ವಿಷಯಕ್ಕೆ ಹೋಗು

ಆಲ್ಬರ್ಟ್ ಅಬ್ರಹಾಂ ಮೈಕಲ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್
ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್
ಜನನ
ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್

೧೮೫೨ ಡಿಸೆಂಬರ್ ೧೯
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಆಲ್ಬರ್ಟ್ ಅಬ್ರಹಾಂ ಮೈಕಲ್‌ಸನ್‌ (೧೮೫೨-೧೯೩೧) ಒಬ್ಬ ಜರ್ಮನ್ - ಅಮೆರಿಕನ್ ಭೌತವಿಜ್ಞಾನಿ.

ಬಾಲ್ಯ, ವಿದ್ಯಾಭ್ಯಾಸ

[ಬದಲಾಯಿಸಿ]

ಇವರು ಜರ್ಮನಿಯ (ಈಗ ಪೋಲೆಂಡ್ ದೇಶದಲ್ಲಿರುವ) ಸ್ಟ್ರೆಜೆಲ್ನೋ ಎಂಬ ಊರಿನಲ್ಲಿ ೧೮೫೨ರ ಡಿಸೆಂಬರ್ ೧೯ರಂದು ಜನಿಸಿದರು. ಪೋಲೆಂಡಿನ ಮಧ್ಯಮ ವರ್ಗದ ಯಹೂದ್ಯ ಕುಟುಂಬದಲ್ಲಿ ಜನನ. ಸುತ್ತಲಿನ ರಾಜಕೀಯ ಪರಿಸ್ಥಿತಿಯ ವಿಷಮತೆಯಿಂದಾಗಿ ಈತನ ತಂದೆತಾಯಿಯರು ಅಮೆರಿಕ ಸಂಯುಕ್ತ ಸಂಸ್ಥಾನಗಳ ಸ್ಯಾನ್ ಫ್ರಾನ್ಸಿಸ್ಕೊ ನಗರಕ್ಕೆ ವಲಸೆ ಹೋಗಬೇಕಾಯಿತು. (1858) ಎಳೆಯ ಮೈಕಲ್ಸನ್‍ನಿಗೆ ಬಾಲ್ಯದಿಂದಲೇ ವಿಜ್ಞಾನದಲ್ಲಿ ಅಪಾರ ಆಸಕ್ತಿ. ಉಪಾಧ್ಯಾಯರ ಉತ್ತೇಜನೆಯೂ ದೊರೆತದ್ದರಿಂದ ಇವನು ನೌಕಾಬಲದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಗಳಿಸುವುದು ಸಾಧ್ಯವಾಯಿತು. 1873ರಲ್ಲಿ ನೌಕಾಪರೀಕ್ಷೆಯ ಪದವೀಧರನಾಗಿ ನೌಕಾವಿಜ್ಞಾನ ವಿದ್ಯಾಲಯದಲ್ಲಿ ಭೌತವಿಜ್ಞಾನದ ಬೋಧಕನಾದ.

ವೃತ್ತಿಜೀವನ, ಕೊಡುಗೆಗಳು

[ಬದಲಾಯಿಸಿ]

ದೃಗ್ವಿಜ್ಞಾನ ಹಾಗೂ ಬೆಳಕಿನ ವೇಗವಿಜ್ಞಾನ ಅತೀವ ಕುತೂಹಲ ಕೆರಳಿಸಿದ್ದ ಕಾಲವದು. ಫೀಜ಼ೂ, ಫ್ಯೂಕಾ, ಕಾರ್ನೋ ಮೊದಲಾದ ವಿಜ್ಞಾನಿಗಳು ಬೆಳಕಿನ ವೇಗ ನಿರ್ಧರಿಸಲು ನಡೆಸಿದ್ದ ಪ್ರಯೋಗಗಳ ಫಲಿತಾಂಶಗಳನ್ನು ಇನ್ನಷ್ಟು ನಿಖರಗೊಳಿಸುವ ದಿಶೆಯಲ್ಲಿ ತಾನೇ ರೂಪಿಸಿದ್ದ ಆವರ್ತನಶೀಲ ದೃಗುಪಕರಣದ ಸಹಾಯದಿಂದ ನಡೆಸಿದ ಪ್ರಯೋಗಗಳೊಡನೆ ಮೈಕಲ್ಸನ್ ಸಂಶೋಧನೆಯ ರಂಗದಲ್ಲಿ ತನ್ನ ಪ್ರಥಮ ಹೆಜ್ಜೆ ಇಟ್ಟ. ಇಂದು ಭೌತವಿಜ್ಞಾನದ ಮೂಲಭೂತ ಪರಿಮಾಣವೆಂದೂ ನಿರಪೇಕ್ಷ ಸ್ಥಿರಾಂಕವೆಂದೂ ಪರಿಗಣಿತವಾಗಿರುವ ಬೆಳಕಿನ ವೇಗದ ಮೌಲ್ಯ ಸೆಕೆಂಡಿಗೆ 2,99,798 ಕಿ.ಮೀ ಎಂದು ಶೋಧಿಸಿದ (1878).[]

ಆ ದಿನಗಳಂದು ವೈಜ್ಞಾನಿಕ ಚಿಂತನೆ ಹರಿದ ಧಾಟಿ ಇದು: ಶಬ್ದ, ಬೆಳಕು ಎರಡು ವಿಭಿನ್ನ ಶಕ್ತಿರೂಪಗಳು; ಮೊದಲನೆಯದನ್ನು ಗ್ರಹಿಸಲು ಕಿವಿ, ಎರಡನೆಯದನ್ನು ಗ್ರಹಿಸಲು ಕಣ್ಣು ಎಂಬ ಇಂದ್ರಿಯಗಳು ಇವೆ. ಶಬ್ದದ ಪ್ರಸಾರ ನಿರ್ದ್ರವ್ಯತೆಯಲ್ಲಿ ಆಗದು, ವಾಯುಮಾಧ್ಯಮ ಅದಕ್ಕೆ ಅನಿವಾರ್ಯ ಅಗತ್ಯ ಎಂಬುದು ತಿಳಿದಿತ್ತು. ಬೆಳಕಿನ ಪ್ರಸಾರಕ್ಕಾದರೋ ವಾಯುಮಾಧ್ಯಮ ಇರಲಿಲ್ಲ. ಬೆಳಕಿನ ಪ್ರಸಾರವನ್ನು ಆಗಗೊಳಿಸಬಲ್ಲ ಮಾಧ್ಯಮವಾಗಿ ವಿಶ್ವಸರ್ವತ್ರ ದೀಪ್ತಿವಾಹಕ ಈತರ್ ವ್ಯಾಪಿಸಿದೆ ಎಂದು ಭಾವಿಸಲಾಯಿತು. ವಾಯು ಮಂಡಲದ ಹೊರಗಿನ ವಸ್ತುಗಳ ಸಾಮಾನ್ಯ ಘಟಕವನ್ನೂ ಅರಿಸ್ಟಾಟಲ್ ಈತರ್ ಎಂದು ವ್ಯಾಖ್ಯಾನಿಸಿದ್ದ. ಆತನ ಪ್ರಕಾರ ಪಂಚಭೂತಗಳ ಪೈಕಿ ಇದೇ ಐದನೆಯದು. (ಮಣ್ಣು, ನೀರು, ಗಾಳಿ, ಬೆಂಕಿ ಉಳಿದ ನಾಲ್ಕು). ವಿಶ್ವದ ಮೂಲ ಘಟಕಗಳಿವು.

