ಡಚ್ ಈಸ್ಟ್ ಇಂಡಿಯ ಕಂಪನಿ
ಡಚ್ ಈಸ್ಟ್ ಇಂಡಿಯ ಕಂಪನಿ - ನೆದರ್ಲೆಂಡ್ಸ್ ವಿಧಾನಮಂಡಲದ (ಸ್ಟೇಟ್ಸ್-ಜನರಲ್) ಸನ್ನದಿನ ಮೇರೆಗೆ 1602ರ ಮಾರ್ಚ್ 20 ರಂದು ಸ್ಥಾಪಿತವಾದ ಒಂದು ಸಂಸ್ಥೆ. ಹಿಂದೂ ಸಾಗರದಲ್ಲಿ ಬೆಳೆದಿದ್ದ ಡಚ್ಚರ ವ್ಯಾಪಾರವನ್ನು ನಿಯಂತ್ರಿಸುವುದೂ ರಕ್ಷಿಸುವುದೂ, ಅವರು ಸ್ಪೇನಿನ ಹಿಡಿತದಿಂದ ವಿಮೋಚನೆಗೊಳ್ಳಲು ದಿರ್ಘಕಾಲದಿಂದ ನಡೆಸುತ್ತಿದ್ದ ಯುದ್ಧವನ್ನು ಮುಂದುವರಿಸಲು ನೆರವು ನೀಡುವುದೂ ಇದರ ಉದ್ದೇಶಗಳಾಗಿದ್ದುವು.
ಸ್ಥಾಪನೆಯ ಹಿನ್ನೆಲೆ
[ಬದಲಾಯಿಸಿ]1580-81ರಲ್ಲಿ ಪೋರ್ಚುಗಲ್ ಮತ್ತು ಸ್ಪೇನ್‍ಗಳು ಒಂದಾಗುವುದಕ್ಕೆ ಮೊದಲು ಲಿಸ್ಬನಿನಿಂದ ಉತ್ತರ ಯೂರೋಪಿಗೆ ಪೂರ್ವದೇಶಗಳ ಸರಕುಗಳನ್ನು ಸಾಗಿಸುವ ಕಾರ್ಯದಲ್ಲಿ ಪ್ರಮುಖವಾಗಿ ಉದ್ಯುಕ್ತರಾಗಿದ್ದವರು ಡಚ್ಚರು. ಪೋರ್ಚುಗೀಸರೊಂದಿಗೆ ಡಚ್ಚರ ವ್ಯಾಪಾರವನ್ನು ಸ್ಪೇನಿನ ದೊರೆ ನಿಷೇಧಿಸಿದಾಗ ಡಚ್ಚರು ಈ ನಷ್ಟವನ್ನು ತುಂಬಿ ಕೊಳ್ಳಲು ಪೂರ್ವ ದೇಶಗಳ ಕಡೆಗೆ ಸಮುದ್ರಯಾನ ಮಾಡುವುದು ಅನಿವಾರ್ಯವಾಯಿತು. ಉತ್ತರ ಯೂರೋಪಿನಿಂದ ಪೂರ್ವ ದೇಶಗಳಿಗೆ ಸ್ಪೇನ್, ಪೋರ್ಚುಗಲ್‍ಗಳ ಅಡಚಣೆಯಿಲ್ಲದೆ ಸಾಗುವ ಮಾರ್ಗವೊಂದನ್ನು ಕಂಡು ಹಿಡಿಯುವ ಪ್ರಯತ್ನಗಳು ವಿಫಲವಾದ್ದರಿಂದ ಆ ವೇಳೆಗಾಗಲೇ ಪ್ರಸಿದ್ಧವಾಗಿದ್ದ, ಗುಡ್ ಹೋಪ್ ಭೂಶಿರದ ಮೂಲಕ ಸಾಗುವ ಸಮುದ್ರ ಮಾರ್ಗವನ್ನೇ ಪ್ರವೇಶಿಸಲು ಡಚ್ಚರು ತೀರ್ಮಾನಿಸಿದರು. ಬರಬಹುದಾದ ಅಡ್ಡಿ ಆತಂಕಗಳನ್ನೆಲ್ಲ ಭೇದಿಸಿಕೊಂಡು ಮಲಯ ದ್ವೀಪಸ್ತೋಮದ ಸಂಬಾರ ದ್ವೀಪಗಳೊಂದಿಗೆ ಸಂಪರ್ಕ ಸ್ಥಾಪಿಸಲು ನಿರ್ಧರಿಸಿದರು. ದೂರದ ನಾಡುಗಳಿಗಾಗಿ ಕಂಪನಿಯೊಂದನ್ನು ಸ್ಥಾಪಿಸಲು ನಿರ್ಧರಿಸದರು. ದೂರದ ನಾಡುಗಳಿಗಾಗಿ ಕಂಪನಿಯೊಂದನ್ನು 1587ರಲ್ಲಿ ಆಮ್‍ಸ್ಟರ್‍ಡ್ಯಾಮಿನಲ್ಲಿ ಸ್ಥಾಪಿಸಿದರು. ಬಹುಕಾಲದಿಂದ ಲಿಸ್ಬನ್‍ನಲ್ಲಿ ವಾಸವಾಗಿದ್ದ ಕಾರ್ನೀಲಿಯಸ್ ಹೌಟ್‍ಮಾನ್ ಎಂಬ ವ್ಯಾಪಾರಿಯ ನೇತೃತ್ವದಲ್ಲಿ 1595ರಲ್ಲಿ ಒಂದು ಸಾಹಸಯಾತ್ರೆ ಏರ್ಪಟ್ಟಿತು. ಈ ಯಾನದ ತಂಡ ಅಪಾರ ಕಷ್ಟನಷ್ಟಗಳನ್ನು ಅನುಭವಿಸಬೇಕಾಗಿ ಬಂತಾದರೂ 1597ರಲ್ಲಿ ಇದು ಸ್ವದೇಶಕ್ಕೆ ಹಿಂದಿರುಗಿದಾಗ ಬಹುಮೂಲ್ಯ ಸರಕುಗಳನ್ನು ಹೊತ್ತು ತಂದಿತು. ಅಲ್ಲದೆ ಜಾವದ ಬಾಂಟಮ್ ಸುಲ್ತಾನನೊಂದಿಗೆ ಕೌಲೊಂದನ್ನು ಮಾಡಿಕೊಂಡು ಬಂತು. ವಾಣಿಜ್ಯ ಸಾಹಸಕ್ಕೆ ಇದು ಪ್ರಚೋದನೆ ನೀಡಿತು. ವಾನ್ ಫರ್ನ್ ಅಥವಾ ಸಾಗರಾಂತರ ಕಂಪನಿಗಳು ಹುಟ್ಟಿಕೊಂಡವು. 1602ರ ಹೊತ್ತಿಗೆ ಸುಮಾರು 60 ರಿಂದ 70 ಡಚ್ ನೌಕೆಗಳು ಭಾರತಕ್ಕೂ ಇಂಡೀಸ್ ದ್ವೀಪಸ್ತೋಮಕ್ಕೂ ಸಾಗಿದ್ದುವು. ಸಾಗರಾಂತರ ಕ್ಷೇತ್ರಗಳಲ್ಲಿ ಈ ಕಂಪನಿಗಳ ಮೇಲೆ ಯಾವ ನಿಯಂತ್ರಣವಾಗಲಿ ಇವಕ್ಕೆ ಯಾವ ಬಗೆಯ ರಕ್ಷಣೆಯಾಗಲಿ ಇರಲಿಲ್ಲ. ಇವು ತಮ್ಮ ತಮ್ಮಲ್ಲೆ ಬಡಿದಾಡಿದುವು. ಸ್ಥಳೀಯರೊಂದಿಗೂ ಹೋರಾಡಿದುವು. ಈ ಸ್ಪರ್ಧೆಯಿಂದ ಪೂರ್ವ ದೇಶಗಳ ಮಾರುಕಟ್ಟೆಗಳಲ್ಲಿ ಪದಾರ್ಥಗಳ ಬೆಲೆಗಳು ಏರಿದುವು; ಯೂರೋಪಿನಲ್ಲಿ ಇಳಿದುವು. ಈ ಪ್ರದೇಶದಲ್ಲಿ ಕಾರ್ಯನಿರತವಾಗಿದ್ದ ಕಂಪನಿಗಳನ್ನೆಲ್ಲ ಒಂದುಗೂಡಿಸಿ ಡಚ್ ಈಸ್ಟ್‍ಇಂಡಿಯ ಕಂಪನಿಯೆಂಬ ಸಂಯುಕ್ತ ಸಂಸ್ಥೆಯನ್ನು ರಚಿಸಲು ವಿಧಾನ ಮಂಡಲ ತೀರ್ಮಾನಿಸಿತು. ಈ ಕಂಪನಿಗೆ ವಿಶಿಷ್ಟ ಸ್ಥಾನಮಾನ ಹಾಗೂ ಅಧಿಕಾರಗಳು ದತ್ತವಾದುವು. ಸುಮಾರು 65,00,000 ಫ್ಲಾರಿನ್‍ಗಳಿಗಿಂತ ಹೆಚ್ಚಿನ ಷೇರು ಬಂಡವಾಳವನ್ನು ಇದರಲ್ಲಿ ತೊಡಗಿಸಲಾಯಿತು. ನೆದರ್ಲೆಂಡ್ಸ್ ಒಕ್ಕೂಟದಲ್ಲಿದ್ದ ಸ್ವತಂತ್ರ ರಾಜ್ಯಗಳಿಗೆ ಪ್ರತ್ಯೇಕವಾದ ಮಂಡಲಿಗಳನ್ನೂ ಅವುಗಳ ಪ್ರಾತಿನಿಧ್ಯ ಉಳ್ಳ 60 ಸದಸ್ಯರ ಸಾಮಾನ್ಯ ನಿರ್ದೇಶಕ ಮಂಡಲಿಯನ್ನೂ ರಚಿಸಲಾಯಿತು. ಆಡಳಿತದ ನಿಜವಾದ ಅಧಿಕಾರವಿದ್ದದ್ದು ಕಲೇಜಿಯಮ್‍ನಲ್ಲಿ. ಇದು 17 ಸದಸ್ಯರ ನಿಯಂತ್ರಣ ಪ್ರಾಧಿಕಾರ ಒಬ್ಬ ವಿನಾ ಉಳಿದ ಸದಸ್ಯರು ಆಯಾ ಸ್ಥಳೀಯ ಶಾಖೆಗಳ ಬಂಡವಾಳಕ್ಕೆ ಅನುಗುಣವಾಗಿ ಆಯ್ಕೆಯಾಗಿದ್ದರು. ಹದಿನೇಳನೆಯ ಸದಸ್ಯ ಇತರ ಸದಸ್ಯರಿಂದ ನಾಮಕರಣ ಹೊಂದಿದ್ದವನು. ವಿಧಾನಮಂಡಲದೊಂದಿಗೆ ಕಂಪನಿಯ ವ್ಯವಹಾರ ನಡೆಸಲು ಹೇಗ್‍ನಲ್ಲಿ 10 ಸದಸ್ಯರ ಸಮಿತಿಯೊಂದನ್ನು ಸ್ಥಾಪಿಸಲಾಯಿತು. ಕಂಪನಿಗೆ ನೀಡಲಾದ 21 ವರ್ಷಗಳ ಅವಧಿಯ ಸನ್ನದಿನಲ್ಲಿ ಅದಕ್ಕೆ ಹೆಚ್ಚಿನ ಅಧಿಕಾರಗಳು ದತ್ತವಾಗಿದ್ದುವು.
ಈಸ್ಟ್ ಇಂಡೀಸ್‍ನೊಡನೆ ಏಕಸ್ವಾಮ್ಯ ವ್ಯಾಪಾರ ನಡೆಸುವುದು, ಯಾವುದೇ ಬಗೆಯ ಆಮದು ಸುಂಕಗಳಿಲ್ಲದೆ ಸರಕುಗಳನ್ನು ಆಮದು ಮಾಡಿಕೊಳ್ಳುವುದು, ಭೂಸೇನೆಯನ್ನೂ ನೌಕಾಸೇನೆಯನ್ನೂ ಇರಿಸಿಕೊಳ್ಳುವುದು, ಕೋಟೆಗಳನ್ನು ಕಟ್ಟಿಕೊಳ್ಳುವುದು, ವಸಾಹತುಗಳನ್ನು ಸ್ಥಾಪಿಸುವುದು, ಯುದ್ಧ ಹೂಡುವುದು ಅಥವಾ ಶಾಂತಿ ಕೌಲುಗಳನ್ನು ಏರ್ಪಡಿಸುವುದು. ನಾಣ್ಯವನ್ನು ಚಲಾವಣೆಗೆ ತರುವುದು-ಇವೇ ಮೊದಲಾದ ವಿಶೇಷ ಅಧಿಕಾರಗಳು ಕಂಪನಿಗೆ ಇದ್ದುವು.
ಕಂಪನಿಯ ಬೆಳವಣಿಗೆ
[ಬದಲಾಯಿಸಿ]1609ರ ತರುವಾಯ ಈ ಕಂಪನಿ ತನ್ನ ವ್ಯವಹಾರಗಳ ನಿರ್ವಹಣೆಗಾಗಿ ಗವರ್ನರುಗಳನ್ನು ನೇಮಕ ಮಾಡತೊಡಗಿತು. ಒಟ್ಟಿನಲ್ಲಿ, ಆಡಳಿತ, ನ್ಯಾಯ ಹಾಗೂ ಶಾಸನ ವಿಚಾರಗಳಲ್ಲಿ ಇದಕ್ಕೆ ಸಂಪೂರ್ಣ ಅಧಿಕಾರ ಲಭ್ಯವಾಗಿತ್ತು. 1619ರಲ್ಲಿ ಬಟೇವಿಯದಲ್ಲಿ ಈ ಕಂಪನಿಯ ಕೇಂದ್ರ ಕಚೇರಿ ಸ್ಥಾಪಿತವಾಯಿತು. ಇದು ಪೂರ್ಚುಗೀಸರನ್ನು 1628-1658ರಲ್ಲಿ ಸಿಂಹಳದಿಂದಲೂ 1641ರಲ್ಲಿ ಮಲಕ್ಕದಿಂದಲೂ ಹೊರದೂಡಿತು. 1652ರ ತರುವಾಯ ಗುಡ್ ಹೋಪ್ ಭೂಶಿರದಲ್ಲಿ ಭದ್ರವಾಗಿ ನೆಲೆಯೂರತೊಡಗಿತು. 1667ರಲ್ಲಿ ಸುಮಾತ್ರದಲ್ಲಿ ಸ್ಥಳೀಯ ರಾಜರೊಂದಿಗೆ ಒಪ್ಪಂದ ಏರ್ಪಡಿಸಿಕೊಂಡು ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿತು. ಇದೇ ರೀತಿ ಪರ್ಷಿಯ, ಭಾರತ, ಚೀನ ಮತ್ತು ಜಪಾನ್‍ಗಳಲ್ಲೂ ಇದರ ವ್ಯಾಪಾರ ಪ್ರಭಾವಗಳು ವಿಸ್ತರಿಸಿದುವು. ಭಾರತದ ಮಲಬಾರ್ ಕರಾವಳಿಯಲ್ಲಿದ್ದ ಪೋರ್ಚುಗೀಸ್ ಹಿಡುವಳಿಗಳನ್ನು 1663ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು. 1666ರಲ್ಲಿ ಮಕಸ್ಸಾರ್ ದ್ವೀಪವನ್ನು ವಶಪಡಿಸಿಕೊಂಡಿದ್ದರಿಂದ ಕೆಲವು ಬಗೆಯ ಸಂಬಾರ ಪದಾರ್ಥಗಳ ವ್ಯಾಪಾರದಲ್ಲಿ ಇದಕ್ಕೆ ಏಕಸ್ವಾಮ್ಯ ದೊರಕಿತು. ಹೀಗೆ ದಿನೇದಿನೇ ಕಂಪನಿ ಪ್ರವರ್ಧಮಾನವಾಗತೊಡಗಿತು. 1776ರ ವರೆಗೆ ಕಾಲಕಾಲಕ್ಕೆ ಇದರ ಸನ್ನದನ್ನು ನೆದರ್ಲೆಂಡ್ಸ್ ವಿಧಾನಮಂಡಲ ನವೀಕರಿಸುತ್ತಿತ್ತು.
1605ರಿಂದ 17ನೆಯ ಶತಮಾನದ ಕೊನೆಯ ವರೆಗೆ ಕಂಪನಿ ಪ್ರವರ್ಧಮಾನವಾಗಿತ್ತು.
ಕಂಪನಿಯ ಅವನತಿ
[ಬದಲಾಯಿಸಿ]ಅನಂತರ ಇದರ ಅವನತಿ ಆರಂಭವಾಯಿತು. ಮಹೋನ್ನತಿಯ ವರ್ಷವೆಂದರೆ 1669. ಆಗ ಕಂಪನಿಯ ಆಧೀನದಲ್ಲಿ 150 ವಾಣಿಜ್ಯ ನೌಕೆಗಳೂ 40 ಯುದ್ಧನೌಕೆಗಳೂ 10,000 ಸೈನಿಕರೂ ಇದ್ದರು. ಅದು ಸೇ. 40 ಲಾಭಾಂಶ ಘೋಷಿಸಿತ್ತು. ವ್ಯಾಪಾರ ಕ್ಷೇತ್ರದಲ್ಲಿ ಕಂಪನಿ ಸಾಧಿಸಿದ ಯಶಸ್ಸು, ಸ್ಥಾಪಿಸಿದ ಏಕಸ್ವಾಮ್ಯ-ಇವು ಇತರ ಕೆಲವು ರಾಷ್ಟ್ರಗಳಿಗೆ ಕಿರಿಕಿರಿಯನ್ನು ಉಂಟುಮಾಡಿತು. 1609ರಲ್ಲಿ ಮೊದಲ ಗವರ್ನರನ್ನು ಕಳುಹಿಸಕೊಟ್ಟಾಗ, ಇತರ ಯಾವ ರಾಷ್ಟ್ರಗಳಿಗೂ ಯಾವುದೇ ಪಾಲು ದೊರೆಯದಂತೆ ಈಸ್ಟ್ ಇಂಡೀಸ್‍ನೊಡನೆ ವ್ಯಾಪಾರ ಸ್ವಾಮ್ಯವನ್ನು ಏರ್ಪಡಿಸಬೇಕೆಂದು ನಿಯಂತ್ರಣ ಮಂಡಲಿಗೆ ಆದೇಶ ನೀಡಲಾಗಿತ್ತು. ಈ ನೀತಿಯನ್ನು ಅನುಸರಿಸಿದ್ದರ ಪರಿಣಾಮವಾಗಿ ಇಂಗ್ಲಿಷರು ಇದರ ವಿರೋಧಿಳಾದರು. 1613-32ರಲ್ಲಿ ಡಚ್ಚರು ಬ್ರಿಟಿಷರನ್ನು ಸಂಬಾರ ದ್ವೀಪಗಳಿಂದಲೂ ಮಲಯ ದ್ವೀಪದಲ್ಲೂ ಇಂಗ್ಲಿಷರ ಸ್ಥಿತಿ ಭದ್ರವಾಗಿರಲಿಲ್ಲ. ಇಂಗ್ಲಿಷರಿಗೂ ಡಚ್ಚರಿಗೂ ಪದೇಪದೇ ತಿಕ್ಕಾಟಗಳಾಗುತ್ತಿದ್ದುವು. ಇವರ ನಡುವಣ ದ್ವೇಷ ತೀವ್ರವಾದ್ದಕ್ಕೆ 1623ರಲ್ಲಿ ಆಂಬಾಯ್ನದಲ್ಲಿ ನಡೆದ ಒಂದು ಘಟನೆ ಕಾರಣ. ಅಲ್ಲಿದ್ದ ಇಂಗ್ಲಿಷ್ ದಳ್ಳಾಳಿಗಳನ್ನು ಹಿಡಿದು ಹಿಂಸಿಸಿ ವಿಚಾರಣೆಗೆ ಒಳಪಡಿಸಿ ಕೊಲೆಗೆ ಈಡುಮಾಡಿದರು. ಈ ಘಟನೆಯಿಂದ ಇಂಗ್ಲಿಷರ ಅಸಮಾಧಾನ ಹೆಚ್ಚಿತು.
ಮಲಯ್ ದ್ವೀಪಸ್ತೋಮದಲ್ಲಿ ಈ ಕಂಪನಿ ಲಾಭಗಳಿಸಿದರೂ ಇತರ ಕಡೆಗಳಲ್ಲಿ ನಷ್ಟ ಅನುಭವಿಸತೊಡಗಿತು. ಇತರ ರಾಷ್ಟ್ರಗಳ ಸ್ಫರ್ಧೆಯೂ ಸ್ವಲ್ಪಮಟ್ಟಿಗೆ ಅಂಬಾಯ್ನ ಘಟನೆಯೂ ಇದಕ್ಕೆ ಕಾರಣವಾದುವು. ಈ ಕಂಪನಿಯ ಆಡಳಿತ ಕೇಂದ್ರಗಳು ಆಂಬಾಯ್ನ, ಬಾಂಡ, ಟರ್ನಾಟೀ, ಮಕಾಸರ್, ಮಲಾಕ, ಸಿಂಕಳ (ಶ್ರೀ ಲಂಕಾ), ಗುಡ್ ಹೋಪ್ ಭೂಶಿರ ಮತ್ತು ಜಾವಗಳಲ್ಲಿದ್ದುವು. ಬಂಗಾಲ, ಕೋರಮಂಡಲ ಕರಾವಳಿ, ಸೂರತ್, ಪರ್ಷಿಯನ್ ಕೊಲ್ಲಿಯ ಗ್ಯಾಂಬ್ರೂನ್ (ಬಂದರ್ ಅಬ್ಬಾಸ್), ತೈಲೆಂಡ್‍ಗಳಲ್ಲಿ ವ್ಯಾಪಾರಕೇಂದ್ರಗಳ ಮೇಲ್ವಿಚಾರಣೆಗೆ ಕಮಿಷನರುಗಳನ್ನು ನೇಮಿಸಲಾಗಿತ್ತು ಕಂಪನಿಯ ವ್ಯಾಪಾರವನ್ನು ಯೂರೋಪ್ ಮತ್ತು ಪೂರ್ವದೇಶಗಳ ನಡುವಣ ಮಹಾವ್ಯಾಪಾರ, ಕರಾವಳಿ ವ್ಯಾಪಾರ ಎಂದು ಎರಡು ಬಗೆಯಾಗಿ ವಿಂಗಡಿಸಲಾಗಿತ್ತು. ಯೂರೋಪಿನೊಂದಿಗಿನ ವ್ಯಾಪಾರದ ಹಡಗುಗಳು ಕಾವಲುನೌಕೆಯ ರಕ್ಷಣೆಯಲ್ಲಿ ಸಾಗುತ್ತಿದ್ದುವು.
ಕಂಪನಿಗೆ ತನ್ನ ವ್ಯಾಪಾರಹಿತವೇ ಪ್ರಧಾನವಾಗಿತ್ತು. ತನ್ನ ಅಧೀನ ಪ್ರದೇಶಗಳ ಆಡಳಿತವನ್ನು ಸ್ಥಳೀಯ ದೊರೆಗಳಿಗೆ ವಹಿಸಿಕೊಟ್ಟಿತ್ತು. ಅದರಿಂದಾಗಿ ಇದಕ್ಕೆ ರಾಜ್ಯಭಾರದ ಹೊಣೆ ಇರಲಿಲ್ಲ. ಅವರು ಕಂಪನಿಗೆ ಪದಾರ್ಥದ ರೂಪದಲ್ಲಿ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದರು. ಆದರೆ ಕ್ರಮೇಣ ಇದರ ರಾಜಕೀಯ ಹಾಗೂ ಸೈನ್ಯ ಕಾರ್ಯಾಚರಣೆಯ ಹೊಣೆ ಹೆಚ್ಚಿತು. ಇದರ ಲಾಭ ಕೊಚ್ಚಿಹೋಗತೊಡಗಿತು. ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ನೌಕರರಂತೆ ಈ ಕಂಪನಿಯ ನೌಕರರೂ ಸ್ವಹಿತವನ್ನೇ ಪ್ರಧಾನವಾಗಿ ಪರಿಗಣಿಸಿ ಸ್ವಂತವಾಗಿ ವ್ಯಾಪಾರದಲ್ಲಿ ತೊಡಗಿ ಶೀಘ್ರ ಸಂಪಾದನೆಯ ಮಾರ್ಗ ಹಿಡಿದಿದ್ದರಿಂದ ಕಂಪನಿ ಅವನತಿಯ ಮಾರ್ಗ ಹಿಡಿಯಿತು. ಲಾಭ ಕಡಿಮೆಯಾಗುತ್ತಿದ್ದರೂ ಲಾಭಾಂಶದ ಮಟ್ಟವನ್ನು ಮಾತ್ರ ಹಿಂದಿನಂತೆಯೇ ಉಳಿಸಿಕೊಂಡು ಬಂದದ್ದರಿಂದ ಕಂಪನಿಯ ಸಾಲದ ಹೊರೆ ಏರತೊಡಗಿತು. 1780ರಲ್ಲಿ ಅಮೆರಿಕನ್ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಡಚ್ಚರು ಬ್ರಿಟಿಷರೊಂದಿಗೆ ನೇರ ಯುದ್ಧದಲ್ಲಿ ತೊಡಗಿದರು. ಇದರಿಂದ ಕಂಪನಿಗೆ ಭಾರಿ ಆಘಾತ ಉಂಟಾಯಿತು. ಅನಂತರ ಇದು ಸರ್ಕಾರದ ನೆರವಿನಿಂದ ಹಾಗೂ ಹೀಗೂ ಮುಂದುವರಿಯುತ್ತಿತ್ತು. 1795ರಲ್ಲಿ ಫ್ರೆಂಚ್ ಕ್ರ್ರಾಂತಿಸೇನೆ ನೆದರ್‍ಲೆಂಡ್ಸ್ ಒಕ್ಕೂಟವನ್ನು ಆಕ್ರಮಿಸಿಕೊಂಡಾಗ ಡಚ್ಚರಿಗೆ ಸಾಗರಾಂತರ ಸಾಮ್ರಾಜ್ಯಗಳೊಂದಿಗೆ ಸಂಬಂಧ ಕೊನೆಗೊಂಡಿತು. 1796ರಿಂದ ಸ್ವಲ್ಪಕಾಲ ಈ ಕಂಪನಿಯನ್ನು ಸರ್ಕಾರಿ ಸಮಿತಿಯೊಂದು ನಿರ್ವಹಿಸುತ್ತಿತ್ತು. 1798ರಲ್ಲಿ ಸರ್ಕಾರ ಈ ಕಂಪನಿಯ ವಸಾಹತುಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತು.