ಮೌಖಿಕ ಸಾಹಿತ್ಯ

ವಿಕಿಪೀಡಿಯ ಇಂದ
Jump to navigation Jump to search

ಮೌಖಿಕ ಸಾಹಿತ್ಯ[ಬದಲಾಯಿಸಿ]

(ತಾಳಮದ್ದಳೆಯ ಬೈಟಕ್) “ಶಬ್ದ ಮತ್ತು ಅರ್ಥಸಹಿತವಾದುದು ಕಾವ್ಯ” ಎಂದು ಹೇಳಲಾಗಿದೆಯಾದರೂ ಸುಂದರವಾದ ಶಬ್ಧಗಳು, ಅದಕ್ಕೆ ಉತ್ತಮವಾದ ಅರ್ಥವೂ ಸೇರಿರಬೇಕೆಂಬುದೇ ನಿಜವಾದ ಆಶಯ, ವಾಚಿಕಾಭಿನಯದ ಅತ್ಯಂತ ಸುಂದರ ಉದಾಹರಣೆಯಾಗಿರುವ ಅರ್ಥಗಾರಿಕೆ- ಎಂದರೆ ತಾಳಮದ್ದಳೆಯ ಅರ್ಥವು ಉತ್ತಮವಾದ ಶಬ್ಧ ಮತ್ತು ಅದಕ್ಕೆ ಶ್ರೇಷ್ಠವಾದ ಅರ್ಥದಿಂದ ಕೂಡಿ ಉತ್ತಮ ಕಲಾಕೃತಿಯೊಂದನ್ನು ರೂಪಿಸುವ ಕೆಲಸವನ್ನು ಪ್ರತಿ ಪ್ರದರ್ಶನದಲ್ಲೂ ಹೊಸ ಹೊಸ ಬಗೆಯಲ್ಲಿ ಮಾಡುತ್ತಿರುತ್ತದೆ.

ತಾಳಮದ್ದಳೆ[ಬದಲಾಯಿಸಿ]

ತಾಳ ಮತ್ತು ಮದ್ದಳೆಗಳನ್ನು ಬಳಸುವುದರಿಂದ ಈ ಸ್ವರೂಪಕ್ಕೆ ತಾಳಮದ್ದಳೆಯೆಂಬ ಹೆಸರು ಬಂದಿರಬೇಕೆಂಬುದು ಮೇಲ್ನೊಟಕ್ಕೆ ಕಾಣುವ ಸತ್ಯಸಂಗತಿ ಎಂದು ನಿರೂಪಿಸಿಕೊಳ್ಳಬಹುದು. ಆದರೆ ಇದು ತಾಳ ಮತ್ತು ಮದ್ದಳೆಯನ್ನು ಬಳಸಿ ದೇವರ ಭಜನೆ, ಸ್ತೋತ್ರಗಳನ್ನು ಹಾಡುತ್ತಿದ್ದ ಆರಾಧನಾ ಪದ್ದತಿಯ ಮುಂದುವರಿಕೆಯಾಗಿದೆ. ಏಕೆಂದರೆ ತಾಳವನ್ನು ಬಳಸದೇ ಇರುವ ತೆಂಕು ಭಾಗದಲ್ಲಿ ( ದಕ್ಷಿಣಕನ್ನಡದ ತೆಂಕು ಭಾಗದಲ್ಲಿ ಭಾಗವತರು ಜಾಗಟೆ ಬಳಸುತ್ತಾರೆ) ತಾಳ ಮದ್ದಳೆ ಎಂಬ ಹೆಸರು ಇದೆಯೇ ಹೊರತು, ಜಾಗಟೆಮದ್ದಳೆ ಎಂಬ ಹೆಸರಿಲ್ಲ. ಇದರಿಂದ ಇನ್ನೊಂದು ಅಂಶವು ತಿಳಿಯುತ್ತದೆ. ಅದೇನೆಂದರೆ, ದೇವಸ್ಥಾನಗಳಲ್ಲಿ ದೇವರ ಎದರು ದೇವಸ್ಮರಣೆ ಹಾಗು ಪುರಾಣಗಳನ್ನು ಓದುವ, ಅರ್ಥ ಹೇಳುವ ಪದ್ಧತಿಯು ಮುಂದುವರೆದು ಮನೆಗಳಲ್ಲಿ ಕಾವ್ಯಗಳನ್ನು ಓದುವ, ಅರ್ಥಹೇಳುವ ಪದ್ಧತಿ ಬೆಳೆದು ಅನಂತರ ಅದೇ ಪದ್ಧತಿ ಅರ್ಥಗಳನ್ನು ಹಂಚಿಕೊಂಡು “ಪ್ರಸಂಗ” ಮಾಡುವ ಪದ್ಧತಿಯಾಗಿ ೧೨ ರಿಂದ ೧೩ ನೇ ಶತಮಾನಗಳಲ್ಲಿಯೇ ವಿಕಾಸಗೊಂಡಿರಬೇಕು. ಅದಾಗಿ ಎರಡರಿಂದ ಮೂರು ಶತಮಾನಗಳ ನಂತರ ವೇಷಕಟ್ಟಿ, ಕುಣಿದು ಆಟವಾಡುವ ಪದ್ಧತಿ ಬಂದಿರಬಹುದು. ತೆಂಕಿನ ಆಟದ ವೇಷಗಾರಿಕೆ, ಬಣ್ಣಜ್ಜೆ ಹೇಗೆ ಕಥಕ್ಕಳಿಯ ಪ್ರಭಾವವಿದೆಯೋ ಹಾಗೆಯೇ ವಾದನಗಳ ಮೇಲೂ ಪ್ರಭಾವವಾಗಿ ಕಥಕ್ಕಳಿಯ ಜಾಗಟಿ ಅಲ್ಲಿ ಬಂದಿರಬಹುದು. ಆದ್ದರಿಂದ “ತಾಳಮದ್ದಳೆ” ಎಂಬ ಹೆಸರಿರುವುದರಿಂದ ‘ಈ ಕಲೆ ಉತ್ತರಕನ್ನಡದಲ್ಲಿ ಹುಟ್ಟಿರಬಹುದು’. ಎಂಬುದು ಇತಿಹಾಸ ತಜ್ಙರ ಅಭಿಪ್ರಾಯವಾಗಿದೆ. ಮತ್ತು ಈ ವಾದಕ್ಕೆ ಹಲವು ಅಂಶಗಳು ಬೆಂಬಲ ನೀಡುತ್ತದೆ. ಉತ್ತರಕನ್ನಡ ಜಿಲ್ಲೆಯಲ್ಲಿ “ಪ್ರಸಂಗ” ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದೆ. ಪ್ರಸಂಗ ಪಠ್ಯವನ್ನು ಆಧರಿಸಿರುವುದರಿಂದ ಈ ಹೆಸರು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಪ್ರಸಂಗ ಎಂದರೆ ಒಂದು ಕಥಾ ಸನ್ನಿವೇಷ, ಒಂದು ಘಟನೆಯೆಂಬ ಅರ್ಥವಿರುವುದರಿಂದ ಪುರಾಣದ ಒಂದು ಸನ್ನಿವೇಶವನ್ನು ಪ್ರಸ್ತುತ ಪಡಿಸುವ ಕಾರ್ಯಕ್ರಮವೆಂದು ಅರ್ಥೈಸಲಾಗುತ್ತದೆ. ಆದರೆ ಪ್ರಸಂಗ ಪಠ್ಯ ಹಾಗು ಪ್ರಸಂಗರೂಪಗಳ ಮೂಲದಲ್ಲಿ ಪ್ರಸಂಗಸೂತ್ರವೆಂದು ಇದ್ದಿರಬೇಕು. ( ಈ ಪ್ರಬಂಧದಲ್ಲಿ ಪ್ರಸಂಗ ಪದ್ಯದ ಕುರಿತು ಹೇಳುವಾಗ ಪ್ರಸಂಗವೆಂದು ತಾಳಮದ್ದಳೆಯ ಸ್ವರೂಪವನ್ನು ಸೂಚಿಸುವ ಪರ್ಯಾಯ ನಾಮವಾಗಿ ಆ ಶಭ್ದವನ್ನು ಬಳಸುವಾಗ “ಪ್ರಸಂಗ” ಎಂದು ಅವತರಣಿಕೆ ಚಿಹ್ನೆಯಲ್ಲಿಯೂ ಬರೆಯಲಾಗಿದೆ.)

ಜಾಗರ[ಬದಲಾಯಿಸಿ]

ಶಿವಮೊಗ್ಗ ಜಿಲ್ಲೆಯಲ್ಲಿ (ವಿಶೇಷವಾಗಿ ಸಾಗರ ತಲೂಕಿನಲ್ಲಿ) ಇದಕ್ಕೆ ಜಾಗರ ಎಂಬ ಹೆಸರಿದೆ. (ಸಾಗರ ತಾಲೂಕು, ನಂದಿತಳೆ ಹಾಗು ಹೊನ್ನೆಸರದಲ್ಲಿ “ಜಾಗರಭಟ್ಟರಮನೆ” ಎಂಬ ಮನೆತನವೇ ಇದೆ). ರಾತ್ರಿಯಿಡೀ ಜಾಗರಣೆ ಮಾಡಿ ಕೇಳಬೇಕಾಗಿರುವುದರಿಂದ ಈ ಹೆಸರು ಎಂದು ಭಾವನೆ. ಆಧ್ಯಾತ್ಮ, ತತ್ವ, ದರ್ಶನಗಳಿಗೆ ಸಂಭಂದಿಸಿರುವ ವಿಚಾರಗಳನ್ನು ವಿಮರ್ಶಿಸಿ ಸುಪ್ತವಾದ ಮನಸ್ಸು ಆತ್ಮಗಳನ್ನು ಜಾಗರಿಸಿ ವ್ಯಕ್ತಿಯನ್ನು ಊರ್ಧ್ವಮುಖಿಯನ್ನಾಗಿಸುವುದರಿಂದ ಇದಕ್ಕೆ “ಜಾಗರ" ಎಂದು ಕರೆಯುತ್ತಾರೆ ಎಂಬ ಅಭಿಪ್ರಾಯವಿದೆ.

ಯಕ್ಷಗಾನಕೂಟ[ಬದಲಾಯಿಸಿ]

ದಕ್ಷಿಣಕನ್ನಡದಲ್ಲಿ ಸಾಮಾನ್ಯವಾಗಿ “ಯಕ್ಷಗಾನ" ಎಂದು ತಾಳಮದ್ದಳೆಗೂ ಆಟ ಎಂದು ಬಯಲಾಟಕ್ಕೂ ಕರೆಯುವ ರೂಢಿ ಬೆಳೆದುಕೊಂಡಿದೆ. ನೃತ್ಯ, ಅಭಿನಯ, ಹಾಡುಗಳಿಂದ ಕೂಡಿದ ಪ್ರಕಾರಗಳನ್ನು ದಕ್ಷಿಣದಲ್ಲಿ, ವಿಶೇಷವಾಗಿ ಕೇರಳದಲ್ಲಿ ಅಟ್ಟಂ ಎನ್ನಲಾಗುತ್ತದೆ. ಉದಾಹರಣೆ ರಾಮನಟ್ಟಂ, ಕೃಷ್ಣಅಟ್ಟಂ, ಮೋಹಿನಿಅಟ್ಟಂ. ಅದೇ ರೀತಿ ನಮ್ಮಲ್ಲಿ ರಾಧಾನಾಟ, ಸಣ್ಣಾಟ, ದೊಡ್ಡಾಟ ಎಂದಿದೆ. ಈ ಆಟಕ್ಕೆ ಸಂವಾದಿಯಾಗಿ ತಾಳಮದ್ದಳೆಯನ್ನು “ಕೂಟ” ತಾಳಮದ್ದಳೆ ಕೂಟ, ಯಕ್ಷಗಾನ ಕೂಟ ಎಂದು ಕರೆಯುತ್ತಾರೆ.[೧]

ಬೈಠಕ್[ಬದಲಾಯಿಸಿ]

ಹಲವಾರು ಜನರು ಒಂದೆಡೆ ಸೇರಿ ಕುಳಿತುಕೊಂಡು ಮಾಡುವ ಕಾರ್ಯಕ್ರಮವಾಗಿರುವುದರಿಂದ ಉತ್ತರಕನ್ನಡದಲ್ಲಿ ಬೈಟಕ್ ಎಂದು ಕರೆಯುವ ಪದ್ದತಿಯಾಗಿದೆ.

ಕಥಾ ಕಾಲಕ್ಷೇಪ-ಸಭಾ ಯಕ್ಷಗಾನ[ಬದಲಾಯಿಸಿ]

ಇದನ್ನು ಕಥಾ ಕಾಲಕ್ಷೇಪ, ಸಭಾಯಕ್ಷಗಾನಗಳೆಂದು ಸಹ ಹೆಸರಿಸಿದ್ದನ್ನು ನಾವು ಅರಿಯಬಹುದು. ಆಟಮುಗಿದ ಮೇಲೆ ದೇವರಿಗೆ ಮಂಗಳಾರತಿ ಮಾಡಿ ಪ್ರಸಾದ ಸ್ವೀಕರಿಸುವುದು ನಿಯಮವಾಗಿ ನಡೆದುಬಂದಿದೆ. ಆದರೆ ಇಡೀ ರಾತ್ರಿಯಲ್ಲಿ ನಡೆಯುವ ತಾಳಮದ್ದಳೆಯನ್ನು ವಿಶೇಷವಾಗಿ ಕಾಲಕ್ಷೇಪವೆಂದು, ಪ್ರಸಂಗ ಹೇಳುವುದೆಂದು “ ಸಭಾಯಕ್ಷಗಾನ” ಎಂದು ಕರೆಯುವ ವಾಡಿಕೆ ಹಿಂದಿನಿಂದಲೂ ಬಂದಿದ್ದು ಈಗಲೂ ಪ್ರಚಲಿತದಲ್ಲಿದೆ. ಆದರೆ ಈ ಕಾಲಕ್ಷೇಪ ಎಂಬ ಹೆಸರು ಇಂದು ಕೀರ್ಥನೆ ಅಥವಾ ಹರಿಕಥೆಗೆ ಪರ್ಯಾಯ ನಾಮವಾಗಿ ಬಳಸಲ್ಪುಡುತ್ತಿದೆಯೇ ವಿನಃ ತಾಳಮದ್ದಳೆಗೆ ಆ ಹೆಸರು ಬಳಕೆಯಲ್ಲಿಲ್ಲ. ಅಲ್ಲದೇ ಸಭಾ ಯಕ್ಷಗಾನ ಎಂಬ ಹೆಸರು ಸಹ ಇಂದು ಎಲ್ಲಿಯೂ ಪ್ರಚಲಿತದಲ್ಲಿಲ್ಲ. ( ಕೆಲವು ಪ್ರದೇಶಗಳನ್ನು ಹೊರತು ಪಡಿಸಿ) [೨]

ಕೇಳಿಕೆ[ಬದಲಾಯಿಸಿ]

ವಿ. ಸೀತಾರಾಮಯ್ಯ ಯಕ್ಷಗಾನ ಸಮೀಕ್ಷೆಯಲ್ಲಿ ತಾಳಮದ್ದಳೆಯನ್ನು ಕೇಳಿಕೆ ಎಂದು ಹೆಸರಿಸಿದ್ದನ್ನು ವೈಜಯಂತಿಯಲ್ಲಿ ಉಲ್ಲೇಖಿಸಲಾಗಿದೆ. “ಆಟ ಆಡಿದ್ದು”, ಕೇಳಿಕೆಕೇಳಿದ್ದು (ತಾಳಮದ್ದಳೆ) ಕೇಳುವಾಗ ಕುಣಿಯುವ ಕುಣಿತ, ಕಥಾಕ್ರಿಯೆಯನ್ನು ರೂಪಿಸುವ ನಾಟ್ಯ ಈ ಮೂರು ಸೇರಿ ಯಕ್ಷಗಾನವಾಗಿದೆ.[೩] ಆದರೆ ಕೇಳಿಕೆ ಎಂಬ ಪ್ರಕಾರ ಪ್ರತ್ಯೇಕವಾಗಿದ್ದು, ಹಾಡು, ಕುಣಿತಗಳಿಂದ ಕೂಡಿದ, ಉತ್ಸವ, ಮೆರವಣಿಗೆಗಳಲ್ಲಿ ಆಚರಿಸುವಂಥದ್ದೇ ಹೊರತು, ಕೇಳುವ ಸ್ವರೂಪದಲ್ಲಿರುವುದಿಲ್ಲ. ಇದಕ್ಕೂ “ಕೇಳ್” ಎಂಬ ಅಚ್ಚಗನ್ನಡದ ಧಾತುವಿಗೂ ಯಾವುದೇ ಸಂಬಂಧವಿಲ್ಲ. ಇದು ಸಂಸ್ಕೃತದ ಕೇಲಿ ( ಕೇಲಿಕೆಯ ತದ್ಭವ). ಕೇಳಿಕೆ ಎಂದರೆ ಆಟ, ಕುಣಿತ ಎಂದು ಅರ್ಥವನ್ನು ಸೂಚುಸುತ್ತದೆ.

ಮದ್ಲಾಸ್ಕಿ[ಬದಲಾಯಿಸಿ]

ಈ ಸ್ವರೂಪಕ್ಕೆ ಉತ್ತರಕನ್ನಡದ ಕರಾವಳಿ ಪ್ರದೇಶದಲ್ಲಿ ಮದ್ಲಾಸ್ಕಿ ಎಂಬ ಶಬ್ಧವು ಬಳಕೆಯಲ್ಲಿದೆ. (ಮಜಾಸ್ಕಿ ಎಂಬುದು ತಾಳಮದ್ದಳೆಯ ಪ್ರಬೇಧವೊಂದಕ್ಕೆ ಇರುವ ಹೆಸರು). ಮದ್ಲಾಸ್ಕಿ-ಮದ್ಲಾಸ್ಗಿ ಎಂದರೆ ಹಾಸಿಗೆಗೆ ಮೊದಲು- ಮಲಗುವ ಮೊದಲು ನಡೆಯುವ ಕಾರ್ಯಕ್ರಮ ಎಂದು ವಿಜಯನಳಿನಿ ರಮೇಶ್ ಅವರು ಶಿವಾನಂದ ಹೆಗಡೆಯವರ ಸಂದರ್ಶನ ಕಾರ್ಯಕ್ರಮದಲ್ಲಿ ಉಲ್ಲೇಖ ಮಾಡಿದ್ದಾರೆ.

ಜಾಗರಣೆ[ಬದಲಾಯಿಸಿ]

ಜಾಗರಣೆ, ಓದಿಕೆ ಎಂಬ ಹೆಸರುಗಳು ಕೆಲವು ಕಡೆ ಪ್ರಚಾರದಲ್ಲಿದೆ. ಆದರೆ ಇವು ಎಲ್ಲಿ ಪ್ರಚಾರದಲ್ಲಿದೆ ಎಂಬುದು ತಿಳಿಸಿಲ್ಲ. ಸ್ವರೂಪ ವಿವೇಚನೆ: ಹೀಗೆಲ್ಲ ನಾಮ ವೈವಿಧ್ಯಗಳನ್ನು ಹೊಂದಿರುವ ಹಾಗು ಒಂದು ಪರಿಮಿತವಾದ ಪ್ರದೇಶದಲ್ಲಿ ಬಳಕೆಯಲ್ಲಿರುವ ತಾಳಮದ್ದಲೆಯು ಒಂದು ವಿಶಿಷ್ಠ ಕಲಾಸ್ವರೂಪವಾಗಿದೆ. ಅದು ಭಾಗವತನು ಹಾಡುವಾಗ ಗಾನಗೋಷ್ಠಿ, ಹಿಮ್ಮೇಳವಾದಕರು ಬಾರಿಸುವಾಗ ವಾದನಗೋಷ್ಠಿ, ಒಮ್ಮೆ ಅರ್ಥಕೇಳುವಾಗ ಅದು ಪುರಾಣ ಪ್ರವಚನ, ಇನ್ನೊಮ್ಮೆ ವಿಚಾರಗೋಷ್ಠಿ, ವಾಗರ್ಥಗೋಷ್ಠಿ ಮತ್ತೊಮ್ಮೆ ಆಶುನಾಟಕ – ವಾಚೋರಚಿತ ಕಾವ್ಯ- ಶ್ರವ್ಯನಾಟಕ ಅಥವಾ ಪೌರಾಣಿಕ ಪರಿಷತ್ತು ಚಿತ್ತಸಂಸ್ಕಾರಕಾರಕವಾದ ಶಿಕ್ಷಣ- ಕುಂತುಮಾಡುವ ನಾಟಕ. ಶ್ರವಣನಾಟಕ ಎಂದು ಯಕ್ಷಗಾನ ಬಯಲಾಟ ಆಧಾರ ಪಠ್ಯವಾದ ಪ್ರಸಂಗವನ್ನು ಹಾಗು ಅಲ್ಲಿ ಬಳಸುವ ಹಿಮ್ಮೇಳವನ್ನು ಇಲ್ಲಿ ಬಳಸುವುದರಿಂದ ವೇಷ ನೃತ್ಯಗಳಿಲ್ಲದ ಬಯಲಾಟ ಎಂದು ಅನ್ನಿಸುತ್ತೆ. ಹೀಗೆ ಮೇಲ್ನೋಟಕ್ಕೆ ಏನೆಲ್ಲ ಆಗಿ ಕಾಣುವ ತಾಳಮದ್ದಳೆಯ ನಿಜವಾದ ಸ್ವರೂಪ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಈ ಮೇಲಿನ ಎಲ್ಲಾ ಅಂಶಗಳನ್ನು ವಿಮರ್ಶೆಗೆ ಒಳಪಡಿಸಲಾಗುತ್ತದೆ.ಹಾಗು ತಾಳಮದ್ದಳೆಗೆ ಸಂಭಂದಿಸಿದ ಅಂಶಗಳನ್ನು ವಿಷ್ಲೇಶಿಸಿ ನೋಡಬೇಕಾಗುತ್ತದೆ. ಆದ್ದರಿಂದ ತಾಳಮದ್ದಳೆಯ ಅಂಗಗಳು, ವಿಧಾನಗಳು, ಸೂತ್ರ, ನಿರ್ದೇಶಕತತ್ವಗಳು, ಧರ್ಮೀವೃತ್ತಿ, ಜಾನಪದೀಯತೆ, ನಾಟಕ-ಬಯಲಾಟ-ಕೀರ್ತನೆ ಮುಂತಾದ ಸಮಧರ್ಮಿ ಕಲೆಗಳೊಂದಿಗೆ ಹೋಲಿಕೆ, ಸ್ವರೂಪ ಸಾಧ್ಯತೆಗಳು, ಸೃಜನಶಿಲತೆ, ಪಠ್ಯಪ್ರದರ್ಶನ ಸಂದರ್ಭಗಳು-ಮುಂತಾದ ಅಂಶಗಳನ್ನು ಇಲ್ಲಿ ಪ್ರತ್ಯೆತ್ಯೇಕವಾಗಿ ಚರ್ಚಿಸುವ ಅವಶ್ಯಕತೆಯನ್ನು ಹೊಂದಿದೆ.

ತಾಳಮದ್ದಳೆಯ ಅಂಗಗಳು[ಬದಲಾಯಿಸಿ]

ತಾಳಮದ್ದಳೆ ಎಂಬುದು ಪಂಚ ಅಂಗಗಳ ಮೇಲೆ ನಿಂತಿರುವ ಒಂದು ಕಲಾಕೃತಿ. ೧.ಆಧಾರ ಪಠ್ಯವಾಗಿರುವ ಪ್ರಸಂಗ. ೨.ಅದನ್ನು ಹಾಡುವ ಭಾಗವತರು. ೩.ಹಾಡಿಗೆ ಹಾಗೂ ಪ್ರಸಂಗಕ್ಕೆ ನುಡಿಸಲ್ಪಡುವ ಚಂಡೆ ಮದ್ದಳೆಗಳು. ೪.ಅರ್ಥಗಾರಿಕೆ. ೫.ಹಾಗು ಇದನ್ನೆಲ್ಲ ಆಸ್ವಾದಿಸಿ ಪ್ರತಿಕ್ರಿಯಿಸುವ ಪ್ರೇಪ್ರಕ್ಷಕರು. ಈ ಪಂಚ ಅಂಗಗಳು. ಇವು ಪ್ರತಿಯೊಂದು ಬದಲಾಗುವ ಅಂಶಗಳು. ಹಾಗು ಪ್ರತಿಯೊಂದು ತಾಳಮದ್ದಳೆಯ ಅನಿವಾರ್ಯವಾದ ಅಗತ್ಯವಾದ ಅಂಗವೇ ಆಗಿದೆ. ಆದ್ದರಿಂದ ಇವನ್ನು ಕಟ್ಟಡದ ಪಂಚಾಂಗದಂತೆ, ಖಗೋಳದ ಪಂಚಾಗದಂತೆ-ಭಾವಿಸಬಹುದು. ಆಶುನರ‍್ಮಾಣವಾಗುವ “ಪ್ರಸಂಗದ ಅರ್ಥಗಾರಿಕೆಗೆ ಆಧಾರವಾದ ಅಂಗ-ಪ್ರಸಂಗ, ಭಾಗವತರ ಹಾಡಿನಿಂದಾಗಿ ಅರ್ಥದಾರಿಯನ್ನು ತಲುಪಿ ಅವನ ಅರ್ಥಕ್ಕೆ ಆಧಾರ ಹಾಗು ಸ್ಫೂರ್ತಿಯನ್ನು ನೀಡುವಂಥದ್ದು. ಇದು ಒಂದು ವಿಶಿಷ್ಠ ಪ್ರಕಾರದ ಸಾಹಿತ್ಯ. ಆಕಾರದಲ್ಲಿ ಚಿಕ್ಕದಾಗಿರುವ ಕಾವ್ಯ ಎನ್ನಬಹುದು. ಮೊದಲಿಗೆ ಓದುವುದಕ್ಕಾಗಿ ರಚಿತವಾಗಿದ್ದು ಅನಂತರ ಬಯಲಾಟ-ತಾಳಮದ್ದಳೆಗೆ ಆಧಾರಪಠ್ಯವಾಗಿ ಬಳಸಲ್ಪಡುತ್ತಿದ್ದಿರಬೇಕು. ಸಾಮಾನ್ಯವಾಗಿ ಪೌರಾಣಿಕ ಕಥಾಭಾಗವೊಂದನ್ನು ವಸ್ತುವಾಗಿ ಹೊಂದಿದ್ದು ನೂರರಿಂದ ಆರುನೂರು-ಏಳುನೂರರ ತನಕ ಪದ್ಯಗಳಿರುವ ತ್ರಿಪದಿ, ಷಟ್ಟದಿ, ದ್ವಿಪದಿಗಳ ಛಂದಸ್ಸುಗಳ ವಿವಿಧ ರಾಗತಾಳಗಳ ಮಟ್ಟುಗಳಲ್ಲಿ ರಚಿತವಾಗಿರುತ್ತದೆ. ಸಂಭಾಷಣೆಗೆ ಅನುವಾಗದಂತೆ ಇರುತ್ತದೆ. ಮಾತಿನ ಮಂಟಪ ನಿರ್ಮಿಸುವ, ಕುಳಿತಲ್ಲೆÃ ನಾಟಕ ಕಟ್ಟುವ, ಪ್ರಸಂಗವೆಂಬ ಕಿರು ಕಾವ್ಯರೂಪದಾಧಾರದ ಮೇಲೆ ಪ್ರತಿಕಾವ್ಯರೂಪದ ಆಧಾರದ ಮೇಲೆ ಪ್ರತಿಕಾವ್ಯ ನಿರ್ಮಾಣ ಮಾಡುವ ತಾಳಮದ್ದಳೆಯಲ್ಲಿ ಪರಿಣಾಮ ಪೂರ್ತಿಯಾಗುವುದು ಆಸ್ವಾದಕರ ಸಾಮರ್ಥ್ಯ, ಅನುಭವ, ಅಧ್ಯಯನಗಳು ಹಾಗು ಅದರ ತೊಡಗುವಿಕೆಯನ್ನು ಆಧರಿಸಿದೆ. ತಾಳಮದ್ದಳೆಯ ಪ್ರೇಕ್ಷಕವರ್ಗ ಬೇರೆಲ್ಲ ಕಲೆಗಳ ಪ್ರೇಕ್ಷಕರಿಗಿಂತ ವಿಭಿನ್ನವಾಗಿದ್ದು, ಈ ಮೂಲಕ ಉತ್ತಮ ಸಂವಹನವನ್ನು ಏರ್ಪಡಿಸುತ್ತದೆ. ರಿಕ್ತರಂಗಭೂಮಿ ಅಥವಾ ಲುಪ್ತನಾಟ್ಯವೆಂದು ಕರೆಸಿಕೊಳ್ಳುವ ಈ ಸ್ವರೂಪದಲ್ಲಿ ಅಭಿನಯ ಚತುಷ್ಟಯಗಳಲ್ಲಿ ವಾಚಿಕವೊಂದೇ ಪ್ರಧಾನವಾಗಿದ್ದು, ದೃಷ್ಯಗಳು, ವೇಷಭೂಷಣಗಳು, ಘಟನೆಗಳು, ಕ್ರಿಯೆಗಳು ಮುಂತಾದವನ್ನು ಪ್ರೇಕ್ಷಕರು ವಾಚಿಕದ ಆಧಾರದ ಮೇಲಿಂದಲೇ ಕಲ್ಪಿಸಿಕೊಳ್ಳಬೇಕಾಗುತ್ತದೆ. ಇಲ್ಲಿನ ಅರ್ಥಗಾರಿಕೆಗೆ ಕೇವಲ ಪದ್ಯದ ಅರ್ಥವನ್ನು ಹೇಳುವ, ಅಥವಾ ಕಥಾಸರಣಿಯನ್ನು ಮುಂದುವರೆಸುವ ಜವಾಬ್ದಾರಿ ಮಾತ್ರವಲ್ಲದೇ ಭಾಗವತರು ಹಾಡಿದ ಪ್ರಸಂಗ ಪದ್ಯದ ಆಧಾರದ ಮೇಲೆ ಅರ್ಥಧಾರಿಗಳೆಲ್ಲಾ ಸೇರಿ ಕಲಾಕೃತಿಯೊಂದನ್ನು ನಿರ್ಮಿಸುವ ಹೊಣೆಗಾರಿಕೆ ಇರುತ್ತದೆ. ಅಂತೆಯೇ ಅವರು ಪದ್ಯಗಳ ಆಧಾರದ ಮೇಲೆ ಪುರಾಣ ಪ್ರಪಂಚವನ್ನು ತೆರೆದಿಡುತ್ತಾರೆ. ಪ್ರೇಕ್ಷಕರನ್ನು ಆ ಕಾಲಕ್ಕೆ ಕರೆದೊಯ್ಯುತ್ತಾರೆ. ಅಂದಿನ ಹಿನ್ನೆಲೆಯಲ್ಲಿ ಇಂದಿನ ವಿಷಯಗಳು ವಿಶ್ಲೇಷಣೆಗೆ ಒಳಗಾಗುತ್ತವೆ. ಭಾವನಾತ್ಮಕತೆಯೊಂದಿಗೆ ವೈಚಾರಿಕ ತಳಹದಿಯಲ್ಲಿ ಸನ್ನಿವೇಶಗಳನ್ನು ವಿವೇಚಿಸಲ್ಪಡುತ್ತವೆ. ಅಂದರೆ ಅರ್ಥದಾರಿಯು ಪ್ರಸಂಗಕಾರನ ಧ್ವನಿಯಾಗುತ್ತಲೇ ತನ್ನ ಮನಸ್ಸಿನ ವಿಚಾರಗಳನ್ನು ಪ್ರಕಟಿಸುತ್ತಾ ಪ್ರೇಕ್ಷಕರ ಮಾನಸಿಕ ಸ್ತರಗಳೊಂದಿಗೆ ಸಂಭಾಷಿಸುತ್ತಾನೆ. ಈ ತೊಡಗಿಕೊಂಡಿರುವಿಕೆಯ ಸಾಮರ್ಥ್ಯ ಆತನಿಗಿದ್ದಾಗ ಮಾತ್ರ ಆಸ್ವಾದನೆ ಪರಿಣಾಮಕಾರಿಯಾಗುತ್ತದೆ. ಆದ್ದರಿಂದ ಬೇರೆ ಕೆಲವು ಮಾಧ್ಯಮಗಳ ಪ್ರೇಕ್ಷಕರಂತೆ ಇವರು ತಟಸ್ಥರಾಗಿ ಕಣ್ಣು ಕಿವಿಗಳನ್ನು ತೆರೆದು ಕುಳಿತರೆ ಸಾಲದು, ಬದಲಾಗಿ ತಮ್ಮ ಈವರೆಗಿನ ತಾಳಮದ್ದಳೆಯ ಅನುಭವ, ಪುರಾಣ ಪ್ರಪಂಚದ ತಿಳುವಳಿಕೆ, ಕಾವ್ಯಸಾಹಿತ್ಯಗಳ ವ್ಯಾಸಂಗದ ಪರಿಣತಿ, ಲೋಕಾನುಭವ, ಪ್ರಸಂಗಪರಿಚಯ, ಮುಂತಾಗಿ ಎಲ್ಲ ಬಂಡವಾಳಗಳೊಂದಿಗೆ ಸಜ್ಜಾಗಿ ಕುಳಿತಿರಬೇಕಾಗುತ್ತದೆ. ಮಾತ್ರವಲ್ಲ, ತಾಳಮದ್ದಳೆಯ ವಿಶಿಷ್ಠವಾದ ಭಾಷೆಯ ಕುರಿತಾಗಿಯೂ ಅವರು ತಿಳಿದಿರಬೇಕಾಗುತ್ತದೆ. ಏಕೆಂದರೆ ಇಲ್ಲಿನ ಭಾಷೆ ಆಡುಭಾಷೆಯ ಸತ್ವ-ಸೊಗಡುಗಳೊಂದಿಗೆ ಗ್ರಾಂಥಿಕದ ಶಕ್ತಿ-ಸಾಮರ್ಥ್ಯಗಳು ಬೆರೆತು ಭಾಷೆಯು ಇತಿಹಾಸದ ಸಮೃದ್ಧಿಯನ್ನೂ ಕಾವ್ಯ ಸಾಹಿತ್ಯಗಳ ಸಂಪತ್ತನ್ನೂ ಹದವಾಗಿ ಬೆರೆಸಿಕೊಂಡ ಭಾಷೆ ಹೀಗೆ ಈ ಎಲ್ಲ ಸಿದ್ಧತೆಗಳೊಂದಿಗೆ ಅರ್ಥಧಾರಿಯ ಮಾತು ಆರಂಭವಾಗುತ್ತಿದ್ದಂತೆಯೇ ಅವನೊಂದಿಗೆ ಅವನ ಸಂಭಾಷಣೆಯಲ್ಲಿ ಪಾಲ್ಗೊಳ್ಳಲೇ ಬೇಕಾಗುತ್ತದೆ. ಆದ್ದರಿಂದ ಪ್ರೇಕ್ಷಕ ಕಲಾವಿದರ ನಡುವಿನ ಮನೋಸಾಹಚರ್ಯ ಇಲ್ಲಿ ಪರಮಾವಧಿಯಾಗಿರಬೇಕಾಗುತ್ತದೆ. ಮಾತ್ರವಲ್ಲ, ಅರ್ಥಧಾರಿ ಹಾಗು ಪ್ರೇಕ್ಷಕರ ನಡುವಿನ ದೈಹಿಕ ಅಂತರವೂ ಸಹ ಹೆಚ್ಚಾಗಿರುವುದು ಈ ಸರಳ ಸ್ವರೂಪಕ್ಕೆ ಒಳಗಾಗುವುದಿಲ್ಲ. ಈ ಶತಮಾನದ ಆರಂಭದಲ್ಲಂತೂ ಪ್ರೇಕ್ಷಕ ಕಲಾವಿದರ ನಡುವೆ ಅಂತರವೇ ಇರುತ್ತಿರಲಿಲ್ಲ. ಮನೆಗಳಲ್ಲಿ ವಿಶೇಷ ಸಮಾರಂಭಗಳಿದ್ದಾಗ ರಾತ್ರಿಗಳಲ್ಲಿ ಸಾಮಾನ್ಯವಾಗಿ ಇದನ್ನು ನಡೆಸಲಾಗುತ್ತಿದ್ದು, ಭಾಗವತ ಮೇಳದವರನ್ನು ಮಾತ್ರ ಕರೆಸುತ್ತಿದ್ದರು. ಅವರು ಮಾತ್ರ ಪ್ರತ್ಯೇಕವಾಗಿ ಕುಳಿತಿರುತ್ತಿದ್ದರು. ಪ್ರಸಂಗ ಯಾವುದೆಂದು ನಿರ್ಧಾರವಾದ ಮೇಲೆ ಭಾಗವತರು ಹಾಡು ಆರಂಭಿಸುತ್ತಿದ್ದರು. ಗಣಪತಿ ಸ್ತುತಿಯ ನಂತರ ಕಥೆಗೆ ಸಂಬಂಧಿಸಿದ ಪದ್ಯ ಹಾಡಿದ ನಂತರ ತಾಳಮದ್ದಳೆಯ ಪ್ರಸಂಗ ಆರಂಭಿಸುತ್ತಿದ್ದರು. ಪ್ರೇಕ್ಷಕರ ಎಲ್ಲ ಬಗೆಯ ನಿರೀಕ್ಷೆಗಳು ಆಯಾ ತಾಳಮದ್ದಳೆಗಳಲ್ಲಿ ಈಡೇರುತ್ತವೆ ಎಂದು ಹೇಳಲಾಗದು. ಯಾಕೆಂದರೆ ಮೂಲತಃ ಇದೊಂದು ಹಲವರಿಂದ ಕಟ್ಟಲ್ಪಡುವ ಆಶುನಿರ್ಮಾಣ. ಈ ನಿರ್ಮಾಣದಲ್ಲಿ ಪಠ್ಯವು ಪ್ರದರ್ಶನವಾಗಿ ಪರಿವರ್ತಿತವಾಗುವಾಗ ಹಲವಾರು ನಿತ್ಯ ಬದಲಾಗುವ ಅಂಶಗಳು ಸಂದರ್ಭಗಳಾಗಿ ಕೆಲಸ ಮಾಡುತ್ತವೆ. ಅದರಿಂದಾಗಿ, ಅಂದಿನ ತನ್ನ ಅರ್ಥ ಹೇಗಾದೀತೆಂಬ ಕುರಿತಾಗಿ ಅಥವಾ ಅಂದು ತಾವೆಲ್ಲರೂ ಕೂಡಿ ನಿರ್ಮಿಸುವ ತಾಳಮದ್ದಳೆ ಹೇಗೆ ಆಗುತ್ತದೆ ಎಂಬ ಕುರಿತಾಗಿ ಅರ್ಥಧಾರಿಗಳಿಗೂ ಖಚಿತ ಕಲ್ಪನೆ ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪ್ರೇಕ್ಷಕ ನಿರೀಕ್ಷೆಗಳು ಕೈಗೂಡುವ ಕುರಿತಾಗಿಯೂ ಸಹ ಇದೇ ಮಾತು ನಿಜವಾಗುತ್ತದೆ. ನಿರೀಕ್ಷೆಗಳೊಂದಿಗೆ ಬಂದಿರುವ ಪ್ರೇಕ್ಷಕರೂ ಸಹ ಅರ್ಥಧಾರಿಗಳ ಅರ್ಥ ಒಮ್ಮೆ ಆರಂಭವಾಯಿತೆಂದರೆ ಆ ಸಂವಹನ ಪ್ರಕ್ರಿಯೆಯಲ್ಲಿ ಒಂದಾಗಿಬಿಡುತ್ತಾರೆ. ಅರ್ಥಧಾರಿಗಳ ವಿಚಾರ ಸರಣಿಯನ್ನು ಹಿಂಬಾಲಿಸುತ್ತಾ ನಡೆಯುತ್ತಾರೆ. ತಮ್ಮ ಭಾವಕೋಶಕ್ಕನುಗುಣವಾಗಿಯೇ ಅರ್ಥ ಕಲ್ಪನೆಗಳಿದ್ದರೆ ಅದರಲ್ಲಿ ತಲ್ಲೀನರಾಗುತ್ತಾ ಅದಕ್ಕಿಂತ ಭಿನ್ನವಾಗಿದ್ದಾಗ ತಮ್ಮ ಕಲ್ಪನೆ ಭಾವನೆಗಳ ಅಂಶಗಳೊಂದಿಗೆ ಅವನ್ನು ತೂಗಿ ನೋಡಿ ಧ್ಯಾನಿಸಿ, ತಮ್ಮದನ್ನು ಬದಲಾಯಿಸಿಕೊಳ್ಳಬೇಕಾಗಿ ಬಂದರೆ ಹಾಗೆ ಮಾಡುತ್ತಾ, ತಮ್ಮ ಭಾವಕೋಶವನ್ನೂ ವಿಸ್ತರಿಸಿಕೊಳ್ಳುತ್ತಾ ಈ ಪಾತ್ರದ ಮಹತ್ವಗಳಿಗೆ ಆ ಪಾತ್ರದ ಉತ್ತರಗಳು ತರ್ಕಬದ್ಧವಾಗಿ ಬಂದಾಗ ಅದಕ್ಕೆ ತಲೆದೂಗುತ್ತಾ ಯಾರದು ಸರಿ, ಯಾರದು ತಪ್ಪು ಎಂದು ತೂಗಿ ನೋಡಿ ನಿರ್ಣಯಿಸುತ್ತಾ ಅರ್ಥ ಪ್ರಕ್ರಿಯೆಯಲ್ಲಿ ಒಂದಾಗುತ್ತಾರೆ.

ಸಂವಹನದಲ್ಲಿ ಪ್ರಯೋಗ ಸಾಧ್ಯತೆ[ಬದಲಾಯಿಸಿ]

ಒಂದು ಪ್ರಸಂಗ ಸಂವಹನ ಮಾಧ್ಯಮವಾಗಿ ಯಶಸ್ವಿಯಾಗಬೇಕಾದರೆ ಅದು ಹಲವು ಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ. ಯಕ್ಷಗಾನೋಚಿತವಾದ ಪಾತ್ರಗಳಿಗೆ ಅವಕಾಶ, ಯುದ್ಧ, ಪ್ರಯಾಣ, ಜಲಕ್ರೀಡೆ, ಬೇಟೆ ಮುಂತಾದ ನೃತ್ಯಗಳಿಗೆ ಅವಕಾಶವಿರುವ ಪದ್ಯಗಳು. ವೀರರಸ ಪ್ರಧಾನ- ಶೃಂಗಾರರಸಕ್ಕೆ ಪ್ರಧಾನ, ಭಾವಾನುಗುಣವಾದ ರಾಗ, ತಾಳಗಳ ಆಯ್ಕೆ, ಪಾತ್ರಗಳ ಪ್ರವೇಶಕ್ಕೆ ಉತ್ತಮವಾದ ಪದ್ಯಗಳು ಜೊತೆಗೆ ಕಥಾಬೆಳವಣಿಗೆ ಪೂರಕವಾಗುವ ಎರಡು ಪಾತ್ರಗಳ ಸಂಭಾಷಣೆ ನಂತರದಲ್ಲಿ ಹಾಗು ಆರಂಭದಲ್ಲಿ, ಘಟನೆಗಳ ನಡುವೆ- ಮುಂತಾಗಿ ವಿಷಯ ವಿವರಿಸುವ ವರ್ಣನೆ, ನಿರೂಪಣೆಗಳೊಂದಿಗೆ ಮೂರನೆಯದಾದ ಕಡಿವಾಣ ಇವೆಲ್ಲವೂ ಇರಬೇಕಾಗುತ್ತದೆ. ಪ್ರಸಂಗ ರಚಿಸಿದವರೆಲ್ಲಾ ಉತ್ತಮ ಪರಿಣಿತರು ಎಂದು ಹೇಳಲು ಸಾಧ್ಯವಿಲ್ಲ. ಅಕಸ್ಮತ್ತಾಗಿ ಹಾಗಿದ್ದರೂ ಸಹ ಪ್ರಯೋಗದಲ್ಲಿ ಕೆಲವು ವಿಕಾರಗಳಾಗಬಹುದು. ಉದಾಹರಣೆಗೆ ೧೦ನೇ ಶತಮಾನದಲ್ಲಿ ರಚಿತವಾದ ವಿರಾಟಪರ್ವದ ವಸ್ತು ರಂಗತಂತ್ರ, ಪಾತ್ರಪರಿಕಲ್ಪನೆ, ಪದ್ಯಬಂಧ ಮುಂತಾದ ಎಲ್ಲಾ ಅಂಶಗಳಲ್ಲೂ ಉತ್ತಮವಾಗಿರುವ ಒಂದು ಪ್ರಸಂಗ. ಆದರೆ ಅದನ್ನು ಆಟವಾಗಿ ಪ್ರಸರ್ಶಿಸುವಾಗ ಕೀಚಕ ಪಾತ್ರಧಾರಿಯಾದವನ ಅತಿಶಯ ಅಭಿನಯ, ಅತಿಕಾಮುಕತೆಯ ಅಸಹ್ಯ ಮಾತು ಹಾಗು ನಡುವಳಿಕೆಗಳು ನೋಡುಗರಿಗೆ ಕೀಚಕ ಹೇಗಿದ್ದ ಎಂಬುದನ್ನು ಅಭಿನಯ ಹಾಗು ಸಂವಹನದ ಮೂಲಕ ತೋರಿಸುತ್ತಾರೆ. ಕೆಲವೊಮ್ಮೆ ಪ್ರೇಕ್ಷಕರಿಗೆ ಇಂತಹ ಪ್ರಸಂಗಗಳ ಮೇಲೆ ಅಸಹ್ಯ ಹುಟ್ಟಿಕೊಳ್ಳಬಹುದು. ಆಶು ಸಂವಹನವೇ ಪ್ರಧಾನವಾದ ತಾಳಮದ್ದಳೆಯಲ್ಲಿ ಇಂತಹ ಪ್ರಸಂಗಗಳನ್ನು ಮುನ್ನಡೆಸಿಕೊಂಡು ಹೋಗುವುದು ಒಂದು ಸವಾಲಿನ ಕೆಲಸವಾಗಿರುತ್ತದೆ. ಮಾತು ಮುತ್ತಿನ ಹಾರವಾಗುವ, ಮಾಣಿಕ್ಯದ ದೀಪ್ತಿಯಾಗುವ, ಸ್ಪಟಿಕದ ಶಲಾಖೆಯಾಗುವ ಮಾತೇಜ್ಯೋರ್ತಿಲಿಂಗವಾಗುವ ಅದ್ಭುತ ಸಾಧ್ಯತೆಯನ್ನು ನಮ್ಮ ನಡುವಿನ ಕೆಲವು ಪಾರಂಪರಿಕ ಕಲೆಗಳು ತೋರಿಸಿಕೊಡುತ್ತದೆ. ಒಂದೇ ಜನಪದದ ನಡುವೆ ಒಂದೇ ಮೂಲವನ್ನು ಆಧಾರಿಸಿದ ಹಲವಾರುಕಲೆಗಳು ಪ್ರಚಲಿತದಲ್ಲಿದ್ದರೆ ಅವು ಪರಸ್ಪರ ಕೆಲವು ಅಂಶಗಳಲ್ಲಿ ಹೋಲಿಕೆಗಳನ್ನು ಹೊಂದಿದ್ದರೆ, ಹಲವು ಅಂಶಗಳಲ್ಲಿ ಭಿನ್ನತೆಗಳನ್ನು ಕಾಣಿಸುತ್ತವೆ. ಅದು ಸಹಜ ಹಾಗೂ ಅನಿವಾರ್ಯ. ಒಂದೇ ಮೂಲದಿಂದ ವಿಕಾಸಗೊಂಡಿರುವ ಕಾರಣಕ್ಕಾಗಿ ಸಾಮ್ಯಗಳು ಕಾಣಿಸಬಹುದು. ಭಿನ್ನವಾಗಿ ವಿಕಾಸಗೊಂಡಿರುವ ಕಾರಣಕ್ಕಾಗಿಯೇ ಅವುಗಳನ್ನು ಪ್ರತ್ಯೇಕ ಪ್ರಕಾರಗಳೆಂದು ಗುರುತಿಸುತ್ತೇವೆ. ಇಂದು ನಮ್ಮ ಕಾಲದ ಮನೋರಂಜನೆಗಳು, ಮಾದ್ಯಮಗಳು ಎಲ್ಲವೂ ಅತಿವೇಗವಾಗಿ ಬದಲಾಗುತ್ತಾ ಯಾವು ಯಾವುದೋ ರೂಪಗಳನ್ನು ಪಡೆಯುತ್ತಿರುವ ಸನ್ನಿವೇಶದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ, ನಮ್ಮ ದೇಸೀ ಕಲೆಗಳು ಮುಖ ಮುಚ್ಚಿಕೊಂಡು ಮೂಲೆ ಸೇರುತ್ತಿವೆ. ನಮ್ಮ ಹೊಸ ಪೀಳಿಗೆಯು ಆಧುನಿಕ ಎಂದು ಕರೆಯಲಾಗುತ್ತಿರುವ ಹಾಡು, ನೃತ್ಯ, ಸಂಗೀತ, ಊಟ-ಉಡುಗೆ, ಮಾತು, ಶೈಲಿ ಮುಂತಾದವುಗಳನ್ನು ಒಪ್ಪಿಕೊಂಡು, ಅಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲಿ, ನಮಗೆ ನಮ್ಮ ನಾಡಿನ, ಊರಿನ, ಮಣ್ಣಿನ ಕಲೆಗಳ ಕುರಿತಾಗಿ ಕಾಳಜಿ ಉಂಟಾಗುವುದು, ಅವುಗಳ ಉಳಿವಿನ ಕುರಿತು ತಲ್ಲಣಗಳು ಕಾಣಿಸಿಕೊಳ್ಳುವುದು ಸಹಜವಾದುದು. ಆ ದೃಷ್ಟಿಯಿಂದ ಇಲ್ಲಿ ಯಕ್ಷಗಾನ, ತಾಳಮದ್ದಳೆ, ಗಮಕ ಮುಂತಾದ ಸಮಾನಧರ್ಮಿ ಅಥವಾ ಸಮಾನ ಮೂಲದ ಕಲೆಗಳ ಕುರಿತುಪ್ರಾತ್ಯಕ್ಷಿಕೆಗಳೊಂದಿಗೆ ಒಂದು ವಿಚಾರವಿನಿಮಯ ಒಂದು ವಿವೇಚನಾಗೋಷ್ಠಿ ಏರ್ಪಡಿಸುವುದು ತುಂಬಾ ಸೂಕ್ತವಾದುದೆಂದೂ ಇದು ಸಕಾಲಕವೆಂದೂ, ಸಾಮಯಿಕವೆಂದೂ ಭಾವಿಸುತ್ತೆÃನೆ. ಈ ಕಲೆಗಳೆಲ್ಲಾ ಮೂಲತಃ ನಮ್ಮ ದೇಶದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನಾಧರಿಸಿಯೇ ಹುಟ್ಟಿದ ಅಥವಾ ಬೆಳೆದು ಬಂದಿರುವ ಕಲೆಗಳು. ತಾಳಮದ್ದಳೆ, ಯಕ್ಷಗಾನ-ಗಮಕ, ಕೀರ್ತನೆ ಅಥವಾ ಹರಿಕತೆ ಅಷ್ಟೇಏಕೆ ಹೆಣ್ಣು ಮಕ್ಕಳು ಶುಭಸಮಾರಂಭಗಳಲ್ಲಿ ಹಾಡುವ ಸಂಪ್ರದಾಯದ ಹಾಡುಗಳಲ್ಲೂ ಕೂಡ ಈ ರಾಮಾಯಣ, ಮಹಾಭಾರತಗಳು ಹಣಿಕಿಕ್ಕುವುದು ಸುಳ್ಳಲ್ಲ. ನಮ್ಮ ಮಲೆನಾಡಿನ ಹೆಂಗಳೆಯರು ಮದುವೆಯ ಸಂದರ್ಭದಲ್ಲಿ ಲಕ್ಷ್ಮಣ ನಗೆಯಾಡಿದ ಆರತಿ ಹಾಡನ್ನು ಹಾಡುತ್ತಾರೆ. ಹೆಣ್ಣು ಮನೆದುಂಬಿಸಿಕೊಳ್ಳುವಾಗ ರಾಮಚಂದ್ರನು ಜಾನಕಿಯನೊಡಗೊಂಡು ಬಂದ ಎಂದು ಹಾಡುತ್ತಾರೆ. ಹೆಣ್ಣು ಕೇಳಲು ಬಂದ ಹಾಡಿನಲ್ಲಿ ಅಭಿಮನ್ಯು ಸೌಭದ್ರೆಯರ ಕಥೆ ಬರುತ್ತದೆ. ಹೆಣ್ಣ ಕೇಳುವಾರು ನಿನ್ನೆ ಬರಾಲಿಲ್ಲೆ ನಿಮಕಿಂತ ಮದಲು ಕವುರವಾರಾಯರೂ ಹೆಣ್ಣೆಗೆ ಬಂಗಾರ ಯಿಡಿಶೋದ. ಹೀಗೆ ಭಾರತೀಯರ ಮನೋಭೂಮಿಕೆಯಲ್ಲಿ ಅತ್ಯಂತ ಆಳವಾಗಿ, ಗಾಢವಾಗಿ ಬೇರು ಬಿಟ್ಟಿರುವ ಕಥಾನಕಗಳಿವು. ಈ ಮಹಾಕಾವ್ಯಗಳು ಎಲ್ಲ ದೇಸೀ ಭಾಷೆಗಳಲ್ಲಿ ಕಾವ್ಯಗಳಿಗೆ ಕಾರಣವಾಗಿದೆ. ಹಲವಾರು ಮಾರ್ಗಿಕಲೆಗಳಿಗೂ, ದೇಸೀ ಕಲೆಗಳಿಗೂ ಸ್ಪೂರ್ತಿ ನೀಡಿದೆ. ಉದಾಹರಣೆಗೆ ಕನ್ನಡದಲ್ಲಿ ಕುಮಾರವ್ಯಾಸ ಭಾರತ, ಜೈಮಿನಿಭಾರತ, ತೊರವೆ ರಾಮಾಯಣ, ಬೆತ್ತಲೇಶ್ವರ ರಾಮಾಯಣ, ತುರಂಗಭಾರತ ಮುಂತಾದವಿ ಈ ಕಾವ್ಯಗಳನ್ನು ಆಧರಿಸಿಯೇ ರಚಿತವಾಗಿರುವಂತದ್ದು. ಯಕ್ಷಗಾನ ಮತ್ತು ತಾಳಮದ್ದಳೆಗಳಿಗೆ ಮೂಲಪಠ್ಯಗಳಾದ ಪ್ರಸಂಗಗಳು ಹಾಗು ಗಮಕವಾಚನ ನೇರವಾಗಿ ಈ ಕಾವ್ಯಗಳನ್ನೆ ಆಧರಿಸಿವೆ. ಗಮಕವಿಲ್ಲದೇ ಕಾವ್ಯವಾಚನ ಹಾಗು ನಮ್ಮ ತಾಳಮದ್ದಳೆ, ಯಕ್ಷಗಾನಗಳ ಮೂಲಸೂತ್ರ ಸಹ ಒಂದೇ ಆಗಿದೆ ಎಂಬ ವಿಚಾರವನ್ನು ಇಲ್ಲಿ ಗಮನಿಸಬೇಕಿದೆ. ತಾಳಮದ್ದಳೆಗಳಿಗೆ ಬೇರೆ ಬೇರೇ ಪ್ರದೇಶಗಳಲ್ಲಿವ ಬೇರೆ ಬೇರೆ ಹೆಸರುಗಳಿರುವಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸಂಗ ಎಂತಲೂ ಕರೆಯುತ್ತಾರೆ. ಈ ಕಲೆಯ ಪ್ರಯೋಗಕ್ಕೆ ಹಾಗು ಯಕ್ಷಗಾನ ಬಯಲಾಟಕ್ಕೆ ಇವೆರಡಕ್ಕೂ ಆಧಾರವಾಗಿ ಬಳಸುವ ಪಠ್ಯಕ್ಕೂ ಪ್ರಸಂಗ ಎಂದೇ ಕರೇಯುತ್ತಾರೆ. ಸಾಮಾನ್ಯವಾಗಿ ಪ್ರಸಂಗ ಎಂದರೆ ಒಂದು ಸನ್ನಿವೇಷ, ಘಟನೆ, ಕಥಾಭಾಗ ಮುಂತಾದ ಅರ್ಥವನ್ನು ಕಿಟೆಲ್ ಅವರ ನಿಘಂಟಿನಲ್ಲಿ ಪ್ರಸಂಗ ಎಂದರೆ ಹಳ್ಳಿಯ ನಾಟಕ ಅಥವಾ ಯಕ್ಷಗಾನ ಎಂದು ಕೂಡಾ ಅರ್ಥವಿದೆ ಎಂದು ಬರೆದಿದ್ದಾರೆ. ಸೃಜನಶೀಲ ಸಂವಹನ ಮಾಧ್ಯಮವಾಗಿ ತಾಳಮದ್ದಳೆ ತಾಳಮದ್ದಳೆಯು ತನ್ನ ಸುತ್ತಮುತ್ತಲಿನ ಎಲ್ಲ ಕಲೆಗಳಿಗಿಂತ ವಿಶಿಷ್ಠವಾಗಿ, ಅನನ್ಯವಾಗಿ ನಿಲ್ಲುವುದಕ್ಕೆ ಮುಖ್ಯಕಾರಣ ಅವರಲ್ಲಿನ ಸೃಜನಶಿಲ ಸಂವಹನ ಪಾರಿಣಾಮ ಎಂಬುದರಲ್ಲಿ ಸಂಶಯವಿಲ್ಲ. ಆರಂಭದಿಂದ ಅಂತ್ಯದ ತನಕ ಪ್ರತಿ ಕ್ಷಣವೂ ಸೃಷ್ಠಿಶೀಲವಾಗಿ, ಪ್ರತಿಭೆ ಹೊಳೆದಂತೆಲ್ಲಾ ಪ್ರಯೋಗವನ್ನು ಕಳೆಗೂಡಿಸುತ್ತಾ ಹೋಗುವ ಕಲೆಯಿದು. ಒಂದು ಪ್ರಸಂಗ ಪೂರ್ತಿಯಾಗುವ ತನಕ ಅದು ಹೇಗೆ ರೂಪುಗೊಳ್ಳುವುದೋ ಎಂಬ ಕುತೂಹಲವನ್ನು ಕಾದುಕೊಂಡೇ ಬರುತ್ತದೆ. ಪ್ರಸಂಗ ಸಂಪಾದನೆಯಿಂದ ಹಿಡಿದು ಭಾಗವತರ ಹಾಡು, ಪಿಠಿಕೆ , ಪ್ರತಿಯೊಬ್ಬ ಅರ್ಥಧಾರಿಯ ಅರ್ಥ, ಅರ್ಥಧಾರಿಗಳ ಸಾಂಗತ್ಯ ಪ್ರೇಕ್ಷಕಪ್ರತಿಕ್ರಿಯೆ ಮುಂತಾಗಿ ಎಲ್ಲಾ ಅಂಗಗಳು ಪ್ರತಿಕ್ಷಣವೂ ಸೃಜನಶಿಲವಾಗಿ ಕೆಲಸ ಮಾಡುವುದರಿಂದ ಪ್ರಸಂಗ ಪ್ರತಿಬಾರಿಯೂ ಹೊಸದಾಗುವ ಸಾಧ್ಯತೆ ಈ ಮಾಧ್ಯಮದ ಅನನ್ಯತೆಯಾಗಿದೆ. ತಾನೇ ಅರ್ಥವನ್ನು ಸೃಷ್ಟಿಸುವುದು ಎಂಬ ಹೊಣೆಗಾರಿಕೆ ಅರ್ಥಧಾರಿಯನ್ನು ಪರಮಾವಧಿಯ ಸೃಹನಶೀಲ ಸಂವಹನ ನಡೆಸುವಂತೆ ಮಾಡುತ್ತದೆ. ಅಂದರೆ ಕಲಾವಿದ ಇಲ್ಲಿ ಈ ಮಾಧ್ಯಮವನ್ನು ತನ್ನ ಸೃಜನಶೀಲ ಮನಸ್ಸಿನ ಅಭಿವ್ಯಕ್ತಿಯ ಸಾಧನವಾಗಿ ಕಾರ್ಯೋನ್ಮುಕವಾಗುತ್ತಾನೆ. ತನ್ನ ಪ್ರತಿಭೆ ಹೊಳೆದಂತೆಲ್ಲಾ ಹೊಸ ಹೊಸ ಪ್ರಯೋಗಗಳನ್ನು ಆತ ಈ ಮಾದ್ಯಮದಲ್ಲಿ ಮಾಡುತ್ತಾನೆ. ಹಾಗು ಆ ಎಲ್ಲ ಪ್ರಯೋಗಗಳನ್ನು ಸಂವಹನಗೊಳಿಸುವ ಶಕ್ತಿ ಈ ಕಲಾಪ್ರಕಾರಕ್ಕಿದೆ. ಮೊದಲು ಪದ್ಯವನ್ನು ಗೃಹಿಸುವಾಗ ಒಬ್ಬ ಪ್ರಜ್ಞಾವಂತ ಸಹೃದಯಿಯಾಗಿ ಆಲಿಸಿ, ಆ ಪದ್ಯ ಅರ್ಥ, ಅರ್ಥಾಂತರಗಳು, ಕವಿಯ ಆಶಯ ಮೊದಲಾದವುಗಳನ್ನೆಲ್ಲಾ ಗೃಹಿಸುತ್ತಾನೆ. ನಂತರ ಆ ಗೃಹಿಕೆಯನ್ನ ತನ್ನ ಅರ್ಥ ನಿರ್ಮಾಣದ ಬೀಜವಾಗಿ ಬಳಸಿ ಪದ್ಯದ ಚೌಕಟ್ಟಿನ ಹಂದರದ ಮೇಲೆಯೇ ಅರ್ಥವಲ್ಲರಿಯನ್ನು ಹಬ್ಬಿಸುತ್ತಾನೆ. ವಾಚಿಕಾಭಿನಯದ ಸೃಜನಶಿಲತೆಗೆ ನೆರವಾಗುವ ಪದ್ಯಲಕ್ಷಣಗಳನ್ನೊಳಗೊಂಡ ಪ್ರಸಂಗಗಳನ್ನೆ ಅಧಿಕವಾಗಿ ಆಯ್ದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ತಾಳಮದ್ದಳೆಯಲ್ಲಿ ಭೀಷ್ಮವಿಜಯ, ದ್ರೋಣಪರ್ವ, ಸುಭದ್ರಾಕಲ್ಯಾಣ, ರಾಜಸೂಯ, ಕೃಷ್ಣಾರ್ಜುನಕಾಳಗ, ವಿರಾಟಪರ್ವ, ಉತ್ತರನಪೌರುಷ, ಕೃಷ್ಣಸಂಧನ, ಕರ್ಣಪರ್ವ, ಕರ್ಣಾರ್ಜುನ ಕಾಳಗ, ಸುಧಾನ್ವಾರ್ಜುನ ಇಂತಹ ಪ್ರಸಂಗಗಳನ್ನೆ ಅಧಿಕವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಜಾಗತೀಕರಣದ ಕಾವು[ [ವಾಣಿಜ್ಯ]], ಕೃಷಿ, ತಂತ್ರಜ್ಞಾನ ಮುಂತಾಗಿ ನಮ್ಮ ಬದುಕಿನ ಹಲವು ರಂಗಗಳನ್ನು ತಟ್ಟಿದ ಹಾಗೆ ನಮ್ಮ ನೆಲದ ಕಲೆಗಳನ್ನೆಲ್ಲ ಒಳಗೊಂಡ ಸಾಂಸ್ಕೃತಿಕ ರಂಗವನ್ನು ಸಹ ತಟ್ಟಿ ಅಲ್ಲಾಡಿಸುವ ಸತ್ಯದ ಅರಿವು ಎಲ್ಲರಿಗೂ ಭಾಸವಾಗಿದೆ. ಇಂತಹ ಪರಿಸ್ಥಿಯಲ್ಲಿ ನಮ್ಮ ಪ್ರಾದೇಶಿಕ ಕಲೆಗಳು, ಜನಪದೀಯತೆ, ಕೌಶಲಗಳು ಜಾಗತೀಕರಣದ ಬಿರುಗಾಳಿಗೆ ಕೊಚ್ಚಿಹೋಗಬುದು ಎಂಬ ಸತ್ಯ ಎಷ್ಟಿದೆಯೋ ಅಷ್ಟೇ ಸತ್ಯವಾದ ಇನ್ನೊಂದು ಸಂಗತಿಯಿದೆ. ಅದೆಂದರೆ ನಮ್ಮ ಸಶಕ್ತೌವಾದ ಕೆಲವು ಕಲೆಗಳನ್ನು ಪರಿಷ್ಕರಿಸಿ ಅದರೆಲ್ಲ ಸತ್ವ ಸಾಮರ್ಥ್ಯಗಳೊಂದಿಗೆ ಪರಿಸ್ಪುಟಗೊಳಿಸುವಂತೆ ಮಾಡಿ ನಮ್ಮ ಮೇಲೆ ದಾಳಿ ಮಾಡುತ್ತಿರುವ ಕಲೆಗಳ ಎದುರು ನಿಲ್ಲಿಸಿ ಕಣ್ಣು ಕುಕ್ಕುವಂತೆ ಮಾಡಬಹುದು. ಜಗತ್ತು ಮೆಚ್ಚುವಂತೆ ಮಾಡಬಹುದು. ಹಾಗೆ ಕಣ್ಣು ಕುಕ್ಕಿಸುವ ಜಗತ್ತಿನ ಮೆಚ್ಚುಗೆಗೆ ಪಾತ್ರವಾಘುವ ಶಕ್ತಿ ತಾಳಮದ್ದಳೆಗೆ ಇದೆ. ತಾಳಮದ್ದಳೆ ಅಥವಾ ಯಕ್ಷಗಾನ ಎಂಬುದು ಒಂದು ಮೇಳಪ್ರಕ್ರಿಯೆ. ಈ ಒಂದು ಪೂರ್ಣಮೇಳವನ್ನು ಹಿಮ್ಮೇಳ ಮತ್ತು ಮುಮ್ಮೇಳ ಎಂದು ಎರಡು ವಿಭಾಗಗಳನ್ನಾಗಿ ಮಾಡಲಾಗಿದೆ. ಮುಮ್ಮೇಳ ಅಭಿನಯ ಮತ್ತು ಮಾತಿನಿಂದ ಕೂಡಿದ್ದರೆ, ಹಿಮ್ಮೇಳವು ಪದ್ಯ, ಸಾಹಿತ್ಯ, ಹಾಗು ವಾದನಗಳಿಂದ ವಿಜೃಂಭಿಸುತ್ತದೆ. ಕಥಾನಕ ಎಂಬ ದೋಣಿಯ ನಡೆಸುವ ಕೈಗೋಲು ಹಿಮ್ಮೇಳವಾಗಿರುತ್ತದೆ. ಹಿಮ್ಮೇಳವು ಆಟ ಮತ್ತು ತಾಳಮದ್ದಳೆಗಳಲ್ಲಿ ಸಾಮಾನ್ಯವಾಗಿ ಒಂದೆ ರೀತಿಯಿದ್ದರೂ ಅದರ ಉದ್ದೇಶ ಹಾಗು ಪರಿಣಾಮ ಬೇರೆ ರೀತಿಯಾಗಿರುತ್ತದೆ. ಮುಮ್ಮೇಳವನ್ನು ಕಾಣಿಸಿಕೊಡುವವರು, ಮುಮ್ಮೆಮ್ಮೇಳದ ಕ್ರಿಯೆಗೆ ಕಾರಣವಾಗುವವರು, ಮುಮ್ಮೇಳದ ಕ್ರಿಯೆಗೆ ಕಾರಣವಾಗುವವರು, ಮುಮ್ಮೇಳವನ್ನು ನಿಯಂತ್ರಿಸುವವರು ಇಡೀ ಮೇಳದ ಪರಿಣಾಮಕ್ಕೆ ಕಾರಣವಾಗುವವರು ಹಿಮ್ಮೆಮ್ಮೇಳದವರು. ಈ ಹಿಮ್ಮೇಳದ ಪ್ರಧಾನ ಭಾಗ ಮಾತ್ರವಲ್ಲ, ಇಡೀ ಮೇಳದ ಕೆಂದ್ರ, ಇಡೀ ಮೇಳದ ನಿಯಂತ್ರಕ, ಸೂತ್ರಧಾರ, ನಿರ್ದೇಶಕ, ಭಾಗವತ ಆದ್ದರಿಂದಲೇ ಆಟದಲ್ಲಿ ಇವನನ್ನು ಮೊದಲವೇಷವೆಂದೆ ಗುರುತಿಸಲಾಗುವುದು. ಅವರನ್ನು ಅನುಸರಿಸುವವರು ಅಥವಾ ಅವನಿಗೆ ಜೊತೆಕೊಡುವವರು ಚಂಡೆ ಮತ್ತು ಮದ್ದಳೆಯವರು. ಈ ವಾದಕರು ಭಾಗವತನಿಗೆ ಜೊತೆಕೊಡುವವರು ಮಾತ್ರವಲ್ಲದೇ, ಆಟದಲ್ಲಿ ನಡೆಯುವ ಘಟನೆಗಳನ್ನು ಕೇಳಿಸುವ ಮೂಲಕ ಕಾಣಿಸಿಕೊಳ್ಳುತ್ತಾರೆ. ಪ್ರಯಾಣ, ಜಲಕ್ರೀಡೆ, ಯುದ್ಧ, ಬೇಟೆ ಮುಂತಾದವುಗಳನ್ನೆಲ್ಲಾ ನುಡಿಸಿ ತೋರಿಸುವವರು. ತಾಳಮದ್ದಳೆಯಲ್ಲಂತೂ ರಂಗದ ಮೇಲೆ ನಡೆಯುವ ಕ್ರಿಯೆಯಲ್ಲ ಹಿಮ್ಮೇಳದವರಿಂದಲೇ ಸೂಚಿತವಾಗಬೇಕಾಗುತ್ತದೆ. ಎಷ್ಟೊ ಸಲ ರಂಗದ ಮೇಲೆ ಕಾಣುವ ಚಿತ್ರಕ್ಕಿಂತ ಮೂಡಿಸುವ ಚಿತ್ತವೇ ಹೆಚ್ಚು ಆಕರ್ಷಕವಾಗಿರುತ್ತದೆ. ಚಂಡೆ ಆಟಕ್ಕೆ ಕಳೆ ಕೊಡುವ ವಾದನ, ವೀರರಸ ಪ್ರಧಾನವಾದ ಯಕ್ಷಗಾನದಲ್ಲಿ ಚಂಡೆಯ ಅಬ್ಬರವೇ ಒಂದು ಅದ್ಭುತವಾದ ಪರಿಣಾಮಕ್ಕೆ ಕಾರಣವಾಗುತ್ತದೆ. ಆದರೆ ಹಿಂದೆ ಬಯಲಲ್ಲಿ ಆಟ ನಡೆಯುತ್ತಿದ್ದ ಕಾಲದಲ್ಲಿ ತಾರಸ್ಥಾಯಿಯಲ್ಲಿ ಭಾಗವತರು ಹಾಡುವುದು ಹಾಗು ಅಬ್ಬರದಲ್ಲಿ ಚಂಡೆ ಬಾರಿಸುವುದು ರೂಢಿಯಲ್ಲಿತ್ತು, ಚಂಡೆ ಮದ್ದಳೆಗಳ ಅಬ್ಬರದಲ್ಲಿ ಭಾಗವತನ ಹಾಡು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಆ ವಾದನಗಳ ಶಬಗಧವನ್ನು ಮೀರಿ ಕೇಳಿಸಬೇಕೆಂದು ಭಾಗವತ ಕಿರುಚಬೇಕಾದ ಕಾರಣ ಭಾಗವತಿಕೆ ಎಂದರೆ ಏರು ದನಿಯಲ್ಲಿ ಕಿರುಚುವುದು ಎಂದೇ ತಿಳಿಯಬೇಕಾದ ಪ್ರಸಂಗವಿತ್ತು. ಇದರಿಂದಲೇ ರಮ್ಯಾದ್ಭುತ ಸನ್ನಿವೇಶಗಳಿಗೇನೋ ಹೇಗೋ ಹೊಂದಿತ್ತಿತ್ತು. ಆದರೆ ಕರುಣ, ಭಕ್ತಿ, ಆನಂದ, ಶೃಂಗಾರ ಸನ್ನಿವೇಶಗಳಲ್ಲಿ ಹಾಡನ್ನು ಮಂದ್ರಸ್ಥಾಯಿಯಲ್ಲಿ ಹಾಡುವುದಾಗಲಿ, ಚಂಡೆ ಮದ್ದಳೆಗಳನ್ನು ಆ ರೀತಿಯಲ್ಲಿ ನುಡಿಸುವುದಾಗಲೀ ರೂಢಿಯಲ್ಲಿರಲಿಲ್ಲ. ಡಾ. ಶಿವರಾಮ ಕಾರಂತರು ಹಲವಾರು ಶಿಬಿರಗಳನ್ನು, ವಿಚಾರಗೋಷ್ಠಿಗಳನ್ನು ನಡೆಸಿ ಹಾಡಿನ ಹಾಗು ವಾದನಗಳ ಸಾಧ್ಯತೆಗಳನ್ನೆಲ್ಲಾ, ವೈವಿಧ್ಯತೆಗಳನ್ನಲ್ಲಾ ಗುರುತಿಸಿದರು. ಚಂಡೆ ಮದ್ದಳೆಗಳನ್ನು ಸಹ ವೈವಿಧ್ಯಪೂರ್ಣ ಭಾವಗಳ ಅಭಿವ್ಯಕ್ತಿಯ ಪದ್ಯಗಳಿಗೆ ವೈವಿಧ್ಯಪೂರ್ಣವಾಗಿ ನಡೆಸಲು ಸಾಧ್ಯವೆಂಬುದನ್ನು ತೋರಿಸಿದರು. ವೈಲಿನಂತಹ ವಾದ್ಯಗಳ ಉಪಯುಕ್ತತೆಯನ್ನು ಮನಗಾಣಿಸಿಕೊಟ್ಟರು. ಒಟ್ಟಿನಲ್ಲಿ ಏರುಮದ್ದಳೆ-ಇಳಿಮದ್ದಳೆ ಮುಂತಾಗಿ ವೈವಿಧ್ಯಪೂರ್ಣ ಮದ್ದಲೆಗಳನ್ನು ಬಳಸಿ ಮದ್ದಳೆಯ ನುಡಿತ-ಮಿಡಿತಗಳನ್ನು ಇನ್ನಶ್ಟು ಸೂಕ್ಷ್ಮಗಳನ್ನು ಶೃಂಗಾರ ಕರುಣ ಮುಂತಾದ ಸೂಕ್ಷ್ಮ ಸಂವೇದನೆಗಳ ಅಭಿವ್ಯಕ್ತಿಗೆ ಈ ವಾದನಗಳು ಜೊತೆ ನೀಡುವಂತಾದರೆ ಭಾಗವತಿಕೆಯ ಪರಿಣಾವೂ ರಮಣೀಯವಾಗುವುದು. ತಾಳಮದ್ದಳೆ ತೆಂಕು ಬಡಗಿನಲ್ಲಿ ಎರಡರಲ್ಲೂ ಕಂಡುಬರುವ ಕಲಾ ಪ್ರಕಾರವಾಗಿದೆ. ಒಂದು ಪೌರಾಣಿಕ ಕಥೆಯನ್ನು ಸರಳೀಕರಿಸಿ ಪ್ರೇಕ್ಷಕರಿಗೆ ನಮ್ಮ ಎದುರೇ ಕಥೆ ನಡೆಯುತ್ತಿದೆ ಎಂದು ಭಾಸವಾಗುವಂತೆ ಮಾಡುವ ಶಕ್ತಿಯನ್ನು ತಾಳಮದ್ದಳೆ ಹೊಂದಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://bayalata.com/?0~10
  2. https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%A4%E0%B2%BE%E0%B2%B3%E0%B2%AE%E0%B2%A6%E0%B3%8D%E0%B2%A6%E0%B2%B3%E0%B3%86
  3. https://www.youtube.com/watch?v=Q-JmCoVfH4w