ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್
Albert Abraham Michelson2.jpg
ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್
ಜನನ
ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್

೧೮೫೨ ಡಿಸೆಂಬರ್ ೧೯
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್‌ರವರು ಜರ್ಮನಿಯ (ಈಗ ಪೋಲೆಂಡ್ ದೇಶದಲ್ಲಿರುವ) ಸ್ಟ್ರೆಜೆಲ್ನೋ ಎಂಬ ಊರಿನಲ್ಲಿ ೧೮೫೨ರ ಡಿಸೆಂಬರ್ ೧೯ರಂದು ಜನಿಸಿದರು. ೧೮೮೭ರಲ್ಲಿ ಮಿಕೇಲ್‌ಸನ್‌ರವರು ‘ವ್ಯತೀಕರಣಮಾಪP’ವನ್ನು (Interferometer) ಅಭಿವೃದ್ಧಿಪಡಿಸಿದರು. ಬೆಳಕಿನ ಏಕವರ್ಣೀಯ ಧೂಲವನ್ನು (ಮಾನೋಕ್ರೊಮಾಟಿಕ್ ಬೀಮ್) ಎರಡು ಸಣ್ಣ ಧೂಲಗಳಾಗಿ ಸೀಳಿ, ಆ ಎರಡು ಧೂಲಗಳು ಒಂದಕ್ಕೊಂದು ಲಂಬವಾಗಿ ಪ್ರಯಾಣಿಸುವ ಹಾಗೆ ಮಾಡುವ ವ್ಯವಸ್ಥೆ ಮಿಕೇಲ್‌ಸನ್‌ರವರು ನಿರ್ಮಿಸಿದ್ದ ವ್ಯತೀಕರಣಮಾಪಕದಲ್ಲಿದ್ದಿತು. ಆ ಎರಡು ಧೂಲಗಳೂ ಮತ್ತೆ ಸಂಯೋಜನೆ ಹೊಂದುವ ವ್ಯವಸ್ಥೆಯೂ ಅದರಲ್ಲಿತ್ತು. ಸಂಪೂರ್ಣ ಮಾಪಕವನ್ನು ಪಾದರಸದ ಮೇಲೆ ತೇಲುವಂತೆ ಇಡಲಾಗಿದ್ದು, ಆ ಮಾಪಕವನ್ನು ತಿರುಗಿಸುತ್ತಾ ಬೇರೆಬೇರೆ ಕೋನದಲ್ಲಿ ಬೆಳಕು ಸಾಗುವ ಹಾಗೆ ಮಾಡಬಹುದಿತ್ತು. ಆ ಮಾಪಕವನ್ನು ಉಪಯೋಗಿಸಿಕೊಂಡು ಈಥರ್ ಮತ್ತು ಭೂಮಿಯ ವೇಗ ಒಂದೇ ಹೊಂದಾಣಿಕೆಯಲ್ಲಿದೆ ಎಂಬುದಾಗಿ ಮಿಕೇಲ್‌ಸನ್‌ರವರು ಕಂಡುಹಿಡಿದರು. ಮಿಕೇಲ್‌ಸನ್‌ರವರು ಇನ್ನೊಬ್ಬ ವಿಜ್ಞಾನಿ ಮಾರ‍್ಲೆಯ ಜೊತೆ ಇದೇ ಪ್ರಯೋಗಗಳನ್ನು ೧೮೮೭ರಲ್ಲಿ ಮತ್ತೆ ಮಾಡಿದರು. ಆಗಲೂ ಮೊದಲು ಮಾಡಿದ ಪ್ರಯೋಗದ ಫಲಿತಾಂಶವೇ ಪುನಾವರ್ತಿತವಾಯಿತು. ಹಾಗಾಗಿ ಈ ಪ್ರಯೋಗಕ್ಕೆ ‘ಮಿಕೇಲ್‌ಸನ್-ಮಾರ‍್ಲೆ ಪ್ರಯೋಗ’ ಎಂಬುದಾಗಿ ಕರೆಯಲಾಯಿತು. ಅಲ್ಲದೆ ಈ ಪ್ರಯೋಗದ ಪರಿಣಾಮಗಳು ಪ್ರಖ್ಯಾತ ವಿಜ್ಞಾನಿ ಐನ್‌ಸ್ಟೈನ್‌ರವರು ೧೯೦೫ರಲ್ಲಿ ಪ್ರತಿಪಾದಿಸಿದ ‘ವಿಶೇಷ ಸಾಪೇಕ್ಷತಾ ಸಿದ್ಧಾಂತ’ಕ್ಕೆ (ಸ್ಪೆಷಲ್ ಥಿಯರಿ ಆಫ್ ರಿಲೇಟಿವಿಟಿ) ಪ್ರಮುಖ ಆಕರ ಪ್ರಯೋಗವಾಯಿತು.[೧] ಆಕಾಶಕಾಯಗಳ (ಹೆವನ್ಲೀ ಬಾಡೀಸ್) ವ್ಯಾಸವನ್ನು ನಿರ್ಧರಿಸಲು ಕೂಡ ತನ್ನ ವ್ಯತೀಕರಣಮಾಪಕವನ್ನು ಉಪಯೋಗಿಸಿದ ಮಿಕೇಲ್‌ಸನ್‌ರವರು ೧೯೨೦ರಲ್ಲಿ ಮೊದಲ ಬಾರಿಗೆ ದೈತ್ಯ ನಕ್ಷತ್ರ ಬೆಟೆಲ್‌ಗಾಸ್‌ನ ಗಾತ್ರವನ್ನು ಕಂಡುಹಿಡಿದ. ೧೯೨೬ರಲ್ಲಿ ಬೆಳಕಿನ ವೇಗದ ಮೌಲ್ಯ ಒಂದು ಸೆಕೆಂಡಿಗೆ ೨೯೯,೭೯೬+೪ ಕಿ.ಮೀ.ಗಳು ಎಂಬುದಾಗಿ ಮಿಕೇಲ್‌ಸನ್‌ರವರು ಕಂಡುಹಿಡಿದರು. (ಈಗ ಅದರ ಮೌಲ್ಯ ಒಂದು ಸೆಕೆಂಡಿಗೆ ೨೯೯,೭೯೨.೫ ಕಿ.ಮೀ.ಗಳು). ಹಾಗೆಯೇ ಇನ್ನೊಬ್ಬ ವಿಜ್ಞಾನಿ ಪೀಟರ್ ಝೀಮನ್ ಪ್ರತಿಪಾದಿಸಿದ ‘ಝೀಮನ್ ಪರಿಣಾಮ’ದ ಬಗ್ಗೆ ಅಧ್ಯಯನ ನಡೆಸಲು ಎಖೆಲಾನ್ ರೋಹಿತ-ಲೇಖ (ಸ್ಪೆಕ್ಟ್ರೋಗ್ರಾಫ್) ಎಂಬ ಉಪಕರಣವನ್ನು ಮಿಕೇಲ್‌ಸನ್ ೧೮೯೮ರಲ್ಲಿ ನಿರ್ಮಿಸಿದರು. ಮಿಕೇಲ್‌ಸನ್‌ರವರು ವಿಜ್ಞಾನಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಅವರಿಗೆ ೧೯೦೭ರಲ್ಲಿ ಭೌತವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿ ನೀಡಲಾಯಿತು.[೨] ಮಿಕೇಲ್‌ಸನ್ ೧೯೩೧ರ ಮೇ ೯ರಂದು ಮರಣಿಸಿದರು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]