ವಿಷಯಕ್ಕೆ ಹೋಗು

ಗಣಿಗಾರಿಕೆ ಕಾನೂನುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣಿಗಾರಿಕೆ ಕಾನೂನುಗಳು ಎಂದರೆ ಖನಿಜ ನಿಕ್ಷೇಪಗಳ ಪೂರ್ವೇಕ್ಷಣ ಕಾರ್ಯವಿಧಾನ, ಪೂರ್ವೇಕ್ಷಕನ ಹಕ್ಕು ಬಾಧ್ಯತೆಗಳು, ಗಣಿಗಾರಿಕೆ ಕಾರ್ಯನಿಯಂತ್ರಣ, ಗಣಿ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ, ದುಡಿಮೆ, ವೇತನ ಇತ್ಯಾದಿ ವಿಚಾರಗಳನ್ನು ಕುರಿತ ನಿಬಂಧನೆಗಳು ಮುಂತಾದವನ್ನೊಳಗೊಂಡ ಕಾಯಿದೆಗಳು (ಮೈನಿಂಗ್ ಲಾಸ್). ಒಂದು ಪ್ರದೇಶದಲ್ಲಿ ಖನಿಜ ನಿಕ್ಷೇಪ ಇರುವ ಸಾಧ್ಯತೆಯ ಮತ್ತು ಅದನ್ನು ವಾಣಿಜ್ಯಕ ಗಾತ್ರದಲ್ಲಿ ಹೊರತೆಗೆಯುವ ಬಗ್ಗೆ ಸಾಮಾನ್ಯವಾಗಿ ಖಾಸಗಿ ಉದ್ಯಮವಲಯಕ್ಕೆ ಅವಕಾಶ ಇರುವ ಎಲ್ಲ ದೇಶಗಳಲ್ಲೂ ವ್ಯಾಪಕವಾದ ಕಾನೂನುಗಳಿರುತ್ತವೆ. ಇವನ್ನು ಸಂಬಂಧಪಟ್ಟವರು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯ.

ಗಣಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು

[ಬದಲಾಯಿಸಿ]

ಗಣಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು ಸ್ಥೂಲವಾಗಿ ಎರಡು ಬಗೆ:

  1. ರಿಯಾಯಿತಿ ಪದ್ಧತಿ (ಕನ್ಸೆಷನ್ ಸಿಸ್ಟಂ).
  2. ಗೊತ್ತುಗಾರಿಕೆ ಪದ್ಧತಿ (ಕ್ಲೇಮ್ ಸಿಸ್ಟಂ).

ರಿಯಾಯಿತಿ ಪದ್ಧತಿ

[ಬದಲಾಯಿಸಿ]

ರಿಯಾಯಿತಿ ಪದ್ಧತಿ ಪ್ರಾಚೀನ ನಾಗರಿಕತೆಗಳಿರುವ ಬಹುತೇಕ ಎಲ್ಲ ದೇಶಗಳಲ್ಲೂ ಜಾರಿಯಲ್ಲಿದೆ. ಒಂದು ಪ್ರದೇಶದಲ್ಲಿಯ ಖನಿಜ ತೆಗೆಯುವ ಹಕ್ಕನ್ನು ಅಥವಾ ರಿಯಾಯಿತಿಯನ್ನು ಅಲ್ಲಿಯ ಸರ್ಕಾರವೋ, ಆ ಪ್ರದೇಶದ ಒಡೆತನ ಹೊಂದಿರುವ ಖಾಸಗಿ ವ್ಯಕ್ತಿಯೋ ತನ್ನ ಸ್ವಂತ ವಿವೇಚನೆಗೆ ಅನುಗುಣವಾಗಿ ಮತ್ತು ಕೆಲವು ಸ್ಥೂಲ ನಿಬಂಧನೆಗಳಿಗೆ ಒಳಪಟ್ಟು ವ್ಯಕ್ತಿಗಳಿಗೋ ಸಂಸ್ಥೆಗಳಿಗೋ ಗುತ್ತಿಗೆಯಾಗಿ ಕೊಡುವುದು ರಿಯಾಯಿತಿ ಪದ್ಧತಿ. ನೆಲ ಹಿಂದೆ ರಾಜರ ಅಥವಾ ಊಳಿಗಮಾನ್ಯ ಪ್ರಭುಗಳ ಸ್ವತ್ತಾಗಿತ್ತು. ಆ ಕಾಲದಿಂದಲೂ ಈ ಪದ್ಧತಿ ಹಲವಾರು ಮಾರ್ಪಾಡುಗಳಿಗೆ ಒಳಪಟ್ಟು ಬೆಳೆದುಕೊಂಡುಬಂದಿದೆ. ಸರ್ಕಾರವೋ, ಗಣಿ ಹಕ್ಕುಗಳ ಒಡೆತನ ಹೊಂದಿದವನೋ ತನಗೆ ಸೂಕ್ತವೆನಿಸದಂಥವರನ್ನು ಆರಿಸಿ ಅಂಥವರಿಗೆ ಗಣಿಗಾರಿಕೆ ಹಕ್ಕು ನೀಡಬಹುದಾದದ್ದು ಈ ಪದ್ಧತಿಯ ಅನುಕೂಲ. ಗಣಿ ಕೆಲಸ ನಡಸುವ ಹಕ್ಕು ಪಡೆದವರು ಅದಕ್ಕೆ ಪ್ರತಿಯಾಗಿ ಬಾಡಿಗೆಯನ್ನು, ತೆರಿಗೆಯನ್ನು ಅಥವಾ ಸ್ವಾಮಿಸ್ವವನ್ನು (ರಾಯಲ್ಟಿ) ಪಾವತಿ ಮಾಡಬೇಕು. ಒಳ್ಳೆಯ ವ್ಯವಸ್ಥೆ, ವಸೂಲಿ ಕಾರ್ಯದಲ್ಲಿ ಮಿತವ್ಯಯ, ಗಣಿಕಾರ್ಯದಲ್ಲಿ ಸ್ಥಿರತೆ-ಇವನ್ನು ಸಾಧಿಸಬಹುದೆಂಬುದು ಈ ಪದ್ಧತಿಯ ಅನುಕೂಲ. ಆದರೆ ಈ ಪದ್ಧತಿಯಲ್ಲಿ ಪ್ರತಿಕೂಲಗಳಿಲ್ಲದೆಯೂ ಇಲ್ಲ. ಸ್ವತ್ತಿಗೆ ಸಂಬಂಧಿಸಿದಂತೆ ಅಗಾಧ ಅಧಿಕಾರಗಳು ಕೆಲವೇ ಜನರ ಹಸ್ತಗಳಲ್ಲಿ ಕೇಂದ್ರೀಕೃತವಾಗುತ್ತವೆ. ಸ್ಪರ್ಧೆಗೆ ಎಡೆಯಿರುವುದಿಲ್ಲ. ಕೆಲವೇ ಜನರು ಭಾರಿ ಲಾಭ ಗಳಿಸುತ್ತಾರೆ. ಗಣಿ ಕಾರ್ಯದ ಹಕ್ಕು ಪಡೆದುಕೊಂಡವರು ತಮ್ಮ ಅನುಕೂಲಕ್ಕೆ ತಕ್ಕಂತೆ ಅದುರನ್ನು ಅತಿಯಾಗಿ ತೆಗೆದು ಗಣಿಯನ್ನು ಶೀಘ್ರವಾಗಿ ಬರಿದು ಮಾಡುವ, ಅಥವಾ ಸಾಕಷ್ಟು ಅದುರನ್ನು ತೆಗೆಯದೆ ಇರುವ ಸಂಭವವುಂಟು. ಆದರೆ ಗಣಿಯನ್ನು ಅಭಿವೃದ್ಧಿ ಸ್ಥಿತಿಯಲ್ಲಿಟ್ಟಿರುವ ಬಗ್ಗೆ ಸೂಕ್ತ ವಿಧಿಗಳನ್ನು ಕರಾರಿನಲ್ಲಿ ಸೇರಿಸುವುದರ ಮೂಲಕ ಈ ಸಂಭವವನ್ನು ನಿವಾರಿಸಿಕೊಳ್ಳಬಹುದು. ಇಂಥ ಗಣಿ ಕಂಪನಿಗಳ ಹಣಕಾಸಿನ ವಹಿವಾಟುಗಳ ಮೇಲೆ ಮತ್ತು ಬಂಡವಾಳ ನಿರ್ಮಾಣದ ಮೇಲೆ ಸರ್ಕಾರ ಸೂಕ್ತ ಹತೋಟಿ ಪಡೆಯಬಹುದು. ದೊಡ್ಡ ಕಂಪನಿಗಳು ಗಣಿಕಾರ್ಯದ ಹಕ್ಕು ಪಡೆಯುವುದರಿಂದ ಅವುಗಳ ನಿರ್ವಹಣೆಯಲ್ಲಿ ಮತ್ತು ಗಣಿಗಳ ಪೂರ್ವೇಕ್ಷಣೆಯಲ್ಲಿ ಮಿತವ್ಯಯವೂ ದಕ್ಷತೆಯೂ ಸಾಧಿಸಬಹುದೆಂದೂ ವಾದಿಸಲಾಗಿದೆ.

ಗೊತ್ತುತಾರಿಕೆ ಪದ್ಧತಿ

[ಬದಲಾಯಿಸಿ]

ಗೊತ್ತುಗಾರಿಕೆ ಪದ್ಧತಿ ಉಗಮಿಸಿದ್ದು ಅಮೆರಿಕ ಸಂಯುಕ್ತ ಸಂಸ್ಥಾನದಂಥ ನೂತನ ದೇಶಗಳಲ್ಲಿ ಗಣಿಗಾರಿಕೆ ಆರಂಭವಾದ ಸಮಯದಲ್ಲಿ. ಕ್ಯಾಲಿಫೋರ್ನಿಯದಲ್ಲೂ, ಆಸ್ಟ್ರೇಲಿಯದಲ್ಲೂ ಹೊಸದಾಗಿ ಬೆಳಕಿಗೆ ಬಂದ ಚಿನ್ನದ ಗಣಿಗಳೆಡೆಗೆ ಪೂರ್ವೇಕ್ಷಕರು ಧಾವಿಸಿದರು. ಚಿನ್ನದ ಆಸೆಯಿಂದ ಹೀಗೆ ಹೋದವರಲ್ಲೇ ಪರಸ್ಪರ ಬಡಿದಾಟ ಉಂಟಾದಾಗ ಅದನ್ನು ನಿವಾರಿಸಲು ಗೊತ್ತುಗಾರಿಕೆ ಕಾನೂನುಗಳು ಸೃಷ್ಟಿಯಾದುವು. ಯಾರು ಯಾವ ಸ್ಥಳದಲ್ಲಿ ಖನಿಜ ನಿಕ್ಷೇಪಗಳನ್ನು ಪತ್ತೆ ಹಚ್ಚುತ್ತಾರೋ ಆ ಸ್ಥಳದಲ್ಲಿ ಗಣಿ ಕಾರ್ಯ ಕೈಗೊಳ್ಳುವ ಹಕ್ಕು ಅವರದಾಗುತ್ತದೆ ಎಂಬುದು ಸ್ಥೂಲವಾಗಿ ಇವುಗಳ ತತ್ತ್ವ. ಸಣ್ಣಪುಟ್ಟ ಹಕ್ಕುಗಳು ಉದ್ಭವಿಸಿದಾಗ ಅವನ್ನೆಲ್ಲ ಕ್ರೋಡೀಕರಿಸುವುದು ಅವಶ್ಯವಾಗುತ್ತದೆ. ಇಲ್ಲದಿದ್ದರೆ ಗಣಿಕಾರ್ಯ ಲಾಭದಾಯಕವಾಗದಿರಬಹುದು; ಬಂಡವಾಳ ವ್ಯರ್ಥವಾಗಬಹುದು.

ಮೂಲಭೂತ ತತ್ತ್ವಗಳು

[ಬದಲಾಯಿಸಿ]

ಮೇಲಣ ವಿವೇಚನೆಯ ದೃಷ್ಟಿಯಲ್ಲಿ ಒಟ್ಟಿನಲ್ಲಿ ಗಣಿಗಾರಿಕೆ ಕಾನೂನುಗಳಿಗೆ ಸಂಬಂಧಿಸಿದಂತೆ ಎರಡು ಮೂಲಭೂತ ತತ್ತ್ವಗಳನ್ನು ಗುರುತಿಸಬಹುದು:

  1. ಗಣಿ ನಿರ್ವಾಹಕರು ತಮ್ಮ ಕಾರ್ಯಾಚರಣೆಗೆ ಒಳಪಟ್ಟ ಭೂ ಸ್ವತ್ತಿನ ಮೇಲೆ ರದ್ದು ಮಾಡಲಾಗದಂಥ ಸ್ವಸ್ವ (ಟೈಟ್ಲ್) ಪಡೆಯುವ ಹಕ್ಕು. ಇದಕ್ಕೆ ಪ್ರತಿಯಾಗಿ ನಿರ್ದಿಷ್ಟವಾದ ಮತ್ತು ಅವರ ಕಾರ್ಯವ್ಯಾಪ್ತಿಗೆ ಒಳಪಟ್ಟ ಕೆಲವು ಷರತ್ತುಗಳನ್ನು ಅವರು ಪೂರೈಸಬೇಕಾಗುತ್ತದೆ.
  2. ಗಣಿಯಿಂದ ಬರುವ ಲಾಭದ ಮೇಲೆ ಗೊತ್ತಾದ ಬಾಡಿಗೆ, ಸ್ವಾಮಿಸ್ವ ಅಥವಾ ತೆರಿಗೆಯನ್ನು ಪಡೆಯಲು ಸರ್ಕಾರಕ್ಕೆ ಅಥವಾ ಸ್ವತ್ತಿನ ಒಡೆಯನಿಗೆ ಹಕ್ಕು ಇರುತ್ತದೆ. ಸ್ವತ್ತು ಹಾಗೂ ಕಾರ್ಮಿಕರ ರೂಪದಲ್ಲಿರುವ ಬಂಡವಾಳ ವಿನಾಕಾರಣವಾಗಿ ಅನುಪಯೋಗಿಯಾಗಿರದಂತೆ ಗಣಿಯಲ್ಲಿ ನಿರಂತರವಾಗಿ ನ್ಯಾಯವಾದ ಹಾಗೂ ಪರಿಣಾಮಕಾರಿಯಾದ ಕಾರ್ಯ ನಡೆಯುವುದಾಗಿ ನಿರೀಕ್ಷಿಸುವ ಹಕ್ಕೂ ಸರ್ಕಾರಕ್ಕೆ ಅಥವಾ ಸ್ವತ್ತಿನ ಒಡೆಯರಿಗೆ ಉಂಟು.

ಎಲ್ಲ ದೇಶಗಳ ಕಾನೂನುಗಳಲ್ಲೂ ಸ್ಥೂಲವಾಗಿ ಈ ಎರಡು ತತ್ತ್ವಗಳು ಅಂತರ್ಗತವಾಗಿರುತ್ತವೆ.

ಗಣಿ ಕಾರ್ಮಿಕರಿಗೆ ಸೂಕ್ತವಾದ ವೇತನ ಪಾವತಿ, ಅವರ ಕೆಲಸದ ಕಾಲದ ನಿಯಂತ್ರಣ, ಅಪಘಾತ ಪರಿಹಾರ ಮತ್ತು ವಿಮೆ, ವಿರಾಮವೇತನ, ಸಹಾಯಾರ್ಥ ನಿಧಿ, ಕಾರ್ಮಿಕ-ವ್ಯವಸ್ಥಾಪಕ ಸಂಬಂಧಗಳು, ಕಾರ್ಮಿಕ ವ್ಯಾಜ್ಯಗಳ ಇತ್ಯರ್ಥ, ಕಾರ್ಮಿಕ ಕಲ್ಯಾಣ, ಕಾರ್ಮಿಕ ಸೌಲಭ್ಯಗಳು, ಆರೋಗ್ಯ ರಕ್ಷಣೆ, ನೈರ್ಮಲ್ಯ ಸಾಧನೆ, ಕೆಲಕೆಲವು ಗಣಿಗಳಿಗೆ ವಿಶಿಷ್ಟವಾದ ಕಾಯಿಲೆಗಳ ನಿವಾರಣೆ ಮುಂತಾದ ಅನೇಕ ವಿಚಾರಗಳನ್ನು ಕುರಿತ ಕಾನೂನುಗಳೂ ಜಾರಿಯಲ್ಲಿವೆ.

ಭಾರತದಲ್ಲಿ ಗಣಿಗಾರಿಕೆ ಕಾನೂನುಗಳು

[ಬದಲಾಯಿಸಿ]

ಪ್ರಪಂಚದ ಇತರ ಹಲವು ದೇಶಗಳಂತೆ ಭಾರತದಲ್ಲೂ ಮೇಲ್ಕಂಡ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ಕಾನೂನುಗಳುಂಟು. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಗಣಿಗಳ ಅಭಿವೃದ್ಧಿಗಾಗಿ ಅವುಗಳ ಕಾರ್ಯವನ್ನು ಅಂಕೆಯಲ್ಲಿಡುವ ಬಗ್ಗೆ 1957ರಲ್ಲಿ ಗಣಿಗಳು ಮತ್ತು ಖನಿಜಗಳ ನಿಬಂಧನೆ ಮತ್ತು ಅಭಿವೃದ್ಧಿ ಕಾಯಿದೆ ಜಾರಿಗೆ ಬಂತು. ಈ ಶಾಸನದ ಅಥವಾ ಇದಕ್ಕೆ ಅನುಗುಣವಾಗಿ ರಚಿತವಾದ ನಿಯಮಗಳ ಪ್ರಕಾರ ಪೂರ್ವೇಕ್ಷಣ ಕಾರ್ಯದ ಅನುಜ್ಞೆ ಅಥವಾ ಗುತ್ತಿಗೆ ಪಡೆಯದೆ ಯಾರಿಗೂ ಪೂರ್ವೇಕ್ಷಣಕಾರ್ಯ ಅಥವಾ ಗಣಿ ಕಾರ್ಯದಲ್ಲಿ ಕೈ ಹಚ್ಚಲು ಸಾಮಾನ್ಯವಾಗಿ ಸಾಧ್ಯವಿಲ್ಲ. ಭಾರತೀಯ ಪ್ರಜೆಗಳಿಗೆ ಅಥವಾ ಭಾರತೀಯರೇ ಹೆಚ್ಚಿನ ಪಾಲು ಪಡೆದಿರುವ ಸಂಸ್ಥೆಗಳಿಗೆ ಮಾತ್ರ ಇದನ್ನು ಪಡೆಯುವ ಅರ್ಹತೆಯುಂಟು.

ಒಂದು ರಾಜ್ಯದಲ್ಲಿ ಒಬ್ಬನಿಗೆ ಪೂರ್ವೇಕ್ಷಣೆಗೆ 50 ಚ.ಮೈ.ಗಿಂತ, ಗುತ್ತಿಗೆಗೆ 10 ಚ.ಮೈ.ಗಿಂತ ಹೆಚ್ಚು ಸ್ಥಳ ಸಿಗಲಾರದು. ಆದರೆ ಕೇಂದ್ರ ಸರ್ಕಾರ ಗಣಿಯ ಅಭಿವೃದ್ಧಿಗಾಗಿ ಹೆಚ್ಚು ಸ್ಥಳವನ್ನು ಕೊಡಬೇಕೆಂದು ಅಭಿಪ್ರಾಯಪಟ್ಟಲ್ಲಿ ಈ ಪರಿಮಿತಿಗಿಂತ ಹೆಚ್ಚಿಗೆ ಸ್ಥಳ ಕೊಡಬಹುದು. ಅನುಜ್ಞೆಯ ಮತ್ತು ಗುತ್ತಿಗೆಯ ಅವಧಿ, ಅರ್ಜಿಯನ್ನು ಮಾಡುವ ಕ್ರಮ, ಕೊಡಬೇಕಾದ ಸ್ವಾಮಿಸ್ವ ಮುಂತಾದವುಗಳ ಬಗ್ಗೆ ಕಾಯಿದೆಯಲ್ಲಿ ಸೂಕ್ತ ವಿಧಿಗಳಿವೆ. ಅನುಜ್ಞೆ ಮತ್ತು ಗುತ್ತಿಗೆಗಳನ್ನು ಈ ಕಾಯಿದೆಗೆ ವಿರೋಧವಾಗಿ ಕೊಟ್ಟಲ್ಲಿ ಅವು ಸಂಪೂರ್ಣವಾಗಿ ಶೂನ್ಯವಾಗುತ್ತವೆ. ರಾಜ್ಯ ಸರ್ಕಾರದ ಅಭಿಪ್ರಾಯ ಪಡೆದುಕೊಂಡು ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವೇ ಸ್ವತಃ ಗಣಿ ಕಾರ್ಯ ಕೈಗೊಳ್ಳಬಹುದು. ಆದರೆ ಆ ಸಂದರ್ಭದಲ್ಲಿ ಅದು ಕೊಡಬೇಕಾದ ಸ್ವಾಮಿಸ್ವ ಇತ್ಯಾದಿಗಳನ್ನು ಖಾಸಗಿ ವ್ಯಕ್ತಿಗಳಂತೆಯೆ ಕೊಡಬೇಕಾಗುತ್ತದೆ.

1952ರಲ್ಲಿ ಭಾರತದಲ್ಲಿ ಜಾರಿಗೆ ಬಂದ ಗಣಿಗಳ ಕಾಯಿದೆಯು (1952 Mines' Act) ಗಣಿ ನಿರ್ವಹಣೆ, ಕಾರ್ಮಿಕರ ಹಿತರಕ್ಷಣೆ ಮುಂತಾದವುಗಳ ದೃಷ್ಟಿಯಿಂದ ಅತ್ಯಂತ ಮುಖ್ಯವಾದ್ದು. ಗಣಿ ಎಂಬ ಶಬ್ದಕ್ಕೆ ಕಾನೂನಿನ ದೃಷ್ಟಿಯಿಂದ ಇಲ್ಲಿ ವ್ಯಾಖ್ಯಾನ ನೀಡಲಾಗಿದೆ. ಈ ಕಾಯಿದೆಯ ಉದ್ದೇಶಕ್ಕಾಗಿ ಯಾವ ಉದ್ಯಮವನ್ನು ಗಣಿಗಾರಿಕೆ ಎನ್ನಬೇಕು ಎಂಬುದರ ಬಗ್ಗೆ ನಿರ್ಣಯಾಧಿಕಾರ ಸರ್ಕಾರದ್ದು.

ಗಣಿಯಲ್ಲಿ ಕೆಲಸಮಾಡುವ ಕಾರ್ಮಿಕರ ಆರೋಗ್ಯವನ್ನು ಕಾಪಾಡಲು, ಗಣಿಗಳಲ್ಲಿ ಬರಬಹುದಾದ ಅಪಾಯಗಳನ್ನು ತಡೆಯಲು ಅನೇಕ ನಿಬಂಧನೆಗಳಿವೆ. ಈ ಉದ್ದೇಶದ ಸಾಧನೆಗಾಗಿ ಗಣಿಗಳ ಮೇಲ್ವಿಚಾರಣೆ ನಡೆಯಿಸಲು ನಿರೀಕ್ಷಕರು, ಪ್ರಮಾಣಪತ್ರ ನೀಡಬಲ್ಲ ವೈದ್ಯರು, ಗಣಿ ಮಂಡಲಿ, ಸಮಿತಿ ಮುಂತಾದವುಗಳ ನೇಮಕಕ್ಕೆ ಸೂಕ್ತ ವಿಧಿಗಳಿದ್ದು ಅವರ ಮತ್ತು ಅವುಗಳ ಅಧಿಕಾರ ವ್ಯಾಪ್ತಿಯ ನಿರ್ದೇಶವಿದೆ.

ಗಣಿಗಳ ಕಾಯಿದೆಯ ನಿಬಂಧನೆಗಳು, ನಿಯಮಗಳು, ಉಪನಿಯಮಗಳು ಸರಿಯಾಗಿ ಪರಿಪಾಲಿಸಲ್ಪಡುವುವೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಅಗತ್ಯವಾದ ನಿರೀಕ್ಷಣ ಮತ್ತು ತನಿಖೆ ಮಾಡುವ ಅಧಿಕಾರ ಮುಖ್ಯ ನಿರೀಕ್ಷಕ, ಅವನ ಕೈ ಕೆಳಗೆ ಕೆಲಸ ಮಾಡುವ ನಿರೀಕ್ಷಕರು-ಇವರಿಗೆ ಇದೆ. ಹಗಲೇ ಆಗಲಿ, ರಾತ್ರಿಯೇ ಆಗಲಿ ಗಣಿಯ ಕೆಲಸಕ್ಕೆ ತೊಂದರೆಯಾಗದ ರೀತಿಯಲ್ಲಿ ತಮ್ಮ ಸಹಾಯಕರೊಂದಿಗೆ ಗಣಿಯನ್ನು ಪ್ರವೇಶಿಸಲು ಅವರಿಗೆ ಹಕ್ಕಿದೆ. ಗಣಿಗಳ ಪರಿಸ್ಥಿತಿ, ಗಾಳಿಯ ಕಿಂಡಿ, ಉಪನಿಯಮಗಳ ಪರ್ಯಾಪ್ತತೆ, ಕೆಲಸಗಾರರ ಸುರಕ್ಷತೆ, ನೆಮ್ಮದಿ, ಆರೋಗ್ಯ ಈ ದೃಷ್ಟಿಯಿಂದ ಅವರು ಪರಿಶೀಲನೆ ಅಥವಾ ತನಿಖೆ ನಡೆಸಬಹುದು. ತತ್ಸಂಬಂಧವಾಗಿ ಹೇಳಿಕೆಗಳನ್ನು ಪಡೆದುಕೊಳ್ಳಬಹುದು. ಕಾಯಿದೆಯ ಉಲ್ಲಂಘನೆಯಾಗಿದೆಯೆಂಬುದು ಸಿದ್ಧಪಟ್ಟರೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಥಳವನ್ನು ಶೋಧಿಸುವ, ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ಅವರಿಗಿರುತ್ತದೆ.

ಗಣಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ನಿರತರಾದವರ, ಅಪಾಯಕಾರಿ ಉದ್ಯೋಗ ಅಥವಾ ಕೆಲಸಗಳಲ್ಲಿ ತೊಡಗಿಸಲಾದವರ ಪರೀಕ್ಷೆ, ಕೆಲಸದಿಂದ ಅಥವಾ ಕೆಲಸದ ಸ್ವರೂಪದಿಂದ ಅಸ್ವಸ್ಥತೆ ಬಂದುದಾಗಿ ಶಂಕೆ ಇದ್ದವರ ಪರೀಕ್ಷೆ, ಕೆಲಸದಿಂದ ಅಥವಾ ಕೆಲಸದ ಸ್ವರೂಪದಿಂದ ಅಸ್ವಸ್ಥತೆ ಬಂದುದಾಗಿ ಶಂಕೆ ಇದ್ದವರ ಪರೀಕ್ಷೆ, ಪ್ರಮಾಣಪತ್ರ ನೀಡಿಕೆ ಮುಂತಾದ ಉದ್ದೇಶಗಳಿಗಾಗಿ ವೈದ್ಯರನ್ನು ನೇಮಿಸುವ ಅಧಿಕಾರ ಸರ್ಕಾರಕ್ಕಿರುತ್ತದೆ. ಕಾಯಿದೆಗೆ ಸಂಬಂಧಿಸಿದಂತೆ ಯಾವುದೇ ಪ್ರದೇಶಕ್ಕೆ ಅಥವಾ ಗಣಿಗಳ ಸಮುದಾಯಕ್ಕೆ ಅಥವಾ ಒಂದೇ ತೆರನಾದ ಹಲವು ಗಣಿಗಳಿಗೆ ಒಂದು ಗಣಿ ಮಂಡಳಿಯನ್ನು ಸರ್ಕಾರ ರಚಿಸಬಹುದು. ಸರ್ಕಾರ, ಮಾಲೀಕರು, ಕಾರ್ಮಿಕರು-ಇವರ ಪ್ರತಿನಿಧಿಗಳನ್ನೊಳಗೊಂಡ ಮಂಡಲಿಯೊಂದು ಗಣಿ ಸಂಬಂಧವಾದ ವಿಚಾರಗಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಬಹುದು. ಆ ವರದಿಗೆ ಅನುಗುಣವಾಗಿ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ.

ಕೆಲಸಗಾರರ ಆರೋಗ್ಯ ಮತ್ತು ಸುರಕ್ಷತೆಗಾಗಿ ಕಾಯಿದೆಯಲ್ಲಿ ಅನೇಕ ವಿಧಿಗಳಿವೆ. ಕುಡಿಯುವ ನೀರಿನ ಸರಬರಾಯಿ, ಶೌಚಗೃಹಗಳ ನಿರ್ಮಾಣ, ಶುಚಿತ್ವ, ಪ್ರಥಮ ಚಿಕಿತ್ಸೆಯ ವ್ಯವಸ್ಥೆ-ಇವನ್ನು ಒದಗಿಸುವ ಬಗ್ಗೆ ವಿಶೇಷ ವಿಧಿಗಳುಂಟು. ಅನುಚಿತವಾದ ಅಥವಾ ಅಪಾಯಕಾರಿ ಗಣಿ ಕೆಲಸದಲ್ಲಿ ಕಾರ್ಮಿಕರನ್ನು ತೊಡಗಿಸಿರುವುದು ಕಂಡುಬಂದರೆ ತಕ್ಕ ಕ್ರಮವನ್ನು ಕೈಗೊಂಡು ಗಣಿ ವ್ಯವಸ್ಥಾಪಕರಿಗೆ ಸೂಕ್ತ ಆದೇಶವನ್ನು ಕೊಡುವ ಹಕ್ಕು ಮುಖ್ಯ ನಿರೀಕ್ಷಕನಿಗೆ ಅಥವಾ ನಿರೀಕ್ಷಕರಿಗೆ ಇರುತ್ತದೆ. ನಿರೀಕ್ಷಕನ ಆದೇಶಗಳ ಮೇಲೆ ಆಕ್ಷೇಪಣೆಯನ್ನು ಗಣಿಯ ಆಡಳಿತದವರು ತಂದಲ್ಲಿ ಅದನ್ನು ವಿಚಾರಿಸಲು ಪ್ರತ್ಯೇಕವಾಗಿ ಗಣಿ ಸಮಿತಿಯಿದೆ. ಸುತ್ತಮುತ್ತ ಮರಣ ಅಥವಾ ಬೇರೆ ಯಾವುದಾದರೂ ವಿಪರೀತಗಳು ಸಂಭವಿಸಿದಲ್ಲಿ ಅವನ್ನು ಗಣಿ ವ್ಯವಸ್ಥಾಪಕರು ಸೂಕ್ತ ಅಧಿಕಾರಿಗಳಿಗೆ ತಿಳಿಸಬೇಕಲ್ಲದೆ ಪ್ರಕಟನೆ ಹಲಗೆಯ ಮೇಲೆ ಅದನ್ನು ಪ್ರಕಟಿಸಬೇಕು. ಕಾಯಿದೆಯಲ್ಲಿ ಹೇಳಲಾದ ಅಪಘಾತಗಳು ಸಂಭವಿಸಿದರೆ ಕೇಂದ್ರ ಸರ್ಕಾರ ಅದರ ತನಿಖೆಯ ಬಗ್ಗೆ ವಿಚಾರಣಾ ನ್ಯಾಯಾಲಯವನ್ನು ನೇಮಿಸಬಹುದು. ಕೆಲವೊಂದು ಕಾಯಿಲೆಗಳು ಗಣಿಸಂಬಂಧದವುಗಳೆಂದು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ. ಅಂಥ ಕಾಯಿಲೆ ಬಂದದ್ದು ಕಂಡುಬಂದರೆ ಗಣಿ ವ್ಯವಸ್ಥಾಪಕರು ಮತ್ತು ರೋಗಿಗೆ ಚಿಕಿತ್ಸೆ ಮಾಡುತ್ತಿರುವ ವೈದ್ಯರು ಅದರ ವಿವರಗಳನ್ನು ಮುಖ್ಯ ನಿರೀಕ್ಷಕನಿಗೆ ಕಳುಹಿಸಬೇಕು. ಆ ಕಾಯಿಲೆ ಗಣಿಸಂಬಂಧಿಯಾದ್ದು ಎಂಬುದು ಮುಖ್ಯ ನಿರೀಕ್ಷಕನಿಗೆ ಮನವರಿಕೆಯಾದಲ್ಲಿ ಆತ ಅದರ ವೈದ್ಯಕೀಯ ಖರ್ಚನ್ನು ಕೊಡುತ್ತಾನೆ ಮತ್ತು ಆ ಹಣವನ್ನು ಮಾಲೀಕನಿಂದ ಬಳಿಕ ವಸೂಲು ಮಾಡಲಾಗುವುದು. ಗಣಿಯಿಂದಾಗಿ ಬಂದ ಕಾಯಿಲೆಯಾಗಿದ್ದರೆ ಅಥವಾ ಹಾಗೆಂದು ಊಹಿಸಲು ಆಸ್ಪದವಿದ್ದರೆ ಕೇಂದ್ರ ಸರ್ಕಾರ ಅದರ ತನಿಖೆಗೆ ಏರ್ಪಾಡು ಮಾಡಬಹುದು. ಸಮಿತಿಯ ಮತ್ತು ರೋಗದ ತನಿಖೆಯ ವರದಿಯನ್ನು ಸರ್ಕಾರ ಪ್ರಕಟಿಸಬಹುದು; ವಿಚಾರಣಾ ನ್ಯಾಯಾಲಯದ ವರದಿಯನ್ನು ಅದು ಪ್ರಕಟಿಸಲೇಬೇಕು.

ಕೆಲಸಗಾರರ ಸ್ವಾಸ್ಥ್ಯ ದೃಷ್ಟಿಯಿಂದ, ಅವರು ಕೆಲಸ ಮಾಡಬೇಕಾದ ಸಮಯದ ಪರಿಮಿತಿಯನ್ನು ಕಾಯಿದೆಯಲ್ಲಿ ನಿಗದಿಗೊಳಿಸಲಾಗಿದೆ. ವಾರಕ್ಕೆ ಆರು ದಿನಗಳಿಗಿಂತ ಹೆಚ್ಚು ಯಾರೂ ಕೆಲಸ ಮಾಡಕೂಡದು. ಕಾರ್ಮಿಕರಿಗೆ ಕೊಡಬೇಕಾದ ವಿಶ್ರಾಂತಿಯ ದಿನ, ವೇಳೆ, ನೆಲದ ಮೇಲೆ ಮತ್ತು ಗಣಿಯ ಒಳಗೆ ಕೆಲಸ ಮಾಡುವ ಸಮಯದ ನಿಗದಿ, ನಿಗದಿಯಾದ ಸಮಯಕ್ಕಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಅದಕ್ಕೆ ವೇತನ ಕ್ರಮ, ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕೆಲಸ, ಅಪ್ರಾಪ್ತ ವಯಸ್ಕರನ್ನು ಗಣಿಯಲ್ಲಿ ತೊಡಗಿಸುವುದು, ಅವರಿಗೆ ಇರಬೇಕಾದ ಪ್ರಮಾಣಪತ್ರ, ಕೆಲಸಗಾರರ ರಜೆ, ಸಂಬಳ, ಮುಂಗಡ-ಇತ್ಯಾದಿಗಳನ್ನು ಕ್ರಮಪಡಿಸಲು ವಿವಿಧ ವಿಧಿಗಳನ್ನು ಗಣಿ ಕಾಯಿದೆಯಲ್ಲಿ ಅಳವಡಿಸಲಾಗಿದೆ. ಈ ಕಾಯಿದೆಯನ್ನು ಅನ್ವಯಿಸಿ ಸೂಕ್ತ ನಿಬಂಧನೆಗಳನ್ನು ಮಾಡುವ ಅಧಿಕಾರವೂ ಕೇಂದ್ರ ಸರ್ಕಾರಕ್ಕಿದೆ.

ಅಪಘಾತಗಳನ್ನು ತಡೆದು, ಗಣಿಯಲ್ಲಿ ಕೆಲಸ ಮಾಡುವವರ ಭದ್ರತೆ, ಸೌಕರ್ಯ ಮತ್ತು ಶಿಸ್ತು ರಕ್ಷಣೆಗಾಗಿ ಗಣಿಯನ್ನು ನಡೆಯಿಸುವವರಿಗೆ ಮತ್ತು ಕೆಲಸ ಮಾಡುವವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಅಗತ್ಯವಾದ ಉಪನಿಬಂಧನೆಗಳನ್ನು ಮಾಡಲು ಗಣಿಗಳ ಮಾಲೀಕರು, ನಿಯೋಗಿಗಳು ಅಥವಾ ವ್ಯವಸ್ಥಾಪಕರಿಗೆ ಅಧಿಕಾರವುಂಟು. ಅವರು ಇಂಥ ಉಪನಿಬಂಧನೆಗಳನ್ನು ಎರಡು ತಿಂಗಳುಗಳ ಒಳಗೆ ರಚಿಸದಿದ್ದಲ್ಲಿ ಅಥವಾ ಅಂಥ ಉಪನಿಬಂಧನೆಗಳು ಮುಖ್ಯ ನಿರೀಕ್ಷಕನ ದೃಷ್ಟಿಯಲ್ಲಿ ಸರಿಯೆನಿಸದಿದ್ದಲ್ಲಿ ಆತ ಅಗತ್ಯವಾದ ಉಪನಿಬಂಧನೆಗಳನ್ನು ರಚಿಸಿ ಅಥವಾ ಅದಕ್ಕೆ ಸೂಕ್ತ ತಿದ್ದುಪಡಿ ಮಾಡಿ ಗಣಿಗಳ ನಿರ್ವಾಹಕರಿಗೆ ಕಳುಹಿಸಿಕೊಡಬೇಕು. ಇವು ಗಣಿ ನಿರ್ವಾಹಕರಿಗೆ ಒಪ್ಪಿಗೆಯಾಗದಿದ್ದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೇಂದ್ರ ಸರ್ಕಾರದ್ದು. ಗಣಿ ಕಾಯಿದೆಯಲ್ಲಿ ಕಾರ್ಮಿಕರಿಗೆ ಅನ್ವಯವಾಗುವ ಭಾಗಗಳನ್ನೂ ನಿಬಂಧನೆ ಉಪನಿಬಂಧನೆಗಳನ್ನೂ ಕಾರ್ಮಿಕರಿಗೆ ತಿಳಿಯುವಂತೆ ಗಣಿ ಪ್ರಕಟಿಸಬೇಕು. ಕಾಯಿದೆಯ ಪಾಲನೆ ಮಾಡದಿದ್ದರೆ ಸೂಕ್ತ ಶಿಕ್ಷೆಗಳೂ ಸೂಚಿತವಾಗಿವೆ.

ಕಾಯಿದೆಯ ವಿಧಿಗಳ ಮತ್ತು ನಿಯಮಗಳ ಪರಿಪಾಲನೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂದು ಪರಿಶೀಲಿಸುವ ಬಗ್ಗೆ ಯಾವುದೇ ಗಣಿಯ ತನಿಖೆಯ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ.

ಸ್ತ್ರೀ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾಯಿದೆಯಿದೆ. ಹೆರಿಗೆ, ಶಿಶುಪೋಷಣೆ ಮುಂತಾದವುಗಳಿಗಾಗಿ ಸ್ತ್ರೀ ಕಾರ್ಮಿಕರಿಗೆ ರಜೆ ಮತ್ತು ಇತರ ಸೌಲಭ್ಯಗಳು ಕಡ್ಡಾಯ. ದುಡಿಮೆಗಾರ್ತಿಯರನ್ನು ಹೆರಿಗೆಯ ಸಮಯದಲ್ಲಿ ಕೆಲಸದಿಂದ ತೆಗೆಯುವುದಕ್ಕೆ ನಿಷೇಧವುಂಟು.

ಭಾರತದ ಕಾರ್ಖಾನೆ ಕಾಯಿದೆಯ 3 ಮತ್ತು 4 ನೆಯ ಪರಿಚ್ಛೇದಗಳನ್ನು ಗಣಿಗಳಿಗೆ ವಿಸ್ತರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಸರ್ಕಾರದ ಗಣಿಗಳನ್ನು ವಶಪಡಿಸಿಡಿಕೊಳ್ಳುವ ಅಧಿಕಾರವೂ ಕೇಂದ್ರಕ್ಕೆ ಉಂಟು.

ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: