ವಿಷಯಕ್ಕೆ ಹೋಗು

ಕುಂದಿಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಪಂಚದ ಅನೇಕ ಕಡೆಗಳಲ್ಲಿ ಕಂಡು ಬರುವ ಸಣ್ಣ ಸಸ್ತನಿಗಳಾದ ಕುಂದಿಲುಗಳು ಲೆಪೋರಿಡೆ ಎಂಬ ಕುಟುಂಬದಲ್ಲಿವೆ. ಇದು ಲ್ಯಾಗೋಮೋರ್ಫ಼ಾ ಎಂಬ ಗಣಕ್ಕೆ ಸೇರುತ್ತದೆ. ಕುಂದಿಲಿಗಳಲ್ಲಿ ಯುರೋಪಿಯನ್ ಕುಂದಿಲಿಅ, ಹತ್ತಿ ಬಾಲದ ಕುಂದಿಲಿ ಇವೇ ಮುಂತಾಗಿ ಸುಮಾರು ೮ ಪ್ರಭೇದಗಳಿವೆ.

ವಾಸ ಸ್ಥಾನ ಹಾಗೂ ವ್ಯಾಪ್ತಿ

[ಬದಲಾಯಿಸಿ]
ಮೊಲದ ಬಿಲದ ದ್ವಾರ
ಕುಂದಿಲಿಯ ಬಿಲದ ದ್ವಾರ

ಕುಂದಿಲಿಗಳು ಹುಲ್ಲುಗಾವಲು, ಕಾಡು, ಮರುಭೂಮಿ ಮುಂತಾಗಿ ಅನೇಕ ವಿಧದ ಪ್ರದೇಶಗಳಲ್ಲಿ ಬದುಕುತ್ತವೆ. ಕುಂದಿಲಿಗಳು ಹೆಚ್ಚಾಗಿ ಗುಂಪಿನಲ್ಲಿ ಬದುಕುತ್ತವೆ. ವಿಶೇಷವಾಗಿ ಯೂರೋಪಿಯನ್ ಕುಂದಿಲಿಗಳು ನೆಲದಾಳದ ಬಿಲಗಳಲ್ಲಿ ವಾಸಿಸುತ್ತವೆ. ಪ್ರಪಂಚದ ಅರ್ಧಕ್ಕೂ ಹೆಚ್ಚಿನ ಕುಂದಿಲಿಗಳು ಉತ್ತರ ಅಮೆರಿಕಾದಲ್ಲಿ ವಾಸಿಸುತ್ತವೆ. ಯೂರೋಪ್, ಆಗ್ನೇಯ ಏಷ್ಯಾ, ಸುಮಾತ್ರಾ, ಜಪಾನ್‍ನ ಕೆಲವು ದ್ವೀಪಗಳು, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾಗಳಲ್ಲೂ ಕುಂದಿಲಿಗಳು ಕಂಡುಬರುತ್ತವೆ.

ಸ್ವರೂಪ, ಸ್ವಭಾವ ಹಾಗೂ ದೇಹ ಪ್ರಕೃತಿ

[ಬದಲಾಯಿಸಿ]
  • ಸಾಧಾರಣವಾಗಿ ೧೦ ಸೆಂ.ಮೀ ಗಿಂತಲೂ ಉದ್ದವಾಗಿರುವ ಕುಂದಿಲಿಯ ಕಿವಿಗಳು ತನ್ನ ಶತ್ರು ಪ್ರಾಣಿಯ ಶಬ್ದವನ್ನು ಗ್ರಹಿಸಲು ತುಂಬಾ ಸಹಾಯಕವಾಗಿವೆ. ಅವುಗಳ ಹಿಂಗಾಲುಗಳು ಉದ್ದ ಹಾಗೂ ಬಲಿಷ್ಠವಾಗಿದ್ದು ೪ ಬೆರಳುಗಳನ್ನು ಹೊಂದಿವೆ. ಮುಂಗಾಲುಗಳಲ್ಲಿ ಇವು ತಲಾ ೫ ಬೆರಳುಗಳನ್ನು ಹೊಂದಿವೆ. ಇವು ವಿಶ್ರಾಂತಿಯಲ್ಲಿರುವಾಗ (ನಿಧಾನವಾಗಿ ಚಲಿಸುವಾಗ), ಪಾದತಳಚಾರಿ (ಸಂಪೂರ್ಣ ಪಾದವನ್ನು ಚಪ್ಪಟೆಯಾಗಿ ಊರುವ ಪ್ರಾಣಿಗಳು) ಗಳಾಗಿದ್ದು, ಅಪಾಯಕ್ಕೆ ಸಿಲುಕಿದಾಗ/ಓಡುವಾಗ ಕೇವಲ ಬೆರಳುಗಳನ್ನೂರುವ ಅಂಗುಲಿಗಾಮಿಗಳಾಗಿವೆ.
  • ಕುಂದಿಲಿಗಳ ತೂಕ - ೦.೪ ರಿಂದ ೨ ಕಿ.ಗ್ರಾಂ. ಕುಂದಿಲಿಗಳ ಗಾತ್ರ (ದೇಹದ ಉದ್ದ)- ೨೦ ರಿಂದ ೫೦ ಸೆಂ.ಮೀ. ಅವುಗಳ ತುಪ್ಪಳವು ಉದ್ದ ಹಾಗೂ ಮೃದುವಾಗಿದ್ದು, ಕಂದು, ಬೂದು ಮುಂತಾದ ಬಣ್ಣದ್ದಾಗಿರುತ್ತದೆ. ಇವುಗಳು ಮೊಂಡು ಬಾಲವನ್ನು ಹೊಂದಿರುತ್ತವೆ. ನುಂಗುವಾಗ ಹೊರತುಪಡಿಸಿ ಇತರ ಸಮಯಗಳಲ್ಲಿ ಕುಂದಿಲಿಗಳ ಗಂಟಲು ಉಸಿರಾಟಕ್ಕೆ ಮೀಸಲಾಗಿರುತ್ತದೆ. ಕುಂದಿಲಿಗಳು ಯಾವತ್ತೂ ತಮ್ಮ ಮೂಗಿನಿಂದಲೇ ಉಸಿರಾಡುತ್ತವೆ.
  • ಕುಂದಿಲಿಗಳ ದಂತಪಂಕ್ತಿ ಇತರ ದಂಶಕಗಳಿಗಿಂತ ಭಿನ್ನವಾಗಿದ್ದು, ಒಂದರ ಹಿಂದೆ ಒಂದರಂತೆ ಇವು ಎರಡು ಜೊತೆ ಬಾಚಿಹಲ್ಲುಗಳನ್ನು ಹೊಂದಿರುತ್ತವೆ. ಕುಂದಿಲಿಗಳು ತಮ್ಮ ಜೀರ್ಣಕ್ರಿಯೆಗೆ ದೊಡ್ಡಕರುಳು ಹಾಗೂ ಮೊಂಡುನಾಳ ಎಂಬ ಕರುಳಿನ ಭಾಗವನ್ನು ಹೆಚ್ಚಾಗಿ ಅವಲಂಬಿಸಿವೆ. ಕುಂದಿಲಿಗಳ ಮೊಂಡುನಾಳವು ಅವುಗಳ ಜಠರದ ಸುಮಾರು ಹತ್ತರಷ್ಟು ದೊಡ್ಡದಾಗಿದ್ದು ದೊಡ್ಡಕರುಳಿನ ಜೊತೆಗೂಡಿ ಇಡೀ ಜೀರ್ಣಾಂಗವ್ಯೂಹದ ಶೇ.೪೦ ಭಾಗವನ್ನು ರೂಪಿಸುತ್ತದೆ.
  • ಅವುಗಳ ಮೊಂಡುನಾಳ ಭಾಗದ ವಿಶೇಷವಾದ ಸ್ನಾಯು ವ್ಯವಸ್ಥೆ ಆಹಾರದ ನಾರು ಪದಾರ್ಥವನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ನಾರು ಪದಾರ್ಥಗಳನ್ನು ಹಿಕ್ಕೆಯ ರೂಪದಲ್ಲಿ ವಿಸರ್ಜಿಸಲಾಗುತ್ತದೆ. ಆಹಾರದ ಪ್ರತ್ಯೇಕಿಸಲ್ಪಟ್ಟ, ಸುಲಭವಾಗಿ ಜೀರ್ಣವಾಗುವ ಭಾಗವನ್ನು ಲೋಳೆ ಪದಾರ್ಥದಲ್ಲಿ ಮುಚ್ಚಿ ವಿಸರ್ಜಿಸಿ ಬಳಿಕ ಪುನಃ ತಿನ್ನುತ್ತವೆ. ಲೋಳೆಯು ಆಮ್ಲೀಯವಾದ ಜಠರವನ್ನು ಹಾದು ಹೋಗುವಾಗ ಪೌಷ್ಟಿಕಾಂಶ ನಷ್ಟವಾಗದಂತೆ ತಡೆಯುತ್ತದೆ.
  • ಕುಂದಿಲಿಗಳು ಹೆಚ್ಚಿನ ಮಾಂಸಾಹಾರಿ ಪ್ರಾಣಿಗಳ ಆಹಾರ ಪಟ್ಟಿಯಲ್ಲಿದ್ದು ಸದಾ ಅಪಾಯದಲ್ಲಿ ಬದುಕುತ್ತಿರುವುದರಿಂದ ಯಾವತ್ತೂ ಜಾಗರೂಕತೆಯಿಂದಿರುತ್ತವೆ. ಅಪಾಯದ ಸಂಶಯ ಬಂದಾಗ ಅವು ತಟಸ್ಥವಾಗಿ ಸುತ್ತಲೂ ಗಮನಿಸಿ ಸೂಚನೆ ಸಿಕ್ಕರೆ ಇತರ ಕುಂದಿಲಿಗಳಿಗೆ ಸೂಚನೆಯನ್ನು ರವಾನಿಸುತ್ತವೆ. ಬಿಲದೊಳಗೆ ನುಗ್ಗುವ ಮೂಲಕ, ವಕ್ರಗತಿಯಲ್ಲಿ ಓಡುವ ಮೂಲಕ ಅವು ಅಪಾಯದಿಂದ ತಪ್ಪಿಸಿಕೊಳ್ಳುತ್ತವೆ. ಅಕಸ್ಮಾತ್ ಸೆರೆಸಿಕ್ಕಲ್ಲಿ ಹಿಂಗಾಲುಗಳಿಂದ ಒದೆಯುವ ಮೂಲಕ, ಕಚ್ಚುವ ಮೂಲಕ ತಪ್ಪಿಸಿಕೊಳ್ಳಲೆತ್ನಿಸುತ್ತವೆ.

ನಿದ್ರೆ

[ಬದಲಾಯಿಸಿ]

ಸೆರೆಯಲ್ಲಿರುವ ಕುಂದಿಲಿಗಳು ಸರಾಸರಿ ೮.೪ ಗಂಟೆಗಳ ಕಾಲ ನಿದ್ರಿಸುತ್ತವೆ.

ವಂಶಾಭಿವೃದ್ಧಿ

[ಬದಲಾಯಿಸಿ]
ಕುಂದಿಲಿಯ ಎಳೆಯ ಮರಿಗಳು
  • ಕುಂದಿಲಿಗಳು ಅತ್ಯಂತ ವೇಗವಾಗಿ ಸಂತಾನಾಭಿವೃದ್ಧಿಯನ್ನು ಮಾಡುತ್ತವೆ. ಅವುಗಳ ಸಂತಾನಾಭಿವೃದ್ಧಿಯ ಕಾಲ ಸುಮಾರು ೯ ತಿಂಗಳುಗಳವರೆಗೆ, ಫೆಬ್ರವರಿಯಿಂದ ಅಕ್ಟೋಬರ್ ವರೆಗೆ ಇರುತ್ತದೆ. ಆಸ್ಟ್ರೇಲಿಯಾ
    ಮರಿಗಳಿಂದ ಕೂಡಿದ ಗೂಡು
    ಹಾಗೂ ನ್ಯೂಜಿಲ್ಯಾಂಡ್‍ಗಳಲ್ಲಿ ಇದು ಜುಲೈ ಅಂತ್ಯದಿಂದ ಜನವರಿ ಅಂತ್ಯದವರೆಗೆ ಇರುತ್ತದೆ. ಸಾಮಾನ್ಯವಾಗಿ ಗರ್ಭಧಾರಣೆಯ ಅವಧಿ ೩೦ ದಿನ. ಒಂದು ಬಾರಿಗೆ ಸುಮಾರು ೪ ರಿಂದ ೧೨ ಮರಿಗಳಿಗೆ ಜನ್ಮ ನೀಡುತ್ತವೆ.
  • ತಳಿಯ ಗಾತ್ರ ಹೆಚ್ಚಾದಷ್ಟೂ ಸಾಮಾನ್ಯವಾಗಿ ಮರಿಗಳ ಸಂಖ್ಯೆ ಜಾಸ್ತಿ. ಮರಿಗಳು ಸಾಮಾನ್ಯವಾಗಿ ೪ ರಿಂದ ೫ ವಾರಗಳಲ್ಲಿ ಪ್ರಬುದ್ಧತೆಯನ್ನು ಹೊಂದುತ್ತವೆ. ಒಂದು ಹೆಣ್ಣು ಕುಂದಿಲಿ ತನ್ನ ಜೀವಿತಾವಧಿಯಲ್ಲಿ ಸುಮಾರು ೮೦೦ ಮರಿಗಳಿಗೆ ಜನ್ಮ ನೀಡಬಲ್ಲದು. ಕುಂದಿಲಿಗಳು ಕೇವಲ ೩೦ ರಿಂದ ೪೦ ಸೆಕೆಂಡ್‍ಗಳಷ್ಟು ಅಲ್ಪಾವಧಿಗೆ ಜೊತೆಗೂಡುತ್ತವೆ. ಆಗ ಅವುಗಳ ವರ್ತನೆಯು ನೆಕ್ಕುವುದು, ಮೂಸುವುದು, ಮೂತ್ರ ಸಿಂಪಡನೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ೧೦ ಗಂಟೆಗಳ ತರುವಾಯ ಅವುಗಳ ಗರ್ಭ ಫಲಿಸುತ್ತದೆ.
  • ಹೆಣ್ಣು ಕುಂದಿಲಿಯು ಬಿಲ ಅಥವಾ ಗೂಡನ್ನು ನಿರ್ಮಿಸುತ್ತದೆ. ಗೂಡಿಗೆ ತನ್ನ ಹೊಟ್ಟೆಯ ಭಾಗದ ತುಪ್ಪಳವನ್ನು ಹೊದೆಸುತ್ತದೆ. ಇದರಿಂದ ಮರಿಗಳಿಗೆ ಮೆತ್ತೆಯು ನಿರ್ಮಾಣವಾಗುವುದರೊಂದಿಗೆ, ಹಾಲೂಡಿಸುವುದೂ ಸುಲಭವಾಗುತ್ತದೆ. ಕುಂದಿಲಿಗಳು ಹುಟ್ಟುವಾಗ ಕುರುಡು, ರೋಮರಹಿತವಾಗಿದ್ದು ಅಸಹಾಯಕವಾಗಿರುತ್ತವೆ. ಹುಟ್ಟುವುದಕ್ಕಿಂತ ಸ್ವಲ್ಪ ಸಮಯದ ಮುಂಚೆ ರೋಗನಿರೋಧಕ ಶಕ್ತಿಯು ತಾಯಿಯ ರಕ್ತದಿಂದ ಮರಿಗಳಿಗೆ ವರ್ಗಾವಣೆಯಾಗಿರುತ್ತದೆ.
  • ಕುಂದಿಲಿಯ ಹಾಲು ಅತ್ಯಂತ ಪೌಷ್ಟಿಕವಾದ್ದರಿಂದ ತಾಯಿಯು ಅತ್ಯಂತ ಕಮ್ಮಿ ಪ್ರಮಾಣದಲ್ಲಿ ಹಾಲೂಡಿಸುತ್ತದೆ. ಹುಟ್ಟಿನಿಂದ ೧೦ ರಿಂದ ೧೧ ದಿನಗಳ ತರುವಾಯ ಮರಿಗಳು ಕಣ್ಣು ತೆರೆಯುತ್ತವೆ. ೬ ರಿಂದ ೮ ತಿಂಗಳಲ್ಲಿ ಅವುಗಳು ಪೂರ್ಣ ಪ್ರಮಾಣದ ತುಪ್ಪಳವನ್ನು ಬೆಳೆಸಿಕೊಳ್ಳುತ್ತವೆ.

ಕುಂದಿಲಿಗಳು ಸುಮಾರು ೯ ರಿಂದ ೧೨ ವರ್ಷ ಕಾಲ ಬದುಕುತ್ತವೆ. ಅತಿ ಹೆಚ್ಚು ಬದುಕಿದ ದಾಖಲೆ ೧೮ ವರ್ಷ.

ಆಹಾರಾಭ್ಯಾಸ

[ಬದಲಾಯಿಸಿ]
  • ಕುಂದಿಲಿಗಳು ಹುಲ್ಲು, ಸಣ್ಣ ಗಿಡಗಂಟಿಗಳನ್ನು ಮೇಯುವ ಸಸ್ಯಾಹಾರಿ ಪ್ರಾಣಿಗಳಾಗಿವೆ. ಈ ಕಾರಣದಿಂದ ಅವುಗಳ ಆಹಾರವು ಅತಿ ಹೆಚ್ಚಿನ ನಾರನ್ನು ಹೊಂದಿದ್ದು ಜೀರ್ಣಿಸಲು ಕಷ್ಟವಾಗಿರುತ್ತದೆ. ಹೀಗಾಗಿ ಕುಂದಿಲಿಗಳು ಎರಡು ರೀತಿಯ ಮಲಗಳನ್ನು ವಿಸರ್ಜಿಸುತ್ತವೆ - ಗಟ್ಟಿ ಹಿಕ್ಕೆ ಹಾಗೂ ಮೃದುವಾದ ಅರೆ ದ್ರವ ರೂಪದ ಮಲ. ಮೃದುವಾದ ಈ ಮಲವನ್ನು ಅವು ವಿಸರ್ಜಿಸಿದ ತಕ್ಷಣ ತಿನ್ನುತ್ತವೆ. ಈ ಮಲವು ಪುನಃ ಜೀರ್ಣಾಂಗ ವ್ಯೂಹವನ್ನು ಹಾದು ಹೋಗುವ ಮೂಲಕ ಅದರಲ್ಲಿರುವ ಹೆಚ್ಚಿನ ಪೋಷಕಾಂಶಗಳು ಹೀರಲ್ಪಡುತ್ತವೆ.
  • ಮೊದಲ ಅರ್ಧ ಗಂಟೆ ಕುಂದಿಲಿಗಳು ವೇಗವಾಗಿ ಸಿಕ್ಕಿದ್ದನ್ನು ಮೇಯುತ್ತವೆ. ಬಳಿಕದ ಅರ್ಧ ಗಂಟೆ ಆಯ್ದ ಸಸ್ಯಗಳನ್ನು ಮೇಯುತ್ತವೆ. ಈ ಅವಧಿಯಲ್ಲಿ ಅವು ಗಟ್ಟಿಯಾದ, ಪುನಃ ತಿನ್ನದ ಹಿಕ್ಕೆಯನ್ನು ವಿಸರ್ಜಿಸುತ್ತವೆ. ಈ ಹಿಕ್ಕೆಗಳನ್ನು ಅವು ಯಾವತ್ತೂ ಬಿಲದ ಒಳಗೆ ವಿಸರ್ಜಿಸುವುದಿಲ್ಲ. ಯಾವುದೇ ಅಪಾಯವಿಲ್ಲದಿದ್ದಲ್ಲಿ ಆಗೊಮ್ಮೆ ಈಗೊಮ್ಮೆ ಮೇಯುತ್ತಾ ಕುಂದಿಲಿಗಳು ಬಹಳಷ್ಟು ಸಮಯ ಬಿಲದ ಹೊರಗಡೆ ಅಡ್ಡಾಡುತ್ತವೆ. ಪುನಃ ತಿನ್ನುವ ಹಿಕ್ಕೆಗಳನ್ನು ಅವು ಪೂರ್ವಾಹ್ನ ೮ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಗೂಡಿನ ಒಳಗೆ ವಿಸರ್ಜಿಸುತ್ತವೆ.

ರೋಗಗಳು

[ಬದಲಾಯಿಸಿ]

ಕುಂದಿಲಿಗಳು ರೇಬಿಸ್ ಮುಂತಾದ ಅನೇಕ ರೋಗಗಳನ್ನು ಹೊಂದಿರಬಹುದು.

ಸಾಕುಪ್ರಾಣಿಗಳಾಗಿ ಕುಂದಿಲಿಗಳು

[ಬದಲಾಯಿಸಿ]
ಕುಂದಿಲಿಯ ತುಪ್ಪಳ; ಮೃದುತ್ವಕ್ಕೆ ಹೆಸರುವಾಸಿ

ಕುಂದಿಲಿಗಳನ್ನು ಸಾಕುಪ್ರಾಣಿಗಳಾಗಿ ಸಾಕಬಹುದಾಗಿದೆ. ಅವುಗಳಿಗಾಗಿಯೇ ಮೀಸಲಾದ ಸುರಕ್ಷಿತವಾದ ಪ್ರದೇಶಗಳಲ್ಲಿ ಅವನ್ನು ಸಾಕುತ್ತಾರೆ. ಸ್ವಲ್ಪ ಮಟ್ಟಿಗೆ ಕುಂದಿಲಿಗಳನ್ನು ತರಬೇತುಗೊಳಿಸಬಹುದು.

ಆಹಾರವಾಗಿ ಹಾಗೂ ಉಡುಪುಗಳಲ್ಲಿ ಕುಂದಿಲಿಗಳು

[ಬದಲಾಯಿಸಿ]

ಕುಂದಿಲಿಗಳ ಮಾಂಸವನ್ನು ಅನೇಕ ದೇಶಗಳಲ್ಲಿ ಆಹಾರವಾಗಿಯೂ ಬಳಸುತ್ತಾರೆ. ಆಹಾರವಾಗಿ ಬಳಸಿದಾಗ ಕುಂದಿಲಿ ಜ್ವರ ಮುಂತಾದ ರೋಗಗಳು ಮನುಷ್ಯರಿಗೆ ಬರುವ ಸಾಧ್ಯತೆ ಇರುತ್ತದೆ. ಮೃದುವಾದ ಕುಂದಿಲಿಯ ತುಪ್ಪಳವನ್ನು ಟೋಪಿ ಮುಂತಾದವುಗಳಲ್ಲಿ ಬಳಸುತ್ತಾರೆ.

ಕುಂದಿಲಿಗಳಿಂದ ಪರಿಸರ ಸಮಸ್ಯೆ

[ಬದಲಾಯಿಸಿ]

ಕುಂದಿಲಿಗಳನ್ನು ಅವುಗಳ ಸ್ವಾಭಾವಿಕ ಪರಿಸರದ ಹೊರಗಡೆ ಬಿಟ್ಟಾಗ ಅವುಗಳ ತೀವ್ರ ಸಂಖ್ಯಾವೃದ್ಧಿ ಸಮಸ್ಯೆಯಾಗಿ ಪರಿಣಮಿಸುತ್ತದೆ. ಅವುಗಳು ಹೆಚ್ಚಾಗಿರುವಲ್ಲಿ ಅವು ಕೃಷಿ ನಾಶಕ್ಕೆ ಕಾರಣವಾಗುತ್ತವೆ. ಆದ್ದರಿಂದ ವಿವಿಧ ರೀತಿಯಲ್ಲಿ ಅವುಗಳ ಸಂಖ್ಯೆಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಾರೆ.

"https://kn.wikipedia.org/w/index.php?title=ಕುಂದಿಲಿ&oldid=1198672" ಇಂದ ಪಡೆಯಲ್ಪಟ್ಟಿದೆ