ಪೃಥ್ವಿರಾಜ್‌ ಕಪೂರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪೃಥ್ವಿರಾಜ್‌ ಕಪೂರ್‌ (Prithviraj Kapoor) ಇಂದ ಪುನರ್ನಿರ್ದೇಶಿತ)
Prithviraj kapoor
Prithviraj Kapoor as Shenshah Akbar in 'Mughal E Azam'
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(೧೯೦೬-೧೧-೦೩)೩ ನವೆಂಬರ್ ೧೯೦೬
Lyallpur, Punjab,
ನಿಧನ May 29, 1972(1972-05-29) (aged 65)
ವರ್ಷಗಳು ಸಕ್ರಿಯ 1929-1971
ಪತಿ/ಪತ್ನಿ Ramsarni "Rama" Mehra (1923/24-1972)

ಪೃಥ್ವಿರಾಜ್‌ ಕಪೂರ್‌ (ಹಿಂದಿ: पृथ्वीराज कपूर, : Pṛithvīrāj Kapūr, ಜನನ: 3 ನವೆಂಬರ್‌ 1906 – 29 ಮೇ 1972) ಇವರು ಭಾರತೀಯ ನಾಟಕ-ರಂಗಮಂದಿರ ಹಾಗೂ ಹಿಂದಿ ಚಲನಚಿತ್ರೋದ್ಯಮದ ಹರಿಕಾರರಾಗಿದ್ದರು. ಹಿಂದಿ ಚಲನಚಿತ್ರರಂಗದ ಮೂಕ-ಚಲನಚಿತ್ರ ಯುಗದಲ್ಲಿ, ಇವರು ಒಬ್ಬ ನಟರಾಗುವುದರೊಂದಿಗೆ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.[೧].

ಹಿಂದಿ ಚಲನಚಿತ್ರರಂಗದ ಕಪೂರ್‌ ಕುಟುಂಬದಲ್ಲಿ ಅವರು ಪಿತಾಮಹರಾಗಿದ್ದರು. ಅವರೊಂದಿಗೆ ಆರಂಭಗೊಂಡು, ಈ ವಂಶದ ಐದು ತಲೆಮಾರುಗಳು ಬಾಲಿವುಡ್‌ನಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿವೆ. ಭಾರತೀಯ ಚಲನಚಿತ್ರರಂಗಕ್ಕೆ ಅವರ ಅಪಾರ ಕೊಡುಗೆಯನ್ನು ಗುರುತಿಸಿದ ಭಾರತ ಸರ್ಕಾರವು ಪೃಥ್ವಿರಾಜ್‌ರಿಗೆ 1969ರಲ್ಲಿ ಪದ್ಮಭೂಷಣ ಹಾಗೂ 1971ರಲ್ಲಿ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತು.

ಆರಂಭಿಕ ಜೀವನ[ಬದಲಾಯಿಸಿ]

ಪೃಥ್ವಿರಾಜ್‌ 1906ರ ನವೆಂಬರ್‌ 3ರಂದು ಅಂದಿನ ಬ್ರಿಟಿಷ್‌ ಭಾರತದ ಪಂಜಾಬ್‌ ಪ್ರಾಂತ್ಯದಲ್ಲಿರುವ ಲಯಾಲ್ಪುರ (ಇಂದಿನ ಪಾಕಿಸ್ತಾನದಲ್ಲಿರುವ ಫೈಸಲಾಬಾದ್‌) ಬಳಿ ಸಮುಂದ್ರಿ[೨] ಯಲ್ಲಿ, ಮಧ್ಯಮ-ವರ್ಗದ ಹಿಂದೂ ಪಂಜಾಬಿ ಕುಟುಂಬದಲ್ಲಿ ಜನಿಸಿದರು.[೩][೪][೫][೬][೭][೮] ಪೃಥ್ವಿರಾಜ್‌ ಹಿಂದಿ, ಪಂಜಾಬಿ ಮತ್ತು ಹಿಂದ್ಕೊ ಭಾಷೆ ಮಾತನಾಡಬಲ್ಲವರಾಗಿದ್ದರು.[೫][೯]

ಅವರ ತಂದೆ, ದಿವಾನ್ ಬಶೇಶ್ವರನಾಥ್‌ ಕಪೂರ್‌ ಪೊಲೀಸ್ ಉಪ-ನಿರೀಕ್ಷಕರಾಗಿದ್ದರು. ಪೃಥ್ವಿರಾಜ್‌ ಲಯಾಲ್ಪುರದ ಖಾಲ್ಸಾ ಕಾಲೇಜ್‌ ಹಾಗೂ ಲಾಹೋರ್‌ನಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದರು. ಅವರ ಪಿತಾಮಹ ದಿವಾನ್‌ ಕೇಶವಮಲ್‌, ಪೃಥ್ವಿರಾಜ್‌ರ ಬಾಲ್ಯದಲ್ಲಿ ಬಹಳಷ್ಟು ಪ್ರಭಾವಿಯಾಗಿದ್ದರು. ಬಶೇಶ್ವರನಾಥ್‌ರ ಹುದ್ದೆಯು ಪೇಶಾವರದಲ್ಲಿದ್ದ ಕಾರಣ, ಪೃಥ್ವಿರಾಜ್‌ ಇಂದಿನ ಪಾಕಿಸ್ತಾನದ ಪೇಷಾವರ್‌ನಲ್ಲಿರುವ ಎಡ್ವರ್ಡ್ಸ್‌ ಕಾಲೇಜ್‌ನಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದರು. ನಂತರ, ವಕೀಲರಾಗಲೆಂದು ಕಾನೂನಿನಲ್ಲಿ ಒಂದು ವರ್ಷದ ವ್ಯಾಸಂಗಕ್ಕೆ ಸೇರಿದರು. ನಾಟಕ ವೇದಿಕೆಯ ಮೇಲಿನ ಅವರ ಪ್ರತಿಭೆಯನ್ನು ಗುರುತಿಸಲಾಗಿದ್ದು ಇಲ್ಲಿಯೇ. ಪೃಥ್ವಿರಾಜ್‌ರ ಎರಡನೆಯ ಪುತ್ರ ಶಮ್ಷೇರ್‌ರಾಜ್‌ ಕಪೂರ್‌ (ಶಮ್ಮಿ ಕಪೂರ್)‌ ನೆನಪು ಮಾಡಿಕೊಂಡು ಹೇಳಿದ ಪ್ರಕಾರ,[೨] ಶಿಕ್ಷಕವೃಂದದ ಸದಸ್ಯರಾದ ಪ್ರೊಫೆಸರ್‌ ಜಯ್‌ ದಯಾಲ್, ಪೃಥ್ವಿರಾಜ್‌ರ ಪ್ರತಿಭೆಯನ್ನು ಪೋಷಿಸಿ ಬೆಳೆಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ‌ ಈ ಪ್ರಾಧ್ಯಾಪಕರು ಹಾಗೂ ನೊರಾ ರಿಚರ್ಡ್‌ ಎಂಬ ಇಂಗ್ಲಿಷ್‌ ಮಹಿಳೆಯ ನಡುವೆ ಪರಸ್ಪರ ಪ್ರೇಮವಿತ್ತು. ನೊರಾ ನಾಟಕಗಳ ಅಭಿಮಾನಿ ಯಾಗಿದ್ದು, ಷೇಕ್‌ಸ್ಪಿಯರ್‌ ಮತ್ತು ಇಬ್ಸೆನ್‌ ನಾಟಕಗಳಲ್ಲಿ ವಿಶೇಷ ಆಸಕ್ತಿಯಿತ್ತು. ಈ ಜೋಡಿಯು ತಾನು ಆಯೋಜಿಸಿದ ಹಲವು ನಾಟಕಗಳಲ್ಲಿ ಹಲವು ಪಾತ್ರಗಳಲ್ಲಿ ಪೃಥ್ವಿರಾಜ್‌ ಸೂಕ್ತ ವ್ಯಕ್ತಿ ಎಂದು ಮನಗಂಡಿತು. ಇದು ಅವರ ರಂಗಮಂದಿರ ವೃತ್ತಿಜೀವನಕ್ಕೆ ದೃಢ ಅಡಿಪಾಯವಾಯಿತು.

ವೃತ್ತಿಜೀವನ[ಬದಲಾಯಿಸಿ]

ಪೃಥ್ವಿರಾಜ್‌ ಪೇಷಾವರ್‌ನ ಎಡ್ವರ್ಡ್‌ ಕಾಲೇಜ್‌ನಲ್ಲಿ ವ್ಯಾಸಂಗ ಮುಗಿಸಿ, ತಮ್ಮ ಬಿ.ಎ. ಪದವಿ ಗಳಿಸಿದರು. ತಮ್ಮ ವಂಶಸ್ಥರಲ್ಲಿ ಇದುವರೆಗೂ ಯಾರೂ ಸಹ ಈ ಸಾಧನೆಯನ್ನು ಮೀರಿಸಿಲ್ಲ. ಅವರು ಪದವೀಧರ ವಿದ್ಯಾರ್ಥಿಯಾಗಿ ಒಂದು ವರ್ಷ ಕಾಲ ಕಾನೂನಿನ ಅಧ್ಯಯನ ಮಾಡಿದರು. ಆದರೆ ಅವರಿಗೆ ನಾಟಕ ಮತ್ತು ರಂಗಮಂದಿರದಲ್ಲಿ ಹೆಚ್ಚಿನ ಒಲವಿತ್ತು. 1928ರಲ್ಲಿ, ತಮ್ಮ ಸಹೋದರಿ ಸಂಬಂಧಿಯಿಂದ ಸಾಲ ಪಡೆದು, ಪೃಥ್ವಿರಾಜ್‌ ಬಾಂಬೆ ನಗರಕ್ಕೆ (ಇಂದಿನ ಮುಂಬಯಿ) ಆಗಮಿಸಿದರು. ಇದು ಆಗಿನ ಕಾಲದಲ್ಲೇ ಹಿಂದಿ ಚಲನಚಿತ್ರೋದ್ಯಮದ ಕೇಂದ್ರಬಿಂದುವಾಗಿತ್ತು.

ತಮ್ಮ ಮೊದಲ ಚಲನಚಿತ್ರ ಪಾತ್ರದಲ್ಲಿ ಒಬ್ಬ ವಿಶೇಷ ಕಲಾವಿದರಾಗಿ ನಟಿಸಿದರು. ಆನಂತರ, ಅವರ ಪ್ರತಿಭೆಯ ಸಾಮರ್ಥ್ಯದ ಮೂಲಕ, 1929ರಲ್ಲಿ ತಮ್ಮ ಮೂರನೆಯ ಚಲನಚಿತ್ರ ಸಿನೆಮಾ ಗರ್ಲ್ ‌ನಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದರು.[೧೦] ಒಂಭತ್ತು ಮೂಕ ಚಲನಚಿತ್ರಗಳಲ್ಲಿ ನಟಿಸಿದ ನಂತರ,[೧೧] 1931ರಲ್ಲಿ ಬಿಡುಗಡೆಯಾದ, ಭಾರತದ ಮೊಟ್ಟಮೊದಲ ಧ್ವನಿಪಥವುಳ್ಳ ಚಲನಚಿತ್ರ ಆಲಮ್‌ ಆರಾ 'ದಲ್ಲಿ ಪೃಥ್ವಿರಾಜ್‌ ಕಪೂರ್‌ ಪೋಷಕನಟರಾದರು. 1937ರಲ್ಲಿ ತೆರೆಕಂಡ ವಿದ್ಯಾಪತಿ ಎಂಬ ಚಲನಚಿತ್ರದಲ್ಲಿ ಪೃಥ್ವಿರಾಜ್‌ರ ನಟನೆ ಬಹಳಷ್ಟು ಪ್ರಶಂಸೆ ಗಳಿಸಿತು. ಸೊಹ್ರಾಬ್‌ ಮೋದಿ ನಿರ್ದೇಶಿಸಿದ, 1941ರಲ್ಲಿ ತೆರೆಕಂಡ ಸಿಕಂದರ್ 'ನಲ್ಲಿ ಮಹಾ ಚಕ್ರವರ್ತಿ ಅಲೆಕ್ಸಾಂಡರ್‌ನ ಪಾ‌ತ್ರ ನಿರ್ವಹಿಸಿದ್ದು ಪೃಥ್ವಿರಾಜ್‌ರ ಅತ್ಯುತ್ತಮ ನಟನೆ ಎನ್ನಲಾಗಿದೆ. 'ಜೆ. ಗ್ರ್ಯಾಂಟ್‌ ಆಂಡರ್ಸನ್‌' ಎಂಬ ಏಕೈಕ ಇಂಗ್ಲಿಷ್‌ ನಾಟಕ ತಂಡವನ್ನು ಸೇರಿದರು. ಈ ತಂಡವು ಒಂದು ವರ್ಷದ ಕಾಲ ಭಾರತದಲ್ಲಿತ್ತು.[೧೦] ಈ ಹಲವು ವರ್ಷಗಳ ಕಾಲ ಪೃಥ್ವಿರಾಜ್‌ ರಂಗಮಂದಿರದಲ್ಲಿ ಸಕ್ರಿಯರಾಗಿ ಉಳಿದು ವೇದಿಕೆಯಲ್ಲಿ ನಿಯತ್ತಾಗಿ ತಮ್ಮ ಅಮೋಘ ನಟನಾ ಪ್ರತಿಭೆ ಪ್ರದರ್ಶಿಸಿದರು. ನಾಟಕಗಳು ಮತ್ತು ಬೆಳ್ಳಿತೆರೆಗಳಲ್ಲಿ ಒಬ್ಬ ಒಳ್ಳೆಯ ನಟ ಎಂಬ ಕೀರ್ತಿ ಸಂಪಾದಿಸಿಕೊಂಡರು.

ಪೃಥ್ವಿ ಥಿಯೆಟರ್ಸ್‌[ಬದಲಾಯಿಸಿ]

1944ರಷ್ಟರಲ್ಲಿ, ತಮ್ಮದೇ ಆದ ಅಪಾರ ಸಾಮರ್ಥ್ಯ ಮತ್ತು ಪ್ರತಿಭೆಗಳಿಂದಾಗಿ ತಮ್ಮದೇ ನಾಟಕವೃಂದ ಸ್ಥಾಪಿಸಲು ಸಾಧ್ಯವಾಯಿತು. 1944ರಲ್ಲಿ ಪ್ರದರ್ಶಿಸಿದ ಕಾಳಿದಾಸ ವಿರಚಿತ ಶಾಕುಂತಲ ಈ ತಂಡದ ಮೊದಲ ನಾಟಕವಾಗಿತ್ತು. ಪೃಥ್ವಿರಾಜ್‌ರ ಜ್ಯೇಷ್ಠಪುತ್ರ ರಣಬೀರ್‌ರಾಜ್‌ (ರಾಜ್‌) ಕಪೂರ್‌ ಆಗಲೇ ತಮ್ಮ ಹಾದಿ ಕಂಡುಕೊಂಡು, ತಾವು ನಿರ್ಮಿಸಿ, ನಿರ್ದೇಶಿಸಿದ ಚಲನಚಿತ್ರಗಳು ಯಶಸ್ವಿಯಾದದೂ ಒಂದು ಕಾರಣವಾಗಿತ್ತು. ಪೃಥ್ವಿರಾಜ್‌ ಹೂಡಿಕೆ ಮಾಡಿ, ಪೃಥ್ವಿ ಥಿಯೆಟರ್ಸ್‌ ಎಂಬ ನಾಟಕತಂಡವನ್ನು ಸ್ಥಾಪಿಸಿದರು. ಈ ತಂಡವು ಭಾರತದೆಲ್ಲೆಡೆ ಅಮೋಘ ನಾಟಕ ಪ್ರದರ್ಶನ ನೀಡಿ ಖ್ಯಾತಿ ಸಂಪಾದಿಸಿತು. ಹದಿನಾರು ವರ್ಷಗಳ ಕಾಲದ ತನ್ನ ಅಸ್ತಿತ್ವದಲ್ಲಿ, ನಾಟಕತಂಡವು ಸುಮಾರು 2,662 ನಾಟಕ ಪ್ರದರ್ಶನಗಳನ್ನು ನಡೆಸಿತು. ಪ್ರತಿಯೊಂದು ಪ್ರದರ್ಶನ ದಲ್ಲೂ ಸಹ ಪೃಥ್ವಿರಾಜ್‌ ಪ್ರಮುಖ ನಟರಾಗಿದ್ದರು.[೧೨]

1950ರ ದಶಕದ ಅಪರಾರ್ಧದಲ್ಲಿ, ಸಂಚಾರಿ ನಾಟಕ ತಂಡದ ಯುಗವು ಅಂತ್ಯಗೊಂಡಿತ್ತು. ಕಲಾ ರೂಪದ ಸ್ಥಾನವನ್ನು ಚಲನಚಿತ್ರರಂಗವು ಅಕ್ರಮಿಸಿಕೊಂಡಿತ್ತು. ಪೃಥ್ವಿ ಥಿಯೆಟರ್‌ನ 80 ಕಲಾವಿದರ ತಂಡವು, ತಮ್ಮೊಂದಿಗೆ ಭಾರವಾದ ವೇದಿಕೆಯ ಸನ್ನಿವೇಶ-ವಿನ್ಯಾಸಗಳು ಮತ್ತು ಉಪಕರಣಗಳನ್ನು ಹೊತ್ತೊಯ್ದು, ಸುಮಾರು ನಾಲ್ಕರಿಂದ ಆರು ತಿಂಗಳ ಕಾಲ ದೇಶದೆಲ್ಲೆಡೆ ಪಯಣಿಸಿ, ಹೋಟೆಲ್‌ಗಳು ಅಥವಾ ಶಿಬಿರಗಳಲ್ಲಿ ಠಿಕಾಣಿ ಹೂಡುವ ಕಾಲ ಮಿಂಚಿಹೋಗಿತ್ತು. ಟಿಕೆಟ್‌ಗಳ ಮಾರಾಟದ ಮೂಲಕ ಹಣಕಾಸಿನ ಗಳಿಕೆಗಳು ಹಾಗೂ ಭಾರತದ ರಾಜಮನೆತನದ ವರ್ಗದಿಂದ ಲಭಿಸುತ್ತಿದ್ದ ಪ್ರೋತ್ಸಾಹಧನ-ದಾನ ಗಳು ನಾಟಕಕ್ಕೆ ಅಗತ್ಯವಾದ ಎಲ್ಲ ಸೌಕರ್ಯಗಳಿಗೆ ಸಾಕಾಗುತ್ತಿರಲಿಲ್ಲ. ಪೃಥ್ವಿ ಥಿಯೆಟರ್ಸ್‌ ಪರಿಚಯಿಸಿದ ಅತ್ಯುತ್ತಮ ನಟರು ಮತ್ತು ತಾಂತ್ರಿಕ ಸಿಬ್ಬಂದಿ ವರ್ಗದವರು ಚಲನಚಿತ್ರಗಳಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದರು. ಪೃಥ್ವಿರಾಜ್‌ರ ಸ್ವಂತ ಮಕ್ಕಳೂ ಇದಕ್ಕೆ ಹೊರತಾಗಿರಲಿಲ್ಲ. ಪೃಧ್ವಿರಾಜ್‌ರ ವಯಸ್ಸು 50 ದಾಟಿದ ನಂತರ, ರಂಗಮಂದಿರ ಚಟುವಟಿಕೆಗಳಿಂದ ನಿಧಾನಕ್ಕೆ ಹಿಂದೆ ಸರಿದು, ತಮ್ಮ ಮಕ್ಕಳೂ ಸೇರಿದಂತೆ, ಹಲವು ಚಲನಚಿತ್ರ ನಿರ್ಮಾಪಕರ ಆಹ್ವಾನದ ಮೇರೆಗೆ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ನಂತರ, ತಮ್ಮ ಪುತ್ರ ಬಲ್ಬೀರ್‌ ಪೃಥ್ವಿರಾಜ್‌ (ಶಶಿ) ಕಪೂರ್‌ ಹಾಗೂ ಶಶಿ ಕಪೂರ್‌ರ ಪತ್ನಿ ಜೆನ್ನಿಫರ್‌ ಕೆಂಡಾಲ್ ನೇತೃತ್ವದಲ್ಲಿ ನಾಟಕತಂಡವು, 'ಷೇಕ್‌ಸ್ಪಿಯರಿಯನಾ' ಎಂಬ ಇಂಡಿಯನ್‌ ಷೇಕ್‌ಸ್ಪಿಯರ್‌ ನಾಟಕತಂಡದೊಂದಿಗೆ ವಿಲೀನವಾಯಿತು. 1978ರ ನವೆಂಬರ್‌ 5ರಂದು ಮುಂಬಯಿಯಲ್ಲಿ ಪೃಧ್ವಿ ಥಿಯೆಟರ್‌ ಎಂಬ ರಂಗಮಂದಿರದ ಉದ್ಘಾಟನೆಯೊಂದಿಗೆ, ಈ ಹೊಸ ತಂಡಕ್ಕೆ ಕಾಯಂ ವಿಳಾಸ ಹಾಗೂ ಸೂರು ದೊರಕಿತು.[೧೩]

ಅಂಚೆ ಚೀಟಿಗಳು[ಬದಲಾಯಿಸಿ]

ಪೃಥ್ವಿ ಥಿಯೆಟರ್‌ ಸ್ಥಾಪನೆಯ 50ನೆಯ ವರ್ಷ, ಅಂದರೆ 1996ರಲ್ಲಿ, ಸ್ವರ್ಣಮಹೋತ್ಸವದ ಅಂಗವಾಗಿ ಭಾರತೀಯ ಅಂಚೆಯು ನವದೆಹಲಿಯಲ್ಲಿ [೧೪] ವಿಶೇಷ ಎರಡು ರೂಪಾಯಿಗಳ ಮೌಲ್ಯದ, ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆಗೊಳಿಸಿತು. ಈ ಚೀಟಿಯಲ್ಲಿ ಪೃಥ್ವಿ ಥಿಯೆಟರ್‌ (1945-1995) ಲಾಂಛನ, ಹಾಗೂ ಅದರ ಸಂಸ್ಥಾಪಕ ಪೃಥ್ವಿರಾಜ್‌ ಕಪೂರ್‌ ಚಿತ್ರವನ್ನು ಮುದ್ರಿಸಲಾಗಿತ್ತು. ಹಿಂದಿ ರಂಗಮಂದಿರದಲ್ಲಿ ಅವರ ಜೀವಮಾನ ಮತ್ತು ಅದರಿಂದಾಚೆ ಗಳಿಸಿದ್ದ ಅಪಾರ ಖ್ಯಾತಿಯಿಂದಾಗಿ,[೧೫] ಅವರ ಹೆಸರನ್ನು ಚೀಟಿಯ ಮೇಲೆ ನಮೂದಿಸಿರಲಿಲ್ಲ. ಮೊದಲ ದಿನದ ರಕ್ಷಾಕವಚದಲ್ಲಿ (1995ರ ಜನವರಿ 15ರಂದು ಮುದ್ರೆಯೊತ್ತಿದ್ದು) ಪೃಥ್ವಿ ಥಿಯೆಟರ್‌ ತನ್ನ ಹದಿನಾರನೆಯ ವರ್ಷದಲ್ಲಿ, ಸಂಚಾರಿ ನಾಟಕ ತಂಡದ ಚಿತ್ರ, ಸಂಚಾರಿ ತಂಡಕ್ಕೆ ಸರಿಹೊಂದುವಂತಹ ವೇದಿಕೆ ಸೇರಿದಂತೆ, 1960ರ ತನಕದ ಇತಿಹಾಸವನ್ನು ಚಿತ್ರಸಮೂಹದ ಮೂಲಕ ನಮೂದಿಸಲಾಗಿತ್ತು.[೧೩]

ನಂತರದ ವರ್ಷಗಳು[ಬದಲಾಯಿಸಿ]

ಈ ಕಾಲದಲ್ಲಿ ಅವರ ಚಲನಚಿತ್ರ ಪಾತ್ರಗಳಲ್ಲಿ ಮುಘಲ್‌-ಎ-ಆಜಮ್‌ (1960) ಚಲನಚಿತ್ರದಲ್ಲಿ, ಮುಘಲ್‌ ಚಕ್ರವರ್ತಿ ಅಕ್ಬರ್‌ ಪಾತ್ರಧಾರಿಯಾಗಿ ಅಮೋಘ ನಟನೆ ಮಾಡಿದರು, ಹರಿಶ್ಚಂದ್ರ ತಾರಾಮತಿ (1963) ಚಲನಚಿತ್ರದಲ್ಲಿ ಅವರು ಪ್ರಧಾನ (ಹರಿಶ್ಚಂದ್ರ) ಪಾತ್ರ ನಿರ್ವಹಿಸಿದರು. 1965ರಲ್ಲಿ ಬಿಡುಗಡೆಯಾದ ಸಿಕಂದರ್‌-ಎ-ಆಜಮ್‌ ಚಲನಚಿತ್ರದಲ್ಲಿ ಪೌರವ ಪಾತ್ರ ನಿರ್ವಹಿಸಿದರು. 1971ರಲ್ಲಿ ಬಿಡುಗಡೆಯಾದ ಕಲ್‌ ಆಜ್‌ ಔರ್‌ ಕಲ್‌ ಚಲನಚಿತ್ರದಲ್ಲಿ ಪುತ್ರ ರಾಜ್‌ ಕಪೂರ್‌ ಹಾಗೂ ಪುತ್ರ ರಣಧೀರ್‌ ಕಪೂರ್‌ ಒಡನೆ ನಟಿಸಿ, ಸಿಂಹ ಕಂಠದ ಪಿತಾಮಹನ ಪಾತ್ರ ನಿರ್ವಹಿಸಿದರು.

1969ರಲ್ಲಿ ನಾನಕ್‌ ನಾಮ್‌ ಜಹಾಝ್ ಹೈ ಎಂಬ ಧಾರ್ಮಿಕ ಕಥಾಹಂದರವುಳ್ಳ ಅದ್ದೂರಿ ಪಂಜಾಬಿ ಚಲನಚಿತ್ರದಲ್ಲಿ ಪೃಥ್ವಿರಾಜ್‌ ಕಪೂರ್‌ ನಟಿಸಿದರು. ಈ ಚಲನಚಿತ್ರವು ಪಂಜಾಬ್‌ನಲ್ಲಿ ಅದೆಷ್ಟು ಖ್ಯಾತಿ ಮತ್ತು ಜನಪ್ರಿಯತೆ ಗಳಿಸಿತೆಂದರೆ, ಈ ಚಲನಚಿತ್ರಕ್ಕಾಗಿ ಟಿಕೆಟ್‌ಗಳನ್ನು ಕೊಳ್ಳಲು ಹಲವು ಕಿಲೋಮೀಟರ್‌ಗಳು ಉದ್ದನೆಯ ಪ್ರೇಕ್ಷಕರ ಸಾಲುಗಳು ಕಂಡುಬಂದಿದ್ದವು.

1970ರಲ್ಲಿ ಬಿಡುಗಡೆಯಾದ 'ನಾನಕ್‌ ದುಖಿಯಾ ಸಬ್‌ ಸನ್ಸಾರ್'‌ ಹಾಗೂ 1972ರಲ್ಲಿ ಬಿಡುಗಡೆಯಾದ ಮೇಲೇ ಮಿತ್ರನ್‌ ದೇ ಪೃಥ್ವಿರಾಜ್‌ ಕಪೂರ್ ನಟಿಸಿದ ಪಂಜಾಬಿ ಚಲನಚಿತ್ರಗಳು.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

1954ರಲ್ಲಿ, ಅವರಿಗೆ ಸಂಗೀತ್‌ ನಾಟಕ್‌ ಅಕಾಡೆಮಿ ಫೆಲೊಷಿಪ್‌ ಹಾಗೂ 1969ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ್ ಪ್ರಶಸ್ತಿ ಲಭಿಸಿತು. ಅವರು ಎಂಟು ವರ್ಷಗಳ ಕಾಲ ನಾಮನಿರ್ದೇಶಿತ ರಾಜ್ಯ ಸಭೆ ಸದಸ್ಯರಾಗಿದ್ದರು.[೧೧]

1972ರಲ್ಲಿ ಅವರು ನಿಧನರಾದ ಬಳಿಕ, ಅವರಿಗೆ 1971ರ ವರ್ಷಕ್ಕಾಗಿ ದಾದಾಸಾಹೆಬ್‌ ಫಾಲ್ಕೆ ಪ್ರಶಸ್ತಿಯ ಗರಿಯನ್ನು ಮರಣೋತ್ತರವಾಗಿ ನೀಡಲಾಯಿತು. ಭಾರತೀಯ ಚಲನಚಿತ್ರರಂಗದಲ್ಲಿ ಅತಿ ಪ್ರತಿಷ್ಠಿತವಾದ ಈ ಪ್ರಶಸ್ತಿ ಪುರಸ್ಕೃತರಾಗಲು‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಮೂರನೆಯವರಾಗಿದ್ದರು.

ಪರಂಪರೆ[ಬದಲಾಯಿಸಿ]

ಪೃಥ್ವಿರಾಜ್‌ ಕಪೂರ್‌ರ ವಂಶಸ್ಥರು ಹಿಂದಿ ಚಲನಚಿತ್ರಕ್ಕಾಗಿ ಬಹಳ ಸಮೃದ್ಧವಾದ ಕೊಡುಗೆ ನೀಡಿದ್ದಾರೆ. ಇದರಿಂದಾಗಿ, ಅವರನ್ನು ಹಿಂದಿ ಚಲನಚಿತ್ರದ ಮೊಟ್ಟಮೊದಲ ಕುಟುಂಬದ ಪಿತಾಮಹರು ಎನ್ನಲಾಗಿದೆ. ಇವರ ಮೂವರೂ ಪುತ್ರರು ಬಹಳಷ್ಟು ಜನಪ್ರಿಯ ನಟ-ನಿಮಾಪಕ-ನಿರ್ದೇಶಕರಾದರು. ಇವರ ಸೊಸೆಯಂದಿರಲ್ಲಿ ಇಬ್ಬರು ಇದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದರು. ರಣಧೀರ್‌ ಕಪೂರ್‌, ಋಷಿ ಕಪೂರ್‌, ರಾಜೀವ್ ಕಪೂರ್‌, ಕರಣ್‌ ಕಪೂರ್‌, ಕುನಾಲ್‌ ಕಪೂರ್‌ ಹಾಗೂ ಮೊಮ್ಮಗಳು ಸಂಜನಾ ಕಪೂರ್‌ ಸೇರಿದಂತೆ, ಬಹುಶಃ ಎಲ್ಲಾ ಮೊಮ್ಮಕ್ಕಳೂ ಚಲನಚಿತ್ರ ಕ್ಷೇತ್ರಗಳಲ್ಲಿ ನಟರಾಗಿ ಅಥವಾ ಚಲನಚಿತ್ರ ನಿರ್ಮಾಪಕ-ನಿರ್ದೇಶಕರಾಗಿ, ಅಥವಾ ನಟನೆ-ನಿರ್ದೇಶನ ಎರಡನ್ನೂ ಮಾಡಿದ್ದಾರೆ. ಇಂದಿನ ಪ್ರಮುಖ ನಟಿಯರಾಗಿರುವ ಕರಿಷ್ಮಾ ಕಪೂರ್‌ ಮತ್ತು ಕರೀನಾ ಕಪೂರ್‌, ಪೃಥ್ವಿರಾಜ್‌ರ ಜ್ಯೇಷ್ಠಪುತ್ರ ರಾಜ್‌ ಕಪೂರ್‌ರ ಮೊಮ್ಮಕ್ಕಳು. ಪೃಥ್ವಿರಾಜ್‌ರ ಮೊಮ್ಮಗ ಋಷಿ ಕಪೂರ್‌‌ರ ಪುತ್ರ ರಣಬೀರ್‌ ಕಪೂರ್, ಈ ವಂಶದಲ್ಲಿ ನಾಲ್ಕನೆಯ ತಲೆಮಾರಿನ ಮುಖ್ಯ ನಟರಾಗಿದ್ದಾರೆ. 2007ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಸಾವರಿಯಾ ಇವರ ಮೊದಲ ಚಲನಚಿತ್ರವಾಗಿತ್ತು.‌

ವೈಯಕ್ತಿಕ ಜೀವನ[ಬದಲಾಯಿಸಿ]

ಆ ಕಾಲದಲ್ಲಿ ರೂಢಿಯಿದ್ದಂತೆ, ಪೃಥ್ವಿರಾಜ್‌ ಕಿರಿಯ ವಯಸ್ಸಿನಲ್ಲೇ ವಿವಾಹವಾದರು. ತಮ್ಮ 18ನೆಯ ವಯಸ್ಸಿನಲ್ಲಿ, ಉಭಯ ಕುಟುಂಬಗಳು ಆಯೋಜಿಸಿದ ನಿಶ್ಚಿತಾರ್ಥದಲ್ಲಿ, ಪೃಥ್ವಿರಾಜ್‌ 15 ವರ್ಷ ವಯಸ್ಸಿನ ರಾಮ್ಸರಣಿ ಮೆಹ್ರಾರನ್ನು ವಿವಾಹವಾದರು. ಜ್ಯೇಷ್ಠ ಪುತ್ರ ರಾಜ್‌ ಕಪೂರ್‌, 1924ರ ಡಿಸೆಂಬರ್‌ 14ರಂದು ಜನಿಸಿದರು. 1928ರಲ್ಲಿ ಪೃಥ್ವಿರಾಜ್‌ ಮುಂಬಯಿಗೆ ಸ್ಥಳಾಂತರಗೊಂಡಾಗ, ಅವರಿಗೆ ಮೂವರು ಮಕ್ಕಳಾಗಿದ್ದರು. 1930ರಲ್ಲಿ ರಾಮ್ಸರಣಿ ಮುಂಬಯಿಗೆ ಬಂದು ಪೃಥ್ವಿರಾಜ್‌ರೊಂದಿಗೆ ಜೀವನ ನಡೆಸಿದರು. ತರುವಾಯ ವರ್ಷ, ರಾಮ್ಸರಣಿ ನಾಲ್ಕನೆಯ ಬಾರಿ ಗರ್ಭಿಣಿಯಾದಾಗ, ಒಂದು ವಾರದಲ್ಲಿ ಮೂವರು ಮಕ್ಕಳಲ್ಲಿ ಇಬ್ಬರ ಮರಣದಿಂದಾಗಿ ಪೃಥ್ವಿರಾಜ್‌-ರಾಮ್ಸರಣಿ ಜೋಡಿಗೆ ಆಘಾತವಾಗಿತ್ತು.[೧೬] ದೇವಿ ಎಂಬ ಪುತ್ರಿ ದುಪ್ಪಟ್ಟು ಶ್ವಾಸಕೋಶದ ಉರಿಯೂತ ರೋಗ(ನ್ಯೂಮೊನಿಯಾ)ದಿಂದ ಮೃತಳಾದಳು; ಇನ್ನೊಬ್ಬ ಮಗ ನಂದಿ, ವಿಚಿತ್ರವಾದ ಘಟನೆಯೊಂದರಲ್ಲಿ, ಮನೆಯಂಗಳದಲ್ಲಿ ಅಲ್ಲಿಲ್ಲಿ ಬಿದ್ದಿದ್ದ ಕೆಲವು ಇಲಿ-ಪಾಷಾಣ ಬಿಲ್ಲೆಗಳನ್ನು ನುಂಗಿ ಮೃತನಾದ. ಪೃಥ್ವಿರಾಜ್ ಕಪೂರ್‌ ಹಿಂದಿ ಚಲನಚಿತ್ರ ನಿರ್ಮಾಪಕ ಹಾಗೂ ಖ್ಯಾತ ನಟ ಅನಿಲ್‌ ಕಪೂರ್‌ರ ತಂದೆ ಸುರಿಂದರ್‌ ಕಪೂರ್‌ರ ಸಹೋದರ ಸಂಬಂಧಿ.

ಪೃಥ್ವಿರಾಜ್‌-ರಾಮ್ಸರಣಿ ಜೋಡಿಗೆ ಇನ್ನೂ ನಾಲ್ವರು ಮಕ್ಕಳಾದರು. ಬದುಕುಳಿದ ಮೂವರೂ ಮಕ್ಕಳಾದ ರಾಜ್‌ ಕಪೂರ್‌, ಶಮ್ಮಿ ಕಪೂರ್‌ ಮತ್ತು ಶಶಿ ಕಪೂರ್‌ ಮುಂದೆ ಖ್ಯಾತ ಚಲನಚಿತ್ರ ನಟ-ನಿರ್ಮಾಪಕ-ನಿರ್ದೇಶಕರಾಗಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದರು. ಉರ್ಮಿಲಾ ಸಿಯಾಲ್‌ ಎಂಬ ಒಬ್ಬ ಪುತ್ರಿಯೂ ಇದ್ದಳು.

ನಿವೃತ್ತರಾದ ಮೇಲೆ, ಪೃಥ್ವಿರಾಜ್‌ ಮುಂಬಯಿಯ ಜುಹು ಕಡಲತೀರದ ಸಮೀಪ ಒಂದು ತೋಟದ ಮನೆಯಲ್ಲಿ ವಾಸಿಸತೊಡಗಿದರು. ಈ ಸ್ವತ್ತನ್ನು ಆನಂತರ, ಪೃಥ್ವಿ ಥಿಯೇಟರ್‌ ಎಂಬ ಸಣ್ಣ, ಪ್ರಾಯೋಗಿಕ ರಂಗಮಂದಿರವನ್ನಾಗಿ ಮಾರ್ಪಾಡು ಮಾಡಲಾಯಿತು. ತಮ್ಮ ಇಳಿವಯಸ್ಸಿನಲ್ಲಿ ಪೃಥ್ವಿರಾಜ್‌ ಮತ್ತು ರಾಮ್ಸರಣಿ ಇಬ್ಬರಿಗೂ ಅರ್ಬುದರೋಗದಿಂದಾಗಿ, ಹದಿನೈದು ದಿನಗಳ ಕಾಲಾವಧಿಯಲ್ಲಿಯೇ ಇಬ್ಬರೂ ನಿಧನರಾದರು. ಪೃಥ್ವಿರಾಜ್‌ 1972ರ ಮೇ 29ರಂದು ಹಾಗೂ ಅವರ ಪತ್ನಿ ರಾಮ್ಸರಣಿ ಅದೇ ವರ್ಷ ಜೂನ್‌ 14ರಂದು ನಿಧನರಾದರು.

ತಯಾರಾದ ಆಯ್ದ ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

  • ಆಲಮ್‌ ಆರಾ (1931)
  • ವಿದ್ಯಾಪತಿ (1937)
  • ಸಿಕಂದರ್‌ (1941)
  • ಇಶಾರಾ (1943)
  • ಆವಾರಾ (1951)
  • ಆನಂದ್‌ ಮಠ್‌ (1952)
  • ಪರ್ದೇಸಿ
  • ಮುಘಲ್‌-ಎ-ಆಝಮ್‌ (1960)
  • ಜಿಂದಗಿ (1964)
  • ಡಾಕೂ ಮಂಗಲ್‌ ಸಿಂಗ್‌ (1966)
  • ನಾನಕ್‌ ನಾಮ್‌ ಜಹಾಝ್‌ ಹೈ (1969)
  • ಹೀರ್‌ ರಾಂಝಾ (1970)
  • ಕಲ್‌ ಆಜ್‌ ಔರ್‌ ಕಲ್‌ (1971)
  • ಸಾಕ್ಷಾತ್ಕಾರ - (ಕನ್ನಡ) (1971)

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಶಶಿ ಕಪೂರ್‌ ಪ್ರೆಸೆಂಟ್ಸ್‌ ದಿ ಪೃಥ್ವಿವಾಲಾಸ್‌ , ಲೇಖಕರು: ಶಶಿ ಕಪೂರ್‌, ದೀಪಾ ಗಹ್ಲೋತ್‌, ಪೃಥ್ವಿ ಥಿಯೆಟರ್‌ (ಮುಂಬಯಿ, ಭಾರತ).
ರೊಲಿ ಬುಕ್ಸ್‌, 2004. ISBN 8174363483.
  • ದಿ ಕಪೂರ್ಸ್‌: ದಿ ಫರ್ಸ್ಟ್‌ ಫ್ಯಾಮಿಲಿ ಆಫ್‌ ಇಂಡಿಯನ್ ಸಿನೆಮಾ , ಲೇಖಕರು: ಮಧು ಜೈನ್‌. ಪೆಂಗ್ವಿನ್‌, ವೈಕಿಂಗ್‌, 2005. ISBN 0670058378.

ಟಿಪ್ಪಣಿಗಳು[ಬದಲಾಯಿಸಿ]

  1. "ಪೃಥ್ವಿರಾಜ್‌ ಕಪೂರ್‌ ಮೂಲ ಪುಟ ಮತ್ತು ಛಾಯಾಚಿತ್ರ ಸಂಪುಟ". Archived from the original on 2013-09-27. Retrieved 2011-01-11.
  2. ೨.೦ ೨.೧ ಪೃಥ್ವಿರಾಜ್‌, ಮೈ ಫಾದರ್‌ ಲೇಖಕರು: ಶಂಷೇರ್‌ರಾಜ್‌ (ಶಮ್ಮಿ) ಕಪೂರ್‌
  3. Indian theatre: traditions of performance. University of Hawaii. Retrieved 2007-11-03.
  4. Shashi Kapoor presents the Prithviwallahs. Roli Books. Retrieved 2007-11-03.
  5. ೫.೦ ೫.೧ "Bollywood's First Family". Rediff. Retrieved 2007-09-08.
  6. "Prithviraj Kapoor: A centenary tribute". Daily Times / University of Stockholm. Archived from the original on 2009-05-05. Retrieved 2007-11-03.
  7. "ದಿ ಹಿಂದೂ: ಮ್ಯಾಡ್‌ ಎಬೌಟ್‌ ಥಿಯೆಟರ್‌". Archived from the original on 2008-01-18. Retrieved 2011-01-11.
  8. ರೆಡಿಫ್‌: ಬಾಲಿವುಡ್ಸ್‌ ಫರ್ಸ್ಟ್‌ ಫ್ಯಾಮಿಲಿ
  9. ಡೇಯ್ಲಿ ಟೈಮ್ಸ್‌: ಪೇಷಾವರೈಟ್ಸ್‌ ಸ್ಟಿಲ್‌ ರಿಮೆಂಬರ್‌ ದಿ ಕಪೂರ್‌ ಫ್ಯಾಮಿಲಿ
  10. ೧೦.೦ ೧೦.೧ ಕಿಸ್ಸಿಂಗ್‌ ದಿ ಫರ್ಮಾಮೆಂಟ್‌ ವಿತ್‌ ಪೃಥ್ವಿ ಥಿಯೆಟರ್‌ Archived 2005-01-25 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದೂ 22 ನವೆಂಬರ್‌ 2004.
  11. ೧೧.೦ ೧೧.೧ ಟ್ರಿಬ್ಯೂಟ್‌ ಟು ಪೃಥ್ವಿರಾಜ್‌ ಕಪೂರ್‌ (1906-1972) Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಅಂತರಜಾಲತಾಣ.
  12. ಐಎಂಡಿಬಿಯಲ್ಲಿ ಪೃಥ್ವಿರಾಜ್‌ರ ಜೀವನಚರಿತ್ರೆ
  13. ೧೩.೦ ೧೩.೧ ಭಾರತ: ಪೃಥ್ವಿ ಥಿಯೆಟರ್‌
  14. ಪೃಥ್ವಿ ಥಿಯೆಟರ್‌ ಅಂಚೆಚೀಟಿ ಭಾರತೀಯ ಅಂಚೆ .
  15. ಜೀನ್ಸ್‌ ಅಂಡ್‌ ಜೀನಿಯಸ್‌ ದಿ ಬುಕ್‌ ಈ ವೋಂಟ್‌ ಬಿ ರೈಟಿಂಗ್‌ ಅಂಡ್‌ ಅದರ್‌ ಎಸ್ಸೆಸ್‌ ಲೇಖಕರು ಎಚ್‌. ವೈ. ಶಾರದಾ ಪ್ರಸಾದ್‌, ಒರಿಯೆಂಟ್‌ ಲಾಂಗ್ಮನ್ಸ್‌, 2003. ISBN 8180280020 ಪುಟ 300.
  16. ರಾಮ್ಸರಣಿ ದೇವಿ ಕಪೂರ್‌

ಉಲ್ಲೇಖಗಳು[ಬದಲಾಯಿಸಿ]