೆ. ಆದುದರಿಂದ ಅವುಗಳ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತವೆ.

ಕಾಲ ತುಷ್ಟಿಗುಣ

[ಬದಲಾಯಿಸಿ]

ವಸ್ತುಗಳು ಹೇರಳವಾಗಿ ಸಿಗುವಾಗ ಅವುಗಳ ಪ್ರಯೋಜನ ಮತ್ತು ಮೌಲ್ಯ ಕಡಿಮೆ. ಆಗ ಅವುಗಳನ್ನು ಸಂಗ್ರಹಿಸಿಟ್ಟು, ಅವುಗಳ ಕೊರತೆ ಕಂಡು ಬಂದಾಗ, ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಾಗ ಅವುಗಳ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತವೆ. ಅದೇ ಪ್ರಕಾರ, ಸುಗ್ಗಿಯ ಕಾಲದಲ್ಲಿ ದವಸ -ಧಾನ್ಯಗಳು ವಿಫಲವಾಗಿ ಸಿಗುತ್ತವೆ. ಆಗ ಅವುಗಳ ಬೆಲೆಯೂ ಕಡಿಮೆ. ವ್ಯಾಪರಸ್ಥರು ಅವುಗಳನ್ನು ರೈತರಿಂದ ಕೊಂಡು, ತಮ್ಮ ಉಗ್ರಾಣದಲ್ಲಿ ಸಂಗ್ರಹಿಸಿಡುತ್ತಾರೆ. ಸುಗ್ಗಿ ಮುಗಿದ ನಂತರ, ಮುಂದೆ ಅವುಗಳ ಕೊರತೆ ಉಂಟಾಗುತ್ತದೆ. ಆಗ ವ್ಯಾಪಾರಸ್ಥರು ತಮ್ಮ ಉಗ್ರಾಣಗಳಿಂದ ಅವುಗಳನ್ನು ಹೊರ ತೆಗೆದು ಪೇಟೆಯಲ್ಲಿ ಮಾರಾಟಕ್ಕಿಟ್ಟಾಗ ಅವುಗಳ ಉಪಯುಕ್ತತೆ ಮತ್ತು ಮೌಲ್ಯಗಳು ಹೆಚ್ಚಾಗುತ್ತವೆ. ಅದರಂತೆ, ಮಳೆಗಾಲಕ್ಕಿಂತ ಮೊದಲೇ ಅಂದರೆ ಚಳಿಗಾಲದಲ್ಲಿ ಮತ್ತು ಬೇಸಿಗೆಯ ಕಾಲದಲ್ಲಿ ಕೊಡೆಗಳನ್ನು ತಯಾರಿಸಲಾಗುತ್ತದೆ. ಅವುಗಳ ಉಪಯುಕ್ತತೆ ಕಡಿಮೆ. ಮಳೆಗಾಲ ಪ್ರಾರಂಭವಾದ ಕೂಡಲೇ ಅವುಗಳನ್ನು ಮಾರಾಟಕ್ಕಿಡಲಾಗುತ್ತದೆ. ಆಗ ಅವುಗಳ ಉಪಯುಕ್ತತೆ ಮತ್ತು ಮಲ್ಯ ಎರಡೂ ಹೆಚ್ಚಾಗುತ್ತವೆ.

ಸೇವೆಯ ತುಷ್ಟಿಗುಣ

[ಬದಲಾಯಿಸಿ]

ಅರ್ಥಶಾಸ್ತ್ರದಲ್ಲಿ ಸೇವೆಗಳ ಪೂರೈಕೆಯೂ ಉತ್ಪಾದನೆಯಾಗಿದೆ. ಬಡಿಗನು ಕುರ್ಚಿ, ಮೇಜುಗಳನ್ನು ಉತ್ಪಾದಿಸಿ ಪೂರೈಸಿದರೆ, ಶಿಕ್ಷಕನು ಸೇವೆಯನ್ನು ಪೂರೈಸುತ್ತಾನೆ. ವಿವಿಧ ವ್ಯಕ್ತಿಗಳು ವಿವಿಧ ಪ್ರಕಾರದ ಸೇವೆಯನ್ನು ಒದಗಿಸುತ್ತಾರೆ. ರೈತರು, ಬಡಿಗರು, ಕಮ್ಮಾರರು ಉತ್ಪಾದಕರಾದರೆ, ಶಿಕ್ಷಕರು, ವೈದ್ಯರು, ವಕೀಲರು, ಗಾಯಕರು, ಗುಮಾಸ್ತರು ಸಹ ಉತ್ಪಾದಕರಾಗಿದ್ದಾರೆ. ಅವರ ಸೇವೆಗಳು ಉಪಯುಕ್ತತೆ ಮತ್ತು ಮೌಲ್ಯಗಳನ್ನು ಹೊಂದಿದ್ದು, ಅವು ಮಾನವನ ಬಯಕೆಗಳನ್ನು ತೃಪ್ತಿಪಡಿಸುತ್ತವೆ. ಆದರೆ ಮನೆಯಲ್ಲಿ ಹೆಂಡತಿಯು ತನ್ನ ಗಂಡನಿಗೆ ಇಲ್ಲವೆ ತಾಯಿಯು ತನ್ನ ಮಕ್ಕಳಿಗೆ ಮಾಡುವ ಸೇವೆಯು ಉತ್ಪಾದನೆಯಾಗಲಾರದು. ಏಕೆಂದರೆ ಅವು ಮಾನವನ ಬಯಕೆಗಳನ್ನು ತೃಪ್ತಿಪಡಿಸಿದರೂ ಅವುಗಳಿಗೆ ಆರ್ಥಿಕ ಮೌಲ್ಯವಿರುವುದಿಲ್ಲ. ಅವು ಉಚಿತವಾಗಿ ಸಿಗುತ್ತವೆ. ಆದರೆ ಅದೇ ಹಾದಿಯ ಸೇವೆಯು ಉತ್ಪಾದನೆಯಾಗಿದೆ. ಏಕೆಂದರೆ ಅದಕ್ಕೆ ಆರ್ಥಿಕ ಮೌಲ್ಯವಿದೆ. ತಂದೆಯು ತನ್ನ ಮಕ್ಕಳಿಗೆ ಪಾಠ ಹೇಳಿಕೊಟ್ಟರೆ ಅದು ಉತ್ಪಾದನೆಯಾಗಲಾರದು. ಏಕೆಂದರೆ ಅವನ ಸೇವೆಗೆ ಆರ್ಥಿಕ ಪ್ರತಿಫಲ ಸಿಗುವುದಿಲ್ಲ. ಆದರೆ ಅವನು ಪಾಠ ಹೇಳಲು ಒಬ್ಬ ಶಿಕ್ಷಕನ್ನು ಗೊತ್ತು ಮಾಡಿದರೆ ಆ ಶಿಕ್ಷಕನ ಸೇವೆಯು ಉತ್ಪಾದನೆಯಾಗುತ್ತದೆ. ಏಕೆಂದರೆ ಆ ಶಿಕ್ಷಕನ ಸೇವೆಗೆ ಆರ್ಥಿಕ ಮೌಲ್ಯವಿರುತ್ತದೆ. ಹೀಗೆ ಅರ್ಥಶಾಸ್ತ್ರದಲ್ಲಿ ಆರ್ಥಿಕ ಸೇವೆಗಳು ಉತ್ಪಾದನೆಯ ಒಂದು ರೂಪವಾಗಿವೆ.

ಉತ್ಪಾದನಾಂಗಗಳು(Factors of Production)

[ಬದಲಾಯಿಸಿ]
ಕಚ್ಚಾ ಪ್ಲಾಸ್ಟಿಕ್

ಉತ್ಪಾದನಾ ಕ್ರಿಯೆಯಲ್ಲಿ ಭಾಗವಹಿಸುವ ಅಂಗಗಳಿಗೆ ಉತ್ಪಾದನಾಂಗಗಳೆಂದು ಕರೆಯುತ್ತಾರೆ. ಅವುಗಳನ್ನು ಉತ್ಪಾದನೆಯ ಘಟಕಗಳೆಂದೂ ಸಹಾ ಕರೆಯಬಹುದು. ಯಾವುದೇ ವಸ್ತುವಿನ ಉತ್ಪಾದನೆಗೆ ನಾಲ್ಕು ಅಂಶಗಳ ಅವಶ್ಯಕತೆಯಿದೆ.[೪] ಅವು ಯಾವುದೆಂದರೆ

  1. ಭೂಮಿ[Land]
  2. ಶ್ರಮ[Labour]
  3. ಬಂಡವಾಳ[Capital]
  4. ಸಂಘಟನೆ[Organisation].

