ಬತು ಗುಹೆಗಳು
ಬತು ಕೇವ್ಸ್ | |
---|---|
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Malaysia" does not exist.Location in Malaysia | |
ಸ್ಥಳ | ಗೊಂಬಾಕ್, ಸೆಲಂಗೂರ್, ಮಲೇಶಿಯ |
ಕಕ್ಷೆಗಳು | 3°14′14.64″N 101°41′2.06″E / 3.2374000°N 101.6839056°E |
ಭೂವಿಜ್ಞಾನ | Lime Stone Caves |
ವೆಬ್ಸೈಟ್ | www.batucaves.org |
ಮಲೇಶಿಯ ದೇಶದ ರಾಜಧಾನಿ ಕೌಲಾಲಂಪುರದ ಉತ್ತರದಿಕ್ಕಿನಲ್ಲಿ ಸುಮಾರು ೧೩ ಕಿ.ಮೀ ದೂರದ ಸುಣ್ಣದಕಲ್ಲಿನ ಬೆಟ್ಟಗಳಲ್ಲಿರುವ ಗುಹೆಗಳು ಮತ್ತು ಗುಹಾದೇವಾಲಯಗಳು 'ಬತು ಗುಹೆಗಳು' ಎಂದು ಹೆಸರಾಗಿವೆ. ಇವು ಸೆಲಂಗೂರ್ ಪ್ರಾಂತ್ಯದ ಗೊಂಬಾಕ್ ಪ್ರದೇಶದಲ್ಲಿವೆ. ಬೆಟ್ಟಗಳಿರುವ ಸ್ಥಳದಲ್ಲೇ ಹರಿಯುವ 'ಸುಂಗಾಯ್ ಬತು' (ಬತು ನದಿ) ಕಾರಣದಿಂದ ಈ ಹೆಸರು ಬಂದಿದೆ. ಇದು ಆಂಪಾಂಗ್ನಿಂದ ಅರಂಭವಾಗುವ ಗಿರಿಶ್ರೇಣಿಯಲ್ಲಿ ಹತ್ತನೆಯ ಬೆಟ್ಟವಾಗಿದೆ. (ಹಾಗಾಗಿ ತಮಿಳಿನಲ್ಲಿ ಪತ್ತು ಮಲೈ ಎಂದು ಕರೆಯಲ್ಪಡುತ್ತದೆ). 'ಬತು' ಎನ್ನುವುದು ಹತ್ತಿರದ ಹಳ್ಳಿಯ ಹೆಸರು ಕೂಡ ಆಗಿದೆ. ಈ ಗುಹೆಯು ಭಾರತದ ಹೊರಗಿರುವ ಜನಪ್ರಿಯ ಹಿಂದೂ ದೇವಾಲಯ ಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿ ಮುರುಗನ್ ದೇವಾಲಯವಿದೆ. ಮಲೇಶಿಯಾದ ಹಿಂದೂ ಹಬ್ಬ 'ತೈಪುಸಂ' ಇಲ್ಲಿ ನಡೆಯುತ್ತದೆ[೧]. ಭಾರತದಲ್ಲಿ ಆರು ಸ್ವಾಮಿ ಮುರುಗನ್ ದೇವಾಲಯಗಳಿದ್ದು, ಮಲೇಶಿಯಾದಲ್ಲಿ ನಾಲ್ಕು ಇವೆ. ಹಾಗಾಗಿ ಇದು 'ಹತ್ತನೆಯ ಗುಹೆ/ಬೆಟ್ಟ' ಎಂದು ಕರೆಯಲ್ಪಡುತ್ತದೆ[೨]. ಮಲೇಶಿಯಾದ ಇನ್ನಿತರ ಮೂರು ಮುರುಗನ್ ದೇವಾಲಯಗಳೆಂದರೆ: ಕಲ್ಲುಮಲೈ ಗುಡಿ (ಇಪೋ), ತಣ್ಣೀರ್‍ಮಲೈ ಗುಡಿ (ಪಿನಾಂಗ್) ಮತ್ತು ಸನ್ನಸಿಮಲೈ ಗುಡಿ (ಮೆಲಾಕ್ಕಾ). ಇಲ್ಲಿನ ಎತ್ತರದ ನೈಸರ್ಗಿಕ ಮೇಲ್ಛಾವಣಿಯ ಗುಹೆಗಳಲ್ಲಿ ಮುರುಗನ್ ಗುಡಿಯಿರುವ ಗುಹೆಯನ್ನು ಟೆಂಪಲ್ ಕೇವ್ ಎಂದು ಕರೆಯಲಾಗುತ್ತದೆ. ಇದಲ್ಲದೇ ಇನ್ನೂ ಅನೇಕ ಹಿಂದೂ ಮೂರ್ತಿಗಳೂ/ಚಿಕ್ಕ ಗುಡಿಗಳೂ ಇಲ್ಲಿವೆ.
ಇತಿಹಾಸ
[ಬದಲಾಯಿಸಿ]ಇಲ್ಲಿನ ಸುಣ್ಣದ ಕಲ್ಲಿನ ರಚನೆಗಳು ಸುಮಾರು ೪೦೦ ಮಿಲಿಯನ್ ವರ್ಷಗಳಷ್ಟು ಹಳೆಯದೆಂದು ಹೇಳಲಾಗಿದೆ. ಇಲ್ಲಿನ ಗುಹೆಗಳಲ್ಲಿ ಕೆಲವು ಬುಡಕಟ್ಟು ಜನಾಂಗಗಳಿಗೆ ಆಶ್ರಯತಾಣವಾಗಿ ಬಳಕೆಯಾಗುತ್ತಿತ್ತು. ೧೮೬೦ರ ನಂತರ ಚೀನೀ ನೆಲೆಸಿಗರು ತಮ್ಮ ತರಕಾರಿ ಬೆಳೆಗಳ ಗೊಬ್ಬರಕ್ಕಾಗಿ 'ಬಾವಲಿ ಪಿಷ್ಠ' (guano)ವನ್ನು ಹುಡುಕತೊಡಗಿದರು. ಅನಂತರ ವಸಾಹತುಶಾಹಿ ಅಧಿಕಾರಿಗಳು ಮತ್ತು ಅಮೆರಿಕಾದ ಪ್ರಕೃತಿವಿಜ್ಞಾನಿ ವಿಲಿಯಮ್ ಹೊರ್ನಾಡೇ (೧೯೭೮) ಈ ಗುಹೆಗಳನ್ನು ದಾಖಲುಮಾಡಿದರು.
ಭಾರತದ ವ್ಯಾಪಾರಿ ಕೆ. ತಂಬುಸ್ವಾಮಿ ಪಿಳ್ಳೈ ಅವರಿಂದ ಈ ಜಾಗವು ಒಂದು ಆರಾಧನಾ ಕ್ಷೇತ್ರವಾಗಿ ಬೆಳವಣಿಗೆ ಹೊಂದಿತು. ಅವರು ೧೯೮೦ರಲ್ಲಿ ಗುಹೆಯಲ್ಲಿ ಮುರುಗನ್ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಅದು ಟೆಂಪಲ್ ಕೇವ್ ಎಂದೇ ಪ್ರಸಿದ್ಧವಾಗಿದೆ. ೧೮೯೨ರಿಂದ 'ತೈಪಸಮ್' ಹಬ್ಬವು ಇಲ್ಲಿ ಆಚರಿಸಲ್ಪಡುತ್ತಿದೆ. ಇದು ತಮಿಳು ಮಾಸ ತಾಯ್ (ಜನವರಿ ಕೊನೇ ಭಾಗ/ಫೆಬ್ರವರಿ ಮೊದಲ ಭಾಗ)ದಲ್ಲಿ ಬರುತ್ತದೆ. ತಂಬುಸ್ವಾಮಿ ಪಿಳ್ಳೈ ಅವರು ಕೌಲಾಲಂಪುರದಲ್ಲಿ 'ಶ್ರೀಮಾರಿಯಮ್ಮ ಗುಡಿ'ಯನ್ನೂ ಸ್ಥಾಪಿಸಿದರು. ೧೯೨೦ರಲ್ಲಿ ಗುಹೆಗೆ ಮರದ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ಅನಂತರ ಅವುಗಳನ್ನು ತೆಗೆದು ೨೭೨ ಕಾಂಕ್ರೀಟ್ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು.
ಧಾರ್ಮಿಕ ಕ್ಷೇತ್ರ
[ಬದಲಾಯಿಸಿ]ನೆಲಮಟ್ಟದಿಂದ ಸುಮಾರು ನೂರು ಮೀಟರ್ ಎತ್ತರದಲ್ಲಿರುವ ಬತು ಗುಹೆಗಳಲ್ಲಿ ಮೂರು ಮುಖ್ಯ ಗುಹೆಗಳು ಮತ್ತು ಹಲವು ಸಣ್ಣ ಗುಹೆಗಳು ಇವೆ. ಅತಿದೊಡ್ಡ ಗುಹೆಯಾದ 'ಕ್ಯಾಥೆಡ್ರಲ್ ಕೇವ್' ಅಥವಾ 'ಟೆಂಪಲ್ ಕೇವ್' ಎತ್ತರದ ಮೇಲ್ಛಾವಣಿ ಹೊಂದಿದ್ದು ಹಿಂದೂ ದೇವಸ್ಥಾನ ಇದೆ. ಗುಹೆಯನ್ನು ತಲುಪಲು ೨೭೨ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಬೆಟ್ಟದ ಬುಡದಲ್ಲಿ ಇನ್ನೆರಡು ಗುಹೆಗಳಿವೆ; ಅವೆಂದರೆ ಆರ್ಟ್ ಗ್ಯಾಲರಿ ಗುಹೆ ಮತ್ತು ಮ್ಯೂಸಿಯಂ ಗುಹೆ. ಇದರಲ್ಲಿ ಹಿಂದೂ ಮೂರ್ತಿಗಳು ಮತ್ತು ಕಲಾಕೃತಿಗಳಿವೆ. ಅನೇಕ ಮೂರ್ತಿಗಳು ರಾಕ್ಷಸ ಶೂರಪದ್ಮನ ಮೇಲೆ ಮುರುಗನ್ ಸ್ವಾಮಿಯ ವಿಜಯದ ಕುರಿತದ್ದಾಗಿವೆ. ಎಡತುದಿ ಭಾಗದಲ್ಲಿ 'ರಾಮಾಯಣ ಗುಹೆ' ಇದೆ. ಆ ಗುಹೆಯ ದಾರಿಯಲ್ಲಿ ೧೫ ಮೀಟರ್ ಎತ್ತರದ ಹನುಮಾನ್ ಮೂರ್ತಿ ಹಾಗೂ ಗುಡಿ ಇದೆ. ರಾಮಾಯಣ ಗುಹೆಯ ಗೋಡೆಗಳಲ್ಲಿ ರಾಮಾಯಣದ ಕತೆಯು ಕಾಲಾನುಕ್ರಮವಾಗಿ ತೋರಿಸಲ್ಪಟ್ಟಿದೆ. ಜನವರಿ ೨೦೦೬ರಲ್ಲಿ ೧೪೦ ಅಡಿ ಎತ್ತರದ ಮುರುಗನ್ ಪ್ರತಿಮೆಯನ್ನು ಬತುಗುಹೆಗಳ ಮುಂದೆ ಬೆಟ್ಟದ ಬುಡದಲ್ಲಿ ಸ್ಥಾಪಿಸಲಾಯಿತು. ಇದನ್ನಿ ನಿರ್ಮಿಸಲು ಮೂರು ವರ್ಷ ಬೇಕಾಯಿತು. ಇದು ಜಗತ್ತಿನಲ್ಲಿ ಅತಿ ಎತ್ತರದ ಮುರುಗನ್ ಮೂರ್ತಿಯಾಗಿದೆ.
ಆಡಳಿತ
[ಬದಲಾಯಿಸಿ]ಬತು ಮಲೈ ಶ್ರೀ ಮುರುಗನ್ ದೇವಾಲಯವು ಕೌಲಾಲಂಪುರದ ಶ್ರೀ ಮಹಾಮಾರಿಯಮ್ಮನ್ ದೇವಾಲಯದ ನಿರ್ವಾಹಕ ಮಂಡಳಿಯಿಂದ ನಿರ್ವಾಹಿಸಲ್ಪಡುತ್ತದೆ. ಈ ಮಂಡಳಿಯು 'ಕೊರ್ತುಮಲೈ ಪಿಳ್ಳೆಯಾರ್' ದೇವಾಲಯವನ್ನೂ ನಿರ್ವಹಿಸುತ್ತದೆ. ಮಲೇಶಿಯಾ ಸರ್ಕಾರಕ್ಕೆ ಹಿಂದೂ ಕ್ಯಾಲೆಂಡರ್ ರಚನೆಯಲ್ಲಿ ಈ ಮಂಡಳಿಯು ಸಲಹಾಕಾರನಾಗಿದೆ.
ನಿಸರ್ಗ, ಪ್ರಾಣಿ, ಪಕ್ಷಿಗಳು
[ಬದಲಾಯಿಸಿ]ಬತು ಗುಹೆಗಳಲ್ಲಿ ಇನ್ನೂ ಅನೇಕ ಗುಹೆಗಳಿದ್ದು ಹಲವಾರು ರೀತಿಯ ಜೀವರಾಶಿಗಳಿವೆ. ಬಾವಲಿಗಳು, ಜೇಡ, ಮಂಗಗಳು ಮುಂತಾದ ಪ್ರಾಣಿಗಳಿವೆ. ದೇವಾಲಯವಿರುವ ಗುಹೆಯ ಕೆಳಭಾಗದಲ್ಲಿ 'ಡಾರ್ಕ್ ಕೇವ್'[೩] ಎಂದು ಕರೆಯಲ್ಪಡುವ ಕತ್ತಲ ಗುಹೆ ಇದ್ದು ಸುಮಾರು ಎರಡು ಕಿಲೋಮೀಟರ್ ಉದ್ದದ ಗುಹಾಜಾಲವಿದೆ. ಇದರಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿಷೇದವಿದ್ದು 'ಮಲೇಶಿಯನ್ ನೇಚರ್ ಸೊಸೈಟಿ'ಯು ಇಲ್ಲಿ ಶೈಕ್ಷಣಿಕ ಪ್ರವಾಸ ಏರ್ಪಡಿಸುತ್ತದೆ. ಬತು ಗುಹೆಗಳಲ್ಲಿ ಮಂಗಗಳ ಹಾವಳಿ ಇದ್ದು ಮುರುಗನ್ ಗುಡಿಗೆ ಮೆಟ್ಟಿಲುಹತ್ತುವಾಗ ಪ್ರವಾಸಿಗರು ತಮ್ಮ ವಸ್ತುಗಳ ಬಗ್ಗೆ ಜೋಪಾನವಹಿಸಬೇಕಾಗುತ್ತದೆ.
ಚಾರಣ, ರಾಕ್ ಕ್ಲೈಂಬಿಂಗ್
[ಬದಲಾಯಿಸಿ]ಸುಮಾರು ೧೫೦ ಮೀಟರ್ ಎತ್ತರವಿರುವ ಈ ಸುಣ್ಣದಕಲ್ಲಿನ ಬೆಟ್ಟಗಳಲ್ಲಿ ರಾಕ್ ಕ್ಲೈಂಬಿಂಗ್ ಚಟುವಟಿಕೆಗಳು ನಡೆಯುತ್ತವೆ. ಚಾರಣಕ್ಕೆ, ರಾಕ್ ಕ್ಲೈಂಬಿಂಗ್‍ಗೆ ಬೆಟ್ಟದ ಬುಡದಿಂದ ಹಲವು ಕಡೆಗಳಿಂದ ದಾರಿಗಳಿವೆ. ಹೆಚ್ಚಿನ ದಾರಿಗಳು ಈಶಾನ್ಯ ಭಾಗದ ದಮಾಯ್ ಕೇವ್ಸ್ ಎಂಬ ಪ್ರದೇಶದಿಂದ ಶುರುವಾಗುತ್ತವೆ. ಮುರುಗನ್ ದೇವಾಲಯದ ಗುಹೆಯ ದ್ವಾರ ದಕ್ಷಿಣ ಭಾಗದಲ್ಲಿದೆ.
ಸಾರಿಗೆ
[ಬದಲಾಯಿಸಿ]ಬತು ಗುಹೆಗಳಿವೆ ಕೌಲಾಲಂಪುರ ನಗರದಿಂದ ಟ್ರೇನ್, ಬಸ್ ಸಾರಿಗೆ ಇದೆ. ಕಾರು ಮುಂತಾದ ವಾಹನಗಳಲ್ಲೂ ಕೂಡ ಹೋಗಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ http://www.kuala-lumpur.ws/attractions/batu-caves.htm
- ↑ http://murugan.org/temples/batumalai.htm
- ↑ "ಆರ್ಕೈವ್ ನಕಲು". Archived from the original on 2016-10-31. Retrieved 2016-11-08.
ಹೊರಕೊಂಡಿಗಳು
[ಬದಲಾಯಿಸಿ]- ಗುಹಾಲೋಕ ಬತುಕೇವ್ಸ್, ವಿಜಯಕರ್ನಾಟಕ ಲವಲವಿಕೆ
- ಬೆಟ್ಟದ ತಪ್ಪಲಿನ ಬತು ಗುಹೆಗಳು, ಕಣ್ಮನ ಸೆಳೆಯುವ 140 ಅಡಿಯಪ್ರತಿಮೆ