ಅಮೃತ ಮಹಲ್ (ಗೋವಿನ ತಳಿ)

ವಿಕಿಪೀಡಿಯ ಇಂದ
Jump to navigation Jump to search
ಅಮೃತ ಮಹಲ್
Amruthamahal 01.JPG
ತಳಿಯ ಹೆಸರುಅಮೃತ ಮಹಲ್
ಮೂಲಕರ್ನಾಟಕದ ಹಳೇಮೈಸೂರು ಪ್ರಾಂತ್ಯ
ವಿಭಾಗಕೆಲಸಗಾರ ತಳಿ

ಇವುಗಳು ಕೆಲಸಗಾರ ತಳಿ ವರ್ಗಕ್ಕೆ ಸೇರಿದವುಗಳಾಗಿವೆ. ಮೂಲತಃ ಕರ್ನಾಟಕಹಾಸನ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯವುಗಳಾದ ಇವುಗಳನ್ನು ವಿಶೇಷವಾಗಿ ಮೈಸೂರು ಅರಸರು ೧೫೭೨ ರಿಂದ ೧೬೩೬ರ ಕಾಲಘಟ್ಟದಲ್ಲಿ ಅಭಿವೃದ್ಧಿಗೊಳಿಸಿದರು. ಯುದ್ಧಗಳ ಸಂದರ್ಭದಲ್ಲಿ ಸಾಮಾನು ಸರಂಜಾಮುಗಳ ಸಾಗಾಟಕ್ಕಾಗಿ ಈ ತಳಿಯ ಅಭಿವೃದ್ಧಿಯಾಯಿತು.[೧] 1617-1704 ರಲ್ಲಿ ಆಗಿನ ಮೈಸೂರಿನ ಮಹಾರಾಜರು ಕಾಲಾನುಸಾರವಾಗಿ ಈ ಕರುಹಟ್ಟಿಗೆ ರಾಸುಗಳನ್ನು ಸೇರಿಸಿ, ಈ ರಾಸುಗಳಿಗೆ ನಿಗದಿತ 'ಕಾವಲು'ಗಳನ್ನು ತಮ್ಮ ರಾಜ್ಯದ ವಿವಿಧ ಭಾಗದಲ್ಲಿ ನೀಡಿದರು. ಅಂದಿನ ಮಹಾರಾಜರಾದ ಸನ್ಮಾನ್ಯ ಶ್ರೀ ಚಿಕ್ಕದೇವರಾಜ ಒಡೆಯರ್ ರವರು ಈ ಸಂಸ್ಥೆಗೆ 'ಬೆಣ್ಣೆ ಚಾವಡಿ' ಎಂದು ನಾಮಕರಣ ಮಾಡಿದರು. 1799 ರಲ್ಲಿ ಟಿಪ್ಪು ಸುಲ್ತಾನರು ಬೆಣ್ಣೆ ಚಾವಡಿ ಹೆಸರನ್ನು 'ಅಮೃತ್ ಮಹಲ್' ಎಂದು ಮರುನಾಮಕರಣ ಮಾಡಿ, ಅಮೃತ್ ಮಹಲ್ ತಳಿಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿದರು. ಹಾಗೂ ಈ ಇಲಾಖೆಯ ಉನ್ನತೀಕರಣಕ್ಕಾಗಿ ಸೂಕ್ತ ಕಾಯ್ದೆಗಳನ್ನು ಹುಕುಂನಾಮ ಮುಖೇನ ಅಳವಡಿಸಿದರು. 1799-1881 ರ ಸಂದರ್ಭದಲ್ಲಿ ಟಿಪ್ಪು ಸುಲ್ತಾನರ ಅವನತಿಯ ನಂತರ ಅಮೃತ್ ಮಹಲ್ ಇಲಾಖೆಯ ಉಸ್ತುವಾರಿಯನ್ನು ಬ್ರಿಟೀಷರು ತೆಗೆದುಕೊಂಡು ಅವರ ರೀತಿಯಲ್ಲಿಯೇ ಅಮೃತ್ ಮಹಲ್ ದನಗಳನ್ನು ಹಾಲು, ಉಳುಮೆ ಹಾಗೂ ಯುದ್ಧಗಳಲ್ಲಿ ಉಪಯೋಗಿಸುವ ಸಲುವಾಗಿ ಅಭಿವೃದ್ಧಿಪಡಿಸಲು ಕ್ರಮ ಜರುಗಿಸಿದರು. ಈ ಇಲಾಖೆಗೆ ಒಟ್ಟು 143 ಕಾವಲುಗಳಿದ್ದು, ಇವುಗಳ ಉಸ್ತುವಾರಿಯನ್ನು ಅಂದಿನ ಬ್ರಿಟೀಷ್ ಸರ್ಕಾರದ ಮಿಲಿಟರಿ ಸಹಾಯಕರಿಗೆ ನೀಡಲಾಯಿತು.[೨][೩][೪] ಮೈಸೂರಿನ ದಿವಾನರಾಗಿದ್ದ ಪೂರ್ಣಯ್ಯನವರು ಈ ಅಮೃತಮಹಲ್ ತಳಿಗಳನ್ನು ತಮಿಳುನಾಡಿನಲ್ಲಿ ಬೆಳೆಸಿದರು. ಇಂದಿಗೂ ತಮಿಳುನಾಡಿನ ಕೆಲಭಾಗಗಳಲ್ಲಿ ಅಮೃತಮಹಲ್ ತಳಿಯ ದನ ಕರುಗಳನ್ನು ಪೂರ್ಣಯ್ಯನ ದನಗಳೆಂದೇ ಕರೆಯುತ್ತಾರೆ. ಮೈಸೂರು ಅರಸರ ಹಾಗು ಹೈದರಾಲಿ, ಟಿಪ್ಪುವಿನ ಸೈನ್ಯದಲ್ಲಿ ಈ ತಳಿಗಳ ಬಂಜಾರವೆಂಬ ದಳ ಪ್ರಮುಖವಾಗಿತ್ತು. ಕೇವಲ ೨೩೭ ಅಮೃತಮಹಲ್ ತಳಿಯ ಎತ್ತುಗಳು ೩೦೦೦ದಷ್ಟಿದ್ದ ಹೈದರಾಬಾದ್ ನಿಜಾಮನ ಸೈನ್ಯವನ್ನು ಸೋಲಿಸಿ ಓಡಿಸಿರುವುದು ಇಂದು ಇತಿಹಾಸ ಹಾಗೂ ಅವುಗಳ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ಮೊದಲ ಹಾಗೂ ದ್ವಿತೀಯ ಮಹಾಯುದ್ಧಗಳಲ್ಲಿ ಯುದ್ಧ ಪರಿಕರಗಳನ್ನು ಸಾಗಿಸಲು ಈ ತಳಿಯ ಎತ್ತುಗಳು ಉಪಕರಿಸಿದ್ದವು ಎನ್ನುವುದನ್ನು ಇತಿಹಾಸ ಹೇಳುತ್ತದೆ. ಅಮೃತಮಹಲ್ ತಳಿಗಳು ಸಾಕಿದ ಒಡೆಯನಿಗೆ ಅತ್ಯಂತ ನಿಷ್ಠೆ ತೋರಿಸುತ್ತವೆ. ಗಂಟೆಗಳ ಕಾಲ ಆಹಾರ, ನೀರು ಸೇವಿಸದೇ ಸಾಮಾನು ಸಾಗಿಸುವ ಸಾಮರ್ಥ್ಯ ಈ ತಳಿಗಳಲ್ಲಿ ಕಂಡುಬರುತ್ತದೆ. ಹಾಲು ವಿಶೇಷವಾಗಿ ನೀಡದಿದ್ದರೂ ಆಕಳುಗಳು ಶ್ರಮದ ಕೆಲಸಕ್ಕೆ ಉಪಯೋಗವಾಗುತ್ತವೆ.[೫]

ಹಾಸನ, ದಕ್ಷಿಣ ಕನ್ನಡದ ಕೆಲವು ಭಾಗ, ಚಿಕ್ಕಮಗಳೂರು, ಹಳೇ ಮೈಸೂರು ಪ್ರದೇಶ, ಮಂಡ್ಯ ಮೊದಲಾದೆಡೆ ಈ ತಳಿಯ ಸಂವರ್ಧನೆಗಾಗಿ ಅಮೃತಮಹಲ್ ಕಾವಲು ಭೂಮಿ ಬಿಟ್ಟಂತಹ ಉದಾಹರಣೆಗಳು ನೋಡಲು ಸಿಗುತ್ತವೆ.[೬][೭] ಆದರಿಂದು ಅವಗಣನೆಯಿಂದಾಗಿ ಆ ಕಾವಲು ಭೂಮಿಗಳು ಅತಿಕ್ರಮಣವಾಗುತ್ತಿವೆ. ಒಳ್ಳೆಯ ತಳಿಗಳು ಕೂಡ ಅಂತ್ಯವಾಗುವ ನಿಟ್ಟಿನಲ್ಲಿವೆ.[೮]

ಉಲ್ಲೇಖಗಳು[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ

ಚಿತ್ರಗಳು[ಬದಲಾಯಿಸಿ]