ವಿಷಯಕ್ಕೆ ಹೋಗು

ಕೃಷ್ಣರಾಜಸಾಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೆ ಆರ್ ಎಸ್ ಇಂದ ಪುನರ್ನಿರ್ದೇಶಿತ)
ಕೃಷ್ಣರಾಜ ಸಾಗರ ಜಲಾಶಯ
ಅಧಿಕೃತ ಹೆಸರುಕೃಷ್ಣರಾಜ ಸಾಗರ ಜಲಾಶಯ
ಸ್ಥಳಮಂಡ್ಯ,ಜಿಲ್ಲೆ, ಕರ್ನಾಟಕ, ಭಾರತ
ಅಕ್ಷಾಂಶ ರೇಖಾಂಶ12°24′58″N 76°34′26″E / 12.41611°N 76.57389°E / 12.41611; 76.57389
Dam and spillways
ಇಂಪೌಂಡ್ಸ್ಕಾವೇರಿ ನದಿ
ಎತ್ತರ125 ft (38 m)
ಉದ್ದ3.5 km (2.2 mi)
Reservoir
ರಚಿಸುವಿಕೆಕೃಷ್ಣರಾಜ ಸಾಗರ ಜಲಾಶಯ
ಒಟ್ಟು ಸಾಮರ್ಥ್ಯ49 billion cubic feet (1.4 km3)
ರಾತ್ರಿಯಲ್ಲಿ ಬೃಂದಾವನ ಕಾರಂಜಿ
ಬೃಂದಾವನ ಉದ್ಯಾನ
ಬೃಂದಾವನ ಉದ್ಯಾನದಲ್ಲಿ ಕಾರಂಜಿ
ಬೃಂದಾವನ ಉದ್ಯಾನವನ, ಮಂಡ್ಯ

ಕೃಷ್ಣರಾಜಸಾಗರ ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು.[] ಈ ಅಣೆಕಟ್ಟಿನ ಜೊತೆಗೇ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ.[]

ಕಣ್ವಪುರ ಕನ್ನಂಬಾಡಿಯಾಗಿದ್ದು ಹೇಗೆ

[ಬದಲಾಯಿಸಿ]

ಕನ್ನಂಬಾಡಿ ಎನ್ನುವುದು ಕಾವೇರಿನದಿ ತೀರದ ಒಂದು ಗ್ರಾಮ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರು ಎಂಬ ಐತಿಹ್ಯವಿದೆ. ಕಣ್ವರಿಂದಾಗಿಯೇ ಈ ಗ್ರಾಮಕ್ಕೆ ಕಣ್ವಪುರಿ, ಕಣ್ಣಂಬಾಡಿ, ಕನ್ನಂಬಾಡಿ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಈ ಕನ್ನಂಬಾಡಿಯನ್ನು ದೊಡ್ಡಯ್ಯ ಪ್ರಭು ಎಂಬ ಪಾಳೇಗಾರ ಆಳುತ್ತಿದ್ದನು. ಕ್ರಿ.ಶ.೧೬೦೦ ರಲ್ಲಿ ಮೈಸೂರು ದೊರೆ ರಾಜ ಒಡೆಯರ್ ಅವರು ಇದನ್ನು ಗೆದ್ದುಕೊಂಡರು. ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಣೆಕಟ್ಟು ನಿರ್ಮಾಣವಾಗಿದ್ದು ಕಾವೇರಿ ನದಿಗೆ. ಚೋಳ ಸಾಮ್ರಾಜ್ಯದ ಕರಿಕಾಲ ಚೋಳ ಎಂಬ ಅರಸು ಪ್ರಥಮ ಬಾರಿಗೆ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಿದ. ಕ್ರಿ.ಶ. ೧೦೬೮ ರಲ್ಲಿ ತಮಿಳುನಾಡಿನ ಕಲ್ಲಣೈ ಎಂಬಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟೆ ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ.

ಅಣೆಕಟ್ಟು

[ಬದಲಾಯಿಸಿ]
  • ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಇದನ್ನು ಕಟ್ಟಿದ ಸಮಯದಲ್ಲಿ ಇದು ಭಾರತದಲ್ಲಿ ಅತಿ ದೊಡ್ಡ ಅಣೆಕಟ್ಟಾಗಿತ್ತು. ಇದನ್ನು ಸ್ವತಂತ್ರ ಪೂರ್ವದಲ್ಲಿ ನಿರ್ಮಿಸಲಾಯಿತು
  • ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ನೀರು ಸರಬರಾಜು. ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್ ಗೇಟ್ ಗಳನ್ನು ಉಪಯೋಗಿಸಿದ ಪ್ರಪಂಚದ ಮೊದಲ ಅಣೆಕಟ್ಟುಗಳಲ್ಲಿ ಇದೂ ಒಂದು. ಕೃಷ್ಣರಾಜ ಸಾಗರಕ್ಕೆ ಮೂರು ಪ್ರಮುಖ ನಾಲೆಗಳಿವೆ.
  • ಅದರಲ್ಲಿ ಮುಖ್ಯವಾಗಿದ್ದು ವಿಶ್ವೇಶ್ವರಯ್ಯ ನಾಲೆ ೪೫ ಕಿ.ಮೀ.ನಷ್ಟಿದೆ. ೩೨ ಕಿ.ಮೀ.ಗಳ ಬಲದಂಡೆ ಮತ್ತು ೨೧ ಕಿ.ಮೀ.ನ ಎಡದಂಡೆ ನಾಲೆ ಇದೆ. ೧೨೪ ಅಡಿ ನೀರು ನಿಲ್ಲಿಸಲು ೧೩೦ ಅಡಿ ಎತ್ತರದ ಅಣೆಕಟ್ಟು ನಿರ್ಮಿಸಲಾಗಿದೆ. ಇಷ್ಟೊಂದು ಎತ್ತರದ ಅಣೆಕಟ್ಟಿಗಾಗಿ ೧೧೧ ಅಡಿ ಆಳದಲ್ಲಿ ತಳಪಾಯ ಹಾಕಲಾಗಿದೆ. ಅಂದರೆ ಈ ಅಣೆಕಟ್ಟು ೪೧೦೦ ಚದರ ಮೈಲಿಯಷ್ಟು ಜಲಾನಯನ ಭೂಮಿಯನ್ನು ಆಕ್ರಮಿಸಿಕೊಂಡಿದೆ.

ಬೃಂದಾವನ ಉದ್ಯಾನವನ

[ಬದಲಾಯಿಸಿ]
  • ಬೃಂದಾವನ ಉದ್ಯಾನವನ ಕೃಷ್ಣರಾಜಸಾಗರ ಅಣೆಕಟ್ಟಿಗೆ ಹೊಂದಿಕೊಂಡಂತೆ ಕಟ್ಟಲಾದ ಸುಂದರ ಉದ್ಯಾನ. ಇದರ ತುಂಬ ಆಕರ್ಷಕವಾದ ನೀರಿನ ಕಾರಂಜಿಗಳಿವೆ. ಇಲ್ಲಿನ ಪ್ರಸಿದ್ಧ ಸಂಗೀತ ಕಾರಂಜಿ ಪ್ರವಾಸಿಗಳನ್ನು ಅನೇಕ ದಶಕಗಳಿಂದ ಆಕರ್ಷಿಸಿದೆ. ಇದಲ್ಲದೆ ಅನೇಕ ಜೀವಶಾಸ್ತ ಸಂಶೋಧನಾ ಇಲಾಖೆಗಳು ಇಲ್ಲಿಯೇ ಕೆಲಸ ನಡೆಸುತ್ತವೆ. ಪ್ರವಾಸಿಗಳಿಗೆ ಒಂದು ತಂಗುದಾಣವನ್ನು ಬೃಂದಾವನ ಉದ್ಯಾನದಲ್ಲಿ ಕಟ್ಟಿಸಲಾಗಿದೆ.
  • ಹೀಗೆ ಬೃಹದಾಕಾರವಾಗಿ ಬೆಳೆದು ನಿಂತ ಕನ್ನಂಬಾಡಿ ಕಟ್ಟೆ ೧.೨೫ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ಬರಡಾಗಬೇಕಾಗ್ದಿದ ಈ ಪ್ರದೇಶದ್ಲಲಿ ಹಸಿರು ನಳನಳಿಸುವಂತೆ ಮಾಡಿದೆ. ಈ ಅಣೆಕಟ್ಟು ಲಕ್ಷಾಂತರ ರೈತರ ಪಾಲಿಗೆ ದೇವತೆಯಾದರೂ ಪ್ರವಾಸಿಗರು ಮಾತ್ರ ಇಲ್ಲಿಗೆ ಬರತೊಡಗಿದ್ದು ಇಲ್ಲಿ ಬೃಂದಾವನ ಉದ್ಯಾನ ನಿರ್ಮಾಣವಾದ ಮೇಲೆ.
  • ಸರ್ ಮಿರ್ಜಾ ಇಸ್ಮಾಯಿಲ್ ಅವರ ಕನಸಿನ ಕೂಸಾದ ಬೃಂದಾವನದ ಸಂಗೀತ ಕಾರಂಜಿ, ವಿವಿಧ ಕಾರಂಜಿಗಳು, ವಿದ್ಯುದೀಪಾಲಂಕಾರದ ಬೆಳಕಿನ್ಲಲಿ ಕಣ್ಮನ ಸೆಲೆಯುತ್ತವೆ. ಮೈಸೂರಿಗೆ ಬಂದವರೆಲ್ಲರು ಕೃಷ್ಣರಾಜ ಸಾಗರಕ್ಕೆ ಹೋಗಲೇ ಬೇಕು ಎನ್ನುವ ವಾತಾವರಣವನ್ನು ಸೃಷ್ಟಿಸಿದೆ. ೭೫ರ ಹರೆಯದ ಕನ್ನಂಬಾಡಿ ಕಟ್ಟೆ ನಮ್ಮ ರಾಜ್ಯದ ಹಾಗೂ ದೇಶದ ಇತರ ಅಣೆಕಟ್ಟುಗಳು ನಾಚುವಂತೆ ಎದೆಯುಬ್ಬಿಸಿ ನಿಂತಿದೆ.

ಚರಿತ್ರೆ

[ಬದಲಾಯಿಸಿ]

ಯೋಜನೆಯ ಹಂತಗಳು

[ಬದಲಾಯಿಸಿ]
  • ಮುಂಬೈಯಲಿ ಎಂಜಿನಿಯರ್ ಆಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೦೯ ರಲ್ಲಿ ಮೈಸೂರಿಗೆ ಕರೆಸಿಕೊಂಡರು. ಅಷ್ಟರಲ್ಲಾಗಲೆ ಕೃಷ್ಣರಾಜ ಸಾಗರ ಅರ್ಥಾತ್ ಕನ್ನಂಬಾಡಿ ಕಟ್ಟೆಯ ಕೆಲಸ ಶುರುವಾಗಿ ಮೂರು ವರ್ಷವಾಗಿತ್ತು. ವಿಶ್ವೇಶ್ವರಯ್ಯ ಅವರು ಬರುವುದಕ್ಕಿಂತ ಮೊದಲು ಇಂಜಿನಿಯರ್ ಆಗಿದ್ದ ಕ್ಯಾ.ಡೇವಿಸ್ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಬಂದರು .
  • ಇದರ ಪ್ರಕಾರ ಮೈಸೂರಿನಿಂದ ೧೨ ಮೈಲಿ ಮತ್ತು ಶ್ರೀರಂಗಪಟ್ಟಣದಿಂದ ೯ ಮೈಲಿ ದೂರದಲ್ಲಿರುವ ಕನ್ನಂಬಾಡಿಯಲ್ಲಿ ಜಲಾಶಯ ನಿರ್ಮಿಸಲು ಯೋಜಿಸಲಾಯಿತು. ಈ ಯೋಜನೆಯಿಂದ ೨೫ ಹಳ್ಳಿಗಳು, ೯೨೫೦ ಎಕರೆ ನೀರಾವರಿ ಪ್ರದೇಶ, ೧೩,೨೯೩ ಎಕರೆ ಖುಷ್ಕಿ ಪ್ರದೇಶ, ೮೫೦೦ ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಗುತ್ತದೆ ಎಂದು ಅಂದಾಜಿಸಲಾಯಿತು.
  • ಮೊದಲ ಹಂತಕ್ಕೆ ೯೫ ಲಕ್ಷ ರೂಪಾಯಿ ಬೇಕು ಎಂದು ಅಂದಾಜಿಸಲಾಗಿತ್ತು. ೯೭ ಅಡಿ ಎತ್ತರದ ಅಣೆಕಟ್ಟು ಕಟ್ಟಿ ೮೦ ಅಡಿ ನೀರು ನಿಲ್ಲಿಸಲು ಉದ್ದೇಶಿಸಲಾಗಿತ್ತು. ಆದರೆ ಅಪಾರ ಪ್ರಮಾಣದ ಹಣ ವ್ಯಯವಾಗುವುದು ಹಾಗೂ ಮದ್ರಾಸ್ ಸರ್ಕಾರದ ಆಕ್ಷೇಪದಿಂದಾಗಿ ಈ ಯೋಜನೆಯ ಬಗ್ಗೆ ಆಗಿನ ದಿವಾನರಾಗಿದ್ದ ಟಿ.ಆನಂದರಾಯರು ಹೆಚ್ಚಿನ ಗಮನ ಕೊಡಲಿಲ್ಲ.
  • ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಣೆಕಟ್ಟಯ ಕೆಲಸಕ್ಕೆ ವೇಗವನ್ನು ನೀಡಲು ವಿಶ್ವೇಶ್ವರಯ್ಯ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿ ಯೋಜನೆಯನ್ನು ಮುಂದುವರೆಸಿದರು. ತಮ್ಮ ಬಳಿ ಇದ್ದ ನಾಲ್ಕು ಮೂಟೆ ಚಿನ್ನದ ಆಭರಣ, ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಿ ೮೦ ಲಕ್ಷ ರೂಪಾಯಿ ಒದಗಿಸುವುದರೊಂದಿಗೆ೧೯೧೧ ಅಣೆಕಟ್ಟೆಯ ಯೋಜನೆ ಯಶಸ್ವಿಯಾಗಿ ಮುಂದುವರೆಯಿತು.

ಮೂರು ಹಂತದ ಯೋಜನೆ

[ಬದಲಾಯಿಸಿ]
  • ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಕಟ್ಟೆ ನಿರ್ಮಾಣ,ಎರಡನೇ ಹಂತದಲ್ಲಿ ಕಾಲುವೆ ನಿರ್ಮಾಣ, ಮೂರನೇ ಹಂತದಲ್ಲಿ ಜಲ ವಿದ್ಯುತ್ ಘಟಕ ಸ್ಥಾಪನೆ. ಸುಮಾರು ೧೦ ಸಾವಿರ ಕಾರ್ಮಿಕರು ನಿರಂತರ ದುಡಿದ ಕಾರಣ ೧೯೧೫ರಲ್ಲಿ ೬೫ ಅಡಿ ಕಟ್ಟೆ ನಿರ್ಮಿಸಲಾಯಿತು. ೧೯೧೯ರಲ್ಲಿ ೧೦೭ ಅಡಿ ಕಟ್ಟೆ ನಿರ್ಮಾಣವಾಯಿತು. ಅಲ್ಲಿಯವರೆಗೆ ಸುಮಾರು ೧೫೫ ಲಕ್ಷ ರೂಪಾಯಿ ವೆಚ್ಚವಾಗಿತ್ತು.
  • ಮೊದಲ ಹಂತದ ಯೋಜನೆ ಮುಗಿದಿದ್ದು ೧೯೨೧ರಲ್ಲಿ. ಆ ವೇಳೆಗಾಗಲೇ ೨೧೧ ಲಕ್ಷ ರೂಪಾಯಿ ಖರ್ಚಾಗಿತ್ತು. ೧೯೨೪ ರಲ್ಲಿ ಕಟ್ಟೆಯ ಜೊತೆಗೇ ಕಾಲುವೆ ನಿರ್ಮಾಣ ಕಾರ್ಯ ಕೂಡ ಆರಂಭವಾಯಿತು. ೧೯೨೮ ರಲ್ಲಿ ಯೋಜಿಸಿದಂತೆ ಅಣೆಕಟ್ಟೆಯ ಎತ್ತರ ೧೩೦ ಅಡಿಗೆ ಮುಟ್ಟಿತು.೧೯೧೧ರಲ್ಲಿ ಆರಂಭಿಸಿದ ಕಾಮಗಾರಿ ೧೯೩೨ರಲ್ಲಿ ಮುಕ್ತಾಯವಾದಾಗ ಒಟ್ಟು ಖರ್ಚಾದ ಹಣ ೩ ಕೋಟಿ, ೨೩ ಲಕ್ಷ ೪೭ ಸಾವಿರ ರೂಪಾಯಿಗಳು.
  • ಸಮುದ್ರಮಟ್ಟದಿಂದ ೨೩೪೪ ಅಡಿ ಎತ್ತರದಲ್ಲಿರುವ ಈ ಅಣೆಕಟ್ಟೆಯಲ್ಲಿ ೪೮.೩೩ ಟಿ‌ಎಂಸಿ ನೀರನ್ನು ಸಂಗ್ರಹಿಸಬಹುದು. ೮೬೦೦ ಅಡಿ ಉದ್ದದ ಈ ಕಟ್ಟೆ ತಳಪಾಯದಿಂದ ೧೪೦ ಅಡಿ ಎತ್ತರದಲ್ಲಿದೆ. ಅಣೆಕಟ್ಟೆಯ ಮೇಲ್ಭಾಗದಲ್ಲಿ ೧೪.೫ ಅಡಿ ಅಗಲದ ರಸ್ತೆ ಇದು ಹಿನ್ನೀರಿನ ಸರಾಸರಿ ಉದ್ದ ೨೫ ಮೈಲಿ. ಅಗಲ ೫ ಮೈಲಿ. ಮದ್ರಾಸ್ ಸರ್ಕಾರದ ಕಿರಿಕಿರಿಯನ್ನು ಸಹಿಸಿಕೊಂಡು ಧೈರ್ಯ ಮಾಡಿ ಅಂದು ಈ ಕಟ್ಟೆಯನ್ನು ಕಟ್ಟದೇ ಹೋಗಿದ್ದರೆ ಹಳೆ ಮೈಸೂರು ಪ್ರಾಂತ್ಯ ಈಗಲೂ ಕುಗ್ರಾಮಗಳಿಂದಲೇ ತುಂಬಿರುತ್ತಿತ್ತು.

ಊರುಗಳ ಮುಳುಗಡೆ ಕೃಷ್ಣರಾಜ ಸಾಗರ ಜಲಾಶಯ ಕಟ್ಟಿದ್ದರಿಂದ 13,923 ಎಕರೆ ಖುಷ್ಕಿ ಭೂಮಿ, 9,520 ಎಕರೆ ತರೀ ಭೂಮಿ ಹಾಗೂ 8,500 ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಯಿತು. 25 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾದವು. ಇದರಿಂದ 15 ಸಾವಿರ ಮಂದಿ ನಿರ್ವಸತಿಗರಾದರು. ಸಂತ್ರಸ್ತರಿಗೆ ಮೈಸೂರು ಸರ್ಕಾರವು ಮನೆ ನಿರ್ಮಿಸಿಕೊಳ್ಳಲು ಮುಫತ್ತಾಗಿ ನಿವೇಶನ ಒದಗಿಸಿತಲ್ಲದೆ ರಸ್ತೆ, ಬಾವಿ, ಪಾಠಶಾಲೆ, ಮಂದಿರಗಳನ್ನು ಕಟ್ಟಿಸಿಕೊಡಲಾಯಿತು.

ಸಮಸ್ಯೆ

[ಬದಲಾಯಿಸಿ]
  • ಈ ಅಣೆಕಟ್ಟೆ ನಿರ್ಮಾಣ ಕಾಮಗಾರಿ 1906ರಲ್ಲಿ ಆರಂಭವಾಯಿತಾದರೂ ನೀರಿನ ಹಂಚಿಕೆ ವಿಷಯದಲ್ಲಿ ಮೈಸೂರು ಮತ್ತು ಮದರಾಸು ಸರ್ಕಾರಗಳ ನಡುವೆ ವಿವಾದ ಉಂಟಾಗಿ ಕಾಮಗಾರಿಗೆ ತೊಡಕಾಗಿತ್ತು. 1924ರ ಅಖೈರು ಒಪ್ಪಂದದೊಡನೆ ವಿವಾದ ಬಗೆಹರಿದು ಕಾಮಗಾರಿ ಪುನಾರಂಭಗೊಂಡಿತು.
  • 1924ರಲ್ಲಿ ಮದರಾಸು ಮತ್ತು ಮೈಸೂರು ಸರ್ಕಾರಗಳ ನಡುವೆ ನಡೆದ ಕಾವೇರಿ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ ಪ್ರತಿ ವರ್ಷ ಮೇ ತಿಂಗಳ 28ನೇ ತಾರೀಖಿನಿಂದ ಅದರ ಮುಂದಿನ ಜನವರಿ 27ರವರೆಗೆ ಪ್ರತಿ ದಿನ ಜಲಾಶಯಕ್ಕೆ ಬರುವ ನೀರಿನಲ್ಲಿ ದಿನವಹಿ ಫಲಾನಾ ಪರಿಮಾಣವೆಂದು ಗೊತ್ತಾಗಿರುವಷ್ಟು ಜಲಾಶಯದಿಂದ ಹರಿದು ಹೋಗಲು ಅವಕಾಶ ಮಾಡಿಕೊಟ್ಟು ಹೆಚ್ಚಾಗಿ ಬಂದ ನೀರನ್ನು ಜಲಾಶಯದಲ್ಲಿ ಶೇಖರಿಸಿಟ್ಟುಕೊಳ್ಳುವ ತೀರ್ಮಾನವಾಯಿತು. ಆದರೆ ಅದೇ ವರ್ಷ ನದಿಯಲ್ಲಿ ಭಾರಿ ಪ್ರವಾಹ ಬಂದು ಕೆಲವು ವಾರಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು.[೨]

ನೀರಾವರಿ

[ಬದಲಾಯಿಸಿ]

ಉತ್ತರ ದಡದ ಮೇಲ್ಮಟ್ಟದ ನಾಲೆಗೆ ಜಲಾಶಯದಿಂದ ನೀರು ಹರಿಯಬಿಡಲು ನದಿ ಮಟ್ಟದಿಂದ 60 ಅಡಿ ಎತ್ತರದಲ್ಲಿ 6 ಅಡಿ ಅಗಲ, 12 ಅಡಿ ಎತ್ತರವುಳ್ಳ ಮೂರು ತೂಬುಗಳನ್ನು ಅಳವಡಿಸಲಾಗಿದ್ದು, 1.20ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸುವಂತೆ ಯೋಜಿಸಲಾಗಿದ್ದು, ಈಗ ಅದರ ವಿಸ್ತಾರ ಹೆಚ್ಚಿದೆ. ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲೇ ದೊಡ್ಡದಾದ, ಆರಂಭದಲ್ಲಿ ‘ಆರ್ವಿನ್‌ ನಾಲೆ’ ಎಂದು ಕರೆಯಲಾಗುತ್ತಿದ್ದ ಈ ನಾಲೆಗೆ ನಂತರ ‘ವಿಶ್ವೇಶ್ವರಯ್ಯ ನಾಲೆ’ ಎಂದು ನಾಮಕರಣ ಮಾಡಲಾಗಿದೆ. ದಿವಾನ್‌ ಬಹದ್ದೂರ್‌ ಕೆ.ಆರ್‌. ಶೇಷಾಚಾರ್ಯ ಈ ನಾಲೆಯ ಯೋಜನೆ ರೂಪಿಸಿದ್ದು, ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷಿ ಭೂಮಿಗೆ ನೀರುಣಿಸುತ್ತದೆ. ಎಡದಂಡೆ ನಾಲೆ 1,500 ಹಾಗೂ ಬಲದಂಡೆ ನಾಲೆ 3,500 ಎಕರೆಗೆ ನೀರು ಒದಗಿಸುತ್ತವೆ. ಅಣೆಕಟ್ಟೆ ನಿರ್ಮಾಣಕ್ಕೆ ರೂ. 2.5 ಕೋಟಿ ಹಾಗೂ ಬಲದಂಡೆ (ಸರ್‌.ಎಂ. ವಿಶ್ವೇಶ್ವರಯ್ಯ) ಮತ್ತು ಎಡದಂಡೆ ನಾಲಾ ಕಾಮಗಾರಿಗಳಿಗೆ ಒಟ್ಟು ರೂ. 1.6 ಕೋಟಿ ಹಣವನ್ನು ಮೈಸೂರು ಸರ್ಕಾರ ಖರ್ಚು ಮಾಡಿದೆ.[೨]

ವಿವಿಧ ತೂಬುಗಳು

[ಬದಲಾಯಿಸಿ]
  • ಜಲಾಶಯದ ಬೇರೆ ಬೇರೆ ಮಟ್ಟದಲ್ಲಿ ವಿವಿಧ ಅಳತೆಯ ಒಟ್ಟು 171 ತೂಬುಗಳನ್ನು ಅಳವಡಿಸಲಾಗಿದೆ. ಪ್ರವಾಹದ ನೀರು ಹೊರ ಹರಿಯಲು, ಕೆಸರು ಕೊಚ್ಚಿ ಹೋಗುವಂತೆ ಮಾಡಲು ಹಾಗೂ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ನೀರು ಹರಿಸಲು ಪ್ರತ್ಯೇಕ ತೂಬುಗಳನ್ನು ಅಳವಡಿಸಲಾಗಿದೆ. ದಕ್ಷಿಣ ದ್ವಾರದ ಆಚೆಗೆ 8 ಅಡಿ ಅಗಲ7 ಮತ್ತು 12 ಅಡಿ ಎತ್ತರ ಇರುವ 40 ತೂಬುಗಳಿವೆ. ನೆಲಮಟ್ಟದಿಂದ 106 ಅಡಿ ಎತ್ತರದಲ್ಲಿ ಈ ತೂಬುಗಳನ್ನು ಅಳವಡಿಸಲಾಗಿದೆ.
  • ಈ ತೂಬುಗಳ ಆಚೆಗೆ 10 ಅಡಿ ಅಗಲ ಮತ್ತು 8 ಅಡಿ ಎತ್ತರದ 48 ತೂಬುಗಳಿದ್ದು, ನದಿ ಪಾತ್ರದ 103 ಅಡಿಗಳ ಮಟ್ಟದಲ್ಲಿ ಇವುಗಳನ್ನು ಇಡಲಾಗಿದೆ. ಈ ತೂಬು ಬಾಗಿಲುಗಳ ಮೇಲೆ 10 ಅಡಿ ಅಗಲ ಮತ್ತು 10 ಅಡಿ ಎತ್ತರದ 48 ತೂಬುಗಂಡಿಗಳಿವೆ. ನೆಲಮಟ್ಟದಿಂದ 114 ಅಡಿಗಳ ಎತ್ತರದಲ್ಲಿರುವ ಈ ತೂಬುಗಂಡಿಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಜೋಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರ್‌.ಎಂ. ವಿಶ್ವೇಶ್ವರಯ್ಯ ಅವರು ಹಕ್ಕುಸ್ವಾಮ್ಯ ಪಡೆದಿದ್ದರು. ಜಲಾಶಯದ ಮಟ್ಟ 124 ಅಡಿಗೆ ಮುಟ್ಟುತ್ತಿದ್ದಂತೆ ಇವು ತಾವಾಗಿಯೇ ತೆರೆದುಕೊಳ್ಳುತ್ತವೆ.
  • ಈ ತೂಬುಗಳ ಜತೆಗೆ 80 ಅಡಿ ಎತ್ತರದಲ್ಲಿ 10 ಅಡಿ ಅಗಲ ಮತ್ತು 20 ಅಡಿ ಎತ್ತರವಿರುವ 16 ತೂಬುಗಳಿವೆ. ಇವುಗಳಲ್ಲದೆ ಅಣೆಕಟ್ಟೆಯ ಮಧ್ಯಭಾಗದಲ್ಲಿ 6 ಅಡಿ ಅಗಲ ಮತ್ತು 15 ಅಡಿ ಎತ್ತರದ 11 ತೂಬುಗಳಿದ್ದು, ಕ್ರ್ಯಾಬ್‌ವಿಂಚ್‌ ಸಾಧನ ಬಳಸಿ ಮೇಲಕ್ಕೇರಿಸುವ ಮತ್ತು ಕೆಳಕ್ಕೆ ಇಳಿಸುವ ಮೂಲಕ ಜಲಾಶಯದ ಕೆಸರನ್ನು ಹೊರ ಹಾಕಬಹುದಾಗಿದೆ.
  • ಜಲಾಶಯದ ಈ ಎಲ್ಲ ತೂಬುಗಳನ್ನು ಒಮ್ಮೆಲೇ ತೆರೆದರೆ 3.50 ಲಕ್ಷ ಕ್ಯೂಸೆಕ್‌ (ಒಂದು ಸೆಕೆಂಡ್‌ಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್‌ ಆಗುತ್ತದೆ) ಹೊರ ಹರಿಯುತ್ತದೆ. 80 ಅಡಿ ಮಟ್ಟದ 31 ತೂಬುಗಳ ಬಾಗಿಲುಗಳು ಇಂಗ್ಲೆಂಡ್‌ನ ರಾನ್‌ಸಮ್ಸ ಕಂಪೆನಿಯಿಂದಲೂ, ಉಳಿದ ತೂಬುಗಳ ಬಾಗಿಲುಗಳು ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿ ಬೀಡು ಕಬ್ಬಿಣದಿಂದಲೂ ತಯಾರಿಸಲಾಗಿದೆ.[೨]

ಕೆ.ಆರ್.ಎಸ್.ಅಣೆಕಟ್ಟೆಯ ವಿವರ

[ಬದಲಾಯಿಸಿ]
ವಿಷಯ ವಿವರ[೨]
ಅಣೆಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು 1906
ಕಾಮಗಾರಿ ಪ್ರಾರಂಭ 1906
ಕಾಮಗಾರಿ ಪೂರ್ಣಗೊಂಡಿದ್ದು 1932
ಜಲಾನಯನ ಪ್ರದೇಶದ ವಿಸ್ತೀರ್ಣ 14100ಮೈಲಿಗಳು
ಅಣೆಕಟ್ಟೆ ಬಳಿನದಿಯ ಅಗಲ 910ಅಡಿಗಳು
ಅಣೆಕಟ್ಟೆ ಏರಿಯ ಉದ್ದ 8800 ಅಡಿಗಳು
ಅಣೆಕಟ್ಟೆಯ ಪರಮಾವಧಿ ಎತ್ತರ 140 ಅಡಿಗಳು
ಅಣೆಕಟ್ಟೆಯ ತಳಪಾಯದ ಅಗಲ 111 ಅಡಿಗಳು
ಜಲಾಶಯದ ಆಳ 124 ಅಡಿಗಳು.
ಜಲಾಶಯದ ನೀರು ಹರವಿನ ವಿಸ್ತೀರ್ಣ 124 ಅಡಿಗಳು
ಗರಿಷ್ಟ ಮಟ್ಟದಲ್ಲಿ ನೀರು ನಿಲ್ಲುವ ಉದ್ದ 25 ಮೈಲಿಗಳು
ಜಲಾಶಯದ ನೀರುಸಂಗ್ರಹ ಸಾಮರ್ಥೈ 4,83,350ಲಕ್ಷ ಘನ ಅಡಿಗಳು

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "Krishna Raja Sagara Dam (KRS Dam), Mysore". karnataka.com. Retrieved 2015-03-03.
  2. "Brindavan Gardens". karnataka.com. Retrieved 2015-03-03.
  3. "Krishna Raja Sagara". mapsofindia.com. Retrieved 2015-03-03.