ಹಳ್ಳಿಕಾರ್ (ಗೋವಿನ ತಳಿ)

ವಿಕಿಪೀಡಿಯ ಇಂದ
Jump to navigation Jump to search
ಹಳ್ಳಿಕಾರ್
Hallikaru 01.JPG
ತಳಿಯ ಹೆಸರುಹಳ್ಳಿಕಾರ್
ಮೂಲಕರ್ನಾಟಕದ ಹಳೇಮೈಸೂರು ಪ್ರಾಂತ್ಯ
ವಿಭಾಗಕೆಲಸಗಾರ ತಳಿ
ಬಣ್ಣಬೂದು
ಕೊಂಬುಹಿಂದಕ್ಕೆ ಬಗ್ಗಿದಂತಿರುವ ಕೋಡುಗಳು

ಭಾರತದ ಗೋ ಪರಂಪರೆಯಲ್ಲಿ ವಿನಾಶದ ಅಂಚಿನಲ್ಲಿರುವ ತಳಿಗಳಲ್ಲಿ ಹಳ್ಳಿಕಾರ್ ಕೂಡ ಒಂದು. ಭಾರತಿಯ ಗೋ ತಳಿಗಳಲ್ಲಿರುವ ಮೂರು ವಿಭಾಗಗಳಲ್ಲಿ ಹಳ್ಳಿಕಾರ್‌ನ್ನು ಅಪ್ಪಟ ಕೆಲಸಗಾರ ತಳಿಯಾಗಿ ಗುರುತಿಸುತ್ತಾರೆ. ಸತತ ೨೪ ಗಂಟೆ ೧೦-೧೪ ಟನ್ ಭಾರ ಎಳೆಯಬಲ್ಲ ಅಸದೃಶ ಶಕ್ತಿ ಸಾಮರ್ಥ್ಯ, ಅದ್ಭುತ ವೇಗ ಹೊಂದಿರುವ ಅಪರೂಪದ ತಳಿ. ದಿನಕ್ಕೆ ೪೦-೫೦ ಮೈಲಿ ದೂರವನ್ನು ಯಾವ ವಿಶ್ರಾಂತಿಯ ಅಗತ್ಯವಿಲ್ಲದೆ ಕ್ರಮಿಸಬಲ್ಲ ಹಳ್ಳಿಕಾರ್ ಕರ್ನಾಟಕದ, ಅಷ್ಟೇಕೆ ಇಡೀ ಭಾರತದ ಹೆಮ್ಮೆಯ ತಳಿ. Boss Indicus ವರ್ಗಕ್ಕೆ ಸೇರುವ ಹಳ್ಳಿಕಾರು ಹೆಚ್ಚಾಗಿ ಕಂಡುಬರುವುದು ಹಳ್ಳಿಕಾರ್ ಬೆಲ್ಟ್ ಎಂದೇ ಗುರುತಿಸಲ್ಪಡುವ ಮೈಸೂರು, ಮಂಡ್ಯ, ತುಮಕೂರು, ಹಾಸನ ಪ್ರದೇಶಗಳಲ್ಲಿ. ಟಿಪ್ಪುಸುಲ್ತಾನನಿಗೆ ಬ್ರಿಟಿಷರ ವಿರುದ್ದ ಗೆಲ್ಲಲು ಹಳ್ಳಿಕಾರ್ ಸಹಾಯ ಮಾಡಿತ್ತು ಎನ್ನುವ ಕತೆಗಳನ್ನು ಹಳ್ಳಿಕಾರ್ ಹೊಂದಿರುವ ರೈತರು ಹೆಮ್ಮೆಯಿಂದ ಹೇಳುತ್ತಾರೆ.

ಸಾಮಾನ್ಯವಾಗಿ ಇವುಗಳದ್ದು ಬೂದು ಬಣ್ಣ, ಹಿಂದಕ್ಕೆ ಬಗ್ಗಿದಂತಿರುವ ಕೋಡುಗಳು, ೧೭೦-೧೯೦ ಸೆಂಟಿಮೀಟರ್ ಎತ್ತರ ಹಾಗೂ ಅಜಮಾಸು ೪೫೦ ಕೆ.ಜಿ. ತೂಕ. ಕರಾವಿನ ಅವಧಿ ೨೫೦ರಿಂದ ೩೧೦ ದಿನಗಳು. ಅತ್ಯಂತ ಕಡಿಮೆ ಆಹಾರ ಸೇವನೆ ಇವುಗಳ ಇನ್ನೊಂದು ವೈಶಿಷ್ಟ್ಯ. ಹಿಂದಿನಿಂದಲೂ ಬೀಜದ ಹೋರಿಗಳನ್ನು ಆರಿಸಲು ಕೇವಲ ದೈಹಿಕ ಆಕಾರವೊಂದನ್ನೆ ಮಾನದಂಡವಾಗಿ ಪರಿಗಣಿಸಿದ್ದರಿಂದ ಈಗಿನ ತಳಿಗಳು ದಿನಕ್ಕೆ ಒಂದು-ಎರಡು ಲೀಟರ್ ಹಾಲು ಕೊಡುತ್ತವೆ ಅಷ್ಟೆ.

ಸಣ್ಣ- ಮಳ್ಳಿಗೆ, ಗುಜುಮಾವು ಎಂಬ ಎರಡು ಉಪತಳಿಗಳು ಇದ್ದವು ಎನ್ನುತ್ತಾರಾದರೂ ಸಾಕಷ್ಟು ಮಾಹಿತಿ ಲಭ್ಯವಿಲ್ಲ. ಭಾರತೀಯ ಅಂಚೆ ಇಲಾಖೆ ಹಳ್ಳಿಕಾರ್ ಮೇಲೆ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದೆ. ಈ ತಳಿಗಳ ಅಭಿವೃದ್ದಿಗಾಗಿ ಕರ್ನಾಟಕ ಸರ್ಕಾರ ಸೇರಿದಂತೆ ಕೆಲ ಸಂಘ ಸಂಸ್ಥೆಗಳು ಕ್ರಮ ಕೈಗೊಂಡಿವೆಯಾದರೂ ಇವುಗಳ ಸಂಖ್ಯೆ ದಿನ ದಿನಕ್ಕೂ ಕ್ಷೀಣಿಸುತ್ತಲೇ ಸಾಗಿದೆ. ಇರುವ ಗೋವುಗಳು ಕೂಡ ಕೇವಲ ಶೇಕಡ ೬೦-೭೦ ತಳಿಶುದ್ಧತೆ ಹೊಂದಿವೆ.

ಚಿತ್ರಗಳು[ಬದಲಾಯಿಸಿ]

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