ವಿಷಯಕ್ಕೆ ಹೋಗು

ದೇವನಿ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವನಿ
ತಳಿಯ ಹೆಸರುದೇವನಿ
ಮೂಲಮುಂಬಯಿ ಪ್ರಾಂತ್ಯದ ಮರಾಠವಾಡ
ವಿಭಾಗಹಾಲಿನ ತಳಿ
ಮುಖಉಬ್ಬುಹಣೆ,
ಕೊಂಬುಹೊರಬಾಗಿರುವ ಕೋಡು
ಕಿವಿಅಗಲ ಉದ್ದ ಕಿವಿ,

ಇಂಗ್ಲೀಶಿನಲ್ಲಿ Deoni ಆಗಿರುವ ದೇವನಿ ೫೦೦ ವರ್ಷಗಳ ಹಿಂದಷ್ಟೇ ವ್ಯುತ್ಪನ್ನವಾದ ಭಾರತೀಯ ತಳಿ. ಗೀರ್ ಹಾಗೂ ಡಾಂಗಿ ತಳಿಗಳಿಂದ ಅಭಿವೃದ್ದಿಪಡಿಸಲಾದ ದೇವನಿ ಅಥವಾ ಡೊಂಗರಿ ನೋಡಲಿಕ್ಕೂ ಹೆಚ್ಚುಕಮ್ಮಿ ಗೀರ್‌ನಂತೆಯೆ ಕಾಣುತ್ತದೆ. ಹಣೆ, ಕಿವಿ ಕೋಡುಗಳಂತೂ ಗೀರ್‌ನ ತದ್ರೂಪ. ಅಂತೆಯೇ ಡಾಂಗಿಯ ಹೋಲಿಕೆ ಇರುವುದು ಒಟ್ಟಾರೆ ದೇಹ ಚಹರೆ ಹಾಗೂ ಉಗ್ರಸ್ವಭಾವದಲ್ಲಿ. ಮುಂಬಯಿ ಪ್ರಾಂತ್ಯದ ಮರಾಠವಾಡ ದೇವನಿಯ ತವರೂರು. ಬೀದರ್, ಬಸವಕಲ್ಯಾಣ, ಭಾಲ್ಕಿ, ಲಾತೂರು, ಉಸ್ಮನಾಬಾದ್ ಇವೆಲ್ಲ ದೇವನಿ ಹೆಚ್ಚಾಗಿ ಕಂಡುಬರುವ ಪ್ರದೇಶಗಳು. ದೇವನಿ ಮಧ್ಯಮಗಾತ್ರದ ಹೈನುಗಾರಿಕಾ ತಳಿ. ದೇವನಿಯನ್ನು ಅದರ ವರ್ಣವೈವಿಧ್ಯದ ಆಧಾರದ ಮೇಲೆ ೩ ವಿಭಾಗ ಮಾಡುತ್ತಾರೆ. ಅಚ್ಚ ಬಿಳಿಬಣ್ಣದ ಮೇಲೆ ಅಲ್ಲಲ್ಲಿ ಕಪ್ಪುಚುಕ್ಕಿಗಳಿರುವ ತಳಿಗೆ ಶೆವೆರಾ ಅಂತಲೂ, ಅಷ್ಟಾಗಿ ಚುಕ್ಕಿಗಳಿಲ್ಲದುದಕ್ಕೆ ಬಲಂಕ್ಯ ಅಂತಲೂ ಮುಖ ಪಾರ್ಶ್ವ ಕಪ್ಪಾಗಿರುವುದಕ್ಕೆ ವನ್ನೆರಾ ಅಂತಲೂ ಕರೆಯುತ್ತಾರೆ. ದೇವನಿ ಕರ್ನಾಟಕ ಮೂಲದ ತಳಿಗಳಲ್ಲೆ ಅತಿ ಹೆಚ್ಚು ಹಾಲು ಕೊಡುವ ತಳಿಯಾಗಿ ಗುರುತಿಸಲ್ಪಟ್ಟಿದೆ.

ದೇವನಿಯ ಸಾಮಾನ್ಯ ಲಕ್ಷಣಗಳಾಗಿ, ಅಗಲವಾಗಿ ತೆರೆದುಕೊಂಡಂತಿರುವ ಉದ್ದ ಕಿವಿ, ಉಬ್ಬುಹಣೆ, ಹೊರಬಾಗಿರುವ ಕೋಡು ಇತ್ಯಾದಿಗಳನ್ನು ಪಟ್ಟಿಮಾಡಬಹುದು. ಚರ್ಮ ಜೋಲು ಹಾಗೂ ಮೃದು. ಅತಿಯಾದ ಸೂಕ್ಷ್ಮ ಸ್ವಭಾವದವು ಈ ದೇವನಿ ತಳಿಯ ಹಸುಗಳು. ದಿನಕ್ಕೆ ಅಂದಾಜು ೭-೮, ಕೆಲವೊಮ್ಮೆ ಹತ್ತು ಲೀಟರ್ ಕೂಡ ಕೊಟ್ಟ ದಾಖಲೆಗಳಿವೆ.

ಇಂದು ಭಾರತೀಯ ತಳಿಗಳಲ್ಲೆ ಅತಿ ಶೀಘ್ರವಾಗಿ ನಶಿಸುತ್ತಿರುವ ತಳಿಗಳಲ್ಲಿ ದೇವನಿ ಕೂಡ ಒಂದು. ದೇವನಿ ಹೆಚ್ಚಾಗಿ ಸಾಕಲ್ಪಡುತ್ತಿದ್ದ ಬೀದರ್ ಪ್ರದೇಶಗಳಲ್ಲೇ ಈಗ ಇವುಗಳ ಸಂಖ್ಯೆ ಕೆಲವು ನೂರು. ದೇವನಿ ಹಾಗು HFನ cross breedನ ಅತಿ ಹೆಚ್ಚು ಹಾಲು ಕೊಡುವ ತಳಿ ಸಂಶೋಧಿಸಲ್ಪಟ್ಟುದುದರಿಂದ ಶುದ್ಧ ದೇವನಿಗಳ ಸಂಖ್ಯೆ ದಿನದಿನಕ್ಕೂ ಕಡಿಮೆಯಾಗುತ್ತಿದೆ. ಹಳ್ಳಿಖೇಡದಲ್ಲಿರುವ ಹೈನುಗಾರಿಕಾ ಸಂಶೋಧನ ಸಂಸ್ಥೆಯಲ್ಲಿ ಇವುಗಳನ್ನು ರಕ್ಷಿಸಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ೧೯೯೩ರ ಸೆಪ್ಟೆಂಬರ್ ೩೦ರ ಬೆಳಗಿನ ಜಾವ ೫೦ ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾದ ಭೂಕಂಪದ ಮುನ್ಸೂಚನೆಯನ್ನು ಈ ಹಸುಗಳು ಕೊಟ್ಟಿದ್ದವು [೧][೨] ಎಂಬುದು ಅನಂತರ ತಿಳಿದು ಬಂದು ದೇವನಿ ತಳಿ ಪತ್ರಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆಯಿತು. ದಿನಾಂಕ ೨೯-೧೦-೧೯೯೩ ಮಧ್ಯಾಹ್ನ ಮರಾಠಾವಾಡ ಪ್ರಾಂತ್ಯದ ಹಳ್ಳಿಗಳಲ್ಲಿ ಒಮ್ಮೆಗೆ ಕೊಟ್ಟಿಗೆಯಲ್ಲಿದ್ದ ಹಸುಗಳು ಗಾಬರಿಗೊಂಡಂತೆ, ಉದ್ರೇಕಗೊಂಡಂತೆ ವರ್ತಿಸಲಾರಂಭಿಸಿದವು. ಕಟ್ಟಿದ ಹಗ್ಗ ಕಿತ್ತುಕೊಟ್ಟಿಗೆಯಿಂದ ಹೊರಗೋಡಲು ಯತ್ನಿಸಿದವು. ಇಡೀ ಹಳ್ಳಿಗೆ ಹಳ್ಳಿಯೆ ಹಸುಗಳ ಅಂಬಾಕಾರದಿಂದ ತುಂಬಿಹೋಯಿತು. ಜನರಿಗೆ ಆಶ್ಚರ್ಯವಾಯಿತಾದರೂ ಅದಕ್ಕೆ ಅಷ್ಟಾಗಿ ಮಹತ್ವ ನೀಡದೆ ಹಗ್ಗ ಬಿಚ್ಚಿಕೊಂಡು ಹೋದ ಹಸುಗಳನ್ನು ಮತ್ತೆ ಎಳೆತಂದು ಕಟ್ಟಿದರು. ಕೆಲವು ಮಾತ್ರ ಯಾರ ಕೈಗೂ ಸಿಗದೆ ತಪ್ಪಿಸಿಕೊಂಡವು. ಘೋರ ಭೂಕಂಪದ ಮುನ್ಸೂಚನೆ ಕೊಟ್ಟಿಗೆಯಲ್ಲಿದ್ದ ಹಸುಕರುಗಳಿಗೆ ಸಿಕ್ಕಿಬಿಟ್ಟಿತ್ತು. ಅದರಲ್ಲೂ ದೇವನಿ ಮತ್ತು ಒಂಗೋಲ್ ತಳಿಯ ಹಸುಗಳಂತೂ ಬಹಳ ಸ್ಪಷ್ಟವಾಗಿ ಮುನ್ಸೂಚನೆ ಪಡೆದುಕೊಂಡುಬಿಟ್ಟಿದ್ದವು. ಆದರೆ ಇದನ್ನು ಅರಿಯದೇ ಸಾವಿರಾರು ಜನ ಭೂಕಂಪಕ್ಕೆ ಸಿಲುಕಿ ಸಾವನ್ನಪ್ಪಿದರು.

ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಹಸುಗಳ ಭೂಕಂಪ ಮುನ್ಸೂಚನೆ ಬಗ್ಗೆ ಗೋಗ್ರಾಮ ಜಾಲತಾಣದಲ್ಲಿ ಮಾಹಿತಿ". Archived from the original on 2013-10-27. Retrieved 2013-10-16.
  2. ಗೂಗಲ್ ನ್ಯೂಸಿನಲ್ಲಿ ಒಂದು ಪತ್ರಿಕೆಯ ಸುದ್ದಿ ತುಣುಕು

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.