ವಿಷಯಕ್ಕೆ ಹೋಗು

ಕಾರ್ಮಿಕ ಕಲ್ಯಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಮಿಕ ಕಲ್ಯಾಣದ ನಿಖರವಾದ ವ್ಯಾಖ್ಯೆ ನೀಡುವುದು ಸುಲಭವಲ್ಲ. ಒಂದು ದೇಶದ ಆಚಾರ, ವ್ಯವಹಾರ, ಸಾಮಾಜಿಕ ಸಂಸ್ಥೆಗಳು, ಕೈಗಾರಿಕಾ ಹಾಗೂ ಆರ್ಥಿಕ ಅಭಿವೃದ್ಧಿಯ ಹಂತ-ಇವುಗಳಿಗೆ ಅನುಗುಣವಾಗಿ ಕಾರ್ಮಿಕ ಕಲ್ಯಾಣದ ಪರಿಕಲ್ಪನೆ ವ್ಯತ್ಯಾಸವಾಗುತ್ತದೆ. ಕಾರ್ಮಿಕರ ಉದ್ಯೋಗ ಪರಿಸ್ಥಿತಿಗಳನ್ನು ಉತ್ತಮಪಡಿಸುವ ಸೌಲಭ್ಯಗಳನ್ನು ಒದಗಿಸುವ ಎಲ್ಲ ಯೋಜನೆಗಳೂ ಕಾರ್ಮಿಕ ಕಲ್ಯಾಣ ಕಾರ್ಯಗಳೆಂಬುದು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ನೀಡಿರುವ ವ್ಯಾಖ್ಯೆ. ಆಂತರಿಕ ಮತ್ತು ಬಾಹ್ಯ ಎಂದು ಎರಡು ಗುಂಪುಗಳಾಗಿ ಇವನ್ನು ವಿಂಗಡಿಸಲಾಗಿದೆ. ಶೌಚಗೃಹ, ಶಿಶುವಿಹಾರ, ವಿಶ್ರಾಂತಿಗೃಹ ಮತ್ತು ಉಪಾಹಾರ ಮಂದಿರಗಳು, ಕುಡಿಯುವ ನೀರು, ಆರೋಗ್ಯ ಮತ್ತು ಸುರಕ್ಷಣೆ, ಸಮವಸ್ತ್ರ ಹಾಗೂ ರಕ್ಷಕ ವಸ್ತ್ರಗಳು-ಇವು ಆಂತರಿಕ ಸೌಲಭ್ಯಗಳು. ಉಪದಾನ (ಗ್ರಾಚುಯಿಟಿ) ನಿವೃತ್ತಿ ವೇತನ, ಭವಿಷ್ಯ ನಿಧಿ, ಸಹಾಯ ನಿಧಿ, ಚಿಕಿತ್ಸೆ, ವಸತಿ ಮತ್ತು ಶಿಕ್ಷಣದ ಸೌಕರ್ಯಗಳು, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆ, ಪುಸ್ತಕ ಭಂಡಾರ ಮೊದಲಾದವು ಬಾಹ್ಯ ಸೌಲಭ್ಯಗಳು.[]

ಕಾರ್ಮಿಕ ಸಂಘಗಳು ಹಾಗೂ ಲೋಕೋಪಯೋಗಿ ಸಂಸ್ಥೆಗಳು

[ಬದಲಾಯಿಸಿ]

ಇವುಗಳಲ್ಲಿ ಕೆಲವು ಸೌಲಭ್ಯಗಳನ್ನು ಸರ್ಕಾರ, ಕಾರ್ಮಿಕ ಸಂಘಗಳು ಹಾಗೂ ಲೋಕೋಪಯೋಗಿ ಸಂಸ್ಥೆಗಳು ಒದಗಿಸಿದರೂ ಕಾರ್ಮಿಕ ಕಲ್ಯಾಣದ ಅಧಿಕಪಾಲಿನ ಹೊರೆಯನ್ನು ಉದ್ಯಮಿಗಳೇ ವಹಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಉದ್ಯಮಿಗಳು ಮಾಡಬೇಕಾದ ವೆಚ್ಚ ಕಡಿಮೆಯೇನಲ್ಲ. ಆದರೆ ಈ ವೆಚ್ಚ ವ್ಯರ್ಥವಲ್ಲ. ಈ ಸೌಲಭ್ಯಗಳನ್ನು ನೀಡುವುದರಿಂದ ಕಾರ್ಮಿಕರ ನಿಷ್ಠೆ ಗಳಿಸುವುದು ಸಾಧ್ಯ-ಎಂಬುದು ಈ ವೆಚ್ಚ ಭರಿಸಲು ಉದ್ಯಮಿಗಳು ಮುಂದೆ ಬರಲು ಒಂದು ಕಾರಣ. ಈ ಸೌಲಭ್ಯಗಳನ್ನು ನೀಡುವುದರಿಂದ ಕಾರ್ಮಿಕರ ಕಲ್ಯಾಣದ ಯೋಜನೆಗಳಿಗೆ ಇದಕ್ಕೂ ವಿಶಾಲವಾದ ಉದ್ದೇಶವೂ ಉಂಟು. ಕಾರ್ಮಿಕ ಕಲ್ಯಾಣ ಸಾಧನೆ ಸಮಾಜ ಕಲ್ಯಾಣದ ಒಂದು ಅಂಗ. ಸರ್ಕಾರವಾಗಲಿ ಉದ್ಯಮಿಗಳಾಗಲಿ ಕಾರ್ಮಿಕ ಕಲ್ಯಾಣವನ್ನು ಸಮಾಜಕಲ್ಯಾಣದ ಹಿನ್ನೆಲೆಯಲ್ಲಿ ನೋಡುವುದು ಅವಶ್ಯ. ಕಾರ್ಮಿಕರ ನಿಷ್ಠೆಯ ಸಂಪಾದನೆ ಮತ್ತು ಕಾರ್ಯದಕ್ಷತೆಯ ಅಭಿವೃದ್ಧಿ ಸಾಧನೆ-ಇವು ತತ್‍ಕ್ಷಣದ ಫಲಗಳಷ್ಟೆ.

ಕಾರ್ಮಿಕ ಕಲ್ಯಾಣ ಕಾರ್ಯ

[ಬದಲಾಯಿಸಿ]

ಭಾರತದಲ್ಲಿ ಕಾರ್ಮಿಕ ಕಲ್ಯಾಣ ಕಾರ್ಯಗಳನ್ನು ಕೈಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ಭಾರತೀಯ ಕಾರ್ಮಿಕರ ಬಡತನ ಅಧಿಕವಾಗಿವುದರಿಂದ ಅನುಕೂಲಸ್ಥ ದೇಶಗಳಲ್ಲಿ ಬೇಡವೆನಿಸಬಹುದಾದ ಅನೇಕ ಸೌಲಭ್ಯಗಳನ್ನು ಇಲ್ಲಿ ಒದಗಿಸುವುದು ಅನಿವಾರ್ಯವಗುತ್ತದೆ. ಅಲ್ಲದೆ ಈಗ ಭಾರತ ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಪರಿವರ್ತನೆ ಹೊಂದುತ್ತಿರುವ ಸ್ಥಿತಿಯಲ್ಲಿದೆ. ಗ್ರಾಮೀಣ ಹಾಗೂ ಕೃಷಿ ಆಧಾರಿತ ಸಮಾಜ ಈಗ ನಗರೀಕೃತ ಹಾಗೂ ಕೈಗಾರಿಕಾಧಾರಿತ ಸಮಾಜವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಕಾಲದಲ್ಲಿ ಗ್ರಾಮಾಂತರ ಪ್ರದೇಶದಿಂದ ಬಂದ ಕಾರ್ಮಿಕರು ಸುಲಭವಾಗಿ ಕೈಗಾರಿಕೆಯ ನೂತನ ಜೀವನಕ್ಕೆ ಹೊಂದಿಕೊಳ್ಳುವಂತೆ ಅನುಕೂಲಪಡಿಸುವ ದೃಷ್ಟಿಯಿಂದ ಸಾಕಷ್ಟು ಕ್ಷೇಮಾಭ್ಯುದಯ ಕಾರ್ಯಕ್ರಮಗಳನ್ನು ಕೈಗೊಳ್ಳವುದು ಆವಶ್ಯಕ.ಈ ಆವಶ್ಯಕತೆಯನ್ನು ಅರಿತ ಕೆಲವು ಪ್ರಗತಿಪರ ಹಾಗೂ ವಿವೇಕಿ ಉದ್ಯಮಿಗಳು ಸ್ವಪ್ರೇರಣೆಯಿಂದ ತಮ್ಮ ಕಾರ್ಖಾನೆಗಳಲ್ಲಿ ಕೆಲವು ಕಾರ್ಮಿಕ ಕಲ್ಯಾಣ ಸೌಲಭ್ಯಗಳನ್ನು ಎರಡನೆಯ ಮಹಾಯುದ್ದ ಪೂರ್ವದಲ್ಲಿಯೇ ಒದಗಿಸಿದ್ದರು. ಈ ಸೌಲಭ್ಯಗಳು ವ್ಯಾಪಕವಾಗಿಲ್ಲದಿದ್ದುದರಿಂದ ಸರ್ಕಾರ ನಡುವೆ ಪ್ರವೇಶಿಸಬೇಕಾಯಿತು. ಸರ್ಕಾರದ ರಕ್ಷಣಾ ಕೈಗಾರಿಕೆಗಳಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಿತು. ಇದರ ಜೊತೆಗೆ, ಎಲ್ಲ ಉದ್ಯಮಗಳಲ್ಲೂ ಅನೇಕ ಕಾರ್ಮಿಕ ಕಲ್ಯಾಣ ಸೌಕರ್ಯಗಳನ್ನು ಒದಗಿಸಲು ಕಾಯಿದೆ ಮಾಡಿತು. ಉದ್ಯಮಿಗಳೇ ಸ್ವಪ್ರೇರಣೆಯಿಂದ ಒದಗಿಸುವ ಸೌಲಭ್ಯಗಳು ಮತ್ತು ಕಾಯಿದೆಯನ್ವಯ ಒದಗಿಸುವ ಸೌಲಭ್ಯಗಳು ಎಂದು ಇವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.[]

ಕಾರ್ಖಾನೆಗಳ ಕಾಯಿದೆ

[ಬದಲಾಯಿಸಿ]

1948 ರ ಕಾರ್ಖಾನೆಗಳ ಕಾಯಿದೆಯ ಪ್ರಕಾರ ಪ್ರತಿಯೊಬ್ಬ ನೇಮಕದಾರನೂ ತನ್ನ ಉದ್ಯೋಗಿಗಳಿಗೆ ಕಡ್ಡಾಯವಾಗಿ ಒದಗಿಸಬೇಕಾದ ಸೌಲಭ್ಯಗಳಿವು: ಕುಡಿಯಲು ತಂಪಾದ ಹಾಗೂ ಚೊಕ್ಕಟವಾದ ನೀರು, ಶೌಚಗೃಹ, 250ಕ್ಕೆ ಕಡಿಮೆಯಿಲ್ಲದಷ್ಟು ಕಾರ್ಮಿಕರಿರುವ ಪತ್ರಿ ಕಾರ್ಖಾನೆಯಲ್ಲೂ ಉಪಾಹಾರ ಮಂದಿರ, 50ಕ್ಕೆ ಕಡಿಮೆಯಿಲ್ಲದಷ್ಟು ಮಹಿಳಾ ಕೆಲಸಗಾರರಿರುವ ಪ್ರತಿ ಕಾರ್ಖಾನೆಯಲ್ಲೂ ಶಿಶುವಿಹಾರ, ಕನಿಷ್ಠ 150 ಕಾರ್ಮಿಕರಿರುವ ಪ್ರತಿ ಕಾರ್ಖಾನೆಯಲ್ಲೂ ವಿಶ್ರಾಂತಿ ಹಾಗೂ ಉಪಾಹಾರ ಕೋಣೆಗಳು. ಸುರಕ್ಷಣೆ ಹಾಗೂ ಆರೋಗ್ಯದ ವಿಷಯದಲ್ಲೂ ಈ ಕಾಯಿದೆ ಅನೇಕ ಕಟ್ಟುಪಾಡುಗಳನ್ನು ಮಾಡಿದೆ. ಆವಿ, ಹೊಗೆ, ದೂಳು ಮೊದಲಾದವು ಹೊರಗೆ ಹೋಗುವಂತೆ ಸರಿಯಾದ ವ್ಯವಸ್ಥೆ ಪ್ರತಿ 150 ಕಾರ್ಮಿಕರಿಗೆ ಒಂದರಂತೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ, 500 ಕೆಲಸಗಾರರಿರುವ ಪ್ರತಿ ಕಾರ್ಖಾನೆಯಲ್ಲೂ ರುಗ್ಣ ವಾಹನ (ಆಂಬ್ಯುಲೆನ್ಸ್)-ಇವು ಇರಬೇಕು. ಅಲ್ಲದೆ ಆಕಸ್ಮಿಕಗಳನ್ನು ತಡೆಗಟ್ಟುವ ದೃಷ್ಟಿಯಿಂದ ಯಂತ್ರಗಳಿಗೆ ಬೇಲಿ ಅಥವಾ ಕಟಕಟೆ ಏರ್ಪಡಿಸಬೇಕು. ಕಾರ್ಮಿಕರಿಗೆ ಸುರಕ್ಷಣೆಯ ವಸ್ತ್ರಗಳು, ಪಾದರಕ್ಷೆಗಳು, ಕನ್ನಡಕಗಳು ಮೊದಲಾದವನ್ನು ಒದಗಿಸುವಂತೆಯೂ ಕಟ್ಟುಪಾಡುಗಳನ್ನು ಮಾಡಲಾಗಿದೆ.ಕಾರ್ಖಾನೆಗಳ ಕಾಯಿದೆಗೆ ಸದೃಶವಾದ ಕಾಯಿದೆಗಳನ್ನು ಗಣಿ, ಪ್ಲಾಂಟೇಶಷನ್ ಹಾಗೂ ಬಂದರು ಕಾರ್ಮಿಕರಿಗೂ ತರಲಾಯಿತು. 1952ರ ಗಣಿ ಕಾಯಿದೆ, 1951ರ ಪ್ಲಾಂಟೇಷನ್ ಕಾಯಿದೆ, ಭಾರತೀಯ ವ್ಯಾಪಾರಿ ನೌಕೆ ಕಾಯಿದೆ-ಇವನ್ನು ಕಾರ್ಖಾನೆಗಳ ಕಾಯಿದೆಯಲ್ಲಿಯ ಕಾರ್ಮಿಕ ಕಲ್ಯಾಣ ಕಟ್ಟುಪಾಡುಗಳನ್ನು ಕ್ರಮವಾಗಿ ಈ ಕೈಗಾರಿಕೆಗಳಿಗೂ ಅನ್ವಯಿಸುವ ಉದ್ದೇಶದಿಂದ ಜಾರಿಗೆ ತರಲಾಯಿತು. ಕಲ್ಲಿದ್ದಲು ಮತ್ತು ಅಭ್ರಕ ಗಣಿ ಕಲ್ಯಾಣ ನಿಧಿಯ ಕಾಯಿದೆ ಮತ್ತು ಕಬ್ಬಿಣದ ಅದುರು ಕಾರ್ಮಿಕರ ಕಲ್ಯಾಣ ಮೇಲ್ತೆರಿಗೆ ಕಾಯಿದೆಗಳನ್ನೂ ಈ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದಲೇ ಜಾರಿಗೆ ತರಲಾಗಿದೆ. ಇಲ್ಲಿ ಉತ್ಪನ್ನದ ಮೇಲೆ ಮೇಲ್ತೆರಿಗೆ ಹಾಕಿ ಅದರಿಂದ ಬಂದ ಮೊಬಲಗಿನಿಂದ ಕಾರ್ಮಿಕರಿಗೆ ಸೌಲಭ್ಯಗಳನ್ನೊದಗಿಸುತ್ತದೆ.

ಕಾರ್ಮಿಕರ ಅನಿಶ್ಚಿತತೆಯ ಪರಿಸ್ಥಿತಿ

[ಬದಲಾಯಿಸಿ]

ಕಾರ್ಮಿಕರ ಅನಿಶ್ಚಿತತೆಯ ಪರಿಸ್ಥಿತಿಗಳನ್ನೆದುರಿಸಲು ನೆರವಾಗುವ ಸೌಲಭ್ಯಗಳನ್ನೊದಗಿಸುವ ಸಲುವಾಗಿ 1948ರ ಕಾರ್ಮಿಕರ ರಾಜ್ಯವಿಮಾ ಕಾಯಿದೆಯನ್ನು ಜಾರಿಗೆ ತರಲಾಯಿತು. ಉದ್ಯೋಗದಾತ, ಸರ್ಕಾರ ಮತ್ತು ಉದ್ಯೋಗಿಗಳಿಂದ ಪಡೆದ ಅಂಶ ದಾನಗಳಿಂದ ರಚಿಸಿದ ನಿಧಿಯಿಂದ ಈ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವಿಮಾ ಯೋಜನೆಗೆ ಒಳಪಟ್ಟ ಕಾರ್ಮಿಕರು ಐದು ಬಗೆಯ ಸೌಲಭ್ಯಗಳನ್ನು ಪಡೆಯುತ್ತಾರೆ. 1 ಕಾಯಿಲೆಗಾಗಿ ಒಂದು ವರ್ಷದಲ್ಲಿ 28 ದಿನಗಳ ವರೆಗೆ ವೇತನ ಸಹಿತ ರಜ 2 ಕಾರ್ಮಿಕ ಹಾಗೂ ಅವನ ಕುಟಂಬದ ಸದಸ್ಯರಿಗೆ ಉಚಿತ ಚಿಕಿತ್ಸೆ 3 ಮಹಿಳಾಕಾರ್ಮಿಕರಿಗೆ ಪ್ರಸೂತಿಯ ಕಾಲದಲ್ಲಿ ನಗದಿಯ ನೆರವು, 4 ವಿಕಲಾಂಗ, ಉದ್ಯೋಗಹಾನಿ ಮತ್ತು ಕಾಯಿಲೆಗಳ ಸಮಯದಲ್ಲಿ ಕಾರ್ಮಿಕನಿಗೆ ನೆರವು ಮತ್ತು 5 ಮರಣಿಸಿದ ಕಾರ್ಮಿಕನ ಆತ್ರಿತರಿಗೆ ಅವಲಂಬಿ ನೆರವು. 1952ರ ಕಾರ್ಮಿಕರ ಭವಿಷ್ಯ ನಿಧಿ ಕಾಯಿದೆ ಇನ್ನೊಂದು ಮುಖ್ಯ ಕಾನೂನು. ಕಾಯಿದೆಗೊಳಪಡದ ಸೌಲಭ್ಯಗಳನ್ನೂ ಉದ್ಯೋಗದಾತರು ಒದಗಿಸುವುದುಂಟು. ಇವುಗಳಲ್ಲಿ ಮುಖ್ಯವಾದವು ಚಿಕಿತ್ಸೆ, ಶಿಕ್ಷಣ ಮತ್ತು ಮನೋರಂಜನೆ. ಕಾರ್ಮಿಕರ ರಾಜ್ಯವಿಮಾ ವ್ಯವಸ್ಥೆಯ ಪ್ರಕಾರ ಚಿಕಿತ್ಸೆಯ ಸೌಲಭ್ಯ ನೀಡಿದ್ದರೂ ಕೆಲವು ಉದ್ಯಮಗಳಲ್ಲಿ ಪ್ರತ್ಯೇಕವಾದ ಆಸ್ಪತ್ರೆಗಳಿರುತ್ತವೆ. ಭವಿಷ್ಯ ನಿಧಿಯ ಜೊತೆಗೆ ಹಲವು ಉದ್ಯಮಗಳಲ್ಲಿ ಕಾರ್ಮಿಕರಿಗೆ ಪ್ರೋತ್ಸಾಹಕ ದ್ರವ್ಯ ನೀಡುವುದೂ ಉಂಟು. ಕಾರ್ಮಿಕ ನಿವೃತ್ತಿ ಹೊಂದಿದಾಗ ಪ್ರತಿವರ್ಷದ ಸೇವೆಗೂ ಆತನ ವೇತನದ ಆಧಾರದ ಮೇಲೆ ಇಷ್ಟು ಎಂದು ಹಣವನ್ನು ಪ್ರೋತ್ಸಾಹಕ ದ್ರವ್ಯದ ರೂಪದಲ್ಲಿ ಕೊಡುವ ಪದ್ಧತಿ ಅನೇಕ ಕಾರ್ಖಾನೆಗಳಲ್ಲಿ ಕಂಡುಬರುತ್ತದೆ. ಕಾರ್ಮಿಕರ ಮಕ್ಕಳ ಶಿಕ್ಷಣದ ವಿಷಯದಲ್ಲಿ ಅನೇಕ ಉದ್ಯಮಗಳು ಉದಾರವಾಗಿ ಸಹಾಯ ನೀಡುತ್ತಿವೆ. ಕೆಲವು ಉದ್ಯಮಗಳಲ್ಲಿ ಪ್ರತ್ಯೇಕ ಶಾಲೆಗಳಿವೆ. ಇನ್ನು ಕೆಲವು ಉದ್ಯಮಗಳಲ್ಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅವಶ್ಯವಾದ ಪುಸ್ತಕ, ಸಾರಿಗೆ ಸೌಲಭ್ಯ ಹಾಗೂ ವಿದ್ಯಾರ್ಥಿವೇತನಗಳನ್ನು ಒದಗಿಸುವುದುಂಟು. ಮನೋರಂಜನೆಯ ಸೌಲಭ್ಯಗಳನ್ನು ಕೂಡ ಏರ್ಪಡಿಸಲಾಗುತ್ತಿದೆ.

ಸರ್ಕಾರದ ಕರ್ತವ್ಯ

[ಬದಲಾಯಿಸಿ]

ವಸತಿ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾದರೂ ಅನೇಕ ಉದ್ಯೋಗದಾತರು ಅನುದಾನದ ಪ್ರಯೋಜನ ಪಡೆದು ಕಾರ್ಮಿಕರಿಗೆ ವಸತಿ ಏರ್ಪಡಿಸಿದ್ದಾರೆ. ಇದರ ಜೊತೆಗೆ, ಕಾರ್ಮಿಕರು ವಾಸಸ್ಥಾನದಿಂದ ಕಾರ್ಖಾನೆಗೆ ಹೋಗಿ ಬರಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯೂ ಅನೇಕ ಕಾರ್ಖಾನೆಗಳಲ್ಲಿವೆ. ಬೆಲೆಗಳ ತೀವ್ರ ಏರಿಕೆಯ ಕಾಲದಲ್ಲಿ ಕಾರ್ಮಿಕರಿಗೆ ಅವಶ್ಯವಾದ ಪದಾರ್ಥಗಳನ್ನು ನ್ಯಾಯಬೆಲೆಗಳಲ್ಲಿ ದೊರಕಿಸಲು ಅನುವಾಗುವಂತೆ ಬಳಕೆದಾರ ಸಹಕಾರರ ಸಂಸ್ಥೆಗಳನ್ನು ಸ್ಥಾಪಿಸಲು ಉತ್ತೇಜನ ಕೊಟ್ಟಿರುವುದಲ್ಲದೆ, ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲೂ ವ್ಯವಸ್ಥೆ ಮಾಡಿರುತ್ತಾರೆ. ಇದಕ್ಕೆ ಅಗತ್ಯವಾದ ಬಂಡವಾಳ, ಕಟ್ಟಡ ಹಾಗೂ ಕಾರ್ಯನಿರ್ವಹಣೆಯ ಸೌಲಭ್ಯಗಳನ್ನು ಉದ್ಯಮ ಒದಗಿಸುತ್ತದೆ.

ಕಾರ್ಮಿಕ ಕಲ್ಯಾಣ ಸಾಧನೆ

[ಬದಲಾಯಿಸಿ]

ಕಾರ್ಮಿಕ ಕಲ್ಯಾಣ ಸಾಧನೆಯಲ್ಲಿ ಉದ್ಯಮಗಳು ವಿಶೇಷ ಆಸ್ಥೆ ವಹಿಸಿರುವುವಾದರೂ ಈ ಬಗ್ಗೆ ರಾಷ್ಟ್ರೀಯ ಕಾರ್ಮಿಕ ಆಯೋಗ ನಡೆಸಿದ ಅಧ್ಯಯನದಿಂದ ಕೆಲವು ಅಪ್ರಿಯ ಸಂಗತಿಗಳು ಹೊರಬಿದ್ದಿವೆ. ಕಾರ್ಮಿಕರಿಗೆ ಕಾಯಿದೆಯ ಪ್ರಕಾರ ಒದಗಿಸ ಬೇಕಾದ ಸೌಲಭ್ಯಗಳನ್ನು ತೃಪ್ತಿಕರವಾಗಿ ಒದಗಿಸಲಾಗುತ್ತಿಲ್ಲವೆಂಬುದನ್ನೂ ಸಣ್ಣ ಕಾರ್ಖಾನೆಗಳಲ್ಲಂತೂ ಈ ಸೌಲಭ್ಯಗಳು ತೀರ ಕಡಿಮೆ ಎಂಬುದನ್ನೂ ಈ ಅಧ್ಯಯನ ಸ್ಪಷ್ಟಪಡಿಸಿದೆ. ಕಾರ್ಮಿಕ ಕಲ್ಯಾಣ ಕಾರ್ಯದ ಅಧಿಕವೆಚ್ಚ ಈ ಅಸಮರ್ಪಕತೆಗೆ ಒಂದು ಕಾರಣ. ಅನೇಕ ಕಾರ್ಖಾನೆಗಳು ಇದರ ಹೊರೆಯನ್ನು ವಹಿಸಲಾರದೆ ಅಥವಾ ವಹಿಸಲೊಲ್ಲದೆ ಕಾಯಿದೆಯ ಕಟ್ಟುಪಾಡುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುವುದು ಕಂಡುಬಂದಿದೆ.ವಾಸ್ತವವಾಗಿ ಕಾರ್ಮಿಕ ಕಲ್ಯಾಣ ಸಾಧನೆಯ ಹೊಣೆ ಉದ್ಯೋಗದಾತರು ಮಾತ್ರವಲ್ಲವೆಂದು ಹೇಳಲಾಗಿದೆ. ಅವರ ಜೊತೆಗೆ ಸರ್ಕಾರ ಹಾಗೂ ಕಾರ್ಮಿಕ ಸಂಘಗಳೂ ಈ ಹೊಣೆಯನ್ನು ವಹಿಸಿಕೊಳ್ಳಬೇಕು. ಪಾಶ್ಚತ್ಯ ದೇಶಗಳಲ್ಲಿ ಕೆಲವು ಸ್ವಪ್ರೇರಣೆಯ ಸಂಸ್ಥೆಗಳೂ ಈ ಕಾರ್ಯ ಕೈಗೊಳ್ಳುತ್ತಿವೆ. ಭಾರತದಲ್ಲಿ ಸರ್ಕಾರ ಈ ವಿಷಯದಲ್ಲಿ ಆಸ್ಥೆ ವಹಿಸಿದೆ. ಪ್ರತಿ ರಾಜ್ಯ ಸರ್ಕಾರವೂ ಅನೇಕ ಕಾರ್ಮಿಕ ಕಲ್ಯಾಣ ಕೇಂದ್ರಗಳನ್ನು ಸ್ಥಾಪಿಸಿ, ಅವರಿಗೆ ಚಿಕಿತ್ಸೆ, ಶಿಕ್ಷಣ, ಮನೋರಂಜನೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದೆ. ಆದರೂ ಸರ್ಕಾರ ಇನ್ನೂ ಹೆಚ್ಚಿನ ಪಾತ್ರ ವಹಿಸಬೇಕಾಗುತ್ತದೆ. ಸರ್ಕಾರ ಹೊಸ ಹೊಸ ಕಲ್ಯಾಣ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕಲ್ಲದೆ, ಉದ್ಯೋಗದಾತರನ್ನೂ ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಿ ಸೂಕ್ತ ಸಹಾಯ ದ್ರವ್ಯ ಕೊಟ್ಟು ಇವನ್ನು ಬೆಳೆಸಬೇಕು. ಹಾಗೆಯೆ ಕಾರ್ಮಿಕ ಸಂಘಗಳೂ ಈ ವಿಷಯದಲ್ಲಿ ಹಿರಿಯ ಪಾತ್ರ ವಹಿಸಬಹುದು. ಅಹಮದಾಬಾದ್ ಹತ್ತಿ ಗಿರಣಿ ಕಾರ್ಮಿಕರ ಸಂಘ, ರೈಲ್ವೆ ಕಾರ್ಮಿಕರ ಸಂಘ ಹಾಗೂ ಕಾನ್ಪುರದ ಮಜ್ದೂರ್ ಸಭಾ-ಇವು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿವೆ. ಆದರೆ ಉಳಿದ ಅನೇಕ ಕಾರ್ಮಿಕ ಸಂಘಗಳು ಈ ವಿಷಯದಲ್ಲಿ ಹೆಚ್ಚಿನ ಆಸ್ಥೆ ವಹಿಸಿಲ್ಲ. ಇವು ಕೇವಲ ಮುಷ್ಕರ ಮಂಡಳಿಗಳಂತೆ ಕೆಲಸ ಮಾಡುತ್ತಿರುವುದೇ ಹೊರತು ಕಾರ್ಮಿಕರ ಕಲ್ಯಾಣದ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಲ್ಲವೆಂಬುದು ಒಂದು ಟೀಕೆ. ಇವುಗಳ ಹಣದ ಕೊರತೆಯೂ ಈ ಬಗೆಯ ಸೌಲಭ್ಯದ ಆವಶ್ಯಕತೆಯ ಬಗ್ಗೆ ಅಜ್ಞಾನವೂ ಇವುಗಳ ಅನಾವಸ್ಥೆಗೆ ಇತರ ಕಾರಣಗಳು.  

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: