ವಿಷಯಕ್ಕೆ ಹೋಗು

ಜಳಗಾಂವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಳಗಾಂವ್ - ಮಹಾರಾಷ್ಟ್ರದ ಒಂದು ಜಿಲ್ಲೆ; ಆ ಜಿಲ್ಲೆಯ ಮುಖ್ಯ ಪಟ್ಟಣ. ಜಿಲ್ಲೆ ಉ.ಅ. 20°-21° ಮತ್ತು ಪೂ.ರೇ. 74° 55`-76° 2' ನಡುವೆ ಹಬ್ಬಿದೆ. ಉತ್ತರಕ್ಕೆ ಮಧ್ಯ ಪ್ರದೇಶ, ಪಶ್ಚಿಮಕ್ಕೆ ಧುಲಿಯಾ ಮತ್ತು ನಾಸಿಕ್ ಜಿಲ್ಲೆಗಳು, ಪೂರ್ವಕ್ಕೆ ಬುಲ್ಡಾನಾ ಜಿಲ್ಲೆ, ದಕ್ಷಿಣಕ್ಕೆ ಔರಂಗಾಬಾದ್ ಜಿಲ್ಲೆ-ಇವು ಇದರ ಮೇರೆಗಳು. ಜಿಲ್ಲೆಯ ವಿಸ್ತೀರ್ಣ 7,148 ಚ.ಕಿ.ಮೀ. ಜನಸಂಖ್ಯೆ 21,23,121 (1971). ಈ ಜಿಲ್ಲೆಯ ಉತ್ತರಕ್ಕೆ ಸಾತಪುಡಾ ಬೆಟ್ಟಗಳಿವೆ. ಅನೇಕ ಹೊಳೆಗಳು ಇದರ ಅಂಚಿನಲ್ಲಿ ಹರಿದು, ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಜಳಗಾಂವ್ ಮತ್ತು ಧುಲಿಯಾ ಜಿಲ್ಲೆಗಳ ನಡುವೆ ಮುಂದುವರಿದು ತಾಪಿ ನದಿಯನ್ನು ಕೊಡಿಕೊಳ್ಳುತ್ತವೆ. ಪೂರ್ವದಲ್ಲಿ ಇರುವ ಸಣ್ಣಪುಟ್ಟ ಬೆಟ್ಟಗಳೂ ಹಳ್ಳಗಳೂ ವಿದರ್ಭ ಪ್ರದೇಶದ ಇತರ ಜಿಲ್ಲೆಗಳಿಂದ ಈ ಜಿಲ್ಲೆಯನ್ನು ಪ್ರತ್ಯೇಕಿಸುತ್ತವೆ. ದಕ್ಷಿಣದಲ್ಲಿರುವ ಅಜಂತಾ ಅಥವಾ ಸಾತಮಾಳಾ ಮತ್ತು ಚಂದೋರ್ ಬೆಟ್ಟಗಳು ಮರಾಠವಾಡಾ ಮತ್ತು ಈ ಜಿಲ್ಲೆಯ ನಡುವಿನ ಸೀಮಾರೇಖೆಗಳಾಗಿವೆ. ಪಂಝ್ರು ನದಿ ತಾಪಿಯನ್ನು ಕೂಡಿಕೊಳ್ಳುವ ಮೊದಲು ಈ ಜಿಲ್ಲೆಯ ಪಶ್ಚಿಮದ ಅಂಚಿನಲ್ಲಿ ಹರಿಯುತ್ತದೆ.

ಜಳಗಾಂವ್ ಜಿಲ್ಲೆ ಮಹಾರಾಷ್ಟ್ರದ ಎತ್ತರ ಪಾತಳಿ ಪ್ರದೇಶದ ಒಂದು ಭಾಗ. ತಾಪಿ ನದಿ ಈ ಜಿಲ್ಲೆಯ ನಡುವೆ ಹರಿಯುತ್ತದೆ. ಜಿಲ್ಲೆಯ ನಡುನಡುವೆ ಬೆಟ್ಟಗಳಿವೆ, ಪರ್ವತಗಳಿವೆ, ಕಂದರಗಳಿವೆ, ಹೊಲಗದ್ದೆಗಳಿಗೆ ಅನುಕೂಲವಾದ ಭೂಮಿಯಿದೆ, ಪಾಳುಭೂಮಿಯೂ ಉಂಟು. ತಾಪಿ ನದಿಯ ದಕ್ಷಿಣ ಭಾಗ ಉತ್ತರ ಮತ್ತು ಮಧ್ಯ ಭಾಗಗಳಿಗಿಂತ ಹೆಚ್ಚು ವೈವಿಧ್ಯಪೂರಿತ. ಇದು ಹೆಚ್ಚು ವಿಸ್ತಾರವಾಗೂ ಇದೆ. ಪೂರ್ಣ ಕೊಳ್ಳ, ಹಟ್ಟೀಬೆಟ್ಟಗಳು, ವಾಘುರ, ಗೀರ್ಣಾ ಮತ್ತು ಬೋರಿ ನದಿಗಳ ಪ್ರದೇಶ, ಕಲ್ಲುಕುಂಟೆಗಳಿಂದ ತುಂಬಿದ ತಗ್ಗು ದಿನ್ನೆಗಳು, ಫಲವತ್ತಾದ ತೋಟಪಟ್ಟಿಗಳು, ಇವು ದಕ್ಷಿಣ ಸೀಮೆಯ ಪ್ರಮುಖ ಲಕ್ಷಣಗಳು. ಜಳಗಾಂವ್ ಜಿಲ್ಲೆಯಲ್ಲಿ ಸಾತಪುಡಾ ಹಟ್ಟಿ ಮತ್ತು ಅಜಂತಾ ಅಥವಾ ಸಾತಾಮಾಳಾ-ಹೀಗೆ ಮೂರು ಪ್ರಮುಖ ಬೆಟ್ಟಗಳ ಶ್ರೇಣಿಗಳುಂಟು. ತಾಪಿಯ ಉತ್ತರ ಭಾಗದಲ್ಲಿ 2,000` ಎತ್ತರವಾಗಿರುವ ಸಾತಪುಡಾ ಪರ್ವತ ಜಳಗಾಂವ್ ಜಿಲ್ಲೆಯ ಉತ್ತರ ಗಡಿಗುಂಟ ಹಾಕಿದ ಗೋಡೆಯಂತಿದ್ದು, ನರ್ಮದಾ ನದಿಯ ಕಡೆಗೆ ಮತ್ತೆ ಇಳಿಯುತ್ತಾ ಹೋಗಿದೆ. ಸು.3,000` ಎತ್ತರವಿರುವ ಪಂಚಪಾಂಡು ಮತ್ತು ಮಾಂಢಿಯಾಮಾಳ-ಇವು ಇಲ್ಲಿಯ ಗಿರಿಶಿಖರಗಳು. ಹಟ್ಟಿಬೆಟ್ಟಗಳು 4,000 ಎತ್ತರಕ್ಕೆ ಏರಿ, ನಾಗಪುರ ಬೆಟ್ಟಗಳನ್ನು ಕೂಡಿಕೊಂಡಿವೆ. ಅಜಂತಾ ಅಥವಾ ಸಾತಮಾಳಾ ಬೆಟ್ಟಗಳು ಸಹ್ಯಾದ್ರಿ ಪರ್ವತದ ಟಿಸಿಲಿಗಳಂತೆ ಒಡೆದು ನಾಸಿಕ ಮತ್ತು ಜಳಗಾಂವ್ ಜಿಲ್ಲೆಗಳನ್ನು ಆವರಿಸಿಕೊಂಡಿವೆ. ಈ ಬೆಟ್ಟಗಳು ಸೃಷ್ಟಿಸೌಂದರ್ಯಕ್ಕೆ ಹೆಸರಾಗಿರುವಂತೆಯೇ ಬಂಡೆಗಲ್ಲುಗಳಲ್ಲಿ ಕೊರೆದ ಬೌದ್ಧ ಮಂದಿರಗಳಿಗಾಗಿ ಮತ್ತು ಅಜಂತಾ ಗುಹೆಗಳಿಗಾಗಿ ಪ್ರಸಿದ್ಧವಾಗಿವೆ.

ಮಧ್ಯಪ್ರದೇಶದ ಮಾರ್ಗವಾಗಿ ಈ ಜಿಲ್ಲೆಯನ್ನು ಸೇರುವ ತಾಪಿ ನದಿಯ ಉದ್ದ ಈ ಜಿಲ್ಲೆಯಲ್ಲಿ 120 ಕಿ,ಮೀ. ಇದರ ಎರಡೂ ಬದಿಗೆ ದಟ್ಟವಾದ ಹಳ್ಳಿಗಳು ನೆಲೆಸಿವೆ. ಮಳೆಗಾಲದಲ್ಲಿ ಮಹಾಪೂರಗಳಿಗೆ ಹೆಸರಾಗಿರುವ ಈ ನದಿ ಬೇಸಾಯದ ದೃಷ್ಟಿಯಿಂದ ತನ್ನ ತಿರುವುಮುರುವುಗಳಲ್ಲಿ ಫಲವತ್ತಾದ ರೇವೆಯ ಮಣ್ಣನ್ನು ಹೇರಳವಾಗಿ ತಂದಿಕ್ಕುತ್ತದೆ. ಮಳೆಗಾಲದ ರಭಸದ ಅನಂತರ ಈ ನದಿ 150`-300` ಅಗಲ ಮತ್ತು 9`-18` ಆಳವಾಗಿ ನಿಧಾನವಾಗಿ ಹರಿಯುತ್ತದೆ. ಬೋಕಾರ, ಸುಕಿ, ಮೋರಾ, ಹರಕೀ, ಮಂಕೀ ಮತ್ತು ಗುಲಿ ಉಪನದಿಗಳು ತಾಪಿಯನ್ನು ಬಲಬದಿಯಿಂದ ಕೂಡಿಕೊಳ್ಳುತ್ತವೆ. ಪೂರ್ಣಾ, ಭೋಗಾವತಿ, ವಾಘುರ, ಗೀರ್ಣಾ, ಬೋರಿ-ಇವು ತಾಪಿಯ ಎಡದಂಡೆಯ ಉಪನದಿಗಳು. ತಾಪಿ ನದಿಯ ಮೇಲೆ ಭುಸಾವಳ ಮತ್ತು ಸಾವಖೇಡಾ ಬಳಿಗೆ ಮೋಟಾರು ರಸ್ತೆಯ ಸೇತುವೆಗಳೂ, ಭುಸಾವಳದ ಬಳಿಗೆ ರೈಲುಮಾರ್ಗದ ಸೇತುವೆಯೂ ಉಂಟು. ಈ ಜಿಲ್ಲೆಯ ಮತ್ತು ನೆರೆಹೊರೆಯ ಜನಗಳ ಸಾರಿಗೆ-ಸಂಪರ್ಕಕ್ಕೆ ಇವು ಬಲು ಅನುಕೂಲ. ಈ ನದಿಯ ಮೇಲೆ ಅಮ್ಮಳನೇರ, ಜೋಪಡಾ. ಏದ್ಲಾಬಾದ, ಜಳಗಾಂವ್, ರಾವರ ಮತ್ತು ಯವಾಳಗಳಿಗೆ ದೋಣಿಗಳೂ ಸಂಚರಿಸುತ್ತವೆ.

ಈ ಜಿಲ್ಲೆಯ ಮಧ್ಯಭಾಗದ ಉಸುಕುಮಿಶ್ರಿತ ರೇವೆಯ ಫಲವತ್ತಾದ ಪ್ರದೇಶವನ್ನು ಬಿಟ್ಟರೆ ಉಳಿದ ಬಹು ಭಾಗಗಳಲ್ಲೆಲ್ಲ ಮೆಟ್ಟಿಲುಮೆಟ್ಟಲಾಗಿ ಬೆಳೆದುನಿಂತ ಬಂಡೆಕಲ್ಲುಗಳ ಸಾಲುಗಳಿವೆ. 100`-1000` ಎತ್ತರವಾದ ಈ ಬಂಡೆಗಳು ಜ್ವಾಲಾಮುಖಿಗಳಿಂದ ಬಂದ ಲಾವದಿಂದ ನಿರ್ಮಾಣಗೊಂಡಿವೆಯೆಂದು ಹೇಳಲಾಗಿದೆ. ಈ ಶಿಲಾಪ್ರದೇಶದಲ್ಲಿ ಉಸುಕಿನಿಂದ ನಿರ್ಮಾಣಗೊಂಡ ಬಿಳಿ, ನೀಲಿ, ಕೆಂಪು ಹರಳುಗಳೂ ಅಗೇಟ್ ಕಲ್ಲ್ಲುಗಳೂ ಇತರ ಖನಿಜ ನಿಕ್ಷೇಪಗಳೂ ಉಂಟು. ತಾಪಿ ನದಿಯ ದಕ್ಷಿಣ ಭಾಗದಲ್ಲಿ ಕಪ್ಪು ಬಣ್ಣದ ಕಲ್ಲುಬಂಡೆಗಳು ಹರಡಿಕೊಂಡಿವೆ. ಈ ಜಿಲ್ಲೆಯ ಅರಣ್ಯಪ್ರದೇಶ 1,262 ಚ.ಕಿ.ಮೀ. ಮಳೆಗಾಲದ ಹೊರತಾಗಿ ಉಳಿದ ನದಿಗಳಲ್ಲಿ ಈ ಜಿಲ್ಲೆಯ ವಾಯುಗುಣ ಶುಷ್ಕ. ವಾರ್ಷಿಕ ಸರಾಸರಿ ಮಳೆ 740.7 ಮಿ.ಮೀ. (29.16``) ಒಟ್ಟು ಮಳೆಯ 87% ಆಗುವುದು ಜೂನಿನಿಂದ ಸೆಪ್ಟೆಂಬರ್ ವರೆಗೆ. ಈ ಜಿಲ್ಲೆಯ ಗರಿಷ್ಟ ಮಳೆಯ ಸ್ಥಳ ಜಾಮನೇರ (802 ಮಿಮೀ.) ಕನಿಷ್ಠ ಮಳೆಯಾಗುವುದು ಅಮ್ಮಳನೇರದಲ್ಲಿ (675ಮಿಮೀ.) ಜಿಲ್ಲೆಯ ಕನಿಷ್ಠ ಉಷ್ಣತೆಯ (11.9ºಅ) ತಿಂಗಳು ಡಿಸೆಂಬರ್. ಗರಿಷ್ಠ ಉಷ್ಣತೆ (42.5°) ಮೇ ತಿಂಗಳಲ್ಲಿ. ಮುಂಗಾರಿನ ಸಮಯಕ್ಕೆ ಈ ಜಿಲ್ಲೆಯ ವಾಯುಗುಣ ಆಹ್ಲಾದಕರವಾಗಿದೆ.

ಜಳಗಾಂವ್ ಜಿಲ್ಲೆ ಖಾನ್ ದೇಶದ ಪೂರ್ವಭಾಗ. 1906ರಲ್ಲಿ ಬ್ರಿಟಿಷರು ಖಾನ್ ದೇಶವನ್ನು ಆಡಳಿತಾನುಕೂಲಕ್ಕಾಗಿ ಪೂರ್ವ ಮತ್ತು ಪಶ್ಚಿಮ ಖಾನ್ ದೇಶಗಳಾಗಿ ವಿಭಜಿಸಿದರು. 1960ರಲ್ಲಿ ಈ ಜಿಲ್ಲೆಗಳಿಗೆ ಅನುಕ್ರಮವಾಗಿ ಜಳಗಾಂವ್ ಮತ್ತು ಧುಲಿಯಾ ಜಿಲ್ಲೆಗಳೆಂದು ನಾಮಕರಣ ಮಾಡಲಾಯಿತು. ಜಳಗಾಂವ್ ಜಿಲ್ಲೆಯಲ್ಲಿ ಒಟ್ಟು 1,424 ಗ್ರಾಮಗಳೂ 29 ಪಟ್ಟಣಗಳೂ ಇವೆ.

ಜಿಲ್ಲೆಯ ಒಟ್ಟು 29 ಲಕ್ಷ ಎಕರೆ ಭೂಪ್ರದೇಶದಲ್ಲಿ 20 ಲಕ್ಷ ಸಾಗುಭೂಮಿಯೂ 4.1 ಲಕ್ಷ ಎಕರೆ ಅರಣ್ಯಪ್ರದೇಶವೂ 17,700 ಎಕರೆ ಸಾಗುವಳಿ ಯೋಗ್ಯ ಹಾಳು ಭೂಮಿಯೂ 2,28,000 ಎಕರೆ ಹುಲ್ಲುಗಾವಲೂ ಇವೆ. ಮಧ್ಯಮ ಕಪ್ಪು, ಅತಿ ಕಪ್ಪು ಕಾಡು, ಫಲವತ್ತಾದ ಮಣ್ಣು ಮತ್ತು ಉಸುಕು ಮಿಶ್ರಿತ ಮಣ್ಣು-ಹೀಗೆ ಐದು ಪ್ರಕಾರದ ಮಣ್ಣುಗಳು ಈ ಜಿಲ್ಲೆಯಲ್ಲುಂಟು. ಒಟ್ಟು 56% ಸಾಗುಭೂಮಿಯಲ್ಲಿ ಆಹಾರ ಧಾನ್ಯಗಳನ್ನೂ 44% ನೆಲದಲ್ಲಿ ಇತರ ಬೆಳೆಗಳನ್ನೂ ಬೆಳೆಯಲಾಗುತ್ತದೆ. ಜೋಳ, ಸಜ್ಜೆ, ಗೋಧಿ, ರಾಗಿ, ಗೋವಿನ ಜೋಳ ಮತ್ತು ಬೇಳೆಯ ಕಾಳುಗಳು ಇಲ್ಲಿಯ ಮುಖ್ಯ ಆಹಾರ ಧಾನ್ಯಗಳು. ಹಣ್ಣು ತರಕಾರಿಗಳನ್ನೂ ಬೆಳೆಸಲಾಗುತ್ತದೆ. ಈ ಜಿಲ್ಲೆಯ ಮುಖ್ಯ ಹಣ್ಣು ಬಾಳೆ. ಜನರ ಮುಖ್ಯ ಆಹಾರ ಜೋಳ. ಆಹಾರೇತರ ಬೆಳೆಗಳಲ್ಲಿ ಹತ್ತಿಯ ಬೆಳೆ ಮುಖ್ಯವಾದ್ದು. ಈ ಬೆಳೆಯ ಗುಣಮಟ್ಟ ಹೆಚ್ಚಿಸಲು 1844ರಿಂದಲೂ ಸರಕಾರ ವಿಶೇಷ ಪ್ರಯೋಗಗಳನ್ನು ಕೈಗೊಂಡಿದೆ. ಎರಡೂವರೆ ಲಕ್ಷ ಎಕರೆ ಭೂಮಿಯಲ್ಲಿ ವೀರನಾರ ಹತ್ತಿಯ ಬೆಳೆ ತೆಗೆಯಲು ರೈತರಿಗೆ ಸಕಲ ಉತ್ತೇಜನಗಳನ್ನೂ ಕೊಡುತ್ತ ಬರಲಾಗಿದೆ. ಹತ್ತಿ ಈ ಜಿಲ್ಲೆಯ ಮುಖ್ಯ ಹಣಬೆಳೆ.

ಜಳಗಾಂವ್ ನಗರ

[ಬದಲಾಯಿಸಿ]

ಜಳಗಾಂವ್ ನಗರ ಈ ಜಿಲ್ಲೆಯ ಆಡಳಿತ ಕೇಂದ್ರ. ಉ.ಅ.21º 1` ಮತ್ತು ಪೂ.ರೇ. 75º 35` ಮೇಲಿದೆ. ಜನಸಂಖ್ಯೆ 1,06,711 (1971). ಇದು ಮುಂಬಯಿಯಿಂದ 261 ಮೈ. ದೂರದಲ್ಲಿ ಮಧ್ಯ ರೈಲ್ವೆಯಲ್ಲಿ ಒಂದು ನಿಲ್ದಾಣ. ಇಲ್ಲಿಂದ ಅಮ್ಮಳನೇರಕ್ಕೆ ಬೇರೆ ರೈಲುಮಾರ್ಗವಿದೆ. ಹತ್ತಿ ಹೆಚ್ಚಾಗಿ ಬೆಳೆಯುವುದರಿಂದ ಇಲ್ಲಿ ಹತ್ತಿಬೀಜವನ್ನು ಬೇರೆ ಮಾಡುವ, ನೂಲಿನಿಂದ ಬಟ್ಟೆ ಮಾಡುವ ಅನೇಕ ಗಿರಣಿಗಳಿವೆ. ಹತ್ತಿ, ಎಳ್ಳು ಮತ್ತು ಅವಕ್ಕೆ ಸಂಬಂಧಪಟ್ಟ ಇತರ ಬಗೆಯ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಇಲ್ಲಿ ಜಿಲ್ಲಾ ಕಚೇರಿಗಳು, ಆಸ್ಪತ್ರೆ ಮತ್ತು ಶಾಲಾಕಾಲೇಜುಗಳಿವೆ. ಜಳಗಾಂವ್‍ದಿಂದ ಅಜಂತಾ ಎಲ್ಲೋರ ಗುಹೆಗಳಿಗೂ ಸಾಂಚಿ, ಗ್ವಾಲಿಯರ್, ಆಗ್ರ, ದೆಹಲಿಗಳಿಗೂ ರೈಲು ಮೂಲಕ ಪ್ರಯಾಣ ಮಾಡಬಹುದು. ಜಳಗಾಂವ್‍ದಲ್ಲಿ ಹಲವು ರಸ್ತೆಗಳು ಕೂಡುತ್ತವೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಳಗಾಂವ್&oldid=1061158" ಇಂದ ಪಡೆಯಲ್ಪಟ್ಟಿದೆ