ಜೀವನ್ ರಾಂ ಸುಳ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

'ಜೀವನ್ ರಾಂ ಸುಳ್ಯ'

ಜೀವನ್ ರಾಂ ಸುಳ್ಯ

ಜೀವನ್‌ರಾಂ ಸುಳ್ಯ ರಂಗಭೂಮಿ ಯ ಬಹುಮುಖ ಪ್ರತಿಭೆ. ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಪೂರ್ಣವಾಗಿ ರಂಗಿನ ಮನುಷ್ಯ. ರಂಗಭೂಮಿಯ ಹಿಂದೆ ಮುಂದೆ ಎಲ್ಲ ಸಂಗತಿಗಳಲ್ಲಿ ಕೈಯಾಡಿಸಿ ಸೈ ಅನ್ನಿಸಿಕೊಂಡವರು. ಸಂಗೀತ, ಬೆಳಕು ವಿನ್ಯಾಸ, ವಸ್ತ್ರ ವಿನ್ಯಾಸ, ಪ್ರಸಾದನ, ರಂಗ ನಿರ್ದೇಶನ, ರಂಗ ಪರಿಕರಗಳ ರೂಪಣೆ, ತಯಾರಿ ಎಲ್ಲದರಲ್ಲೂ ಎತ್ತಿದ ಕೈ ಜೀವನ್‌ ರಾಂ ಸುಳ್ಯ . ರಂಗ ತರಬೇತಿ, ಮುಖವಾಡ ತಯಾರಿ, ಬೀದಿ ನಾಟಕ, ಜಾದೂ, ಪವಾಡ ರಹಸ್ಯ ಬಯಲು, ಯಕ್ಷ ಪ್ರತಿಕೃತಿ (ಸ್ಮರಣಿಕೆ) ತಯಾರಿ ಹೀಗೆ ರಂಗಭೂಮಿಯೊಂದಿಗೆ ಹಾಸುಹೊಕ್ಕಾದ ಹತ್ತಾರು ವಿಷಯಗಳಲ್ಲಿ ಜೀವನ್‌ ಸದಾ ವ್ಯಸ್ತ. ರಂಗಭೂಮಿಯನ್ನೇ ನಂಬಿ, ಪ್ರತಿಭೆ, ನಿಷ್ಠೆ. ಪರಿಶ್ರಮಶೀಲ ಕಾಯಕದಿಂದ ಸ್ವಂತ ಬದುಕನ್ನೂ ರಂಗಭೂಮಿ ಯನ್ನೂ ಅರಳಿಸಲು ಸಾಧ್ಯ ಎಂದು ತೋರಿಸಿ ಕೊಟ್ಟವರು ಅವರು. ನೀನಾಸಂ ರಂಗ ಶಿಕ್ಷಣ ಕೇಂದ್ರದಿಂದ ಡಿಪ್ಲೊಮಾ ಇನ್‌ ಥಿಯೇಟರ್‌ ಆರ್ಟ್ಸ್ ಪದವಿ ಪಡೆದ ಜೀವನ್‌ರಾಂ ಅವರು ಸುಳ್ಯದ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ಅವರ ಪುತ್ರ. ನೀನಾಸಂ ತಿರುಗಾಟದ ನಾಟಕಗಳಲ್ಲಿ ಮುಖ್ಯ ನಟನಾಗಿ ನಾಲ್ಕು ವರ್ಷಗಳ ಕಾಲ ಭಾಗವಹಿಸಿದ, ಒಂದು ವರ್ಷ ತಂಡದ ಮ್ಯಾನೇಜರ್‌ ಆಗಿಯೂ ಅನುಭವಿಸಿದವರು. ಮಕ್ಕಳ ನಾಟಕ. ಕಾಲೇಜು ರಂಗಭೂಮಿ ಇನ್ನೂ ಆಚೀಚೆಗೆ ರಂಗಭೂಮಿಯ ಅಪಾರ ಸಾಧ್ಯತೆಗಳನ್ನು ಶೋಧಿಸುತ್ತಾ ಮುನ್ನಡೆದವರು 'ಜೀವನ್ ರಾಂ ಸುಳ್ಯ'. ನೀನಾಸಂನಲ್ಲಿ ಕೆ. ವಿ. ಸುಬ್ಬಣ್ಣ, ಬಿ. ವಿ. ಕಾರಂತ, ಚಿದಂಬರ ರಾವ್‌ ಜಂಬೆ, ಕೆ. ವಿ. ಅಕ್ಷರ, ವೆಂಕಟರಮಣ ಐತಾಳ, ರಘುನಂದನ್‌, ರುಸ್ತುಂ ಭರೂಚ, ಮಹಾಬಲೇಶ್ವರ, ಕೆ.ಜಿ, ಮಹಾಬಲೇಶ್ವರ ಹೆಬ್ಟಾರ್‌ ಮೊದಲಾದ ರಂಗ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡಿ ಪಳಗಿದವರು 'ಜೀವನ್ ರಾಂ ಸುಳ್ಯ'. ಅಗ್ನಿ ಮತ್ತು ಮಳೆ, ಮಾಳವಿಕಾಗ್ನಿ ಮಿತ್ರ, ಬಿರುದಂತೆಂಬರ ಗಂಡ, ಕಿರಗೂರಿನ ಗಯ್ನಾಳಿಗಳು, ಕೆರೆಗೆ ಹಾರ, ಟಿಪ್ಪೂ ಸುಲ್ತಾನ, ಸಂಗ್ಯಾ ಬಾಳ್ಯಾ , ಗೋಕುಲ ನಿರ್ಗಮನ , ಯಾರೋ ಅಂದರು, ನಾಗ ಮಂಡಲ, ಭಾಸ ನಾಟಕ, ಜರ್ಮನಿ ನಾಟಕ ವಾಯ್‌ಜಕ್‌ ಮೊದಲಾದ ೪೦ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿರುವ'ಜೀವನ್ ರಾಂ ಸುಳ್ಯ' ಅನೇಕ ನಾಟಕಗಳನ್ನು ನಿರ್ದೇಶಿಸಿದವರು. ಮೃತ್ಛಕಟಿಕ, ಸೂರ್ಯ ಶಿಕಾರಿ, ತಲೆದಂಡ, ಮಹಾಮಾಯಿ, ಅಂಧ ಯುಗ , ಸಾಹೇಬರು ಬರುತ್ತಾರೆ, ಭಾಸ ಭಾರತ, ಮಕ್ಕಳ ಮಾಯಾ ಲೋಕ, ಢಾಣಾ ಢಂಗೂರ, ಅಲ್ಲಾವುದ್ದೀನ್‌ ಮತ್ತು ಮಾಂತ್ರಿಕ ದೀಪ, ಅಸುದ್ದೊ (ತುಳು) ಪಿಲಿಪತ್ತಿ ಗಡಸ್‌ (ತುಳು), ಪಂಜರ ಶಾಲೆ, ಮಹಾ ಮಾಯಿ, ಮಕ್ಕಳ ಮಾಯಾಲೋಕ , ಪಿಲಿಪತ್ತಿ ಗಡಸ್‌ ಮೊದಲಾದ ನಾಟಕಗಳಲ್ಲಿ ಜಾನಪದ ಮತ್ತು ರಂಗಭೂಮಿಯ ಅಂಶಗಳೊಂದಿಗೆ ಜಾದೂವನ್ನೂ ಹೆಣೆದುಕೊಂಡು ಅತ್ಯದ್ಭುತ ರಮ್ಯ ಲೋಕಗಳನ್ನು ಅನಾವರಣಗೊಳಿಸಿ ನೋಟಕರನ್ನು ಮೋಡಿ ಮಾಡಿದ ರಂಗ ಮಾಂತ್ರಿಕ ನೀತ. ಇತ್ತೀಚೆಗೆ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣಾಲಯದ ವಿದ್ಯಾರ್ಥಿಗಳು ಹೋದ ಹೋದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡು ೨೦೧೦ರ "ರಾಷ್ಟ್ರೀಯ ರಂಗಪ್ರಶಸ್ತಿ" ಪಡೆದ "ಏಕಾದಶಾನನ" 'ಜೀವನ್ ರಾಂ ಸುಳ್ಯ' ಅವರ ಪ್ರತಿಭೆ, ರಂಗ ಕೌಶಲಗಳಿಗೆ ಸಾಕ್ಷಿಯಾಗಿರುವ ಇನ್ನೊಂದು ನಾಟಕ. ದಿಲ್ಲಿ, ಉದಯಪುರ, ಗುವಾಹಟಿ, ಕುರುಕ್ಷೇತ್ರ, ಚೆನ್ನೈ, ತಂಜಾ ವೂರು, ತಿರುಪತಿ, ವಿಶಾಖ ಪಟ್ಟಣ, ಮುಂಬಯಿ, ಕರ್ನಾಟಕದ ವಿವಿಧೆಡೆ ಜೀವನ್‌ ನಿರ್ದೇಶಿತ ನಾಟಕಗಳು ರಂಗವೇರಿವೆ, ದೂರದ ಮಸ್ಕತ್‌ನಲ್ಲೂ. ಮಕ್ಕಳ ಮಾಯಾಲೋಕ ೨೧೬ ಬಾರಿ, ಉಡುಪಿ ರಂಗಭೂಮಿಯವರ ಭಾಸ ಭಾರತ ೨೫ ಬಾರಿ, ಮಹಾಮ್ಮಾಯಿ ೫೮, ಪಿಲಿಪತ್ತಿ ಗಡಸ್‌(ತುಳು) ೧೫೦ ಬಾರಿ ರಂಗವೇರಿದ್ದು ನಿಜಕ್ಕೂ ದಾಖಲೆಗಳೇ. ಸಾಕ್ಷರತಾ ಆಂದೋಲನದ ಜಾಥಾ, ಭಾರತ ಜ್ಞಾನ ವಿಜ್ಞಾನ ಜಾಥಾದ ನಟನಾಗಿ ಪಾಲ್ಗೊಂಡು ಗಮನ ಸೆಳೆದ ಜೀವನ್‌ರಾಂ ಏಡ್ಸ್‌ ಎಚ್ಚರಿಕೆ, ಅಮರ ಕ್ರಾಂತಿ ಮೊದಲಾದ ವಿಷಯಗಳು, ಬಾಲ ಕಾರ್ಮಿಕ ಪದ್ಧತಿ ವಿರೋಧಿ, ಬಾಲ್ಯ ವಿವಾಹ ಪದ್ಧತಿ ವಿರೋಧಿ ಬೀದಿ ಆಶಯದ ಬೀದಿ ನಾಟಕಗಳು, ಕರಾವಳಿ ಬಚಾವೋ, ಸಂಸ್ಕೃತಿ ಬಚಾವೋ ಅಭಿಯಾನಗಳ ಬೀದಿ ನಾಟಕಗಳಲ್ಲಿ ನಟ, ನಿರ್ದೇಶಕನಾಗಿ ರಾಜ್ಯಾದ್ಯಂತ ಓಡಾಡಿದ್ದಾರೆ.

ಸುಳ್ಯದ ಜೀವನ್‌ರಾಂ ಅವರ ಮನೆ ರಂಗಮನೆಯಾಗಿದೆ; ಅದೊಂದು ಸಾಂಸ್ಕೃತಿಕ ಕಲಾ ಕೇಂದ್ರವಾಗಿದೆ. ಅಲ್ಲಿ ೪೦೦ ಆಸನ ವ್ಯವಸ್ಥೆಯ ಸುಂದರ ಬಯಲು ರಂಗ ಮಂದಿರ ವನ್ನು ಅವರು ನಿರ್ಮಿಸಿದ್ದಾರೆ. ಆಗಾಗ ಅಲ್ಲಿ ಮಕ್ಕಳಿಗೆ ರಂಗ ತರಬೇತಿ ಶಿಬಿರಗಳು, ಮಕ್ಕಳ, ಹಿರಿಯರ ನಾಟಕ ಪ್ರದರ್ಶನಗಳು ನಡೆಯು ತ್ತಲೇ ಇರುತ್ತವೆ. ಥಿಯೇಟರ್‌ ಥೆರಪಿ ಎಂಬ ವಿಶೇಷ ಚಿಕಿತ್ಸಾ ಪದ್ಧತಿಯನ್ನು ಅವರು ರೂಪಿಸಿದ್ದಾರೆ. ಈ ಎಲ್ಲ ರಂಗ ಕ್ರಿಯೆಗಳನ್ನು ನೋಡುತ್ತಲೇ ಇರುವ ಯಕ್ಷಗಾನದ ಬಣ್ಣದ ಮಾಲಿಂಗ ಅವರ ಬೃಹತ್‌ ಸಿಮೆಂಟ್‌ ಪ್ರತಿಕೃತಿ ಕೂಡಾ ಜೀವನ್‌ ಅವರ ರಂಗಮನೆಯ ಆಕರ್ಷಣೆ.೧೫-೨-೨೦೧೨ ರಿಂದ ೧೯-೨-೨೦೧೨ ರವರೆಗೆ ರಂಗಮನೆಯಲ್ಲಿ ದಶಮಾನೋತ್ಸವದ "ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ " ನಡೆಯಲಿದೆ. ಪ್ರತಿಷ್ಠಿತ ಸಿ. ಜಿ. ಕೆ. ನೇಪಥ್ಯ ಪುರಸ್ಕಾರ ಸ್ವೀಕರಿಸಿರುವ ಜೀವನ್‌ ನಾಲ್ಕು ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿ ಪಡೆದಿದ್ದಾರೆ. ವಿಶ್ವ ತುಳು ಸಮ್ಮೇಳನದಲ್ಲಿ ಜನಮನ ಸೆಳೆದ ತುಳು ಗ್ರಾಮದಲ್ಲೂ ಅವರ ಕೊಡುಗೆ ಮಹತ್ವಪೂರ್ಣ. ಹತ್ತು ವರ್ಷಗಳ ಹಿಂದೆಯೇ ಅವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ರಾಜ್ಯದಾದ್ಯಂತ ಅತ್ಯಂತ ಬಿಡುವಿಲ್ಲದ ರಂಗಕರ್ಮಿಯಾಗಿ ಅಲ್ಲಲ್ಲಿ ಸಂಘ ಸಂಸ್ಥೆಗಳ ಸದಸ್ಯರಿಗೆ, ಶಿಕ್ಷಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ನಿರಂತರವೆಂಬಂತೆ ರಂಗ ಭೂಮಿಗೆ ಸಂಬಂಧಿಸಿ ತರಬೇತಿ ಕಾರ್ಯಕ್ರಮ ಗಳಲ್ಲಿ ತೊಡಗಿಸಿಕೊಂಡಿರುವ ಜೀವನ್‌ರಾಂ ಅವರ ಕಾಲ್‌ಶೀಟ್‌ ಸಿಗುವುದು ಸುಲಭವಲ್ಲ ಎಂಬಲ್ಲೇ ಅವರ ಕಲಾ ಜೀವನದ ಸಾರ್ಥಕತೆ ಯನ್ನು ಗುರುತಿಸಬಹುದಾಗಿದೆ. ವಿಶೇಷವಾಗಿ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ರಂಗ ಚಟುವಟಿಕೆಗಳ ನಿರ್ದೇಶಕರಾಗಿ ಸಂಸ್ಥೆಗೆ ಅದೆಷ್ಟೋ ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ಪರಿಶ್ರಮಿಸುತ್ತಿರುವ ಜೀವನ್ ರಾಂ ಸುಳ್ಯರಿಗೆ ಬೆಂಬಲವಾಗಿ ನಿಂತವರು ಈ ಸಂಸ್ಥೆಯ ಅಧ್ಯಕ್ಷ ಡಾ|ಎಂ.ಮೋಹನ ಆಳ್ವರು. ಜೀವನ್ ರಾಂ ಸುಳ್ಯ ಮುಂದೆ ಕೆ.ವಿ.ಸುಬ್ಬಣ್ಣ, ಬಿ.ವಿ.ಕಾರಂತ ಮುಂತಾದವರನ್ನೂ ಮೀರಿದ ರಂಗಕರ್ಮಿಯಾಗುವ ಭರವಸೆ ಇದೆ.ನಮನ.

ನಾಳೆ ೨೭-೩-೨೦೧೦ರಂದು ವಿಶ್ವ ರಂದ ಭೂಮಿ ದಿನದಂದು ಕಾಂತಾವರ ಕನ್ನಡ ಸಂಘ ಕೊಡಲಿರುವ "ಸುವರ್ಣ ರಂಗ ಸಮ್ಮಾನ್‌" ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಲಿದ್ದಾರೆ. ಇವರು ಪತ್ರಿಕೋದ್ಯಮ ಉಪನ್ಯಾಸಕಿಯಾಗಿ,ಪ್ರವೃತ್ತಿಯಲ್ಲಿ ಜನಪದ ಕಲಾವಿದೆಯಾಗಿರುವ ಮೌಲ್ಯಜೀವನ್ ಇವರನ್ನು ಮದುವೆಯಾಗಿದ್ದಾರೆ. ಮಗನ ಹೆಸರು "ನೇಹಿಗ"