ಈ ನಾಲ್ಕು ಉತ್ಪಾದನಾಂಗಗಳಲ್ಲಿ, ಬೇರೆ ಬೇರೆ ಉತ್ಪಾದನಾಂಗಗಳು ಬೇರೆ ಬೇರೆ ಕಾಲಕ್ಕೆ ಪ್ರಾಧಾನ್ಯತೆಯನ್ನು ಪಡೆದಿವೆ. ಪ್ರಾರಂಭದಲ್ಲಿ ಸಂಪತ್ತು, ಕೇವಲ ಭೂಮಿ ಮತ್ತು ಶ್ರಮಗಳಿಂದ ಮಾತ್ರ ಉತ್ಪಾದಿಸಲ್ಪಡುತ್ತದೆಯೆಂಬ ಭಾವನೆಯಿತ್ತು. ಪ್ರಾಚೀನ ಅರ್ಥಶಾಸ್ತ್ರಜ್ಞರು ಭೂಮಿ ಮತ್ತು ಶ್ರಮ ಇವೆರಡೇ ಉತ್ಪಾದನಾಂಗಗಳೆಂದು ತಿಳಿದುಕೊಂಡಿದ್ದರು. ಕ್ರಮೇಣ 'ಬಂಡವಾಳ'ವು ಒಂದು ಪ್ರಮುಖ ಉತ್ಪಾದನಾಂಗವಾಗಿದೆಯೆಂಬ ಭಾವನೆ ಬೆಳೆಯತೊಡಗಿತು. ಆ ನಂತರ ಸಂಘಟನೆಯೂ ಒಂದು ಮಹತ್ವದ ಉತ್ಪಾದನಾಂಗವಾಗಿದೆಯೆಂದು ತಿಳಿದುಕೊಳ್ಳಲಾಯಿತು. ಈ ಪ್ರಕಾರದ ಬದಲಾವಣೆಗೆ ಹಲವು ಕಾರಣಗಳುಂಟು. ಉತ್ಪಾದನೆಯ ಪ್ರಮಾಣವು ಬೃಹದಾಕಾರವಾಗಿ ಬೆಳೆಯುತ್ತಿರುವುದು, ಉತ್ಪಾದನೆಯ ಹಂತಗಳು ಕ್ರಮೇಣ ಹೆಚ್ಚಾಗುತ್ತಿರುವುದು, ಮತ್ತು ಉತ್ಪಾದನೆಯು ಹೆಚ್ಚು ಕ್ಲಿಷ್ಟಮಯವಾಗುತ್ತಿರುವುದು, ಈ ಕಾರಣಗಳ ಮೂಲಕ ಇತ್ತೀಚೆಗೆ ಬಂಡವಾಳ ಮತ್ತು ಸಂಘಟನೆಗಳು ಮಹತ್ವದ ಉತ್ಪಾದನಾಂಗಗಳಾಗಿವೆಯೆಂದು ಪರಿಗಣಿಸಲ್ಪಟ್ಟಿವೆ. ಬೆನ್ ಹಾಮ್, ವಿಕ್ ಸ್ಟೀಡ್, ಮೊದಲಾದ ಅರ್ಥಶಾಸ್ತ್ರಜ್ಞರು ಉತ್ಪಾದನಾಂಗಗಳನ್ನು ಈ ರೀತಿಯಾಗಿ ವಿಂಗಡಿಸುವುದು ಸರಿಯಲ್ಲವೆಂದು ಪ್ರತಿವಾದಿಸಿದ್ದಾರೆ. ಅವರ ಪ್ರಕಾರ ಭೂಮಿ ಮತ್ತು ಶ್ರಮ ಪ್ರಾಥಮಿಕ ಉತ್ಪಾದನಾಂಗಗಳಾಗಿದ್ದು ಇವೆರಡೇ ಪ್ರಮುಖ ಉತ್ಪಾದನಾಂಗಗಲಾಗಿವೆ. ಬಂಡವಾಳವು ಭೂಮಿ ಮತ್ತು ಶ್ರಮಗಳ ಸಮ್ಮಿಲನದಿಂದ ಉತ್ಪಾದನೆಯಾಗಿರುವುದರಿಂದ ಅದು ಪ್ರತ್ಯೇಕವಾದ ಅಂಗವಾಗಲಾರದು. ಅದರಂತೆ ಸಂಘಟನೆಯೂ ಒಂದು ಪ್ರಕಾರದ ಶ್ರಮವಾಗಿದೆ. ಅದನ್ನು ಶ್ರಮದಿಂದ ಬೇರ್ಪಡಿಸುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಭೂಮಿಯಲ್ಲಿ ವಿವಿಧ ಪ್ರಕಾರದ ದಕ್ಷತೆಯನ್ನು ಕಾಣುತ್ತೇವೆ. ಒಬ್ಬ ಕಾರ್ಮಿಕನ ಶ್ರಮಕ್ಕೂ ಮತ್ತು ಒಬ್ಬ ಸಂಘಟಕಾರನ ಶ್ರಮಕ್ಕೂ ವ್ಯತ್ಯಾಸವಿದ್ದರೂ ಅವೆರಡೂ ಶ್ರಮದ ರೂಪಗಳೇ ಆಗಿರುವುದರಿಂದ ಸಂಘಟನೆಯು ಪ್ರತ್ಯೇಕವಾದ ಉತ್ಪಾದನಾಂಗವಾಗಿಲ್ಲವೆಂದು ಈ ಅರ್ಥಶಾಸ್ತ್ರಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇವುಗಳನ್ನು ನೋಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2017-07-11. Retrieved 2015-05-02.
  2. http://www.britannica.com/EBchecked/topic/477954/production
  3. https://thesedonaconference.org/node/4314[ಶಾಶ್ವತವಾಗಿ ಮಡಿದ ಕೊಂಡಿ]
  4. http://www.investopedia.com/terms/f/factors-production.asp