ವಿಷಯಕ್ಕೆ ಹೋಗು

ಭದ್ರಗಿರಿ ಅಚ್ಯುತದಾಸರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭದ್ರಗಿರಿ ಅಚ್ಯುತದಾಸರು
ಜನನ೧೯೩೯
ಭದ್ರಗಿರಿ, ಉಡುಪಿ ಜಿಲ್ಲೆ, ಕರ್ನಾಟಕ
ಮರಣಅಕ್ಟೋಬರ್ ೨೩, ೨೦೧೩
ಗಮನಾರ್ಹ ಕೆಲಸಗಳುಹರಿಕಥೆ

ಭದ್ರಗಿರಿ ಅಚ್ಯುತದಾಸರು (ಜನನ: ೧೯೩೯ - ನಿಧನ: ಅಕ್ಟೋಬರ್ ೨೩, ೨೦೧೩) ಹರಿಕಥಾ ವಿದ್ವಾಂಸರ ಸಾಲಿನಲ್ಲಿ ಸೇರುವ ಅಗ್ರಗಣ್ಯರಲ್ಲಿ ಕಂಗೊಳಿಸುವವರಾಗಿದ್ದಾರೆ. ದಾಸಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲೂ ಅವರ ಕೊಡುಗೆ ಮಹತ್ವದ್ದೆನಿಸಿರುವಂತದ್ದು.

ಅಚ್ಯುತದಾಸರು ಉಡುಪಿ ಜಿಲ್ಲೆಯ ಭದ್ರಗಿರಿಯಲ್ಲಿ ೧೯೩೨ರ ವರ್ಷದಲ್ಲಿ ಜನಿಸಿದರು. ಇವರ ಪೂರ್ವಜರು ಯಕ್ಷಗಾನ ಮತ್ತು ಕಥಾ ಕೀರ್ತನ ಕಲೆಯಲ್ಲಿ ಪರಿಣಿತರಾಗಿದ್ದರು. ತಂದೆ ವೆಂಕಟರಮಣ ಪೈಗಳು. ತಾಯಿ ರುಕ್ಮಿಣಿಯಮ್ಮನವರು. ಇವರ ಕಿರಿಯ ಸಹೋದರರಾದ ದಿವಂಗತ ಭದ್ರಗಿರಿ ಕೇಶವದಾಸರು ವಿಶ್ವದಾದ್ಯಂತ ಶಿಷ್ಯವೃಂದ ಹೊಂದಿದ್ದು ಹರಿಕಥೆಯಲ್ಲಿ ಮಹಾನ್ ಹೆಸರಾಗಿದ್ದು ಭಾರತದ ಕೀರ್ತನ ಕಲೆಯನ್ನು ವಿಶ್ವದಾದ್ಯಂತ ಪಸರಿಸಿದ್ದರು. ಭದ್ರಗಿರಿಯ ಅಧಿದೇವತೆಯಾದ ಶ್ರೀ ವೀರ ವಿಠಲನೇ ಅಚ್ಯುತದಾಸರ ಗುರು. ಅವನ ಸನ್ನಿಧಿಯಲ್ಲಿ ಹಾಡಿ - ಪಾಡಿ, ಕುಣಿದು ನರ್ತಿಸುತ್ತಾ ಗ್ರಾಮದ ಜನರ ಮುಂದೆ ಭಜನಾದಿಗಳನ್ನು ಮಾಡುತ್ತಾ ಕೀರ್ತನ ಕಲೆಯನ್ನು ರೂಢಿಸಿಕೊಂಡ ಸ್ವಾಧ್ಯಾಯಿಯವರು. ಇದಕ್ಕೊಂದು ರೂಪ ಕೊಟ್ಟು ಸಂಗೀತ-ಸಾಹಿತ್ಯಗಳನ್ನೊದಗಿಸಿ ದಾಸದೀಕ್ಷೆ ನೀಡಿದವರು ಕಾಶೀಮಠ ಸಂಸ್ಥಾನದ ಶ್ರೀ ಶ್ರೀ ಸುಧೀಂದ್ರ ತೀರ್ಥರು. ೧೯೫೩ರಲ್ಲಿ ಇವರಿಗೆ ಈ ದೀಕ್ಷೆ ದೊರೆಯಿತು. ಆಧ್ಯಾತ್ಮ ಸಾಧಕರಾದ ಅಚ್ಯುತದಾಸರು ಹಲವಾರು ಭಾರೀ ಹಿಮಾಲಯದಲ್ಲೂ ಪರ್ಯಟನೆ ನಡೆಸಿದವರು.

ಹರಿಕಥಾಲೋಕದಲ್ಲಿ

[ಬದಲಾಯಿಸಿ]
ಕೀರ್ತನೆ ಸಪ್ತಾಹ

೧೯೫೧ರ ವರ್ಷದ ಮಹಾಶಿವರಾತ್ರಿಯ ದಿನದಂದು ಹರಿಕಥಾ ದಾಸರೊಬ್ಬರ ಗೈರುಹಾಜರಿಯಲ್ಲಿ ೧೯ ವರ್ಷದ ತರುಣ ಅಚ್ಯುತರು ಪ್ರಪ್ರಥಮವಾಗಿ ಯಾವ ಪೂರ್ವಸಿದ್ಧತೆಯೂ ಇಲ್ಲದೆ ಕಥೆ ಮಾಡಿ ಅಲ್ಲಿನ ವಿದ್ವಜ್ಜನರ ಪ್ರಶಂಸೆಗೆ ಪಾತ್ರರಾದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದವರೇ ಅಲ್ಲ. ಕೀರ್ತಿಯ ಸೋಪಾನವನ್ನೇರುತ್ತಲೇ ಹೋದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವಾರು ಬಾರಿ ಯಾತ್ರೆ ಮಾಡಿ ತಮ್ಮ ಕೀರ್ತನ ಸೌರಭವನ್ನು ಉಣಬಡಿಸಿದ್ದರು. ಅಚ್ಯುತದಾಸರು ಕನ್ನಡ, ಮರಾಠಿ, ತುಳು, ಕೊಂಕಣಿ, ಹಿಂದಿ ಭಾಷೆಗಳಲ್ಲಿ ಸಮಾನಾತ್ಮಕ ಪ್ರಭುತ್ವ ಹೊಂದಿ ಈ ಎಲ್ಲಾ ಭಾಷೆಗಳಲ್ಲೂ ಕೀರ್ತನ ಮಾಡುವ ಸಾಮರ್ಥ ಹೊಂದಿದ್ದ ಅಪೂರ್ವ ಕಲಾವಿದರಾಗಿದ್ದರು. ಆಕಾಶವಾಣಿದೂರದರ್ಶನ ಕೇಂದ್ರಗಳಿಂದಲೂ ಅಚ್ಯುತದಾಸರ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಕೃತಿ ರಚನೆ

[ಬದಲಾಯಿಸಿ]

ಇದಲ್ಲದೆ ತಮ್ಮ ಗುರುಗಳಾದ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಂಕಿತದೊಂದಿಗೆ ’ಮೂಲ ನಾರಾಯಣ’ ಎಂಬ ಅಂಕಿತ ಹೊಂದಿ ಸಹಸ್ರಾರು ಕೀರ್ತನೆಗಳನ್ನೂ ರಚಿಸಿದರು. ಹರಿಕಥಾ ಪೂರ್ವರಂಗ, ಗೀತಾರ್ಥ ಚಿಂತನೆ, ಗುರು ಚರಿತ್ರೆ (ದತ್ತ ಮಹಿಮೆ), ಶ್ರೀನಿವಾಸ ಕಲ್ಯಾಣ ಮುಂತಾಗಿ ೨೫ ಕ್ಕೂ ಹೆಚ್ಚು ಗ್ರಂಥ ರಚನೆ ಮಾಡಿದ್ದರು. ಅಲ್ಲದೆ ಕೆಲವು ವರ್ಷಗಳ ಹಿಂದೆ “ಹರಿಕಥಾಮೃತ ಸಿಂಧು” ಎಂಬ ಆರು ಸಂಪುಟಗಳ ಬೃಹತ್ ಗ್ರಂಥ ರಚನೆಯನ್ನು ಮಾಡಿದ್ದರು. ಕೀರ್ತನ ಕಲಾಭ್ಯಾಸಿಗಳಿಗೆ ಇದೊಂದು ವಿಶ್ವಕೋಶದಂತಿದ್ದು ಮಾದರಿಯಾಗಿದೆ.

ಸಂಸ್ಥೆಗಳನ್ನು ಕಟ್ಟಿದ ಸೇವೆ

[ಬದಲಾಯಿಸಿ]

ಅಚ್ಯುತದಾಸರು ಬೆಂಗಳೂರಿನ ನೆಲಮಂಗಲದ ಬಳಿ, ವಿಜಯವಿಠ್ಠಲ ದೇಗುಲ, ದಾಸಾಶ್ರಮ ಅಂತರರಾಷ್ಟ್ರೀಯ ಕೇಂದ್ರ ಕೀರ್ತನ ಮಹಾ ವಿದ್ಯಾಲಯ, ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಮುಂತಾದ ಸಂಸ್ಥೆಗಳ ಸ್ಥಾಪನೆಗೆ ತಮ್ಮ ಸಹೋದರ ಕೇಶವದಾಸರ ಜೊತೆಗೆ ಹೆಗಲುಕೊಟ್ಟು ದುಡಿದಿದ್ದರು. ಈ ಎಲ್ಲಾ ಸಂಸ್ಥೆಗಳ ಗೌರವಾಧ್ಯಕ್ಷರೂ ಆಗಿದ್ದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ಪ್ರಕಾಶನ

[ಬದಲಾಯಿಸಿ]

’ಭಾರತ ಜ್ಯೋತಿ ಪ್ರಕಾಶನ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ತನ್ಮೂಲಕ ಅನೇಕ ಧಾರ್ಮಿಕ ಗ್ರಂಥಗಳನ್ನೂ ಪ್ರಕಟಿಸಿದ್ದರು. ’ದಾಸವಾಣಿ’ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು.ಅನೇಕ ಧ್ವನಿ ಮುದ್ರಿಕಾ ಸಂಸ್ತೆಗಳು ಪ್ರಮುಖವಾಗಿ ’ಮಾಸ್ಟರ್ ರೆಕಾರ್ಡಿಂಗ್ ಕಂಪೆನಿ’ಯ ಸಂಗೀತಾ ಕ್ಯಾಸೆಟ್‌ಗಳ ಮೂಲಕ ಇವರು ಮಾಡಿರುವ ಅನೇಕ ಹರಿಕಥಾ ಪ್ರಸಂಗಗಳು ಧ್ವನಿ ಸುರುಳಿಗಳಾಗಿ ಪ್ರಸಿದ್ಧಿಗೊಂಡಿವೆ.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ಭದ್ರಗಿರಿ ಅಚ್ಯುತದಾಸರಿಗೆ ಅನೇಕ ಪುರಸ್ಕಾರಗಳು ಸಂದಿದ್ದವು. ’ಕೀರ್ತನಾಚಾರ್ಯ’ ’ಕೀರ್ತನಾಗ್ರೇಸರ’, ’ಕೀರ್ತನ ಕೇಸರಿ’. ಮುಂತಾದ ಬಿರುದುಗಳೊಂದಿಗೆ ಇವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದವು. ಅಖಿಲ ಕರ್ನಾಟಕ ಕೀರ್ತನಕಾರರ ಎರಡನೇ ಸಮ್ಮೇಳನದ ಅಧ್ಯಕ್ಷ ಪದವಿ, ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವತ್ ಸಭೆಯಲ್ಲಿನ ಸನ್ಮಾನಗಳೇ ಅಲ್ಲದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕ – ಪುರಂದರ ಪ್ರಶಸ್ತಿ, ’ನಾಡೋಜ’ ಪ್ರಶಸ್ತಿ ಮುಂತಾಗಿ ಅನೇಕ ಪ್ರಶಸ್ತಿ ಗಳಿಸಿರುವ ದಾಸರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 1989-90ನೇ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಲ್ಲದೆ ಇವರ ಕುರಿತಾದ ಸಾಕ್ಷ್ಯಚಿತ್ರವನ್ನೂ ಹೊರತಂದಿತ್ತು.

ವಿದಾಯ

[ಬದಲಾಯಿಸಿ]

ಭದ್ರಗಿರಿ ಅಚ್ಯುತದಾಸರು ಕೆಲಕಾಲದ ಅನಾರೋಗ್ಯದ ನಂತರದಲ್ಲಿ ಅಕ್ಟೋಬರ್ ೨೩, ೨೦೧೩ರ ವರ್ಷದಲ್ಲಿ ಈ ಲೋಕವನ್ನಗಲಿದರು..

ಮಾಹಿತಿ ಕೃಪೆ

[ಬದಲಾಯಿಸಿ]
  1. ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಕೃತಿ, ಪ್ರಕಾಶಕರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ. ಮುಖ್ಯ ಸಂಪಾದಕರು: ಡಾ., ಪಂ. ನರಸಿಂಹಲು ವಡವಾಟಿ, ಪಂ. ರಾಜಶೇಖರ ಮನ್ಸೂರ
  2. ಕನ್ನಡ ಪ್ರಭ ವಾರ್ತೆ : ಭದ್ರಗಿರಿ ಅಚ್ಯುತದಾಸರು ಇನ್ನಿಲ್ಲ[ಶಾಶ್ವತವಾಗಿ ಮಡಿದ ಕೊಂಡಿ]