ವಿಷಯಕ್ಕೆ ಹೋಗು

ಅಂಗರಚನಾವಿಜ್ಞಾನ (ಆಯುರ್ವೇದದಲ್ಲಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಗರಚನಾವಿಜ್ಞಾನ (ಆಯುರ್ವೇದದಲ್ಲಿ) ಬೃಹತ್ತಾಗಿ ಬೆಳೆದುಬಂದಿದೆ. ಇದು ಪ್ರಾಚೀನ ಜ್ಞಾನಗಳಲ್ಲಿ ಮುಖ್ಯವಾದುದು.

ವೇದಗಳ ಕಾಲದಲ್ಲಿ[ಬದಲಾಯಿಸಿ]

ಸಿಂಧೂನದಿ ಕಣಿವೆಯ (ಹರಪ್ಪ, ಮೊಹೆಂಜೋದಾರೊ, ಚನ್ಹುದಾರೊ) ಸಂಸ್ಕೃತಿ ಪ್ರ.ಶ.ಪು 1500ರ ಹೊತ್ತಿಗೆ ಅನಿರ್ದಿಷ್ಟ ಕಾರಣದಿಂದ ಹೇಳಹೆಸರಿಲ್ಲದೆ ನಿರ್ನಾಮವಾಯಿತೆಂದು ಚರಿತ್ರಕಾರರ ಮತ. ಅಲ್ಲಿ ದೊರೆತ ಲಿಪಿಗಳನ್ನು ಖಚಿತವಾಣಿ ಓದಲಿಕ್ಕಾಗಿಲ್ಲವಾದುದರಿಂದ ಅದರ ಕಾಲ ವೇದಗಳಿಗಿಂತಲೂ ಹಿಂದಿನದೆನ್ನುವರು. ವೇದಗಳ ಕಾಲ ಪ್ರ.ಶ.ಪು 1200 ರಿಂದ 800ರವರೆಗೆ ಎಂದು ನಿರ್ಣಯವಾಗಿದೆ. ಋಗ್ವೇದಕ್ಕಿಂತಲೂ ಹಳೆಯದಾದ ಅಥರ್ವವೇದಕ್ಕೂ ಹರಪ್ಪ ಸಂಸ್ಕೃತಿಗೂ ಸಂಬಂಧಗಳು ಕಾಣುತ್ತವೆ. ಅಥರ್ವ ಎಂದರೆ ಪುಜಾರಿವೈದ್ಯ. ಇವನು ಮಂತ್ರಗಳನ್ನು ತಿಳಿದಿದ್ದ. ರಾಜನಿಗೂ ಬುದ್ಧಿವಾದ ಹೇಳುವವನಿದ್ದ. ಅಥರ್ವಣದಲ್ಲಿ ಸ್ವಾಸ್ಥ್ಯಾನ, ಬಲಿ, ಮಂಗಳ ಹೋಮ, ನಿಯಮ, ಪ್ರಾಯಶ್ಚಿತ್ತ, ಉಪವಾಸ ಮತ್ತು ಮಂತ್ರಗಳಿವೆ. ಅದರಲ್ಲಿ ಮೂಳೆಗಳು ಮತ್ತಿತರ ಅಂಗಗಳ ವಿಚಾರಗಳಿವೆ. ಪ್ರಾಣ, ಅಪಾನ, ವ್ಯಾನ, ಸಮಾನಗಳೆಂದು ನಾಲ್ಕು ವಾಯುಗಳನ್ನು ಹೇಳಲಾಗಿದೆ. ಓಜಸ್ಸು ಕೊಡಲು ಅಗ್ನಿಯ ಪ್ರಾರ್ಥನೆಯಿದೆ. ಧಮನಿ, ಸಿರ, ಸ್ನಾಯುಗಳ ವಿಚಾರಗಳಿವೆ.

ಬ್ರಾಹ್ಮಣ ಮತ್ತು ಉಪನಿಷತ್ತಿನ ಕಾಲದಲ್ಲಿ[ಬದಲಾಯಿಸಿ]

ಬ್ರಾಹ್ಮಣಗಳ, ಉಪನಿಷತ್ತುಗಳ ಕಾಲ ಪ್ರ.ಶ.ಪು. 800-600. ಗೋಪಥ ಬ್ರಾಹ್ಮಣವು ಅಥರ್ವದ ಬ್ರಾಹ್ಮಣ. ಇದಾದ ಮೇಲೆ ಛಾಂದೋಗ್ಯ ಉಪನಿಷತ್ತು ಸಿದ್ಧವಾಯಿತು. ಬ್ರಾಹ್ಮಣ ಉಪನಿಷತ್ತುಗಳಲ್ಲಿ ಆಯುರ್ವೇದದ ಮಾತಿಲ್ಲ. ಸರ್ಪವೇದ, ಪಿಶಾಚವೇದ, ಅಸುರವೇದಗಳು ಮಾತ್ರ ಉಪವೇದಗಳೆಂದು ಗೋಪಥ ಬ್ರಾಹ್ಮಣದಲ್ಲಿದೆ. ಅಥರ್ವದಲ್ಲಿ ಮಂತ್ರಗಳು, ಯಂತ್ರ(ತಾಯಿತಿ)ಗಳು, ಕಾಯಕಲ್ಪ, ರಸಾಯನ ಮತ್ತು ವಾಜೀಕರಣಗಳಿವೆ. ಹಿಂದೂ ತತ್ವಜ್ಞಾನ ಪ್ರ.ಶ.ಪು 600ರ ವರೆಗೆ ಬೆಳೆಯದೆ ಆಮೇಲೆ ಪ್ರ.ಶ.ಪು.100ರ ವರೆಗೆ ಚೆನ್ನಾಗಿ ಬೆಳೆದು ಸಾಂಖ್ಯ, ಯೋಗ, ನ್ಯಾಯ,ವೈಶೇಷಿಕ, ಮೀಮಾಂಸ ಮತ್ತು ವೇದಾಂತಗಳನ್ನೊಳಗೊಂಡಿತು. ಅದು ಸನಾತನ ಧರ್ಮಿಗಳ ಜ್ಞಾನವೃದ್ಧಿಯ ಕಾಲ.

ಆಯುರ್ವೇದದ ಉಗಮ[ಬದಲಾಯಿಸಿ]

ಪ್ರ.ಶ.ಪು. 600ರ ಹೊತ್ತಿಗೆ ತಂತ್ರಗಳ ಕಾಲ ಹೋಗಿ ಸಂಹಿತೆಗಳ ಕಾಲ ಆರಂಭವಾಗಿ ಆಯುರ್ವೇದ ರೂಪುಗೊಂಡು ಮಠಗಳಿಂದ ಮತ ಬೇರೆಯಾಯಿತು. ಸಂಹಿತೆಗಳಲ್ಲಿ ಹಳೆಯವು ಸುಶ್ರುತ, ಚರಕ, ಭೇಲ. ಭೇಲಸಂಹಿತೆಯ ಮೂಲರೂಪ ಇನ್ನೂ ಸಿಕ್ಕಿಲ್ಲ. ಬೌದ್ಧ ಜಾತಕಗಳ ಪ್ರಕಾರ ಬುದ್ಧನ ಕಾಲದಲ್ಲಿ ಅಂದರೆ ಪ್ರ.ಶ.ಪು 6ನೆಯ ಶತಮಾನದಲ್ಲಿ, ಕಾಶಿ ಮತ್ತು ತಕ್ಷಶಿಲೆಗಳಲ್ಲಿ ಎರಡು ವಿದ್ಯಾಕೇಂದ್ರಗಳಿದ್ದು, ಕಾಶಿಯಲ್ಲಿ ಧನ್ವಂತರಿಯೂ ತಕ್ಷಶಿಲೆಯಲ್ಲಿ ಆತ್ರೇಯ ಋಷಿಯೂ ಇದ್ದಂತೆ ತಿಳಿದುಬರುತ್ತದೆ. ಧನ್ವಂತರಿ ತನ್ನ ಗುರುವೆಂದು ಸುಶ್ರುತ ಮಹರ್ಷಿಯೂ ಆತ್ರೇಯ ತನ್ನ ಗುರುವೆಂದು ಚರಕನೂ ಬರೆದಿದ್ದಾರೆ. ಇವರ ಕಾಲ ಪ್ರ.ಶ.ಪು. 600 ರಿಂದ ಪ್ರ.