ಸತ್ಯಜಿತ್ ರೇ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸತ್ಯಜಿತ್ ರೇ
ಸತ್ಯಜಿತ್ ರೇ ಅವರ ವರ್ಣಕಲಾ ಚಿತ್ರ
ಜನನಮೇ ೨, ೧೯೨೧
ಕಲ್ಕತ್ತಾ
ಮರಣಏಪ್ರಿಲ್ ೨೩, ೧೯೯೨
ಕಲ್ಕತ್ತಾ
ಉದ್ಯೋಗಚಿತ್ರ ನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆಗಾರರು, ಬರಹಗಾರರು, ಸಂಗೀತ ನಿರ್ದೇಶಕರು, ಗೀತ ರಚನಕಾರರು
ಸಕ್ರಿಯ ವರ್ಷಗಳು೧೯೫೦–೧೯೯೨

ಸತ್ಯಜಿತ್ ರೇ (ಮೇ ೨, ೧೯೨೧ - ಏಪ್ರಿಲ್ ೨೩, ೧೯೯೨) ಪ್ರಸಿದ್ಧ ಬ೦ಗಾಳಿ ಚಿತ್ರ ನಿರ್ದೇಶಕರು, ಮತ್ತು ಭಾರತೀಯ ಚಿತ್ರರ೦ಗದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಪಥೇರ್ ಪಾ೦ಚಾಲಿ, ಅಪರಾಜಿತೊ ಮತ್ತು ಅಪ್ಪುವಿನ ಪ್ರಪ೦ಚ - ಈ ಮೂರು ಚಿತ್ರಗಳ ಸರಣಿ ಇವರ ಅತಿ ಪ್ರಸಿದ್ಧ ಚಿತ್ರಗಳನ್ನು ಒಳಗೊ೦ಡಿದೆ. ಅಕಿರಾ ಕುರೋಸಾವಾ, ಸ್ಟೀವನ್ ಸ್ಪೀಲ್‍ಬರ್ಗ್, ಮಾರ್ಟಿನ್ ಸೋರ್ಸೆಸಿ ಮೊದಲಾದ ಅನೇಕ ಹೆಸರಾ೦ತ ನಿರ್ದೇಶಕರು ಸತ್ಯಜಿತ್ ರೇ ಅವರ ಚಿತ್ರಗಳನ್ನು ಮೆಚ್ಚಿಕೊ೦ಡಿರುವುದು೦ಟು.

ಶಿಕ್ಷಣ ಮತ್ತು ಆಸಕ್ತಿಗಳು[ಬದಲಾಯಿಸಿ]

ವಿಶ್ವ ಚಲನಚಿತ್ರರಂಗದ ಮಹಾನ್ ದಿಗ್ದರ್ಶಕರಲ್ಲೊಬ್ಬರರಾದ ಭಾರತರತ್ನ ಸತ್ಯಜಿತ್ ರೇ ಅವರು ಕಲ್ಕತ್ತೆಯಲ್ಲಿ ಮೇ ೨, ೧೯೨೧ರ ವರ್ಷದಲ್ಲಿ ಜನಿಸಿದರು. ಕಲ್ಕತ್ತೆಯ ವಿಶ್ವವಿದ್ಯಾಲಯದಲ್ಲಿ ಓದಿದ ನಂತರದಲ್ಲಿ ರವೀಂದ್ರನಾಥ ಠಾಕೂರರ ಶಾಂತಿನಿಕೇತನದಲ್ಲಿ ಕಲೆಯನ್ನು ಅಭ್ಯಸಿಸಿದ ಸತ್ಯಜಿತ್ ರೇ ಅವರಿಗೆ ಚಿಕ್ಕಂದಿನಿಂದ ಚಿತ್ರರಂಗದ ಆಳಗಳನ್ನು ಅರಿಯುವುದು ಮತ್ತು ವಿಶ್ವಪ್ರಸಿದ್ಧ ಸಂಗೀತವನ್ನು ಕೇಳುವುದು ಪ್ರಮುಖ ಆಸಕ್ತಿಯಾವಾಗಿತ್ತು.

ಬಹುಮುಖ ಪ್ರತಿಭೆ[ಬದಲಾಯಿಸಿ]

ಸತ್ಯಜಿತ್ ರೇ ಅವರು ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಕಥೆಗಾರ ಮಾತು ಕಲಾ ವಿನ್ಯಾಸಕ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆ. ಎಷ್ಟರ ಮಟ್ಟಿಗೆ ಅವರು ಸ್ವಾವಲಂಬಿ ಎಂದರೆ ಪೋಸ್ಟರುಗಳನ್ನು ಕೂಡಾ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಅಕ್ಷರಗಳ ಅಚ್ಚುವಿನ್ಯಾಸವನ್ನು ಕೂಡಾ ತಾವೇ ಮಾಡಿಕೊಳ್ಳುತ್ತಿದ್ದರು. ತಮ್ಮ ತಾತ ಉಪೇಂದ್ರ ಕಿಶೋರ್ ರೇ ಅವರು ಬಂಗಾಳಿಯಲ್ಲಿ ಮಕ್ಕಳಿಗಾಗಿ ಅವರ ಕಾಲದಲ್ಲಿ ನಡೆಸುತ್ತಿದ್ದ ಸಂದೇಶ್ ಎಂಬ ಪತ್ರಿಕೆಯನ್ನು ೧೯೬೧ರ ವರ್ಷದಲ್ಲಿ ಪುನಃಶ್ಚೇತನಗೊಳಿಸಿದರು.

ಆರಡಿ ನಾಲ್ಕಂಗುಲ ಎತ್ತರದ ಈ ಆಜಾನುಬಾಹು ವಿಶ್ವ ಚಲನಚಿತ್ರರಂಗದಲ್ಲಿ ಕೂಡಾ ಗೋಪುರ ಸದೃಶ ವ್ಯಕ್ತಿತ್ವವೇ ಆಗಿದ್ದರು. ೧೯೪೭ರಲ್ಲಿ ಕಲ್ಕತ್ತೆಯ ಪ್ರಥಮ ಚಲನಚಿತ್ರ ಸೊಸೈಟಿಯನ್ನು ನಿರ್ಮಿಸಿದ ಕೀರ್ತಿ ಅವರದು. ರವೀಂದ್ರರ ನಿಧನಾನಂತರದಲ್ಲಿ ಶಾಂತಿನಿಕೇತನದಿಂದ ಹೊರಬಂದ ಸತ್ಯಜಿತ್ ರೇ ೧೯೪೩ ರಿಂದ ೧೯೫೬ರ ಅವಧಿಯಲ್ಲಿ ವೃತ್ತಿಪರ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಚಲನಚಿತ್ರ ಲೋಕದಲ್ಲಿ[ಬದಲಾಯಿಸಿ]

ಖಾಸಗಿ ಜಾಹಿರಾತು ಸಂಸ್ಥೆಯೊಂದರ ಉದ್ಯೋಗಿಯಾಗಿದ್ದುಕೊಂಡೇ ೧೯೫೫ರ ವರ್ಷದಲ್ಲಿ ‘ಪಥೇರ್ ಪಂಚಾಲಿ’ ಚಿತ್ರವನ್ನು ಸೃಜಿಸಿದರು. ಹಾಗೆಂದರೆ ‘ಸಣ್ಣ ಹಾದಿಯ ಹಾಡು’ ಎಂದರ್ಥ. ಈ ಚಿತ್ರದ ಅಪಾರ ಯಶಸ್ಸಿನ ಜೊತೆಗೆ ಕೇನ್ಸ್ ಅಂತರರಾಷ್ಟ್ರೀಯ ಉತ್ಸವದಲ್ಲಿ ಆ ಚಿತ್ರ ಪ್ರತಿಷ್ಟಿತ ‘ಗ್ರಾಂಡ್ ಪ್ರಿಕ್ಸ್’ ಗೌರವವನ್ನು ಗಳಿಸಿತು. ಪಥೇರ್ ಪಂಚಾಲಿ ಚಿತ್ರದೊಂದಿಗೆ ಅಪರಾಜಿತೋ (ಅಪರಾಜಿತ) ಮತ್ತು ಅಪೂರ್ ಸಂಸಾರ್ (‘ಅಪು’ವಿನ ಪರಿವಾರ) ಚಿತ್ರಗಳು ಸೇರಿ ‘ಅಪು ತ್ರಿವಳಿಗಳು’ ಎಂದು ವಿಶ್ವಪ್ರಸಿದ್ಧಿ ಪಡೆದಿವೆ.

ಜಲ್ಸಾ ಘರ್( ಸಂಗೀತದ ಮನೆ), ದೇವಿ, ತೀನ್ ಕನ್ಯಾ, ಚಾರುಲತ (ಒಂಟಿ ಪತ್ನಿ), ನಾಯಕ್, ಅಸನಿ ಸಂಕೇತ್ (ದೂರದ ಬಿರುಗಾಳಿ), ಶತ್ರಂಜ್ ಖಿ ಖಿಲಾರಿ (ಚದುರಂಗದಾಟಗಾರರು), ಘರೇ ಬಜ್ರೆ (ಮನೆ ಮತ್ತು ಪ್ರಪಂಚ), ಗಣಶತ್ರು (ಜನಗಳ ಶತ್ರು), ಶಾಖಾ ಪ್ರಶಾಖಾ (ಶಾಖೆ ಮತ್ತು ಉಪಶಾಖೆಗಳು) ಮತ್ತು ಆಗಂತುಕ್ ಮುಂತಾದವು ಅವರ ಮುಂಬಂದ ಚಿತ್ರಗಳು.

ಅಂತಃಸತ್ವ[ಬದಲಾಯಿಸಿ]

“ಯಾವುದು ಗುರುತಿಸಲ್ಪಡುವುದಿಲ್ಲವೋ ಅದೇ ಶ್ರೇಷ್ಠ ತಂತ್ರಜ್ಞಾನ” ಎಂಬುದು ಅವರ ಮೂರೂವರೆ ದಶಕದ ಚಿತ್ರರಂಗದ ಬದುಕಿನ ಅಚಲ ನಿಲುಮೆಯಾಗಿತ್ತು. ತಂತ್ರಜ್ಞಾನ ಎಂಬುದು ದಾರಿಯನ್ನು ಕ್ರಮಿಸಲಿಕ್ಕೆ ಬೇಕಿರುವ ಸಾಧನವಷ್ಟೆ. ಅಂತಃಸತ್ವವಿಲ್ಲದೆ ಕೇವಲ ವಿನ್ಯಾಸ ಶ್ರೀಮಂತಿಕೆಯ ತೋರ್ಪಡಿಕೆಗಾಗಿ ಚಿತ್ರ ನಿರ್ಮಾಣ ಮಾಡುವ ಕುರಿತು ಅವರಿಗೆ ಕಿಂಚಿತ್ತೂ ಆಸಕ್ತಿಯಿರಲಿಲ್ಲ.

1966ರ ವರ್ಷದಲ್ಲಿ ‘ನನ್ನ ಕ್ರಿಯಾಶೀಲತೆಯಲ್ಲಿನ ಕೆಲವೊಂದು ಅಂಶಗಳು’ ಎಂಬ ಕುರಿತು ಅಂಕಣವೊಂದನ್ನು ಬರೆದಿದ್ದು “ನಮ್ಮ ಚಿತ್ರಗಳು, ಅವರ ಚಿತ್ರಗಳು” ಎಂಬ ಅವರ ಪ್ರಕಟಿತ ಸಂಕಲನದಲ್ಲಿ ಅವನ್ನು ಪೋಣಿಸಿದ್ದರು.

ವಿಶ್ವಶ್ರೇಷ್ಠ ಸಾಲಿನಲ್ಲಿ[ಬದಲಾಯಿಸಿ]

ವಿಶ್ವದ ಸಾರ್ವಕಾಲಿಕ ಶ್ರೇಷ್ಠರೆಂದು ಗುರುತಿಸಲ್ಪಡುವ ಸುಮಾರು ಹತ್ತು ಹನ್ನೆರಡು ಪ್ರಮುಖ ನಿರ್ದೇಶಕರಲ್ಲಿ ಪ್ರತಿಷ್ಠರಾಗಿರುವ ಸತ್ಯಜಿತ್ ರೇ ಅವರು ತಮ್ಮ ಚಿತ್ರಗಳಲ್ಲಿ ಮಾನವೀಯ ಸಂವೇದನೆಗಳ ಒಳನೋಟಗಳಿಗೆ ಅತ್ಯಂತ ಮಹತ್ವ ನೀಡಿದರು. ಅವರು ಚಿತ್ರಗಳನ್ನು ಮಾಡಿದ್ದು ಬಂಗಾಳಿಯಲ್ಲಿ ಮಾತ್ರ. ಆದರೂ ಅವು ವಿಶ್ವಮಟ್ಟದ ಆಸಕ್ತಿಯನ್ನು ಸೃಜಿಸುವುದರಲ್ಲಿ ಅತ್ಯಂತ ಯಶಸ್ವಿಯಾಗಿದ್ದವು. ಕಾರಣ ಅವು ಭಾಷೆಗೆ ಮಿಗಿಲಾದ ಮನುಷ್ಯ ಜೀವನ, ಅದರಲ್ಲಿನ ಸಂಬಂಧಗಳು, ಅನುಬಂಧಗಳು, ಭಾವುಕತೆಗಳು, ಬದುಕಿಗಾಗಿನ ಹೋರಾಟಗಳು, ದ್ವಂದ್ವಗಳು, ಸಂತಸ ಮತ್ತು ದುಃಖಗಳನ್ನು ಸಮಗ್ರವಾಗಿ ಕಟ್ಟಿಕೊಡುವಂತಹವಾಗಿದ್ದವು.

ವಿಶ್ವಶ್ರೇಷ್ಠರ ಗೌರವ[ಬದಲಾಯಿಸಿ]

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಚಿತ್ರ ನಿರ್ದೇಶಕರ ಸಾಲಿನಲ್ಲಿ ಪ್ರಮುಖರಾದ ಅಕಿರಾ ಕುರಸೋವ ಹೇಳುತ್ತಾರೆ “ಮಾನವಜೀವನದ ಕುರಿತಾದ ಅತ್ಯಂತ ಪ್ರಶಾಂತ, ಆಳವಾದ ಒಳನೋಟ ಮತ್ತು ಪ್ರೇಮವನ್ನು ಹೊರಸೂಸುವ ಅಂಶಗಳು ಸತ್ಯಜಿತ್ ರೇ ಅವರ ಎಲ್ಲ ಚಿತ್ರಗಳ ವೈಶಿಷ್ಟ್ಯವಾಗಿದ್ದು ಅವು ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ” ಎಂದು.

ವಿಶ್ವದ ಪ್ರತಿಷ್ಟಿತ ಚಿತ್ರ ನಿರ್ದೇಶಕರಲ್ಲೊಬ್ಬರಾದ ಮಾರ್ಟಿನ್ ಸ್ಕೊರ್ಸೆಸೆ ಅವರು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಸತ್ಯಜಿತ್ ರೇ ಕುರಿತು 2002ನೆ ವರ್ಷದಲ್ಲಿ ಬರೆದಿರುವ ಈ ಗೌರವಯುತ ಮಾತುಗಳು ಸತ್ಯಜಿತ್ ರೇ ಅವರ ಬಗೆಗಿನ ಸಂಪೂರ್ಣ ತಿಳುವಳಿಕೆಗೆ ಸಮಗ್ರ ಸಾರಾಂಶದಂತಿವೆ. “ಸತ್ಯಜಿತ್ ರೇ ಸಿನಿಮಾ ಮಾಡಿದಾಗ ಕೆಲವೊಂದು ಗಳಿಗೆಗಳು ನಿಮಗೇನೂ ಅರ್ಥವಾಗುವುದಿಲ್ಲ ಎಂಬ ಅಪರಿಚಿತ ವಾತಾವರಣವನ್ನು ಹುಟ್ಟಿಸಿಬಿಡುತ್ತವೆ ಕಾರಣ ಅವರು ಹೇಳುವ ಸಂಸ್ಕೃತಿ ಅತ್ಯಂತ ಸಂಕೀರ್ಣವಾದದ್ದು. ಆದರೆ ಕೆಲವೇ ಕ್ಷಣಗಳಲ್ಲಿ ಅಲ್ಲಿನ ವ್ಯಕ್ತಿಗಳು ನಿಮಗೆ ಹತ್ತಿರವಾಗುತ್ತಾ ಹೋಗುತ್ತಾರೆ ಜೊತೆಗೆ ಅವರ ಸಂಸ್ಕೃತಿಯನ್ನು ಕೂಡಾ ನಿಮಗೆ ರುಚಿಸುವಂತೆ ಹತ್ತಿರವಾಗಿಸುತ್ತಾರೆ. ಅವರು ಮಾತನಾಡುವ ವಿಷಯ ನಿಮಗೆ ಅರ್ಥವಾಗಬೇಕಿಲ್ಲ. ಅವರು ತೊಡುವ ಬಟ್ಟೆಗಳ ವಿನ್ಯಾಸ ನಿಮಗೆ ವಿಚಿತ್ರವಾಗಿರಲಿಕ್ಕೆ ಸಾಕು, ಅವರ ಪದ್ದತಿಗಳು ಸಂಪೂರ್ಣ ಬೇರೆಯೇ ಇರಬಹುದು. ಆದರೆ ಸತ್ಯಜಿತ್ ರೇ ನೀಡುವ ಸಹಜ ಮಾನವೀಯ ಸಂವೇದನೆಯಲ್ಲಿ ನಿಮಗೇ ಅರಿವಿಗೆ ಬಾರದಂತೆ ಅವೆಲ್ಲಾ ಆತ್ಮೀಯವಾಗುತ್ತಾ ಹೋಗುತ್ತದೆ. ಆ ವ್ಯಕ್ತಿಗಳ ಬದುಕು ನಿಮಗೆ ಅತ್ಯಂತ ಕುತೂಹಲ ಮತ್ತು ಅಚ್ಚರಿಗಳನ್ನು ಜೊತೆ ಜೊತೆಗೆ ಸೃಷ್ಟಿಸುವಂತಹವಾಗಿದ್ದು, ನಮ್ಮಿಂದಾಚೆಗೆ ಕೂಡಾ ಸಂಸ್ಕೃತಿಗಳಿವೆ ಎಂಬುದು ತಾನೇ ತಾನಾಗಿ ಗೋಚರಿಸತೊಡಗುತ್ತದೆ”

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಸತ್ಯಜಿತ್ ರಾಯ್ ಅವರಿಗೆ ಪತ್ರಿಕೋದ್ಯಮ ಹಾಗು ಸಂಸ್ಕೃತಿಗಾಗಿ ೧೯೬೭ರಾಮನ್ ಮೆಗ್ಸಾಸೆ ಪುರಸ್ಕಾರ ಲಭಿಸಿತು. .೧೯೭೮ರ ವರ್ಷದಲ್ಲಿ ಬರ್ಲಿನ್ ಚಿತ್ರೋತ್ಸವದ ನಿರ್ವಾಹಕ ಸಮಿತಿಯು ಸತ್ಯಜಿತ್ ರೇ ಅವರನ್ನು ವಿಶ್ವದ ಮೂರು ಶ್ರೇಷ್ಠ ನಿರ್ದೇಶಕರಲ್ಲೊಬ್ಬರು ಎಂದು ಕೊಂಡಾಡಿತು. ೧೯೯೨ರ ವರ್ಷದಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಿತಿಯು ಜೀವಮಾನದ ಸಾಧನೆಯ ಗೌರವವನ್ನು ನೀಡಿತು. ಅವರಿಗೆ ಸಂದಿರುವ ಇತರ ಪ್ರಶಸ್ತಿಗಳೆಂದರೆ ಪ್ರಾನ್ಸ್ ದೇಶದ ಪ್ರತಿಷ್ಟಿತ ‘ಲೆಜೆನ್ ಡಿ ಹಾನರ್’ ಮತ್ತು ನಮ್ಮ ದೇಶದ ಚಿತ್ರರಂಗದ ಶ್ರೇಷ್ಠ ಗೌರವವಾದ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಮತ್ತು ದೇಶದ ಅತ್ಯುಚ್ಚತಮ ಗೌರವವಾದ ‘ಭಾರತರತ್ನ’ ಪ್ರಶಸ್ತಿಗಳು.

ವಿದಾಯ[ಬದಲಾಯಿಸಿ]

ಈ ಮಹಾನ್ ತಂತ್ರಜ್ಞ ಸತ್ಯಜಿತ್ ರೇ ಅವರು ಏಪ್ರಿಲ್ ೨೩, ೧೯೯೨ರಲ್ಲಿ ನಿಧನರಾದರು. ಈ ಮಹಾನ್ ಮಾನವೀಯ ಸೂಕ್ಷ್ಮಮತೆಗಳ ಆಳ ಅರಿವುಗಳ ಪ್ರಾಜ್ಞ ಮತ್ತು ಅಭಿವ್ಯಕ್ತಿಯ ಪರಮೋಚ್ಚ ಪ್ರತಿಭಾವಂತರು ನಿತ್ಯ ಸ್ಮರಣೀಯರೆನಿಸಿದ್ದಾರೆ.

ಸತ್ಯಜಿತ್ ರಾಯ್ ಅವರ ಚಲನಚಿತ್ರಗಳು[ಬದಲಾಯಿಸಿ]

  • ಪಥೇರ ಪಾಂಚಾಲಿ (೧೯೫೫)
  • ಅಪರಾಜಿತೊ (೧೯೫೬)
  • ಪರಶ್ ಪಥೇರ್ (೧೯೫೮)
  • ಜಲಸಾಘರ (೧೯೫೮)
  • ಅಪೂರ ಸಂಸಾರ (೧೯೫೯)
  • ದೇವಿ (೧೯೬೦)
  • ತೀನ್ ಕನ್ಯಾ (೧೯೬೧)
  • ಕಾಂಚನಜಂಗಾ (೧೯೬೨)
  • ಅಬಿಜನ (೧೯೬೨)
  • ಮಹಾನಗರ (೧೯೬೩)
  • ಚಾರುಲತಾ (೧೯೬೪)
  • ಕಾಪುರುಷ-ಓ-ಮಹಾಪುರುಷ (೧೯೬೫)
  • ನಾಯಕ (೧೯೬೬)
  • ಚಿಡಿಯಾಖಾನಾ (೧೯೬೭)
  • ಗೂಪಿ ಗೈನೆ, ಬಾಘಾ ಬೈನೆ (೧೯೬೮)
  • ಅರಣ್ಯೇರ್ ದಿನರಾತ್ರಿ (೧೯೬೯)
  • ಪ್ರತಿದ್ವಂದಿ (೧೯೭೦)
  • ಸೀಮಾಬದ್ಧ (೧೯೭೧)
  • ಅಶಾನಿ ಸಂಕೇತ (೧೯೭೩)
  • ಸೋನಾರ ಕೆಲ್ಲಾ (೧೯೭೪)
  • ಜನ ಅರಣ್ಯ (೧೯೭೫)
  • ಶತರಂಜ ಕೆ ಖಿಲಾಡಿ (೧೯೭೭)(ಹಿಂದಿಯಲ್ಲಿ)
  • ಜೊಯ್ ಬಾಬಾ ಫೇಲೂನಾಥ (೧೯೭೮೦
  • ಹೀರಕ ರಾಜಾರ ದೇಶೆ (೧೯೮೦)
  • ಸದ್ಗತಿ (೧೯೮೧)
  • ಘರೆ ಬೈರೆ (೧೯೮೪)
  • ಗಣಶತ್ರು (೧೯೮೯)
  • ಶಾಖಾ ಪ್ರೊಶಾಖಾ (೧೯೯೦)
  • ಆಗಂತುಕ (೧೯೯೧)

ಬಾಹ್ಯ ಸ೦ಪರ್ಕಗಳು[ಬದಲಾಯಿಸಿ]