ಕ್ರಿಸ್ತ ಶಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಯೇಸುಕ್ರಿಸ್ತ ತನ್ನ ಜೀವನ, ಮರಣ ಮತ್ತು ಪುನರುತ್ಥಾನಗಳಿಂದ ಜಗತ್ತಿನ ಮೇಲೆ ಅಗಾಧವಾದ ಪ್ರಭಾವ ಬೀರಿದ್ದು ಸತ್ಯಸ್ಯಸತ್ಯ. ಆ ಜಗದೋದ್ಧಾರನ ದೆಸೆಯಿಂದ ಜಗದ ಕಾಲಗಣನೆಗೆ ಒಂದು ಪ್ರಾರಂಭಬಿಂದು ಉಂಟಾಯಿತು. ಕ್ರಿಸ್ತಶಕ ಎನಿಸಿಕೊಳ್ಳುವ ಕಾಲಗಣನೆಗೆ ಚಾಲನೆ ದೊರೆತದ್ದು ಕ್ರಿಸ್ತ ಸತ್ತು ಬದುಕಿದ ಐದಾರು ಶತಮಾನಗಳ ನಂತರವೇ. ಕ್ರಿಸ್ತಶಕ ೫೨೫ರಲ್ಲಿ ಆಳ್ವಿಕೆ ನಡೆಸಿದ್ದ ಡಯೊನೀಷಿಯಸ್ ಎಂಬ ಚಕ್ರವರ್ತಿಯು ಆ ವರ್ಷವನ್ನು ಒಂದು ಅಂದಾಜಿನಲ್ಲಿ ಕ್ರಿಸ್ತಾವತಾರದ ೫೨೫ನೇ ವರ್ಷ ಎಂಬುದಾಗಿ ಘೋಷಿಸಿದ. ಅಂದಿನಿಂದ ಕ್ರಿಸ್ತಶಕೆ ಎನ್ನುವ ಪರಿಪಾಠ ಮೊದಲಾಯಿತು.

ಕ್ರಿಸ್ತ ಜನಿಸಿದ ನಿಖರವಾದ ದಿನಾಂಕ ಯಾರಿಗೂ ತಿಳಿಯದು. ಆದರೆ ಅವರನ್ನು ಶಿಲುಬೆಗೇರಿಸಿ ಕೊಂದಿದ್ದು ಯೆಹೂದ್ಯರ ಪವಿತ್ರಾಚರಣೆಯಾದ ಪಾಸ್ಕ ಸಂದರ್ಭದಲ್ಲಿ ಎಂಬುದನ್ನು ನೋಡಿದರೆ ಕ್ರಿಸ್ತಶಕ ೩೦ ರ ಏಪ್ರಿಲ್ ೭ ರಂದು ಶುಕ್ರವಾರ ಯೇಸುಕ್ರಿಸ್ತರು ಸಾವನ್ನು ಕಂಡರು ಎಂಬುದಾಗಿ ತಿಳಿದುಬರುತ್ತದೆ. ಅಂತೆಯೇ ಯೇಸುಕ್ರಿಸ್ತನ ಜನನದ ಸಂದರ್ಭದಲ್ಲಿ ರೋಮನ್ ಚಕ್ರವರ್ತಿಯಾಗಿದ್ದ ಅಗಸ್ಟಸ್ ಸೀಝರನು ಜನಗಣತಿಗೆ ಆದೇಶ ನೀಡಿದ್ದನೆಂಬ ಅಂಶವೂ ಕಾಲನಿರ್ಣಯಕ್ಕೆ ಅನುವಾಗುತ್ತದೆ. ಆ ಪ್ರಕಾರ ಅದು ಕ್ರಿಸ್ತಪೂರ್ವ ೩ನೇ ವರ್ಷಕ್ಕೆ ಸರಿಹೊಂದುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ ಯೇಸುಕ್ರಿಸ್ತನು ಸುಮಾರು ೩೦ ವರ್ಷಗಳ ಕಾಲ ಬದುಕಿದ್ದನೆಂಬ ಅಂದಾಜಿನ ಮೇಲೆ ಕ್ರಿಸ್ತಶಕೆಯನ್ನು ಅನುಷ್ಠಾನಕ್ಕೆ ತಂದಿರಬಹುದು.

ಲ್ಯಾಟಿನ್ ಭಾಷೆಯಲ್ಲಿನ ಆನೋ ದೊಮಿನಿ ಅಂದರೆ "ಸ್ವಾಮಿಯ ಸಂವತ್ಸರ"ವು ಕ್ರಿಸ್ತಶಕಕ್ಕೆ ಸಂವಾದಿಯಾಗಿ ಸಾರ್ವತ್ರಿಕವಾಗಿ ಬಳಕೆಯಲ್ಲಿದೆ. ಗ್ರೆಗರಿಯನ್ ಕ್ಯಾಲೆಂಡರ್ ಪ್ರಕಾರ ಇಸವಿಗಳನ್ನು ಸೂಚಿಸುವಾಗ ಕನ್ನಡದಲ್ಲಿ ಕ್ರಿಸ್ತಶಕ ೨೦೦೯ ಎನ್ನುವಂತೆಯೇ ಜಾಗತಿಕವಾಗಿ AD 2009 ಎಂಬ ಬಳಕೆ ಸಾಮಾನ್ಯವಾಗಿದೆ.