ಶ. 200 ರ ಒಳಗೆ ಎಂದು ನಿಶ್ಚಯಿಸಲಾಗಿದೆ. ಚರಕ ಕಾನಿಷ್ಕನ ಕಾಲದಲ್ಲಿದ್ದುದಕ್ಕೆ ಕೆಲವು ನಿದರ್ಶನಗಳಿವೆ. ಆದರೆ ಕಾನಿಷ್ಕನ ಕಾಲವೇ ನಿರ್ಧಾರವಿಲ್ಲ (ಪ್ರ.ಶ.ಪು. 52 ರಿಂದ ಪ್ರ.ಶ. 123). ಮೂಲ ಗ್ರಂಥಗಳು ಜೀರ್ಣಗೊಂಡಂತೆ ಕಾಲ ಕಾಲಕ್ಕೆ ಬೇರೆ ಬೇರೆಯವರು ಪರಿಷ್ಕರಿಸಿ ಬರೆದಾಗ ತಾವು ಕಲಿತುದನ್ನೂ ಸೇರಿಸಿರುವುದರಿಂದ ಕಾಲ ನಿರ್ಣಯ ಕಷ್ಟ. ಈಗಿರುವ ಸುಶ್ರುತ ಸಂಹಿತೆಯಲ್ಲಿ ಕೊನೆಯಲ್ಲಿರುವ ಉತ್ತರ ತಂತ್ರ ಮೂಲ ಸುಶ್ರುತ ಬರೆದುದಲ್ಲ; ಪರಿಷ್ಕರಿಸುವಾಗ ಬೌದ್ಧ ಸಂನ್ಯಾಸಿ ನಾಗಾರ್ಜುನ ಉತ್ತರ ತಂತ್ರವನ್ನು ಸೇರಿಸಿದ್ದಾನೆಂದು ಕೆಲವರ ಅಭಿಪ್ರಾಯ. ಪ್ರಾಚೀನ ಭಾರತದ ಜ್ಞಾನವೃದ್ಧಿಯನ್ನೊಳಗೊಂಡ ಅತ್ಯುತ್ತಮ ಗ್ರಂಥ ಚರಕ ಸಂಹಿತೆ ಎಂದು ಜಿಮ್ಮರ್ ಬರೆದಿದ್ದಾನೆ. ಆದರೆ ಅದರಲ್ಲಿ ಔಷಧ ಚಿಕಿತ್ಸೆ ಹಾಗೂ ನ್ಯಾಯ, ವೈಶೇಷಿಕ ಮತ್ತು ಸಾಂಖ್ಯ ತತ್ತ್ವಗಳಿದ್ದು ದೇಹಶಾಸ್ತ್ರಕ್ಕೆ ಹೆಚ್ಚು ಮನ್ನಣೆ ಕೊಟ್ಟಿಲ್ಲ. ಪುರಾಣಗಳಲ್ಲಿ ಬ್ರಹ್ಮನೇ ಆಯುರ್ವೇದಕ್ಕೆ ಮೂಲ ಎಂದಿದೆ. ಬ್ರಹ್ಮ ಸಂಹಿತೆಯಲ್ಲಿ ಕೊಂಬು, ಜಿಗಣೆ, ಹರಿತ ಆಯುಧಗಳ ಬಳಕೆಯನ್ನು ಮೊದಲ ಬಾರಿ ವೈದ್ಯದಲ್ಲಿ ಸೇರಿಸಿದಂತಿದೆ. ಆಯುರ್ವೇದವನ್ನು ಪ್ರಜಾಪತಿ ದಕ್ಷನಿಗೆ ಬ್ರಹ್ಮ ಉಪದೇಶಿಸಿದ. ದಕ್ಷನಿಂದ ಅಶ್ವಿನೀ ಕುಮಾರರೂ ಇವರಿಂದ ಇಂದ್ರನೂ ಕಲಿತರು. ಅಥರ್ವ ಮತ್ತು ಯಜುರ್ವೇದಗಳಲ್ಲಿ ಔಷಧ ಮತ್ತು ಆರೋಗ್ಯಗಳಿಗೆ ಇಂದ್ರನನ್ನು ಪ್ರಾರ್ಥಿಸಲಾಗಿದೆ. ಭರದ್ವಾಜ, ಧನ್ವಂತರಿ ಮತ್ತು ಅತ್ರಿಮಹರ್ಷಿಗಳಿಗೆ ಇಂದ್ರ ಉಪದೇಶವನ್ನು ನೀಡಿದ. ಅತ್ರಿಯ ಮಗ ಅತ್ರೇಯ ತಕ್ಷಶಿಲೆಯಲ್ಲಿ ಇದ್ದಿರಬಹುದು. ಅತ್ರೇಯನಿಂದ ಕಲಿತ ಅಗ್ನಿವೇಶನು ಅಗ್ನಿವೇಶಸಂಹಿತೆಯನ್ನು ರಚಿಸಿ, ಕೆಲಕಾಲಾನಂತರ ಇದನ್ನು ಚರಕ ಪರಿಷ್ಕರಿಸಿದನೆಂದು ಪ್ರತೀತಿ. ಭರದ್ವಾಜನಿಂದ ಧನ್ವಂತರಿ ಕಲಿತಿರಬಹುದು. ಅಮೃತಮಂಥನದಲ್ಲಿ ಧನ್ವಂತರಿ ಹುಟ್ಟಿ ಲೋಕಕ್ಕೆ ಅಮೃತವನ್ನು ತಂದನೆಂದು ಮಹಾಭಾರತದಲ್ಲಿ ಹೇಳಿದೆ. ಧನ್ವಂತರಿಯೇ ಕಾಶಿರಾಜನಾಗಿದ್ದ ದಿವೋದಾಸನೆಂದೂ ಹೇಳಲಾಗಿದೆ. ಕಾಶಿರಾಜೇನ ಭಗವತಾಧನ್ವಂತರಿಣೋಪದಿಷ್ಟಂ ತಚ್ಛಿಷ್ಯೇಣ ವಿಶ್ವಾಮಿತ್ರ ಸುತೇನ ಸುಶ್ರುತೇನ ವಿರಚಿತಂ ಎಂದು ಸುಶ್ರುತನ ಮೂಲ ಗ್ರಂಥದಲ್ಲಿದೆ. ವೇದಗಳ ಕಾಲದಲ್ಲಿ ಮೊದಲ ವೈದ್ಯ ಸಮ್ಮೇಳನ ನಡೆಯಿತೆಂದು ಚರಕಸಂಹಿತೆಯಲ್ಲಿದೆ. ಅಂಗೀರಸ, ಜಮದಗ್ನಿ, ವಸಿಷ್ಠ, ಕಶ್ಯಪ, ಭೃಗು, ಅತ್ರೇಯ, ನಾರದ, ಅಗಸ್ತ್ಯ, ಭರದ್ವಾಜ, ವಿಶ್ವಾಮಿತ್ರ, ಚ್ಯವನ ಇತ್ಯಾದಿ 50ಕ್ಕೂ ಹೆಚ್ಚು ಋಷಿಗಳು ಸೇರಿದ್ದರು. ಇಂದ್ರನಿಂದ ವೈದ್ಯಜ್ಞಾನವನ್ನು ತರಬೇಕೆಂದು ನಿರ್ಣಯವಾಗಿ ಭರದ್ವಾಜ ಇಂದ್ರನಲ್ಲಿಗೆ ಹೋಗಲು ಮುಂದಾಗಿ, ವೈದ್ಯಜ್ಞಾನವನ್ನು ತಂದ. ಚರಕಸಂಹಿತೆಯಲ್ಲಿ ಅಂಗರಚನಾವಿಜ್ಞಾನಸ್ತ್ರ, ಶಸ್ತ್ರವೈದ್ಯಗಳ ವಿಚಾರ ಹೆಚ್ಚಿಲ್ಲ. ಔಷಧ, ಶಸ್ತ್ರ, ಶಾಸ್ತ್ರಗಳೆರಡನ್ನೂ ವೈದ್ಯ ವಿದ್ಯಾರ್ಥಿ ಕಲಿಯಬೇಕೆಂದು ಸುಶ್ರುತ, ಚರಕಸಂಹಿತೆಗಳಲ್ಲಿದೆ.ಅಂಗರಚನಾವಿಜ್ಞಾನ ವಿಚಾರ ಸುಶ್ರುತ ಸಂಹಿತೆಯಲ್ಲಿದ್ದಷ್ಟು ಇನ್ನಾವ ಆಯುರ್ವೇದ ಗ್ರಂಥದಲ್ಲೂ ಇಲ್ಲ.

