ವಿಷಯಕ್ಕೆ ಹೋಗು

ಗಾಳಿತುಂಬಿದೆದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಸಿದ ಶ್ವಾಸಕೋಶ ಅಥವಾ ಗಾಳಿತುಂಬಿದೆದೆಯ ಚಿತ್ರ

ಗಾಳಿತುಂಬಿದೆದೆ ಎಂದರೆ ಎದೆಗೂಡಿನ ಎರಡು ಪಕ್ಕಗಳಲ್ಲೂ ಇರುವ ಅಳ್ಳೆಪೊರೆಯ (ಪ್ಲೂರಲ್) ಪೊಳ್ಳಿನಲ್ಲಿ ಗಾಳಿಯೋ ಅನಿಲವೋ ತುಂಬಿರುವಿಕೆ (ನ್ಯೂಮೋತೋರಾಕ್ಸ್).[] ರೋಗದಿಂದ ಇಲ್ಲವೇ ಆಕಸ್ಮಿಕಗಳಿಂದಾದ ಕಾಯಿಲೆಯನ್ನು ಸಹಜವಾಗಿ ಆದದ್ದೆಂದೂ, ಫುಪ್ಪುಸಗಳ ರೋಗದ ಚಿಕಿತ್ಸೆಗಾಗಿ ವೈದ್ಯನೇ ಒಳಕ್ಕೆ ಗಾಳಿಯನ್ನು ಚುಚ್ಚಿ ಹೊಗಿಸಿ ಆದುದನ್ನು ಕೃತಕವಾದದ್ದೆಂದೂ ಹೇಳುತ್ತಾರೆ. ಸಹಜವಾಗಿ ಗಾಳಿತುಂಬಿದೆದೆ ಆದಾಗ ಅಳ್ಳೆಪೊರೆಯ ಪೊಳ್ಳಿನೊಳಕ್ಕೆ ಸಾಧಾರಣವಾಗಿ ಫುಪ್ಪುಸದಿಂದ ವಾಯು ನುಗ್ಗುವುದು. ಫುಪ್ಪುಸದ ಮೇಲ್ಮೈಯ ಹತ್ತಿರ ಇರುವ ಕ್ಷಯದ ಗೂಡು ಒಡೆದುಕೊಂಡು ಉಸಿರ್ನಾಳದಲ್ಲಿರುವ ವಾಯು ಪೊಳ್ಳಿನೊಳಕ್ಕೆ ತೂರುವುದು ಸಾಮಾನ್ಯ. ಅಪರೂಪವಾಗಿ ಗೂರಲು ರೋಗಿಗಳಲ್ಲಿ ಆಗಿರುವಂತೆ ಹಿರಿಹಿಗ್ಗಿದ ಗಾಳಿಯುಬ್ಬಟೆಯ (ಎಂಫಿಸೀಮ್ಯಾಟಸ್) ಕಿರುಕೋಶ ಒಡೆದುಕೊಂಡರೂ ಹೀಗಾಗಬಹುದು. ಇನ್ನುಳಿದವರಲ್ಲಿ ಗಾಳಿತುಂಬಿದೆದೆ ಆಗಲು ಎದೆಗೆ ಬಿದ್ದ ಪೆಟ್ಟು, ಇಲ್ಲವೆ ಮುರಿತ ಮುಂತಾದವು ಕಾರಣ. ಆದರೆ ಸಹಜವಾಗಿ ಆಗುವ ಈ ಕಾಯಿಲೆಗೆ 90% ಮಂದಿಯಲ್ಲಿ ಫುಪ್ಪುಸದ ಕ್ಷಯವೇ ಕಾರಣ.[]

ಸಾಮಾನ್ಯವಾಗಿ ಗಾಳಿತುಂಬಿದೆದೆ ಇದ್ದಕ್ಕಿದ್ದ ಹಾಗೆ ತಲೆದೋರುತ್ತದೆ. ರೋಗಿ ವಿರಮಿಸಿಕೊಳ್ಳುತ್ತಿರುವಾಗ ಕೂಡ ಇದು ತಲೆದೋರಬಹುದು. ಆಗ ಎದೆಯ ಪಕ್ಕೆಯಲ್ಲಿ ಇದ್ದಕ್ಕಿದ್ದ ಹಾಗೆ ಇರಿವಂಥ ಚಳುಕು, ಉರಿಯಾಗಿ ಉಸಿರಾಡಲು ಬಹುಮಟ್ಟಿಗೆ ಕಷ್ಟವಾಗುತ್ತದೆ. ಫುಪ್ಪುಸ ಒಡೆಬಿರಿದು ಅದರ ಹೊದಿಕೆಯಾಗಿರುವ ಅಳ್ಳೆಪೊರೆ ಹರಿದಿರುತ್ತದೆ. ಅಳ್ಳೆಪೊರೆಯ ಪೊಳ್ಳಿನೊಳಕ್ಕೆ ಆಗ ಸಹಜವಾಗಿ ವಾಯು ನುಗ್ಗಿ ಅದೇ ಪಕ್ಕದ ಫುಪ್ಪುಸ ಚಿಕ್ಕದಾಗಿ ಮುದುರಿಕೊಳ್ಳುವುದು. ಎದೆಯ ನಡುವೆ ಇರುವ ಗುಂಡಿಗೆ ಆಗ ರೋಗವಿಲ್ಲದ ಪಕ್ಕಕ್ಕೆ ತಳ್ಳಿದಂತಾಗಿ ಸರಿಯುತ್ತದೆ. ರೋಗಿ ಹೆಜ್ಜೆಹಾಕಲಾರದೆ ಕುಸಿದುಬೀಳುತ್ತಾನೆ. ಹಾಸಿಗೆಯಲ್ಲಿ ಮಲಗಿಸಿದರೆ ರೋಗದ ಪಕ್ಕಕ್ಕೆ ವಾಲಿಕೊಂಡು ದಿಂಬಿಗೆ ಒರಗಿಕೊಳ್ಳುತ್ತಾನೆ.

ಸಹಜವಾಗಿ ಆಗುವ ಗಾಳಿತುಂಬಿದೆದೆಯ ಕೆಲವು ಬಗೆಗಳಲ್ಲಿ ಫುಪ್ಪುಸಕ್ಕೂ, ಅಳ್ಳೆಪೊರೆಗೂ ನಡುವೆ ಇರುವ ಕಂಡಿ ತೆರೆದೇ ಇರುವುದರಿಂದ ರೋಗಿ ಉಸಿರಾಡಿದಂತೆಲ್ಲ ಸಿಳ್ಳೆಹಾಕುವ ಸದ್ದಾಗುವುದು. ಆಗ ಅಳ್ಳೆಪೊರೆಯ ಪೊಳ್ಳಿನಲ್ಲಿ ಒತ್ತಡ ಶೂನ್ಯವಾಗಿದ್ದುದು ವಾಯುವಿನ ಒತ್ತಡದ ಸಮಕ್ಕೆ ಬರುತ್ತದೆ. ಇನ್ನು ಕೆಲವರಲ್ಲಿ ಅಳ್ಳೆಪೊರೆಯು ಹರಿದ ಚೂರು ಕವಾಟದಂತಾಗಿ ಫುಪ್ಪುಸದಿಂದ ಅಳ್ಳೆಪೊರೆಯ ಪೊಳ್ಳಿನೊಳಕ್ಕೆ ವಾಯು ತೂರಲು ಬಿಟ್ಟ ವಾಯು ಹಿಂತಿರುಗಲು ಬಿಡದಂತಾಗುವುದು. ಆಗ ಪೊಳ್ಳಿನೊಳಗಿನ ಒತ್ತಡ ವಿಪರೀತ ಹೆಚ್ಚಿ ಉಸಿರಾಟಕ್ಕೆ ಬಲು ತೊಡಕಾಗುತ್ತದೆ. ಕೂಡಲೇ ಎದೆಗೆ ತೂತುಸೂಜಿ ಚುಚ್ಚಿ ವಾಯುವನ್ನು ಹೊರಕ್ಕೆ ಬಿಟ್ಟರೆ ಶಮನವಾಗುವುದು.

ಕೃತಕ ಗಾಳಿತುಂಬಿದೆದೆ

[ಬದಲಾಯಿಸಿ]

ಫುಪ್ಪುಸದ ಕೆಲವು ಬಗೆಗಳ ಕ್ಷಯ, ಗಾಳಿಯುಬ್ಬಟೆ ರೋಗಗಳಲ್ಲಿ ಬೇಕೆಂದೆ ಪಕ್ಕದ ಫುಪ್ಪುಸಕ್ಕೆ ವಿರಾಮಕೊಡಲು ಅದು ಮುದುರಿಕೊಳ್ಳುವಂತೆ ಮಾಡುವುದೂ ಒಂದು ಚಿಕಿತ್ಸೆ. ಎರಡು ಪಕ್ಕೆಲುಬುಗಳ ನಡುವೆ ಎದೆಗೂಡಿನ ಗೋಡೆಯಲ್ಲಿ ತೂತುಸೂಜಿ ಚುಚ್ಚಿ ಅಳ್ಳೆಪೊರೆ ಪೊಳ್ಳಿನೊಳಕ್ಕೆ ವಾಯುವನ್ನು ಬಿಡುವರು. ಒಂದಕ್ಕೊಂದು ಕೊಳವೆಗಳ ಮೂಲಕ ಸಂಬಂಧಿಸಿರುವ ನಂಜುರೋಧಕ ದ್ರವವಿರುವ ಎರಡು ದೊಡ್ಡ ಸೀಸೆಗಳಿಗೆ ರಬ್ಬರು ಕೊಳವೆ ಮೂಲಕ ತಗಲಿಸಿದ ತೂತುಸೂಜಿಯನ್ನು ಎದೆಯೊಳಕ್ಕೆ ಚುಚ್ಚಬೇಕು. ಒಂದು ಸೀಸೆಯನ್ನು ಮೇಲೆತ್ತಿ ಹಿಡಿದರೆ ಅದರಲ್ಲಿ ದ್ರವ ಅಳ್ಳೆಪೊರೆಯ ಪೊಳ್ಳಿನೊಳಗಣ ಒತ್ತಡವನ್ನು ಒತ್ತಡಮಾಪಿ ಗುರುತಿಸುತ್ತದೆ. ಒಂದೊಂದು ಬಾರಿಗೂ ಕೊಂಚವೇ ತುಂಬಿದಾಗ ವಾಯು ಹೀರಿಹೋಗುವುದರಿಂದ ಮತ್ತೆ ಮತ್ತೆ ಅದನ್ನು ತುಂಬುತ್ತಿರಬೇಕಾಗುವುದು. ಹೀಗೇ ಎದೆಯಲ್ಲಿ ತುಂಬಿದ್ದರೆ ಆ ಭಾಗದ ಫುಪ್ಪುಸ ಚಲಿಸದೆ ಮುದುರಿಕೊಂಡು ವಿರಮಿಸುವುದರಿಂದ ಅದರೊಳಗಿನ ರೋಗ ವಾಸಿಯಾಗಲು ಅವಕಾಶ ಕೊಟ್ಟಂತಾಗುವುದು. ಕ್ಷಯ ರೋಗಾಣು ಮಾರಕವಾದ ಇಂದಿನ ಹೊಸ ಮದ್ದುಗಳು ಬರುವ ತನಕ ಕೃತಕ ಗಾಳಿತುಂಬಿದೆದೆ ರೋಗಿಗೆ ಕ್ಷಯರೋಗಿಗೆ ಮಾಡುವ ಮದ್ದನ್ನೇ ಮಾಡಲಾಗುತ್ತಿತ್ತು.[][] ಒಂದು ಬಾರಿ ಇದನ್ನು ಆರಂಭಿಸಿದರೆ ಎರಡು ವರ್ಷಗಳವರೆಗಾದರೂ ಕೊಡಬೇಕಿತ್ತು. ಇದರಿಂದ ಹಲವು ತೊಡಕುಗಳು ಏಳುತ್ತಿದ್ದವು. ಎದೆಗೆ ಹಾಕಿದ ಸೂಜಿ ಅಳ್ಳೆಪೊರೆಗೆ ತಾಗಿದ ಕೂಡಲೇ ಕೆಲವರು ಸಾಯುತ್ತಿದ್ದರು. ಒಳಗೆ ಬಿಟ್ಟ ವಾಯು ರಕ್ತನಾಳದೊಳಕ್ಕೂ ಅಪರೂಪವಾಗಿ ಹೋಗಿಬಿಡುತ್ತಿತ್ತು. ಎದೆಯಲ್ಲಿ ಸೋಂಕು ಹತ್ತಿ ಕೀವು ಸೇರಿಬಿಡುತ್ತಿತ್ತು. ಉಸಿರಾಟದ ಆಳವೂ ಕುಗ್ಗಿ ಫುಪ್ಪುಸ ಮತ್ತೆ ಎಂದಿನಂತೆ ಹಿಗ್ಗದೆ ನಾರುಗಟ್ಟುತ್ತಿತ್ತು. ಎಲ್ಲಕ್ಕೂ ಹೆಚ್ಚಿನದಾಗಿ ರೋಗಿ ಸಾಕಷ್ಟು ಕಳವಳಕ್ಕೀಡಾಗುತ್ತಿದ್ದ. 1950ರಿಂದ ಈಚೆಗೆ ಈ ಚಿಕೆತ್ಸೆ ಬಳಕೆಯಲ್ಲಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. Bintcliffe O, Maskell N (May 2014). "Spontaneous pneumothorax". BMJ. 348 (may08 1): g2928. doi:10.1136/bmj.g2928. PMID 24812003. S2CID 32575512.
  2. "What Causes Pleurisy and Other Pleural Disorders?". NHLBI. 21 September 2011. Archived from the original on 8 October 2016. Retrieved 31 October 2016.
  3. Slade M (December 2014). "Management of pneumothorax and prolonged air leak". Seminars in Respiratory and Critical Care Medicine. 35 (6): 706–714. doi:10.1055/s-0034-1395502. PMID 25463161. S2CID 35518356.
  4. Wolf SJ, Bebarta VS, Bonnett CJ, Pons PT, Cantrill SV (August 2009). "Blast injuries". Lancet. 374 (9687): 405–415. doi:10.1016/S0140-6736(09)60257-9. PMID 19631372. S2CID 13746434.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: