ಶಿಕ್ಷಣ ಸಂಸ್ಥೆ
ಶಿಕ್ಷಣ ಸಂಸ್ಥೆ ಎಂದರೆ ವಿಭಿನ್ನ ವಯಸ್ಸಿನ ಜನರು ಶಿಕ್ಷಣವನ್ನು ಪಡೆದುಕೊಳ್ಳುವ ಸ್ಥಳ. ಇದರಲ್ಲಿ ಶಾಲಾಪೂರ್ವ ಸಂಸ್ಥೆ, ಶಿಶುಪಾಲನೆ, ಪ್ರಾಥಮಿಕ ಶಾಲೆಗಳು, ಮಾಧ್ಯಮಿಕ-ಪ್ರೌಢ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿವೆ. ಇವುಗಳು ದೊಡ್ಡ ವೈವಿಧ್ಯದ ಕಲಿಕಾ ಪರಿಸರಗಳು ಮತ್ತು ಕಲಿಕಾ ಸ್ಥಳಗಳನ್ನು ಒದಗಿಸುತ್ತವೆ.[೧][೨]
ಶಾಲೆ ಮತ್ತು ಕಾಲೇಜುಗಳ ಕಟ್ಟಡಗಳ ವಿನ್ಯಾಸ ವಿದ್ಯಾರ್ಥಿಗಳ ಕಲಿಕಾ ಅನುಭವದ ಮೇಲೆ ಗಣನೀಯವಾಗಿ ಪ್ರಭಾವ ಬೀರಬಲ್ಲದು.[೩] ಹೆಚ್ಚುವರಿಯಾಗಿ, ಶಾಲೆಗಳು ಸಂಚಾರ, ಉದ್ಯೋಗ ಮತ್ತು ಸಮುದಾಯ ಚಟುವಟಿಕೆಗಳ ಪ್ರಮುಖ ಮೂಲಗಳಾಗಿರುವುದರಿಂದ, ನೆರೆಹೊರೆಯಲ್ಲಿ ಅಥವಾ ಸಮುದಾಯಗಳಲ್ಲಿ ಶಾಲಾ ಕಟ್ಟಡಗಳು ಹಲವುವೇಳೆ ಆಧಾರ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ.[೪][೫]
ಖಾಸಗಿ ಶಿಕ್ಷಣ ಸಂಸ್ಥೆ ಎಂದರೆ ಖಾಸಗಿ ಸಂಸ್ಥೆಗಳ ಆಡಳಿತಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆ. ಇವಕ್ಕೆ ಸರ್ಕಾರಿ ದ್ರವ್ಯಸಹಾಯ ಇರಬಹುದು, ಇಲ್ಲದಿರಬಹುದು. ಖಾಸಗಿ ಸಂಸ್ಥೆಯ ಆಳ್ವಿಕೆಗೆ ಒಳಪಟ್ಟು ಸರ್ಕಾರದಿಂದ ದ್ರವ್ಯ ಸಹಾಯವನ್ನು ಪಡೆಯುವ ಅಥವಾ ಪಡೆಯದಿರುವ ಸ್ವತಂತ್ರ ಶಿಕ್ಷಣ ಸಂಸ್ಥೆಗಳಿವು. ಶ್ರೀಮಂತ ವರ್ಗದವರಿಗಾಗಿಯೇ ನಡೆಯುವ ಪಬ್ಲಿಕ್ ಶಾಲೆಗಳೂ ಈ ವರ್ಗಕ್ಕೆ ಸೇರುತ್ತವೆ. ಇವುಗಳ ಆಡಳಿತ ವ್ಯವಸ್ಥೆಯಲ್ಲೂ, ಶಿಕ್ಷಣದೃಷ್ಟಿ ಮತ್ತು ಶಿಕ್ಷಣ ವ್ಯವಸ್ಥೆಗಳಲ್ಲೂ ಹೆಚ್ಚಿನ ವೈವಿಧ್ಯವಿದೆ. ಕೆಲವು ಕೇವಲ ಸೇವಾದೃಷ್ಟಿಯಿಂದ ಕೆಲಸಮಾಡಿದರೆ ಮತ್ತೆ ಕೆಲವು ಹಣ ಗಳಿಕೆಯ ದೃಷ್ಟಿಯಿಂದಲೇ ಕೆಲಸ ಮಾಡುತ್ತವೆ.
ಖಾಸಗಿ ಶಾಲೆಗಳು
[ಬದಲಾಯಿಸಿ]ಎಲ್ಲ ಹಂತಗಳ ಶಿಕ್ಷಣವನ್ನೂ ಒದಗಿಸುವ ಖಾಸಗಿ ಶಾಲೆಗಳಿವೆ. ತರಗತಿಗಳ ಗಾತ್ರ ಚಿಕ್ಕದಾಗಿದ್ದು ಪಾಠಗಳು ತಪ್ಪದೆ ನಡೆಯುತ್ತವಾದ ಕಾರಣ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳಿಗಿಂತ ಉತ್ತಮವೆನಿಸಿವೆ. ಹಾಗಾಗಲು ಇನ್ನೂ ಒಂದು ಕಾರಣವಿದೆ. ಖಾಸಗಿ ಶಾಲೆಗಳು ಎಲ್ಲರನ್ನೂ ಸೇರಿಸಿಕೊಳ್ಳುವುದಿಲ್ಲ. ಒಂದು ಪರೀಕ್ಷೆ ನಡೆಸಿ ಅದರಲ್ಲಿ ತೇರ್ಗಡೆಯಾದವರಿಗೆ ಮಾತ್ರ ಪ್ರವೇಶಾವಕಾಶ ನೀಡುತ್ತವೆ. ಇದರಿಂದಲೂ ಅವುಗಳ ಗುಣಮಟ್ಟ ಏರಿರುತ್ತದೆ.
ಖಾಸಗಿ ಶಾಲೆಗಳ ನಿಯಂತ್ರಣ ಸಾಮಾನ್ಯವಾಗಿ ಶಾಲಾ ಆಡಳಿತ ಸಮಿತಿಯ ಇಲ್ಲವೆ ಶಾಲಾ ನಿರ್ದೇಶಕರ ಆಡಳಿತಕ್ಕೆ ಒಳಪಟ್ಟಿರುತ್ತದೆ. ಆಡಳಿತ ಸಮಿತಿ ಶಾಲೆಯ ಆಡಳಿತವನ್ನು ನಿರ್ವಹಿಸುವುದಲ್ಲದೆ, ಶಾಲಾ ನಿಯಮಗಳನ್ನು ರಚಿಸುವ, ಮುಖ್ಯ ಅಧ್ಯಾಪಕರನ್ನು ನೇಮಿಸುವ ಮತ್ತು ಇತರ ಗುರುತರ ಕಾರ್ಯಗಳ ಹೊಣೆಯನ್ನೂ ಹೊರುತ್ತದೆ.
ಮುಖ್ಯೋಪಾಧ್ಯಾಯನು ಆಡಳಿತ ಸಮಿತಿಯಿಂದ ನಿರ್ಮಿತವಾದ ಕಾನೂನುಗಳನ್ನು ಕಾರ್ಯಗತ ಮಾಡುತ್ತಾನೆ, ಶಾಲೆಯ ಆಡಳಿತವನ್ನು ನಿರ್ವಹಿಸುತ್ತಾನೆ. ಅಧ್ಯಾಪಕರ ನೇಮಕ, ಪಾಠಪ್ರವಚನಗಳ ಮೇಲ್ವಿಚಾರಣೆ, ಪಠ್ಯವಿಷಯಗಳ ಸಮಸ್ಯಾ ಪರಿಹಾರ, ಪೋಷಕರ ಅಹವಾಲುಗಳ ವಿತರಣೆ-ಇವಲ್ಲದೆ ಶಾಲೆಗೆ ಸಂಬಂಧಿಸಿದ ಇತರ ಎಲ್ಲ ಕೆಲಸಗಳನ್ನೂ ಆತನೇ ನಿರ್ವಹಿಸುತ್ತಾನೆ.
ಖಾಸಗಿ ಸಂಸ್ಥೆಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಉಪಾಧ್ಯಾಯರ ನೇಮಕ, ಬರ್ತರ್ಫು, ವಿದ್ಯಾರ್ಥಿಗಳ ಆಯ್ಕೆ, ಶುಲ್ಕ ವಿಧಿಸುವಿಕೆ, ಶುಲ್ಕ ವಸೂಲಿ-ಮುಂತಾದ ಎಲ್ಲ ಬಾಬುಗಳಲ್ಲೂ ಅವು ತಮ್ಮ ಧೋರಣೆಗೆ ತಕ್ಕಂತೆ ನಡೆಯಲವಕಾಶವಿದೆ. ಇದರಿಂದ ಒಳ್ಳೆಯದೂ ಆಗಿದೆ. ಕೆಟ್ಟದ್ದೂ ಆಗಿದೆ.
ಭಾರತದಲ್ಲಿ
[ಬದಲಾಯಿಸಿ]ಸರ್ಕಾರ ಸಾರ್ವಜನಿಕ ಶಿಕ್ಷಣದ ಹೊಣೆಯನ್ನು ವಹಿಸಿಕೊಂಡದ್ದು ಕೇವಲ 19ನೆಯ ಶತಮಾನದಲ್ಲಿ. ಅದಕ್ಕೂ ಹಿಂದೆ ಎಲ್ಲ ದೇಶಗಳಲ್ಲೂ ಶಿಕ್ಷಣ ಬಹುಮಟ್ಟಿಗೆ ಖಾಸಗಿ ವೃತಿಗಳ ಅಥವಾ ಸಂಸ್ಥೆಗಳ ಪಾಲಿಗಿದ್ದ ಸೇವಾಕಾರ್ಯವಾಗಿತ್ತು. ಭಾರತದಲ್ಲಿ ಇಂಗ್ಲಿಷ್ ಆಡಳಿತ ಆರಂಭವಾದ ಮೇಲೂ ಅನೇಕ ವರ್ಷಗಳ ತನಕ ಶಿಕ್ಷಣ ಖಾಸಗಿ ಸೇವಾಕಾರ್ಯವಾಗಿಯೇ ನಡೆದುಕೊಂಡು ಬಂತು. 1813ರಲ್ಲಿ ಮೊಟ್ಟಮೊದಲು ಕಂಪನಿಯ ಸರ್ಕಾರ ಶಿಕ್ಷಣ ತನ್ನ ಹೊಣೆಯೆಂಬುದನ್ನು ಅಂಗೀಕರಿಸಿತು.
ಭಾರತದಲ್ಲಿ ಹಿಂದಿನಿಂದಲೂ ಶಿಕ್ಷಣವನ್ನು ಗುರುಕುಲ, ಆಶ್ರಮ, ಮಠ, ದೇವಾಲಯ, ಬಸದಿ, ವಿಹಾರ, ಮಸೀದಿ ಮುಂತಾದವು ನಡೆಸಿಕೊಂಡು ಬಂದುವು. ಅನಂತರ ಕ್ರೈಸ್ತಮತಪ್ರಚಾರಕರು, ಖಾಸಗಿ ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ಕೆಲವರು ಶಿಕ್ಷಣವನ್ನು ಪ್ರಸಾರ ಮಾಡಲು ಮುಂದೆ ಬಂದರೆಂದು ಹೇಳಬಹುದು. ಹದಿನೈದನೆಯ ಶತಮಾನದ ಅಂತ್ಯದಲ್ಲಿ ಕಲ್ಲಿಕೋಟೆಯಲ್ಲಿ ಕಾಲಿಟ್ಟ ಪೋರ್ಚುಗೀಸರು ಭಾರತದಲ್ಲಿ ಆಧುನಿಕ ಖಾಸಗಿ ಶಿಕ್ಷಣೋದ್ಯಮವನ್ನು ಆರಂಭಿಸಿದರೆನ್ನಬಹುದು. ಅನಂತರ ಇಲ್ಲಿಗೆ ಆಗಮಿಸಿದ ಇತರ ಪಾಶ್ಚಾತ್ಯ ಮತಪ್ರಚಾರಕರೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಅವರ ಮೂಲ ಉದ್ದೇಶ ಮತಪ್ರಚಾರ ಮತ್ತು ಮತಾಂತರಣ. ಆ ಕಾರ್ಯಸಾಧನೆಗೆ ಶಿಕ್ಷಣ ಅವರಿಗೊಂದು ಉಪಕರಣವೆನಿಸಿತ್ತು. ಪ್ರಾರಂಭದಲ್ಲಿ ಹಣಗಳಿಕೆಯ ಆಸೆ ಅವರಿಗಿರಲಿಲ್ಲ.
ಈಸ್ಟ್ ಇಂಡಿಯ ಕಂಪನಿಯ ಚಾರ್ಟರ್ ನಿಬಂಧನೆ ಮತಪ್ರಚಾರಕರ ಶೈಕ್ಷಣಿಕ ಚಟುವಟಿಕೆಗಳಿಗೆ ಭಾರತದಲ್ಲಿ ಪೂರ್ಣ ಅವಕಾಶವಿತ್ತಿತ್ತು. 1813ರ ಮತ್ತು 1833ರ ನಡುವಣ ಕಾಲದಲ್ಲಿ ಕಂಪನಿಯ ಅಧೀನದಲ್ಲಿರುವ ಪ್ರದೇಶಗಳಲ್ಲಿ ಅನೇಕ ಖಾಸಗಿ ಮಿಷನರಿ ಸಂಸ್ಥೆಗಳು ಆರಂಭವಾಗಿ ಜನತೆಗೆ ಶಿಕ್ಷಣ ಸೌಲಭ್ಯವನ್ನೊದಗಿಸುತ್ತಿದ್ದುವು. ಸರ್ಕಾರ ಅವಕ್ಕೆ ಅಲ್ಪಸ್ವಲ್ಪ ಸಹಾಯ ಧನವಿತ್ತು ಪ್ರೋತ್ಸಾಹ ನೀಡುತ್ತಿತ್ತು. ಇದನ್ನು ಕಂಡ ದೇಶಿಯ ವ್ಯಕ್ತಿಗಳೂ, ಸಂಸ್ಥೆಗಳೂ ಸಾರ್ವಜನಿಕ ಶಿಕ್ಷಣಕ್ಕಾಗಿ ಖಾಸಗಿ ಸಂಸ್ಥೆಗಳನ್ನು ಆರಂಭಿಸಲು ಮುಂದೆ ಬಂದರು.
ಭಾರತೀಯ ಖಾಸಗಿ ಶಿಕ್ಷಣೋದ್ಯಮ
[ಬದಲಾಯಿಸಿ]ಆಂಗ್ಲ ಸರ್ಕಾರ ಭಾರತೀಯರ ಶಿಕ್ಷಣದ ಬಗ್ಗೆ ಅಷ್ಟಾಗಿ ಅಸಕ್ತಿಯನ್ನು ವಹಿಸದ ಕಾರಣ ಪ್ರಜೆಗಳೇ ತಮ್ಮ ಹೊಣೆಯನ್ನು ಅರಿತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಗಬೇಕಾಯಿತು. ಈ ದಿಶೆಯಲ್ಲಿ ಶೈಕ್ಷಣಿಕವಾದ ಮೊದಲ ಹೆಜ್ಜೆಗಳನ್ನಿಟ್ಟು ಜನತೆಯ ಶಿಕ್ಷಣದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಮುಂದಾದವರು ಬಂಗಾಳಿಗಳು. ಭಾರತೀಯ ಮಹಾಪುರುಷರಲ್ಲಿ ಒಬ್ಬನಾದ ರಾಜ ರಾಮ್ ಮೋಹನರಾಯ್ ಬಂಗಾಳದಲ್ಲಿ ಹಿಂದೂ ಕಾಲೇಜೊಂದನ್ನು ತೆರೆಯಲು ನಿರ್ಧರಿಸಿದ. ಇವನ ಆಶೆ ಎಡ್ವರ್ಡ್ ಹೈಡ್ ಈಸ್ಟ್ ಎಂಬಾತನ ಸಹಾಯದಿಂದ ಈಡೇರಿತು.
ಖಾಸಗಿ ಶಿಕ್ಷಣೋದ್ಯಮದ ಪ್ರಚಾರ ಕಾರ್ಯ ಕೇವಲ ಮುಂಬಯಿ ಮತ್ತು ಕಲ್ಕತ್ತ ನಗರಗಳಂಥ ಮುಖ್ಯ ಪಟ್ಟಣಗಳಲ್ಲಿ ಮಾತ್ರ ಸಾಗದೆ ರಾಷ್ಟ್ರದ ದಿಗ್ ದಿಗಂತಗಳವರೆಗೂ ಹಬ್ಬತೊಡಗಿತು. ಬಂಗಾಳದ ಜಯನಾರಾಯಣ್ ಘೋಶಾಲ್ ಎಂಬಾತ 1818ರಲ್ಲಿ ವಾರಾಣಸಿಯಲ್ಲಿ ಆಂಗ್ಲ ಶಾಲೆಯೊಂದನ್ನು ತೆರೆದನಲ್ಲದೆ ಅದರ ವೆಚ್ಚಕ್ಕಾಗಿ 20,000 ರೂ. ಧನವನ್ನು ಮುಡುಪಾಗಿಟ್ಟ. 1823ರಲ್ಲಿ ಆಗ್ರದಲ್ಲಿನ ಗಂಗಾಧರಶಾಸ್ತ್ರಿಗಳೆಂಬುವರು ಜಮೀನಿನಿಂದ ಬರುತ್ತಿದ್ದ ಆದಾಯದ ಸಹಾಯದಿಂದ ಕಾಲೇಜು ಸ್ಥಾಪಿತವಾಯಿತು.
ಮುಂಬಯಿ ಪ್ರಾಂತ್ಯದ ಅನೇಕ ಜಿಲ್ಲೆಗಳಲ್ಲಿ ಕೊಡುಗೈ ದಾನಿಗಳ ಉದಾರ ಸಹಾಯದಿಂದಲೂ, ಸಾಮಾನ್ಯ ಜನರಿಂದ ಎತ್ತಿದ ನಿಧಿಯಿಂದಲೂ ಅನೇಕ ಶಿಕ್ಷಣ ಸಂಸ್ಥೆಗಳು ಸ್ಥಾಪಿತವಾದುವು. ಇವುಗಳಲ್ಲಿ ಮುಖ್ಯವಾದ ಸಂಸ್ಥೆಯೆಂದರೆ ದಕ್ಷಿಣ ಕೊಂಕಣ ದೇಶೀಯ ಶಾಲೆ.
ಪಾಚಿಯಪ್ಪ ಶಾಲೆಯ ಸ್ಥಾಪನೆ ಮದ್ರಾಸಿನ ಶಿಕ್ಷಣ ಇತಿಹಾಸದಲ್ಲಿ ಒಂದು ಹೊಸ ಶಕವನ್ನು ಸ್ಥಾಪಿಸಿತು. ಪಾಚಿಯಪ್ಪ ಮೊದಲಿಯಾರ್ ಸಾಯುವ ಮುನ್ನ ಒಂದು ಲಕ್ಷ ಪಗೋಡಗಳ ನಿಧಿಯನ್ನು ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗಾಗಿ 1794ರ ಮೊದಲೇ ಅರ್ಪಿಸಿದ. 1842ರ ಜನವರಿ ತಿಂಗಳಲ್ಲಿ ಪಾಚಿಯಪ್ಪ ಮೊದಲಿಯಾರ್ ಪ್ರಿಪರೇಟರಿ ಶಾಲೆ ಸ್ಥಾಪಿತವಾಯಿತು. ಈ ಸಂಸ್ಥೆ ಇಂದು ಅನೇಕ ಶಾಖೆಗಳಾಗಿ ಕವಲೊಡೆದಿದೆ.
1854ರಲ್ಲಿ ಪ್ರಕಟವಾದ ವುಡ್ಸ್ ಡೆಸ್‍ಪ್ಯಾಚ್ ಪತ್ರ ಖಾಸಗಿ ಸಂಸ್ಥೆಗಳಿಗೆ ದ್ರವ್ಯಸಹಾಯ ನೀಡಿ ಅವನ್ನು ಪ್ರೋತ್ಸಾಹಿಸಬೇಕೆಂದು ಸರ್ಕಾರಕ್ಕೆ ಶಿಫಾರಸುಮಾಡಿತು. ಅಷ್ಟೇ ಅಲ್ಲದೆ 1854 ಮತ್ತು 1902ರ ನಡುವಣ ಕಾಲದಲ್ಲಿ ಸರ್ಕಾರವಾಗಲಿ ಮತಪ್ರಚಾರಕರಾಗಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಸಾಹಸವನ್ನು ಮಾಡಲಿಲ್ಲ. ಈ ಶೈಕ್ಷಣಿಕ ಕೃಪಣತೆ ಭಾರತೀಯ ಶಿಕ್ಷಣ ಚಟುವಟಿಕೆಗಳಿಗೆ ಅಪೂರ್ವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಭಾರತೀಯರ ಶಿಕ್ಷಣ ಸಂಸ್ಥೆಗಳ ಬಾಹುಳ್ಯವನ್ನು ಈ ಮುಂದಿನ ಸಂಖ್ಯಾಪಟ್ಟಿ ದೃಢಪಡಿಸುತ್ತದೆ. ಸುಪ್ರಸಿದ್ಧ ಶಿಕ್ಷಣತಜ್ಞನಾದ ಎಫ್.ಡಬ್ಲ್ಯು. ತಾಮಸ್ ಕೂಡ 1854-1882ರ ನಡುವಣ ಕಾಲದಲ್ಲಿ ಮಿಷನರಿ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದವೆಂದು ತಿಳಿಸುತ್ತಾನೆ.
ದೇಶಿಯರು ಮತ್ತು ವಿದೇಶೀಯರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು
1881-82
ಸಂಸ್ಥೆಗಳು ದೇಶೀಯರಿಂದ ಸ್ಥಾಪಿತ ವಿದೇಶೀಯರಿಂದ ಸ್ಥಾಪಿತ ಆರ್ಟ್ಸ್ ಕಾಲೇಜುಗಳು 5 18 ಸೆಕೆಂಡರಿ ಶಾಲೆಗಳು 1,341 757 ಪ್ರಾಥಮಿಕ ಶಾಲೆಗಳು 54,662 1,842 ವೃತ್ತಿಪರ ಶಾಲಾ ಕಾಲೇಜುಗಳು 10 18 56,018 2,635
ರಾಷ್ಟ್ರೀಯ ಸರ್ಕಾರ ಸ್ಥಾಪಿತವಾದಾಗಿನಿಂದ ಶಿಕ್ಷಣ ಸಂಸ್ಥೆಗಳು ಖಾಸಗಿಯವರಿಂದ ಹಣ ಪಡೆಯಲು ಪ್ರಯತ್ನಿಸದೆ ಸರ್ಕಾರವನ್ನೇ ಅವಲಂಬಿಸುತ್ತಿವೆ. 1938ರಲ್ಲಿ ಕಾಂಗ್ರೆಸಿನವರು ಪ್ರಾಂತ್ಯಗಳ ಅಧಿಕಾರ ವಹಿಸಿಕೊಂಡಂದಿನಿಂದ ಜನತೆಯ ಈ ಅವಲಂಬನಾ ಬುದ್ಧಿ ಬೆಳೆಯತೊಡಗಿದೆ. ಕೆಲವು ಪ್ರಾಂತ್ಯಗಳಲ್ಲಿ ಖಾಸಗಿ ಶಾಲೆಗಳನ್ನು ಸರ್ಕಾರವೇ ವಹಿಸಿಕೊಳ್ಳಲಿ ಎಂಬ ಮನೋಭಾವವನ್ನು ಜನತೆ ವ್ಯಕ್ತಪಡಿಸುತ್ತಿದೆ. ಜನತೆಯ ಮತ್ತು ರಾಜಕಾರಣಿಗಳ ಕೆಲವು ಧೋರಣೆಗಳಿಂದಾಗಿ ಸ್ವತಂತ್ರ ಭಾರತದಲ್ಲಿ ಖಾಸಗಿ ಶಿಕ್ಷಣ ಪ್ರಗತಿ ಮಂದವಾಗುತ್ತಿದೆ. 1962-63ರಲ್ಲಿ ಶಿಕ್ಷಣದ ವಿವಿಧ ಹಂತಗಳಲ್ಲಿ ಕಾರ್ಯೋನ್ಮುಖವಾದ ವಿವಿಧ ಸಂಸ್ಥೆಗಳ ಸಂಖ್ಯಾ ಬಾಹುಳ್ಯವನ್ನು ಈ ಕೆಳಗಣ ಪಟ್ಟಿ ಸೂಚಿಸುತ್ತದೆ.
ವಿವಿಧ ಸಂಸ್ಥೆಗಳಿಂದ ನಡೆಸಲ್ಪಡುವ ಶಾಲಾಕಾಲೇಜುಗಳು 1962-63
ಪ್ರಾಥಮಿಕ ಶಾಲೆಗಳು ಮಾಧ್ಯಮಿಕ ಶಾಲೆಗಳು ಪ್ರೌಢಶಾಲೆಗಳು ಕಾಲೇಜುಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳು 19.5 19.4 18.2 32.1 ಜಿಲ್ಲಾ ಬೋರ್ಡ್ ಸಂಸ್ಥೆಗಳು 56.5 49.6 12.2 0.5 ಪುರಸಭಾ ಸಂಸ್ಥೆಗಳು 2.8 4.2 2.5 - ದ್ರವ್ಯಸಹಾಯ ಪಡೆಯುವ ಖಾಸಗಿ ಸಂಸ್ಥೆಗಳು 20.1 21.4 58.5 55.1 ದ್ರವ್ಯಸಹಾಯ ಪಡೆಯದ ಖಾಸಗಿ ಸಂಸ್ಥೆಗಳು 1.1 5.4 8.6 12.3
ಖಾಸಗಿ ಶಿಕ್ಷಣ ಸಂಸ್ಥೆಗಳು, ಸಮಸ್ಯೆಗಳು
[ಬದಲಾಯಿಸಿ]ಈ ಮೇಲಿನ ಪಟ್ಟಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಎಷ್ಟು ಪ್ರಭಾವಶಾಲಿಗಳಾಗಿವೆ ಎಂಬುದನ್ನು ಸೂಚಿಸುತ್ತದೆ. ಭಾರತೀಯ ಖಾಸಗಿ ಸಂಸ್ಥೆಗಳು ಇನ್ನೂ ಅಧಿಕ ಸಂಖ್ಯೆಯಲ್ಲಿ ಶಾಲಾಕಾಲೇಜುಗಳನ್ನು ತೆರೆಯುತ್ತಿವೆ. ಜನಸಂಖ್ಯೆ ಬೆಳೆಯುತ್ತಿರುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳೂ ಬೆಳೆಯುತ್ತಿವೆ. ಅದರ ಪರಿಣಾಮವಾಗಿ ಸಾಕಷ್ಟು ಉಪಾಧ್ಯಾಯರನ್ನೂ ಹಣವನ್ನೂ ಒದಗಿಸಲಾರದೆ ಅವು ಮುಗ್ಗರಿಸುತ್ತಿವೆ. ವಿದ್ಯಾಸಂಪನ್ನರೂ ತ್ಯಾಗಶೀಲರೂ ಆದ ತರುಣ ಪೀಳಿಗೆಯವರನ್ನು ಸಾಕಷ್ಟು ಸಂಖ್ಯೆಯಲ್ಲಿ ಆಕರ್ಷಿಸುವಲ್ಲಿ ಈ ಸಂಸ್ಥೆಗಳು ವಿಫಲವಾಗಿವೆ. ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳಿಗೆ ಚೈತನ್ಯದಾಯಕವಾದ ಉತ್ಕಟ ರಾಷ್ಟ್ರೀಯ ಮನೋಭಾವ ಮಾಯವಾಗತೊಡಗಿದೆ. ಉದಾರಮತಿಗಳಿಂದ ಒದಗಿ ಬರುತ್ತಿದ್ದ ಹಣ ಸಹಾಯ ಉಡುಗತೊಡಗಿದೆ. ಬರುತ್ತಿರುವ ಕೊಂಚ ಧನಸಹಾಯ ಕೂಡ ಸಹಸ್ರಾರು ಶಿಕ್ಷಣ ಸಂಸ್ಥೆಗಳ ಮಿತಿಮೀರಿದ ಹಣದ ಹಸಿವೆಯನ್ನು ಇಂಗಿಸಲು ಸಾಲದಾಗಿದೆ. ಈ ಮೇಲಿನ ಕಾರಣಗಳಿಂದ ಸರ್ವೋತ್ಕೃಷ್ಟವಾದ ಕೆಲವು ಸಂಸ್ಥೆಗಳ ಜೊತೆಗೆ ತುಚ್ಛಮಟ್ಟದ ಸಹಸ್ರಾರು ಶಾಲಾಕಾಲೇಜುಗಳನ್ನೂ ಇಂದು ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕಾಣಬಹುದಾಗಿದೆ. ಅನೇಕ ಶಿಕ್ಷಣ ಮಂದಿರಗಳು ಕೇವಲ ವ್ಯಾಪಾರೀ ಮನೋಧರ್ಮದಿಂದ ಕೆಲಸಮಾಡುತ್ತಿವೆ.
ಕೆಲವು ಸಂಸ್ಥೆಗಳಲ್ಲಿ ಕೋಮುವಾರು ಭಾವನೆಗಳು ತಲೆಯೆತ್ತುತ್ತಿವೆ. ಮತ್ತೆ ಕೆಲವು ರಾಜಕೀಯ ಪ್ರಭಾವಕ್ಕೆ ತುತ್ತಾಗುತ್ತಿವೆ.
ಅನೇಕ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರ ಸ್ಥಿತಿ ಉತ್ತಮವಾಗಿಲ್ಲ. ಖಾಯಂ ಕೆಲಸವಿಲ್ಲದೆ ಪರದಾಡುವ ಉಪಾಧ್ಯಾಯರ ಸಂಖ್ಯೆ ದಿನ ಕಳೆದಂತೆ ಬೆಳೆಯುತ್ತಿದೆ; ವಿಶ್ರಾಂತಿವೇತನವಿಲ್ಲದೆ ದುಡಿಯುತ್ತಿರುವ ಶಿಕ್ಷಕರ ಕಷ್ಟ ಅಪಾರವಾಗುತ್ತಿದೆ; ಭವಿಷ್ಯನಿಧಿಗೆ ತಮ್ಮ ಪಾಲಿನ ಹಣವನ್ನು ಪಾವತಿ ಮಾಡದ ಶಾಲೆಗಳ ಸಂಖ್ಯೆ ಇಮ್ಮಡಿಯಾಗುತ್ತಿದೆ. ಮೇಲಾಗಿ ಖಾಸಗಿ ಶಾಲಾ ಶಿಕ್ಷಕರ ವೇತನವೂ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಂದ ನಡೆಸಲ್ಪಡುತ್ತಿರುವ ಶಾಲೆಗಳ ಶಿಕ್ಷಕರಿಗಿಂತ ಕಡಿಮೆಯೆಂದೇ ಹೇಳಬೇಕು. ಅಲ್ಲದೆ ಅನೇಕ ಶಾಲೆಗಳಲ್ಲಿ ಅವರಿಗೆ ನಿಗದಿಯಾಗಿರುವ ಸಂಬಳ ದೊರಕುತ್ತಿಲ್ಲ. ಅಲ್ಲಿ ಅವರ ಸೇವಾನಿಯಮಗಳೂ ಸಮರ್ಪಕವಾಗಿಲ್ಲ. ಇವೆಲ್ಲ ಕಾರಣಗಳು ಅವರ ಕಾರ್ಯನಿಷ್ಠೆಯನ್ನು ಕುಂದಿಸುತ್ತಿವೆ. ಬಹುತೇಕ ಸಂಸ್ಥೆಗಳು ಸರ್ಕಾರದಿಂದ ಬರಬೇಕಾದ ಹಣವನ್ನು ಪಡೆದು ತಮ್ಮ ಪಾಲಿನ ಹಣವನ್ನು ಸುಳ್ಳು ಲೆಕ್ಕಗಳ ಮೂಲಕ ಸಲ್ಲಿಸಿ ಸರ್ಕಾರವನ್ನೂ ಜನತೆಯನ್ನೂ ವಂಚಿಸುತ್ತಿವೆ. ಆದ್ದರಿಂದ ಖಾಸಗಿ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಪೋಷಕ ವರ್ಗದವರು ಸಹ ಅವುಗಳ ಬಗ್ಗೆ ಅತೃಪ್ತಿಗೊಳ್ಳುತ್ತಿದ್ದಾರೆ. ವಿವಿಧ ರೂಪದಲ್ಲಿ ಅವರಿಂದ ಹಣ ಸುಲಿಗೆ ಮಾಡುತ್ತಿರುವುದು ಇದಕ್ಕೆ ಮುಖ್ಯ ಕಾರಣ.
ಯುದ್ಧಾನಂತರದ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಣಕಾಸಿನ ಮುಗ್ಗಟ್ಟಿಗೆ ಒಳಗಾದವು. ಹಿಂದೆ ದಾನಿಗಳಿಂದ ಸಂಗ್ರಹವಾಗುತ್ತಿದ್ದ ಧನದ ಬೆಂಬಲ ಅವಕ್ಕೆ ಆಗ ಬಹುಮಟ್ಟಿಗೆ ತಪ್ಪಿಹೋಗಿ ತಮ್ಮ ಪಾಲಿನ ಹಣವನ್ನು ಒದಗಿಸಲು ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ, ದುಬಾರಿ ಚಂದಾ-ಇತ್ಯಾದಿಗಳ ರೂಪದಲ್ಲಿ ಹಣತೆತ್ತಲು ಮೊದಲು ಮಾಡಿದವು. ಸಾರ್ವಜನಿಕರು ಈ ಬಗ್ಗೆ ಪ್ರತಿಭಟಿಸುತ್ತಿದ್ದರು. ಅವುಗಳ ವೆಚ್ಚದ ಬಹುಪಾಲನ್ನು ಈಗ ಸರ್ಕಾರವೇ ವಹಿಸುತ್ತಿರುವುದು ಕಂಡುಬರುತ್ತಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಮತ್ತು ಇತರ ಸಿಬ್ಬಂದಿಯವರ ವೇತನಾದಿ ಸೌಲಭ್ಯಗಳನ್ನು ರಕ್ಷಿಸಲು ಸರ್ಕಾರ ಈಚೆಗೆ ಎಲ್ಲ ದೇಶಗಳಲ್ಲೂ ಹೊಸ ನಿಯಮಗಳನ್ನು ರೂಪಿಸುತ್ತಿದೆ. ಹಾಗೆಯೆ ಅವುಗಳ ಆಡಳಿತದ ಬಗ್ಗೆಯೂ ಹೆಚ್ಚು ಕಟ್ಟುನಿಟ್ಟಾಗಿ ತನಿಖೆ ಆರಂಭವಾಗಿದೆ. ಸರ್ಕಾರವೇ ಎಲ್ಲ ಶಿಕ್ಷಣ ಸಂಸ್ಥೆಗಳನ್ನೂ ನಿರ್ವಹಿಸುವುದು ಅಸಾಧ್ಯವಾದ ಕೆಲಸವಾಗಿರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಾಮುಖ್ಯವನ್ನು ತೆಗೆದುಹಾಕುವಂತಿಲ್ಲ. ಅವುಗಳ ವ್ಯವಸ್ಥೆ ಮಾರ್ಪಟ್ಟು ಶಿಕ್ಷಣ ಚೆನ್ನಾಗಿ ನಡೆಯಬೇಕೆಂಬುದು ವಿದ್ಯಾತಜ್ಞರ ಉದ್ದೇಶ.
ಉಲ್ಲೇಖಗಳು
[ಬದಲಾಯಿಸಿ]- ↑ "educational institution - Dictionary Definition". Vocabulary.com. Archived from the original on 2017-09-10. Retrieved 2017-07-17.
- ↑ "educational institution". The Free Dictionary. Archived from the original on 2017-07-18. Retrieved 2017-07-17.
- ↑ "How educational institutions' architecture shapes young minds". Architectural Digest India (in Indian English). 2021-02-06. Retrieved 2023-10-08.
- ↑ "Schools As Anchor Institutions – A Community Organizer's Perspective". Education - Power - Change (in ಇಂಗ್ಲಿಷ್). 2023-02-05. Retrieved 2023-10-08.
- ↑ O’Farrell, Liam; Hassan, Sara; Hoole, Charlotte (2022-12-02). "The university as a Just anchor: universities, anchor networks and participatory research". Studies in Higher Education (in ಇಂಗ್ಲಿಷ್). 47 (12): 2405–2416. doi:10.1080/03075079.2022.2072480. ISSN 0307-5079.