ಪಾಶ್ಚಾತ್ಯರ ಅಭಿಪ್ರಾಯ[ಬದಲಾಯಿಸಿ]

ಪ್ರಾಚೀನ ಹಿಂದೂಗಳ ಅಂಗರಚನಾವಿಜ್ಞಾನ ಇಲ್ಲದ ಅಂಗಗಳನ್ನು ಎಣಿಸುವುದು ಎಂದು ಗ್ಯಾರಿಸನ್ನನೂ 5 ಮತ್ತು 7 ಅಂಕಿಗಳನ್ನು ಪದೇ ಪದೇ ಬಳಸುವುದು ಎಂದು ನಾಯ್ಬರ್ಗರ್ ಹೇಳಿದ್ದರೂ ಪ್ರ.ಶ.ಪು.600ಕ್ಕೂ ಹಳೆಯದಾಗಿರಬಹುದಾದ ಅಷ್ಟು ಹಿಂದಿನ ಕಾಲದ ತಿಳಿವಳಿಕೆ ವಿಶಾಲವಾಗಿ ತಪ್ಪಿಲ್ಲದಿರುವುದು ಆಶ್ಚರ್ಯಕರವೆಂದು ಎ.ಎಫ್.ರಡಾಲ್ಫ್ ಹಾರ್ನಲ್ ಹೇಳಿದ್ದಾನೆ. ಆಯುರ್ವೇದ ಗ್ರಂಥಗಳನ್ನು ಪರಿಶೀಲಿಸಿದ ಪಾಶ್ಚಾತ್ಯ ಚರಿತ್ರಕಾರರಲ್ಲಿ ಹಲವರಿಗೆ ತಮ್ಮ ಯುರೋಪಿನ ಚರಿತ್ರೆ ಹೆಚ್ಚು ಗೊತ್ತಿದ್ದುದರಿಂದ ಹಿಂದುಗಳು ಗ್ರೀಕರಿಂದಲೇ ಹೆಚ್ಚು ಕಲಿತಿರಬಹುದು ಎಂದು ಶಂಕಿಸಿದರು. ಆದರೆ ಪುರಾತನ ಹಿಂದುಗಳ ಶವಪರೀಕ್ಷೆಯ ವಿಧಾನ ಗ್ರೀಕರಿಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲದೆ ಗ್ರೀಕರ ವೈದ್ಯ ಹುಟ್ಟುವ ಮೊದಲೇ ಧನ್ವಂತರಿ ಆತ್ರೇಯರಿದ್ದರು. ಯುರೋಪಿನಲ್ಲಿದ್ದ ಶಸ್ತ್ರವೈದ್ಯಕ್ಕಿಂತ ಹಿಂದೂ ಶಸ್ತ್ರವೈದ್ಯ ವಿಶೇಷ ರೀತಿಯಲ್ಲಿ ಬಹಳ ಮುಂದುವರೆದಿತ್ತು. ಅಲೆಗ್ಸಾಂಡರ್ ಚಕ್ರವರ್ತಿ ಭಾರತದ ಮೇಲೆ ದಾಳಿಯಿಟ್ಟರೂ ನೆಲೆಯೂರದೆ ಹಿಂತಿರುಗಿದನು. ಚಂದ್ರಗುಪ್ತ ಮೌರ್ಯ ಮ್ಯಾಸಿಡೋನಿಯ ಪಡೆಗಳನ್ನು ಪಂಜಾಬಿನಿಂದ ಅಟ್ಟಿದ್ದರಿಂದ ಗ್ರೀಕರ ಪ್ರಭಾವವೇನಾದರೂ ಇದ್ದಿದ್ದರೆ ಹೆಚ್ಚು ದಿನ ಉಳಿಯಲಿಲ್ಲವೆಂದು ಪ್ರಸಿದ್ಧ ಚರಿತ್ರಕಾರ ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ. ಅಲೆಕ್ಸಾಂಡರನ ಅನುಯಾಯಿಗಳು ಹಿಂದಿರುಗುವಾಗ ಕೆಲವು ಹಿಂದೂ ವೈದ್ಯರನ್ನು ಗ್ರೀಸಿಗೆ ಕರೆದುಕೊಂಡು ಹೋದರೆಂದು ಕೆಲವರು ಬರೆದಿದ್ದಾರೆ. ಪ್ರ.ಶ.ಪು.400ರ ಹೊತ್ತಿಗೆ ಕ್ಟೆಸಿಯಾಸ್ನೂ ಪ್ರ.ಶ.ಪು 300ರ ಹೊತ್ತಿಗೆ ಮೆಗಾಸ್ತನೀಸ್ನೂ ಭಾರತದಲ್ಲಿದ್ದ ಯವನ ವೈದ್ಯರು. ಧನ್ವಂತರಿ ವೈದ್ಯದಲ್ಲಿರುವ ತೂಕ, ಅಳತೆಗಳು ಮಗಧ, ಕಳಿಂಗ ದೇಶಗಳಲ್ಲಿದ್ದವೇ ಆದ್ದರಿಂದ ಧನ್ವಂತರಿಯ ಶಿಷ್ಯ ಪರಂಪರೆಯ ಮೇಲೆ ಯವನರ ಪ್ರಭಾವಕ್ಕೆ ಆಸ್ಪದವಿರಲಿಲ್ಲವೆಂದು ವೀಬರ್ ಬರೆದಿದ್ದಾನೆ. ಖಗೋಳವಿಜ್ಞಾನದಲ್ಲಿ ಯವನರಿಂದ ಕಲಿತುದನ್ನೆಲ್ಲ ಹಿಂದೂ ಖಗೋಳ ವಿಜ್ಞಾನಿಗಳು ಬರಹದಲ್ಲಿ ಒಪ್ಪಿಕೊಂಡಿರುವುದರಿಂದ ಯವನರಿಂದ ವೈದ್ಯ ವಿದ್ಯೆಯನ್ನು ಕಲಿತಿದ್ದರೆ ಅದನ್ನೂ ಹಿಂದೂ ವೈದ್ಯರು ಒಪ್ಪಿರುತ್ತಿದ್ದರೆಂದು ಸರ್ ವಿಲಿಯಂ ಜೋನ್ ಬರೆದಿದ್ದಾನೆ. ಇನ್ನೂ ಹೆಚ್ಚಾಗಿ, ಗ್ರೀಕ್ ವೈದ್ಯವಿಜ್ಞಾನಕ್ಕೂ ಹಿಂದೂ ವೈದ್ಯವಿಜ್ಞಾನಕ್ಕೂ ಬಹಳ ವ್ಯತ್ಯಾಸಗಳಿವೆ. ಭಾರತದಲ್ಲಿ ಬೆಳೆಯುವ ಏಲಕ್ಕಿ, ಮೆಣಸು ಮುಂತಾದುವು ಗ್ರೀಕ್ ವೈದ್ಯದಲ್ಲೂ ಇರುವುದಲ್ಲದೆ, ಕೆಲವು ಸಂಸ್ಕೃತದ ಹೆಸರುಗಳ ಅಪಭ್ರಂಶಗಳೂ ಇವೆ.

ಸಂಹಿತೆಗಳಲ್ಲಿ[ಬದಲಾಯಿಸಿ]

ಚರಕ, ಭೇಲ ಸಂಹಿತೆಗಳು ಅಷ್ಟಾಂಗ ಆಯುರ್ವೇದದ ಸಂಪ್ರದಾಯದಲ್ಲಿವೆ. ಸೂತ್ರ, ನಿದಾನ, ವಿಮಾನ, ಶಾರೀರ, ಇಂದ್ರ್ಯ, ಚಿಕಿತ್ಸೆ, ಕಲ್ಪ, ಸಿದ್ಧ-ಇವು ಅಷ್ಟಾಂಗಗಳು. ಆಚಾರ್ಯ ವಾಗ್ಭಟ ಸುಮಾರು 650ರಲ್ಲಿ ಅಷ್ಟಾಂಗ ಹೃದಯವನ್ನು ಬರೆದ. ಸುಶ್ರುತಸಂಹಿತೆ, ಚರಕಸಂಹಿತೆ, ಅಷ್ಟಾಂಗ ಹೃದಯಗಳು ಆಯುರ್ವೇದದ ಬೃಹತ್ತ್ರಯಿಗಳೆಂದು ಹೆಸರಾಗಿವೆ. ನಿದಾನೇ ಮಾಧವಃ ಶ್ರೇಷ್ಠಃ ಸೂತ್ರಸ್ಥಾನೇ ತು ವಾಗ್ಭಟಃ| ಶಾರೀರೇ ಸುಶ್ರುತಃ ಪ್ರೋಕ್ತೋ ಚರಕಸ್ತು ಚಿಕಿತ್ಸಿತೇ|| ಶಾರೀರಕ್ಕೆ ಸುಶ್ರುತನೇ ಶ್ರೇಷ್ಠವೆಂದಿದೆ. ಸುಶ್ರುತ ಸಂಹಿತೆಯಲ್ಲಿ ಸೂತ್ರಸ್ಥಾನ, ನಿದಾನಸ್ಥಾನ, ಶಾರೀರಸ್ಥಾನ, ಚಿಕಿತ್ಸಸ್ಥಾನ, ಕಲ್ಪಸ್ಥಾನ ಮತ್ತು ಉತ್ತರ ತಂತ್ರಗಳಿವೆ. ಶಾರೀರಸ್ಥಾನವೇ ಅಂಗರಚನಾವಿಜ್ಞಾನವನ್ನು ಕುರಿತದ್ದು. ಇದರಲ್ಲಿ ಸರ್ವಭೂತಚಿಂತಾಶಾರೀರ, ಶುಕ್ರಶೋಣಿತಶುದ್ಧಿಶಾರೀರ, ಗರ್ಭಾವಕ್ರಾಂತಿ ಶಾರೀರ ಶರೀರಸಂಖ್ಯಾವ್ಯಾಕರಣಶಾರೀರ ಸಿರಾವ್ಯಧ ವಿಧಿಶಾರೀರ, ದಮನೀ ವ್ಯಾಕರಣ ಶಾರೀರ ಗರ್ಭಿಣೀವಾಕರಣ ಶಾರೀರ, ಗರ್ಭವ್ಯಾಕರಣಶಾರೀರ, ಮುಂತಾದ ಅಧ್ಯಾಯಗಳಿವೆ. ಇವುಗಳಲ್ಲಿ ಐದನೆಯದಾದ ಶರೀರಸಂಖ್ಯಾವ್ಯಾಕರಣಶಾರೀರದಲ್ಲಿ ಅಂಗರಚನಾವಿಜ್ಞಾನದ ವಿಚಾರಗಳು ಹೆಚ್ಚಾಗಿವೆ. ಇದರ ಕೊನೆಯಲ್ಲಿರುವ 50 ಮತ್ತು 51ನೆಯ ಶ್ಲೋಕಗಳಲ್ಲಿನ ಅರ್ಥ: ದೇಹದಲ್ಲಿ ಸೂಕ್ಷ್ಮವಾದುವನ್ನು ಜ್ಞಾನ ಮತ್ತು ತಪಸ್ಸಿನ ಕಣ್ಣುಗಳಿಂದಲೂ ನೋಡಬೇಕು. ಶರೀರವಿಜ್ಞಾನದಲ್ಲಿ ಪ್ರತ್ಯಕ್ಷ ನೋಡಿ ಅರ್ಥ ಮಾಡಿಕೊಂಡವನೇ ವಿಶಾರದ; ನೋಡಿ ಕೇಳಿದ್ದರಿಂದ ಸಂದೇಹ ಕಳೆಯುತ್ತದೆ. ಶರೀರದ ಭಾಗಗಳನ್ನು ಈ ರೀತಿ ಕಣ್ಣಿನಿಂದ ನೋಡಲು ಗ್ರೀಕ್ ವೈದ್ಯರಲ್ಲಿ ಪ್ರಾಶಸ್ತ್ಯವಿರಲಿಲ್ಲ. ಶಲ್ಯತಂತ್ರಜ್ಞಾನ ಬೇಕಾದವನು ಚೆನ್ನಾಗಿ ಶೋಧಿಸಿ ನೋಡಬೇಕು ಎಂದು 47ನೆಯ ಶ್ಲೋಕದಲ್ಲಿದೆ. 49ನೆಯ ಸೂತ್ರ ಶವವನ್ನು ಪರೀಕ್ಷಿಸುವ ರೀತಿಯನ್ನು ತಿಳಿಯಹೇಳುತ್ತದೆ. ಎಲ್ಲ ಪುರ್ಣವಾಗಿರುವ, ವಿಷದಿಂದ ಸಾಯದ, ಹೆಚ್ಚು ಕಾಲ ವ್ಯಾಧಿಪೀಡಿತನಾಗದಿದ್ದ, ಮುಪ್ಪಾಗದ, ಕರುಳಿನಿಂದ ಮಲವನ್ನು ತೆಗೆದ, ಪುರುಷನ ದೇಹವನ್ನು ತೊಗಟೆ, ಕುಶ ಇತ್ಯಾದಿ ಹುಲ್ಲುಗಳಿಂದ ಸುತ್ತಿ ಭದ್ರವಾದ ಪಂಜರದಲ್ಲಿ ಕಟ್ಟಿ ಒಂದು ನದಿಯ ಗೋಪ್ಯವಾದ ಸ್ಥಳದಲ್ಲಿಟ್ಟು ಏಳು ರಾತ್ರಿಗಳು ಕೊಳೆತಮೇಲೆ ಉಶೀರ ಎಂಬ ಸುಗಂಧವಾದ ಬೇರು, ಎಳೆಯ ಬಿದಿರು ಮತ್ತು ಬಲ್ವಜ ಎಂಬ ಹುಲ್ಲಿನಿಂದ ಕೂರ್ಚ(ಪೊರಕೆ)ವನ್ನು ಮಾಡಿಕೊಂಡು ಮೆಲ್ಲಮೆಲ್ಲಗೆ ಎಬ್ಬುತ್ತ ಚರ್ಮಾದಿ ಸಮಸ್ತವನ್ನೂ ಹೊರಗೆ ಮತ್ತು ಒಳಗೆ ಇರುವ ಅಂಗ ಪ್ರತ್ಯಂಗ ವಿಶೇಷಗಳನ್ನೂ ಯಥೋಕ್ತವಾಗಿ ಕಣ್ಣುಗಳಿಂದ ಲಕ್ಷಿಸಬೇಕು, ಹೀಗೆ ದೇಹದ ಭಾಗಗಳನ್ನು ಕಣ್ಣಿನಿಂದ ಅರ್ಥ ಮಾಡಿಕೊಂಡರೆ ವಿದ್ಯಾರ್ಥಿ ವಿಶಾರದನಾಗುವನೆಂಬುದಕ್ಕೆ ಪ್ರಾಮುಖ್ಯವಿದ್ದಾಗಲೂ ಸುಶ್ರುತನ ತರುವಾಯ ಕಾಲಕ್ರಮೇಣ ಈ ಶವಪರೀಕ್ಷಾ ವಿಧಾನ ಮೂಲೆಗೆ ಬಿತ್ತು. ಚರಕಸಂಹಿತೆಯಲ್ಲೇ ಈ ವಿಧಾನ ಹೇಳಿಲ್ಲ. ಈ ಅಭ್ಯಾಸ ತಪ್ಪಿದುದಕ್ಕೆ ಹಲವು ಕಾರಣಗಳನ್ನು ಕೊಡಲಾಗಿದೆ. ಧನ್ವಂತರಿ ಆತ್ರೇಯಾದಿಗಳು ಹೇಳಿದುದೆಲ್ಲ ವೇದ ಸಮಾನವೆಂದೂ ಇನ್ನು ಹೆಚ್ಚು ತಿಳಿಯಲು ಏನೂ ಇಲ್ಲವೆಂದೂ ಪ್ರಸಕ್ತಶಕದ ಆಯುರ್ವೇದ ವಿದ್ವಾಂಸರು ಅಸಹ್ಯವಾದ ಶವಪರೀಕ್ಷೆಯ ಗೊಡವೆಗೆ ಹೋಗಲಿಲ್ಲ. ಶಸ್ತ್ರವೈದ್ಯವೇ ಹೀನವಾದ ಕಸಬು ಎಂದು ಜನಾಭಿಪ್ರಾಯ ಹುಟ್ಟಿದುದರಿಂದ ಉತ್ತಮ ವರ್ಣದವರು ಶಸ್ತ್ರಚಿಕಿತ್ಸೆಯ ಗೋಜಿಗೆ ಹೋಗಲಿಲ್ಲ. ಶಸ್ತ್ರವೈದ್ಯವನ್ನು ಮಾಡುತ್ತಿದ್ದವರು ಕೀಳು ಜಾತಿಯವರಾದರು. ವೈದ್ಯ ಗಟ್ಟಿಗನಾದರೆ ತನ್ನ ಬುದ್ಧಿಶಕ್ತಿಯಿಂದಲೇ ರೋಗದ ಚಿಹ್ನೆಗಳನ್ನು ಅರಿತು ಔಷಧ ಕೊಡುವುದರಿಂದ ರೋಗ ಗುಣವಾಗುತ್ತದೆ. ಆದ್ದರಿಂದ ಶಸ್ತ್ರಚಿಕಿತ್ಸೆಯೇ ಬೇಡ. ಶವಪರೀಕ್ಷೆ ಮಾಡಿದರೂ ಅದರಲ್ಲಿ ತಿಳಿಯುವುದೇನಿದೆ ಎಂಬ ಭಾವನೆ ಹುಟ್ಟಿತು. ಪಾತ್ರವನ್ನರಿತು ಗಟ್ಟಿಗನಾದವನಿಗೆ ವಿದ್ಯಾದಾನ ಮಾಡಬೇಕು. ಇಲ್ಲದಿದ್ದರೆ ಜನರಿಗೆ ಕೆಡುಕಾಗುವುದು ಎನ್ನುವ ಸೂತ್ರದಿಂದ ಹಲವು ವಿದ್ವಾಂಸರು ಸುಗುಣಿಗಳೂ ಬುದ್ಧಿಶಕ್ತಿವಂತರೂ ಆದ ಶಿಷ್ಯರನ್ನು ಕಾಣದೆ, ತಮ್ಮ ವಿದ್ಯೆಯನ್ನು ಸರಿಯಾಗಿ ದಾನ ಮಾಡಲಾಗಲಿಲ್ಲ. ಇದರಿಂದ ಬಹಳ ವೈದ್ಯರಹಸ್ಯಗಳು ಹಾಳಾದಂತಿವೆ. ಸನಾತನ ಪದ್ಧತಿಯಲ್ಲಿ ಪ್ರಾಣಿಯಾಗಗಳು, ಪ್ರಾಣಿಬಲಿ ಮುಂತಾದುವು ವಾಡಿಕೆಯಲ್ಲಿದ್ದುವು. ಬೌದ್ಧ, ಜೈನ ಮತಗಳಿಂದ ಸನಾತನಧರ್ಮ ಅಳಿದುಹೋಗುವಂತಾಗಿ ಪ್ರಾಣಿಬಲಿಯ ಜೊತೆಯಲ್ಲಿ ಶವಪರೀಕ್ಷೆಯೂ ನಿಂತಿರಬಹುದು. ಸುಶ್ರುತನ ವಿಧಾನದಲ್ಲಿ ಕೊಳೆತ ಹೆಣದ ಭಾಗಗಳನ್ನು ನೋಡುತ್ತಿದ್ದುದರಿಂದ ಕೊಳೆತು ನೀರಾಗುತ್ತಿದ್ದ ಒಳಾಂಗಗಳ ವಿಚಾರ ಹೆಚ್ಚಾಗಿರಲಿಲ್ಲ.

