ವಿಷಯಕ್ಕೆ ಹೋಗು

ಕಮ್ಮಾರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಮ್ಮಾರ ಇಂದ ಪುನರ್ನಿರ್ದೇಶಿತ)

ಕಮ್ಮಾರಿಕೆ : ಕಬ್ಬಿಣ ಲೋಹವನ್ನು ಉಪಕರಣಗಳನ್ನಾಗಿ ಮಾಡಿ, ಅವುಗಳ ಉಪಯೋಗ ಮಾನವನಿಗೆ ದೊರಕುವಂತೆ ಮಾಡಲೆತ್ನಿಸಿದ ಕಲೆಯೇ ಕಮ್ಮಾರಿಕೆ (ಸ್ಮಿತರಿ). ಬರಿಯ ಲೋಹ ವ್ಯರ್ಥ. ಕಮ್ಮಾರಿಕೆ ಅಸ್ತಿತ್ವಕ್ಕೆ ಬಂದ ಅನಂತರ ವ್ಯವಸಾಯಕ್ಕೆ, ಯುದ್ಧಕ್ಕೆ, ವಾಹನಗಳಿಗೆ ಮತ್ತಿತರ ಮಾನವೋಪಯೋಗಿ ಕಾರ್ಯಗಳಿಗೆ ಅದರ ಬಳಕೆ ಪ್ರಾರಂಭವಾಯಿತು. ಮೊದಮೊದಲು ಕಬ್ಬಿಣದ ಲೋಹ ಹೇಗೆ ದೊರಕಿತೋ ಅದೇ ರೂಪದಲ್ಲಿ ಮಾನವ ಅದನ್ನು ಕುಟ್ಟಿ, ಬಡಿದು ಸಾಧ್ಯವಾದಷ್ಟು ಹರಿತ ಮಾಡಿಕೊಂಡಿದ್ದಾನೆ. ಅನಂತರ ಕಾಯಿಸಿದ ಕಬ್ಬಿಣವನ್ನು ಯಾವ ರೂಪಕ್ಕಾದರೂ ತಿದ್ದಬಹುದೆಂಬ ಅಂಶ ಅರಿವಿಗೆ ಬಂದಾಗ ಹೊಸ ದಿಗಂತವೇ ಕಾಣಿಸಿತೆಂದು ಹೇಳಬಹುದು.

ಕಮ್ಮಾರ ಕಬ್ಬಿಣವನ್ನು ತಯಾರಿಸುವುದಿಲ್ಲ. ಸಿದ್ಧವಾದ ಲೋಹವನ್ನು ಉಪಕರಣಗಳನ್ನಾಗಿ ಪರಿವರ್ತಿಸುವುದೇ ಅವನ ಪ್ರಧಾನ ಉದ್ದೇಶ. ಕರ್ಮಕಾರ ಅರ್ಥಾತ್ ಕಮ್ಮಾರ ಲೋಹವನ್ನು ಕಾಯಿಸಿ, ತನ್ಮೂಲಕ ಅದಕ್ಕೆ ಆವಶ್ಯಕ ರೂಪಗಳನ್ನು ಕೊಡುತ್ತಾನೆ. ಈ ಕಾರ್ಯ ನವಶಕ್ತಿಯಿಂದ ಮತ್ತು ಯಂತ್ರ ಶಕ್ತಿಯಿಂದ ಸಾಧ್ಯ. ಯಂತ್ರಗಳು ಬರುವ ಮೊದಲು ಮನುಷ್ಯನೇ ಎಲ್ಲ ಕಾರ್ಯಗಳನ್ನೂ ಮಾಡಬೇಕಾಗಿತ್ತು. ಅದಕ್ಕೆ ಬೇಕಾದ ಗಾಳಿಯನ್ನು ನೀಡುವ ತಿದಿ ಮತ್ತು ಇದ್ದಲು ಇವೆರಡನ್ನು ಬಳಸಿ ಆತ ಕಬ್ಬಿಣವನ್ನು ಕಾಯಿಸುತ್ತಾನೆ.

ಚರ್ಮದಿಂದ ಮಾಡುವ ಕೋಶವೇ ತಿದಿ. ಅದರ ಒಂದು ತುದಿ ಪುರ್ಣ ಮುಚ್ಚಿದ್ದು ಮತ್ತೊಂದು ಕಡೆ ಗಾಳಿ ಹೊರಬರಲು ಕೊಳವೆಯಿರುತ್ತದೆ. ಎರಡು ಗಟ್ಟಿಯಾದ ಮರದ ಹಲಗೆಯಿಂದ ಅದರ ರಕ್ಷೆಯ ಮಧ್ಯದಲ್ಲಿ ಚರ್ಮದ ಚೀಲವುಂಟು. ಮೇಲ್ಭಾಗದ ಹಲಗೆಯಲ್ಲಿ ರಂಧ್ರವಿದ್ದು ಅದರ ಮೂಲಕ ಒಳನುಗ್ಗಿದ ಗಾಳಿಯನ್ನು ಒತ್ತುವುದರ ಮೂಲಕ ಅದು ಕೊಳವೆಯ ಮುಖಾಂತರ ಇದ್ದಲಿನ ಗುಣಿಯನ್ನು ಪ್ರವೇಶಿಸುವಂತೆ ಮಾಡಲಾಗುತ್ತದೆ. ಕೆಂಡ ಪ್ರಜ್ವಲಿಸಿ ಹೆಚ್ಚು ಶಾಖ ಒದಗಿಬರುತ್ತದೆ. ಕೆಂಡದ ಮಧ್ಯೆ ಇದ್ದ ಲೋಹ ಅಥವಾ ಮೊಂಡಾದ ಉಪಕರಣ ಕೆಂಪು ಬಣ್ಣಕ್ಕೆ ತಿರುಗಿದಾಗ ಅದನ್ನು ಇಕ್ಕುಳದಿಂದ ಹಿಡಿದು ಎತ್ತಿ ಅಡಿಗಲ್ಲಿನ ಮೇಲಿಟ್ಟು ಗೂಡ ಅಥವಾ ಸುತ್ತಿಗೆಯಿಂದ ಬಡಿಯುತ್ತಾರೆ. ಒಬ್ಬರು ಅಥವಾ ಇಬ್ಬರು ಬಡಿಯುತ್ತಿದ್ದಂತೆ ಉಪಕರಣವಾಗಲಿರುವ ಲೋಹವನ್ನು ಹೊರಳಿಸಿ ಬೇರೆ ಬೇರೆ ಕೋನಗಳಲ್ಲಿ ಇಡುತ್ತ ಬರುತ್ತಾರೆ. ಕೆಲಸ ಮುಗಿಯುವ ಮೊದಲೇ ಅದು ಬಿಸಿಯನ್ನು ಕಳೆದುಕೊಂಡು ತಣ್ಣಗಾದರೆ ಮತ್ತೆ ಅಗ್ಗಿಷ್ಟಿಕೆಯಲ್ಲಿಟ್ಟು ಕಾಯಿಸಿ ಪುನಃ ಬಡಿಯುತ್ತಾರೆ. ಹಾಗೆ ಬಡಿದ ಅನಂತರ ಉದ್ದೇಶಿತ ಆಕಾರ ಬಂದ ಮೇಲೆ ಅದನ್ನು ಆರಲು ಬಿಡುತ್ತಾರೆ. ಹಿಡಿ ಹಾಕಬೇಕಾದರೆ ಅದರ ಒಂದು ಭಾಗ ಕೆಂಪಾಗಿದ್ದಾಗಲೇ ಮರದ ಹಿಡಿಗೆ ಅದನ್ನು ಪೋಣಿಸುತ್ತಾರೆ. ಗಾಡಿಯ ಗಾಲಿಗೆ ಕಬ್ಬಿಣದ ಪಟ್ಟಿಯನ್ನು ಕಟ್ಟುವಾಗಲೂ ಹೀಗೆ ಮಾಡುವುದನ್ನು ನೋಡಿರಬಹುದು.

ಕಮ್ಮಾರಿಕೆಯ ಪ್ರಯೋಜನ ಹಿಂದಿನಿಂದಲೂ ತಿಳಿದ ವಿಷಯವೇ ಆಗಿದೆ. ಮುಖ್ಯವಾಗಿ ವ್ಯವಸಾಯ ಮತ್ತು ಯುದ್ಧಗಳಿಗೆ ಬೇಕಾದ ಉಪಕರಣ, ಆಯುಧಗಳನ್ನು ತಯಾರಿಸುವುದು ಅಂದಿನಿಂದಲೂ ನಡೆದುಬಂದ ವಾಡಿಕೆ. ವ್ಯವಸಾಯಕ್ಕೆ ಬೇಕಾದ ಕುಡುಗೋಲು, ಕಳೆಕುಡುಗೋಲು, ಗುಳ, ಜಿಗಣಿ, ಕೊಡಲಿ, ಕೈಬಾಚಿ ಮುಂತಾದ ಉಪಕರಣಗಳ ಜೊತೆಗೆ ಆಗಾಗ್ಗೆ ತಟ್ಟಬೇಕಾಗಿ ಬರುವ ನೇಗಿಲಿನ ಗುಳ, ಕಬ್ಬಿಣ ನೇಗಿಲಿನ ಹಲ್ಲೆ, ಹಾರೆಯ ತುದಿ, ಪಿಕಾಸಿಯ ಮೊನೆ ಇತ್ಯಾದಿಗಳು ಸದಾ ಕಮ್ಮಾರನ ಬಳಿ ಬಿದ್ದಿರುತ್ತವೆ. ಇವೆಲ್ಲಕ್ಕೂ ಮಕುಟಪ್ರಾಯವಾಗಿ ಎತ್ತಿನ ಗಾಡಿಯೊಂದು ಚಕ್ರಗಳನ್ನು ಕಳಚಿಕೊಂಡು ಅವನ ದಯೆಯನ್ನು ಹಾರೈಸಿ ಮಲಗಿರುತ್ತದೆ. ಚಕ್ರಗಳಿಗೆ ಹಾಕುವ ಕಬ್ಬಿಣದ ಪಟ್ಟಿ ಸಡಿಲವಾದಾಗ, ಅದನ್ನು ತೆಗೆದು ಕಾಯಿಸಿ ಕಟ್ಟಿ ಮರದ ಚಕ್ರಕ್ಕೆ ಕೂಡಿಸಿ ನೀರುಹೊಯ್ಯುತ್ತಾರೆ. ಆಗ ಸಂಕೋಚಗೊಂಡ ಕಬ್ಬಿಣದ ಪಟ್ಟಿ ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಮುರಿದ ಕಬ್ಬಿಣದ ಗುಳಗಳನ್ನು ಸೇರಿಸುವುದೂ ಉಂಟು. ಎರಡನ್ನೂ ಚೆನ್ನಾಗಿ ಕಾಯಿಸಿ ಸೇರಿಸಿ ಬಡಿಯುವುದೇ ಅದರ ಕೆಲಸ. ಇದೇ ಮುಂತಾದ ಕೆಲಸಗಳು ಅನಿವಾರ್ಯವಾದುದರಿಂದ ಪ್ರತಿಯೊಂದು ಗ್ರಾಮದಲ್ಲಿಯೂ ಕಡೆಯ ಪಕ್ಷ ಒಬ್ಬನಾದರೂ ಕಮ್ಮಾರ ಇರುವುದು ರೂಢಿ. ಆದರೆ ಇತ್ತೀಚೆಗೆ ಕೆಲವು ಗ್ರಾಮಗಳಲ್ಲಿ ಕಮ್ಮಾರ ಕಣ್ಮರೆಯಾಗುತ್ತಿದ್ದಾನೆ. ಇದಕ್ಕೆ ಕಾರಣ ಕಮ್ಮಾರಿಕೆಯಿಂದ ಜೀವನೋಪಾಯ ಅವನಿಗೆ ಸುಗಮವಾಗಿ ಸಾಗದು.

ಆಧುನಿಕ ಜಗತ್ತಿನಲ್ಲಿ ಯಾಂತ್ರಿಕ ಪ್ರಗತಿಯಾದಂತೆಲ್ಲ ಕಮ್ಮಾರನ ಕಸಬಿಗೆ ಧಕ್ಕೆಯುಂಟಾಗಿರುವುದು ಸಹಜ. ಕಮ್ಮಾರಿಕೆ ಇದ್ದೇ ಇರುತ್ತದಾದರೂ ಕಮ್ಮಾರನ ಆದಾಯ ಮಾತ್ರ ಕಡಿಮೆಯಾಗುತ್ತಿದೆ. ಕಬ್ಬಿಣವನ್ನು ಕಾಯಿಸಲು ಯಾಂತ್ರಿಕ ಸೌಲಭ್ಯಗಳು ಒದಗಿ ತಿದಿಯೊತ್ತುವ ಕಾರ್ಯ ಮೂಲೆ ಸೇರುತ್ತಿದೆ. ವಿದ್ಯುಚ್ಚಾಲಿತ ಯಂತ್ರ ಎಷ್ಟು ಗಾಳಿ ಬೇಕೋ ಅಷ್ಟನ್ನು ಯಾವ ಒತ್ತಡದಲ್ಲಿರಬೇಕೋ ಅಷ್ಟರಲ್ಲಿ ಸರಬರಾಯಿ ಮಾಡುತ್ತದೆ. ಇದ್ದಲಿಗೆ ಬದಲು ಕೋಕ್, ಕಲ್ಲಿದ್ದಲು ಮುಂತಾದ ಇಂಧನಗಳು ಬಳಕೆಗೆ ಬಂದಿವೆ. ಮಾನವ ಶಕ್ತಿಯಿಂದ ಬಡಿದು ಸಿದ್ಧಪಡಿಸುವ ಕೆಲಸವನ್ನು ಯಂತ್ರಗಳೇ ಮಾಡತೊಡಗಿವೆ. ದೊಡ್ಡ ದೊಡ್ಡ ಕೊಂತಗಳಿಗೆ ಸೇರಿಸಿದ ಲೋಹಗಟ್ಟಿಗಳು ಮೇಲೆ ಕೆಳಗೆ ಚಲಿಸುತ್ತ ಇದ್ದು ಬೇಕೆಂದಾಗ ಕುಟ್ಟುತ್ತವೆ. ಒಬ್ಬ ಕೆಲಸಗಾರಮಾತ್ರ ಕುಳಿತು, ನಿಂತು ಪದಾರ್ಥವನ್ನು ಹೇಗೆ ರೂಪಿಸಬೇಕೋ ಹಾಗೆ ನೋಡಿಕೊಂಡರಾಯಿತು. ಕಾಯಿಸಿದ ವಸ್ತುವನ್ನು ಕೆಳಭಾಗದ ಅಚ್ಚಿನ ಮನೆಯೊಳಗಿಟ್ಟು ಮೇಲಿನಿಂದ ತೂಕದ ಗಟ್ಟಿಯನ್ನು ಎತ್ತರದಿಂದ ಬಿಡುವುದು ಒಂದು ವಿಧವಾದರೆ, ಎರಡೂ ಭಾಗಗಳನ್ನು ಒಂದರ ಮೇಲೊಂದನ್ನಿಟ್ಟು ಬಲವಾಗಿ ಒತ್ತುವುದು ಇನ್ನೊಂದು ವಿಧ. ನೂರು ಜನರು ಮಾಡುವ ಕೆಲಸವನ್ನು ಒಂದೇ ಮಾಡಬಹುದಾದಾಗ ಅಷ್ಟು ಜನರಿಗೂ ನಿರುದ್ಯೋಗ ಕಟ್ಟಿಟ್ಟಿದ್ದೆ. ಆದ್ದರಿಂದಲೇ ಯಂತ್ರಗಳು ಆಧುನಿಕ ಜಗತ್ತಿನ ಒಂದು ಶಾಪವೆನ್ನುವವರೂ ಉಂಟು. ಕಬ್ಬಿಣದ ತಯಾರಿಕೆ 17ನೆಯ ಶತಮಾನದಲ್ಲಿ ಕುಲುಮೆಗಳ ಮೂಲಕ ಪ್ರಾರಂಭವಾದಂದಿನಿಂದಲೂ ಯಾಂತ್ರಿಕ ಆಚರಣೆ ಬಳಕೆಗೆ ಬರತೊಡಗಿತು ಎನ್ನಬಹುದು. ವ್ಯವಸಾಯಕ್ಕೆ ಬೇಕಾದಂತೆಯೇ ಯುದ್ಧಕ್ಕೂ ಸಲಕರಣೆಗಳು ಬೇಕಾಗಿದ್ದುವು. ಕತ್ತಿ, ಕಠಾರಿ, ಶೂಲ, ಈಟಿ, ಸಬಳ, ಕೊಂತ ಭಿಂಡಿವಾಳ, ಮುದ್ಗರ, ಲಾಳವಿಂಡಿ, ಗುರಾಣಿ ಮುಂತಾದ ಆಯುಧಗಳೂ ಕುದುರೆಯ ಕಡಿವಾಣವೇ ಮುಂತಾದ ಉಪಕರಣಗಳೂ ಅನಿವಾರ್ಯವಾಗಿದ್ದುವು. ಆಗ ಕಮ್ಮಾರನ ಕಾರ್ಯ ಹಗಲಿರುಳೂ ನಡೆಯಬೇಕಾಗಿತ್ತು. ವರ್ಷವಿಡೀ ಬಿಡುವಿಲ್ಲದ ದುಡಿಮೆ ಅವರದಾಗಿತ್ತು. ಅದಕ್ಕೆ ರಾಜಪ್ರೋತ್ಸಾಹ ಇದ್ದೇ ಇತ್ತು. ಕ್ರಮೇಣ ಯುದ್ಧದ ಸ್ವಭಾವವೇ ಬದಲಾಗತೊಡಗಿತು. ಕತ್ತಿ ಹಿಡಿದು ಹೋರಾಡುವುದು ತಪ್ಪಿ ಬಂದೂಕುಗಳು ಬಂದುವು. ಅನಂತರ ಬಾಂಬುಗಳು ಬಂದುವು. ಹೀಗಾಗಿ ಆಯುಧಗಳ ತಯಾರಿಕೆ ಬೇರೊಂದು ದಿಕ್ಕನ್ನು ಹಿಡಿದು ಸಹಜವಾಗಿ ಕಮ್ಮಾರನಿಗೆ ಪೆಟ್ಟು ಬಿತ್ತು. ಬದಲಾಗುವ ಜಗತ್ತಿನೊಡನೆ ಪ್ರತಿಕ್ಷೇತ್ರವೂ ಬದಲಾಗಲೇ ಬೇಕಾಯಿತು. ಇದರಿಂದಾಗಿ ವಂಶಪಾರಂಪರ್ಯವಾಗಿ ಬರುತ್ತಿದ್ದ ಕಮ್ಮಾರಿಕೆ ಹರಿಗಡಿಯುವಂತಾಗಿದೆ. ಕಮ್ಮಾರನ ಮಗ ಅದೇ ಕಸಬನ್ನು ಹಿಡಿಯದೆ ಬೇರೆ ಜೀವನೋಪಾಯ ಮಾರ್ಗವನ್ನು ಹುಡುಕಬೇಕಾಗಿದೆ. ಅಂದರೆ ಕಮ್ಮಾರಿಕೆ ಎನ್ನುವ ಗ್ರಾಮಕಲೆ ಮಾಯವಾಗುತ್ತಿದೆ. ಇದೇ ತತ್ತ್ವ ಎಲ್ಲ ಕಸುಬಿನವರಿಗೂ ಅನ್ವಯಿಸುತ್ತದೆ. ಯಂತ್ರ ಪ್ರವೇಶವಾದ ಕಡೆಯೆಲ್ಲ ಗ್ರಾಮಕಲೆಯ ಸ್ವರೂಪ ಕಣ್ಮರೆಯಾಗುವುದು ಸಹಜವೇ. ಆದರೆ ಎಲ್ಲ ಸಣ್ಣಪುಟ್ಟ ಉಪಕರಣಗಳಿಗೂ ಯಂತ್ರವನ್ನೇ ಆಶ್ರಯಿಸುವುದು ಕಷ್ಟವಾಗುವುದರಿಂದ ಸಣ್ಣ ಪ್ರಮಾಣದಲ್ಲಿಯಾದರೂ ಕಮ್ಮಾರಿಕೆ ಉಳಿದುಬರುವುದರಲ್ಲಿ ಸಂಶಯವಿಲ್ಲ.