ಅಂದಮೇಲೆ ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆ ಎನ್ನುವುದು ಈತರ್ ಕಡಲಿನಲ್ಲಿಯ ನಿರಂತರ ಈಸುವಿಕೆ ಎಂಬುದು ಸ್ಪಷ್ಟ. ನೀರಿನಲ್ಲಿ ಈಸುವುದೆಂದರೆ ಹೊಲವನ್ನು ಸೀಳಿ ಮುಂದೆ ಹೋಗುವುದು ಎಂದರ್ಥ. ಭೂಮಿ ಈತರ್ ಕಡಲನ್ನು ಹೀಗೆ ಸೀಳಿ ಸಾಗುವಾಗ ಎದುರು ದಿಶೆಯಲ್ಲಿ ಈತರ್ ಪ್ರವಾಹ ಹರಿಯಬೇಕಷ್ಟೆ; ಈ ಪ್ರವಾಹದ ಎದುರು ಪ್ರಸಾರವಾಗುವ ಬೆಳಕಿನ ವೇಗ ಕುಂಠಿತವಾಗಬೇಕು. ಇದರ ನೇರವಾಗುವುದರದು ಉತ್ಕರ್ಷಿತವಾಗಬೇಕು ಎಂಬುದಾಗಿ ತರ್ಕ ಮುಂದುವರಿಯಿತು.

ಈತರ್ ಕಡಲಿನಲ್ಲಿ ಭೂಮಿಯ ಸಾಪೇಕ್ಷ ಚಲನೆಯನ್ನು ಪರೀಕ್ಷಿಸಲು ಮೈಕಲ್ಸನ್ ವ್ಯತಿಕರಣ ವಕ್ರೀಭವನ ಮಾಪಕ (ಇಂಟರ್‌ಫೆರೆನ್ಸಿಯಲ್ ರಿಫ್ರ್ಯಾಕ್ಟೊ ಮೀಟರ್) ಎಂಬ ದೃಗುಪಕರಣ ರಚಿಸಿದ. ಬೆಳಕಿನ ಏಕವರ್ಣೀಯ ಧೂಲವನ್ನು (ಮಾನೋಕ್ರೊಮಾಟಿಕ್ ಬೀಮ್) ಎರಡು ಸಣ್ಣ ಧೂಲಗಳಾಗಿ ಸೀಳಿ, ಆ ಎರಡು ಧೂಲಗಳು ಒಂದಕ್ಕೊಂದು ಲಂಬವಾಗಿ ಪ್ರಯಾಣಿಸುವ ಹಾಗೆ ಮಾಡುವ ವ್ಯವಸ್ಥೆ ಮೈಕಲ್‌ಸನ್‌ರವರು ನಿರ್ಮಿಸಿದ್ದ ವ್ಯತೀಕರಣಮಾಪಕದಲ್ಲಿದ್ದಿತು. ಆ ಎರಡು ಧೂಲಗಳೂ ಮತ್ತೆ ಸಂಯೋಜನೆ ಹೊಂದುವ ವ್ಯವಸ್ಥೆಯೂ ಅದರಲ್ಲಿತ್ತು. ಸಂಪೂರ್ಣ ಮಾಪಕವನ್ನು ಪಾದರಸದ ಮೇಲೆ ತೇಲುವಂತೆ ಇಡಲಾಗಿದ್ದು, ಆ ಮಾಪಕವನ್ನು ತಿರುಗಿಸುತ್ತಾ ಬೇರೆಬೇರೆ ಕೋನದಲ್ಲಿ ಬೆಳಕು ಸಾಗುವ ಹಾಗೆ ಮಾಡಬಹುದಿತ್ತು. ಬೆಳಕಿನ ಕೂರ್ಚದ (ಪೆನ್ಸಿಲ್) ಮತ್ತು ಸಂಘಟನೆಯಿಂದ ಉಂಟಾಗುವ ವ್ಯತಿಕರಣ ಪಟ್ಟೆಗಳ (ಇಂಟರ್‌ಫೆರೆನ್ಸ್ ಬ್ಯಾಂಡ್) ಪಲ್ಲಟದಿಂದ ಭೂಮಿಯ ಸಾಪೇಕ್ಷ ಚಲನೆಯನ್ನು ಸರ್ವವ್ಯಾಪಿ ಈತರ್ ಅಥವಾ ಇನ್ನಾವುದೇ ನಿಶ್ಚಲ ನಕ್ಷತ್ರದೊಡನೆ ತುಲನಾತ್ಮಕವಾಗಿ ನಿರ್ಧರಿಸಲು ಸಾಧ್ಯವೆಂದು ಆತನ ಎಣಿಕೆಗಳನ್ನು, ಬರ್ಲಿನ್ ನಗರದಲ್ಲಿ ನಡೆಸಿದ ಪ್ರಯೋಗಗಳು ದೂರ ತಳ್ಳಿದವು. ಈ ಫಲಿತಾಂಶಗಳು ಅಂದಿನ ಪ್ರಖ್ಯಾತ ವಿಜ್ಞಾನಿಗಳಾದ ಲೊರೆಂಟ್ಸ್, ತಾಮ್ಸನ್, ಫಿಟ್ಸ್‌ಜೆರಾಲ್ಡ್ ಮೊದಲಾದವರ ಕುತೂಹಲ ಕೆರಳಿಸಿತು. 1881 ರಲ್ಲಿ ಒಹಾಯೋದ ಕ್ಲೀವ್‌ಲ್ಯಾಂಡಿನಲ್ಲಿಯ ಸ್ಕೂಲ್ ಆಫ್ ಅಪ್ಲೈಡ್ ಸೈನ್ಸ್‌ನಲ್ಲಿ ಮಹೋಪಾಧ್ಯಾಯನಾಗಿ ನೇಮಕಗೊಂಡ ಮೈಕಲ್ಸನ್, 1885 ರಲ್ಲಿ ಹಿರಿಯ ಪ್ರಯೋಗಶೀಲ ವಿಜ್ಞಾನಿ ಇ. ಡಬ್ಲ್ಯು. ಮಾರ್ಲೆ ಜೊತೆ ತನ್ನ ಪ್ರಯೋಗ ಮಾಲೆಯನ್ನು ಆರಂಭಿಸಿದ. ಫೀಜ಼ೂ ಬೆಳಕಿನ ವೇಗ ನಿರ್ಧರಿಸಲು 1859 ರಲ್ಲಿ ನಡೆಸಿದ್ದ ಪ್ರಯೋಗಗಳ ಫಲಿತಾಂಶ ಸಮಂಜಸತೆಯನ್ನು ಪರೀಕ್ಷಿಸುವುದು ಈ ಮಾಲೆಯ ಪ್ರಥಮ ಗುರಿ. ಪುನಾರಚಿಸಿ ಉತ್ತಮಗೊಳಿಸಿದ ತಮ್ಮ ಈತರ್ ಪಲ್ಲಟ ಪ್ರಯೋಗದ ಉಪಕರಣ ಮಗದೊಮ್ಮೆ ನಿರಾಶಾದಾಯಕ ಫಲಿತಾಂಶಗಳನ್ನು ನೀಡಿತು. ಅಂದರೆ ಈತರಿನ ಅಸ್ತಿತ್ವವನ್ನು ಸ್ಥಿರೀಕರಿಸಬಲ್ಲ ಯಾವ ಫಲಿತಾಂಶವೂ ಅವರಿಗೆ ದೊರೆಯಲಿಲ್ಲ. ಈ ಪ್ರಯೋಗಕ್ಕೆ ‘ಮೈಕಲ್‌ಸನ್-ಮಾರ‍್ಲೆ ಪ್ರಯೋಗ’ ಎಂಬುದಾಗಿ ಕರೆಯಲಾಯಿತು. ಈ ಪ್ರಯೋಗದ ಪರಿಣಾಮಗಳು ಪ್ರಖ್ಯಾತ ವಿಜ್ಞಾನಿ ಐನ್‌ಸ್ಟೈನ್‌ರವರು ೧೯೦೫ರಲ್ಲಿ ಪ್ರತಿಪಾದಿಸಿದ ‘ವಿಶೇಷ ಸಾಪೇಕ್ಷತಾ ಸಿದ್ಧಾಂತ’ಕ್ಕೆ (ಸ್ಪೆಷಲ್ ಥಿಯರಿ ಆಫ್ ರಿಲೇಟಿವಿಟಿ) ಪ್ರಮುಖ ಆಕರ ಪ್ರಯೋಗವಾಯಿತು.[] ಯಶಸ್ಸು ಸಿಗದೇ ವಿಜ್ಞಾನಿದ್ವಯರು ತಮ್ಮ ಪ್ರಯತ್ನಗಳನ್ನು ಕೈಬಿಟ್ಟು ಉಪಕರಣದ ಇತರ ಉಪಯೋಗಗಳ ಬಗ್ಗೆ ಚಿಂತಿಸತೊಡಗಿದರು. ಭೂಮಿಯ ಸಾಪೇಕ್ಷ ಚಲನೆಯನ್ನು ಬೆಳಕಿನ ವೇಗದೊಡನೆ ತುಲನಾತ್ಮಕವಾಗಿ ಆಳವಾಗಿ ಅಭ್ಯಸಿಸಿದ ಮೈಕಲ್ಸನ್‌ನ ಅವಿರತ ಸಂಶೋಧನೆ ನಾಕ್ಷತ್ರಿಕ ವ್ಯತಿಕರಣಮಾಪಕ (ಸ್ಟೆಲ್ಲಾರ್ ಇಂಟರ್‌ಫೆರಾಮೀಟರ್) ಎಂಬ ಜಟಿಲ ಆದರೆ ಅತ್ಯುಪಯುಕ್ತ ದೃಗುಪಕರಣದ ಉಪಜ್ಞೆಗೆ ಕಾರಣವಾಯಿತು. ಇದರ ಸಹಾಯದಿಂದ ಸಾಮಾನ್ಯ ದೂರದರ್ಶಕ ಎಂದೂ ಮಾಪಿಸಲಾಗದ ಆರ್ದ್ರಾ ನಕ್ಷತ್ರದ ಕೋನೀಯವ್ಯಾಸವನ್ನು ನಿರ್ಧರಿಸುವುದು ಸಾಧ್ಯವಾಯಿತು (1920).

ಇಲ್ಲದ ಈತರನ್ನು ಉಂಟೆಂದು ಭಾವಿಸಿದ್ದೇ ಇಲ್ಲಿಯ ಮೂಲಭೂತ ದೋಷವೆಂದು ಐನ್‌ಸ್ಟೈನ್ ಸಾಧಿಸಿದರು. 1905 ರಲ್ಲಿ ಅವರು ಮಂಡಿಸಿದ ವಿಶೇಷ ಸಾಪೇಕ್ಷತಾ ಸಿದ್ಧಾಂತ ಯುಗಪ್ರವರ್ತಕವಾಯಿತು. ಇದರಲ್ಲಿ ಐನ್‌ಸ್ಟೈನ್ ಈತರಿನ ಅಸ್ತಿತ್ವವನ್ನು ನಿರಾಕರಿಸಿ ಬೆಳಕು ನಿರ್ದ್ರವ್ಯತೆಯಲ್ಲಿ ಚಲಿಸಬಲ್ಲ ಶಕ್ತಿ ವಿಶೇಷ ಎಂದು ಸಿದ್ಧಾಂತಿಸಿದರು. ನಿರ್ದ್ರವ್ಯತೆಯಲ್ಲಿ ಬೆಳಕಿನ ವೇಗವನ್ನು ಮೂಲಭೂತ ಪರಿಮಾಣವಾಗಿಯೂ ನಿರಪೇಕ್ಷ ಸ್ಥಿರಾಂಕವಾಗಿಯೂ ಪರಿಗಣಿಸಲಾಯಿತು. ಹೀಗೆ ಮೈಕಲ್ಸನ್ನನ ಪ್ರಯೋಗ ಭೌತವಿಜ್ಞಾನದ ಪ್ರವಾಹದಲ್ಲಿ ಒಂದು ಪರ್ವಬಿಂದುವಾಗಿ ವಿಶೇಷ ಸಾಪೇಕ್ಷತಾ ಸಿದ್ಧಾಂತದ ಅಸ್ತಿಭಾರವಾಗಿದ್ದರೂ ಸ್ವತಃ ಸಂಪ್ರದಾಯಶೀಲರಾಗಿದ್ದ ಮೈಕಲ್ಸನ್ ಮಾತ್ರ ಈತರಿನ ಅಸ್ತಿತ್ವವನ್ನು ನಿರಾಕರಿಸಲು ಒಪ್ಪಲಿಲ್ಲ.

1880 ರಲ್ಲಿ ಮೈಕಲ್ಸನ್ ಜರ್ಮನಿಗೆ ತೆರಳಿ ಹೆಲ್ಮ್‌ಹೋಲ್ಟ್ಜ್, ಕ್ವಿಂಕೇ, ಲಿಪ್‌ಮನ್ ಮೊದಲಾದ ಮೇಧಾವಿಗಳ ಸಹಪಾಠಿಯಾಗಿ ತನ್ನ ಸ್ನಾತಕೋತ್ತರ ಶಿಕ್ಷಣ ಪಡೆದ. ಮುಂದೆ 1899 ರಲ್ಲಿ ನ್ಯೂ ಕ್ಲಾರ್ಕ್ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಮೆಸಾಚುಸೆಟ್ಸ್‌ಗೆ ತೆರಳಿ ಅಲ್ಲಿ ತಾನು ಹಾಗೂ ಮಾರ್ಲೆ ಮೊದಲೇ ಕನಸುಗಂಡಿದ್ದ ಮೀಟರಿನ (ಮೆಟ್ರಿಕ್ ಪದ್ಧತಿಯ ಉದ್ದಳತೆಯ ಏಕಮಾನ) ಉದ್ದವನ್ನು ದೃಗ್ವಿಧಾನಾನುಸಾರ ನಿಷ್ಕರ್ಷಿಸಲು ಪ್ರಯೋಗಗಳನ್ನು ಆರಂಭಿಸಿದ. ಮೊದಲು ಸೋಡಿಯಮ್ ಧಾತುವಿನ ಹಳದಿ ಬೆಳಕಿನ ಅಲೆಗಳು ಅಳತೆಯ ಏಕಮಾನ ಆಗಬಹುದೆಂದು ಯೋಚಿಸಿದ. ಮುಂದೆ ಕ್ಯಾಡ್ಮಿಯಮ್‌ಜನ್ಯ ಕೆಂಪು ಬೆಳಕಿನ ಅಲೆಗಳು ಹೆಚ್ಚು ನಿಖರವೆಂದು ಕಂಡುಕೊಂಡ. ಈ ಸೂಕ್ಷ್ಮ ಹಾಗೂ ಜಟಿಲ ಪ್ರಯೋಗಗಳಿಂದ ಮೈಕಲ್ಸನ್ ಪ್ಯಾರಿಸ್‌ನಲ್ಲಿರುವ ಅಧಿಕೃತ ಮೀಟರ್‌ದಂಡದ ಉದ್ದ ಕ್ಯಾಡ್ಮಿಯಮ್ ಕೆಂಪು ಬೆಳಕಿನ ಅಲೆಗಳ 1553163.5 ಅಲೆಯುದ್ದಗಳಷ್ಟೆಂದು ನಿರ್ಧರಿಸಿದ (1893). ಈ ಅಪೂರ್ವ ಸಾಧನೆ ಇವನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿತು. (1960 ರಿಂದ ಈಚೆಗೆ ಕ್ಯಾಡ್ಮಿಯಮ್ ಕೆಂಪು ಬೆಳಕಿನ ಬದಲು 1893 ರಲ್ಲಿ ಗೊತ್ತಿಲ್ಲದಿದ್ದ ವಿರಳ ಅನಿಲ ಕ್ರಿಪ್ಟಾನ್ ಅನಿಲಜನ್ಯ ಬೆಳಕನ್ನು ಅಳೆಯುವ ಸಾಧನವಾಗಿ ಬಳಸುವುದು ರೂಢಿಗೆ ಬಂದಿದೆ.) 1893 ರಲ್ಲಿ ಷಿಕಾಗೊ ನಗರದ ನ್ಯೂ ಯೂನಿವರ್ಸಿಟಿಯಲ್ಲಿ ವಿಜ್ಞಾನದ ಮುಖ್ಯಸ್ಥನಾಗಿ ನೇಮಕಗೊಂಡ ಈತ ಖಭೌತರೋಹಿತವಿಜ್ಞಾನ (ಆಸ್ಟ್ರೋಫಿಸಿಕಲ್ ಸ್ಪೆಕ್ಟ್ರೋಸ್ಕೊಪಿ), ನಮನಜಾಲಕ (ಡಿಫ್ರಾಕ್ಷನ್ ಗ್ರೇಟಿಂಗ್) ಹಾಗೂ ಸೋಪಾನವ್ಯೂಹದರ್ಪಣ ರೋಹಿತವಿಜ್ಞಾನ (ಎಕೆಲಾನ್ ಸ್ಪೆಕ್ಟ್ರೋಸ್ಕೊಪಿ) ಇವುಗಳಲ್ಲಿ ತೀವ್ರ ಸಂಶೋಧನೆ ನಡೆಸಿದ. ಈ ಬೃಹತ್ ಸಾಧನೆಯನ್ನು ಗುರುತಿಸಿದ ಅಮೆರಿಕದ ಸರ್ಕಾರ ಇವನನ್ನು ದೇಶದ ಅಗ್ರಗಣ್ಯ ಪ್ರಯೋಗಶೀಲ ವಿಜ್ಞಾನಿಯೆಂದು ಗೌರವಿಸಿತು. ಕಳಶಪ್ರಾಯನಾಗಿ 1907 ರಲ್ಲಿ ಈತನಿಗೆ ನೊಬೆಲ್ ಪಾರಿತೋಷಕ ದೊರೆಯಿತು.[]

ಮೈಕಲ್ಸನ್ 1910-11 ಅವಧಿಯಲ್ಲಿ ಅಮೆರಿಕನ್ ಫಿಸಿಕಲ್ ಸೊಸೈಟಿ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್‌ನ ಅಧ್ಯಕ್ಷನಾಗಿಯೂ 1923-27 ಅವಧಿಯಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನ ಅಧ್ಯಕ್ಷನಾಗಿಯೂ ಸೇವೆಸಲ್ಲಿಸಿದ. ಅರವತ್ತೈದನೆಯ ವಯಸ್ಸಿನಲ್ಲಿ, ಈತ ದೃಗ್ವ್ಯಾಪ್ತಿಶೋಧಕ (ಆಪ್ಟಿಕಲ್ ರೇಂಜ್ ಫೈಂಡರ್) ಎಂಬ ಉಪಕರಣವನ್ನು ಅಮೆರಿಕದ ನೌಕಾಬಲಕ್ಕಾಗಿ ರೂಪಿಸಿದ. ಇದಲ್ಲದೆ ನಮನ ಜಾಲಕಕ್ಕೆ ರೇಖೆಗಳನ್ನು ಅಳೆಯುವ ಯಂತ್ರವನ್ನು ವಿನ್ಯಾಸಗೊಳಿಸಿದ ಕೂಡ.

ಭೂಮಿಯ ಮೇಲೆ ಸೂರ್ಯ ಹಾಗೂ ಚಂದ್ರರ ಗುರುತ್ವಬಲಗಳ ಪ್ರಭಾವದ ತೀಕ್ಷ್ಣತೆಯನ್ನು ಆ ನೀರಿನ ಮಟ್ಟದ ಉಬ್ಬರವಿಳಿತಗಳ ಸೂಕ್ಷ್ಮ ಅವಲೋಕನದಿಂದ ಶೋಧಿಸಬಹುದೆಂದು ಕುತೂಹಲಕಾರಿ ವಿಧಾನ ರೂಪಿಸಿದ. ಈ ವಿಶಿಷ್ಟ ಪ್ರಯೋಗದಿಂದ ಈತ ಗುರುತ್ವಾಕರ್ಷಣೆಯ ಫಲವಾಗಿ ಭೂಮಿ ತನ್ನ ಪಥದಿಂದ ಸುಮಾರು 35 ಸೆಂ.ಮೀ. ಆಚೀಚೆಗೆ ಸರಿಯುತ್ತದೆಂದು ಕಂಡುಕೊಂಡ.

೧೯೨೬ರಲ್ಲಿ ಬೆಳಕಿನ ವೇಗದ ಮೌಲ್ಯ ಒಂದು ಸೆಕೆಂಡಿಗೆ ೨೯೯,೭೯೬+೪ ಕಿ.ಮೀ.ಗಳು ಎಂಬುದಾಗಿ ಮೈಕಲ್‌ಸನ್‌ರವರು ಕಂಡುಹಿಡಿದರು. (ಈಗ ಅದರ ಮೌಲ್ಯ ಒಂದು ಸೆಕೆಂಡಿಗೆ ೨೯೯,೭೯೨.೫ ಕಿ.ಮೀ.ಗಳು). ಹಾಗೆಯೇ ಇನ್ನೊಬ್ಬ ವಿಜ್ಞಾನಿ ಪೀಟರ್ ಝೀಮನ್ ಪ್ರತಿಪಾದಿಸಿದ ‘ಝೀಮನ್ ಪರಿಣಾಮ’ದ ಬಗ್ಗೆ ಅಧ್ಯಯನ ನಡೆಸಲು ಎಖೆಲಾನ್ ರೋಹಿತ-ಲೇಖ (ಸ್ಪೆಕ್ಟ್ರೋಗ್ರಾಫ್) ಎಂಬ ಉಪಕರಣವನ್ನು ಮೈಕಲ್‌ಸನ್ ೧೮೯೮ರಲ್ಲಿ ನಿರ್ಮಿಸಿದರು.

ಮೈಕಲ್ಸನ್ ಕೊನೆಗಾಲದಲ್ಲಿ ಪಾರ್ಶ್ವವಾಯು ಪೀಡಿತನಾಗಿ ಕ್ಯಾಲಿಫೋರ್ನಿಯದ ಪ್ಯಾಸಡೆನಾದಲ್ಲಿ 1931 ಮೇ 9 ರಂದು ನಿಧನ ಹೊಂದಿದ.[]

ಉಲ್ಲೇಖಗಳು

[ಬದಲಾಯಿಸಿ]
  1. In 1879 a letter from James Clerk Maxwell to the astronomer David Peck Todd came to the attention of Michelson, possibly giving him considerable motivation. See the book Schwinger, J. (1986). Einstein's Legacy. Scientific American Library. 2012 e-book.
  2. http://www.famousscientists.org/albert-abraham-michelson/
  3. https://www.nobelprize.org/nobel_prizes/physics/laureates/1907/michelson-bio.html
  4. In November 1929, at the French Academy of Sciences, Michelson's death was erroneously announced, see http://cnum.cnam.fr/CGI/fpage.cgi?4KY28.118/97/100/598/5/588 and http://cnum.cnam.fr/CGI/fpage.cgi?4KY28.118/183/100/598/5/588

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]