ಸುಶ್ರುತ ಸಂಹಿತೆಯಲ್ಲಿ ಅಂಗರಚನಾವಿಜ್ಞಾನ[ಬದಲಾಯಿಸಿ]

ಸಾಂದರ್ಭಿಕ ಚಿತ್ರಗಳು

ಸುಶ್ರುತಸಂಹಿತೆಯ ಶಾರೀರಸ್ಥಾನದಲ್ಲಿರುವ ಅಂಗರಚನಾವಿಜ್ಞಾನದ ಅಂಶಗಳು ಹೀಗಿವೆ: ಪಂಚಭೂತಗಳು - ವಾಯು, ತೇಜಸ್ಸು, ಅಪ್ಪು, ಪೃಥ್ವಿ, ಆಕಾಶ, (ಇವುಗಳಿಂದ ದೇಹವಾಗಿದೆ) ಷಡಂಗಗಳು - 4 ಶಾಖೆಗಳಾದ ಕೈ ಕಾಲುಗಳು, 1 ಮಧ್ಯ(ಮುಂಡ ಅಥವಾ ಕೋಷ್ಠ), 1 ತಲೆ. ಪ್ರತ್ಯಂಗಗಳು - ಮಸ್ತಕ, ಉದರ, ಪೃಷ್ಠ(ಬೆನ್ನು), ನಾಭಿ, ಲಲಾಟ, ಮೂಗು, ಗಡ್ಡ, (ಚಿಬುಕ), ಬಸ್ತಿ (ಮೂತ್ರಾಶಯ), ಕತ್ತು - ಇವು ಒಂದೊಂದು. ಕಿವಿ, ಕಣ್ಣು, ಹುಬ್ಬು, ನಿತಂಬ, ಮೊಣಕಾಲು, ಮೊಳಕೈ, ತೋಳು, ತೊಡೆ - ಇವು ಎರಡೆರಡು, ಬೆರಳುಗಳು 20, ಸ್ರೋತಗಳು 22. ಸಂಖ್ಯೆಗಳು - ಚರ್ಮಗಳು 7, ಕಲೆಗಳು 7, ಆಶಯಗಳು 7, ಧಾತುಗಳು 7, ಸಿರಗಳು 700, ಪೇಶಿಗಳು 500, ಸ್ನಾಯುಗಳು 900, ಮೂಳೆಗಳು 300, ಸಂಧಿ(ಕೀಲು)ಗಳು 210, ಮರ್ಮಗಳು 107, ಧಮನಿಗಳು 24, ದೋಷಗಳು 3, ಮಲಗಳು 3, ಸ್ರೋತಗಳು 9, ಕಂಡರಗಳು 16, ಜಾಲಗಳು 16, ಕೂರ್ಚಗಳು 6, ರಜ್ಜುಗಳು 6, ಸೇವನಿಗಳು 7, ಸಂಘಾತಗಳು 14, ಸೀಮಂತಗಳು 14, ಯೋಗವಾಹ ಸ್ರೋತಗಳು 22, ಅಂತ್ರ (ಕರುಳು) ಗಳು 2. ಆಶಯಗಳು - ವಾತ, ಪಿತ್ತ, ಶ್ಲೇಷ್ಮ, ರಕ್ತ, ಆಮ, ಪಕ್ವ, ಗರ್ಭ. ಕರುಳುಗಳು - ಗಂಡಸರಲ್ಲಿ 3 1/2 ಮೊಳ (ವ್ಯಾಮ) ಹೆಂಗಸರಲ್ಲಿ 3 ಮೊಳ. ಮೂಳೆಗಳು - ಸುಶ್ರುತ ಸಂಹಿತೆಯಲ್ಲಿ ಇತರ ವಿಚಾರಗಳಿಗಿಂತ ಮೂಳೆಗಳ ವಿಚಾರ ಹೆಚ್ಚು ಸರಿಯಾಗಿದೆ. ಮೂಳೆಗಳು ಕೊಳೆತು ಹಾಳಾಗದೇ ಇರುವುದೇ ಇದಕ್ಕೆ ಕಾರಣವಿರಬಹುದು. ಮೂಳೆಗಳು 360 ಎಂದು ವೇದವಾದಿಗಳು ಹೇಳುತ್ತಾರೆ. ಶಲ್ಯತಂತ್ರದಲ್ಲಿರುವುದು ಮುನ್ನೂರೇ. ಅವು ಶಾಖೆಗಳಲ್ಲಿ 120, ಮುಂಡದಲ್ಲಿ 117, ತಲೆಕತ್ತುಗಳಲ್ಲಿ 63 ಇವೆ. ಒಂದೊಂದು ಬೆರಳಲ್ಲಿ 3 ರಂತೆ 15, ಹರಡಿನಲ್ಲಿ 10, (ಹಿಮ್ಮಡಿ)ಯಲ್ಲಿ 1, ಜಂಘ (ಮುಂಗಾಲು)ದಲ್ಲಿ 2 (ಟಿಬಿಯ, ಫಿಬುಲ), ಮಂಡಿ(ಜಾನು)ಯಲ್ಲಿ 1 (ಪಟೆಲ್ಲ), ತೊಡೆಯಲ್ಲಿ 1(ಫೀಮರ್)- ಈ ರೀತಿ ಒಂದು ಶಾಖೆಯಲ್ಲಿ 30ರಂತೆ 4ರಲ್ಲಿ 120: ಶ್ರೋಣಿ(ಪೆಲ್ವಿಸ್)ಯಲ್ಲಿ 5, ಗುದ 1(ಕಾಕ್ಸಿಕ್ಸ್), ಭಗ 1(ಪ್ಯುಬಿಸ್) ನಿತಂಬ 1, ತ್ರಿಕ 1(ಸ್ಯಾಕ್ರಮ್); ಒಂದು ಪಾಶರ್್ವದಲ್ಲಿ 36ರಂತೆ(12 ರಿಬ್ಬುಗಳು, 12 ಕಾರ್ಟಿಲೇಜುಗಳು, 12 ಟ್ರಾನ್ಸ್ ವರ್ಸ ಪ್ರೋಸೆಸ್ಸುಗಳು) ಎರಡೂ ಕಡೆ 72, ಬೆನ್ನಿನಲ್ಲಿ 30, ಉರಸ್ಸಿನಲ್ಲಿ (ಎದೆ) 8, ಅಂಸಫಲಕ (ಭುಜ)ಗಳಲ್ಲಿ 2, ಕತ್ತಿನಲ್ಲಿ 9, ಕಂಠನಾಡಿ (ಶ್ವಾಸನಾಳ)ಯಲ್ಲಿ 4, ಹನು (ಕೆಳದವಡೆ)ವಿನಲ್ಲಿ 2, ದಂತಗಳು 32, ಮೂಗಿನಲ್ಲಿ 3, ಅಂಗುಳ (ತಾಲು)ದಲ್ಲಿ 1, ಗಂಡಕರ್ಣ ಶಂಖಗಳಲ್ಲಿ ಒಂದೊಂದರಂತೆ ಎರಡು ಕಡೆ 6, ತಲೆಯಲ್ಲಿ 6. ಚರಕ ಸಂಹಿತೆಯಲ್ಲಿ ಕೊಟ್ಟಿರುವ 300 ಮೂಳೆಗಳ ಪಟ್ಟಿ ಹೀಗಿದೆ: ದಂತ 32, ದಂತೋಲೂಖಲ (ಹಲ್ಲುಗೂಡುಗಳು) 32, ನಖ 20, ಬೆರಳುಮೂಳೆ 60, ಪಾಣಿಪಾದಶಲಾಕಾ (ಅಂಗಾಲು ಅಂಗೈ ಮೂಳೆಗಳು)20, ಪಾಣಿಪಾದಶಲಾಕಾಧಿಷ್ಠಾನ 4, ಪಾಷಿರ್ಣ್ 2, ಪಾದಗುಲ್ಫ 4, ಮಣಿಕ(ಕೈಮಣಿ) 2, ಅರತ್ನಿ 4(ಮುಂಗೈ ಮೂಳೆಗಳು), ಜಂಘ 4, ಜಾನುಕಾಪಾಲಿಕ(ಮಂಡಿಚಿಪ್ಪು) 2, ಊರುನಲಕ (ತೊಡೆಮೂಳೆ) 2, ಬಾಹುನಲಕ (ತೋಳುಮೂಳೆ) 2, ಅಂಸ(ಭುಜ) 2, ಅಂಸಫಲಕ (ಸ್ಕ್ಯಾಪುಲ) 2, ಅಕ್ಷಕ (ಕ್ಲ್ಯಾವಿಕಲ್) 2, ಜತ್ರು (ಶ್ವಾಸನಾಳ) 1, ಅಂಗುಳ(ತಾಲು) 2, ನಿತಂಬ 2, ಭಗಾಸ್ಥಿ 1, ಬೆನ್ನು 45, ಕತ್ತು 15, ಉರಸ್ಸು 14, ಪಕ್ಕೆಲುಬುಗಳು (ಪರ್ಶುಕ) 24, ಸ್ಥಾಲಕಾ (ಪಕ್ಕೆಲುಬುಗಳ ಕತ್ತುಗಳು ?) 24, ಸ್ಥಾಲಕಾರ್ಬುದ (ಪಕ್ಕೆಲುಬುಗಳ ಗಂಟುಗಳು?) 24, ಹನ್ವಸ್ಥಿ (ಕೆಳದವಡೆ ಎಲುಬು) 1, ಹನುಮೂಲಬಂಧನ (?)2, ನಾಸಿಕ 1, ಗಂಡಕೂಟ 1, ಲಲಾಟ 1, ಶೃಂಗ (ಕಣತಲೆ) 2, ಶಿರಃಕಾಲ 4. ಕೊಳೆತ ದೇಹದ ಮೂಳೆಗಳಲ್ಲಿ ಕೆಲವು ಒಂದಕ್ಕೊಂದು ಅಂಟಿರುವುದರಿಂದಲೂ ಚಿಕ್ಕವಯಸ್ಸಿನಲ್ಲಿ ಹೆಚ್ಚಾಗಿರುವುದರಿಂದಲೂ ಕೆಲವರು ದಂತಗಳನ್ನು ಮಾತ್ರ ಕೆಲವರು ಹಲ್ಲುಗೂಡು ಮತ್ತು ಉಗುರುಗಳನ್ನೂ ಸೇರಿಸಿದ್ದರಿಂದಲೂ ಮೂಳೆಗಳ ಅಂಕಿಗಳು ಒಂದೇ ಸಮನಾಗಿಲ್ಲ. ಇವನ್ನು ಬಿಟ್ಟು ಒಟ್ಟಿನಲ್ಲಿ ನೋಡುವುದಾದರೆ, ಹಿಂದಿನ ಹಿಂದೂ ವೈದ್ಯರ ಸಂಖ್ಯಾಜ್ಞಾನ ಹೆಚ್ಚು ಕಡಿಮೆ ಈಗಿನದಷ್ಟೇ ಇದ್ದಿತೆಂದು ಹಾರ್ನಲ್ ಮೆಚ್ಚಿದ್ದಾನೆ. ಈಗಿನ ಅಂಗರಚನಾವಿಜ್ಞಾನದ ಪ್ರಕಾರ ದೇಹದಲ್ಲಿ ಮೂಳೆಗಳು ಒಟ್ಟು 206 : ಮೇಲಿನ ಅವಯವದಲ್ಲಿ ಒಟ್ಟು 32- ಒಂದೊಂದು ಬೆರಳಲ್ಲಿ 3 ರಂತೆ (ಹೆಬ್ಬೆರಳಲ್ಲಿ 2) 14, ಅಂಗೈಯಲ್ಲಿ 5, ಮಣಿಕಟ್ಟು 8, ಮುಂಗೈಯಲ್ಲಿ 2, ತೋಳಿನಲ್ಲಿ 1, ಅಕ್ಷಕ (ಕಾಲರ್ಬೋನ್) 1, ಅಂಸಫಲಕ 1, ಕೆಳಶಾಖೆಯಲ್ಲಿ ಒಟ್ಟು 31- ಬೆರಳುಗಳಲ್ಲಿ 14, ಅಂಗಾಲಿನಲ್ಲಿ 5, ಹರಡಿನಲ್ಲಿ 7, ಮುಂಗಾಲಿನಲ್ಲಿ 2, ಮಂಡಿಚಿಪ್ಪು 1, ತೊಡೆಮೂಳೆ 1, ಶ್ರೋಣಿ ಫಲಕ 1 , ಹೀಗೆ 4 ಶಾಖೆಗಳಲ್ಲಿ ಒಟ್ಟು 126, ಬೆನ್ನುಮೂಳೆ 24, ತ್ರಿಕಾಸ್ಥಿ 1, ಗುದಾಸ್ಥಿ 1, ಪಕ್ಕೆಲುಬು 24, ಎದೆಚಕ್ಕೆ (ಸ್ಟೆರ್ನಮ್) 1, ಹೀಗೆ ಮುಂಡದಲ್ಲಿ 51, ಹಲ್ಲುಗಳನ್ನು ಬಿಟ್ಟು ತಲೆಯಲ್ಲಿ 29 ಮೂಳೆಗಳು. ಸುಶ್ರುತ ಮೂಳೆಗಳಲ್ಲಿ ಐದು ವಿಧಗಳೆಂದಿದ್ದಾನೆ : ಕಪಾಲ (ಚಪ್ಪಟೆ), ರುಚಕ (ಹಲ್ಲಿನಂತೆ ಚೂಪಾದ), ತರುಣ (ಮೆತು ಉಸಿರ್ನಾಳದಲ್ಲಿರುವ ಮೆಲ್ಲೆಲುಬುಗಳಂಥ), ವಲಯ(ಪಕ್ಕೆಲುಬಿನಂತೆ ಬಾಗಿರುವ), ನಲಕ (ತೋಳು ತೊಡೆ ಮೂಳೆಗಳಂತೆ ಕೊಳವೆಯಂತಿರುವ), ಈ ತಿಳಿವಳಿಕೆ ಹೆಚ್ಚು ಕಡಿಮೆ ಈಗಿನದರೊಡನೆ ಹೊಂದಿಕೊಳ್ಳುತ್ತದೆ. ಸಂಧಿ (ಕೀಲು)ಗಳು : ಮೈಯಲ್ಲಿ 200 ಕೀಲುಗಳಿವೆ ಎಂದು ಚರಕ ಹೇಳಿದ್ದಾನೆ. ಸುಶ್ರುತನ ಪ್ರಕಾರ 210 ಕೀಲುಗಳು. ಅವನು ಬರೆದಿರುವುದು ಈಗಿನ ತಿಳಿವಿಗೆ ಹೆಚ್ಚು ಕಡಿಮೆ ಸರಿಹೋಗುತ್ತದೆ. ಶಾಖೆಗಳಲ್ಲಿ 68, ಮುಂಡದಲ್ಲಿ 59, ತಲೆ ಕತ್ತುಗಳಲ್ಲಿ 83, ಕೀಲುಗಳಲ್ಲಿ ಆಕಾರದ ಪ್ರಕಾರ 8 ವಿಧಗಳಿವೆ: i.ಕೋರ (ಬಾಗಿಲ ಕೀಲಿನಂತೆ) ಉದಾ : ಬೆರಳು, ಮೊಳಕೈ, ಮಂಡಿ. ii.ಉಲೂಖಲ (ಒರಳು ರುಬ್ಬುಗುಂಡಿನಂತೆ), ಉದಾ: ಕಂಕುಳು, ಸೊಂಟ, ಹಲ್ಲು. iii ಸಾಮುದ್ಗ (ಬಟ್ಟಲಿನಂತೆ). ಉದಾ : ಅಂಸಪೀಠ, ಗುದಾಸ್ಥಿ, ಭಗಾಸ್ಥಿ, iv. ಪ್ರತರ (ತೊಲೆಯಂಥ) ಉದಾ :ಬೆನ್ನುಮೂಳೆ, v ತುನ್ನಸೇವನಿ(ಹೊಲಿಗೆಯಂಥ). ಉದಾ : ತಲೆಮೂಳೆಗಳ ನಡುವಿರುವ ಕೀಲುಗಳು. vi ವಾಯಸತುಂಡ (ಕಾಗೆ ಮೂತಿಯಂತಿರುವ) ಉದಾ: ದವಡೆ. vii ಮಂಡಲ (ಗುಂಡಗಿರುವ). ಉದಾ: ಶ್ವಾಸನಾಳ. viii ಶಂಖಾವರ್ತ (ಶಂಖದ ಸುರುಳಿಯಂತಿರುವ) ಉದಾ : ಕಿವಿ, ಮೂಗು., (ಉದಾಹರಣೆಗಳು ಸುಶ್ರುತನವು). ಈ ವರ್ಗೀಕರಣವು ಒಪ್ಪಬಹುದಾದದ್ದು. ಅಸ್ಥಿ ಸಂಘಾತಗಳು 14- ಎರಡಕ್ಕಿಂತ ಹೆಚ್ಚು ಮೂಳೆಗಳು ಸಂಧಿಯಾಗಿರುವುದು, ಈ ವರ್ಣನೆಯೂ ಸಮಂಜಸವಾಗಿದೆ. ಪೇಶಿಗಳು (ಮಾಂಸಖಂಡಗಳು) 500: ಆದರೆ ಅವನ್ನು ಎಣಿಸಲಾಗುವುದಿಲ್ಲ ಎಂದು ಚರಕನು ಬರೆದಿದ್ದಾನೆ. ಸುಶ್ರುತನು ಹೆಚ್ಚು ವಿವರಗಳನ್ನು ಕೊಟ್ಟಿದ್ದಾನೆ. ಪೇಶಿಗಳು 500, ಇವುಗಳಲ್ಲಿ ಶಾಖೆಗಳಲ್ಲಿ 400, ಮುಂಡದಲ್ಲಿ 64, ತಲೆ ಕತ್ತುಗಳಲ್ಲಿ 34. ಪರೀಕ್ಷೆಗೆ ಕೊಳೆತ ಹೆಣಗಳನ್ನೇ ಉಪಯೋಗಿಸುತ್ತಿದ್ದುದರಿಂದ ಇರುವ ಪೇಶಿಗಳು ಎಣಿಕೆಗೆ ಸಿಗದೆ, ಇಲ್ಲಿ ಪೇಶಿಗಳ ಎಣಿಕೆ ಕೇವಲ ಊಹೆಯದೇ ಎಂಬ ಸಂಶಯಕ್ಕೆ ಕಾರಣವಾಗಿದೆ. ಈಗಿನ ಜ್ಞಾನದ ಪ್ರಕಾರ ಪೇಶಿಗಳು 513, ಕೆಳಶಾಖೆಗಳಲ್ಲಿ 114, ಮೇಲುಶಾಖೆಗಳಲ್ಲಿ 112, ಮುಂಡದಲ್ಲಿ 81 ಮತ್ತು ತಲೆ ಕತ್ತುಗಳಲ್ಲಿ 176. ಇವುಗಳಲ್ಲಿ ಬಹು ಸಣ್ಣವೂ ಸೇರಿವೆ. ನಾಲಗೆಯಲ್ಲಿ ಒಂದೇ ಪೇಶಿಯೆಂದು ಹಿಂದಿನವರು ಹೇಳಿದ್ದರೆ ಈಗಿನ ಪ್ರಕಾರ 17. ಸ್ನಾಯುಗಳು (ಲಿಗಮೆಂಟ್ಸ್?) 900: 4 ಶಾಖೆಗಳಲ್ಲಿ 600, ಮುಂಡದಲ್ಲಿ 230, ಕತ್ತು ತಲೆಗಳಲ್ಲಿ 70, ಸ್ನಾಯೂಶ್ಚತುರ್ವಿಧಾ-ಪ್ರತಾನವತ್ (ಶಾಖೆಗಳಿರುವ ಮೊಳಕೆಯ ಹಾಗೆ), ವೃತ್ತ (ಚಕ್ರದ ಹಾಗೆ), ಪೃಢ್ವ(ಅಗಲ), ಷಿಶುರಾ (ತೂತುಗಳಿರುವ), ಹಲಗೆಗಳಿಂದಾದ ದೋಣಿಯು ಹೇಗೆ ಬಹು ಬಂಧನ (ಹಗ್ಗ ಇತ್ಯಾದಿ)ಗಳಿಂದ ಭಾರವನ್ನು ತಡೆಯಬಲ್ಲುದೋ ಹಾಗೆಯೇ ಮನುಷ್ಯನಲ್ಲೂ ಸ್ನಾಯುಗಳು ಸೇರಿ ದೇಹಕ್ಕೆ ಇಂಥ ಬಿಗಿ ಬಂದಿವೆ ಎಂಬುದು 33 ನೆಯ ಶ್ಲೋಕದ ಅರ್ಥ. ಈ ತಿಳಿವಳಿಕೆ ಈಗಿನ ಶಾಸ್ತ್ರಜ್ಞಾನಕ್ಕೆ ಸರಿದೊರೆಯಾಗದಿದ್ದರೂ ಒಪ್ಪುವಂಥಾದ್ದಾಗಿದೆ. ಕಂಡರಗಳು (ಟೆಂಡನ್ಸ್) 16: ಪಾದಗಳಲ್ಲಿ 4, ಹಸ್ತಗಳಲ್ಲಿ 4, ಕತ್ತಿನಲ್ಲಿ 4, ಬೆನ್ನಿನಲ್ಲಿ 4. ಇವು ಹಸ್ತಪಾದಗಳಲ್ಲಿ ಉಗುರುಗಳವರೆಗೆ ಹೋಗುತ್ತವೆಂಬುದನ್ನು ಒಪ್ಪಬಹುದು. ಕತ್ತಿನಲ್ಲಿರುವುವು ಹೃದಯವನ್ನು ಬಂಧಿಸಿ ಮೇಢ್ರದವರೆಗೂ ಹೋಗುತ್ತವೆ ಎಂಬುದನ್ನು ಒಪ್ಪುವಹಾಗಿಲ್ಲ. ದೊಡ್ಡ ನರಗಳನ್ನೂ ಕಂಡರಗಳೆಂದು ಕರೆಯಲಾಗಿದೆ. ಮಾಂಸಸಿರಾಸ್ನಾಯ್ವಸ್ಥಿಜಾಲಗಳು 4 : ಮಣಿಬಂಧ ಗುಲ್ಫಗಳಲ್ಲಿ ಪರಸ್ಪರ ಗವಾಕ್ಷಿಗಳ ಹಾಗಿವೆ ಎಂದು ಬರೆಯಲಾಗಿದೆ. ಸೀಮಂತಗಳು 15: ಇವು ಅಸ್ಥಿಸಂಘಾತಗಳು. ಧಮನಿಗಳು 24: ಹೊಕ್ಕುಳ ಮೇಲಕ್ಕೆ 10, ಕೆಳಕ್ಕೆ 10, ಅಡ್ಡಡ್ಡ 4. ಮೇಲಿನ 10 ಧಮನಿಗಳು 30 ಶಾಖೆಗಳನ್ನು ಕೊಡುತ್ತವೆ. ವಾತಕ್ಕೆ 2, ಪಿತ್ತಕ್ಕೆ 2, ಕಫಕ್ಕೆ 2, ಶೋಣಿತಕ್ಕೆ 2, ರುಚಿಗೆ 2, ಶಬ್ದಕ್ಕೆ 2, ರೂಪಕ್ಕೆ 2, ರಸಕ್ಕೆ 2, ವಾಸನೆಗೆ 2, ಮಾತಿನ ಅಂಗಗಳಿಗೆ 2, ಕೂಗುವುದಕ್ಕೆ 2, ನಿದ್ದೆಗೆ 2, ಎಚ್ಚರಕ್ಕೆ 2, ಕಣ್ಣೀರಿಗೆ 2, ಸ್ತ್ರೀಯರಲ್ಲಿ ಹಾಲಿಗೆ 2, ಪುರುಷರಲ್ಲಿ ವೀರ್ಯಕ್ಕೆ 2. ಇದೇ ರೀತಿ ಮಿಕ್ಕ ಧಮನಿಗಳು. ಇವು ಈಗಿನ ಜ್ಞಾನದೊಡನೆ ಹೊಂದಿಕೊಳ್ಳುವುದಿಲ್ಲ. ಸಿರಗಳು 700: ಮೂಲದಲ್ಲಿರುವುವು 40, ವಾತಕ್ಕೆ 10, ಪಿತ್ತಕ್ಕೆ 10, ಕಫಕ್ಕೆ 10, ರಕ್ತಕ್ಕೆ 10, ಇವುಗಳಲ್ಲಿ ಪ್ರತಿ ಹತ್ತೂ 175 ಶಾಖೆಗಳಾಗುತ್ತವೆ. 175 ವಾತಸಿರಗಳಲ್ಲಿ ಒಂದೊಂದು ಕಾಲಲ್ಲಿ 25, ತೋಳಲ್ಲಿ 25, ಕೋಷ್ಟದಲ್ಲಿ 34, ತಲೆಕತ್ತುಗಳಲ್ಲಿ 41. ಇದೇ ರೀತಿ ಪಿತ್ತ, ಕಫ, ರಕ್ತಸಿರಗಳು. ಸ್ರೋತಗಳು 22: ಇವು ಹೃದಯದಿಂದ ದೇಹದ ಎಲ್ಲ ಭಾಗಗಳಿಗೆ ಪ್ರಾಣ(ಉಸಿರು) ಆಹಾರ, ನೀರು, ರಸ, ರಕ್ತ, ಪೇಶಿ, ಕೊಬ್ಬು, ಮೂತ್ರ, ಮಲ, ವೀರ್ಯ ಮತ್ತು ರಜಸ್ಸುಗಳನ್ನು ಒಯ್ಯುತ್ತವೆ. ಧಮನಿ, ಸಿರ ಮತ್ತು ಸ್ರೋತಗಳ ಸಮಸ್ಯೆಯು ಒಂದು ಒಗಟೆ ಎಂದು ಬಿ.ಸೀಲ್ ಬರೆದಿದ್ದಾರೆ. ಇವು ಕೊಳವೆಗಳು, ಈಗಿನ ಶರೀರವಿಜ್ಞಾನದಲ್ಲಿ ಇವಕ್ಕೆ ಸ್ಥಾನವಿಲ್ಲ. ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳ ಸಿದ್ಧಾಂತಕ್ಕೆ ಸರಿಯಾಗಿ ಇವನ್ನು ವರ್ಣಿಸಲಾಗಿದೆ. ಇವುಗಳ ಜೊತೆಗೆ ಅಥರ್ವವೇದದಲ್ಲಿ ಹೀರ, ಸ್ನಾವ ಮತ್ತು ನಾಡಿಗಳೂ ಇವೆ. ದೊಡ್ಡ ನಾಡಿಗಳು ಧಮನಿಗಳು, ಸಣ್ಣಗಿರುವವು ಸಿರಗಳು, ಅತಿ ಸಣ್ಣಗಿರುವವು ಸ್ನಾವಗಳು ಇರಬಹುದೆಂದು ದಾಸಗುಪ್ತ ಅವರು ಬರೆದಿದ್ದಾರೆ. ಹೃದಯ (ಗುಂಡಿಗೆ): ಅಥರ್ವವೇದದಲ್ಲಿ ಹೃದಯವನ್ನು 9 ಬಾಗಿಲುಗಳಿರುವ ಕಮಲಕ್ಕೆ ಹೋಲಿಸಲಾಗಿದೆ. ಈ ರೀತಿ ಕಮಲಕ್ಕೆ ಹೋಲಿಸುವುದು ಆಯುರ್ವೇದ ಗ್ರಂಥಗಳಲ್ಲಿ ಸಾಮಾನ್ಯ, ಸುಶ್ರುತಶಾರೀರದ 4ನೆಯ ಅಧ್ಯಾಯದಲ್ಲಿ ಕೆಳಮುಖವಾಗಿ ಕಮಲದಂತಿರುವ ಹೃದಯ ಜಾಗೃತವಾಗಿ ವಿಕಸಿತವಾಗುತ್ತದೆ ಎಂದಿದೆ. ಯಕೃತ್ ಮತ್ತು ಪ್ಲೀಹಗಳನ್ನು ಪ್ರವೇಶಿಸಿ ರಸ ಕೆಂಪಾಗುತ್ತದೆ. ದೇಹಿಗಳ ಶರೀರದಲ್ಲಿರುವ ತೇಜಸ್ಸು ಮತ್ತು ಅಪ್ಪುಗಳಿಂದ ರಂಜಿತವಾಗಿ ಪ್ರಸನ್ನಗೊಂಡುದು ರಕ್ತ. ಒಳ ಅಂಗಗಳು : ಅಥರ್ವವೇದದಲ್ಲಿ ಹೃದಯ, ಶ್ವಾಸಕೋಶ, ಪಿತ್ತಕೋಶ, ವೃಕ್ಕ(ಮೂತ್ರಜನಕಾಂಗ), ಯಕೃತ್, ಪ್ಲೀಹ, ಜಠರ, ಕ್ಷುದ್ರಾಂತ್ರ (ಸಣ್ಣ ಕರುಳು), ಸ್ಥೂಲಾಂತ್ರ (ದೊಡ್ಡ ಕರುಳು), ಗುದ, ಉದರ, ಹೊಕ್ಕುಳು ಇವುಗಳ ವಿಚಾರಗಳಿವೆ. ಕ್ಲೋಮ ಎಂದರೆ ಬಲಶ್ವಾಸಕೋಶ ಮತ್ತು ಯಕೃತ್, ಪುಪ್ಪುಸ ಎಂದರೆ ಎಡಶ್ವಾಸಕೋಶ ಮತ್ತು ಪ್ಲೀಹ. ಕರುಳು ಪುರುಷರಲ್ಲಿ 3 1/2ಳಿ ಮೊಳ. ಸ್ತ್ರೀಯರಲ್ಲಿ 3 ಮೊಳ. ದೊಡ್ಡ ಕರುಳಿನ ಕೊನೆಯ 5'’ ಭಾಗ ಗುದ. ಅದರಲ್ಲಿ 1/2ಳಿ’’ ಬಿಟ್ಟು 3 ವಲಯಾಕಾರದ ಮಡಿಕೆಗಳಿವೆ. ಇವು ಪ್ರವಾಹಣೀ ವಿಸರ್ಜನೀ ಮತ್ತು ಸಂವರಣೀ. ಗುದದ ಕೆಳ ಕೊನೆಯಲ್ಲಿ ಗುದೋಷ್ಠ (ತುಟಿ)ವಿದೆ. ಈ ವಿವರ ಸಮಂಜಸವಾಗಿದೆ. ಆಮಾಶಯ ಎಂದರೆ ಜಠರ. ಪಕ್ವಾಶಯ ಎಂದರೆ ಕರುಳು. ಬಸ್ತಿಯಲ್ಲಿ ಮೂತ್ರಾಶಯವಿದೆ. ಗರ್ಭಾಶಯ ರೋಹಿತ ಮೀನಿನ ಮೂತಿಯಂತಿದೆ. ಮಿಕ್ಕ ಆಶಯಗಳನ್ನು (ವಾತ, ಪಿತ್ತ ಇತ್ಯಾದಿ)ಆಧುನಿಕ ಜ್ಞಾನದ ಪ್ರಕಾರ ನಿರ್ಣಯಿಸುವುದು ಕಷ್ಟ.. ಕೊಳೆತ ದೇಹದ ಪರೀಕ್ಷೆಯಿಂದ ಮುಖ್ಯವಾದ ಒಳ ಅಂಗಗಳ ವರ್ಣನೆಯೇ ಇಲ್ಲದಂತಾಗಿದೆ. ಇರುವ ವರ್ಣನೆ ವಾತ ಪಿತ್ತ ಮುಂತಾದುವುಗಳ ಸೂತ್ರಗಳಿಗೆ ಸರಿಯಾಗಿದೆ ಎಂದು ಮಾತ್ರ ಹೇಳಬಹುದು. ಮರ್ಮಗಳು 107: ಇವುಗಳ ವರ್ಣನೆ ಶಲ್ಯತಂತ್ರದ ಅರ್ಧದಷ್ಟಿದೆ. ಇವು ಸ್ನಾಯು, ಸಿರ, ಪೇಶಿ, ಮೂಳೆ ಮತ್ತು ಕೀಲುಗಳು ಸೇರುವ ಸ್ಥಳಗಳು. ಶಸ್ತ್ರ ಚಿಕಿತ್ಸೆಯಲ್ಲಿ ಕತ್ತಿ ಮುಂತಾದ ಶಲ್ಯಗಳು ಇವನ್ನು ಸೋಕಿದರೆ ಅಪಾಯ ಎಂದು ಹೇಳಲಾಗಿದೆ. ಸುಶ್ರುತ ಆ ಕಾಲದಲ್ಲಿ ಶಲ್ಯತಂತ್ರದಲ್ಲಿ ಪ್ರಸಿದ್ಧನಾಗಿದ್ದನು. ಅದಕ್ಕೋಸ್ಕರವೇ ಅವನು ಶಾರೀರಕ್ಕೆ ಹೆಚ್ಚು ಪ್ರಾಧಾನ್ಯವನ್ನು ಕೊಟ್ಟಿದ್ದಂತೆ ಕಾಣುತ್ತದೆ. ಅವನ ತರುವಾಯ ಶಲ್ಯತಂತ್ರದಲ್ಲಿ ಅವನಷ್ಟು ಯಾರೂ ಪ್ರವೀಣರಾಗಿದ್ದಂತಿಲ್ಲ. ಶಲ್ಯದಿಂದ ಮಾಡುವುದನ್ನು ಔಷಧತಂತ್ರದಿಂದಲೇ ಸಾಧಿಸಬಹುದೆಂಬ ನಂಬಿಕೆ ಹುಟ್ಟಿದ್ದು ಇದಕ್ಕೆ ಕಾರಣವಾಗಿರಬಹುದು. ಶಲ್ಯತಂತ್ರಕ್ಕೆ ಪ್ರಾಶಸ್ತ್ಯ ಕಡಿಮೆಯಾದಾಗ ಶಾರೀರದ ಆವಶ್ಯಕತೆಯೂ ಕಡಿಮೆಯಾಗಿ ಅದು ಮುಂದಕ್ಕೆ ಬೆಳೆದಿಲ್ಲವೆಂದು ಕಾಣುತ್ತದೆ. ನರಮಂಡಲದ ವಿಚಾರ ಸುಶ್ರುತಸಂಹಿತೆಯಲ್ಲೂ ಇತರ ಆಯುರ್ವೇದ ಗ್ರಂಥಗಳಲ್ಲೂ ಇಲ್ಲ ಎನ್ನಬಹುದು. ಮಿದುಳಿನ ಆಕಾರ, ಗಾತ್ರ ಇತ್ಯಾದಿಗಳೂ ಇಲ್ಲ. ಕಳೆದ 50 ವರ್ಷಗಳಿಂದ ಮಿದುಳು ಬೆನ್ನುಹುರಿ ನರಗಳ ವಿಚಾರಗಳೇ ಬೃಹತ್ವಿಜ್ಞಾನವಾಗಿ ಬೆಳೆಯುತ್ತಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: