ಸಿರಿ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿರಿ
ತಳಿಯ ಹೆಸರುಸಿರಿ
ಮೂಲಪಶ್ಚಿಮ ಬಂಗಾಳ, ಸಿಕ್ಕಿಂ, ಭುತಾನ್ ಮತ್ತು ನೇಪಾಳ
ವಿಭಾಗಉಭಯ, ಧೃಡ ಶರೀರ
ಬಣ್ಣಸಾಂದ್ರ ಬೂದು, ಕಪ್ಪು, ಬಿಳಿ ಪಟ್ಟೆ
ಮುಖಉಬ್ಬಿದ ಹಣೆ
ಕೊಂಬುಉಬ್ಬಿದ ಕೊಂಬು
ಕಾಲುಗಳುಮಧ್ಯಮ ಗಾತ್ರ
ಕಿವಿಅಡ್ಡಚಾಚಿದ ಕಿವಿ,

ಪಶ್ಚಿಮ ಬಂಗಾಳ, ಸಿಕ್ಕಿಂ, ಭೂತಾನ್ ಮತ್ತು ನೇಪಾಳಗಳಲ್ಲಿ ಕೆಲಸಗಾರ ಮತ್ತು ಉತ್ತಮ ಹಾಲಿನ ತಳಿ ಎಂದು ಖ್ಯಾತವಾದ ತಳಿ ಸಿರಿ. ಒಣ ಪ್ರದೇಶದಲ್ಲಿ ದೊರಕುವ ಅತಿ ಕಡಿಮೆ ನೀರು ಮತ್ತು ಹುಲ್ಲು ಆಹಾರಕ್ಕೆ ಹೊಂದಿಕೊಂಡ ತಳಿ ಇದು. ಸಿರಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ ಮತ್ತು ಸಿಕ್ಕಿಂ ರಾಜ್ಯಗಳ ಗುಡ್ಡಗಾಡು ಪ್ರದೇಶಗಳಲ್ಲಿ ಕಾಣಬರುವ ಒಂದು ಪೂರ್ವ ಮಧ್ಯಮಗಾತ್ರದ ಗೋತಳಿ. ಕೃತಕ ಗರ್ಭಧಾರಣೆಯ ಕೊಳವೆಗಳು ಬುಡಕಟ್ಟು ಜನಾಂಗವನ್ನು ತಲುಪದ ಕಾರಣ ಈ ತಳಿ ಇಂದಿಗೂ ಅಲ್ಪ ಪ್ರಮಾಣದಲ್ಲಿ ಲಭ್ಯ. ಈ ಪ್ರದೇಶಗಳಲ್ಲಿ ಪ್ರಚಲಿತವಾಗಿರುವುದು ಛಾವಣಿ ಕೃಷಿ. ಗುಡ್ಡಗಳನ್ನು ಕಡಿದು ಇಳಿಜಾರುಗಳಲ್ಲಿ ಮಾಡಲಾದ ಗದ್ದೆಗಳಲ್ಲಿ ನಡೆಯುವ ಸಾಹಸಮಯ ಕೃಷಿಯನ್ನು ಸುಲಭವಾಗಿಸಿದ್ದು ಸಿರಿ. ಅಕ್ಕಿ, ಜೋಳ, ಶುಂಠಿ ಇತ್ಯಾದಿಗಳು ಇಲ್ಲಿನ ಪ್ರಮುಖ ಬೆಳೆಗಳು. ಈ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಹಳ; ಮಳೆ ವರ್ಷಕ್ಕೆ ೩- ೫೫ ಸೆಂಟಿಮೀಟರ್, ಅದೂ ವರ್ಷಾವಧಿ ಹಂಚಿಹೋಗಿದೆ. ಹಾಗಾಗಿ ಒಳ್ಳೆಯ ಮೇವೂ ಅಲಭ್ಯ. ಒಣಹುಲ್ಲು, ಸಿಪ್ಪೆ ಮತ್ತು ಖಾನ್ಯು, ಗೋಗುನ್ ಇತ್ಯಾದಿ ಮರಗಳ ಎಲೆಗಳು -ಇವುಗಳೆ ಮೇವು. ಸ್ವಲ್ಪ ಸಿರಿವಂತರ ಮನೆಯಲ್ಲಿ ಗೊಟಮಾಲ ಎಂಬ ಹುಲ್ಲು ಸಿಗುತ್ತದೆ. ಹಾಲು ಕೊಡುವ ಹಸುಗಳಿಗೆ ಸ್ವಲ್ಪ ಉತ್ತಮ ಆಹಾರ; ಅಕ್ಕಿ ನುಚ್ಚು, ಖ್ಹುಶ್ ಎಂಬ ಒಣ ಹಣ್ಣು, ಜೋಳದ ಹೊಟ್ಟು ಇವೆಲ್ಲವುಗಳನ್ನು ಕುದಿಸಿ ಮಾಡಿದ ಹಿಂಡಿ. ಹಸುಗಳನ್ನು ಮಂದೆಗಳಲ್ಲಿ ಗೋಪಾಲಕರು ಮೇವಿಗಾಗಿ ಕಾಡಿಗೆ ಕೊಂಡೊಯ್ಯುವ ಪಧ್ಧತಿ ಇದೆ.

ಸಿರಿ ತಳಿಯ ಗೋವುಗಳು ಸಾಮಾನ್ಯವಾಗಿ ಬಿಳಿ ಅಥವಾ ಬೂದು ಪಟ್ಟೆಗಳಿಂದ ಕೂಡಿದ ಕಪ್ಪು ಬಣ್ಣದವು. ಅಪರೂಪಕ್ಕೆ ಯಾವುದೆ ಪಟ್ಟೆಗಳಿಲ್ಲದ ಪೂರ್ಣ ಕಪ್ಪು ಅಥವಾ ಬೂದು ಹಸುಗಳನ್ನು ಕಾಣಬಹುದು. ಮಧ್ಯಮ ಗಾತ್ರ ಕೊಂಬು, ಅಡ್ಡಚಾಚಿರುವ ಕಿವಿಗಳು, ಉಬ್ಬಿದ ಹಣೆ ಇವುಗಳ ದೈಹಿಕ ಲಕ್ಷಣಗಳು. ಎತ್ತರ ಅಜಮಾಸು ೧೨೦ಸೆ.ಮಿ. ಸಿರಿಗಳ ಒಂದು ವಿಶೇಷವೆಂದರೆ ಇದು cervico-thoracic ವಿಧದ ಗೂನು ಹೊಂದಿದ ಭಾರತದ ಏಕಮಾತ್ರ ತಳಿ. ಈ ವಿಧದ ಗೂನು ಹೊಂದಿದ ತಳಿಗಳು ಚೀನಾದ ಸಿಕೊಂಗ್ ಪ್ರಾಂತ್ಯದಲ್ಲಿ ಮತ್ತು ಅಗ್ನೇಯ ಭೂತಾನ್‌ಗಳಲ್ಲಿ ಇವೆಯಾದರೂ ಭಾರತದಲ್ಲಿ ಇರುವುದು ಸಿರಿ ಮಾತ್ರ. ಸಿರಿ ತಳಿಯನ್ನೆ ಹೊಂದುವ ನೇಪಾಳಿ ತಳಿಯ ಜೊತೆ ಸಂಕರ ಮಾಡಿದ ಕಚ್ಚ ಸಿರಿ ಎಂದು ಕರೆಯಲ್ಪಡುವ ತಳಿ ತುಂಬಾ ಜನಪ್ರಿಯ. ಆದರೆ ಅವುಗಳ ನಿಲುವು, ಮತ್ತು ಗೂನುಗಳಿಂದ ಅವುಗಳನ್ನು ಪ್ರತ್ಯೇಕಿಸಬಹುದು.

೭೦ರ ದಶಕದವರೆಗೂ ವಿಪುಲವಾಗಿ ದೊರೆಯಿತ್ತಿದ್ದ ತಳಿ ಇದು. ೮೦ರ ದಶಕದಲ್ಲಿ ಕ್ಷೀರಕ್ರಾಂತಿ ಬಂದಮೇಲೆ ಈ ತಳಿ ನಾಮಾವಶೇಷಗೊಂಡು ೨೦೦೦ನೆ ಇಸವಿಯ ಹೊತ್ತಿಗೆ ನಡೆದ ಗಣತಿಯಲ್ಲಿ ಲೆಕ್ಕಕ್ಕೆ ಸಿಕ್ಕಿದ್ದು ಹತ್ತು ಮತ್ತೊಂದು. ಸಂಪರ್ಕದ ಯಾವ ಸೌಲಭ್ಯಗಳೂ ಇಲ್ಲದ ಬುಡಕಟ್ಟು ಜನಾಂಗಗಳ ಹಟ್ಟಿಯಲ್ಲಿ ಶುಧ್ಧ ತಳಿ ಲಭ್ಯವಿದೆ ಎಂಬ ಮಾಹಿತಿ ಇದೆ. ಕೃತಕ ಗರ್ಭದಾರಣೆಯ ಕೊಳವೆಗಳು ಸರಿಯಾದ ರಸ್ತೆಗಳಲ್ಲಿದ ಕಾರಣ ಅಲ್ಲಿಯವರೆಗೂ ತಲುಪದಿರುವುದು ಈ ತಳಿಯ ಉಳಿವಿಗೆ ಕಾರಣವಾಗಿದೆ.

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.