ವಿಷಯಕ್ಕೆ ಹೋಗು

ಖಡ್ಗ ಜೀರುಂಡೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಡ್ಗ ಜೀರುಂಡೆಗಳು
Temporal range: Eocene–Recent
Rhinoceros Beetle
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಆರ್ಥ್ರೊಪೋಡಾ
ವರ್ಗ: ಇನ್ಸೆಕ್ಟಾ
ಗಣ: ಕೋಲಿಯಾಪ್ಟೆರಾ
ಕುಟುಂಬ: ಸ್ಕಾರಬೇಯ್ಡೀ
ಉಪಕುಟುಂಬ: ಡೈನಾಸ್ಟಿನೀ
MacLeay, 1819

ಖಡ್ಗ ಜೀರುಂಡೆಗಳು ಸ್ಕರಾಬಿಡೀ ಕುಟುಂಬದ ಡೈನಾಸ್ಟಿನೀ (Dynastinae) ಉಪಕುಟುಂಬಕ್ಕೆ ಸೇರಿದ ಕೀಟಗಳು. ತಲೆಯ ಮೇಲೆ ಕೊಂಬಿನಂಥ ಅಂಗವಿರುವುದರಿಂದ ಇವಕ್ಕೆ ಈ ಹೆಸರಿದೆ (horn beetle). ಇವುಗಳಲ್ಲಿ ಆಕರ್ಷಕವಾದ ರೈನಾಸರಸ್ ಜೀರುಂಡೆ, ಒಂದು ಕೊಂಬಿನ (unicorn) ಮತ್ತು ಆನೆ ಜೀರುಂಡೆ ಎಂಬ ಮೂರು ವಿಧಗಳುಂಟು. ರೈನಾಸರಸ್ ಜೀರುಂಡೆಗಳ ೧,೫೦೦ ಕ್ಕಿಂತ ಹೆಚ್ಚು ಪ್ರಭೇದಗಳು ಮತ್ತು ೨೨೫ಕ್ಕಿಂತ ಹೆಚ್ಚು ಜಾತಿಗಳು ಪರಿಚಿತವಾಗಿವೆ.[]

ದೇಹರಚನೆ

[ಬದಲಾಯಿಸಿ]
ಐರೋಪ್ಯ ರೈನಾಸರಸ್ ಜೀರುಂಡೆ

ಸಾಮಾನ್ಯವಾಗಿ ಇವುಗಳ ಬಣ್ಣ ಕಪ್ಪು. ರಾತ್ರಿ ಅಥವಾ ಸಾಯಂಕಾಲ ಮಾತ್ರ ಹೊರಬರುವುದರಿಂದ ಹಗಲಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಗಂಡು ಮತ್ತು ಹೆಣ್ಣು ಜೀರುಂಡೆಗಳಲ್ಲಿ ವ್ಯತ್ಯಾಸವಿದೆ. ಗಂಡುಗಳ ತಲೆಯ ಮೇಲೆ ಸ್ವಲ್ಪ ಬಾಗಿದ ಕೊಂಬಿರುತ್ತದೆ. ಕೆಲವು ಪ್ರಬೇಧಗಳಲ್ಲಿ ಕೊಂಬಿನ ಅಂಚಿನಲ್ಲಿ ಮುಳ್ಳಿನಂಥ ರಚನೆಯಿರುತ್ತದೆ. ಇನ್ನು ಕೆಲವು ಕೊಂಬು ಇಬ್ಭಾಗವಾಗಿ ಇರುತ್ತದೆ.

ಕೆಲವು ಉದಾಹರಣೆಗಳು

[ಬದಲಾಯಿಸಿ]

ಡೈನಾಸ್ಟಿನೀ ಗುಂಪಿನ ಬಹುಪಾಲು ಕೀಟಗಳು ಉಷ್ಣವಲಯವಾಸಿಗಳು. ಉತ್ತರ ಅಮೆರಿಕದ ಪೂರ್ವ ಮತ್ತು ಪಶ್ಚಿಮಾರ್ಧ ಪ್ರಾಂತ್ಯಗಳಲ್ಲಿ ಕೆಲವು ಪ್ರಭೇದಗಳಿವೆ. ಇಲ್ಲಿ ವಾಸಿಸುವ ಡೈನಾಸ್ಟಿಸ್ ಟೈಟಸ್ ಎಂಬ ಪ್ರಭೇದದಲ್ಲಿ ಒಂದು ಕೊಂಬಿದೆ. ಕೊಂಬಿನ ಉದ್ದ 2"-2.5". ಟೆಕ್ಸಸ್ ಪ್ರದೇಶದಲ್ಲಿ ಸ್ಟ್ರಾಟೆಗಸ್ ಜಾತಿಯ ಆನೆ ಜೀರುಂಡೆಗಳಿವೆ. ಇವುಗಳಲ್ಲಿ ಕಾಣುವ ಮೂರು ಕೊಂಬುಗಳು ತಲೆಯ ಮೇಲಿರದೆ ಪ್ರೋನೋಟಂ (pronotum) ಎಂಬ ಭಾಗದ ಮೇಲಿರುತ್ತದೆ. ಒಂದೊಂದು ಕೊಂಬೂ 1.5"-2" ಉದ್ದಕ್ಕೆ ಬೆಳೆಯುತ್ತದೆ. ಸ್ಕೈಲೊರಿಕ್ಟಸ್ ಸ್ಯಾಟಿರಸ್ ಎಂಬುದು ಸುಮಾರು ಒಂದು ಅಂಗುಲಕ್ಕಿಂತ ಸ್ವಲ್ಪ ಹೆಚ್ಚು ಉದ್ದದ ಗಾಢ ಕಂದುಬಣ್ಣದ ಜೀರುಂಡೆ. ಗಂಡುಗಳಲ್ಲಿ ಗಡುಸಾದ ಹಾಗೂ ನೆಟ್ಟಗಿರುವ ಒಂದು ಕೊಂಬಿದೆ. ಆದರೆ ಹೆಣ್ಣಿನಲ್ಲಿ ಕೊಂಬು ಗುಬಟಿನ ಹಾಗಿದೆ. ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಒರಿಕ್ಟಿಸ್ ರೈನಾಸರಸ್ ಎಂಬ ಹೆಸರಿನ ಜೀರುಂಡೆಯಲ್ಲಿ ಗಂಡು ಹೆಣ್ಣುಗಳೆರಡರಲ್ಲೂ ಕೊಂಬಿದೆ. ಆದರೆ ಹೆಣ್ಣಿನಲ್ಲಿನ ಕೊಂಬು ಚಿಕ್ಕದು.

ಖಡ್ಗ ಜೀರುಂಡೆಗಳ ಜೀವನ ಕ್ರಮದ ವಿವರಗಳು ತಿಳಿದಿಲ್ಲ. ಮರದ ಕಾಂಡಗಳಲ್ಲಿ, ಗೊಬ್ಬರ ಮತ್ತು ಕೊಳೆಯುವ ಎಲೆಗಳ ರಾಶಿಯಲ್ಲಿ ಇವುಗಳ ಡಿಂಬಗಳನ್ನು ಕಾಣಬಹುದು.

ಬೆಳೆಗಳಿಗೆ ಅಪಾಯ

[ಬದಲಾಯಿಸಿ]

ಖಡ್ಗ ಜೀರುಂಡೆಗಳು ಕೆಲವು ಬೆಳೆಗಳಿಗೆ ಬಹಳ ಅಪಾಯಕಾರಿಗಳು. ಸ್ಕೈಲೊರಿಕ್ಟಸ್ ಸ್ಯಾಟಿರಸಿನ ಡಿಂಬಗಳು ಕೆಲವು ಜಾತಿ ಮರಗಳ ಬೇರುಗಳನ್ನು ತಿಂದು ಜೀವಿಸುತ್ತವೆ. ಇನ್ನು ಕೆಲವು ಪ್ರಭೇದಗಳು ಕಬ್ಬು ಮತ್ತು ಬತ್ತದ ಬೇರುಗಳನ್ನು ತಿಂದು ಬೆಳೆಯನ್ನು ನಾಶಪಡಿಸುತ್ತವೆ. ಒರಿಕ್ಟಿಸ್ ರೈನಾಸರಸ್ ಪ್ರಭೇದದ ವಿಚಾರ ಸ್ವಲ್ಪ ಹೆಚ್ಚಿಗೆ ತಿಳಿದಿದೆ. ಭಾರತದಲ್ಲಿ ಇದು ಒಂದು ಮುಖ್ಯವಾದ ತೆಂಗಿನ ಪಿಡುಗು ಎನಿಸಿದೆ.[] ಅಲ್ಲದೆ ಅಡಿಕೆ ಮುಂತಾದ ಇತರ ಮರಗಳಿಗೂ ಮಾರಕವಾಗಿದೆ. ಇದರ ದೇಹದ ಉದ್ದ 1.5", ಅಗಲ 0.75". ಆರೋಗ್ಯವಂತ ತೆಂಗುಗಳ ಸುಳಿಯನ್ನು ಕೊರೆದು ಸೀಬು ಸುತ್ತಿಕೊಂಡಿರುವ ಗರಿಗಳ ರಸವನ್ನು ಹೀರಿಕೊಂಡು ಜೀವಿಸುತ್ತದೆ. ಇದರ ಚಟುವಟಿಕೆ ಸಾಯಂಕಾಲದ ಮೇಲೆ ಪ್ರಾರಂಭವಾಗುತ್ತದೆ. ಇದು ಸ್ವತಃ ಸುಳಿಗರಿಗಳನ್ನು ತಿಂದು ನಾಶಪಡಿಸುವುದಲ್ಲದೆ ಸೊಂಡಿಲು ಜೀರುಂಡೆಗಳು ವಾಸಿಸಲು ಅನುಕೂಲ ಮಾಡಿಕೊಡುತ್ತದೆ. ಇದರ ಹಾವಳಿಯಿಂದ ತೆಂಗಿನ ಸುಳಿಗರಿಗಳು ಸಣ್ಣವಾಗಿ ಮರದ ಬೆಳವಣಿಗೆ ಕುಗ್ಗುತ್ತದೆ. ಇದರಿಂದ ಇಳುವರಿಯೂ ಕಡಿಮೆಯಾಗುತ್ತದೆ. ಇದು ಕೊಳೆಯುತ್ತಿರುವ ತೆಂಗಿನ ಕಾಂಡಗಳಲ್ಲಿ ಅಥವಾ ಮರದ ಪುಡಿ ಅಥವಾ ಗೊಬ್ಬರದ ರಾಶಿಗಳಂತಹ ಇತರ ಸಾವಯವ ವಸ್ತುವಿನಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ.[][] ಬಾಳೆ ಗಿಡ ಅಥವಾ ಸ್ಕ್ರೂ ಪಾಮ್‍ಗಳಂತಹ ವಿವಿಧ ಇತರ ಬೆಳೆಗಳ ಮೇಲಾಗಿರುವ ಇದರ ದಾಳಿಗಳು ವರದಿಯಾಗಿವೆ.[]

ಸಂತಾನೋತ್ಪತ್ತಿ

[ಬದಲಾಯಿಸಿ]

ಒಂದು ಹೆಣ್ಣು ಕೀಟ ಸುಮಾರು 60 ಮೊಟ್ಟೆಗಳನ್ನು ಕೊಳೆಯುವ ಎಲೆಗಳ ಮಧ್ಯೆ ಇಲ್ಲವೇ ಸಗಣಿ, ಮರದ ಹೊಟ್ಟು ಮುಂತಾದವುಗಳಲ್ಲಿ ಇಡುತ್ತದೆ. ಮೊಟ್ಟೆಯೊಡೆದು ಮರಿಯಾಗಲು 10-12 ದಿನಗಳು ಬೇಕು. ಡಿಂಬಾವಸ್ಥೆಯ ಅವಧಿ 70-200 ದಿನಗಳು. (ದಕ್ಷಿಣ ಭಾರತದಲ್ಲಿ ಇದು ಬೇಸಗೆ ಕಾಲದಲ್ಲಿ 100 ದಿನಗಳು, ಚಳಿಗಾಲದಲ್ಲಿ 120-140 ದಿನಗಳು ಇರುತ್ತದೆ). ಕೋಶಾವಸ್ಥೆಯನ್ನು ಸೇರುವ 7-10 ದಿನಗಳ ಮುಂಚೆಯೇ ಡಿಂಬಗಳ ಚಟುವಟಿಕೆ ಕಡಿಮೆಯಾಗುತ್ತದೆ. ಕೋಶಾವಸ್ಥೆಯ ಅವಧಿ ಸುಮಾರು 21 ದಿನಗಳು. ಹೀಗೆ ಮೊಟ್ಟೆಯ ಹಂತದಿಂದ ಜೀರುಂಡೆಯಾಗುವವರೆಗೆ 4-9 ತಿಂಗಳು ಬೇಕು, ವಯಸ್ಕ ಜೀರುಂಡೆ 10 ತಿಂಗಳು ಬದುಕಿರುತ್ತದೆ.

ಉಪಯೋಗಗಳು

[ಬದಲಾಯಿಸಿ]

ಈ ಕೀಟಗಳ ಡಿಂಬಗಳು ಕೋಳಿಮಾಂಸ ಅಥವಾ ಗೋಮಾಂಸಕ್ಕಿಂತ ಹೆಚ್ಚು ಪ್ರೋಟೀನನ್ನು (೪೦%) ಹೊಂದಿವೆ, ಮತ್ತು ಬಹಳ ಜನರಿಗೆ ಪ್ರೋಟೀನ್‍ನ ಮೂಲವಾಗಬಹುದು ಎಂದು ಕೀಟಶಾಸ್ತ್ರಜ್ಞರಾದ ಸೆವೆರಿನ್ ಷಿಬೋಜ಼ೊ ಸೂಚಿಸಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. Beutel, Rolf G.; Leschen, Richard A.B., eds. (2016-03-21). Coleoptera, Beetles, Volume 1, Morphology and Systematics (Archostemata, Adephaga, Myxophaga, Polyphaga partim). De Gruyter. doi:10.1515/9783110373929. ISBN 978-3-11-037392-9.
  2. Featured Creatures: Coconut rhinoceros beetle
  3. Bedford, G.O. (1980). "Biology, ecology, and control of palm rhinoceros beetles". Annual Review of Entomology. 25: 309–339. doi:10.1146/annurev.en.25.010180.001521.
  4. Bedford, Geoffrey O. (2013). "Biology and management of palm dynastid beetles: Recent advances". Annual Review of Entomology. 58: 353–372. doi:10.1146/annurev-ento-120710-100547.
  5. "Oryctes rhinoceros (coconut rhinoceros beetle)". CABI Compendium. Retrieved 17 February 2024.
  6. Global Steak - Demain nos enfants mangeront des criquets (2010 French documentary)

ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: