ಕೈಂತಜೆ ನರಸಿಂಹ ಭಟ್ಟ
ವಿದ್ವಾನ್ ಕೈಂತಜೆ ನರಸಿಂಹ ಭಟ್ಟ | |
---|---|
ಜನನ | ಅಕ್ಟೋಬರ್ ೨೩, ೧೯೩೫ |
ಮರಣ | ಅಕ್ಟೋಬರ್ ೨೪, ೨೦೧೪ |
ವೃತ್ತಿ | ಕವಿ, ಲೇಖಕ, ಗಮಕಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕಾವ್ಯ, ವೈಚಾರಿಕ ಸಾಹಿತ್ಯ |
ವಿಷಯ | ಪುರಾಣ, ಜಾನಪದ |
ಸಾಹಿತಿ,ಕವಿ,ಗಮಕಿ ಹಾಗೂ ಕೃಷಿಕರು ಆಗಿದ್ದರು ವಿದ್ವಾನ್ ಕೈಂತಜೆ ನರಸಿಂಹ ಭಟ್ಟರು.ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದುದರಿಂದ ಕೃಷಿಯನ್ನು ವೃತ್ತಿಯನ್ನಾಗಿಯೂ,ವಿದ್ವಜ್ಜನರ-ಅಂದರೆ ಉತ್ತಮ ಗುರುಗಳ ಮಾರ್ಗದರ್ಶನದಿಂದ ಮತ್ತು ’ಕನ್ನಡ ಸಾಹಿತ್ಯ’ವನ್ನು ಅಭ್ಯಾಸ ಮಾಡಿದುದರಿಂದ ’ಸಾಹಿತ್ಯ’ವನ್ನು ಪ್ರವೃತ್ತಿಯನ್ನಾಗಿಯೂ ರೂಢಿಸಿಕೊಂಡಿದ್ದರು.ಹಳತು-ಹೊಸತುಗಳ ನಡುಗಾಲದಲ್ಲಿ,ಗದ್ಯ-ಪದ್ಯಗಳೆರಡರಲ್ಲೂ ಇವರು ಬರೆದರೂ ’ಷಟ್ಪದಿ’ಯಲ್ಲಿ,ಅದರಲ್ಲೂ ’ಭಾಮಿನೀ ಷಟ್ಪದಿ’ಯಲ್ಲಿ ಹೆಚ್ಚು ಒಲವನ್ನು ತೋರಿದ್ದಾರೆ.
ಜನನ
[ಬದಲಾಯಿಸಿ]ಕರ್ಣಾಟಕದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ,,ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕೈಂತಜೆ ಮನೆಯಲ್ಲಿ ೧೯೩೫ ನೆಯ ಇಸವಿ ಅಕ್ಟೋಬರ ೨೩ರಂದು ಶ್ರೀಮತಿ ಸಾವಿತ್ರಿ ಅಮ್ಮ-ಶ್ರೀ ಕೈಂತಜೆ ಸದಾಶಿವ ಭಟ್ಟ ದಂಪತಿಯರ ಮಗನಾಗಿ ಜನಿಸಿದರು. ದೊಡ್ಡ ಕೂಡು ಕುಟುಂಬವಾಗಿತ್ತು
ವಿದ್ಯಾಭ್ಯಾಸ
[ಬದಲಾಯಿಸಿ]ಬಾಲ್ಯದ ವಿದ್ಯಾಭ್ಯಾಸವನ್ನು ಕೆದಿಲ ಪಂಚಾಯತು ಶಾಲೆ ಗಡಿಯಾರ,ಮಾಣಿಯ ಜಿಲ್ಲಾ ಬೋರ್ಡ್ ಹಿರಿಯ ಪ್ರಾಥಮಿಕ ಶಾಲೆ,ಮಂಗಳೂರಿನ ಮಿಲಾಗ್ರಿಸ್ ಪ್ರೌಢ ಶಾಲೆಯಲ್ಲಿ ಪೂರೈಸಿ,ಮುಂದೆ ಕಾಸರಗೋಡು ಜಿಲ್ಲಾ ನೀರ್ಚಾಲಿನ ”ಮಹಾಜನ ಸಂಸ್ಕೃತ ಮಹಾಪಾಠಶಾಲೆ”ಯಲ್ಲಿ “ಕನ್ನಡ ವಿದ್ವಾನ್” ಉಪಾಧಿಯನ್ನು ಪ್ರಪ್ರಥಮ ಶ್ರೇಣಿಯಲ್ಲಿ ಪಡೆದುಕೊಂಡರು.
ವೃತ್ತಿ
[ಬದಲಾಯಿಸಿ]ಅಧ್ಯಾಪಕ ವೃತ್ತಿಗೆ ಹೋಗುವ ಸಂದರ್ಭ ಒದಗಿ ಬಂದರೂ, ಅನಿವಾರ್ಯವಾಗಿ ಅದನ್ನು ಬಿಟ್ಟು, ಪಾರಂಪರಿಕವಾದ ಕೃಷಿ ವೃತ್ತಿಯನ್ನೇ ಅವಲಂಬಿಸಬೇಕಾಯಿತು.
ಹವ್ಯಾಸ
[ಬದಲಾಯಿಸಿ]ಕವನಗಳನ್ನು ಬರೆಯುವುದು, ಗ್ರಂಥಗಳನ್ನು ಓದುವುದು, ವಾಚನ ಮಾಡುವುದು ನೆಚ್ಚಿನ ಹವ್ಯಾಸ. ಯುವಕನಾಗಿದ್ದಾಗ ಬೆತ್ತದ ಸಣ್ಣ ಸಣ್ಣ ಬುಟ್ಟಿಗಳನ್ನು ನೇಯುತ್ತಿದ್ದರು. ಮಣ್ಣಿನಲ್ಲಿ ಗೊಂಬೆಗಳನ್ನು ಮಾಡಿ ಅವುಗಳಿಗೆ ಹೊಂದುವ ಬಣ್ಣಗಳನ್ನು ಹಚ್ಚುತ್ತಿದ್ದರು. ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಕನ್ನಡದಲ್ಲಿ ಅಕ್ಷರಗಳನ್ನು ದುಂಡಗಾಗಿ ಬರೆಯುತ್ತಿದ್ದರು. ಕ್ರಿಕೆಟ್ ಎಂದರೆ ತುಂಬಾ ಇಷ್ಟ.
ಸಂಸಾರ
[ಬದಲಾಯಿಸಿ]ಪತ್ನಿ ಪಾರ್ವತಿ, ಎರಡು ಮಂದಿ ಗಂಡು ಮಕ್ಕಳು, ಒಬ್ಬಾಕೆ ಮಗಳು, ಮೂವರು ಮೊಮ್ಮಕ್ಕಳು.
ಸಾಹಿತ್ಯಾರಾಧನೆ
[ಬದಲಾಯಿಸಿ]ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಿದುದರಿಂದ ಬದುಕಿನಲ್ಲಿ ಅದುವೇ ಪ್ರವೃತ್ತಿಯಾಯಿತು.ಎಳವೆಯಿಂದಲೇ ಬಹಳಷ್ಟು ಸಾಹಿತ್ಯದ ಗೀಳು ಇತ್ತು. ೧೪ನೆಯ ವಯಸ್ಸಿನಿಂದಲೇ ಕವಿತಾರಚನೆಯನ್ನು ಮಾಡುವಂತಾಯಿತು.ಮೊತ್ತಮೊದಲನೆಯ ’ನಮ್ಮೂರು’ ಎಂಬಕವಿತೆಯು ೧೯೪೯ರಲ್ಲಿ ’ಜಿ.ನಾರಾಯಣ’ರ ”ನೂತನ” ಪತ್ರಿಕೆಯಲ್ಲಿ ಅಚ್ಚಾಯಿತು. ೧೯೫೪ (ಜುಲಾಯಿ ೩೦)ರಲ್ಲಿ ರೆ| ಫಾ|ಅಲೆಕ್ಸಾಂಡರ್ ಪಿಂಟೋ ಅವರ ಸಂಪಾದಕತ್ವದ ಪ್ರತೀ ಶುಕ್ರವಾರ ಮಂಗಳೂರಿನಿಂದ ಹೊರಡುತ್ತಿದ್ದ ”ಜನಪ್ರೇಮಿ” ಎಂಬ ಕನ್ನಡ ವಾರ ಪತ್ರಿಕೆಯಲ್ಲಿ “ಅನ್ನಂಭಟ್ಟನ ದುರಾಶೆ”ಎನ್ನುವ ಬರಹ “ಕೈನಭ” ಕಾವ್ಯನಾಮದಿಂದ ಮೂಡಿಬಂತು.ಹಾಗೆಯೇ ೧೯೬೦ (ಶುಕ್ರವಾರ ನವಂಬರ ೧೮) ರಲ್ಲಿ ’ಕಡೆಂಗೋಡ್ಲು ಶಂಕರ ಭಟ್ಟ’ರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ “ರಾಷ್ಟ್ರಮತ” ಕನ್ನಡ ವಾರಪತ್ರಿಕೆಯಲ್ಲಿ “ಕೈನಭ” ಹೆಸರಿನಿಂದ “’ಕುಮಾರವ್ಯಾಸ’ನ ಕಾವ್ಯರಸವಾಹಿನಿ”ಎನ್ನುವ ಬರಹ ಮೂಡಿಬಂದಿತು. ವಿದ್ಯಾಗುರು-ಕವಿ-ದಿ| ಸೊಡಂಕೂರು ತಿರುಮಲೇಶ್ವರ ಭಟ್ಟರ ಪ್ರೋತ್ಸಾಹ ಸಾಕಷ್ಟು ದೊರೆಯಿತು. ಅವರ ಪ್ರೋತ್ಸಾಹದಿಂದ ಹಲವಾರು ಕೃತಿಗಳನ್ನು ರಚಿಸುವಂತಾಯಿತು. ದರ್ಭೆ ನಾರಾಯಣ ಶಾಸ್ತ್ರಿ, ಪೆರಡಾಲ ಕೃಷ್ಣಯ್ಯ, ಚಾಂಗುಳಿ ಸುಬ್ರಾಯ ಭಟ್ಟ, ಪಡಿಯಡ್ಪು ಮಹಾಲಿಂಗ ಭಟ್ಟ, ಖಂಡಿಗೆ ಶ್ಯಾಮ ಭಟ್ಟ.........ಮೊದಲಾದವರು ಇವರ ಗುರುಗಳಾಗಿದ್ದರು. ಮಡದಿ ಪಾರ್ವತಿಗೆ ’ಸಂಸ್ಕೃತ’ ತಿಳಿದುದರಿಂದ ತನ್ನ ಕಾವ್ಯ ರಚನೆಗಳಲ್ಲಿ ಬರುತ್ತಿದ್ದ ಸಂಸ್ಕೃತ ಶಬ್ದಗಳ ಉಪಯೋಗಿಸುವಿಕೆಯಲ್ಲಿ ಅವಳ ನೆರವು ಇರುತ್ತಿತ್ತು. ”ಕೈನಭ” ಅಲ್ಲದೇ “ವಾಸಿಷ್ಠ”ಎಂಬ ಹೆಸರಿನಿಂದ ಬರೆದುದೂ ಇದೆ.
ಮುದ್ರಣಗೊಂಡ ಕೃತಿಗಳು
[ಬದಲಾಯಿಸಿ]- ಶ್ರೀ ದೇವೀ ಮಹಾತ್ಮೆ (ಭಾಮಿನೀ ಷಟ್ಪದಿ.೧೯೮೦)[೧]
- ತುಳುನಾಡ ಕಲಿಗಳು (ಭಾಮಿನೀ ಷಟ್ಪದಿ.೧೯೮೪. ’ಕೋಟಿ-ಚನ್ನಯ’ರ ಕಥೆ.)
- ಶ್ರೀ ಹನುಮದ್ವಿಲಾಸಮ್ (ಭಾಮಿನೀ ಷಟ್ಪದಿ ೧೯೮೬. ಸುಮಾರು ೧೩೬೭ ಪದ್ಯಗಳುಳ್ಳ ಬೃಹತ್ಕಾವ್ಯ)
- ಶ್ರೀ ಮಲ್ಲಿಕಾರ್ಜುನ ಮಹತಿ (ಗದ್ಯ ಪ್ರಬಂಧ.೧೯೯೨. ಶ್ರೀ ಕ್ಷೇತ್ರ ತೊಡಿಕಾನ-ಅರಂತೋಡು ಸುಳ್ಳ್ಯ- ಕ್ಷೇತ್ರ ಪರಿಚಯ)
- ಗರತಿ ಮಂಗಣೆ (ಮಲ್ಲಿಕ ಮಾಲಾ ಸಮವೃತ್ತ.೧೯೯೪. ’ ತುಳುನಾಡಿನ’ ಪಾರ್ದನದ ಕಥೆ.)
- ಶ್ರೀ ಧೂಮಾವತೀ-ನಾಗರಾಜ ಬಂಟ ದೈವಸ್ಥಾನ (ಗದ್ಯ ಕೃತಿ.೨೦೦೧. ಅಂತರಗುತ್ತು-ಇದರ ಕ್ಷೇತ್ರ ಪರಿಚಯ)
- ಶ್ರೀ ಮಲ್ಲಿಕಾರ್ಜುನೇಶ್ವರ ಸುಪ್ರಭಾತಮ್ (ಬೇರೆ ಬೇರೆ ಛಂದಸ್ಸುಗಳಲ್ಲಿ ರಚಿಸಲ್ಪಟ್ಟ ಕೃತಿ.೨೦೦೭. ಉಪ್ಪಿನಂಗಡಿ ಸಮೀಪದ ಶ್ರೀ ಕ್ಷೇತ್ರ ಸುದೆಪಿಲದ ಕುರಿತು ರಚನೆಯಾದುದು.)
- ಶ್ರೀ ಸತ್ಯನಾರಾಯಣ ವ್ರತ ಕಥಾ ಸಾರ.(ಭಾಮಿನೀ ಷಟ್ಪದಿ ೨೦೧೩)[೨]
ಮುದ್ರಣವಾಗದಿರುವ ಕೃತಿಗಳು
[ಬದಲಾಯಿಸಿ]- ಶ್ರೀಕೃಷ್ಣನ ರಾಯಭಾರ(ಪೌರಾಣಿಕ ನಾಟಕ)
- ಮುಕ್ತಿಯ ಸೋಪಾನಗಳು(ಭಾಮಿನೀ ಷಟ್ಪದಿ)
- ಶ್ರೀ ದೇವೀಭಾಗವತದ ಕಥೆಗಳು.(ಸುಮಾರು ೮೫೦ರಷ್ಟು ಪದ್ಯಗಳನ್ನು ಬರೆದಾಗಿರುವ ಅಪೂರ್ಣ ಕಾವ್ಯ.)
ಶ್ರೀ ಕೃಷ್ಣನ ರಾಯಭಾರವೂ ಸೇರಿದಂತೆ ಹಲವಾರು ಪೌರಾಣಿಕ,ಚಾರಿತ್ರಿಕ,ಗೀತ ನಾಟಕಗಳಲ್ಲಿ ಅಭಿನಯಿಸಿದ್ದೂ ಅಲ್ಲದೆ ಕೆಲವು ನಾಟಕಗಳನ್ನು ದಿಗ್ದರ್ಶಿಸಿದ್ದಾರೆ. ಬರೆದು ಪೂರ್ಣಗೊಂಡಿರುವ ಶ್ರೀ ದೇವೀ ಭಾಗವತದ ಶ್ರೀ ಲಕ್ಷ್ಮೀ ಸ್ವಯಂವರೋಪಾಖ್ಯಾನಮ್,ಸತೀ ತುಲಸೀ ಉಪಾಖ್ಯಾನಮ್,ಶ್ರೀ ಸಾವಿತ್ರೋಪಾಖ್ಯಾನಮ್....ಮೊದಲಾದವುಗಳು ಪುರಾಣ ವಾಚನಕ್ಕೆ ಯೋಗ್ಯವಾಗಿವೆ. ಶ್ರೀ ಶಂಕರಾಚಾರ್ಯರ ಸಂಸ್ಕೃತದ “ಶ್ರೀ ದೇವ್ಯಪರಾಧಕ್ಷಮಾಪಣಾ ಸ್ತೋತ್ರಮ್” ಇದರ ಕನ್ನಡ ಭಾವಾನುವಾದವನ್ನು ಭಾಮಿನೀ ಷಟ್ಪದಿಯಲ್ಲಿ ಮಾಡಿದ್ದಾರೆ. ಅಲ್ಲದೆ ಸ್ಮರಣಸಂಚಿಕೆ-ನಿಯತಕಾಲಿಕ-ದೈನಿಕ ಪತ್ರಿಕೆಗಳಲ್ಲಿ ಹಲವಾರು ಲೇಖನ-ಭಾವಗೀತೆ-ಭಕ್ತಿಗೀತೆ-ಕಥೆಗಳು ಅಚ್ಚಾಗಿವೆ. ಜ್ಞಾನಸುಮ ೪ ಆದಿಶಕ್ತಿ ಶ್ರೀ ಮಹಾಮಾಯಾ
ಗಮಕ ಕಲೆ
[ಬದಲಾಯಿಸಿ]ಕೃತಿಗಳ ರಚನೆಯಲ್ಲದೇ ಹಲವಾರು ವಾಚನಗಳನ್ನೂ ನಡೆಸಿದ್ದಾರೆ.ಸುಮಾರು ಒಂದು ಸಾವಿರಗಳಿಗೂ ಹೆಚ್ಚು ’ಗಮಕ’ ವಾಚನಗಳನ್ನು ಮಾಡಿದ್ದಾರೆ.ಕನ್ನಡದ ಮಹಾಕವಿಗಳಾದ ’ಪಂಪ’,’ರನ್ನ’,’ಹರಿಹರ’ರ ’ಚಂಪೂ ಕಾವ್ಯ’ಗಳನ್ನೂ,’ಲಕ್ಶ್ಮೀಶ,’’ಕುಮಾರವ್ಯಾಸ’,’ತೊರವೆ ನಾರಣಪ್ಪ’ ಮೊದಲಾದವರ ಕಾವ್ಯಗಳನ್ನೂ,ತನ್ನ ಸ್ವಂತ ಕೃತಿಗಳನ್ನೂ ಅನೇಕ ಬಾರಿ ವಾಚಿಸಿದ್ದಾರೆ.ಎನ್.ವಿ.ಕೃಷ್ಣ ರಾವ್,ದೇರಾಜೆ ಸೀತಾರಾಮಯ್ಯ,ಪಂಡಿತ ಪೆರ್ಲ ಕೃಷ್ಣ ಭಟ್ಟ,ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ ಮೊದಲಾದವರು ಇವರ ವಾಚನಗಳಿಗೆ ಪ್ರವಚನಗಳನ್ನು ನಡೆಸಿಕೊಟ್ಟಿದ್ದಾರೆ. ಹುಟ್ಟೂರು,ಅದರ ಸುತ್ತಮುತ್ತಲು,’ಮಂಗಳೂರು’,ಧರ್ಮಸ್ಠಳ”ಕಾಸರಗೋಡು’[೩] ಹೀಗೆ ಅನೇಕ ಕಡೆಗಳಲ್ಲಿ ವಾಚನಗಳು ನಡೆದಿವೆ.
ಪುರಸ್ಕಾರಗಳು
[ಬದಲಾಯಿಸಿ]- ೧೯೯೭ ನೆಯ ಇಸವಿ ಜೂನು ೧೪ ಮತ್ತು ೧೫ರಂದು ಪುನರೂರಿನ ಶ್ರೀ ವಿಶನಾಥನ ಸನ್ನಿಧಿಯಲ್ಲಿ ದಕ್ಷಿಣ ಕನ್ನಡ-ಉಡುಪಿ-ಕಾಸರಗೋಡು ಸಹಿತ ಪ್ರಪ್ರಥಮ ಗಮಕ ಕಲಾ ಸಮ್ಮೇಳನದ ಅಧ್ಯಕ್ಷತೆ . ಶ್ರೀ ಹರಿಕೃಷ್ಣ ಪುನರೂರು ಅವರ ಹಿರಿತನದಲ್ಲಿ ಸಮ್ಮೇಳನವು ನಡೆಯಿತು.
- ೧೯೯೮ ನೆಯ ಇಸವಿ ಫೆಬ್ರವರಿ ೨೫ ರಂದು ಇರಾದಲ್ಲಿ ಜರುಗಿದ ಬಂಟ್ವಾಳ ತಾಲೂಕಿನ ಆರನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
- ೧೯೯೪ ರಲ್ಲಿ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.
- ೨೦೧೧ ನೆಯ ಇಸವಿ ಮಾರ್ಚ್ ೩೦ರಿಂದ ಏಪ್ರಿಲ್ ೧ ರ ತನಕ ’ಮುಂಬಯಿ’ಯಲ್ಲಿ ಜರುಗಿದ ಅಖಿಲ ಭಾರತ ಪ್ರಥಮ ಗಮಕ ಕಲಾ ಸಮ್ಮೇಳನದಲ್ಲಿ ಸನ್ಮಾನ.[೪]
- ೨೦೧೧ ನೆಯ ಇಸವಿ ಮಾರ್ಚ್ ೧೨ ರಂದು ಶಿರಸಿಯಲ್ಲಿ “ವಿದ್ವತ್” ಸನ್ಮಾನ.
- ೨೦೧೩ ನೆಯ ಇಸವಿ ಫೆಬ್ರವರಿ ೧ ಹಾಗೂ ೨ ರಂದು ಉಪ್ಪಿನಂಗಡಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.[೫]
- ೧೯೯೦ ರ ದಶಕದಲ್ಲಿ ಮೂಡಬಿದಿರೆಯ ಶ್ರೀ ಭಟ್ಟಾರಕ ಸ್ವಾಮಿಯವರ ನೇತೃತ್ವದಲ್ಲಿ ಕನ್ನಡದ ಮಹಾಕವಿ ’ರತ್ನಾಕರ ವರ್ಣಿ’ಯವರ ಜೀವನದ ಬಗ್ಗೆ ಅದೂ ಅವನು ಬರೆದ ’ಸಾಂಗತ್ಯ’ದಲ್ಲೇ ಮಾಡಿದ ಪದ್ಯ ರಚನೆಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಠಾನ.
- ೧೯೯೦ ರ ದಶಕದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ "ಚಿಂತನ" ಕಾರ್ಯಕ್ರಮಗಳು ಮೂಡಿ ಬಂದಿದ್ದವು.
- ೨೦೦೩ ನೆಯ ಇಸವಿ ಜನವರಿ ೨೧ ರಂದು ದೂರದರ್ಶನ ಚಂದನ ಕನ್ನಡವಾಹಿನಿಯಲ್ಲಿ ’ಸಾಹಿತ್ಯ ಸಂದರ್ಶನ’ ವೆಂಬ ೪೫ ನಿಮಿಷಗಳ ಕಾರ್ಯಕ್ರಮವು ನೇರ ಪ್ರಸಾರವಾಗಿತ್ತು.
ಇಂತಹ ಅನೇಕ ಸನ್ಮಾನಗಳು ಊರು, ಪರ ಊರುಗಳಲ್ಲಿ ಲಭಿಸಿವೆ.ಸಣ್ಣ ಸಣ್ಣ ಕವನಗಳು ಹಲವಾರು ಇವೆ.ಸಾಹಿತ್ಯಪ್ರೇಮಿಯಾಗಿದ್ದ ಶ್ರೀ ಕೈಂತಜೆ ನರಸಿಂಹ ಭಟ್ಟರು ತನ್ನ ಇಳಿವಯಸಿನಲಿ,೮೦ ನೆಯ ಹುಟ್ಟುಹಬ್ಬದ ಮರುದಿನದ ಮುಂಜಾವಿನಲಿ ಇಹಲೋಕವನ್ನು ತ್ಯಜಿಸಿದರು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]೧.ಛಂದೋಬಧ್ಧ ಕಾವ್ಯಕರ್ತಾರ,ಗಮಕಿ,ಕೈಂತಜೆ ನರಸಿಂಹ ಭಟ್ಟರು.(ಕಲಾವಿಹಾರ ಪುಟ ೩)
೨.ನಿಧನ-ಕೈಂತಜೆ ನರಸಿಂಹ ಭಟ್. ಪುಟ ೧೧(ಪ್ರಾದೇಶಿಕ ವಾರ್ತೆಗಳು)
೩.ಜ್ಞಾನಸುಮ ೪ ಆದಿಶಕ್ತಿ ಶ್ರೀ ಮಹಾಮಾಯಾ
೪. ದೇವಾಲಯಗಳು ಊರಿನ ಕಣ್ಣುಗಳಂತೆ Archived 2021-06-20 ವೇಬ್ಯಾಕ್ ಮೆಷಿನ್ ನಲ್ಲಿ.
೫. ಉಪ್ಪಿನಂಗಡಿ:ಇಂದಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
೬ಸಾವಿರದ ಸರದಾರ ’ಗಮಕಿ’ವಿದ್ವಾನ್ ಕೈಂತಜೆ ನರಸಿಂಹ ಭಟ್
ಉಲ್ಲೇಖಗಳು
[ಬದಲಾಯಿಸಿ]- ↑ http://megamedianews.com/kannada/?p=21365
- ↑ ಉದಯವಾಣಿ-ಪ್ರಾದೇಶಿಕ ವಾರ್ತೆಗಳು-ದಿನಾಂಕ-೧೧-೧೦-೨೦೧೩.ಶ್ರೀ ಸತ್ಯನಾರಾಯಣ ವ್ರತಕಥಾಸಾರ ಕೃತಿ ಬಿಡುಗಡೆಯ ಸಂದರ್ಭ
- ↑ ಉತ್ತರದೇಶ ದಿನಪತ್ರಿಕೆ-ಕಾಸರಗೋಡು-ದಿನಾಂಕ-೨೨-೦೩-೨೦೧೨.ಏತಡ್ಕದಲ್ಲಿ ಗಮಕ ಪ್ರಚಾರ ಅಭಿಯಾನ.
- ↑ ಉದಯವಾಣಿ-ಲಲಿತರಂಗ ದಿನಾಂಕ-೦೧-೦೪-೨೦೧೧.ಅಖಿಲಭಾರತ ಪ್ರಥಮ ಗಮಕಕಲಾ ಸಮ್ಮೇಳನದಲ್ಲಿ ಸಮ್ಮಾನ ಹಿರಿಯ ಗಮಕಿ ವಿ|ಕೈಂತಜೆ ನರಸಿಂಹ ಭಟ್
- ↑ http://www.mangaloretoday.com/mainnewsprint/DK-District-Kannada-Sahitya-Sammelan-inaugurated-at-Uppinangady.html