ವಿಷಯಕ್ಕೆ ಹೋಗು

ಸದಸ್ಯ:Revathikainthaje/ನನ್ನ ಪ್ರಯೋಗಪುಟ ೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇರಾಜೆ ಸೀತಾರಾಮಯ್ಯ
[[File:
ದೇರಾಜೆ ಸೀತಾರಾಮಯ್ಯನವರು
|150px|center=yes|alt=]]
ದೇರಾಜೆ ಸೀತಾರಾಮಯ್ಯನವರು
ಜನನ೧೭-೧೧-೧೯೧೪
ಮರಣ೦೫-೧೦-೧೯೮೪
ವೃತ್ತಿತಾಳಮದ್ದಳೆ ಅರ್ಥಧಾರಿಗಳು,ಸಾಹಿತಿಗಳು
ರಾಷ್ಟ್ರೀಯತೆಭಾರತೀಯ
ವಿಷಯಪುರಾಣ-ಸಾಹಿತ್ಯ,ವೈಚಾರಿಕ ಸಾಹಿತ್ಯ

ಕನ್ನಡ ನಾಡಿನ ಶ್ರೇಷ್ಥ ಕಲಾವಿದ - ಸಾಹಿತಿಗಳಲ್ಲೊಬ್ಬರು ದೇರ‍ಾಜೆಯವರು. ಯಕ್ಷಗಾನ - ತಾಳಮದ್ದಳೆ ಕಲಾಲೋಕದಲ್ಲಿ ತಮ್ಮ ವಾಕ್ ವೈಖರಿ - ಧ್ವನಿ - ಅರ್ಥ - ರಸ ವಿಲಾಸದಿಂದ ಇತಿಹಾಸ ಸೃಷ್ಟಿಸಿದವರು ಇವರು.

ಜನನ ; ಬಾಲ್ಯ[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಜಮೀನ್ದಾರ ಮನೆತನದವರಾದ ಮಂಗಲ್ಪಾಡಿ ಕೃಷ್ಣಯ್ಯ - ಸುಬ್ಬಮ್ಮ ದಂಪತಿಯರ ಪುತ್ರನಾಗಿ ೧೯೧೪ ರ ನವಂಬರ ೧೭ ರಂದು ಜನಿಸಿದರು. ತಂದೆಯವರು ಯಕ್ಷಗಾನ ಅರ್ಥಧಾರಿಗಳಾಗಿದ್ದರು. ಅಜ್ಜ ಗೋವಿಂದಭಟ್ಟರು (ತಾಯಿಯ ತಂದೆ ) ಸೋದರ‍ ಮಾವ ಶಂಕರನಾರಾಯಣ ಭಟ್ಟರೂ ಯಕ್ಷಗಾನದ ಅಭಿರುಚಿ ಉಳ್ಳವರಾಗಿದ್ದರು. ಪ್ರಾಥಮಿಕ ಶಾಲೆಯ ಗುರುಗಳಾಗಿದ್ದ ಶ್ರೀ ಕೊಟ್ಟೆಕಾಯಿ ನಾರಾಯಣ ರಾಯರ ಕುಮಾರವ್ಯಾಸ ಪಾಠದಿಂದಲೇ ಸಾಹಿತ್ಯಾಸಕ್ತಿ, ಅಭಿನಯ, ಅರ್ಥಗಾರಿಕೆಯ ಹಾದಿಯನ್ನು ಕಂಡುಕೊಂಡೆನೆಂದು ದೇರಾಜೆಯವರು ಹೇಳಿಕೊಳ್ಳುತ್ತಿದ್ದರು. (ದೇರಾಜೆಯವರ ಅಭಿನಂದನ ಗ್ರಂಥ "ರಸಋಷಿ" ಯಲ್ಲಿ ಇವರು ಶಿಷ್ಯನ ಬಗ್ಗೆ ಪ್ರಶಂಸೆಯ ಮಾತುಗಳನ್ನು ಬರೆದಿದ್ದಾರೆ. ). ಬಾಲ್ಯದಲ್ಲೇ ತಂದೆಯನ್ನು, ಪ್ರೌಢಾವಸ್ಥೆಯಲ್ಲಿ ಅಣ್ಣನನ್ನೂ ಕಳಕೊಂಡು ಹದಿನಾರನೆಯ ವಯಸ್ಸಿಗೇ ಮನೆಯ ಎಲ್ಲಾ ಜವಾಬ್ದಾರಿಯ ಜೊತೆಗೆ ಮನೆತನದಲ್ಲಿ ಬಂದಿದ್ದ ಗ್ರಾಮ ಪಟೇಲಿಕೆಯನ್ನು ನಿಭಾಯಿಸಿದರು.

ಸಂಸಾರ[ಬದಲಾಯಿಸಿ]

೧೯೩೪ ರಲ್ಲಿ ಕನಕಾಂಗಿ ಎಂಬವರೊಂದಿಗೆ ವಿವಾಹವಾಗಿತ್ತಾದರೂ ಚೊಚ್ಚಲ ಹೆರಿಗೆಯಲ್ಲಿ ಶಿಶುವಿನೊಂದಿಗೆ ಅವರೂ ಮೃತರಾದುದರಿಂದ ೧೯೪೧ ರಲ್ಲಿ, ಪುತ್ತೂರಿನ ಸಮೀಪದ ಕೆದಿಲ ಕುಕ್ಕಜೆ ಕೃಷ್ಣ ಭಟ್ಟರ ಮಗಳು ಪಾರ್ವತಿಯನ್ನುವಿವಾಹವಾದರು. ಕೃಷ್ಣ ಮೂರ್ತಿ, ಶ್ಯಾಮಲ ( ಬಾಲ್ಯದಲ್ಲೇ ಮರಣಿಸಿರುವರು ), ಇಂದಿರಾ ಜಾನಕಿಯೆಂಬ ಮಕ್ಕಳು.

ಕಲಾಸೇವೆಯಲ್ಲಿ[ಬದಲಾಯಿಸಿ]

ಸುಳ್ಯ ತಾಲೂಕಿನಲ್ಲಿ ಹುಟ್ಟಿ ಬೆಳ್ತಂಗಡಿ ತಾಲೂಕು, ಬಂಟ್ವಾಳ ತಾಲೂಕು ಹೀಗೆ ಅನೇಕ ಕಡೆಗಳಲ್ಲಿ ಜೀವಿಸಿದರು.

ಚೊಕ್ಕಾಡಿಯಲ್ಲಿ

ಇವರು ಪ್ರಥಮ ಬಾರಿಗೆ ಅರ್ಥ ಹೇಳಿದ್ದು ಗೋಪಾಲಕನಾಗಿ. ಆಗ ಉತ್ತರಕುಮಾರನ ಪ್ರಶ್ನೆಗೆ ಉತ್ತರಿಸಲಾಗದೆ, ಅರ್ಥವನ್ನು ಅರ್ಧಕ್ಕೇ ನಿಲ್ಲಿಸಿ ಎದ್ದು ಹೋಗಿದ್ದರಂತೆ. ಮುಂದೆ ಈ ಪಾತ್ರವಹಿಸಿ ಷಹಬ್ಬಾಸ್ ಅನ್ನಿಸಿಕೊಂಡದ್ದಲ್ಲದೇ, ದೇರಾಜೆಯವರು ನಿರ್ವಹಿಸುತ್ತಿದ್ದ ಪಾತ್ರಗಳಲ್ಲಿ ಅನನ್ಯವಾದುದೆಂದು ಖ್ಯಾತಿಯನ್ನು ಪಡೆಯಿತು, ಅಪಾರವಾದ ಕೀರ್ತಿಯನ್ನು ತಂದುಕೊಟ್ಟಿತು.

ಒಂದೂವರೆ ದಶಕಗಳಷ್ಟು ಕಾಲ ಚೊಕ್ಕಾಡಿಯಲ್ಲಿ ನೆಲೆಸಿ, ಚೊಕ್ಕಾಡಿ ಗ್ರಾಮ ದೇವಸ್ಥಾನದ (ತಂದೆಯರಿಂದ ಪಂಚಾಂಗ ಹಾಕಿಸಿ ಪ್ರಾರಂಭವಾಗಿದ್ದ) ನಿರ್ಮಾಣದ ಹೊಣೆಗಾರಿಕೆಯನ್ನು ವಹಿಸಿದರು. ಆ ಸಮಯದಲ್ಲಿ, ಅಜ್ಜನಗದ್ದೆ ಗಣಪಯ್ಯ ಭಾಗವತರು, ಪನ್ನೆ ಕಿಟ್ಟಣ್ಣ ರೈಗಳು, ಉಡುವೆಕೋಡಿ ನಾರಾಯಣಯ್ಯ, ಭೀಮಗುಳಿ ಗೋವಿಂದಯ್ಯ ಮೊದಲಾದವರು ಸೇರಿಕೊಂಡು " ಚೊಕ್ಕಾಡಿ ಮೇಳ " ಎಂಬ ಹವ್ಯಾಸಿ ತಂಡವೊಂದನ್ನು ಪ್ರಾರಂಭಿಸಿದರು. ನಂತರ ನಾಟಕದತ್ತಲೂ ಒಲವು ಮೂಡಿ ಈ ಚೊಕ್ಕಾಡಿ ಮೇಳವು " ಶಾರದಾ ಪ್ರಸಾದಿತ ಯಕ್ಷಗಾನ ನಾಟಕ ಮಂಡಳಿ" ಯೆಂದು ಹೆಸರು ಪಡೆಯಿತು. ತಾಳಮದ್ದಳೆ - ಯಕ್ಷಗಾನ ಪ್ರಕಾರದಲ್ಲಿ ಮಾತಿನ ಶಕ್ತಿ- ಸೂಕ್ಷ್ಮತೆಗಳನ್ನೂ, ಅಭಿನಯದ ಮೂಲಕ ಕಂಡುಕೊಳ್ಳಬಹುದಾದ ಅರ್ಥ - ಅರ್ಥವಂತಿಕೆಯನ್ನೂ, ಜೊತೆಗೆ ಪರದೆ, ಸೀನರಿ, ಪರಿಕರಗಳು, ವೇಷ ಭೂಷಣಗಳು, ತಂತ್ರವಿಶೇಷಗಳ ಮೂಲಕ ಹೊಸ ಸಂವೇದನೆಗಳನ್ನು ರಂಗಭೂಮಿಗೆ ತಂದುಕೊಡುವುದು ಇವರ ಉದ್ದೇಶವಾಗಿತ್ತು. ಮುಂದೆ ಪ್ರದರ್ಶನಗೊಂಡ ಲಂಕಾದಹನ, ಪಾದುಕಾ ಪಟ್ಟಾಭಿಷೇಕ, ಚೂಡಾಮಣಿ, ಚಂದ್ರಾವಳಿ ವಿಲಾಸ ಮುಂತಾದ ನಾಟಕಗಳು ಆಧುನಿಕ ಒಳನೋಟಗಳನ್ನು ಹೊಂದಿದ್ದವು. ಶಿವರಾಮ ಕಾರಂತರು, ಮೊಳಹಳ್ಳಿ ಶಿವರಾಯರು, ತ.ರಾ.ಸುಬ್ಬರಾಯರು ಮೊದಲಾದವರು ಚೊಕ್ಕಾಡಿಯ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಂದ್ರಾವಳಿ ವಿಲಾಸದಲ್ಲಿ -- ಅತ್ತೆಯಾಗಿ

೧೯೪೬ ರಲ್ಲಿ ಚೊಕ್ಕಾಡಿಯ ಶ್ರೀ ರಾಮ ದೇವಾಲಯದ ನಿರ್ಮಾಣ ಸಂಪೂರ್ಣವಾಯಿತು. ಆದರೆ ಆ ದೇವಾಲಯಕ್ಕೆ ಯಾವುದೇ ಹುಟ್ಟುವಳಿ ಇಲ್ಲವಾಗಿದ್ದುದರಿಂದ, ತಾವು ರಚಿಸಿದ "ಶ್ರೀ ರಾಮ ಚರಿತಾಮೃತಂ" ಗ್ರಂಥದಿಂದ ಬಂದ ಹಣವನ್ನು ದೇವಾಲಯದ ನಿರ್ವಹಣೆಗೆ ಅನುಕೂಲವಾಗುವಂತೆ ವಿನಿಯೋಗಿಸಿದರು. ನಂತರ ಕೆಲ ವರ್ಷಗಳಲ್ಲಿ ತಮ್ಮ ಆಸ್ತಿಯನ್ನು ಬೆಳ್ಳಾರೆ- ಗಟ್ಟಿಗಾರಿನ ಪರಿಚಿತರೊಬ್ಬರ ಜಮೀನಿನೊಂದಿಗೆ ವರ್ಗಾಯಿಸಿಕೊಂಡು ಅಲ್ಲಿ ಹೋಗಿ ನೆಲೆಸಿದರು.

ಬೆಳ್ಳಾರೆಯಲ್ಲಿ

ಇಲ್ಲಿ ಇವರ ಜೀವನ ಇನ್ನೊಂದು ಮಗ್ಗುಲನ್ನು ಪಡೆಯಿತು. ಬೆಳ್ಳಾರೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದರು. ಸಾಮಾಜಿಕ ಕೆಲಸ - ಹೊಣೆಗಾರಿಕೆಗಳಲ್ಲಿ ತೊಡಗಿಸಿಕೊಂಡರು. ಪುತ್ತೂರು ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾದರು. ತಾಳಮದ್ದಳೆಯಲ್ಲಿ ಭಾಗವಹಿಸುವಿಕೆಯೂ ಜಾಸ್ತಿಯಾಗತೊಡಗಿತು. ಹಲವು ಕೃತಿಗಳೂ ಪ್ರಕಟವಾದವು. ಕಾರಣಾಂತರಗಳಿಂದ ಬೆಳ್ತಂಗಡಿಗೆ ಹೋಗಿ ನೆಲೆಸಿದರು.

ಬೆಳ್ತಂಗಡಿಯಲ್ಲಿ

ಇಲ್ಲೂ ಸಹ ಹಲವಾರು ಸಂಘ - ಸಂಸ್ಥೆಗಳ ಸದಸ್ಯರಾಗಿ, ನಿರ್ದೇಶಕರಾಗಿ ದುಡಿದರು. " ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರ ಸಂಘ " ದ ನಿರ್ದೇಶಕರಾಗಿ ಜಿಲ್ಲಾ ರೆಗ್ಯೂಲೇಟೆಡ್ ಮಾರ್ಕೆಟ್ ಕಮಿಟಿಯ ಸದಸ್ಯರಾಗಿ ಕೆಲಸ ಮಾಡಿದರು. ಇದರೊಂದಿಗೆ ಸಾಹಿತ್ಯ ಕೃಷಿ, ಅರ್ಥಗಾರಿಕೆಗಳು ಉನ್ನತಿಗೇರಿದವು.

ವಿಟ್ಲದಲ್ಲಿ

ವಿಟ್ಲದಲ್ಲಿ ಬಂದು ನೆಲೆಸಿದ ನಂತರ ಚಿಂತನೆ ಮತ್ತು ಬರಹಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು. ಹಲವು ಪುಸ್ತಕ - ಗ್ರಂಥಗಳು ಈ ಸಮಯದಲ್ಲಿ ಪ್ರಕಟವಾದವು.

ದೇರಾಜೆಯವರು ಸಾಹಿತ್ಯಕ್ಕೆ ಬಳಸುತ್ತಿದ್ದ ಭಾಷೆ ಹಳೆಗನ್ನಡ ಶೈಲಿಯದ್ದಾಗಿದ್ದರೂ ವಿಷಯಗಳು ಆಧುನಿಕ ದೃಷ್ಟಿಕೋನವನ್ನು ಹೊಂದಿದ್ದವು. ನಿರ್ವಹಿಸಿದ ಪಾತ್ರಗಳು ವೈವಿಧ್ಯವೂ ಅಗಾಧವೂ ಆಗಿದ್ದವು. ಗೋಪಾಲಕ, ಉತ್ತರಕುಮಾರ, ಸುಗ್ರೀವ, ಹನುಮಂತ, ಅಂಗದ, ವಿಭೀಷಣ, ಅತಿಕಾಯ, ಪ್ರಹಸ್ತ, ದಶರಥ, ರಾಮ, ಭರತ, ರಾವಣ, ಹಂಸಧ್ವಜ, ಧರ್ಮರಾಯ, ಭೀಮ, ಅರ್ಜುನ, ಕೌರವ, ವಿದುರ, ಕರ್ಣ, ಕೃಷ್ಣ, ಭೀಷ್ಮ, ಸುಧನ್ವ, ವಿಶ್ವಾಮಿತ್ರ, ಇವುಗಳಲ್ಲದೆ ಸ್ತ್ರೀ ಪಾತ್ರಗಳಾದ ಮಂಥರೆ, ಶೂರ್ಪನಖಿ .....ಹೀಗೆ ಮುಂದುವರೆಯುತ್ತದೆ. ಸುಮಾರು ೩೫ ವರ್ಷಗಳಷ್ಟು ಕಾಲ ನಟನಾಗಿ, ಅರ್ಥಧಾರಿಯಾಗಿ ಕಲಾಸೇವೆಯನ್ನು ಮಾಡಿದ್ದಾರೆ. ಸಾಹಿತ್ಯ, ಅರ್ಥಗಾರಿಕೆ ಎಲ್ಲವೂ ಜೀವನಾನುಭವದಿಂದ ಮೂಡಿದಂತಹವುಗಳು. "ಯಕ್ಷಗಾನ ವಿವೇಚನೆ" ಎಂಬ ಸಂಶೋಧನಾತ್ಮಕ ಕೃತಿಯಲ್ಲಿ, ಯಕ್ಷಗಾನ ಪದದ ಉತ್ಪತ್ತಿ, ಯಕ್ಷಗಾನವೆಂದರೇನು? ನಮ್ಮ ಕಲೆ- ಸಾಹಿತ್ಯ ಮುಂತಾದವುಗಳೊಡನೆ ಯಕ್ಷಗಾನದ ವ್ಯಾಪಕತೆ, ವಾದ- ಪ್ರತಿವಾದಗಳ ತರ್ಕಬದ್ಧತೆ, ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಮುಂತಾದ ವಿಷಯಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಯಕ್ಷಗಾನ, ತಾಳಮದ್ದಳೆ, ನಾಟಕ, ರಂಗಭೂಮಿಯ ಬಗ್ಗೆ ಸಂಶೋಧನೆ - ವಿಮರ್ಶೆಗಳು ವಿರಳವೆನ್ನಬಹುದಾಗಿದ್ದ ಐವತ್ತರ ದಶಕದ ಮಧ್ಯಭಾಗದಲ್ಲಿ, ತಾನು ಮಾಡಿದ ಪ್ರಯೋಗಗಳ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ಅನವಶ್ಯಕವಾದ ವಾದ ವಿವಾದಗಳಿಂದ ಸದಾ ದೂರವಿರುತ್ತಿದ್ದರು. ಪಾತ್ರದ ಒಳ ಹೊರಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು.ಮಾತಿನ ಶಕ್ತಿ- ಮಿತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರು. ಸಹ ಪಾತ್ರಧಾರಿಗಳು ಎಷ್ಟೇ ದೊಡ್ಡ ವಿದ್ವಾಂಸರಾಗಿದ್ದರೂ, ತರ್ಕ ನಿಪುಣರಾಗಿದ್ದರೂ ಇವರೊಂದಿಗೆ ಸದಾ ಎಚ್ಚರದಿಂದಿರುತ್ತಿದ್ದರು.

ಗಣ್ಯರ ದೃಷ್ಟಿಯಲ್ಲಿ[ಬದಲಾಯಿಸಿ]

ಶಿವರಾಮ ಕಾರಂತರು[ಬದಲಾಯಿಸಿ]

ದೇರಾಜೆಯವರಲ್ಲಿ ಮಾತುಗಾರಿಕೆಗಿರುವ ಮೋಹಕತೆ, ಧ್ವನಿಶಕ್ತಿಗಿರುವ ಔಚಿತ್ಯ, ವಾಕ್ಶಕ್ತಿ, ಭಾವ ತನ್ಮಯತೆ ಎಲ್ಲವೂ ಧಾರಾಳವಾಗಿದೆ. ಬರಿದೆ ವಾಕ್ಯ ಪೋಣಿಸುವವರಿಗೂ ಪಾತ್ರ ನಿರ್ವಹಿಸುವವರಿಗೂ ಇರುವ ಅಂತರ ಎಷ್ಟೆಂದು ಅವರು ಚೆನ್ನಾಗಿ ತೋರಿಸಬಲ್ಲರು. ತೆಂಕುತಿಟ್ಟಿನಲ್ಲಿ ನಾನು ಒಪ್ಪುವ ಕೇವಲ ಕೆಲವು ಕಲಾವಿದರಲ್ಲಿ ದೇರಾಜೆಯವರು ಹಾಗೂ ಕುರಿಯ ವಿಠಲ ಶಾಸ್ತ್ರಿಗಳು ಪ್ರಥಮರು.

ಡಿ.ವಿ.ಜಿ[ಬದಲಾಯಿಸಿ]

ದೇರಾಜೆಯವರದ್ದು ಟಿ.ಎಸ್.ವೆಂಕಣ್ಣಯ್ಯನವರನ್ನು ನೆನಪಿಸುವ ವ್ಯಕ್ತಿತ್ವ. ಶ್ರೀರಾಮಚಂದ್ರನ ದಿವ್ಯ ಚರಿತ್ರೆಯ ಘಟನೆಗಳನ್ನು ವಾಲ್ಮೀಕಿಯ ಹಿಂದೆ ನಿಂತುಕೊಂಡು ಕಣ್ಣಾರೆ ನೋಡಿರುವಂತೆ ನನ್ನ ಮನಸ್ಸಿಗೆ ಭಾಸವಾಗುತ್ತದೆ.

ಗೌರೀಶ ಕಾಯ್ಕಿಣಿ[ಬದಲಾಯಿಸಿ]

ದೇರಾಜೆಯವರ ಅರ್ಥಕ್ಕೆ ಅವರದೇ ಆದ ವೈಶಿಷ್ಠ್ಯವಿದೆ. ವೈಯಕ್ತಿಕತೆಯಿದೆ. ಅದು ಕಣ್ಣು ಕಟ್ಟಲಿಕ್ಕಲ್ಲ, ಕಣ್ಣು ತುಂಬಲಿಕ್ಕಲ್ಲ. ಆದರೆ ಮನ ಮುಟ್ಟುತ್ತದೆ.

ಶೇಣಿ ಗೋಪಾಲಕೃಷ್ಣ ಭಟ್[ಬದಲಾಯಿಸಿ]

ಸಮಯಕ್ಕೆ ಸರಿಯಾದ ಪ್ರಶ್ನೆ, ಪ್ರಶ್ನೆಗೆ ಸರಿಯಾದ ಉತ್ತರ, ಹೊಸ ಹೊಸ ದಿಕ್ಕಿನ ಚಿಂತನೆ - ಪರಿಕಲ್ಪನೆಗಳಿಂದ ದೇರಾಜೆಯವರ ಅರ್ಥ ಸಮೃದ್ಧವಾಗಿತ್ತು. ಅರ್ಥವೆಂದರೆ ಅದು ಪ್ರತಿ ಕಾವ್ಯದ ಸೃಷ್ಟಿ. ಯಾರನ್ನೂ ಕಲೆಯ ಚೌಕಟ್ಟಿನಿಂದ ಹೊರ ಹೋಗಲು ಬಿಡುತ್ತಿರಲಿಲ್ಲ.

ಪೆರ್ಲ ಕೃಷ್ಣ ಭಟ್[ಬದಲಾಯಿಸಿ]

ಸರಸ ಸಂಭಾಷಣೆ, ಆತ್ಮೀಯವಾದ ಮೃದು ವ್ಯವಹಾರ, ಸದಾ ಹಾಸ್ಯ ಪ್ರಿಯತೆ, ಪರಗುಣ ಪರಮಾಣುವನ್ನು ಪರ್ವತೀಕರಿಸುವ ಹೃದಯ ವೈಶಾಲ್ಯ, ಮುಗ್ಢತೆ, ಬುದ್ಢಿ- ಪ್ರತಿಭೆ- ಸಂಸ್ಕಾರಗಳ ವೈಶಾಲ್ಯ ದೇರಾಜೆಯವರ ವ್ಯಕ್ತಿತ್ವ.

ಭದ್ರಗಿರಿ ಅಚ್ಯುತದಾಸರು[ಬದಲಾಯಿಸಿ]

ದೇರಾಜೆಯವರ ಅರ್ಥವೆಂದರೆ ಊಟಕ್ಕೆ ಕುಳಿತವನ ಇಂಗಿತವನ್ನು ಅರಿತುಕೊಂಡು ಬಡಿಸುವ ರೀತಿಯದ್ದು. ಅದರ ಶುಚಿ ರುಚಿಯೇ ಪ್ರತ್ಯೇಕ. ಅವರ ಒಡನಾಟ ಜೇನು ಸವಿದಂತೆ. ಅತಿ ಮಧುರ.

ಲಕ್ಶ್ಮೀಶ ತೋಳ್ಪಾಡಿ[ಬದಲಾಯಿಸಿ]

ದೇರಾಜೆಯವರಿಗಿದ್ದಿದ್ದು ತನ್ನ ಪಾತ್ರ ಕೆಡವಬಾರದೆಂದಷ್ಟೇ ಅಲ್ಲ, ಇನ್ಯಾವ ಪಾತ್ರಗಳೂ ಕೆಡವಬಾರದೆಂದು. ಇದು ನಿಜವಾದ ನಾಟಕ ಪ್ರಜ್ಞೆ ಸಮಷ್ಟಿ ಪ್ರಜ್ಞೆ. ಇವರ ಅರ್ಥ ಅಂತಃಕರಣವನ್ನು ಮಿಡಿಯುವಂಥದ್ದು

ಕೃತಿಗಳು[ಬದಲಾಯಿಸಿ]

ಪ್ರಕಟಿತ[ಬದಲಾಯಿಸಿ]

(ಮುದ್ರಣ - ಮರು ಮುದ್ರಣವಾದ ಇಸವಿಗಳೊಂದಿಗೆ )

 • ಭೀಷ್ಮಾರ್ಜುನ ( ಯಕ್ಷಗಾನ ಪ್ರಸಂಗಕ್ಕೆ ಅರ್ಥ ) ೧೯೫೦, ೨೦೧೦.
 • ಪ್ರಿಯದರ್ಶನಂ ( ಪದ್ಯಗಂಧಿ ಗದ್ಯ) ೧೯೫೩.
 • ಧರ್ಮದಾಸಿ ( ನಾಟಕ ) ೧೯೫೫.
 • ಯಕ್ಷಗಾನ ವಿವೇಚನೆ ( ಪ್ರಬಂಧ) ೧೯೫೭.
 • ಸುಭದ್ರಾರ್ಜುನ ( ಪ್ರಸಂಗಕ್ಕೆ ಅರ್ಥ) ೧೯೫೯, ೨೦೧೧.
 • ಶ್ರೀರಾಮ ಚರಿತಾಮೃತಂ ( ಸಂಪೂರ್ಣ ಗದ್ಯ ರಾಮಾಯಣ ) ೧೯೬೦, ೧೯೯೯, ೨೦೧೫.
 • ವಿಚಾರ ವಲ್ಲರಿ ( ವೈಚಾರಿಕ) ೧೯೭೨.
 • ಧರ್ಮ ದರ್ಶನ ( ವೈಚಾರಿಕ ) ೧೯೭೩.
 • ಶ್ರೀಮನ್ಮಹಾಭಾರತ ಕಥಾಮೃತಂ ( ಸಂಫೂರ್ಣ ಗದ್ಯ ಮಹಾಭಾರತ ) ೧೯೭೭, ೨೦೦೭, ೨೦೦೮, ೨೦೦೯.
 • ರಾಮರಾಜ್ಯದ ರೂವಾರಿ ( ರಾಮಾಯಣ ಬಾಲಕಾಂಡ - ಹೊಸದೃಷ್ಟಿ) ೧೯೮೦, ೨೦೧೧.
 • ಕುರುಕ್ಷೇತ್ರಕ್ಕೊಂದು ಆಯೋಗ ( ಮಹಾಭಾರತ ಪಾತ್ರಗಳ ಸ್ವಗತ ) ೧೯೮೧, ೨೦೦೭.
 • ರಾಮರಾಜ್ಯ ಪೂರ್ವರಂಗ ( ರಾಮಾಯಣ ಅಯೋಧ್ಯಾ ಕಾಂಡ - ಹೊಸದೃಷ್ಟಿ ) ೨೦೦೯.
 • ಸುಗ್ರೀವ ಸಖ್ಯ ( ಮಕ್ಕಳಿಗಾಗಿ ಅರ್ಥ ಪ್ರಸಂಗ ) ೨೦೧೪.
 • ಮಹಾಭಾರತ ಅಕ್ಷಯ ಪಾತ್ರೆ ( ಮಕ್ಕಳಿಗಾಗಿ ಅರ್ಥ ಪ್ರಸಂಗ ) ೨೦೧೪.
 • ಕುಮಾರ ವಿಜಯ ( ಮಕ್ಕಳಿಗಾಗಿ ಅರ್ಥ ಪ್ರಸಂಗ ) ೨೦೧೪.
 • ಶೂರ್ಪನಖಿಯ ಸ್ವರಾಜ್ಯ ( ಮಕ್ಕಳಿಗಾಗಿ ಅರ್ಥ ಪ್ರಸಂಗ ) ೨೦೧೪.

ಅಪ್ರಕಟಿತ[ಬದಲಾಯಿಸಿ]

 • ಶ್ರೀಕೃಷ್ಣ ಸಂಧಾನ ( ಅರ್ಥ ಪ್ರಸಂಗ )
 • ಕೃಷ್ಣ ಸುಧಾಮ ( ಮಕ್ಕಳಿಗಾಗಿ ನಾಟಕ)
 • ಸೀತಾದೇವಿ ( ಪಾತ್ರ ವಿವೇಚನೆ )

ದೇರಾಜೆಯವರ ಕುರಿತು ಕೃತಿಗಳು[ಬದಲಾಯಿಸಿ]

 1. ರಸಋಷಿ ( ಅಭಿನಂದನಾ ಗ್ರಂಥ)
 2. ದೇರಾಜೆ ಸೀತಾರಾಮಯ್ಯ. ಜೀವನ- ಸಾಧನೆ. ( ಲೇಖಕರು; ಡಾ. ವಿಜಯಕುಮಾರ ಮೊಳೆಯಾರ.)
 3. ನಾವರಿಯದ ದೇರಾಜೆ. ಸೀತಾರಾಮಯ್ಯನವರ ಸಾಧನೆಯ ಬೆಳಕು.( ಲೇಖಕರು; ಪ್ರಸಾದ್ ರಕ್ಷಿದಿ)

ಅಚ್ಚಿನಲ್ಲಿ[ಬದಲಾಯಿಸಿ]

 • ದೇರಾಜೆ ನೆನಪಿನ ಸಂಪುಟ.
 • ಮಾತು ಕಾವ್ಯವಾಗುವ ಬಗೆ - ದೇರಾಜೆ ಶೈಲಿ.

ಹಲವು ಅಭಿನಂದನಾ ಗ್ರಂಥಗಳಲ್ಲಿ,ಸ್ಮರಣ ಸಂಚಿಕೆಗಳಲ್ಲಿ, ಕಲಾದರ್ಶನದಲ್ಲಿ ಇವರ ಲೇಖನಗಳು ಅಚ್ಚಾಗಿವೆ. ಗಾಂಧೀಜಿಯವರ ಅಭಿಮಾನಿಯಾಗಿದ್ದ ಇವರು " ಗಾಂಧೀಜಿ ನಾನು ಕಂಡಂತೆ" ಎಂಬ ರೇಡಿಯೋ ಭಾಷಣವನ್ನು ಮಾಡಿದ್ದಾರೆ. ಕೆಲವು ಕಡೆಗಳಲ್ಲಿ ಪುರಾಣ ವಾಚನಗಳನ್ನು ನಡೆಸಿದ್ದಾರೆ. ಗಮಕಿ ಕೈಂತಜೆ ನರಸಿಂಹ ಭಟ್ಟರು, ಕುಕ್ಕಜೆ ಕೃಷ್ಣ ಭಟ್ಟರ ವಾಚನಗಳಿಗೆ ಪ್ರವಚನಗಳನ್ನು ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಇವರನ್ನು ಅಭಿಮಾನದಿಂದ ಪ್ರೀತಿಯಿಂದ ಸಂಮಾನಿಸಿದ್ದಾರೆ. ೬೦ ವರ್ಷ ತುಂಬಿದಾಗ ಮಿತ್ರರೂ ಅಭಿಮಾನಿಗಳೂ ಸೇರಿ "ರಸಋಷಿ " ಎಂಬ ಸಂಮಾನ ಗ್ರಂಥವನ್ನು ಅರ್ಪಿಸಿದ್ದಾರೆ. ಇವರ "ಶ್ರೀರಾಮಚರಿತಂ" ಗ್ರಂಥಕ್ಕೆ ಮೈಸೂರು ಸರ್ಕಾರದಿಂದ ಪಾರಿತೋಷಕ ಲಭಿಸಿದೆ.

ಪತ್ರಕರ್ತ ಶ್ರೀಕರ ಭಟ್ ಅವರ ನೇತೃತ್ವದಲ್ಲಿ ದೇರಾಜೆ ಸಂಸ್ಮರಣೆ - ಸ್ಮೃತಿ ಗೌರವ ಕಾರ್ಯಕ್ರಮಗಳು ನಡೆಯುತ್ತಿವೆ. ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ, ಎಸ್.ಎಲ್.ಭೈರಪ್ಪ, ಪದ್ಯಾಣ ಶಂಕರನಾರಾಯಣ ಭಟ್, ಬಲಿಪ ನಾರಾಯಣ ಭಾಗವತರು, [೧] ಶತಾವಧಾನಿ ಡಾ.ಆರ್.ಗಣೇಶ್, ಶೇಣಿ ಗೋಪಾಲಕೃಷ್ಣ ಭಟ್, ವಾರಣಾಶಿ ಸುಬ್ರಾಯ ಭಟ್ ಹೀಗೆ ಹಲವಾರು ಪ್ರಸಿದ್ಢ ಕಲಾವಿದರಿಗೆ ಸ್ಮೃತಿ - ಗೌರವಗಳನ್ನು ನೀಡಲಾಗಿದೆ. ದೇರಾಜೆಯವರಿಗೆ ನೂರು ತುಂಬುವ ಸಂದರ್ಭದಲ್ಲಿ ದೇರಾಜೆ ಸೀತಾರಾಮಯ್ಯ ಜನ್ಮ ಶತಮಾನೋತ್ಸವ ಸಮಿತಿ, ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕರ್ಣಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಬೆಂಗಳೂರು ಇವರ ಸಂಯೋಜನೆಯೊಂದಿಗೆ ಆಯಾಯ ಊರಿನ ಪ್ರಮುಖ ಸಂಘಟನೆಗಳ ನೇತೃತ್ವದಲ್ಲಿ ನಾಡಿನ - ಹೊರನಾಡಿನ ಸುಮಾರು ಮೂವತ್ತು ಕಡೆಗಳಲ್ಲಿ ಜನ್ಮ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿತ್ತು.[೨]

ಅತ್ಯಂತ ಬೇಡಿಕೆಯಲ್ಲಿದ್ದಾಗಲೇ ವೃತ್ತಿಯಿಂದ ಸಂತೃಪ್ತರಾಗಿ ನಿವೃತ್ತರಾಗಿದ್ದರು. ಅನಂತರ ಹಲವಾರು ಗ್ರಂಥಗಳ ರಚನೆಯಲ್ಲಿ ತೊಡಗಿದ್ದರು. ಓದುವುದು ಮೆಚ್ಚಿನ ಹವ್ಯಾಸವಾಗಿತ್ತು. ಪುರಾಣ, ಇತಿಹಾಸ, ತತ್ವಶಾಸ್ತ್ರ, ವೈಚಾರಿಕ ಬರಹಗಳು, ಕಾದಂಬರಿ, ಸಾಪ್ತಾಹಿಕ - ಮಾಸಿಕ ಪತ್ರಿಕೆಗಳು, ಮಕ್ಕಳ ಕಥೆಗಳು...ಹೀಗೆ ಎಲ್ಲವನ್ನೂ ಓದುತ್ತಿದ್ದರು. ಕೊನೆಕೊನೆಗೆ ಆರೋಗ್ಯ ಅಷ್ಟು ಚೆನ್ನಾಗಿರದಿದ್ದ ಕಾರಣ ಓಡಾಟವನ್ನು ಕಡಿಮೆ ಮಾಡಿದ್ದರು. ೨೯ - ೦೭- ೧೯೮೪ ರಂದು ಮಂಗಳೂರಿ ನ ಪುರಭವನದಲ್ಲಿ ಜರುಗಿದ " ಶಲ್ಯ ಸಾರಥ್ಯ " ಇವರು ಭಾಗವಹಿಸಿದ ಕೊನೆಯ ತಾಳಮದ್ದಳೆಯಾಗಿತ್ತು. ೧೯೮೪ ರ ಅಕ್ಟೋಬರ ೫ ರ ಶುಕ್ರವಾರದಂದು ತಮ್ಮ ೭೦ ನೆಯ ವಯಸ್ಸಿನಲ್ಲಿ ವಿಟ್ಲದ ಸ್ವಗೃಹ ಆರಾಧನಾ ದಲ್ಲಿ ಅಸ್ತಂಗತರಾದರು.

ಶಲ್ಯ ಸಾರಥ್ಯ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

[೧]

[೨]

ಉಲ್ಲೇಖಗಳು[ಬದಲಾಯಿಸಿ]

 1. https://www.udayavani.com/tags/%E0%B2%A6%E0%B3%87%E0%B2%B0%E0%B2%BE%E0%B2%9C%E0%B3%86-%E0%B2%B8%E0%B3%80%E0%B2%A4%E0%B2%BE%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF
 2. http://www.suddi9.com/?p=47204