ಗಾಣಗಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಾಣಗಾಪುರ
ಘಂಗಾಪುರ, ದೇವಲ ಗಾಣಗಾಪುರ
ಹಳ್ಳಿ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಗುಲ್ಬರ್ಗಾ
Government
 • Bodyಪಟ್ಟಣ ಪಂಚಾಯಿತಿ
Population
 • Total೭,೦೦೦
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
ಪಿನ್
585212
ದೂರವಾಣಿ ಸಂಕೇತ08470
Vehicle registrationKA32
ಅತಿ ಹತ್ತಿರದ ನಗರಅಫ್ಝಲ್‍ಪುರ
ಲೋಕ ಸಭಾ ಕ್ಷೇತ್ರಗುಲ್ಬರ್ಗಾ
ವಿಧಾನಸಭಾ ಕ್ಷೇತ್ರಅಫ್ಝಲ್‍ಪುರ
ಪೌರ ಸಂಸ್ಥೆಪಟ್ಟಣ ಪಂಚಾಯಿತಿ

ಶ್ರೀ ಕ್ಷೇತ್ರ ಗಾಣಗಾಪುರ ಕರ್ನಾಟಕದ ಸುಪ್ರಸಿದ್ಡ ಧಾರ್ಮಿಕ ಕ್ಷೇತ್ರ. ಶ್ರೀ ಕ್ಷೇತ್ರ ಗಾಣಗಾಪುರವು ಗುಲ್ಬರ್ಗಾದಿಂದ ನಗರದಿಂದ ಸುಮಾರು ೫೦ ಕಿಲೋಮೀಟರುಗಳ ದೂರದಲ್ಲಿದೆ.ದತ್ತಸಂಪ್ರದಾಯದ ಒಂದು ಪವಿತ್ರ ತೀರ್ಥಕ್ಷೇತ್ರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯಲ್ಲಿ ಪುಣೆ - ರಾಯಚೂರು ರೈಲುಮಾರ್ಗದಲ್ಲಿರುವ ಗಾಣಗಾಪುರ ರೈಲುನಿಲ್ದಾಣದಿಂದ 22 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಈ ಊರು ಇದೆ. ಶ್ರೀಗುರುಚರಿತ್ರೆ ಎಂಬ ಗ್ರಂಥದಲ್ಲಿ ಇದನ್ನು ಗಾಣಗಾಪುರ, ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂಬ ಹೆಸರುಗಳಿಂದ ಉಲ್ಲೇಖಿಸ ಲಾಗಿದೆ. ದತ್ತಾವತಾರಿ ಎಂದು ಪ್ರಸಿದ್ಧಿಹೊಂದಿರುವ ಶ್ರೀನರಸಿಂಹ ಸರಸ್ವತಿಯವರು ವಾಡಿ ಎಂಬ ಊರಿನಿಂದ ಇಲ್ಲಿಗೆ ಬಂದು ಸುಮಾರು 23 ವರ್ಷ ನೆಲೆಸಿದ್ದರು. ಈ ಅವಧಿಯಲ್ಲಿ ಇಲ್ಲಿ ದತ್ತಸಂಪ್ರದಾಯವನ್ನನುಸರಿಸುವವರ ಸಂಖ್ಯೆ ಹೆಚ್ಚಾಯಿತು. ಸರಸ್ವತಿಯವರು ಮೊದಲು ಸಂಗಮದ ಹತ್ತಿರವೇ ವಾಸವಾಗಿದ್ದು ಅನಂತರ ಊರ ಮಧ್ಯದಲ್ಲಿರುವ ಮಠದಲ್ಲಿರತೊಡಗಿ ಮುಂದೆ ಶ್ರೀಶೈಲದ ಕಡೆಗೆ ತೆರಳಿದರು. ಮಠದ ಆವಾರದಲ್ಲಿ ಮಹಾದೇವ - ಪಾರ್ವತಿಯರ ಮೂರ್ತಿ, ಅಶ್ವತ್ಥವೃಕ್ಷದ ಪೊದರಿನಲ್ಲಿ ನಾಗನಾಥ ಮತ್ತು ಹನುಮಂತನ ಮೂರ್ತಿಗಳು ತುಲಸೀ ವೃಂದಾವನಗಳು ಗೋಚರವಾಗುತ್ತವೆ. ಈ ಮಠದಲ್ಲಿರುವ ಶ್ರೀಗುರುಗಳ ಪಾದುಕೆಗಳು ನಿರ್ಗುಣ ಪಾದುಕೆಗಳೆಂದು ಹೆಸರಾಗಿವೆ. ವಾಡಿಯಲ್ಲಿರುವ ಪಾದುಕೆಗಳನ್ನು ಮನೋಹರ ಪಾದುಕೆಗಳೆನ್ನುತ್ತಾರೆ. ಮಠದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎರಡು ಮಹಾದ್ವಾರ ಗಳಿವೆ. ಪಶ್ಚಿಮದ ಮಹಾದ್ವಾರ ವಿಶಾಲವಾಗಿದ್ದು ಅದರ ಮಹಡಿಯಲ್ಲಿ ನಗಾರಖಾನೆ (ದೇವಸ್ಥಾನದ ನಗಾರಿಗಳನ್ನು ಬಾರಿಸುವ ಜಾಗ) ಇದೆ. ಭಕ್ತಾದಿಗಳು ಕೂಡಲು ಯೋಗ್ಯವಾದ ಏಳು ಜಗಲಿಗಳಿವೆ. ಗರ್ಭಗುಡಿಯಲ್ಲಿನ ಪಾದುಕೆಗಳ ದರ್ಶನ ಮಾಡಬೇಕಾದರೆ ಉಡುಪಿಯಲ್ಲಿರುವಂತೆ ಒಂದು ಬೆಳ್ಳಿಯ ಕಿಟಕಿಯ ಮೂಲಕ ನೋಡಬೇಕಾಗುತ್ತದೆ. ಇಲ್ಲಿ ನಿತ್ಯೋಪಾಸನೆ ಬೆಳಗ್ಗಿನಿಂದ ಪ್ರಾರಂಭವಾಗುತ್ತದೆ. ಪಾದುಕೆಗಳಿಗೆ ಜಲಸ್ಪರ್ಶ ಮಾಡುವುದಿಲ್ಲ. ಕೇಸರಿ ಮತ್ತು ಅಷ್ಟಗಂಧಗಳನ್ನು ಲೇಪಿಸುತ್ತಾರೆ. ಪ್ರತಿ ಗುರುವಾರ ರಾತ್ರಿ ಪಲ್ಲಕ್ಕಿಸೇವೆ ನಡೆಯುತ್ತದೆ.

ಊರಿನಿಂದ 1.6 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಭಸ್ಮದ ರಾಶಿಯಿದೆ. ಹಿಂದೆ ಇಲ್ಲಿ ಯಜ್ಞಕಾರ್ಯಗಳು ನೆರವೇರುತ್ತಿದ್ದು ಆ ಯಜ್ಞಬೂದಿಯನ್ನು ಹೀಗೆ ಒಂದು ಕಡೆ ಗುಡ್ಡೆ ಮಾಡಲಾಗಿದೆಯೆಂದು ಪ್ರತೀತಿ. ಭಾವುಕ ಭಕ್ತರು ಸ್ನಾನಮಾಡಿದ ಅನಂತರ ಈ ಭಸ್ಮವನ್ನು ಲೇಪಿಸಿಕೊಳ್ಳುವರು. ಸಂಗಮೇಶ್ವರ ದೇವಾಲಯದ ಎದುರು ಶ್ರೀನರಸಿಂಹ ಸರಸತ್ವಿಯವರ ತಪೋಭೂಮಿ ಇದೆ. ಸಂಗಮದಿಂದ ಊರಿಗೆ ಬರುವ ದಾರಿಯಲ್ಲಿ ಷಟ್ಕುಲತೀರ್ಥ, ನರಸಿಂಹತೀರ್ಥ, ಭಾಗೀರಥೀತೀರ್ಥ, ಪಾಪವಿನಾಶಿತೀರ್ಥ, ಕೋಟಿತೀರ್ಥ, ರುದ್ರಪಾದತೀರ್ಥ, ಚಕ್ರತೀರ್ಥ ಮತ್ತು ಮನ್ಮಥತೀರ್ಥ ಎಂಬ ಎಂಟು ತೀರ್ಥಗಳಿವೆ. ಇಲ್ಲಿನ ತೀರ್ಥಗಳಲ್ಲಿ ಸ್ನಾನಮಾಡಿದರೆ ಅನೇಕ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ.

ಗಾಣಗಾಪುರದ ಉತ್ಸವ ಸಮಾರಂಭಗಳಲ್ಲಿ ಶ್ರೀದತ್ತಜಯಂತಿ ಮತ್ತು ಶ್ರೀನರಸಿಂಹ ಸರಸ್ವತಿಯವರ ಪುಣ್ಯತಿಥಿ - ಇವೆರಡು ವಿಶೇಷ ಮಹತ್ತ್ವದವು. ಶ್ರೀಗುರುವಿನ ಜೀವನಕಾರ್ಯ ಇಲ್ಲಿಯೇ ನಡೆದುದರಿಂದ ಈಗ ಸು. 500 ವರ್ಷಗಳಿಂದ ಇದು ಭಕ್ತರಿಗೆ ಜಾಗೃತ ಸ್ಥಾನವಾಗಿದೆ.

ಆಧಿವ್ಯಾಧಿಗಳಿಂದ ಬಳಲುವ ಅನೇಕ ಜನ ತಮ್ಮ ದುಃಖನಿವಾರಣೆಗಾಗಿ ಇಲ್ಲಿಗೆ ಬಂದು ಸೇವೆಮಾಡಿ ಶ್ರೀಗುರುಚರಿತ್ರೆ ಪಾರಾಯಣಮಾಡಿ ಭಿಕ್ಷಾ ಜೀವನವನ್ನು ನಡೆಸುವರು. ಶ್ರೀಗುರುಚರಿತ್ರೆಯಲ್ಲಿನ ಚಮತ್ಕಾರಿ ಕಥೆಗಳನ್ನೋದುವುದರಿಂದ ಶ್ರದ್ಧಾಜೀವನವನ್ನನುಸರಿಸುವುದರಲ್ಲಿ ವಿಶ್ವಾಸ ಹುಟ್ಟುತ್ತದೆ. ಮಠದಲ್ಲಿ ಮಧ್ಯಾಹ್ನ ಮಹಾನೈವೇದ್ಯ ನಡೆಯುತ್ತದೆ. ಅನಂತರ ಸೇವಾಕರ್ತರು ಮಧುಕರಿ ಬೇಡಲು ಹೋಗುತ್ತಾರೆ. ಧನಿಕರಾದ ಅನೇಕ ದತ್ತಭಕ್ತರು ಸೇವಾಕರ್ತರಿಗೆ ಧನಧಾನ್ಯ ಸಹಾಯ ಒದಗಿಸುತ್ತಿದ್ದಾರೆ. ದತ್ತವ್ರತದ ಪ್ರಕಾರ ಪ್ರತಿಯೊಬ್ಬ ಯಾತ್ರಿಕನೂ ಕನಿಷ್ಠಪಕ್ಷ ಐದು ಮನೆಗಳಿಗಾದರೂ ಹೋಗಿ ಬೇಡಬೇಕು ಎಂಬುದು ನಿಯಮ. ಭಾವುಕ ಭಕ್ತರು ಈ ನಿಯಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

==ಗಾಣಗಾಪುರ ದತ್ತಾತ್ತೇಯ ದೇಗುಲ ಸುಂದರವಾಗಿದೆ

  • www.srikshetraganagapur.com