ವಿಷಯಕ್ಕೆ ಹೋಗು

ಖಾಂದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಾಂದೇಶ
ಪ್ರದೇಶ
ಮುಕ್ತಾಯಿನಗರ್ ಹತ್ತಿರ ಪೂರ್ಣಾ ನದಿಯ ಪರಿದೃಶ್ಯ ನೋಟ
ಮುಕ್ತಾಯಿನಗರ್ ಹತ್ತಿರ ಪೂರ್ಣಾ ನದಿಯ ಪರಿದೃಶ್ಯ ನೋಟ
ನೀಲಿ: ಮಹಾರಾಷ್ಟ್ರದಲ್ಲಿ ಖಾಂದೇಶ ತಿಳಿ ನೀಲಿ: ಮಧ್ಯ ಪ್ರದೇಶದಲ್ಲಿ ಖಾಂದೇಶ (ಬುರ್ಹಾನ್‍ಪುರ್)
ನೀಲಿ: ಮಹಾರಾಷ್ಟ್ರದಲ್ಲಿ ಖಾಂದೇಶ
ತಿಳಿ ನೀಲಿ: ಮಧ್ಯ ಪ್ರದೇಶದಲ್ಲಿ ಖಾಂದೇಶ (ಬುರ್ಹಾನ್‍ಪುರ್)
ದೇಶಭಾರತ
ರಾಜ್ಯಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ
ಜಿಲ್ಲೆಗಳು1] ಜಳಗಾಂವ್
2] ಧುಳೆ
3] ನಂದುರ್‌ಬಾರ್
4] ಬುರ್ಹಾನ್‍ಪುರ್
ಅತಿ ದೊಡ್ಡ ನಗರಜಳಗಾಂವ್
ಭಾಷೆಗಳುಮರಾಠಿ, ಖಾಂದೇಶಿ
Elevation
೨೪೦ m (೭೯೦ ft)
DemonymKhandeshi
Time zoneUTC+5:30 (ಐಎಸ್‍ಟಿ)

ಖಾಂದೇಶ ಎನ್ನುವುದು ಈಗಿನ ಮಹಾರಾಷ್ಟ್ರದ ಒಂದು ಭಾಗ. ದಖನಿನ ಉತ್ತರ ಭಾಗದಲ್ಲಿ ಹಬ್ಬಿದೆ.

ಭೂಗೋಳ, ಕೃಷಿ

[ಬದಲಾಯಿಸಿ]

ಇದರಲ್ಲಿ ಎರಡು ಜಿಲ್ಲೆಗಳಿವೆ. ಖಾಂದೇಶದ ಉತ್ತರಕ್ಕೆ ಸಾತ್‍ಪುರಾ ಪರ್ವತ ಮತ್ತು ನರ್ಮದಾ ನದಿ, ಪೂರ್ವಕ್ಕೆ ವರ್ಹಾಡ ಮತ್ತು ನೇಮಾಡ ಜಿಲ್ಲೆಗಳು, ದಕ್ಷಿಣಕ್ಕೆ ಸಾತಮಾಲ, ಚಾಂಡೋರ ಮತ್ತು ಅಜಂತಾ ಗುಡ್ಡಗಳು, ಪಶ್ಚಿಮಕ್ಕೆ ಹಿಂದಣ ಬರೋಡ ಸಂಸ್ಥಾನ (ಮತ್ತು ರೇವಾಕಾಠಾ ಜಹಗೀರು) ಪ್ರದೇಶ, ನೈಋತ್ಯಕ್ಕೆ ನಾಸಿಕ ಜಿಲ್ಲೆ ಇವೆ. ತಪತಿ ಇಲ್ಲಿಯ ದೊಡ್ಡ ನದಿ.[] ನೆಲ ಫಲವತ್ತಾಗಿದೆ. ಇಲ್ಲಿ ವಾಯುಗುಣ ಏಕರೀತಿಯದಾಗಿಲ್ಲ. ಮಳೆಯ ಸರಾಸರಿ 20"-45". ಜೋಳ ಮತ್ತು ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು. ಅನೇಕ ಊರುಗಳಲ್ಲಿ ಹತ್ತಿ ಹಿಂಜುವ ಗಿರಣಿಗಳಿವೆ. ಇದು ಇತರ ಪ್ರದೇಶಗಳಿಗೆ ರಫ್ತಾಗುತ್ತದೆ. ಕಾಡುಗಳಿಂದ ಬರುವ ಉತ್ಪನ್ನವೂ ಹೆಚ್ಚಾಗಿದೆ. ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಕಾಡು ನಂಬಿದ ಗುಡ್ಡಗಳಿವೆ. ಕಾಡಿನಲ್ಲಿ ಭಿಲ್ಲರ ವಸತಿ ಹೆಚ್ಚು. ಇದು ಅನೇಕ ಹಿಂಸ್ರ ಪಶುಗಳಿಗೆ ಆಶ್ರಯಸ್ಥಾನ. ಹಿಂದಕ್ಕೆ ಇದು ಆನೆಗಳ ವಾಸಸ್ಥಾನವೂ ಆಗಿತ್ತು.

1906ರಲ್ಲಿ ಖಾಂದೇಶವನ್ನು ಪೂರ್ವ ಮತ್ತು ಪಶ್ಚಿಮ ಖಾಂದೇಶಗಳೆಂಬ ಎರಡು ಜಿಲ್ಲೆಗಳಾಗಿ ವಿಭಾಗ ಮಾಡಲಾಯಿತು. ಈಗ ಇವು ಜಳಗಾಂವ್ ಮತ್ತು ಧುಳೆ ಜಿಲ್ಲೆಗಳೆನಿಸಿಕೊಂಡಿವೆ.[] ಅಮಲ್ನೇರ್, ಭೂಸಾವಳ್, ಚಾಳಿಸ್‍ಗಾಂವ್, ಏರಂಡೋಲ್, ನಂದುರ್‌ಬಾರ್ ಮುಂತಾದ ನಗರಗಳು ಖಾಂದೇಶದಲ್ಲಿವೆ. ನಂದುರ್‌ಬಾರ್ ಈಗ ಹೊಸ ಜಿಲ್ಲೆಯಾಗಿದೆ. ಇದು ೧೯೯೦ರ ದಶಕದಲ್ಲಿ ಹೊಸ ಜಿಲ್ಲೆಯಾಯಿತು.[]

ಇಲ್ಲಿ ಸೇ. 90ರಷ್ಟು ಜನ ಹಿಂದುಗಳು. ವ್ಯಾಪಾರದಲ್ಲಿ ಮಾರವಾಡಿ ಮತ್ತು ಗುಜರಾತಿಗಳಿದ್ದಾರೆ. ಕ್ರೈಸ್ತ ಮಿಷನರಿಗಳಿವೆ. ತಪತಿ ನದಿಯ ಉತ್ತರಕ್ಕೆ ವ್ಯಾಪಾರಿಗಳ ಮತ್ತು ರೈತರ ಭಾಷೆ ಗುಜರಾತಿ. ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಮರಾಠಿ ಭಾಷೆ ರೂಢಿಯಲ್ಲಿದೆ. ಖಾಂದೇಶೀ ಇಲ್ಲವೆ ಅಹಿರಾಣಿ ಎಂಬ ವಿಶಿಷ್ಟ ಉಪಭಾಷೆ ಕೆಲವು ಕಡೆ ಪ್ರಚಾರದಲ್ಲಿದೆ. ಪ್ರಾಥಮಿಕದಿಂದ ಕಾಲೇಜ್ ಮಟ್ಟದವರೆಗೆ ಶಿಕ್ಷಣ ಸೌಲಭ್ಯವುಂಟು.

ಇತಿಹಾಸ

[ಬದಲಾಯಿಸಿ]

ಹಿಂದೆ ಖಾಂದೇಶವನ್ನು ಕನಃ (ಕೃಷ್ಣ) ದೇಶ ಎಂದು ಕರೆಯುತ್ತಿದ್ದರೆನ್ನಲಾಗಿದೆ. ಪುರಾಣಗಳಲ್ಲಿ ಬರುವ ಅಶ್ಮಕ ದೇಶವೇ ಖಾಂದೇಶ ಎಂದು ಹೆಸರಾಗಿದೆಯೆಂಬುದು ಅನೇಕ ಸಂಶೋಧಕರ ಅಭಿಪ್ರಾಯ. ಖಾಂದೇಶದ ತೋರಣಮಾಳ ಮತ್ತು ಅಶೀರಗಡಗಳಲ್ಲಿ ಅಶ್ವತ್ಥಾಮ ಇದ್ದನೆಂದು ಐತಿಹ್ಯವುಂಟು. ಕ್ರಿ.ಪೂ. ಸು. 250ರಲ್ಲಿ ರಜಪೂತರು ಖಾಂದೇಶವನ್ನು ಆಳುತ್ತಿದ್ದರು. ಎರಡು ಮೂರು ಶತಕಗಳ ಅನಂತರ ಈ ಪ್ರದೇಶ ಆಂಧ್ರರ ವಶದಲ್ಲಿತ್ತು. ಅನಂತರ ಕ್ಷತ್ರಪ ಮತ್ತು ಚಾಲುಕ್ಯ ರಾಜರು ಇದನ್ನಾಳಿದರು.

ಕ್ರಿ.ಶ. 1295ರಲ್ಲಿ ಖಾಂದೇಶದ ಮೇಲೆ ಅಲ್ಲಾವುದ್ದೀನ್ ಖಲ್ಜಿ ದಂಡೆತ್ತಿ ಬಂದು ಇದನ್ನು ವಶಪಡಿಸಿಕೊಂಡ.[]: 418  1760ರಲ್ಲಿ ಮರಾಠರು ಅಶೀರಗಡವನ್ನು ಗೆದ್ದುಕೊಳ್ಳುವವರೆಗೆ ಈ ಭಾಗ ಮುಸಲ್ಮಾನರ ವಶದಲ್ಲಿಯೇ ಇತ್ತು. 1599ರಲ್ಲಿ ಅಕ್ಬರ್ ಖಾಂದೇಶವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಮುಂದೆ ಕ್ರಿ.ಶ. 1720ರಲ್ಲಿ ನಿಜ಼ಾಮ ಇದನ್ನು ತನ್ನದನ್ನಾಗಿ ಮಾಡಿಕೊಂಡ. 1760 ರಿಂದ 1818ರ ವರೆಗೆ ಇದು ಮರಾಠರ ಆಡಳಿತದಲ್ಲಿತ್ತು.[]: 9  ಅದರಲ್ಲಿಯ ಕೆಲವು ಭಾಗಗಳನ್ನು ಶಿಂಧೆ ಮತ್ತು ಹೋಳ್ಕರರಿಗೆ ಜಹಗೀರು ಹಾಕಿಕೊಡಲಾಯಿತು.

ಖಾಂದೇಶದಲ್ಲಿ ಅಹಿರಾಣಿ ರಾಜರ ಅನೇಕ ಹಳೆಯ ಶಿಲ್ಪಗಳನ್ನು ಕಾಣಬಹುದು. ಇವಕ್ಕೆ ಹೇಮಾಡಪಂತೀ ಎಂದು ಹೆಸರು. ಅನೇಕ ಕಡೆಗಳಲ್ಲಿ ಬೌದ್ಧ ಚೈತ್ಯ ಮತ್ತು ವಿಹಾರಗಳುಂಟು. ಪಾಟಣ ಇಲ್ಲಿಯ ಒಂದು ಪ್ರಾಚೀನ ಪಟ್ಟಣ.

ಉಲ್ಲೇಖಗಳು

[ಬದಲಾಯಿಸಿ]
  1. Patil, M.V. (2015). An Inventory on Agrobiodiversity and Homestead Gardens in Tribal Tehsils of Khandesh Maharashtra. North Maharashtra University. pp. Chapter 6–1. hdl:10603/136532.
  2. Jamkar, A.G. (1988). "Origin and Evolution of Periodic Market Places in Dhule District (Maharashtra)". In Shrivastava, V.K. (ed.). Commercial Activities and Rural Development in South Asia: A Geographical Study. New Delhi: Concept Publishing Company. p. 134. ISBN 81-7022-194-3.
  3. District census handbook Jalgaon (PDF) (in ಇಂಗ್ಲಿಷ್). Mumbai: Directorate of census operations Maharashtra. 2014. Retrieved March 9, 2023.
  4. Imperial Gazetteer of India. Vol. Provincial Series: Bombay Presidency Vol. 1. Calcutta: Superintendent of Government Printing. 1909.
  5. Deshpande, Arvind M. (1987). John Briggs in Maharashtra: A Study of District Administration Under Early British Rule. Delhi: Mittal Publications.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖಾಂದೇಶ&oldid=1243590" ಇಂದ ಪಡೆಯಲ್ಪಟ್ಟಿದೆ