ವಿಷಯಕ್ಕೆ ಹೋಗು

ಶರಣಬಸವೇಶ್ವರ ದೇವಸ್ಥಾನ ಕಲಬುರಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶರಣಬಸವೇಶ್ವರ ದೇವಸ್ಥಾನ

ಶರಣಬಸವೇಶ್ವರ ದೇವಸ್ಥಾನ
ಹೆಸರು: ಶರಣಬಸವೇಶ್ವರ ದೇವಸ್ಥಾನ
ಪ್ರಮುಖ ದೇವತೆ: ಶರಣ ಬಸವೇಶ್ವರರು
ವಾಸ್ತುಶಿಲ್ಪ: ಭಾರತಿಯ ಮತ್ತು ಆರೆಬಿಕ್ ಮಿಶ್ರ

ಶರಣಬಸವೇಶ್ವರ ದೇವಸ್ಥಾನ ಕರ್ನಾಟಕ ರಾಜ್ಯದ ಕಲಬುರಗಿ ನಗರದಲ್ಲಿದೆ.ಈ ದೇವಸ್ಥಾನ ದಾಸೋಹಿ ಮತ್ತು ಶರಣ ಶ್ರೀ ಶರಣಬಸವೇಶ್ವರರಿಗೆ ಸಮರ್ಪಿಸಲಾಗಿದೆ.[]

ಇತಿಹಾಸ

[ಬದಲಾಯಿಸಿ]

ಮೂಲತಃ ಜೀವರ್ಗಿ ತಾಲ್ಲೂಕಿನ ಅರಳಗುಂಡಿಯವರಾದ ಶರಣಬಸವೇಶ್ವರರು ( ೧೭೪೬ -೧೮೨೨) ವಿಶ್ವಗುರು ಬಸವೇಶ್ವರ ಅವರಿಂದ ಸ್ಥಾಪಿತ ಲಿಂಗಾಯತ ಧರ್ಮದ ಸಂದೇಶಗಳ ಬಗೆ ಪ್ರಚಾರ ಮಾಡುತ್ತ ಗುಲಬರ್ಗಾಕ್ಕೆ ಬಂದು ನೆಲೆ ನಿಂತು ಅದನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತ್ರಿವಿಧ ದಾಸೋಹ ಮೆರೆದು ಮಡಿದರು. ಶರಣ ಬಸವೇಶ್ವರರ ಸಮಾಧಿಗೆ ನಂತರದಲ್ಲಿ ಗೋಪುರ ರಚಿಸಿದ್ದು ಇದೇ ಇಂದಿನ ಶರಣಬಸವೇಶ್ವರ ದೇವಾಲಯವಾಗಿದೆ. ಶರಣ ಬಸವೇಶ್ವರರಿಗೆ ಕಲ್ಬುರ್ಗಿಯಲ್ಲಿ ನೆಚ್ಚಿನ ಶಿಷ್ಯರಾಗಿ ನಿಂತವರು ದೊಡ್ಡಪ್ಪ ಶರಣರು.ಶರಣಬಸವೇಶ್ವರರ ಸಮಾಧಿ ಇರುವ ಗರ್ಭ ಗೃಹದಲ್ಲಿ ಗದ್ದುಗೆಯ ಮೇಲೆ ಗುರು ಶಿಷ್ಯರ ಅವಿನಾಭಾವ ಸಂಬಂಧ ಹಾಗೂ ಸಾಮರಸ್ಯಗಳನ್ನು ಸೂಚಿಸಲು ಶರಣಬಸವೇಶ್ವರ ಹಾಗೂ ಅವರ ಗುರುಗಳ ಬೆಳ್ಳಿಮುಖಗಳನ್ನುಳ್ಳ ಜೋಡಿ ಮೂರ್ತಿಯನ್ನು ಪ್ರಾತಿನಿಧಿಕವಾಗಿ ಪ್ರತಿಷ್ಠಾಪಿಸಿದ್ದು, ಇಂದು ಇದೇ ಭಕ್ತರ ಆರಾಧನಾ ಬಿಂದುವಾಗಿದೆ. ಇದನ್ನು ಬಳಸಿ ವಿಶಾಲವಾದ ಸಭಾ ಮಂಟಪವಿದ್ದು ಪ್ರದಕ್ಷಿಣಾ ಪಥವೂ ಇದೆ. ಅರೆ ಕಂಬ, ಬಿಡ ಕಂಬ, ಜೋಡಿ ಕಂಬ ಹಾಗೂ ೩೬ ಕಮಾನುಗಳನ್ನು ಬಳಸಿ ನಿರ್ಮಿಸಿದ್ದು ಹಾಗೂ ವಿಶಿಷ್ಟ ಹೂ – ಬಳ್ಳಿಗಳಿಂದ ನಿರ್ಮಿಸಿದ್ದು, ಛಾವಣಿಯೂ ವಿಶಿಷ್ಟವಾಗಿದೆ.ಶ್ರಾವಣ ಮಾಸದಲ್ಲಿ ನಡುವಣ ಸೋಮವಾರ ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ ಜರುಗುತ್ತಿದ್ದು,[] ಅಂದು ಸಾವಿರಾರು ಜನ ಬಂದು ಪಾಲ್ಗೊಳ್ಳುತ್ತಾರೆ. ಶರಣ ಬಸವೇಶ್ವರ ಮಹಾದಾಸೋಹ ಪೀಠವು ಇಂದು ಜ್ಞಾನದಾಸೋಹ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.[][]

ಶರಣಬಸವೇಶ್ವರ ಜಾತ್ರೆ

[ಬದಲಾಯಿಸಿ]
  • ರತೋತ್ಸವದ ಹಿನ್ನೆಲೆ:

ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ದಿನಾಂಕ 11-03-1822, ಸೋಮವಾರದಂದು ಲಿಂಗೈಕ್ಯರಾದರು. ಬಳಿಕ ಅವರ ಸಮಾದಿಯ ಮೇಲೆ ಗೋಪುರವನ್ನು ಕಟ್ಟಲಾಯಿತು. ಅದುವೇ ಇಂದಿನ ಕಲಬುರಗಿಯಲ್ಲಿನ ಪವಿತ್ರವಾದ ಶ್ರೀ ಶರಣಬಸವೇಶ್ವರ ದೇವಸ್ತಾನ. ಅವರ ದಾಸೋಹ ಪರಂಪರೆಯನ್ನು ಜನತೆಯ ಮನದಲ್ಲಿ ಹಸಿರಾಗಿ ಉಳಿಸಲು, ಅವರು ಲಿಂಗೈಕ್ಯರಾದ ದಿನದಂದು ಪ್ರತಿವರ‍್ಶವು ರತೋತ್ಸವವನ್ನು ನಡೆಸಲಾಗುತ್ತದೆ.[]

  • ಜಾತ್ರೆಯ ವಿಶೇಶತೆ:

ಸುಮಾರು 17 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ದಿನದಂದು ಅಡ್ಡಪಲ್ಲಕಿ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಶ್ರೀ ಶರಣಬಸವೇಶ್ವರರ ದಿವ್ಯಬಿಂಬಗಳಿರುವ ಅವಳಿ ವಿಗ್ರಹವನ್ನು ಅಡ್ಡಪಲ್ಲಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆಯಲ್ಲಿ ನಂದಿಕೋಲುಗಳ ಕುಣಿತ, ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳ ಪ್ರದರ‍್ಶನ ಹಾಗೂ ಬಜನೆಯ ತಂಡದವರಿಂದ ಬಜನೆ ನಡೆಯುತ್ತದೆ. ಅಡ್ಡಪಲ್ಲಕಿಯಲ್ಲಿ ದೇವಸ್ತಾನದ ಸುತ್ತ 5 ಸುತ್ತುಗಳನ್ನು ಹಾಕಲಾಗುತ್ತದೆ. ಈ ಉತ್ಸವದಲ್ಲಿ ಸಾವಿರಾರು ಬಕ್ತರು ಶ್ರದ್ದೆಯಿಂದ ಪಾಲ್ಗೊಳ್ಳುತ್ತಾರೆ.[][] ಎರಡನೇ ದಿನ ಶ್ರೀ ಶರಣಬಸವೇಶ್ವರರ ರತೋತ್ಸವ ಕಾರ‍್ಯಕ್ರಮ ನಡೆಯುತ್ತದೆ. ಈ ದಿನದಂದು ಬೆಳಿಗ್ಗೆ ಶ್ರೀ ಶರಣಬಸವೇಶ್ವರರಿಗೆ ವಿಶೇಶವಾದ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ವೇಳೆ ರತೋತ್ಸವ ಕಾರ‍್ಯಕ್ರಮ ನಡೆಯುತ್ತದೆ. ಶರಣಬಸವೇಶ್ವರ ಸಂಸ್ತಾನದ ಪೀಠಾದಿಪತಿಗಳು ಪೂಜೆ ಸಲ್ಲಿಸುವ ಮೂಲಕ ರತೋತ್ಸವ ಕಾರ‍್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ಜಾತ್ರೆಯ ಪ್ರತಿದಿನವೂ ದೇವಸ್ತಾನದ ಸಂಕೀರ‍್ಣದಲ್ಲಿರುವ ಅನುಬವ ಮಂಟಪದಲ್ಲಿ ವಿಶೇಶ ಉಪನ್ಯಾಸಕರಿಂದ ಶರಣಬಸವೇಶ್ವರರ ತತ್ವ ಸಿದ್ದಾಂತಗಳ ಕುರಿತು ಚರ‍್ಚೆ, ಮಾತುಗಳು ಹಾಗು ಇನ್ನಿತರ ಉಪನ್ಯಾಸ ಕಾರ‍್ಯಕ್ರಮಗಳು ನಡೆಯುತ್ತವೆ. ಇನ್ನೊಂದು ಕಡೆ ಹಲವಾರು ಊರುಗಳಿಂದ ಬಂದಿರುವ ಬಜನೆ ತಂಡಗಳಿಂದ ರಾತ್ರಿಯಿಡೀ ಶರಣಬಸವೇಶ್ವರರ ಬಜನೆ ಹಾಗೂ ಕೀರ‍್ತನೆಗಳು ನಡೆಯುತ್ತವೆ. ಜಾತ್ರೆಯಲ್ಲಿ ಸಿಹಿತಿಂಡಿ, ಬಳೆ, ಮಕ್ಕಳ ಆಟಿಕೆ ಹಾಗೂ ಇನ್ನೂ ಹಲವಾರು ಬಗೆಯ ಮಳಿಗೆಗಳನ್ನು ಹಾಕುತ್ತಾರೆ. ಇದರ ಜೊತೆಯಲ್ಲಿಯೇ ವಿವಿದ ಬಗೆಯ ಜೋಕಾಲಿಗಳು ಬರುತ್ತವೆ. ಎಲ್ಲವೂ ಸೇರಿ ಹದಿನೈದು ದಿನದ ಜಾತ್ರೆಯನ್ನು ಕಳೆಗಟ್ಟಿಸುತ್ತವೆ. ಇನ್ನು ಶರಣಬಸವೇಶ್ವರರ ಹುಟ್ಟಿದ ಊರು ಅರಳಗುಂಡಗಿಯಲ್ಲಿಯೂ ಇದೇ ಮಾದರಿಯಲ್ಲಿ 5 ದಿನಗಳ ಕಾಲ ಜಾತ್ರೆ ನಡೆಯುತ್ತದೆ.ಸಾವಿರಾರು ಬಕ್ತರು ಜೈಗೋಶವನ್ನು ಹಾಕುತ್ತಾ ಬಕ್ತಿಯಿಂದ ತೇರು ಎಳೆಯುತ್ತಾರೆ. ತೇರು ಸಾಗುವ ಹಾದಿಯಲ್ಲಿ ಹೂವು-ಹಣ್ಣುಗಳನ್ನು ಮೇಲೆ ಹಾರಿಸುತ್ತ, ಜೈಗೋಶವನ್ನು ಮೊಳಗಿಸುತ್ತಾ ಬಕ್ತಿ ಬಾವದ ಅಲೆಯಲ್ಲಿ ಮೀಯುತ್ತಾರೆ. ಹೀಗೆ ಸಾಗುವ ತೇರು ಶರಣಬಸವೇಶ್ವರರ ದೇವಸ್ತಾನದ ಸಂಕೀರ‍್ಣದಲ್ಲಿ ಸುಮಾರು 100 ಮೀಟರ್ ದೂರದಲ್ಲಿರುವ ಬಸವಣ್ಣನ ಗುಡಿಯವರಿಗೂ ತಲುಪಿ ಮತ್ತೆ ದೇವಸ್ತಾನದ ಕಡೆಗೆ ಹಿಂತಿರುಗುತ್ತದೆ.ಉಳಿದ ಹದಿಮೂರು ದಿನಗಳ ಕಾಲ ಜಾತ್ರೆಯ ಮೆರೆಗು ಹಾಗೆಯೇ ಇರುತ್ತದೆ. ಈ ಜಾತ್ರೆಗೆ ಕಲಬುರಗಿ ಜಿಲ್ಲೆಯಿಂದಲ್ಲದೇ ನೆರೆಯ ಜಿಲ್ಲೆಗಳಿಂದ ಹಾಗೂ ಹೊರ ನಾಡಿನಿಂದ ಹಲವಾರು ಬಕ್ತರು ಬಜನೆ ಮಾಡುತ್ತಾ ಕಾಲ್ನಡಿಗೆಯಲ್ಲಿ ಬರುತ್ತಾರೆ. ಅವರು ಬರುವ ದಾರಿಯಲ್ಲಿ ಸಿಗುವ ಊರುಗಳಲ್ಲಿ ಜನರನ್ನು ಭೇಟಿಮಾಡಿ, ಶರಣಬಸವೇಶ್ವರರ ತತ್ವ ಸಿದ್ದಾಂತಗಳ ಬಗ್ಗೆ ಅರಿವು ಮೂಡಿಸುತ್ತಾ ಬರುತ್ತಾರೆ. ಜಾತ್ರೆಗೆ ಬರುವ ಬಕ್ತರಿಗೆ ಅನ್ನ ದಾಸೋಹದ ಏರ‍್ಪಾಡನ್ನು ದೇವಸ್ತಾನದ ಕಡೆಯಿಂದ ಮಾಡಲಾಗಿರುತ್ತದೆ. ಇದ್ದಕ್ಕಾಗಿಯೇ ಬಕ್ತರು ತಾವು ಬೆಳೆದ ಬೆಳೆಗಳಲ್ಲಿ ಒಂದಿಶ್ಟು ಬಾಗವನ್ನು ಶರಣಬಸವೇಶ್ವರರ ದಾಸೋಹಕ್ಕೆ ನೀಡಿ, ಅವರ ದಾಸೋಹ ಕಾಯಕಕ್ಕೆ ಕೈಜೋಡಿಸಿ ಪುನೀತರಾಗುತ್ತಾರೆ.[]

ಶ್ರಾವಣ ಮಾಸದ ಸೋಮವಾರ

[ಬದಲಾಯಿಸಿ]

ಶ್ರಾವಣ ಮಾಸ ಪೂರ್ತಿ ಶ್ರೀ ಶರಣ ಬಸವೇಶ್ವರ ದೇವಸ್ಥಾನಕ್ಕೆ ಭಕ್ತರು ಬರುತ್ತಾರೆ. ಸೋಮವಾರ ಶರಣಬಸವೇಶ್ವರರ ವಾರವಾಗಿರುವುದರಿಂದ ಈ ದಿನ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ವಿಶೇಷವಾಗಿ 3ನೇ ಸೋಮವಾರದಂದು ರಾಜ್ಯದ ಮಾತ್ರವಲ್ಲದೇ, ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಭಕ್ತರು ಬರುತ್ತಾರೆ. ಅದೆಷ್ಟೋ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಕಲಬುರಗಿಯ ಶರಣರ ದರ್ಶನ ಪಡೆಯುತ್ತಿದ್ದಾರೆ.[]

ಉಲ್ಲೇಖನಗಳು

[ಬದಲಾಯಿಸಿ]
  1. "ಗುಲಬರ್ಗಾ ನಗರದ ಪ್ರೇಕ್ಷಣೀಯ ಸ್ಥಳಗಳು". www.kanaja.in accessdate 28 Oct 2016.
  2. http://kannada.eenaduindia.com/Rainbow/TravelTalk/2015/05/05070505/Kalaburagi-The-Great-Buddhist-Vihara-Spcl-Story.vpf
  3. "ಹೈ.ಕ. ಪ್ರವಾಸೋದ್ಯಮ; ನಿರೀಕ್ಷೆ ಹಲವು". www.prajavani.net accessdate 28 Oct 2016.
  4. "ಚಾರಿತ್ರಿಕ ಲಾವಣಿಗಳು: ೩. ಕಲಬುರ್ಗಿ ಶರಣಬಸವೇಶ್ವರ". www.kanaja.in accessdate 28 Oct 2016.
  5. "ಶರಣ ಬಸವೇಶ್ವರ ದೇವಸ್ಥಾನ ಕಲಬುರಗಿ". namkarunadu.com accessdate 28 Oct 2016. Archived from the original on 12 ಸೆಪ್ಟೆಂಬರ್ 2016. Retrieved 29 ಅಕ್ಟೋಬರ್ 2016.
  6. "ನೋಡಬನ್ನಿ ಕಲಬುರಗಿ ಶ್ರೀ ಶರಣಬಸವೇಶ್ವರ ಜಾತ್ರೆಯ ಸೊಬಗ!". honalu.net accessdate 28 Oct 2016.
  7. "ಶರಣಬಸವೇಶ್ವರ ಜಾತ್ರೆ". www.kannadaprabha.com/ accessdate 28 Oct 2016.
  8. "ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರು". honalu.net accessdate 28 Oct 2016.
  9. "ಶ್ರಾವಣ ಸೋಮವಾರ: ಶರಣಬಸವೇಶ್ವರ ದೇಗುಲದಲ್ಲಿ ಭಕ್ತರ ದಂಡು". kannada.eenaduindia.com accessdate 28 Oct 2016.