ವಿಷಯಕ್ಕೆ ಹೋಗು

ಗುಪ್ತ ಶಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಂತಿರುವ ಭಂಗಿಯ ಬುದ್ಧ. ಗುಪ್ತ ಶಕದ "೧೫೪ ರಲ್ಲಿ ಅಭಯಮೀರನ ಉಡುಗೊರೆ" ಎಂದು ಕೆತ್ತಲಾಗಿದೆ, (ಕ್ರಿ.ಶ. 474), ಎರಡನೇ ಕುಮಾರಗುಪ್ತನ ಆಳ್ವಿಕೆಯಲ್ಲಿ. ಗುಪ್ತರ ಕಲೆ. ಸಾರ್‌ನಾಥ್ ವಸ್ತುಸಂಗ್ರಹಾಲಯ.[]

ಗುಪ್ತ ಶಕವು ಮಗಧದ ಸಾಮ್ರಾಟರಾದ ಗುಪ್ತರು ಕ್ರಿ. ಶ. 4ನೆಯ ಶತಮಾನದ ಎರಡನೆಯ ದಶಕದ ಕೊನೆಯ ವೇಳೆಗೆ ಸ್ಥಾಪಿಸಿದ ವಂಶಿಕ ಸಂವತ್ಸರ. ಇತಿಹಾಸಕಾರರ ಪರಿಭಾಷೆಯಲ್ಲಿ ಇದು ಗುಪ್ತ ಶಕ, ವಲಭೀ ಶಕ, ಗುಪ್ತ-ವಲಭೀಶಕ ಎಂಬುದಾಗಿ ಪ್ರಸಿದ್ಧವಾಗಿದೆ. ಅಸ್ಸಾಂ, ಬಂಗಾಳ ಮತ್ತು ಒರಿಸ್ಸಾ ಪ್ರಾಂತ್ಯಗಳೂ ಸೇರಿದಂತೆ ಉತ್ತರ ಭಾರತದ ಬಹುಭಾಗದಲ್ಲಿ ದೊರೆತಿರುವ, ಕ್ರಿ.ಶ. 5-10 ನೆಯ ಶತಮಾನಗಳ ಅವಧಿಯಲ್ಲಿ ಬರೆಯಲಾದ, ಗುಪ್ತರ ಹಾಗೂ ಅವರ ಸಾಮಂತರ ಹಲವು ಶಾಸನಗಳಲ್ಲಿ ಈ ಕಾಲಗಣನೆಯನ್ನು ಗುಪ್ತ ಕಾಲ, ಗುಪ್ತ ಪ್ರಕಾಲ, ಗುಪ್ತ ವರ್ಷ, ಗುಪ್ತ ಸಂವತ್, ಗುಪ್ತ ನೃಪ ರಾಜ್ಯ ಭುಕ್ತಿ, ಗೌಪ್ತಾಬ್ದ ಎಂದೂ, ಗುಜರಾತಿನ ಕಾಠಿಯಾವಾಡ ಪ್ರಾಂತ್ಯದಲ್ಲಿ ಕ್ರಿ.ಶ. 8-13ನೆಯ ಶತಮಾನಗಳ ಅವಧಿಯ ಶಾಸನಗಳಲ್ಲಿ ವಲಭೀ ಸಂವತ್ ಎಂದೂ ಹೆಸರಿಸಲಾಗಿದೆ. ಕ್ರಿ.ಶ. 11ನೆಯ ಶತಮಾನದ ಅರಬ್ಬೀ ಯಾತ್ರಿಕ ಅಲ್ ಬಿರೂನಿ ಈ ಶಕಗಣನೆಯನ್ನು ಗುಬತ ಕಾಲ ಮತ್ತು ಗುಬಿತ ಕಾಲ ಎಂದು ಹೆಸರಿಸಿದ್ದಾನೆ. ಅಲ್ಲದೆ ಗುಪ್ತ ಶಕ ಪ್ರಾರಂಭವಾದ್ದು ಶಾಲಿವಾಹನ ಶಕ ವರ್ಷ 241ರಲ್ಲಿ (ಕ್ರಿ.ಶ. 319-20ರಲ್ಲಿ) ಎಂಬುದನ್ನೂ ತಿಳಿಸುತ್ತಾನೆ. ಈ ಗುಪ್ತರ ಶಕ ಪೂರ್ಣಿಮಾಂತ ಚೈತ್ರ ಶುಕ್ಲ ಪಾಡಿವದಂದು ಆರಂಭವಾಯಿತೆಂಬ ಪ್ರತೀತಿ ಇರುವ ಕಾರಣ, ಅದು ಕ್ರಿ.ಶ. 318ರ ಡಿಸೆಂಬರ್ 20ರಂದೋ ಕ್ರಿ.ಶ. 320ರ ಫೆಬ್ರುವರಿ 26ರಂದೋ ಜಾರಿಗೆ ಬಂದಿರಬೇಕು. ಆದರೂ ಈ ಎರಡು ತೇದಿಗಳಲ್ಲಿ ಯಾವುದು ಸರಿಯೆಂದು ಖಚಿತವಾಗಿ ತಿಳಿದು ಬಾರದ ಕಾರಣ, ಗುಪ್ತ ಶಕ ವರ್ಷಕ್ಕೆ ಈಡಾದ ಕ್ರಿಸ್ತ ಶಕ ವರ್ಷವನ್ನು ಕಂಡುಹಿಡಿಯುವಲ್ಲಿ ಗುಪ್ತ ಶಕ ವರ್ಷಕ್ಕೆ 316 ವರ್ಷಗಳನ್ನು ಕೂಡಿಸುವುದು ಇತಿಹಾಸಕಾರರಲ್ಲಿ ವಾಡಿಕೆಯಾಗಿದೆ.

ಇತಿಹಾಸ

[ಬದಲಾಯಿಸಿ]

ಹೀಗೆ ಕ್ರಿ.ಶ. 319ರಲ್ಲಿ ಗುಪ್ತಶಕವನ್ನು ಘೋಷಿಸಿದ ಗುಪ್ತ ಅರಸ ಯಾರೆಂಬ ಬಗ್ಗೆ ವಿದ್ವಾಂಸರಲ್ಲಿ ಒಮ್ಮತ ಕಂಡುಬರುವುದಿಲ್ಲ. ಶ್ರೀಗುಪ್ತ, ಘಟೋತ್ಕಚ, 1ನೆಯ ಚಂದ್ರಗುಪ್ತ ಮತ್ತು ಸಮುದ್ರಗುಪ್ತ-ಈ ನಾಲ್ಕು ಮೊದಲ ಗುಪ್ತ ಅರಸುಗಳಲ್ಲಿ ಒಬ್ಬನಲ್ಲ ಒಬ್ಬ ಈ ಕಾಲಗಣನೆಯ ಪ್ರವರ್ತಕ ಇದ್ದಿರಬಹುದೆಂದು ಸಂಶೋಧಕರು ಭಿನ್ನ ಭಿನ್ನ ಮತಗಳನ್ನು ವ್ಯಕ್ತಪಡಿಸಿರುವರಾದರೂ ಈ ನಾಲ್ವರ ಪೈಕಿ ಮೊದಲ ಬಾರಿಗೆ ಮಹಾರಾಜಾಧಿರಾಜ ಎಂಬ ಬಿರುದನ್ನು ಸ್ವೀಕರಿಸಿದವನೂ, ನಾಣ್ಯಗಳನ್ನು ಹೊರಡಿಸಿರುವ ಗುಪ್ತ ಸಮ್ರಾಟರಲ್ಲಿ ಮೊದಲಿಗನೂ ಆದ 1ನೆಯ ಚಂದ್ರಗುಪ್ತನೇ ಗುಪ್ತಶಕವನ್ನು ಜಾರಿಗೆ ತಂದವನೆಂಬುದು ಹೆಚ್ಚಿನ ವಿದ್ವಾಂಸರ ಅಭಿಪ್ರಾಯ.[] ಕ್ರಿ.ಶ. 319ರಲ್ಲಿ ನಡೆದಿರಬಹುದಾದ ತನ್ನ ಪಟ್ಟಬಂಧೋತ್ಸವದ ಅಥವಾ ಆ ವರ್ಷದಲ್ಲಿ ತಾನು ಗಳಿಸಿಕೊಂಡ ಸಾರ್ವಭೌಮತ್ವದ ಸ್ಮರಣಾರ್ಥವಾಗಿ ಅವನು ಗುಪ್ತಶಕವನ್ನು ಸಾರಿರಬೇಕೆಂಬುದು ಆ ವಿದ್ವಾಂಸರ ಊಹೆ.[] ಆ ವರ್ಷದಲ್ಲಿ ಅವನ ಆಳ್ವಿಕೆಯಲ್ಲಿ ಜರುಗಿದ ಯಾವುದೋ ಮಹದ್ಘಟನೆಯ ಸವಿನೆನಪಿಗಾಗಿ ಅವನ ಮೊಮ್ಮಗನಾದ 2ನೆಯ ಚಂದ್ರಗುಪ್ತ ಈ ಶಕವನ್ನು ಘೋಷಿಸಿರಬೇಕೆಂಬ ವಾದವೂ ಹುಟ್ಟಿಕೊಂಡಿದೆ.

ಗುಪ್ತ-ವಲಭೀ ಶಕದ ಹುಟ್ಟನ್ನು ಕುರಿತ ಅಲ್ ಬಿರೂನಿಯ ಹೇಳಿಕೆ ಕುತೂಹಲಕಾರಿಯಾಗಿದೆ. ಜನಸಾಮಾನ್ಯರು ಅವನಿಗೆ ತಿಳಿಸಿದಂತೆ, ದುಷ್ಟರೂ ಬಲಿಷ್ಠರೂ ಆಗಿದ್ದ ಗುಪ್ತ ಅರಸುಗಳಲ್ಲಿ ಕೊನೆಯವನಾದ ವಲಭನೆಂಬಾತನ ಪತನದ ಸವಿನೆನಪಿಗಾಗಿ ವಲಭೀ ಸಂವತ್ಸರವನ್ನು ಘೋಷಿಸಲಾಯಿತಂತೆ. ಗುಪ್ತವಂಶದಲ್ಲಿ ವಲಭನೆಂಬ ರಾಜನಾರೂ ಇರಲಿಲ್ಲವಾಗಿ, ಗುಪ್ತ ಶಕವನ್ನೇ ಗುಪ್ತರ ಅನಂತರವೂ ಅವರ ಸಾಮಂತರಾಗಿದ್ದ ವಲಭಿಯ ಮೈತ್ರಕರು ಉಪಯೋಗಿಸಿದ್ದರಾದ ಕಾರಣ, ಕಾಲಕ್ರಮದಲ್ಲಿ ನಿಜಸಂಗತಿ ಮರೆಯಾಗಿ, ಕ್ರಿ.ಶ. 11ನೆಯ ಶತಮಾನದ ವೇಳೆಗೆ ಅಲ್ ಬಿರೂನಿಯ ಕಿವಿಗೆ ಬಿದ್ದ ಕಟ್ಟುಕತೆ ಪ್ರಚಾರಕ್ಕೆ ಬಂದಿರಬೇಕು.

ಗುಪ್ತ ಶಕದ ಹುಟ್ಟು ಕ್ರಿ.ಶ. 319ರಷ್ಟು ಹಿಂದಿನದಾದರೂ ಗುಪ್ತರ ವಂಶ ನಾಮದೊಂದಿಗೆ ಜೋಡಿಸಿ ಅದನ್ನು ಪ್ರಸ್ತಾಪಿಸುವ ಪ್ರಾಚೀನತಮ ಶಾಸನ ಕ್ರಿ.ಶ. 455ರಷ್ಟು ಈಚಿನದಾಗಿದೆ. ಸ್ಕಂದಗುಪ್ತನ ಆಳ್ವಿಕೆಗೊಳಗಾದ ಗುಪ್ತ ಶಕ 136 (ಕ್ರಿ.ಶ. 455), 137 (ಕ್ರಿ.ಶ. 456) ಮತ್ತು 138 (ಕ್ರಿ.ಶ. 457-58)ನೆಯ ವರ್ಷಗಳನ್ನು ಪ್ರಸ್ತಾಪಿಸುವ, ಗುಜರಾತಿನ ಜುನಾಗಢದಲ್ಲಿ ಕಾಣಸಿಗುವ ಈ ಶಾಸನ ಗುಪ್ತಶಕವನ್ನು ಗುಪ್ತ ಪ್ರಕಾಲ, ಗುಪ್ತ ಕಾಲ ಎಂದು ಹೆಸರಿಸುತ್ತದೆ.[] ಅದಕ್ಕೂ ಹಿಂದಿನ ಮತ್ತು ಅನಂತರದ ಹೆಚ್ಚಿನ ಗುಪ್ತ ಶಾಸನಗಳಲ್ಲಿ ಗುಪ್ತಶಕವನ್ನು ಸಂ, ಸಂವ, ಸಂವತ್, ರಾಜ್ಯಸಂವತ್ಸರ, ವರ್ಷ ಎಂದು ಮುಂತಾಗಿ ಗುಪ್ತರ ವಂಶನಾಮದ ಜೋಡಣೆಯಿಲ್ಲದೆಯೆ ಪ್ರಸ್ತಾಪಿಸಲಾಗಿದೆ.

ಗುಪ್ತರ ಸಾಮಂತರಾಗಿದ್ದ ಕಾಠಿಯಾವಾಡದ ವಲಭಿಯ ಮೈತ್ರಕ ಅರಸುಮನೆತನದವರು ಗುಪ್ತರ ಪತನದ ಅನಂತರವೂ ಗುಪ್ತಶಕವನ್ನೇ ಬಳಸುತ್ತ ಬಂದಿದ್ದು, ಅವರ ರಾಜಧಾನಿ ವಲಭಿಯಾಗಿದ್ದ ಕಾರಣ, ಆ ಶಕಕ್ಕೆ ವಲಭಿ ಸಂವತ್ಸರವೆಂಬ ಹೆಸರು ಹುಟ್ಟಿಕೊಂಡಿತು.[][] ಮೈತ್ರಕರ ಶಾಸನಗಳಲ್ಲಿ ಕೇವಲ ಸಂ, ಸಂವತ್, ಸಂವತ್ಸರ ಎಂದಷ್ಟೇ ಉಕ್ತವಾಗಿರುವ ಈ ಸಂವತ್ಸರದ ವಲಭೀ ಸಂವತ್ ಎಂಬ ವಂಶಿಕನಾಮದ ಪ್ರಾಚೀನತಮ ಉಲ್ಲೇಖವಿರುವುದು ಕಾಠಿಯಾವಾಡದ ಊನಾದಲ್ಲಿ ದೊರೆತಿರುವ, ಕ್ರಿ.ಶ. 893-94ರಲ್ಲಿ ಹುಟ್ಟಿದ, ಪ್ರತೀಹಾರ ಚಕ್ರವರ್ತಿ ಮಹೇಂದ್ರಾಯುಧದೇವನ ತಾಮ್ರಶಾಸನದಲ್ಲಿ. ಅದೇ ಕಾಲಕ್ಕೆ ಆ ಪ್ರಾಂತ್ಯದಲ್ಲಿ ಈ ಶಕವನ್ನು ಗುಪ್ತಶಕವೆಂದೂ ಕರೆಯುತ್ತಿದ್ದರೆಂಬುದು ಜಾಇಂಕ ರಾಜನ ಕ್ರಿ.ಶ. 905ರ ಮೋರ್ಬಿ ತಾಮ್ರಶಾಸನದಲ್ಲಿಯ ಗೌಪ್ತಬ್ದದ ಪ್ರಸ್ತಾಪದಿಂದ ವಿಶದವಾಗುತ್ತದೆ. ವಲಭೀ ಸಂವತ್ಸರದ ಪ್ರಸ್ತಾಪವಿರುವ ಇತ್ತೀಚಿನ ಶಾಸನವೆಂದರೆ ಆ ಶಕದ 945ರಲ್ಲಿ (ಕ್ರಿ.ಶ. 1264) ಬರೆಯಲಾದ ಚೌಳುಕ್ಯ-ವಾಘೇಲ ಮನೆತನದ ಅರಸು ಅರ್ಜುನನ ವೇರಾವಲ್ ಶಿಲಾಶಾಸನ.

ಉಲ್ಲೇಖಗಳು

[ಬದಲಾಯಿಸಿ]
  1. "Collections-Virtual Museum of Images and Sounds". vmis.in. American Institute of Indian Studies.
  2. Ashvini Agrawal 1989, pp. 100–101.
  3. R. C. Majumdar 1981, p. 15.
  4. Ashvini Agrawal 1989, p. 98.
  5. D. C. Sircar 1965, p. 285.
  6. Richard Salomon 1998, p. 186.


ಗ್ರಂಥಸೂಚಿ

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: