ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಾಲಯ | |
---|---|
ದೇವಾಲಯದ ಗೋಪುರ | |
ಹೆಸರು: | ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಾಲಯ |
ಪ್ರಮುಖ ದೇವತೆ: | ಸುಬ್ರಹ್ಮಣ್ಯ (ನಾಗನ ರೂಪದಲ್ಲಿ) |
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ.ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ನಾಗಮಂಡಲವೆಂಬ ಸಾಂಪ್ರದಾಯಿಕ ನೃತ್ಯವನ್ನು ಕಾಣಬಹುದು.[೧]
ದೇವಸ್ಥಾನದ ಬಗೆಗೆ
[ಬದಲಾಯಿಸಿ]ಮಹಾತ್ತೋಭಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನವು ಆದಿ ಶಂಕರರ ಕಾಲದಿಂದ ಸ್ಥಾನಿಕ ಸ್ಮಾರ್ತ ಮೊರೋಜ(ಮೋರ-ಮೈಯೂರ ಓಜಜಾಚಾರ್ಯ) ಮನೆತನದ ಆಡಳಿಕೆ ಒಳಪಟ್ಟಿದ್ದ ದೇವಾಲಯವಾಗಿದೆ. ಹಿಂದೆ ಸ್ಮಾರ್ತ ಬ್ರಾಹ್ಮಣರಿಂದ ಪೂಜೆಗೊಳ್ಳುತ್ತಿದ್ದ ಸುಬ್ರಹ್ಮಣ್ಯ ಈಗ ಮಾಧ್ವ ಬ್ರಾಹ್ಮಣರ ಪೂಜಾಧೀನದಲ್ಲಿ ಈ ದೇವಾಲಯವಿದೆ ಸದ್ಯ ಈಗ ಕರ್ನಾಟಕ ಸರಕಾರದ ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆಗೆ ಒಳಪಟ್ಟಿದೆ. ಸುಬ್ರಹ್ಮಣ್ಯ ಗ್ರಾಮವು ಸುಳ್ಯ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ.
ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರೆಸುತ್ತಾರೆ. ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ. ಭಕ್ತಾದಿಗಳು ಒಳ ಸುತ್ತನ್ನು ಪ್ರವೇಶಿಸುವಾಗ ತಮ್ಮ ಶರ್ಟ್, ಬನಿಯಾನುಗಳನ್ನು ತೆಗೆಯಬೇಕಾಗುವುದು.
ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ.
ಬಲ್ಲಾಳರಾಯ
[ಬದಲಾಯಿಸಿ]ದೇವಳದ ಹೊರಾಂಗಣದಿಂದ ಒಳಾಂಗಣ ಪ್ರವೇಶಿಸುವಾಗ ನಡೆಯ ಎಡಭಾಗದಲ್ಲಿ ಬಲ್ಲಾಳರಾಯನೆನ್ನುವ ಕಲ್ಲಿನ ವಿಗ್ರಹ ಇದೆ. ಇದರ ಕುರಿತಂತೆ ಒಂದು ಐತಿಹ್ಯವಿದೆ.[೨]
ಇತಿಹಾಸ
[ಬದಲಾಯಿಸಿ]ಹಿಂದೆ ಮಧ್ವ ಮೂಲ ವಿಷ್ಣು ತೀಥ೯ರು ಸಂಸ್ಥಾನದಿಂದ ಸಿದ್ಧ ಪರ್ವತಕ್ಕೆ ತಪಸ್ಸಿಗೆ ಹೊರಟು ಹೋಗುವಾಗ ಮದ್ವದಿಂದ ದತ್ತವಾದ ಸಂಪುಟವನ್ನು ಕೊಂಡೊಯ್ದರು. ಆಗ ಇನ್ನೋರ್ವ ಸ್ವಾಮಿ ಅನಿರುದ್ಧ ತೀರ್ಥರಿಗೆ ಕಂಡು ಬಂದು ನಾಳೆ ನೀನು ಹರಿದ್ಯಾನದಲ್ಲಿರುವಾಗ ನೀನು ಅಪೇಕ್ಷಿಸಿದಾಗ ಸಂಪುಟವು ಕುಮಾರಧಾರದಲ್ಲಿ ತೇಲಿ ಬರುವುದು ಇನ್ನೊಂದು ಕನ್ನಡಿ ಹೊಳೆಯಲ್ಲಿ ತೇಲಿ ಬರುತ್ತದೆ. ಕುಮಾರಧಾರದಲ್ಲಿ ಬರುವುದನ್ನು ಸಂಸ್ಥಾದಲ್ಲೂ ಮತ್ತೊಂದನ್ನು ಸ್ಥಾನಕ್ಕೂ ಕೊಡಬೇಕು ಎಂದು ತಿಳಿಸಿದರು. ಹಾಗೆ ಬಂದ ಸಂಪುಟವು ಅನಿರುದ್ಧ ತೀರ್ಥಿರಿಗೆ ಸಿಕ್ಕಿರುವ ವಿಚಾರವು ಊರವರಿಗೆ ತಿಳಿದು ಒಂದನ್ನು ಅವರೇ ಇಟ್ಟುಕೊಂಡುದಾಗಿಯೂ ಇನ್ನೊಂದು ಸಂಪುಟ ಮತ್ತು ಅಕ್ಷಯ ಪಾತ್ರವನ್ನು ಮಾತ್ರ ದೇವಸ್ಥಾನಕ್ಕೆ ನೀಡಿರುತ್ತಾರೆಂದೂ ಬಲ್ಲಾಳನಲ್ಲಿ ದೂರು ಹೇಳಿದರಂತೆ. ಆಗ ಆಗ್ರಹ ಪೂರ್ವಕವಾಗಿ ಮಂದ ಸ್ವಾಮಿಯವರಿಗೆ ತಾವು ಉಳಿಸಿಕೊಂಡಿರುವ ಸಂಪುಟವನ್ನು ನೀಡುವಂತೆ ಬಲ್ಲಾಳ ಆಜ್ಞಾಪಿಸುತ್ತಾನೆ. ಅದು ನನ್ನಲಿರುವುದು ಗುರುಗಳ ಹೇಳಿಕೆ ಪ್ರಕಾರವೆಂದು ಅನಿರುದ್ದ ತೀರ್ಥರು ವಿಜ್ಞಾಪಿಸಿಕಂಡರು. ಬಲ್ಲಾಳ ಕೇಳಲ್ಲಿಲ್ಲ. ಸಂಪುಟ ಪಡಕೊಂಡ ಬಲ್ಲಾಳ ಅದರ ಮುಚ್ಚಳ ತೆಗೆಸಲು ಪ್ರಯತ್ನಪಟ್ಟು ಸೋತು ಪಟ್ಟದಾನೆಯ ಕಾಲಿನಿಂದ ಮೆಟ್ಟಿಸಿದ. ಆನೆಯ ಮೈ ಉರಿ ತಾಳಲಾರದೆ ನದಿಯಲ್ಲಿ ಬಿದ್ದು ಸತ್ತಿತ್ತು. ಆನೆ ಸತ್ತ ಸ್ಥಳ ಆನೆಗುಂಡಿಯೆಂದಾಯಿತು. ಬಲ್ಲಾಳರಾಯನಿಗೂ ಮೈ ಉರಿಯಿಂದ ಗುಳ್ಳೆಗಳೆದ್ದವು. ಸಂಪುಟವನ್ನು ಹಿಂತಿರುಗಿಸಿ ಸುಬ್ರಾಯ ದೇವರೆದುರಲ್ಲಿ ಧ್ಯಾನನಿರತನಾದ ಸುಬ್ರಾಯ ದೇವರು ನೀನು ಗುರುದ್ರೋಹ ಮಾಡಿದ್ದಿ,ಈಗ ಶರಣದ್ದರಿಂದ ನಿನ್ನ ಪಾಪ ವಿಮೋಚನೆಯಾಗಬೇಕಗಿದೆ. ಅದಕ್ಕಾಗಿ ಮತ್ತು ಮೈಯುರಿ ಕಡಿಮೆಯಾಗಬೇಕದರೆ ನಿನ್ನ ಪ್ರತಿಬಿಂಬವನ್ನು ಕಲ್ಲಿನಿಂದ ತಯಾರಿಸಿ ನನ್ನ ಸನ್ನಿಧಿಯಲ್ಲಿ ಇರಿಸು,ಭಕ್ತಾದಿಗಳು ನಿನಗೆ ಕುಂಬಳಕಾಯಿ, ಬೆಣ್ಣೆ, ಹತ್ತಿ, ಸಾಸಿವೆ ಪದಾರ್ಥಗಳನ್ನು ಹರಕೆಯಾಗಿ ಸಲ್ಲಿಸುವರು ಅದನ್ನು ಮಾರಿ ಬಂದ ಹಣವನ್ನು ಸಂಸ್ಥಾನ ಮಠಕ್ಕೆ ಅರ್ಪಿಸಬೇಕು ಅಲ್ಲದೆ ದೇವಸ್ಥಾನದ ಅಧಿಕಾರವನ್ನು ಮಠದ ಸ್ವಾಮಿಯವರಿಗೆ ಒಪ್ಪಿಸಬೇಕು ಎಂದು ನಿರ್ದೇಶಿಸಿತಂತೆ.
ನಂಬಿಕೆ
[ಬದಲಾಯಿಸಿ]ಆ ಪ್ರಕಾರ ನಡೆದುಕೊಂಡ ಬಳಿಕ ಬಲ್ಲಾಳನ ಸಂಕಟ ನಿವಾರಣೆಯಾಯಿತು. ಆ ಸಂಧರ್ಭದಲ್ಲಿ ದೇವರ ಎದುರು ಭಾಗದಲ್ಲಿ ನೆಲೆಗೊಳಿಸಿದ ನಿಗ್ರಹವೇ ಇಂದಿಗೂ ಇದೆ. ಈ ವಿಗ್ರಹವನ್ನು ಸ್ಥಳಾಂತರಿಸಬಾರದೆಂಬ ನಿಷೇಧವಿದೆ. ಮೈಮೇಲಿನ ಬೊಕ್ಕೆ ನಿವಾರಣೆಗಾಗಿ ಹರಕೆ ಹೊರುವವರ ಮೇಲೆ ಉಲ್ಲೇಖಿಸಿದ ವಸ್ತುಗಳನ್ನು ಈ ವಿಗ್ರಹಕ್ಕೆ ಅರ್ಪಿಸುವುದುಂಟು.
ಪೌರಾಣಿಕ ಹಿನ್ನೆಲೆ
[ಬದಲಾಯಿಸಿ]ಶ್ರೀ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ ರಾಕ್ಷಸರ ದಮನಕ್ಕಾಗಿ ಜನ್ಮವೆತ್ತಿದ ಕುಮಾರಸ್ವಾಮಿಯು ತಾರಕಾದಿ ಅಸುರರನ್ನು ಯುದ್ಧದಲ್ಲಿ ಸಂಹರಿಸಿ, ಸೋದರ ಗಣಪತಿಯ ಜೊತೆ ಕುಮಾರಪರ್ವತಕ್ಕೆ ಬಂದಾಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಸ್ವಾಮಿಗೆ ಕುಮಾರಧಾರ ತೀರ್ಥದ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯ ದಿನ ವಿವಾಹ ಮಾಡಿಕೊಟ್ಟನು. ಅದೇ ವೇಳೆ ಅಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ನಾಗರಾಜನಾದ ವಾಸುಕಿಯ ಪ್ರಾರ್ಥನೆಯನ್ನು ಮನ್ನಿಸಿ ಸುಬ್ರಹ್ಮಣ್ಯನು ತಾನು ದೇವಸೇನಾ ಸಮೇತನಾಗಿ ಒಂದಂಶದಿಂದ ಅವನಲ್ಲಿ ನಿತ್ಯ ಸನ್ನಿಹಿತನಾಗಿ ಈ ಕ್ಷೇತ್ರದಲ್ಲಿ ನೆಲೆಸುವುದಾಗಿ ವಾಸುಕಿಯನ್ನು ಹರಸುತ್ತಾನೆ.
ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದ್ದು, ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾಭೀಷ್ಟ ಪ್ರದಾಯಕನಾಗಿ ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ. ಗುಪ್ತ ಕ್ಷೇತ್ರವೆಂಬುವುದಾಗಿಯೂ ಈ ಕ್ಷೇತ್ರವನ್ನು ಕರೆಯುತ್ತಾರೆ. ಮೃತ್ತಿಕಾ ಪ್ರಸಾದ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ಪವಿತ್ರ ಕುಮಾರಧಾರ ತೀರ್ಥ ಸ್ನಾನದಿಂದ ಮತ್ತು ಮಡೆಸ್ನಾನದಿಂದ ಕುಷ್ಠ ರೋಗದಂತಹ ಭಯಾನಕ ರೋಗಗಳೂ, ಚರ್ಮ ವ್ಯಾಧಿಗಳೂ ಶಮನವಾಗುವುದೆಂಬುದು ಭಕ್ತರ ಅಪಾರ ನಂಬಿಕೆ. ಶ್ರೀ ದೇವರಿಗೆ ಅನ್ನದಾನ ಸುಬ್ಬಪ್ಪನೆಂಬ ನಾಮಾಭಿದಾನವಿದ್ದು, ಶ್ರೀ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ನಿತ್ಯ ಅನ್ನಸಂತರ್ಪಣೆ ನಡೆಯುತ್ತಿದೆ. ಸರ್ಪದೋಷದಿಂದ ಬರುವಂತಹ ಸಂತಾನ ಹೀನತೆ, ಚರ್ಮ ವ್ಯಾಧಿ, ದೃಷ್ಠಿ ಮಾಂದ್ಯ, ಭೂಮಿ ದೋಷವೇ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸಿ ಕೃತಾರ್ಥರಾಗುತ್ತಾರೆ. ಜನ್ಮ ಜನ್ಮಾಂತರದ ದುರಿತಗಳ ನಾಶನಾದ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾದಿಗಳ ಶ್ರದ್ಧಾ-ಭಕ್ತಿ ಪೂರ್ವಕ ಸೇವಾ ಕೈಂಕರ್ಯಗಳನ್ನು ಸ್ವೀಕರಿಸಿ ಇಷ್ಟಾರ್ಥಗಳನ್ನು ಕರುಣಿಸಿ ಪೊರೆಯುವ ಕಲಿಯುಗ ಪ್ರತ್ಯಕ್ಷ ದೇವರೆನಿಸಿಕೊಂಡಿದ್ದಾನೆ.[೩]
ದೇವಸ್ಥಾನದ ಶಂಕುಸ್ಥಾಪನೆ ಸುಮಾರು ಐದು ಸಾವಿರ ವರ್ಷಗಳ ಹಿಂದೆ
[ಬದಲಾಯಿಸಿ]ಶ್ರೀ ಸುಬ್ರಹ್ಮಣ್ಯ ಕ್ಷೇತ್ರಪೂರ್ವದಲ್ಲಿ ಕುಕ್ಕೆ ಪಟ್ಟಣವೆಂದು ಪ್ರಸಿದ್ಧಿಯಾಗಿತ್ತೆಂದು ಶಾಸನಗಳಿಂದಲೂ, ಗ್ರಂಥಗಳಿಂದಲೂ ತಿಳಿದು ಬರುತ್ತದೆ. ಶ್ರೀ ಆದಿಶಂಕರಾಚಾರ್ಯರು ದಿಗ್ವಿಜಯಕ್ಕಾಗಿ ಇಲ್ಲಗೆ ಬಂದು ಕೆಲವು ದಿನ ವಾಸ ಮಾಡಿದ್ದರೆಂದೂ ಆನಂದ ವಿರಚಿತ “ಶಂಕರ ವಿಜಯ”ದಲ್ಲಿ ಹೇಳಿದೆ. ಶ್ರೀ ಶಂಕರಾಚಾರ್ಯ ವಿರಚಿತ “ಸುಬ್ರಹ್ಮಣ್ಯ ಭುಜಂಗ ಪ್ರಯಾತ ಸ್ತೋತ್ರ”ದಲ್ಲಿ “ಭಜೇ ಕುಕ್ಕೆಲಿಂಗಂ” ಎಂದು ಈ ಕ್ಷೇತ್ರದ ಉಲ್ಲೇಖವಿದೆ. ಇಲ್ಲಿಯ ಸ್ಥಳ ಪುರಾಣದ ಪ್ರಕಾರ ಅನೇಕ ದೇವ ಋಷಿಗಳು ಶಿವಲಿಂಗಗಳನ್ನು ಈ ಕ್ಷೇತ್ರದಲ್ಲಿ ಸ್ಥಾಪಿಸಿದ್ದಾಗಿ ತಿಳಿದು ಬರುತ್ತದೆ. ಇಂತಹ ಪ್ರಸಿದ್ಧ ಶಿವಲಿಂಗವನ್ನು ಉಲ್ಲೇಖಿಸುವುದೇ ಕುಕ್ಕೆಲಿಂಗವೆಂಬ ಶಬ್ದದ ಅರ್ಥವಾಗಿರುವುದೆಂದು ತಿಳಿಯಬೇಕು. ಶ್ರೀ ಸ್ಕಂದ ಪುರಾಣದ ಸನತಕುಮಾರ ಸಂಹಿತೆಯಲ್ಲಿ ಸಹ್ಯಾದ್ರಿ ಖಂಡದ ತೀರ್ಥಕ್ಷೇತ್ರದ ಮಹಿಮಾ ರೂಪಣದೊಳಗೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಧಾರಾ ನದಿಯ ತೀರದಲ್ಲಿರುವುದು. ಶ್ರೀ ಷಣ್ಮುಖ ಸ್ವಾಮಿಯು ತಾರಕಾದಿ ಮಹಾ ಅಸುರರನ್ನು ನಿಗ್ರಹಿಸಿ ತಮ್ಮ ಶಕ್ತ್ಯಾಯುಧ ಧಾರೆಯನ್ನು ಈ ತೀರ್ಥದಲ್ಲಿ ತೊಳೆದುದರಿಂದ ಇದಕ್ಕೆ ಕುಮಾರಧಾರಾ ತೀರ್ಥವೆಂದು ಹೆಸರು ಬಂತೆಂದು ಇತಿಹಾಸವಿದೆ. ಸರ್ಪದೋಷ ಪೀಡಿತರಾಗಿ ಔಷಧಗಳಿಂದ ಶಮನವಾಗದಂತಹ ರೋಗಗಳಿಂದ ನರಳುವವರು ಹಾಗೂ ಸಂತಾನವಿಲ್ಲದೆ ಇರುವವರು ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸೇವಾ ಕೈಂಕರ್ಯಗಳನ್ನು ನೆರವೇರಿಸಿ ಸಕಲಾಭೀಷ್ಠ ಸಿದ್ಧಿಯನ್ನು ಹೊಂದುತ್ತಿರುವುದು ಪ್ರಸಿದ್ಧವಾಗಿದೆ. ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಗಳ ಕಾಲದಲ್ಲಿ ಭಕ್ತಾದಿಗಳು ತಮ್ಮ ಅನೇಕ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳ ನಿವಾರಣೆಗಾಗಿ ಹೇಳಿಕೊಂಡಿರುವ ಹರಕೆ “ಬೀದಿ ಮಡೆಸ್ನಾನ” (ಉರುಳು ಸೇವೆ) ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೇ ಸಂತರ್ಪಣೆಯ ಉಚ್ಚಿಷ್ಠದಲ್ಲಿ ಹೊರಳಾಡಿಕೊಂಡು ಅಂಗಣದಲ್ಲಿ ಪ್ರದಕ್ಷಿಣೆ ಬರುವ “ಮಡೆಸ್ನಾನ” ಸೇವೆಯು ಮುಖ್ಯ ಹರಕೆಗಳಲ್ಲಿ ಒಂದಾಗಿದೆ. “ಕುಮಾರಧಾರೆ ಮಿಂದೇವು, ಕುಕ್ಕೆಲಿಂಗನ ಕಂಡೇವು, ಕೊಪ್ಪರಿಗೆ ಅನ್ನ ಉಂಡೇವು” ಎಂಬ ಪೂರ್ವ ನಾಣ್ಣುಡಿಯಂತೆ ಇಲ್ಲಿ ಪ್ರತೀದಿನವೂ ತಪ್ಪದೆ ಅನ್ನದಾನವು ನಡೆಯುತ್ತಿರುವುದು. ಇತಿಹಾಸ ಪ್ರಸಿದ್ಧ “ಮೂಲಮೃತ್ತಿಕೆ” (ಹುತ್ತದ ಮಣ್ಣು) ಇಲ್ಲಿಯ ಮುಖ್ಯ ಪ್ರಸಾದವಾಗಿರುತ್ತದೆ.
ಸರ್ಪ ಸಂಸ್ಕಾರ
[ಬದಲಾಯಿಸಿ]ಇಲ್ಲಿನ ಸರ್ಪ ಸ೦ಸ್ಕಾರ ಬಹಳ ಶ್ರೇಷ್ಠ ಮತ್ತು ಸುಪ್ರಸಿದ್ಧ. ಸರ್ಪ ದೋಷ ಇರುವವರು ಇಲ್ಲಿಗೆ ಬ೦ದು, ಸರ್ಪ ಸ೦ಸ್ಕಾರ ಮತ್ತು ನಾಗ ಪ್ರತಿಷ್ಠೆ ನೆರವೇರಿಸಿ ದೋಷ ಮುಕ್ತರಾಗುತ್ತಾರೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿ ಈ ಕಾರ್ಯಗಳನ್ನು ನೆರವೇರಿಸಿದ ವಿಖ್ಯಾತರಲ್ಲಿ ಸಚಿನ್ ತೆ೦ಡೂಲ್ಕರ್ ಮತ್ತು ಹೇಮಮಾಲಿನಿ ಸೇರಿದ್ದಾರೆ. ಇಲ್ಲಿಗೆ ಭೇಟಿ ಕೊಟ್ಟಲ್ಲಿ ಸಮೀಪದ "ಆದಿ ಸುಬ್ರಹ್ಮಣ್ಯ ಸ್ವಾಮಿ" ಯ ದೇವಾಲಯ ಮತ್ತು "ಕುಮಾರಧಾರ" ನದಿಯನ್ನು ಸ೦ದರ್ಶಿಸಲು ಮರೆಯ ಬೇಡಿ.
ದೋಷ ಪರಿಹಾರ
[ಬದಲಾಯಿಸಿ]ಜಾತಕಗಳಲ್ಲಿನ ಸರ್ಪದೋಷ ಅಥವಾ ನಾಗದೋಷ, ಕಾಳಸರ್ಪದೋಷ ಇತ್ಯಾದಿ ದೋಷಗಳ ಕಾರಣದಿಂದ ಅನಾರೋಗ್ಯ, ತಡವಿವಾಹ, ವೈವಾಹಿಕ ಸುಖಭಂಗ, ಪುತ್ರಹೀನತೆ (ಗಂಡು ಸಂತಾನ ಇಲ್ಲದಿರುವುದು),ಸಂತಾನಹೀನತೆ (ಮಕ್ಕಳೇ ಆಗದಿರುವುದು,ಉದ್ಯೋಗದಲ್ಲಿ ಅಸಮಾಧಾನ,ಇತ್ಯಾದಿ ತೊಂದರೆಗಳನ್ನು ಅನುಭವಿಸುತ್ತಿರುವವರ ಈ ಮೇಲೆ ಹೇಳಲಾದ ದೋಷಗಳಿಗೆ ಪರಿಹಾರ ಮಾಡಿಸಲು ಕರ್ನಾಟಕದಲ್ಲಿರುವ ಅತ್ಯಂತ ಪವಿತ್ರವಾದ ನಾಗರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನವಿರುವ ಕ್ಷೇತ್ರ ಎಂದರೆ ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರಪಂಚದ ನಾನಾ ಮೂಲೆಗಳಿಂದ ಭಕ್ತರು ಬಂದು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ಇತ್ಯಾದಿ ಸೇವೆ ಸಲ್ಲಿಸಿ ದೋಷಮುಕ್ತರಾಗಿ ಸುಖಜೀವನ ನಡೆಸುತ್ತಿದ್ದಾರೆ. ಕುಜದೋಷವಿರುವವರೂ ಸಹಾ ಇಲ್ಲಿ ಪರಿಹಾರ ಕಾಣುತ್ತಾರೆ. ಕಾರ್ತಿಕೇಯ, ಸುಬ್ರಹ್ಮಣ್ಯ ಎಂದೆಲ್ಲಾ ಕರೆಸಿಕೊಳ್ಳುವ ಈ ದೇವನು ಕ್ಷೀರಪ್ರಿಯನು. ಭಕ್ತರ ದೋಷಗಳನ್ನು ಪರಿಹಾರ ಮಾಡುವ ಸಲುವಾಗಿಯೇ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಎಂದರೆ ತಪ್ಪಾಗಲಾರದು.
ವಿವಾದಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Temple's Official Website Archived 2012-11-18 ವೇಬ್ಯಾಕ್ ಮೆಷಿನ್ ನಲ್ಲಿ.
- ಕ್ಷೇತ್ರ ಇತಿಹಾಸ
ಉಲ್ಲೇಖ
[ಬದಲಾಯಿಸಿ]<1-- inter wiki linka-->
- ↑ https://www.vishwavani.news/kukke-subrahmanya-place-born-sin/[ಶಾಶ್ವತವಾಗಿ ಮಡಿದ ಕೊಂಡಿ]
- ↑ ಕುಕ್ಕೆಯಲ್ಲಿ ನಾಗರಮಡಿಕೆ ಪ್ರಾದೇಶಿಕ ಅಧ್ಯಯನ ಲೇಖಕರು-ಡಾ. ಪೂವಪ್ಪ ಕಣಿಯೂರು ೨೦೧೭, ತರಂಗಿಣಿ ಪ್ರಕಾಶನ
- ↑ https://kannada.nativeplanet.com/kukke-subramanya/#overview
- ↑ https://kannada.oneindia.com/news/mangalore/kukke-subramanya-does-not-have-any-symptoms-that-resolve-the-dispute-151868.html.
- ↑ https://www.vishwavani.news/the-trivial-dispute-raised-between-two-areas-of-subramanya/[ಶಾಶ್ವತವಾಗಿ ಮಡಿದ ಕೊಂಡಿ]
- ↑ https://vijaykarnataka.indiatimes.com/state/karnataka/-/articleshow/15496026.cms
- ↑ https://kannada.oneindia.com/news/mangalore/devotee-kukke-subramanya-questions-ban-on-made-made-snana-in-supreme-court-135855.html
- Articles with unsourced statements
- Commons link is locally defined
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಪ್ರವಾಸೋದ್ಯಮ
- ಭೂಗೋಳ
- ಕರ್ನಾಟಕದ ಪ್ರಮುಖ ಸ್ಥಳಗಳು
- ಹಿಂದೂ ಧರ್ಮ
- ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು