ಈಸ್ಟ್‌ ಇಂಡಿಯ ಕಂಪನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ[ಬದಲಾಯಿಸಿ]

ಇಂಡಿಯ ಮತ್ತು ಇತರ ಪೌರಸ್ತ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ಬೆಳೆಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ. ಇಂಗ್ಲೆಂಡ್, ಹಾಲೆಂಡ್ (ಡಚ್), ಫ್ರಾನ್ಸ್, ಡೆನ್ಮಾರ್ಕ್, ಸ್ಕಾಟ್ಲೆಂಡ್, ಸ್ಪೇನ್, ಆಸ್ಟ್ರಿಯ, ಮತ್ತು ಸ್ವೀಡನ್ ದೇಶಗಳು 17-18ನೆಯ ಶತಮಾನಗಳಲ್ಲಿ ಈಸ್ಟ್ ಇಂಡಿಯ ಕಂಪನಿಗಳನ್ನು ರಚಿಸಿದುವಾದರೂ ಅವುಗಳ ಪೈಕಿ ಇಂಗ್ಲಿಷ್ ಕಂಪನಿಯೇ ಅತ್ಯಂತ ಪ್ರಮುಖವಾದದ್ದು. ಡಚ್ ಹಾಗೂ ಫ್ರೆಂಚ್ ಕಂಪನಿಗಳೂ ಸ್ವಲ್ಪಕಾಲ ಬಹಳ ಪ್ರಬಲವಾಗಿದ್ದವು.ಪೋರ್ಚುಗೀಸ್ ನಾವಿಕನಾದ ವಾಸ್ಕೋಡಗಾಮ ಆಫ್ರಿಕದ ಗುಡ್‍ಹೋಫ್ ಭೂಶಿರವನ್ನು ಬಳಸಿ ಭಾರತಕ್ಕೆ ಬಂದು 1498ರ ಮೇ 20 ರಂದು ಕಲ್ಲಿಕೋಟೆಯಲ್ಲಿ ಇಳಿದಾಗಲೇ ಪೂರ್ವ ಇಂಡಿಯ ವ್ಯಾಪಾರದ ಅಂಕುರಾರ್ಪಣವಾಯಿತು. ಪೋರ್ಚುಗೀಸರು ಇಲ್ಲಿ ವ್ಯಾಪಾರ ಕಂಪನಿ ಪ್ರಾರಂಭಿಸಲಿಲ್ಲ. ನೆಲ ಗೆದ್ದು ಜನರನ್ನು ಕ್ರೈಸ್ತ ಮತಕ್ಕೆ ಪರಿವರ್ತಿಸುವುದು ಅವರ ಮೂಲೋದ್ದೇಶ. ಮುಂದೆ ಡಚ್ಚರ ಪ್ರಾಮುಖ್ಯ ಹೆಚ್ಚಿತು. ಅವರ ನೌಕೆ ಪ್ರಥಮ ಬಾರಿಗೆ 1596ರಲ್ಲಿ ಗುಡ್‍ಹೋಫ್ ಭೂಶಿರವನ್ನು ಬಳಸಿ ಬಂತು. ಅವರು 1602ರಲ್ಲಿ ಈಸ್ಟ್ ಇಂಡಿಯ ಕಂಪನಿ ಸ್ಥಾಪಿಸಿದರು.ಪ್ರಥಮ ಶಾಸಿತ ಕಂಪನಿಯೆಂದರೆ ಇಂಗ್ಲೀಷರದು. 1600 ಕೊನೆಯ ದಿನದಂದು ಎಲೆಜûಬೆತ್ ರಾಣಿ ಲಂಡನ್ನಿನ ಈ ಕಂಪನಿಗೆ ಸನ್ನದು ನೀಡಿದಳು. ಅನಂತರ ಇನ್ನೆರಡು ಕಂಪನಿಗಳು ಹುಟ್ಟಿಕೊಂಡವು. ಮೊದಲ ಕಂಪನಿಯೊಂದಿಗೆ ಪೈಪೋಟಿ ನಡೆಸಿ ಕೊನೆಗೆ ಅದರಲ್ಲಿ ವಿಲೀನ ಹೊಂದಿದವು. ಅದರೊಂದಿಗೆ ತೀರ್ವ ಸ್ಪರ್ಧೆ ಹೂಡಿದ ಇನ್ನೊಂದು ಕಂಪನಿ 1698 ರಿಂದ 1709 ವರೆಗೆ ಬಾಳಿ ಅದೂ ಮೊದಲನೆಯ ಕಂಪನಿಯಲ್ಲಿ ಮಿಳಿತವಾಯಿತು. 1601ರಿಂದ 1618ರವರೆಗೆ ಈ ಕಂಪನಿ 12 ಬಿಡಿ ಯಾನ ಏರ್ಪಡಿಸಿತ್ತು. ಇವು ಬಹು ಯಶಸ್ವಿಯಾದವು. ಇದಕ್ಕೆಂದೇ ಹಣ ಹೂಡಿದ್ದ ಚಂದಾದಾರರಿಗೆ ಲಾಭದ ಕೊಳ್ಳೆ ಸಿಕ್ಕಿತು. ಈ ಯಾನಗಳು ಜಪಾನಿನವರೆಗೂ ಏರ್ಪಟ್ಟಿದ್ದವು. ಜಾವದ ಬಾಂಟಮಿನಲ್ಲೂ ಭಾರತದ ಸೂರತ್ತಿನಲ್ಲೂ ಮಚಲಿಪಟ್ಟಣದಲ್ಲೂ ಪೆಟ್ಟಪೋಲಿಯಲ್ಲೂ (ಬಂಗಾಲ ಕೊಲ್ಲಿ) ಕೋಠಿಗಳು ಸ್ಥಾಪಿತವಾದವು. ಒಂದನೆಯ ಜೇಮ್ಸ್ ದೊರೆ ಈ ಕಂಪನಿಗೆ ಬಹಳ ಪ್ರೋತ್ಸಾಹ ನೀಡಿದ. ಹದಿನೈದು ವರ್ಷಗಳ ಅವಧಿಗೆ ನೀಡಿದ್ದ ಸನ್ನದಿಗೆ ಶಾಶ್ವತ ಜೀವದಾನ ಮಾಡಿದ.

ವ್ಯಾಪಾರ ಸಂಪರ್ಕ[ಬದಲಾಯಿಸಿ]

ಭಾರತದೊಂದಿಗೆ ವ್ಯಾಪಾರೋದ್ದೇಶದಿಂದ ಹೊರಟ ಮೊದಲನೆಯ ಹಡಗು 1608ರಲ್ಲಿ ಭಾರತದ ಪಶ್ಚಿಮ ತೀರಪಟ್ಟಣವಾದ ಸೂರತ್ ತಲಪಿತು. ವ್ಯಾಪಾರ ಸೌಲಭ್ಯಗಳನ್ನು ಸಂಪಾದಿಸಲು ಕೆಲವು ಪ್ರಮುಖರು ಮೊಗಲ್ ಚಕ್ರವರ್ತಿ ಜಹಾಂಗೀರನ ಆಸ್ಥಾನಕ್ಕೆ ಹೋದರು. ಭಾರತ ಮತ್ತು ಈಸ್ಟ್ ಇಂಡೀಸ್ ದ್ವೀಪಗಳೊಡನೆ ವ್ಯಾಪಾರ ಸಂಪರ್ಕ ಬೆಳೆಸಲು ಇಂಗ್ಲೀಷರಿಗೆ ಬಹಳ ಆಶೆಯಿದ್ದರೂ ಈ ಭೂಭಾಗದಲ್ಲಿ ಆಗಲೇ ವ್ಯಾಪಾರ ನಡೆಸುತ್ತಿದ್ದ ಡಚ್ಚರಿಗೆ ಇದು ಸರಿಬೀಳಲಿಲ್ಲ. ಈಸ್ಟ್ ಇಂಡೀಸಿನಲ್ಲಿ ವ್ಯಾಪಾರ ಬೆಳೆಸಲು ಬಂದ ಇಂಗ್ಲೀಷರಿಗೆ ಅವರಿಂದ ಪ್ರಬಲ ಪ್ರತಿಭಟನೆಯುಂಟಾಯಿತು. ಆಂಬಾಯ್ನ ದ್ವೀಪದಲ್ಲಿ ನೆಲಸಿದ್ದ ಇಂಗ್ಲೀಷರನ್ನು ಡಚ್ಚರು 1623ರಲ್ಲಿ ಕೊಲೆ ಮಾಡಿದರು. ಇದರ ಪರಿಣಾಮವಾಗಿ ಇಂಗ್ಲೀಷರು ಈಸ್ಟ್ ಇಂಡೀಸಿನೊಂದಿಗೆ ವ್ಯಾಪಾರ ಬೆಳೆಸುವುದನ್ನು ಬಿಟ್ಟು, ಭಾರತದೊಂದಿಗೆ ವ್ಯಾಪಾರವನ್ನಿಟ್ಟುಕೊಳ್ಳಬೇಕಾಯಿತು. ಇದರಿಂದಾಗಿ ಬರಿಯ ಸಾಂಬಾರ ಪದಾರ್ಥಗಳ ವ್ಯಾಪಾರಕ್ಕೆ ಹೆಚ್ಚು ಗಮನ ನೀಡಲಾಗಲಿಲ್ಲ. ನೀಲಿ, ಹತ್ತಿಯ ಬಟ್ಟೆ, ಬಂದೂಕದ ಮದ್ದಿಗೆ ಬೇಕಾಗುವ ಪೆಟ್ಲುಪ್ಪು, ಸಕ್ಕರೆ, ದಾರ ಇತ್ಯಾದಿ ವಸ್ತುಗಳ ವ್ಯಾಪಾರವೂ ಬೆಳೆಯಿತು. ಇಂಗ್ಲೀಷರು ವ್ಯಾಪಾರ ನಿಮಿತ್ತವಾಗಿ ಇಲ್ಲಿನ ಅಧಿಕಾರಿಗಳೊಂದಿಗೂ ವರ್ತಕರೊಂದಿಗೂ ಸಂಪರ್ಕ ಹೊಂದಿದರು. ಹದಿನೆಂಟನೆಯ ಶತಮಾನದಲ್ಲಿ ಸ್ಥಳೀಯ ರಾಜಕೀಯದಲ್ಲೂ ಕೈಹಾಕಿದರು. ಪೋರ್ಚುಗೀಸರಿಂದ ಇಂಗ್ಲೀಷರಿಗೆ ತೊಂದರೆಯುಂಟಾಯಿತು. ಸೂರತ್‍ನ ತೀರದಲ್ಲೂ ಪರ್ಷಿಯ ಕೊಲ್ಲಿಯಲ್ಲಿಯೂ ಇಂಗ್ಲೀಷರಿಗೂ ಪೋರ್ಚುಗೀಸರಿಗೂ ನಡೆದ ನೌಕಾಯುದ್ಧದಲ್ಲಿ ಇಂಗ್ಲೀಷರು ಗೆದ್ದರು. ಪೋರ್ಚುಗೀಸರಿಗಿಂತ ಇಂಗ್ಲಿಷರು ನೌಕಾಬಲದಲ್ಲಿ ಪ್ರಬಲರೆಂಬ ವಿಚಾರ ಚಕ್ರವರ್ತಿ ಜಹಾಂಗೀರನಿಗೆ ಮನವರಿಕೆಯಾಯಿತು. ಆತ ವ್ಯಾಪಾರ ಸೌಲಭ್ಯಗಳನ್ನೂ ಒದಗಿಸಿದ. ಸೂರತ್ತನ್ನು ಮುಖ್ಯ ಕೋಠಿಯಾಗಿ ಇಟ್ಟುಕೊಂಡು ಅನಂತರ ಮಚಲೀ ಪಟ್ಟಣ ಮತ್ತು ಮದ್ರಾಸಿನಲ್ಲಿ (1641) ಕಾರ್ಖಾನೆಗಳನ್ನೂ ಕೋಠಿಗಳನ್ನೂ ಅವರು ಸ್ಥಾಪಿಸಿದರು. ಬಂಗಾಳ ಪ್ರಾಂತ್ಯದೊಂದಿಗೂ ವ್ಯಾಪಾರ ಪ್ರಾರಂಭಿಸಿದರು. ಕ್ರಿ.ಶ.1691ರಲ್ಲಿ ಕಲ್ಕತ್ತ ಪಟ್ಟಣದ ನಿರ್ಮಾಣವಾಯಿತು. ಪೋರ್ಚುಗೀಸರ ಸ್ವಾಧೀನದಲ್ಲಿದ್ದ ಮುಂಬಯಿ ಇಂಗ್ಲೆಂಡಿನ ದೊರೆ ಎರಡನೆಯ ಚಾರಲ್ಸ್‍ನ ರಾಣಿಗೆ ಬಳುವಳಿಯಾಗಿ ದೊರೆಯಿತು. ಮೊಗಲ್ ಚಕ್ರವರ್ತಿ ಔರಂಗಜೇಬನಿಗೂ ಇಂಗ್ಲಿಷರಿಗೂ ಕೆಲವು ವಿಷಯಗಳಲ್ಲಿ ವೈಮನಸ್ಯ ಉಂಟಾದರೂ ಅದರಿಂದಾಗಿ ಇಂಗ್ಲಿಷರ ವ್ಯಾಪಾರಕ್ಕೇನೂ ಚ್ಯುತಿ ಬರಲಿಲ್ಲ. ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿಯ ವ್ಯಾಪಾರ ಅಭಿವೃದ್ಧಿಯಾದದ್ದನ್ನು ಕಂಡು ಇತರ ಐರೋಪ್ಯ ದೇಶಗಳವರೂ ತಮ್ಮ ವ್ಯಾಪಾರೋದ್ಯಮಗಳನ್ನು ಇಂಡಿಯ ದೇಶದೊಂದಿಗೆ ಬೆಳೆಸಲು ಮನಸ್ಸು ಮಾಡಿದರು. ಮುಖ್ಯವಾಗಿ ಫ್ರೆಂಚರು ಈ ಕೆಲಸಕ್ಕೆ ಹೆಚ್ಚಾಗಿ ಕೈಹಾಕಿದರು. ಈ ಕಂಪನಿಯ ಮಸಾಹತುಗಳು ಕೇವಲ ವ್ಯಾಪಾರದ ಕೋಠಿಗಳಾಗಿದ್ದವು. ಕಂಪನಿಯ ವರ್ತಕರು ತಮ್ಮ ಸಂಸ್ಥೆಯ ವ್ಯಾಪಾರದೊಂದಿಗೆ ವೈಯಕ್ತಿಕವಾಗಿಯೂ ವ್ಯಾಪಾರ ನಡೆಸುತ್ತಿದ್ದರು. ಇಂಗ್ಲೆಂಡಿನಲ್ಲೇ 1691ರಲ್ಲಿ ಈ ಕಂಪನಿಯ ಪ್ರತಿಸ್ಪರ್ಧಿಗಳು ಒಂದು ಹೊಸ ಸಂಘ ಸ್ಥಾಪಿಸಿಕೊಂಡು ಅದಕ್ಕೆ ಸನ್ನದು ಪಡೆದರು. ಈ ಸ್ಪರ್ಧೆ ಕೆಲವರ್ಷ ಸಾಗಿದ ಮೇಲೇ ಇವೆರಡನ್ನೂ ಕೂಡಿಸಿ ಒಂದೇ ಕಂಪನಿಯ ರಚನೆಯಾಯಿತು.ಕಾಲಕ್ರಮೇಣ ಕಂಪನಿಯ ಸರಕುಗಳನ್ನೂ ವ್ಯಾಪಾರವನ್ನೂ ಸುಭದ್ರವಾಗಿಡಲು ವಸಾಹತುಗಳ ಸುತ್ತಲೂ ಕೋಟೆ ಕೊತ್ತಲಗಳನ್ನು ಕಟ್ಟಬೇಕಾಯಿತು. ಈ ಕಾರಣದಿಂದ ಪಶ್ಚಿಮ ತೀರದಲ್ಲಿದ್ದ ಕೋಠಿಯನ್ನು ಸೂರತ್ತಿನಿಂದ ಮುಂಬಯಿಗೆ ವರ್ಗಾಯಿಸಲಾಯಿತು. ಕಲ್ಕತ್ತೆಯ ಕಾರ್ಖಾನೆ ಮತ್ತು ಕೋಠಿಗಳನ್ನು ಪೋರ್ಟ ವಿಲಿಯಂ ಕೋಟೆಯಲ್ಲಿ ಸ್ಥಾಪಿಸಲಾಯಿತು. ಮದ್ರಾಸಿನ ಕೋಟೆಗೆ ಫೋರ್ಟ್‍ಸೆಂಟ್ ಜಾರ್ಜ್ ಎಂದೂ ಕಡಲೂರಿನ ಬಳಿ ಇದ್ದ ಕೋಟೆಗೆ ಫೋರ್ಟ್‍ಸೆಂಟ್ ಡೇವಿಡ್ ಎಂದೂ ಹೆಸರಾಯಿತು. ವ್ಯಾಪಾರ ಬೆಳೆದ ಹಾಗೆ ಭಾರತದ ಪಟ್ಟಣಗಳು ವೃದ್ಧಿಯಾದವು. ನೀಲಿ, ಪೆಟ್ಲುಪ್ಪು, ಹತ್ತಿ ಮತ್ತು ರೇಷ್ಮೆಯ ಬಟ್ಟೆ, ಸಾಂಬಾರ ಪದಾರ್ಥ-ಇವು ವ್ಯಾಪಾರದ ಮುಖ್ಯ ಸರಕು. ಯೂರೋಪಿನಲ್ಲಿ ಇಂಗ್ಲೆಂಡ್ ಫ್ರಾನ್ಸ್‍ಗಳಿಗೆ ವೈಮನಸ್ಯ ಉಂಟಾದಾಗಲೆಲ್ಲ ಭಾರತದಲ್ಲೂ ಇಂಗ್ಲಿಷ್ ಫ್ರೆಂಚ್ ಕಂಪನಿಗಳಿಗೆ ಘರ್ಷಣೆಯುಂಟಾಗುತ್ತಿತ್ತು. ಕ್ರಿ.ಶ.1746ರಲ್ಲಿ ಫ್ರೆಂಚ್ ನೌಕಾಪಡೆ ಮದ್ರಾಸನ್ನು ಆಕ್ರಮಿಸಿತು. ಎರಡು ವರ್ಷಗಳ ಅನಂತರ ಬ್ರಿಟಿಷ್ ನೌಕಾಪಡೆ ಫ್ರೆಂಚ್ ಈಸ್ಟ್ ಇಂಡಿಯ ಕಂಪನಿಯ ಮುಖ್ಯ ಠಾಣ್ಯವಾದ ಪುದುಚೇರಿಯನ್ನು ಮುತ್ತಿತು. ಯೂರೋಪಿನಲ್ಲಿ ಎರಡು ದೇಶಗಳಿಗೂ ಶಾಂತಿಯುಂಟಾದ ಮೇಲೆ ಮದ್ರಾಸು ಇಂಗ್ಲಿಷರ ವಶಕ್ಕೆ ಬಂತು. ಮುಂದೆ ಫ್ರೆಂಚ್ ಈಸ್ಟ್ ಇಂಡಿಯ ಕಂಪನಿಯ ಅಧಿಪತಿಯಾದ ಡೂಪ್ಲೆ ಪ್ರಬಲನಾದ. ಒಂದು ಸ್ಥಳೀಯ ರಾಜ್ಯದೊಡನೆ ಆತ ಸ್ನೇಹ ಬೆಳೆಸಿ, ಇಂಗ್ಲಿಷರನ್ನು ಭಾರತದಿಂದ ಓಡಿಸಬೇಕೆಂದು ಹವಣಿಸುತ್ತಿದ್ದ. ಕರ್ಣಾಟಕದ ನವಾಬರಿಗೆ ಇಂಗ್ಲಿಷರೂ ಫ್ರೆಂಚರೂ ತಮ್ಮ ತಮ್ಮ ಅನುಯಾಯಿಗಳನ್ನು ನೇಮಿಸಲು ಹವಣಿಸುತ್ತಿದ್ದರು. ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿಯನ್ನು ಹಾಳುಮಾಡುವ ಉದ್ದೇಶದಿಂದ ಡೂಪ್ಲೆ ಹೈದರಾಬಾದಿನ ನಿಜಾಮನಿಗೆ ಬೆಂಬಲವಾಗಿ ನಿಂತ. ಅಲ್ಲಿ ತನ್ನ ಕಡೆಯ ಅಧಿಕಾರಿಯನ್ನು ನೇಮಿಸಿ ನಿಜಾಮನ ಪದವಿಗೆ ನೆರವಾದ. ಆದರೆ ಈ ಉದ್ಯಮಗಳೆಲ್ಲ ಕೇವಲ ರಾಜಕೀಯವಾದದ್ದರಿಂದ ಅವನ್ನು ನಡೆಸಿ ಕೊಂಡು ಬರಲು ಬಹಳ ಹಣ ಬೇಕಾಯಿತು. ಆರ್ಥಿಕದೃಷ್ಟಿಯಿಂದ ಯಾವ ಪ್ರಯೋಜನವೂ ಇಲ್ಲದೆ ಕೊನೆಯಲ್ಲಿ ಈ ಪ್ರಯತ್ನಗಳೆಲ್ಲ ವ್ಯರ್ಥವಾದವು. ಡೂಪ್ಲೆಯ ಪ್ರಯತ್ನಗಳನ್ನೆಲ್ಲ ನಿಷ್ಪಲಗೊಳಿಸಿದ ಇಂಗ್ಲಿಷ್ ಅಧಿಕಾರಿ ರಾಬರ್ಟ್ ಕ್ಲೈವ್ ತನ್ನ ರಾಜತಂತ್ರದಿಂದ ಕರ್ನಾಟಕದ ನವಾಬನನ್ನು ತನ್ನ ಕಡೆಗೆ ಒಲಿಸಿಕೊಂಡ. ಕೊನೆಯದಾಗಿ ಇಂಗ್ಲಿಷರು ಪುದುಚೇರಿಯನ್ನೂ ವಶಪಡಿಸಿಕೊಂಡು, ಫ್ರೆಂಚರು ಭಾರತದಲ್ಲಿ ಚಕ್ರಾಧಿಪತ್ಯ ನಿರ್ಮಿಸಬೇಕೆಂದಿದ್ದ ಆಸೆಯನ್ನು ಭಗ್ನಗೊಳಿಸಿದರು.

ದಕ್ಷಿಣ ಭಾರತದಲ್ಲಿ ನಡೆದ ಈ ಇಂಗ್ಲಿಷ್-ಫ್ರೆಂಚ್ ಘರ್ಷಣೆಗಳಿಂದ ಮುಂದೆ ಇಂಗ್ಲಿಷರು ಬಂಗಾಳ ಪ್ರಾಂತ್ಯದ ರಾಜಕೀಯ ವ್ಯವಹಾರದಲ್ಲಿ ಕೈಹಾಕಲು ಬಹಳ ಅನುಕೂಲವಾಯಿತು. ಮದ್ರಾಸಿನಲ್ಲಿ ದೊರೆತ ಅನುಭವದಿಂದ ಇಂಗ್ಲಿಷರಿಗೆ ಬಂಗಾಳದಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆಸಲು ಸಹಾಯವಾಯಿತು. ಬಂಗಾಳ ಮದ್ರಾಸಿಗಿಂತ ಫಲವತ್ತಾದ ಪ್ರದೇಶವಾಗಿದ್ದು, ನೀರಾವರಿ, ಸಂಚಾರ ಮತ್ತು ವ್ಯಾಪಾರಕ್ಕೆ ಅನುಕೂಲ ಇದ್ದದ್ದರಿಂದ, ಕ್ಲೈವನಿಗೆ ಕಂಪನಿಯ ಪರವಾಗಿ ಹೇರಳ ಲಾಭ ಸಂಪಾದಿಸಲು ಸಾಧ್ಯವಾಯಿತು. ಈಸ್ಟ್ ಇಂಡಿಯ ಕಂಪನಿಗೆ ಬಂಗಾಳದಲ್ಲಿ ವ್ಯಾಪಾರಕ್ಕೆ ಯಾವ ವಿಧವಾದ ಅಡಚಣೆಯೂ ಇರಲಿಲ್ಲ. ಸ್ಥಳೀಯ ಸರ್ಕಾರಕ್ಕೆ ವರ್ಷಕ್ಕೆ ಒಂದು ಸಲ ಸ್ವಲ್ಪ ಹಣ ಮಾತ್ರ ಕೊಡುತ್ತಿದ್ದರು. ಸಿರಾಜುದ್ದೌಲ ಬಂಗಾಳದ ನವಾಬನಾದ ಮೇಲೆ ಇಂಗ್ಲಿಷರ ವ್ಯಾಪಾರಕ್ಕೆ ಅಡ್ಡಿಯಾಯಿತು. ತನ್ನ ಅಪ್ಪಣೆಯಿಲ್ಲದೆ ಇಂಗ್ಲಿಷರು ತಮ್ಮ ಕೋಠಿಗಳ ಸುತ್ತಲೂ ಕೊತ್ತಲ ನಿರ್ಮಿಸಕೂಡದೆಂದು ಆತ ವಿಧಿಸಿದ. ಈ ಆಜ್ಞೆಯನ್ನು ಪಾಲಿಸಲಿಲ್ಲ. ಇಂಗ್ಲಿಷರ ವಸಾಹತವಾದ ಕಲ್ಕತ್ತೆಯನ್ನು ನವಾಬ ವಶಪಡಿಸಿಕೊಂಡ. ಇದೇ ಸಮಯದಲ್ಲಿ ನವಾಬನ ಸೈನ್ಯಕ್ಕೂ ಬ್ರಿಟಿಷರಿಗೂ ಪ್ಲಾಸಿ ಎಂಬಲ್ಲಿ ಯುದ್ಧ ನಡೆದು ಸಿರಾಜುದ್ದೌಲ ಸತ್ತ. ಹಿಂದೆಯೇ ಒಪ್ಪಂದಕ್ಕೆ ಬಂದ ಹಾಗೆ ನವಾಬನ ಸೇನಾಧಿಪತಿಯಾಗಿದ್ದ ಮೀರ್ ಜಾಫರನನ್ನು ಇಂಗ್ಲಿಷರು ನವಾಬಗಿರಿಗೆ ಏರಿಸಿದರು. ಈಸ್ಟ್ ಇಂಡಿಯ ಕಂಪನಿ ಮತ್ತು ಅದರ ನೌಕರರಿಗೆ ಹೊಸ ನವಾಬ ಬಹಳ ರಿಯಾಯಿತಿಗಳನ್ನೂ ಹಣವನ್ನೂ ಕೊಟ್ಟ. ಮೀರ್ ಜಾಫರ್ ಇಂಗ್ಲಿಷರ ಕೈಗೊಂಬೆಯಾದ್ದುದರಿಂದ, ಕಂಪನಿಯ ನೌಕರರ ವೈಯಕ್ತಿಕ ವ್ಯಾಪಾರ ವೃದ್ಧಿಯಾಗಿ, ಲಂಚಕೋರತನ ತಾಂಡವವಾಡಿತು. ಕೊನೆಗೆ ನವಾಬ ಆಡಳಿತಕ್ಕೆ ಅರ್ಹನಲ್ಲವೆಂದು ಮೀರ್ ಖಾಸಿಂ ಎಂಬುವವನನ್ನು ನವಾಬನಾಗಿ ನಿಯಮಿಸಿದರು. ಹೊಸ ನವಾಬ ವ್ಯಾಪಾರ ತೆರಿಗೆಯ ವಿಚಾರದಲ್ಲಿ ಇಂಗ್ಲಿಷರಿಗೆ ನೀಡಿದ್ದ ವಿನಾಯಿತಿಯನ್ನು ಇತರ ವರ್ತಕರಿಗೂ ಅನ್ವಯಿಸಿದ. ಈತನ ವರ್ತನೆ ಇಂಗ್ಲಿಷರಿಗೆ ಸರಿಬೀಳಲಿಲ್ಲ. ಅವರು ಬಕ್ಸಾರ್ ಯುದ್ಧದಲ್ಲಿ ಇವನನ್ನು ಸೋಲಿಸಿ, ಮೀರ್ ಜಾಫರನನ್ನು ಪುನಃ ನವಾಬಗಿರಿಗೆ ಏರಿಸಿದರು. ಆಗ ಇಂಗ್ಲಿಷರು ಬಂಗಾಳದ ನಿಜವಾದ ಅಧಿಕಾರಿಗಳಾದರು. ಕಂದಾಯ ಮತ್ತು ತೆರಿಗೆ ವಸೂಲು ಮಾಡುವ ಅಧಿಕಾರವನ್ನು ಇಂಗ್ಲಿಷರೇ ಇಟ್ಟುಕೊಂಡು ರಾಜ್ಯರಕ್ಷಣೆ ಮತ್ತು ನ್ಯಾಯಪರಿಪಾಲನೆಯ ಕಾರ್ಯವನ್ನು ನವಾಬನಿಗೆ ವಹಿಸಿಕೊಟ್ಟರು. ಈ ಏರ್ಪಾಡಿಗೆ ಬಂಗಾಳದ ದ್ವಿಮುಖ ಸರ್ಕಾರವೆಂದು ಹೆಸರಾಯಿತು. ಕ್ಲೈವನ ಕಾರ್ಯಕ್ರಮಗಳಿಂದ ಕಂಪನಿಯ ಆಡಳಿತಕ್ಕೆ ಒಂದು ನ್ಯಾಯಬದ್ಧವಾದ ರೂಪ ಬಂತು. ಮುಂದೆ ಇಂಗ್ಲಿಷ್ ಗೌರ್ನರ್-ಜನರಲ್ ವಾರನ್ ಹೇಸ್ಟಿಂಗ್ಸನ ಅಧಿಕಾರಾವಧಿಯಲ್ಲಿ ಭೂಕಂದಾಯ ಮತ್ತು ತೆರಿಗೆಗಳನ್ನು ಕಂಪನಿಯ ಅಧಿಕಾರಿಗಳೇ ವಸೂಲಿ ಮಾಡುತ್ತಿದ್ದರು. ಮೊಗಲ್ ಚರ್ಕವರ್ತಿಗೆ ಕೊಡುತ್ತಿದ್ದ ಕಪ್ಪದ ಹಣವೂ ನಿಂತುಹೋಯಿತು.[೧]

ಪರಿಣಾಮ[ಬದಲಾಯಿಸಿ]

ಕಂಪನಿ ರಾಜ್ಯಾಡಳಿತ ವಹಿಸಿಕೊಂಡ ಮೇಲೆ ಹಣದ ಅಭಾವದಿಂದ ಸಾಲ ಮಾಡಬೇಕಾಯಿತು. ಈ ಸಾಲ ತೀರಿಸಲು ಇಂಗ್ಲೆಂಡಿನ ಸರ್ಕಾರಕ್ಕೆ ಸಹಾಯಕ್ಕಾಗಿ ಮನವಿ ಮಾಡಿಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಆ ಸರ್ಕಾರ ಕಂಪನಿಯ ಆಡಳಿತ ಸೂತ್ರಗಳ ಮೇಲೆ ಹತೋಟಿಯನ್ನಿಟ್ಟುಕೊಳ್ಳುವ ಉದ್ದೇಶದಿಂದ ರೆಗ್ಯುಲೇಟಿಂಗ್ ಆಕ್ಟ್ ಎಂಬ ಅಧಿನಿಯಮವನ್ನು ಜಾರಿಗೆ ತಂದಿತು (1773). ಕಂಪನಿಯ ಎಲ್ಲ ಅಧಿಪತ್ಯಗಳ ಮೇಲೂ ಮೇಲ್ವಚಾರಣೆಯ ಅಧಿಕಾರವುಳ್ಳ ಗೌರ್ನರ್ ಜನರಲ್ ಎಂಬ ಅಧಿಕಾರಿಯನ್ನು ಕಲ್ಕತ್ತೆಯಲ್ಲಿ ನೇಮಿಸಲಾಯಿತು. ಈ ಅಧಿಕಾರಿಯ ಸಹಾಯಕ್ಕಾಗಿ ನಾಲ್ಕು ಸದಸ್ಯರನ್ನುಳ್ಳ ಒಂದು ಸಮಿತಿಯೂ ಏರ್ಪಾಡಾಯಿತು. ಕಲ್ಕತ್ತೆಯಲ್ಲಿ ಒಂದು ಪರಮಾಧಿಕಾರವುಳ್ಳ ನ್ಯಾಯಸ್ಥಾನ ರೂಪಗೊಂಡಿತು. ಈ ಏರ್ಪಾಡುಗಳಿಂದ ಕಂಪನಿಯ ಆಡಳಿತ ಬ್ರಿಟಿಷ್ ಪಾರ್ಲಿಮೆಂಟಿನ ಹತೋಟಿಗೆ ಒಳಪಟ್ಟಂತಾಯಿತು. ಆದರೆ ಗೌರ್ನರ್-ಜನರಲನಿಗೆ ಇತರ ಆಧಿಪತ್ಯಗಳ ಆಡಳಿತದ ಮೇಲೆ ತನ್ನ ಅಧಿಕಾರವನ್ನು ಒತ್ತಾಯಪಡಿಸುವ ಅನುಕೂಲತೆಗಳಿಲ್ಲದ್ದರಿಂದ, ಮದ್ರಾಸು ಮತ್ತು ಬೊಂಬಾಯಿಯಲ್ಲಿದ್ದ ಕಂಪನಿಯ ಆಧಿಪತ್ಯಗಳು ಸ್ವತಂತ್ರವಾಗಿ ವ್ಯವಹಾರಗಳಲ್ಲಿ ತೊಡಗಲು ಸಾಧ್ಯವಾಯಿತು. ಗೌರ್ನರ್-ಜನರಲನ ಸಹಾಯ ಸಮಿತಿಯ ಸದಸ್ಯರುಗಳು ಕೂಡ ಐಕ್ಯಮತ್ಯದಿಂದ ಕೆಲಸ ನಿರ್ವಹಿಸದೆ ಇದ್ದುದರಿಂದ ಅನೇಕ ಸಲ ರಾಜಕೀಯ ವ್ಯವಹಾರದಲ್ಲಿ ಕಾರ್ಯನಿರ್ವಾಹಕರಿಗೆ ತೊಂದರೆಯಾಯಿತು. ಆದ್ದರಿಂದ ರೆಗ್ಯುಲೇಟಿಂಗ್ ಆಕ್ಟ್‍ನಲ್ಲಿದ್ದ ಲೋಪದೋಷಗಳನ್ನು ಸರಿಪಡಿಸುವುದಕ್ಕಾಗಿ ಪಿಟ್ಸ್ ಇಂಡಿಯ ಆಕ್ಟ್ ಎಂಬ ಅಧಿನಿಯಮವನ್ನು ಇಂಗ್ಲೆಂಡಿನ ಪಾರ್ಲಿಮೆಂಟು ಅನುಮೋದಿಸಿತು. ಕ್ರಿ.ಶ. 1857ವರೆಗೂ ಭಾರತದ ಆಡಳಿತ ನಡೆಯುತ್ತಿದ್ದುದು ಇದಕ್ಕೆ ಅನುಸಾರವಾಗಿಯೇ ಬ್ರಿಟಿಷ್ ಮಂತ್ರಿಮಂಡಲದ ಒಬ್ಬ ಸದಸ್ಯನನ್ನು ಅಧ್ಯಕ್ಷನಾಗಿ ಉಳ್ಳ ಬೋರ್ಡ್ ಆಫ್ ಕಂಟ್ರೋಲ್ ಎಂಬ ಆಲೋಚನಾ ಸಭೆಯ ನೇಮಕವಾಯಿತು. ಕಂಪನಿಯ ಎಲ್ಲ ಬಗೆಯ ರಾಜಕೀಯ ವ್ಯವಹಾರಗಳು, ಕಾಯಿದೆಗಳು ಮತ್ತು ಆಜ್ಞೆಗಳ ವಿಮರ್ಶೆಯ ತಿದ್ದುಪಡಿ ಮುಂತಾದ ಅಧಿಕಾರಗಳೆಲ್ಲ ಈ ಸಭೆಗೆ ಸಂಬಂಧಪಟ್ಟಿತ್ತು. ಕಂಪನಿಯ ಸರ್ಕಾರದ ನೀತಿಯ ವಿಚಾರದಲ್ಲಿ ಪರಮಾಧಿಕಾರಿ ಸಮಿತಿಯಂದೇ ಆಯಿತು. ಗೌರ್ನರ್-ಜನರಲನ ಅಧಿಕಾರವನ್ನು ವಿಸ್ತರಿಸಲಾಯಿತು. ಹತ್ತೊಂಬತ್ತನೆಯ ಶತಮಾನದ ವೇಳೆಗೆ ಈಸ್ಟ್ ಇಂಡಿಯ ಕಂಪನಿಯಿಂದ ಭಾರತದಲ್ಲಿ ಚಕ್ರಾಧಿಪತ್ಯ ನಿರ್ಮಾಣಕಾರ್ಯ ಪೂರೈಸುವುದರಲ್ಲಿತ್ತು. ದೇಶೀಯ ರಾಜರೂ ಇದರ ಅಧೀನಕ್ಕೊಳಪಟ್ಟಿದ್ದರು. ಕಂಪನಿಯ ಇಂಡಿಯ ರಾಜ್ಯಾಂಗ ಲಂಡನ್ನಿನ ಬ್ರಿಟಿಷ್ ಸರ್ಕಾರಕ್ಕೆ ಅಧೀನವಾಯಿತು. ಭಾರತದ ಆಡಳಿತ ಏಕರೀತಿಯಾಗಬೇಕೆಂಬ ಗೌರ್ನರ್-ಜನರಲ್ ಲಾರ್ಡ್ ಡಾಲ್ ಹೌಸಿಯ ಇಚ್ಛೆಯಾಗಿತ್ತು. ಆಶ್ರಿತ ಸಂಸ್ಥಾನಗಳ ರಾಜರಿಗೆ ಸ್ವಂತ ಸಂತತಿ ಇಲ್ಲದಾಗ ಅಥವಾ ರಾಜ್ಯಗಳಲ್ಲಿ ಆಡಳಿತ ಕೆಟ್ಟುಹೋದಾಗ ಅಂಥ ರಾಜ್ಯಗಳನ್ನು ಕಂಪನಿಯ ನೇರ ಆಳ್ವಿಕೆಗೆ ಸೇರಿಸುವ ನೀತಿಯನ್ನು ಈತ ಅನುಸರಿಸಿದ. ಮುಂದೆ ಸಂಭವಿಸಿದ 1857ರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಈ ನೀತಿಯೂ ಒಂದು ಕಾರಣವಾಯಿತು. ಭಾರತ ದೇಶದ ಪುರಾತನ ಸಂಪ್ರದಾಯಗಳಿಗೂ ಆಧುನಿಕ ತತ್ತ್ವಗಳಿಗೂ ಘರ್ಷಣೆಯುಂಟಾಗಿ ನವಯುಗದ ಪ್ರಾರಂಭವಾಯಿತು. ಬ್ರಿಟಿಷ್ ಚಕ್ರವರ್ತಿನಿ ವಿಕ್ಟೋರಿಯ ರಾಣಿಯ ಪ್ರಭುತ್ವದ ಆಜ್ಞೆಯ ಪ್ರಕಾರ, ಭಾರತ ದೇಶದ ಆಡಳಿತ ಈಸ್ಟ್ ಇಂಡಿಯ ಕಂಪನಿಯ ಕೈತಪ್ಪಿ ಬ್ರಟಿಷ್ ಸಾರ್ವಭೌಮರ ಅಧಿಕಾರಕ್ಕೆ ಸೇರಿತು (1858). ಅದುವರೆಗೆ ಕಂಪನಿಯ ನೌಕರರಾಗಿದ್ದವರನೇಕರು ಬ್ರಿಟಿಷ್ ಚಕ್ರವರ್ತಿಯ ಅಧಿಕಾರದಲ್ಲಿ ಮುಂದುವರಿದರು. ಭಾರತದ ವ್ಯವಹಾರಗಳನ್ನು ನಿರ್ವಹಿಸಲು ಲಂಡನ್ನಿನಲ್ಲಿ ಇಂಡಿಯಾ ಕಾರ್ಯದರ್ಶಿ (ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯ) ಎಂಬ ಹುದ್ದೆಯ ನಿರ್ಮಾಣವಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2017-03-28. Retrieved 2016-10-24.