ವಿಷಯಕ್ಕೆ ಹೋಗು

ಪರಶುರಾಮ ಥೀಂ ಪಾರ್ಕ್ ಬೈಲೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥೀಮ್ ಪಾರ್ಕಿನ ಕಟ್ಟಡದ ಮೇಲೆ ನಿಲ್ಲಿಸಿರುವ ಪರಶುರಾಮನ ಕಂಚಿನ ಪ್ರತಿಮೆ

ಪರಶುರಾಮ ಥೀಮ್ ಪಾರ್ಕ್ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನಲ್ಲಿ ಉಮಿಕ್ಕಲ್ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಒಂದು ಪ್ರವಾಸೀ ತಾಣವಾಗಿದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಮೂರ್ತಿಯನ್ನು ಕಂಚಿನಿಂದ ನಿರ್ಮಿಸಿ, ಬೆಟ್ಟದ ಮೇಲೆ ಇರುವ ಕಟ್ಟಡದ ಮೇಲ್ಭಾಗದಲ್ಲಿ ನಿಲ್ಲಿಸಲಾಗಿದೆ. ಈ ಕಂಚಿನ ಮೂರ್ತಿ ೩೩ ಅಡಿ ಎತ್ತರವಿದ್ದು, ಮೂರ್ತಿಯ ಬಲದ ಕೈಯಲ್ಲಿ ಕೊಡಲಿ, ಎಡಗೈಯಲ್ಲಿ ಬಿಲ್ಲನ್ನು ಹಿಡಿದು ಎಡಗಾಲನ್ನು ಎತ್ತರಿಸಿ ಇಟ್ಟಿರುವಂತೆ ನಿರ್ಮಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ೧೦ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಆರಂಭಿಸಿದ್ದು, ಪಾರ್ಕ್‌ಗೆ ಸಂಬಂಧಿಸಿದ ಇತರ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಸದ್ಯಕ್ಕೆ ಭಜನಾ ಮಂದಿರ, ಆಧುನಿಕ ಆಡಿಯೋ- ವಿಶುವಲ್ ಮ್ಯೂಸಿಯಂ, ೫೦೦ ಆಸನಗಳ ಆಂಫಿಥಿಯೇಟರ್, ೪೫೦ ಅಡಿ ಬೆಟ್ಟದ ಮೇಲಿರುವ ವ್ಯೂಪಾಯಿಂಟ್, ಭಿತ್ತಿಚಿತ್ರಗಳ ಮೂಲಕ ಪರಶುರಾಮನ ಬಗ್ಗೆ ಬಿಡಿಸಲಾದ ಭಿತ್ತಿಚಿತ್ರಗಳನ್ನು ಜೋಡಿಸಿರುವ ಹಜಾರ ಮತ್ತು ರೆಸ್ಟೋರೆಂಟ್ ಹೊಂದಿರುವ ಥೀಂ ಪಾರ್ಕ್ ಸಾಂಸ್ಕೃತಿಕ ಪರಂಪರೆಗೆ ಸೇರ್ಪಡೆಯಾಗಿದೆ. ಗುಡ್ಡದ ಮೇಲೆ ಸ್ಥಾಪಿಸಲಾಗಿರುವ ಪರಶುರಾಮನ ಪ್ರತಿಮೆ ಈಗಾಗಲೇ ದೇಶದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದಿಂದ ಉದ್ಯಾನವನವನ್ನು ಸ್ಥಾಪಿಸಲಾಗಿದೆ.

ಪರಶುರಾಮ

[ಬದಲಾಯಿಸಿ]
ಮುಖ್ಯ ಲೇಖನ: ಪರಶುರಾಮ
ಪರಶುರಾಮ

ಪರಶುರಾಮ ತುಳುನಾಡನ್ನೂ ಒಳಗೊಂಡ ಕರಾವಳಿ ತೀರದ ಸೃಷ್ಟಿಕರ್ತ. ದಂಡಾಕಾರಣ್ಯದ ಪಶ್ಚಿಮಕ್ಕೆ ಇರುವ ಈ ಕರಾವಳಿಯ ಭಾಗವನ್ನು ಮಹರ್ಷಿ ಪರಶುರಮರು ಸೃಷ್ಟಿಸಿದ್ದು ಎಂಬುದು ಪುರಾಣ ಪ್ರತೀತಿ. ಸುಮಾರು ೫೦೦೦ ವರ್ಷಗಳಿಗಿಂತಲೂ ಹಿಂದೆ ಭಾರತದ ಪುಣ್ಯ ಭೂಮಿಯಲ್ಲಿ ಜೀವಿಸಿದ್ದ ಪರಶುರಾಮ, ವಿಷ್ಣುವಿನ ಆರನೆಯ ಅವತಾರ ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ. ಇವರು ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು.ಇವರು ತಮ್ಮ ತಾಯಿಗಾಗಿ ಪರಶುಘಡದಲ್ಲಿ(ಸವದತ್ತಿ) ತಪಸ್ಸು ಮಾಡಿ ವಿಷ್ಣುವಿನಿಂದ ಪರುಶು(ಕೊಡಲಿ) ಪಡೆದಿದ್ದರು. ಇವರು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬರು.

ಯೋಜನೆ

[ಬದಲಾಯಿಸಿ]

ಕರಾವಳಿ ಪರಶುರಾಮನ ಸೃಷ್ಟಿ ಎಂದು ಹೆಸರಾಗಿದ್ದರೂ ಸಂಬಂಧಪಟ್ಟ ಯಾವುದೇ ಕುರುಹುಗಳು ಇರಲಿಲ್ಲ. ಈ ಹಿನ್ನಲೆಯಲ್ಲಿ ಕಾರ್ಕಳದಲ್ಲಿ ಒಂದು ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡಬೇಕೆಂಬ ಯೋಚನೆ ೨೦೧೭ರಲ್ಲಿ ಮೂಡಿತು. ಪುಣೆಯಲ್ಲಿ ನಡೆದ ಕರಾವಳಿ ಬಂಧುಗಳ "ಸ್ನೇಹ ಸಮ್ಮಿಲನ" ಕಾರ್ಯಕ್ರಮದಲ್ಲಿ ಈ ಸಂಗತಿಯನ್ನು ಪ್ರಸ್ತಾವಿಸಿದ್ದು ಮಾತ್ರವಲ್ಲ, ನಿರ್ಮಾಣ ಆರಂಭವಾದ ಎರಡು ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ಕೊಟ್ಟಿದ್ದರು.೨೦೨೩ ಜನವರಿ ೨೭,೨೮ ಮತ್ತು೨೯ರಂದು ಪರಶುರಾಮ ಥೀಂ ಪಾರ್ಕ್ ಅನಾವರಣಗೊಂಡಿತು. ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಮೂಲಕ ಈ ಪಾರ್ಕ್ ನ ಯೋಜನೆ ಕೈಗೆತ್ತಿಕೊಂಡಿದೆ. ಅರುಣ್ ಕುಮಾರ್ ನಿರ್ಮಿತಿ ಕೇಂದ್ರ,ಉಡುಪಿಯ ಯೋಜನಾ ನಿರ್ದೇಶಕರು. ಉಡುಪಿ ಮತ್ತು ಕಾರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಉಮಿಕ್ಕಲ್ ಬೆಟ್ಟದ ಮೇಲೆ ಸುಮಾರು ೫ ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ. ಇದು ಕಾರ್ಕಳ ಪ್ರವಾಸೋದ್ಯಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರ ಕನಸಿನ ಯೋಜನೆಯಾಗಿದೆ. ಯೋಜನೆಗೆ ಪ್ರವಾಸೋದ್ಯಮ ಇಲಾಖೆ ಅನುದಾನ ನೀಡಿದೆ. ಈ ಪಾರ್ಕ್ 'ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ' ಉಪಕ್ರಮದ ಒಂದು ಭಾಗವಾಗಿದೆ ಮತ್ತು ಪರಶುರಾಮನ ಬೃಹತ್ ಪ್ರತಿಮೆಯನ್ನು ಹೊಂದಿರುವ ಥೀಂ ಪಾರ್ಕ್ ತುಳುನಾಡಿನ ಸೃಷ್ಟಿಕರ್ತನಿಗೆ ಸಂದಿರುವ ಗೌರವವಾಗಿದೆ. ಪರಶುರಾಮ ಥೀಂ ಪಾರ್ಕ್ ಮೂರು ಹಂತಗಳಲ್ಲಿ ಅನುಷ್ಠಾನಗೊಂಡ ಯೋಜನೆ. ಉದ್ಘಾಟನೆ ಮೊದಲ ಹಂತದ ಕಾರ್ಯ. ಮೊದಲ ಹಂತದ ಯೋಜನೆಗೆ ೧೫ ಕೋಟಿ ರೂ.ವೆಚ್ಚವಾಗಿದೆ.

ಪಾಳುಬಿದ್ದಿದ್ದ ಕಲ್ಲುಗುಡ್ಡದ ಮೇಲೆ ಪರಶುರಾಮ

[ಬದಲಾಯಿಸಿ]

[]ಕಾರ್ಕಳದಲ್ಲಿ ಪಾಳು ಬಿದ್ದು ಹೋಗಿದ್ದ ಕಲ್ಲುಗುಡ್ಡ ಒಂದಕ್ಕೆ ಇದೀಗ ಹೊಸ ಮೆರುಗು ಬಂದಿದೆ. ಉಡುಪಿಯ ಕಾರ್ಕಳದ ಬೈಲೂರಿನ ಯರ್ಲಪಾಡಿ ಉಮಿಕಲ್ ಕುಂಜದ ಕಲ್ಲುಬಂಡೆಗಳೇ ತುಂಬಿದ್ದ ಗುಡ್ಡವೊಂದು ಇದೀಗ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. ತುಳುನಾಡಿನ ಸೃಷ್ಟಿಕರ್ತ ಎನ್ನಲಾದ ನಾಥ ಪರಂಪರೆಯನ್ನ ಎಲ್ಲೆಡೆ ಪಸರಿಸಿದ ಶ್ರೀ ಪರಶುರಾಮನ ಮೂರ್ತಿ ಇಲ್ಲಿ ತಲೆ ಎತ್ತಿದೆ.

ಕಂಚಿನ ಪ್ರತಿಮೆ ಅನಾವರಣ

[ಬದಲಾಯಿಸಿ]

ಕೈಯಲ್ಲಿ ಬಿಲ್ಲು, ಕೊಡಲಿ ಹಿಡಿದುಕೊಂಡ ಸಂಪೂರ್ಣ ಕಂಚಿನಲ್ಲೇ ತಯಾರಿಸಲಾದ ಪರಶುರಾಮನ ಮೂರ್ತಿಯನ್ನು ಇಲ್ಲಿ ಕಾಣಬಹುದು. ೨೦೨೩ ಜನವರಿ ೨೭ನೇ ತಾರೀಖಿನಂದು ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆಗೊಂಡಿದೆ. ನೆಲದಿಂದ ೫೭ ಅಡಿ ಎತ್ತರದಲ್ಲಿ ೩೩ ಅಡಿಯ, ೧೫ ಟನ್ ಭಾರದ ಕಂಚಿನ ಪ್ರತಿಮೆ ಸ್ಥಾಪನೆಯಾಗಿದೆ.ಪರಶುರಾಮನ ಈ ಪ್ರತಿಮೆ ನಿರ್ಮಾಣಕ್ಕೆ ೧೫ ಟನ್ ಕಂಚು ಮತ್ತು ಉಕ್ಕು ಬಳಸಲಾಗಿದೆ. ೭ ತಿಂಗಳ ಹಿಂದೆ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೃಷ್ಣನಾಯ್ಕ ಅವರು ಮೂರ್ತಿಗೆ ರೂಪ ಕೊಟ್ಟಿದ್ದಾರೆ.ಪ್ರತಿಮೆ ನಿರ್ಮಾಣಕ್ಕೆ ೭೦ ಕಾರ್ಮಿಕರು ದುಡಿದಿದ್ದಾರೆ. ಪ್ರತಿಮೆಗೆ ೨ ಕೋಟಿ ರೂ.ವಿನಿಯೋಗಿಸಲಾಗಿದೆ. ೨೦೦೦ ಸ್ವಯಂಸೇವಕರು ಏಕಕಾಲದಲ್ಲಿ ಶಂಖವನ್ನು ಊದುವುದರೊಂದಿಗೆ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದ್ದು, ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಪ್ರದರ್ಶಿಸಲಾಗಿದೆ.[]

ಶಿಲ್ಪಿಯ ಬಗ್ಗೆ

[ಬದಲಾಯಿಸಿ]

ಕರಾವಳಿಯವರೇ ಆದ ಹೊನ್ನಾವರದ ಇಡಗುಂಜಿ ಮೂಲದ ಶಿಲ್ಪಿ ೪೨ರ ಹರೆಯದ ಕೃಷ್ಣನಾಯ್ಕ ಅವರ ಪರಶುರಾಮನ ಪ್ರತಿಮೆಗೆ ರೂಪ ಕೊಟ್ಟಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಸ್ವಾಮೀಜಿ, ತುಮಕೂರಿನಲ್ಲಿ ಮೋದಿಯ ಬೆಳ್ಳಿಯ ಮೂರ್ತಿ, ಸಂಗೊಳ್ಳಿರಾಯಣ್ಣನ ಕಂಚಿನ ಪ್ರತಿಮೆ ಹೀಗೆ ಇದುವರೆಗೆ ಸುಮಾರು ೨ ಸಾವಿರ ಮೂರ್ತಿಗಳನ್ನು ಇವರು ರಚಿಸಿದ್ದಾರೆ. ದೇವಸ್ಥಾನ, ದೈವಸ್ಥಾನಗಳಿಗೂ ಮೂರ್ತಿ ರಚನೆ ಮಾಡಿದ್ದಾರೆ. ಇವರು ರಚಿಸಿರುವ ಬೆಳ್ಳಿಯ ಕಂಚಿನ ಪ್ರತಿಮೆಗಳು ಪ್ರಸಿದ್ಧಿ ಪಡೆದಿವೆ. ಅವರು ಅಮೆರಿಕ ಸೇರಿದಂತೆ ವಿದೇಶಗಳಿಗೆ ಮೂರ್ತಿ ತಯಾರಿಸಿ ನೀಡಿದ್ದಾರೆ.

ಮಿಂಚು ಪ್ರಬಂದಕ ವಿಶೇಷ

[ಬದಲಾಯಿಸಿ]

ಪಶ್ಚಿಮ ಘಟ್ಟದ ತಪ್ಪಲಿನ ಬೆಟ್ಟ ಗುಡ್ಡಗಳಿರುವ ಪ್ರದೇಶ ಕಾರ್ಕಳ. ಇಲ್ಲಿ ಗುಡುಗು ಮಿಂಚು ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ಪರಶುರಾಮನ ಪ್ರತಿಮೆಯನ್ನು ಕಂಚು ಜೊತೆಗೆ ವಿಶೇಷ ಮಿಶ್ರಣ ಬಳಸಿ ಮಿಂಚು ಪ್ರಬಂದಕ ವ್ಯವಸ್ಥೆ ಮಾಡಲಾಗಿದೆ.

ಪ್ರವಾಸೋದ್ಯಮ ತಾಣ

[ಬದಲಾಯಿಸಿ]

ಪರಶುರಾಮ ಥೀಂ ಪಾರ್ಕ್ ನ ಉದ್ದೇಶಗಳ ಪೈಕಿ ಪ್ರವಾಸೋದ್ಯಮದ ಉತ್ತೇಜನವೂ ಸೇರಿದೆ. ಥೀಮ್ ಪಾರ್ಕ್ ಭಜನಾ ಮಂದಿರ, ಆಧುನಿಕ ಆಡಿಯೋ- ವಿಶುವಲ್ ಮ್ಯೂಸಿಯಂ,೫೦೦ ಆಸನಗಳ ಆಂಫಿಥಿಯೇಟರ್, ೪೫೦ ಅಡಿ ಬೆಟ್ಟದ ಮೇಲಿರುವ ವ್ಯೂಪಾಯಿಂಟ್, ಭಿತ್ತಿಚಿತ್ರಗಳ ಮೂಲಕ ಪರಶುರಾಮನ ಇತಿಹಾಸ, ನೇಯ್ಗೆ ಡೆಕ್ ಗ್ಯಾಲರಿ,ಸಾವಿರ ಮಂದಿ ಆಸನ ಸಾಮರ್ಥ್ಯದ ಬಯಲು ರಂಗ ಮಂದಿರ ಮತ್ತು ತುಳುನಾಡಿನ ಕಡಲತಡಿಯ ದೃಶ್ಯವನ್ನು ಈ ಬೆಟ್ಟದ ಮೇಲೆ ನಿಂತು ನೋಡಬಹುದು.

ಪರಶುರಾಮ ದೌಡ್‌

[ಬದಲಾಯಿಸಿ]

ಜ.೧೯ರಂದು ನೇಷನ್‌ ಫಸ್ವ್‌ ವತಿಯಿಂದ ಕಾರ್ಕಳ ಬಸ್‌ ನಿಲ್ದಾಣದಿಂದ ಪರಶುರಾಮ ಥೀಮ್‌ ಪಾರ್ಕ್ ವರೆಗೆ ಐತಿಹಾಸಿಕ ಪರಶುರಾಮ ದೌಡ್‌ ಓಟ ನಡೆದಿದೆ. ಜ.೨೪ರಂದು ವಸ್ತು ಪ್ರದರ್ಶನ, ಆಹಾರ ಮೇಳ ಹಾಗೂ ಕಾರ್ಕಳ ಕುಕ್ಕುಂದೂರಿನಿಂದ ಬೈಲೂರು ಥೀಂ ಪಾರ್ಕ್ ವರೆಗೆ ದೀಪಾಲಂಕಾರ ಉದ್ಘಾಟನೆ ನಡೆಯಲಿದೆ.

ಉದ್ಘಾಟನೆ

[ಬದಲಾಯಿಸಿ]

[] []ತಹಸೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌ ಸ್ವಾಗತಿಸಿದರು. ಹರೀಶ್‌ ನಾಯಕ್‌ ನಿರೂಪಿಸಿದರು. ಥೀಮ್‌ ಪಾರ್ಕ್ ಉಮಿಕಲ್‌ ಬೆಟ್ಟದ ಮೇಲೆ ಸಚಿವ ಸುನೀಲ್‌ ಕುಮಾರ್‌ ಹಾಗೂ ಗಣ್ಯರು ಬಲೂನ್‌ ಹಾರಿಸುವ ಮೂಲಕ ಆಮಂತ್ರಣಕ್ಕೆ ಚಾಲನೆ ನೀಡಿದರು. ಕಾರ್ಕಳ ತಾಲೂಕಿನಲ್ಲಿ ಜನವರಿ ೨೭ ಶುಕ್ರವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕರಾವಳಿ ಕರ್ನಾಟಕದಲ್ಲಿ ಸಂಸ್ಕೃತಿ ಮತ್ತು ದೇವಾಲಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದರು. ಕರಾವಳಿ ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದು ಬೊಮ್ಮಾಯಿ ಹೇಳಿದರು. ಬಂದರುಗಳು ಮತ್ತು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯನ್ನು ತರಲು ಸರ್ಕಾರ ಗುರಿ ಹೊಂದಿದೆ. ಸರ್ಕಾರವು ಪ್ಯಾಕೇಜ್‌ಗಳಲ್ಲಿ ಭರವಸೆಗಳನ್ನು ನೀಡಲು ಬಯಸುವುದಿಲ್ಲ, ಆದರೆ ಜನರ ಜೀವನವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಪರಶುರಾಮನು ತುಳುನಾಡಿನ ಸೃಷ್ಟಿಕರ್ತ ಎಂದು ಹೇಳಲಾಗುವ ಉದ್ಯಾನವನದ ಉದ್ಘಾಟನೆ ಐತಿಹಾಸಿಕವಾಗಿದೆ ಎಂದು ಬೊಮ್ಮಾಯಿ ಹೇಳಿದರು. ಅವರು ಧೈರ್ಯಶಾಲಿ ಮತ್ತು ಬಲಶಾಲಿಯಾಗಿದ್ದರು ಮತ್ತು ಶಿವನ ಆಶೀರ್ವಾದ ಪಡೆದರು ಎಂದು ಮುಖ್ಯಮಂತ್ರಿ ಹೇಳಿದರು. ವಿಧಾನಸಭೆಯಲ್ಲಿ ಕಾರ್ಕಳವನ್ನು ಪ್ರತಿನಿಧಿಸುವ ಕನ್ನಡ ಮತ್ತು ಸಂಸ್ಕೃತಿ ರಾಜ್ಯ ಸಚಿವ ವಿ.ಸುನೀಲ್ ಕುಮಾರ್, ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಪ್ರತಿನಿಧಿಸುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮೀನುಗಾರಿಕಾ ಸಚಿವ ಎಸ್.ಅಂಗಾರ, ಆನಂದ್ ಸಿಂಗ್, ಕೋಟ ಶ್ರೀನಿವಾಸ್ ಪೂಜಾರಿ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಬಿ.ವೈ ರಾಘವೇಂದ್ರ, ಶಾಸಕರಾದ ಲಾಲಾಜಿ ಮೆಂಡನ್, ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬಿ.ಎಂ. ಸುಕುಮಾರ್ ಶೆಟ್ಟಿ, ಮಂಜುನಾಥ್, ಎಸ್,ಎಲ್,ಭೋಜೇಗೌಡ ಮತ್ತು ಡಾ.ತೇಜಸ್ವಿನಿ ಗೌಡ, ಎಂ.ಎಲ್.ಸಿ.ಮಂಜುನಾಥ್ ಭಂಡಾರಿ ಮತ್ತು ಖ್ಯಾತ ನಟ ರಿಷಬ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾರ್ದನಿಸಿದ ಶಂಖನಾದ

[ಬದಲಾಯಿಸಿ]

೨೦೦೦ ಸ್ವಯಂಸೇವಕರು ಏಕಕಾಲದಲ್ಲಿ ಶಂಖವನ್ನು ಊದುವುದರೊಂದಿಗೆ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದ್ದು, ಮೊದಲು ಮೂರು ಬಾರಿ ಮೊಳಗಿಸಲಾಯಿತು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಮೆ ಮೇಲಿನ ಪರದೆ ಎಳೆದು ಲೋಕಾರ್ಪಣೆಗೊಳಿಸಿ ಪ್ರತಿಮೆ ಪಾದಕ್ಕೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಮತ್ತೆ ಐದು ಬಾರಿ ಶಂಖ ಮೊಳಗಿಸಲಾಯಿತು.ಸೇರಿದ ಜನರ ಪರಶುರಮನನ್ನು ಸ್ತುತಿಸಿದರು.

ಮಂದಿರ ಉದ್ಘಾಟನೆ

[ಬದಲಾಯಿಸಿ]

ಮಂದಿರ ಉದ್ಘಾಟನೆಗೆ ಸಂಜೆ ೪ ಕ್ಕೆ ಪಳ್ಳಿ ಕ್ರಾಸ್ ನಿಂದ ಥೀಂ ಪಾರ್ಕ್ ನವರೆಗೆ ಭಜನೆ ಮೆರವಣಿಗೆ ನಡೆಯಿತು.೨೫೦ಕ್ಕೂ ಅಧಿಕ ಭಜನ ತಂಡಗಳಿಂದ ಕುಣಿತ ಭಜನೆ ಮೆರವಣಿಗೆ, ಕೀರ್ತನೆಗಳು ನಡೆದವು.

ಸಾಂಸ್ಕೃತಿಕ ಕಾರ್ಯಕ್ರಮ

[ಬದಲಾಯಿಸಿ]

ಬೈಲೂರಿನಲ್ಲಿ ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ, ಸಭಾ ಕಾರ್ಯಕ್ರಮ ನಡೆಯಿತು.ಸಂಜೆ ೫ಕ್ಕೆ ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕಮಗಳು ೬ಕ್ಕೆ ನಿಗದಿತ ಸಮಯಕ್ಕೆ ಆರಂಭವಾಗಿದ್ದವು. ಜ.೨೭ರಂದು ಸಂಜೆ ೬ಕ್ಕೆ ವಿಟಲ ನಾಯಕ್ ಕಲ್ಲಡ್ಡ ತಂಡದಿಂದ ತುಳು ಹಾಸ್ಯ ಗಾನ ವೈಭವ, ೭ರಿಂದ ಮಾನಸಿ ಸುಧೀರ್ ಅವರಿಂದ ನಾರಸಿಂಹ ನೃತ್ಯ ರೂಪಕ ,೮.೩೦ಕ್ಕೆ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಪ್ರದೀಪ ಬಡೆಕ್ಕಿಲ್ ನಿರೂಪಣೆಯಲ್ಲಿ ಸಂಗೀತ ಸಂಜೆ, ಜ.೨೮ ರಂದು ಸಂಜೆ ೬ಕ್ಕೆ ಅರ್ಚನಾ ಉಡುಪ ತಂಡದಿಂದ ಸುಗಮ ಸಂಗೀತ, ೭ಕ್ಕೆ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ಖ್ಯಾತ ಹಾಸ್ಯ ತಂಡದಿಂದ ಹಾಸ್ಯ ಸಂಜೆ, ೮ಕ್ಕೆ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ತಂಡದಿಂದ ತುಳುನಡ ಜಾದೂ, ೯ಕ್ಕೆ ಬೀಟ್ ಗುರೂಸ್ ತಂಡದಿಂದ ಪ್ಯೂಷನ್ ಸಂಗೀತ ಸಂಜೆ ನಡೆಯಿತು. ಜ.೨೯ರಂದು ಉಭಯ ಜಿಲ್ಲೆಗಳ ಪ್ರಸಿದ್ಧ ಕಲಾವಿದರಿಂದ ಸತೀಶ್ ಪಟ್ಲ ಸಾರಥ್ಯದಲ್ಲಿ ಯಕ್ಶಗಾನ ವೈಭವ, ೬ಕ್ಕೆ ಪ್ರಸನ್ನ ಬೈಲೂರು ಹಾಗೂ ಸುನಿಲ್ ನೆಲ್ಲಿಗುಡ್ಡೆ ತಂಡದಿಂದ ಗಮ್ಜಲ್ ಕಾಮಿಡಿ, ೭ಕ್ಕೆ ಉಜಿರೆಯ ಎಸ್.ಡಿ.ಎಂ.ಸಿ ಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ವೈಭವ, ೮ರಿಂದ ಗುರುಕಿರಣ್ ಮತ್ತು ತಂಡದವರಿಂದ, ಖ್ಯಾತ ನಿರೂಪಕಿ ಅನುಶ್ರೀ ನಿರೂಪಣೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಪ್ರಸನ್ನ ಶೆಟ್ಟಿ ಬೈಲೂರು ವಿರಚಿತ ಪರಶುರಾಮ ಸೃಷ್ಟಿಯ ಹಾಡನ್ನು ಬಿಡುಗಡೆ ಮಾಡಲಾಯಿತು. ಪ್ರತಿಮೆ ನಿರ್ಮಾಣದ ಜೊತೆಗೆ ಶಶಿರಾಜ್ ಕಾವೂರು ರಚಿಸಿದ ಮತ್ತು ಡಾ.ಜೀವನ್ ರಾಂ ಸುಳ್ಯ ನಿರ್ದೇಶಿಸಿದ 'ಪರಶುರಾಮ' ನಾಟಕವನ್ನು ಕಾರ್ಕಳ ಯಕ್ಷ ರಂಗಾಯಣ ರಾಜ್ಯಾದ್ಯಂತ ಪ್ರದರ್ಶಿಸುತ್ತಿದೆ. ಕಾರ್ಕಳ, ಸುಳ್ಯ, ಮಂಗಳೂರು, ಮೂಡುಬಿದಿರೆ, ತೀರ್ಥಹಳ್ಳಿ ಮತ್ತು ಹೆಬ್ರಿಯಲ್ಲಿ ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದು, ಮುಂದಿನ ತಿಂಗಳು ಇನ್ನೂ ಹಲವು ಪ್ರದರ್ಶನಗಳನ್ನು ಯೋಜಿಸಲಾಗಿದೆ.

ಪೋಲಿಸ್ ಕವಾಯತು

[ಬದಲಾಯಿಸಿ]

ಜ.೩೦ರಂದು ಸ್ವರಾಜ್ ಮೈದಾನದಲ್ಲಿ ಪೋಲಿಸರ ಪಂಜಿನ ಕವಾಯತು ನಡೆಯಿತು.

ಉಲ್ಲೇಖಗಳು

[ಬದಲಾಯಿಸಿ]
  1. "Parshurama Theme Park: ತುಳುನಾಡ ಸೃಷ್ಟಿಕರ್ತನ ಕಂಚಿನ ಪ್ರತಿಮೆ! ಪರಶುರಾಮ ಥೀಮ್ ಪಾರ್ಕ್ ಹೇಗಿದೆ ಗೊತ್ತಾ?". News18 Kannada. 2023-01-23. Retrieved 2023-08-15.
  2. "Karkala: Statue of Lord Parashurama to be inaugurated today". Udayavani. 2023-08-15. Retrieved 2023-08-15.
  3. "Bommai inaugurates Parashuram theme park in Karkala". Daijiworld.com. 2023-01-28. Retrieved 2023-08-15.
  4. "Karnataka CM Inaugurates Parashuram Theme Park In Karkala". https://www.outlookindia.com/. 2023-01-28. Retrieved 2023-08-15. {{cite web}}: External link in |website= (help)