ಕರ್ನಾಟಕ (ವ್ಯುತ್ಪತ್ತಿ)
ಗೋಚರ
ಕರ್ನಾಟಕ, ಕರ್ಣಾಟಕ,ಕರ್ಣಾಟ ಮತ್ತು ಕನ್ನಡ ಶಬ್ದಗಳು, ದೇಶ, ಭಾಷೆ, ಜನ ಮತ್ತು ಕುಲಗಳನ್ನು ನಿರ್ದೇಶಿಸುತ್ತವೆ. ಕವಿರಾಜಮಾರ್ಗದಲ್ಲಿಯೂ ಆಂಡಯ್ಯನ ಕಬ್ಬಿಗರ ಕಾವದಲ್ಲಿಯೂ ಕನ್ನಡ ದೇಶವಾಚಕವಾಗಿದೆ. ಚೆನ್ನಬಸವೇಶ್ವರ, ನಿಜಗುಣ ಶಿವಯೋಗಿಗಳ ಉಲ್ಲೇಖನಗಳಲ್ಲಿ ಅದು ಕುಲವಾಚಕವಾಗಿ ಬಂದಿರುವಂತೆ ತೋರುತ್ತದೆ. ಮುಖ್ಯವಾಗಿ ಆ ಶಬ್ದಗಳು ದೇಶ ಮತ್ತು ಭಾಷಾ ವಾಚಕಗಳಾಗಿಯೇ ಪ್ರಯೋಗವಾಗುತ್ತವೆ.
ಹಿಂದಿನ ಉಲ್ಲೇಖಗಳು
[ಬದಲಾಯಿಸಿ]ಸಂಸ್ಕೃತದಲ್ಲಿ
[ಬದಲಾಯಿಸಿ]- ಕರ್ಣಾಟ ಶಬ್ದದ ಪೂರ್ವಪ್ರಯೋಗಗಳು ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಅಲ್ಲಲ್ಲಿ ಕಂಡುಬರುತ್ತವೆ. ಸಂಸ್ಕೃತ ಮಹಾಭಾರತದಲ್ಲಿ (ಪ್ರ.ಶ. 320-200?) ಜನಪದಗಳನ್ನು ಕುರಿತು ಹೇಳುವಾಗ ಸಭಾಪರ್ವದಲ್ಲಿ ಕರ್ಣಾಟಾಃ ಎಂದೂ (78-98), ಭೀಷ್ಮಪರ್ವದಲ್ಲಿ ಕರ್ಣಾಟಿಕಾಃ ಎಂದೂ (9-59) ಎರಡು ಮಾತುಗಳು ಬಂದಿವೆ. ಶೂದ್ರಕ ಕವಿಯ (ಪ್ರ.ಶ.ಸು. 400) ಮೃಚ್ಛಕಟಿಕ ನಾಟಕದ ಒಂದು ಸಂವಾದದಲ್ಲಿ, ವರಾಹಮಿಹಿರನ (ಪ್ರ.ಶ.ಸು. 6ನೆಯ ಶತಮಾನದ ಆದಿಭಾಗ) ಬೃಹತ್ಸಂಹಿತೆಯಲ್ಲಿ, ಮಾರ್ಕಂಡೇಯ ಪುರಾಣ (ಪ್ರ.ಶ.ಸು 8ನೆಯ ಶ.?) ಮತ್ತು ಸೋಮದೇವನ ಕಥಾಸರಿತ್ಸಾಗರಗಳಲ್ಲಿ ಕರ್ಣಾಟ ಶಬ್ದವನ್ನು ಕಾಣಬಹುದೆಂದು ವಿದ್ವಾಂಸರು ತಿಳಿಸಿದ್ದಾರೆ. ಗುಣಾಢ್ಯನ ಬೃಹತ್ಕಥೆಯಿಂದ ಆ ಪದವನ್ನು ಸೋಮದೇವ ಎತ್ತಿಕೊಂಡಿದ್ದ ಪಕ್ಷಕ್ಕೆ ಆ ಶಬ್ದದ ಬಳಕೆ ಪ್ರ.ಶ. 1-2 ನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆನ್ನಬಹುದು. ಈಚೆಗೆ ರಾಜಶೇಖರನ (ಪ್ರ.ಶ. 10ನೆಯ ಶ.) ಕಾವ್ಯಮೀಮಾಂಸಾ ಗ್ರಂಥದಲ್ಲಿ ಕನ್ನಡಿಗರ ಪಠನ ರೀತಿಯನ್ನು ಕುರಿತು ಹೇಳುವಾಗ ರಸಃ ಕೋಪ್ಯಸ್ತುಕಾಪ್ಯಸ್ತು ರೀತಿಃ ಸಗರ್ವಂ ಸರ್ವಕರ್ಣಾಟಕಾಃ ಟಂಕಾರೋತ್ತರ ಪಾಠಿನಃ-ಎಂಬ ಸ್ವಾರಸ್ಯಕರವಾದ ಮಾತು ಬಂದಿದೆ.[೧][೨]
ತಮಿಳಿನಲ್ಲಿ
[ಬದಲಾಯಿಸಿ]- ಶಿಲಪ್ಪದಿಗಾರಂ ಎಂಬ ಪ್ರಾಚೀನ ತಮಿಳು ಸಾಹಿತ್ಯ ಕೃತಿಯಲ್ಲಿ (ಪ್ರ.ಶ.ಸು. 2-5) ಕರುನಾಡರ್ ಎಂಬ ಶಬ್ದವೂ , ಪಾಂಡ್ಯ ದೊರೆ ಶಡೈಯನ್ ಪರಾಂತಕ ವೇಳ್ವಿಕುಡಿ ತಾಮ್ರ ಶಾಸನದಲ್ಲಿ (ಪ್ರ.ಶ.ಸು. 770) ಕರುನಾಡಗನ್ ಎಂಬ ಶಬ್ದವೂ ದೊರೆಯುತ್ತವೆ. ಹಾಗೆಯೇ ಕನ್ನಾಡಗರುಂ, ಕನ್ನಾಟ, ಕನ್ನಾಟಕ ಎಂಬ ರೂಪಗಳೂ ತಮಿಳುಶಾಸನಗಳಲ್ಲಿ ಕಂಡುಬಂದಿವೆ. ಅಪಭ್ರಂಶ ಪ್ರಾಕೃತದಲ್ಲಿ ಕನ್ನಾಡ, ಪಾಲಿಯಲ್ಲಿ ಕಣ್ಣಾಟ, ಗುಜರಾತಿ ಮೊದಲಾದುವುಗಳಲ್ಲಿ ಕನಡಿ, ಮರಾಠಿಯಲ್ಲಿ ಕಾನಡಿ ಎಂಬ ರೂಪಗಳುಂಟು. ಬಿ. ಎ. ಸಾಲೆತೊರೆ ಅವರ ಪ್ರಕಾರ ಪಾಶ್ಚಾತ್ಯರು ಕನ್ನಡ ಭಾಷೆಯ ಹೆಸರನ್ನು ಪ್ರ.ಶ. 1516ರಲ್ಲಿ Canari , 1520ರಲ್ಲಿ Canarim , 1552ರಲ್ಲಿ Canarij , 1615ರಲ್ಲಿ Canarin , 1654ರಲ್ಲಿ Cannary ಎಂದೂ ನಡುನಡುವೆ ಎಷ್ಟೋ ಬಾರಿ Carnatic, Carnate, Karnat- ಎಂದು ಮುಂತಾಗಿ ಬರೆಯುತ್ತಿದ್ದರೆಂದು ತಿಳಿಯುತ್ತದೆ.
ಕನ್ನಡದಲ್ಲಿ
[ಬದಲಾಯಿಸಿ]- ಕನ್ನಡ ಭಾಷೆಯಲ್ಲಿಯೇ ಬಹುಸಂಖ್ಯೆಯ ಪ್ರಾಚೀನ ಶಾಸನಗಳಲ್ಲಿ ಹಾಗೂ ಗ್ರಂಥಗಳಲ್ಲಿ ಕರ್ಣಾಟ ಮತ್ತು ಸದೃಶ ಶಬ್ದಗಳಾದ ಕರ್ಣಾಟಕ, ಕರ್ನಾಟ, ಕರ್ನಾಟಕ, ಕನ್ನಡ ಮುಂತಾದವು ಬಳಕೆಯಾಗಿವೆ. ಉತ್ತರ ಕರ್ಣಾಟಕದಲ್ಲಿ, ವ್ಯವಹಾರದಲ್ಲಿ ಕನ್ನಡು ಎಂಬ ಮಾತುಂಟು. ಸುಮಾರು 7-8ನೆಯ ಶತಮಾನದಿಂದ ಶಾಸನಗಳಲ್ಲಿ ಈ ಶಬ್ದಗಳ ರೂಪಗಳು ಬಳಕೆಯಾಗಿರುವಂತೆ ತೋರುತ್ತವೆ. 90ಕ್ಕೆ ಮೇಲ್ಪಟ್ಟ ಅಂಥ ಶಾಸನಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಇವುಗಳ ಆಧಾರದಿಂದ ಕನ್ನಡನಾಡು ಬಹು ಹಿಂದಿನ ಕಾಲದಿಂದಲೂ ಕರ್ಣಾಟ, ಕರುನಾಡು ಮುಂತಾದ ಹೆಸರುಗಳಲ್ಲಿ ಅಸ್ತಿತ್ವದಲ್ಲಿದೆಯೆಂಬುದಾಗಿ ತಿಳಿಯುತ್ತದೆ.
ಹರಹು
[ಬದಲಾಯಿಸಿ]- ಕವಿರಾಜಮಾರ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ಪಳಿಗನ್ನಡ"ಕನ್ನಡ"'ಪದಗಳುಸಿಗುತ್ತವೆ.ಚಂದ್ರರಾಜನ ಮದನತಿಲಕದಲ್ಲಿ ಕೃತಿಯಲ್ಲಿ "'ಪೊಸಗನ್ನಡ"'ಪದವನ್ನು ಬಳಸಿದ್ದಾನೆ. ಕವಿರಾಜಮಾರ್ಗದ ಉಲ್ಲೇಖದ ಪ್ರಕಾರ ಕನ್ನಡನಾಡು ಎಂಬುದು ದಕ್ಷಿಣದ ಕಾವೇರಿಯಿಂದ ಮೇಲೆ ಗೋದಾವರಿಯವರೆಗಿದ್ದ ನಾಡು. ನಂಜುಂಡ ಕವಿಯ (ಪ್ರ. ಶ. ಸು. 1525) ರಾಮನಾಥ ಚರಿತದಲ್ಲಿಯ ಉಲ್ಲೇಖವೂ ಈ ವಿಷಯವನ್ನು ತಿಳಿಸುತ್ತದೆ. ಕವಿರಾಜಮಾರ್ಗಕರ್ತೃ ಹೇಳುವ ಪ್ರಕಾರ, ವಿಜಯಪುರ ಜಿಲ್ಲೆಯ ಪಟ್ಟದಕಲ್ಲು, ರಾಯಚೂರು ಜಿಲ್ಲೆಯ ಕೊಪ್ಪಳ, ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಬೆಳಗಾಂವಿ ಜಿಲ್ಲೆಯ ಒಂಕುಂದ-ಇವುಗಳ ನಡುವೆಯಿದ್ದ ಪ್ರದೇಶ ಕನ್ನಡ ನಾಡಿನ ತಿರುಳು ಶಾಸನಗಳು, ಸಾಹಿತ್ಯ, ಸ್ಥಳನಾಮಗಳು ಮೊದಲಾದವುಗಳ ಆಧಾರದ ಮೇಲೆ ಹಿಂದಿನ ನಿಜಾಂಶಾಹಿಯ ಅತಿ ಪಡುವಲ ಸ್ಥಾನದಿಂದ ಹಿಡಿದು ಅತಿ ಮೂಡಲ ಸ್ಥಾನದವರೆಗಿನ ಪ್ರದೇಶವೂ ಹಿಂದಿನ ಮದ್ರಾಸ್ ಪ್ರಾಂತ್ಯದ ವೆಂಗಿಮಂಡಲ ಮತ್ತು ಗೋದಾವರೀ ಕೃಷ್ಣಾನದಿಗಳ ನೀರು ಹರಿಯುವ ಜಿಲ್ಲೆಗಳೂ ಹಿಂದಿನ ಮಹಾರಾಷ್ಟ್ರದ ಭಾಗಗಳೂ ಇನ್ನೂ ದಕ್ಷಿಣದಲ್ಲಿ ನೀಲಗಿರಿ, ಕೊಯಮತ್ತೂರು, ಸೇಲಂ ಜಿಲ್ಲೆಗಳೂ ಕನ್ನಡಭೂಮಿಯಾಗಿತ್ತೆಂದು ಕೆಲವು ಚರಿತ್ರಕಾರರು ಹೇಳಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಕಾಲಕಾಲಕ್ಕೆ ಕನ್ನಡನಾಡಿನ ಸೀಮಾರೇಖೆಗಳು ಸಂಕೋಚಗೊಂಡಿವೆ.
- ರಾರ್ಬಟ್ ಕಾಲ್ಡ್‌ವೆಲ್ ಅವರು ಕರ್ಣಾಟಕ ಎಂಬ ಪದ ಈಚೆಗೆ ವಿಪರೀತವಾದ ಅರ್ಥವನ್ನು ಪಡೆಯಿತೆಂದು ಹೇಳಿದ್ದಾರೆ. ಈ ಮೊದಲು ಕರ್ಣಾಟಕ ಎಂಬುದು ದಕ್ಷಿಣ ಹಿಂದೂಸ್ತಾನದ ಎತ್ತರವಾದ ಪ್ರಾಂತ್ಯಕ್ಕೆ ಕೊಟ್ಟ ಹೆಸರಾಗಿತ್ತು. ಈಚೆಗೆ ವಿದೇಶೀಯರ ಕೈಯಲ್ಲಿ ಅದಕ್ಕೆ ವಿಪರೀತವಾದ ಅರ್ಥ ಬಂತು. ಮಹಮ್ಮದೀಯರು ದಕ್ಷಿಣ ಭಾರತಕ್ಕೆ ಬಂದ ಮೊದಲಲ್ಲಿ ತಮಗೆ ಮೊದಲು ಪರಿಚಿತವಾದ ಮೈಸೂರು ಮತ್ತು ತೆಲಂಗಾಣದ ಭಾಗಗಳನ್ನೊಳಗೊಂಡ ಘಟ್ಟಗಳ ಮೇಲಿನ ಪ್ರದೇಶವನ್ನು ಕರ್ಣಾಟಕ ದೇಶವೆಂದು ಕರೆದರು. ಕಾಲಕ್ರಮದಲ್ಲಿ ಅವರು ಆ ಹೆಸರನ್ನು ಘಟ್ಟಗಳ ಕೆಳಗಿನ ಪ್ರದೇಶಕ್ಕೂ ಕೊಟ್ಟರು. ಅನಂತರದಲ್ಲಿ ಇಂಗ್ಲಿಷರು ವಾಸ್ತವವಾಗಿ ಆ ಹೆಸರಿಗೆ ಏನೂ ಸಂಬಂಧವೇ ಇಲ್ಲದ ಘಟ್ಟದ ಕೆಳಗಿನ ಪ್ರದೇಶಕ್ಕೆ ಮಾತ್ರ ಆ ಹೆಸರನ್ನು ಸೀಮಿತಗೊಳಿಸಿದರು. ಈ ಕಾರಣವಾಗಿ ನಿಜವಾಗಿ ಕರ್ಣಾಟಕ ಎಂಬ ಶಬ್ದ ಯಾವ ಪ್ರದೇಶವನ್ನು ಸೂಚಿಸಬೇಕಾಗಿತ್ತೋ ಅದು ಹೋಗಿ ಕರ್ನಾಟಿಕ್ ಎಂಬುದು ತಮಿಳು ದೇಶವನ್ನೂ ತೆಲುಗು ದೇಶದ ನೆಲ್ಲೂರು ಜಿಲ್ಲೆಯನ್ನೂ ಒಳಗೊಂಡು ಪೂರ್ವ ಸಮುದ್ರತೀರದಲ್ಲಿರುವ ಘಟ್ಟದ ಕೆಳಗಿನ ಪ್ರಾಂತ್ಯಕ್ಕೆ ಮಾತ್ರ ಅನ್ವಯಿಸುವಂತಾಯಿತು.
ಸರಿಯಾದ ರೂಪ , ಅರ್ಥ, ನಿಷ್ಪತ್ತಿ
[ಬದಲಾಯಿಸಿ] ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
- ಕರ್ಣಾಟ(ಕ) ಎಂಬ ಪದದ ಸರಿಯಾದ ರೂಪ ಯಾವುದು, ಅರ್ಥವೇನು, ನಿಷ್ಪತ್ತಿ ಹೇಗೆ-ಎಂಬ ವಿಷಯದಲ್ಲಿ ಚರಿತ್ರಕಾರರೂ ಸಾಹಿತ್ಯಜ್ಞರೂ ತುಂಬ ಜಿಜ್ಞಾಸೆ ಮಾಡಿರುವುದು ಕಾಣುತ್ತದೆ. ಆ ಪದದ ಸಂಬಂಧವಾಗಿಯೇ ಕನ್ನಡ ಪದವೂ ವಿಚಾರಕ್ಕೆ ಸೇರಿಕೊಂಡಿದೆ. ವಿಚಾರಮಂಥನ ನಡೆದು ಭಿನ್ನ ಭಿನ್ನ ಮತಗಳು ವ್ಯಕ್ತಪಟ್ಟಿವೆ. ಆದರೆ ಒಮ್ಮತವಾದ ಅಥವಾ ಬಹುಜನ ಸಮ್ಮತವಾದ ನಿರ್ಣಯ ಮಾತ್ರ ಇನ್ನೂ ಸಾಧ್ಯವಾಗಿಲ್ಲ. ನಿಶ್ಚಿತ ಪ್ರಮಾಣಗಳ ಅಭಾವವೇ ಇದಕ್ಕೆ ಮುಖ್ಯ ಕಾರಣ. ಕೆಲವು ಅಭಿಪ್ರಾಯಗಳನ್ನು ಇಲ್ಲಿ ಸಂಕ್ಷೇಪವಾಗಿ ಸೂಚಿಸಬಹುದು.
- (ಅ) ಕರ್ಣಾಟ(ಕ) ಎಂಬ ಪದಕ್ಕೆ ಸಂಸ್ಕೃತ ಮೂಲವಾಗಿ ನಿಷ್ಪತ್ತಿಯನ್ನು ಕೊಡುವ ಹಳೆಯ ಉಲ್ಲೇಖಗಳಲ್ಲಿ ಇವು ಪ್ರಸಿದ್ಧವಾಗಿವೆ; ಕರ್ಣೇಷು ಅಟತಿ- ಪ್ರಭೂತಯಶಸ್ವಿನ ಏತದ್ದೇಶಸ್ಯ ರಾಜ್ಞೋ ಗುಣಾದಿ ಕೀರ್ತನೇನ ಸರ್ವೇಷಾಂಕರ್ಣೇಷು ಭ್ರಮತೀತಿ. ಕರ್ಣ + ಅಟ್ + ಅಚ್ (ಯಾವ ದೇಶದ ರಾಜನ ಕೀರ್ತಿ ಎಲ್ಲರ ಕಿವಿಯಲ್ಲಿಯೂ ಮೊಳಗು ತ್ತಿರುವುದೊ ಆ ದೇಶ). ಇದು ಶಬ್ದರತ್ನಾವಲಿಯಲ್ಲಿ ಸಿಗುವ ಆಧಾರ. ಕೇಶವವರ್ಣಿಯೆಂಬ (ಪ್ರ.ಶ. 1356) ಜೈನ ಪಂಡಿತನ ಪ್ರಕಾರ ಭೇದನಾರ್ಥಕವಾದ ಕರ್ಣ ಧಾತುವಿನಿಂದ ಕರ್ಣಾಟ ಪದವಾಯಿತು. ದಿವ್ಯಭಾಷೆಯಿಂದ ಬೇರೆಯಾಗಿ ವ್ಯವಹಾರದಲ್ಲಿರುವ ಭಾಷೆಯೆಂದು ಆ ಪದದ ಅರ್ಥ. ವೆಂಕಟಾಧ್ವರಿಯ (ಪ್ರ.ಶ.ಸು. 1700) ವಿಶ್ವಗುಣಾದರ್ಶದಲ್ಲಿ ಕರ್ಣಾಟ ದೇಶೋ ಯಃ ಪುರ್ವಂ ಕರ್ಣದೇಶಮಭೂಷಯಾತ್ ಸ ಏಷ ಸಾಂಪ್ರತಂ ಪಶ್ಯ ಚಕ್ಷುಷೋರ್ಭೂಷಣಾಯತೇ|| ಎಂದೂ ಕರ್ಣಯೋಃ ಅಟತೀತಿ ಕರ್ಣಾಟಃ ಅಟ ಗತೌ ಇತಿಧಾತೋಃ ನಿಷ್ಪನ್ನಶ್ಯಬ್ದಃ || ಎಂದೂ ನಿರೂಪಣೆಯಿದೆ. ಸ್ಕಂದಪುರಾಣದ ಪ್ರಕಾರ ಕರ್ಣಾಟನೆಂಬ ರಾಕ್ಷಸನಿಂದ ನಾಡಿಗೆ ಈ ಹೆಸರಾಯಿತಂತೆ.
- ಕವಿಕಲ್ಪಿತಗಳೆಂದು ಹೇಳಿ ಈ ಅರ್ಥ ಮತ್ತು ನಿಷ್ಪತ್ತಿಗಳನ್ನು ರಾ. ನರಸಿಂಹಾಚಾರ್ ಮೊದಲಾದ ಮಹನೀಯರು ಗ್ರಾಹ್ಯಮಾಡಿಲ್ಲ. ರಾಜವಾಡೆಯವರು ಕರಣ+ನಟ=ಕರ್ಣಾಟ ಎಂದು ನಿಷ್ಪತ್ತಿ ಹೇಳಿದ್ದಾರೆ. ಮನು ತನ್ನ ಕಾಲದ ವ್ರಾತ್ಯ ಕ್ಷತ್ರಿಯರ ಪಂಗಡಗಳನ್ನು ವಿವರಿಸುತ್ತ ನಟಶ್ಚ ಕರಣಶ್ಷೈವ ಎಂಬುದಾಗಿ ಎರಡು ಬಗೆಗಳನ್ನು ಕೂಡ ಹೇಳಿದ್ದಾನೆ ಎಂಬ ಆಧಾರವನ್ನು ಹಿಡಿದು, ಕರಣ ಮತ್ತು ನಟರ ಸಮ್ಮಿಶ್ರ ಪಂಗಡವೇ ಕರ್ಣಾಟವೆಂದು ಗ್ರಹಿಸಿದ್ದಾರೆ. ಇದನ್ನು ವಿಮರ್ಶಿಸುತ್ತ ಶಂ. ಬಾ. ಜೋಶಿಯವರು ಬೇರೆ ಸ್ಮೃತಿಗಳಲ್ಲಿಯೂ ನಟರ ಉಲ್ಲೇಖಗಳನ್ನು ಗುರುತಿಸಿ ಮತ್ಸ್ಯ ಪುರಾಣದಲ್ಲಿ ಕರ್ಣ ಎಂದಿರುವ ಜನಪದ ವಾಚಕವನ್ನು ಕರಣ ಎಂಬುದರೊಡನೆ ಅಭಿನ್ನವಾಗಿ ಗ್ರಹಿಸಿ, ಕರಣ+ನಟ-ಕರ್ಣ್ನಾಟ > ಕರ್ಣಾಟ ಎಂದೋ ಕರ್ಣ+ನಟ=ಕರ್ಣಾಟ ಎಂದೋ ಆಗಬಹುದೆಂದು ಸೂಚಿಸಿ, ಆ ಶಬ್ದಗಳ ಮೂಲವನ್ನು ಮಾತ್ರ ದೇಶೀಯವೆಂದು (ಕನ್ನಡವೆಂದು) ಹೇಳಿದ್ದಾರೆ. ಆದರೆ ಈ ಸಮೀಕರಣಗಳನ್ನು ಪುಷ್ಟೀಕರಿಸುವ ಬೇರೆ ಪ್ರಮಾಣಗಳಿಲ್ಲ.
- (ಆ) ಕನ್ನಡ ಎಂಬ ದೇಶ್ಯ ಶಬ್ದವೇ ಕರ್ಣಾಟ(ಕ) ಎಂಬ ಸಂಸ್ಕೃತರೂಪವನ್ನು ಆನಂತರದಲ್ಲಿ ಪಡೆಯಿತು ಎನ್ನುವ ಆಧುನಿಕ ಭಾಷಾವಿದ್ವಾಂಸರ ಕೆಲವು ಅಭಿಪ್ರಾಯಗಳು ಹೀಗಿವೆ:
- 1. ಗುಂಡರ್ಟನ ಪ್ರಕಾರ ದಕ್ಷಿಣ ದಕ್ಖನಿನ ನೆಲ ಕಪ್ಪುಮಣ್ಣಿನ ಭೂಮಿಯಾಗಿದೆ; ಆದ್ದರಿಂದ ಕರ್ನಾಡು (ಕಪ್ಪು ನಾಡು) ಎಂಬುದು ಕರ್ಣಾಟದ ಮೂಲರೂಪ. ಕರ್+ನಾಟ್+ಅಗಂ ಎಂದರೆ ಕಪ್ಪುನಾಡಿನ ಒಳಭಾಗ (ಪ್ರದೇಶ)- ಎಂಬುದು ಕೂಡ ಅವರ ಇನ್ನೊಂದು ಸೂಚನೆ. ಮೊದಲನೆಯದನ್ನು ಕಾಲ್ಡ್‌ವೆಲ್ ಮತ್ತು ಆರ್. ರಘುನಾಥರಾಯರು ಒಪ್ಪಿದ್ದಾರೆ; ಎರಡನೆಯದನ್ನು ಉದ್ಧರಿಸಿದ್ದಾರೆ.
- 2. ಕನ್ನಡನಾಡು ಸಮುದ್ರ ಮಟ್ಟಕ್ಕಿಂತ ಎತ್ತರವಾಗಿ ಘಟ್ಟದ ಮೇಲಿದೆ. ಕರುನಾಡು ಎಂಬುದು ಕರುಮಾಡ ಎಂಬಂತೆ ಸೀಮೆ (ಕಣಿವೆ ಮೇಲಣ ಸೀಮೆ) ಆದ್ದರಿಂದ ಕರು-ನಾಡು (ಎತ್ತರವಾದ ನಾಡು) ಎಂಬುದು ದ್ರಾವಿಡಭಾಷೆಗಳಲ್ಲಿ ಮುಂದೆ ಕನ್ನಡ ಎಂಬು ದಾಗಿಯೂ ಸಂಸ್ಕೃತದಲ್ಲಿ ಕರ್ಣಾಟ ಎಂಬುದಾಗಿಯೂ ಪರಿವರ್ತಿಸಿರಬಹುದು. ಇದು ಎಚ್. ನಾರಾಯಣರಾಯರ ಅಭಿಪ್ರಾಯ.
- 3. ಕರುನಡಂ (= ಕನ್ನಡ): ಕರ್ಣಾಟ. ಕರುನಡಂ ಎಂಬುದೂ ಕನ್ನಡಂ ಎಂಬುದೂ ತಮಿಳು ಲಕ್ಷಣ ಗ್ರಂಥಗಳ ವೃತ್ತಿಗಳಲ್ಲಿ ಉಕ್ತವಾಗಿವೆ. ತಮಿಳಿನಲ್ಲಿ ಕರು ಎಂದರೆ ಬೆಟ್ಟ ಎಂದರ್ಥ. ಕೇಳ್ನಾಡಿನವರಾದ ತಮಿಳರು ಮೇಲ್ನಾಡನ್ನು ಕರುನಾಡು-ಕರುನಡ ಎಂದು ಕರೆದಿರಬಹುದು; ಕಮ್ಮಿತು + ನಡೆ (ಕಂ+ನಡೆ>ಕನ್ನಡ). ಇದು ಆರ್. ತಾತಾಚಾರ್ಯರ ಅಭಿಮತ.
- 4. ಕರಂ, ಕರು, ಕಡು ಎಂಬವು ದೊಡ್ಡ, ವಿಸ್ತಾರವಾದ ಮಹಾ ಎಂಬ ಅರ್ಥದ ಪದಗಳು. ಆದ್ದರಿಂದ ಕರುನಾಡು ಎಂದರೆ ಮಹಾರಾಷ್ಟ್ರ. ಕರು + ನಾಡು > ಕರ್ + ನಾಡು > ಕರ್ನಾಡು (=ದೊಡ್ಡ ದೇಶ) ಎಂಬ ಕನ್ನಡ ಸಮಾಸಪದವೇ ಸಂಸ್ಕೃತದಲ್ಲಿ ಕರ್ಣಾಟ ಎಂದು ಆಗಿರಬೇಕು. ಇದು ಎಂ.ಗೋವಿಂದ ಪೈಗಳ ಮತ. ರಾ. ಹ. ದೇಶಪಾಂಡೆಯವರ ಆಭಿಪ್ರಾಯವೂ ಒಟ್ಟಿನಲ್ಲಿ ಇದೇ ಆಗಿದೆ.
- 5. (ಪರಿಮಳವಾಚಿಯಾದ) ಕಮ್ಮಿತು + ನಾಡು=ಕನ್ನಾಡು > ಕನ್ನಡು > ಕನ್ನಡ. ಕನ್ನಡ ಎಂಬ ಪದಕ್ಕೆ ಪರಿಮಳ ವಿಶಿಷ್ಟವಾದ ದೇಶದ ಭಾಷೆ ಎಂದು ಅರ್ಥ. ಕನ್ನಡ ದೇಶ ಗಂಧದ ಮರದ ಕಾಡುಗಳಿಗೂ ತಾವರೆಕೊಳಗಳಿಗೂ ಪ್ರಸಿದ್ಧಿಪಡೆದಿರುವುದರಿಂದ ಕಮ್ಮಿತು ಎಂಬ ವಿಶೇಷಣ ಅನುರೂಪವಾದುದು-ಎಂದು ರಾ. ನರಸಿಂಹಾಚಾರ್ಯರು ಹೇಳುತ್ತಾರೆ. ಆರ್. ತಾತಾಚಾರ್ಯರು ಈ ಅಭಿಪ್ರಾಯವನ್ನು ಒಪ್ಪಿಕೊಂಡಿರುವಂತೆ ತೋರುತ್ತದೆ.
- 6. ಕನ್ (ಎಂದರೆ ಕಾಣು ಅಥವಾ ಒಡಮೂಡು) ಎಂಬ ಧಾತುವಿನಿಂದ ಕನ್ನಡ ಹುಟ್ಟಿದೆ. ಕನ್ + ಅಳ್ =ಕನ್ನಳ್, ಕನ್ನಡ. ಕನ್ - ಅಳ್ = ಒಡಮೂಡುವುದನ್ನು ಉಳ್ಳದ್ದು; ಭಾವಗಳನ್ನು ಒಡಮೂಡಿಸುವುದು - ಕನ್ನಡ. ಹೀಗೆಂದು ದ. ರಾ. ಬೇಂದ್ರೆ ಮತ್ತು ಬೆಟಗೇರಿ ಕೃಷ್ಣಶರ್ಮರ ಅಭಿಪ್ರಾಯ.
- 7. ಕರ್- ನಾಟ್- ಅಗಂ ಎಂದರೆ ಕರಿಯ ನಾಡನ್ನು ಒಳಗೊಂಡ ಪ್ರದೇಶ. ಆದರೆ ಶಬ್ದರೂಪ ಕರ್ಣಾಟಕವೇ ಹೊರತು ಕರ್ನಾಟಕ ಅಲ್ಲ. ಇದು ಬಿ.ಎಂ.ಶ್ರೀ. ಅವರ ಧೋರಣೆ. ಒಟ್ಟಿನಲ್ಲಿ ಇದು ಗುಂಡರ್ಟ್ ಅವರ ಅಭಿಪ್ರಾಯವನ್ನು ಪೋಷಿಸುತ್ತದೆ.
- 8. ಹರಪ್ಪ ಎಂಬುವುದು ಕನ್ನಡ ಪದ.ಹರಪ್ಪ ಮೊಹೆಂಜೋದಾರೋ ಚಿತ್ರಲಿಪಿಯ ಸಂಕೇತವನ್ನು ಗಮನಿಸಿದರೆ ಕಣ್ನಿರ್ ಪದದ ಸಂಸ್ಕೃತರೂಪ ಕರ್ಣಾಟಕ ಆಗಿರಬಹುದು- ಎಂದರೆ ಫಾದರ್ ಹೆರಾಸರ ಮತ.
- 9. ಅಡಿಯಲ್ಲಿ ಕಣ್ಣುಳ್ಳವರು ಯಾರೋ ಅವರು ಕನ್(ಣ್) + ಅಡಿಗರ್ ಅರ್ಥಾತ್ ಕನ್ನಡಿಗರು- ಎಂಬುದು ರೆ. ಚನ್ನಪ್ಪ ಉತ್ತಂಗಿಯವರ ಮತ.
- 10. ಕನ್ನಡದ ರಾಜಕುಲಕ್ಕೆ ಕದಂಬ ಅಥವಾ ಕರಂಬ ಎಂಬ ಹೆಸರಿದೆ. ಆ ಕರ್ ಅಲ್ಲವೆ ಕನ್ ಎಂಬ ದಸ್ಯುವರ್ಗದಿಂದ ಕನ್ನಡ ಎಂಬ ಹೆಸರಾಗಿರಬಹುದು. ಕರು ಪದಕ್ಕೆ ಎತ್ತರ, ಶಿಖರ, ಮಹತ್ತು ಎಂಬ ಅರ್ಥಗಳಿರುವುದು ತಿಳಿದಿದೆ. ಕನ್ ಮತ್ತು ಕರ್ ಎಂಬ ರೂಪಗಳು ಅಭಿನ್ನ. ಅದರಿಂದ ಕನ್ + ನಾಡು= ಕನ್ನಾಡು(ಕನ್ನಡ); ಕರ್ + ನಾಡು =ಕರುನಾಡು (ಕರುನಾಡಗ, ಸಂ. ಕರ್ಣಾಟಕ); ಕಱು ತಳದ ನಾಟರೇ ಕನ್ನಡಿಗರು. ಆದಿಜನಾಂಗದೊಳಗಿನವರಾದ ಕನ್ ಮತ್ತು ನಾಟರು ಬೆರೆದು ಕನ್ನಡಿಗರೆನ್ನಿಸಿರಬಹುದು. ಇದು ಮುಳಿಯ ತಿಮ್ಮಪ್ಪಯ್ಯನವರ ವಾದ.
- 11. ಶ್ರೀಶೈಲಪರ್ವತದ ತಪ್ಪಲಿನಲ್ಲಿ ಹಿಂದಿನ ಕಾಲದಲ್ಲಿ ಕಣ್ಣ ವಿಷಯ (ಕರ್ಣಾಟ ಸೀಮಾ), ಕನ್ನಾಡು ಎಂಬ ಚಿಕ್ಕ ಜಿಲ್ಲೆಯಿತ್ತು; ಆ ಮೂಲಕವಾಗಿಯೇ ತಮ್ಮ ನಾಡಿಗೆ, ನುಡಿಗೆ ಕನ್ನಡಿಗರು ಆ ಹೆಸರನ್ನು ಪಡೆದುಕೊಂಡರು ಎಂದು ತೋರುತ್ತದೆಂದು ಹೇಳಿದ್ದಾರೆ, ಎನ್. ವೆಂಕಟರಮಣಯ್ಯನವರು.
- 12. ಳ-ಣ-ನ ಗಳಲ್ಲಿ ಪರಸ್ಪರವಾಗಿ ಪಲ್ಲಟವುಂಟು. ಕಳವರು (ಕಳ್ವರು ಅಥವಾ ಕಳ್ಳರು=ಕಳಭ್ರರು) ಎಂಬ ದ್ರಾವಿಡ ವರ್ಗದ ಬಹುಪ್ರಾಚೀನ ಶಾಖೆಯ ಜನಾಂಗವೇ ಕಣ್ಣರು ಅಥವಾ ಕನ್ನರು. ಕನ್ನರ ನಾಡು ಕನ್ನಾಡು (ಕನ್ನಡ). ಇದು ಕನ್ನಾಡು>ಕನ್ನಾಟ>ಕರ್ಣಾಟ ಈ ಕ್ರಮದಿಂದ ಸಂಸ್ಕೃತದಲ್ಲಿ ಸೇರಿಕೊಂಡಿದೆ, ಕರ್ಣಾಟಕದಲ್ಲಿರುವ ದ್ವಿರುಕ್ತಿದೋಷ ಕನ್ನಾಡ (ಕನ್ನಡ)ದಲ್ಲಿ ಸ್ವಲ್ಪವೂ ಇಲ್ಲ. ಇದು ಶಂ.ಬಾ. ಜೋಶಿಯವರ ಮತ.
- 13. ಕನ್ನಾಡ ಅಥವಾ ಕರ್ನಾಡು ಎಂಬ ಪದದ ಮೂಲ ಅರ್ಥ ಒಂದು ಮಹಾನಾಡು ಅಥವಾ ಒಂದು ಎತ್ತರವಾದ ನಾಡು ಎಂದಿದ್ದು, ಇವನ್ನು ಸಂಸ್ಕೃತರೂಪಕ್ಕೆ ತಿರುಗಿಸಿದಾಗ ಕರ್ನಾಟ, ಕರ್ನಾಟಕ, ಮಹಾರಾಷ್ಟ್ರ ಆಗಿರಬೇಕು-ಎಂದು ಬಿ.ಎ.ಸಾಲೆತೊರೆಯವರ ವಾದ.
- 14. ಕಣಾ(ನಾರ್)ಟ, ಕಣಾ(ನಾರ್)ಟಕ ಶಬ್ದಗಳು ಮೂಲತಃ ಸಂಸ್ಕೃತ ಶಬ್ದಗಳಲ್ಲ. ಪುನ್ನಾಡು ಸಂಸ್ಕೃತಕ್ಕೆ ಬರುವಾಗ ಪುನ್ನಾಟ ಆದಂತೆ ಕರ್ನಾಡು ಎಂಬ ದೇಶ್ಯ ಶಬ್ದ ಸಂಸ್ಕೃತಜ್ಞರ ಉಚ್ಚಾರಣೆಯಲ್ಲಿ ಕಣಾ(ನಾರ್)ಟ ಎಂಬ ರೂಪವನ್ನು ತಾಳಿರಬೇಕು. ಕಣಾ(ನಾರ್)ಟ+ಕ=ಕಣಾ(ನಾರ್)ಟಕ, ಇದು ತೀ.ನಂ. ಶ್ರೀಕಂಠಯ್ಯನವರ ಹೇಳಿಕೆ.
- 15. ಕರ್ನಾಡುವಿನಿಂದ ಕರ್ನಾಟ ಹುಟ್ಟಿ ಸ್ವಾರ್ಥದಲ್ಲಿ ಕ ಪ್ರತ್ಯಯ ಬಂದು ಕರ್ನಾಟಕ ಆಗಿರುವುದು ಸಾಧ್ಯ. ಕರ್ನಾಟ, ಕರ್ನಾಟಕ ರೂಪಗಳು ಅಪಾಣಿನೀಯವೆಂದು ಅವನ್ನು ಕರ್ಣಾಟ ಕರ್ಣಾಟಕ ಎಂದು ಮಾಡಿಕೊಂಡಿರಬೇಕು ; ಆಗ ಮೂಲ ಪದದ ಅರ್ಥ ಮರೆಯಾಗಿಯೋ ಗೊತ್ತಾಗದೆಯೋ ಪುನ್ನಾಟವನ್ನು ಪುಂರಾಷ್ಟ್ರ ಎಂದು ಮಾಡಿಕೊಂಡಂತೆ ಕರ್ಣಾಟದ ನಿಷ್ಪತ್ತಿಯನ್ನು ಕರ್ಣೇಷು ಅಟತಿ ಇತಿ ಕರ್ಣಾಟಃ ಎಂದು ವಿವರಿಸಲು ಸ್ವಾಭಾವಿಕವಾಗಿ ಯತ್ನಿಸಿರಬಹುದು. ಪ್ರಯೋಗಗಳನ್ನು ನೋಡಿದರೆ ನಕಾರಯುಕ್ತ ಕರ್ನಾಟಕವೂ ಣಕಾರಯುಕ್ತ ಕರ್ಣಾಟಕವೂ ಬಹುಕಾಲದಿಂದ ವಿಕಲ್ಪವಾಗಿ ಪ್ರಯೋಗವಾಗಿರುವುದಕ್ಕೆ ಶಾಸನೋಕ್ತವಾದ ಉದಾಹರಣೆಗಳಿರುವುದರಿಂದ ಎರಡೂ ಗ್ರಾಹ್ಯವೇ. ಕರ್ನಾಡು ಪ್ರಾಯಃ ಪ್ರಾಕೃತ ಪ್ರಭಾವದಿಂದ, ಪ್ರಾಚೀನವಾದ ಪುನ್ನಾಡು ಪುನ್ನಾಟ ಆದಂತೆ ಕರ್ನಾಡು ಕರ್ನಾಟ ಆಗಿರಬೇಕು. ಇದು ಜಿ. ಪಿ. ರಾಜರತ್ನಂ ಅವರ ಮಂಡನೆ.
- ಈ ಮೇಲೆ ಕಾಣಿಸಿದ ಕೆಲವು ಅಭಿಪ್ರಾಯಗಳನ್ನು ಪರಿಶೀಲಿಸಿದರೆ ಕನ್ನಡದೇಶ ಮತ್ತು ಭಾಷೆಗಳಿಗೆ ಆ ಹೆಸರುಗಳು ಎಲ್ಲಿಂದ ಹೇಗೆ ಬಂದುವು ಎನ್ನುವ ವಿಷಯವನ್ನು ಖಚಿತವಾಗಿ ಗೊತ್ತುಮಾಡುವುದು ಇನ್ನೂ ಸಾಧ್ಯವಾಗಿಲ್ಲ ಎನ್ನುವ ಸಂಗತಿ ವಿಶದವಾಗುತ್ತದೆ. ಒಂದೊಂದು ಸೂಚನೆಯಲ್ಲಿಯೂ ಏನಾದರೂ ಕುಂದುಕೊರತೆಗಳನ್ನು ವಿದ್ವಾಂಸರು ಸಪ್ರಮಾಣವಾಗಿ ಎತ್ತಿರುವುದರಿಂದ ಯಾವುದೂ ಬಹುಜನ ಸಮ್ಮತವಾಗಿ ಗ್ರಾಹ್ಯವಾಗಲಾರದೆ ಹೋಗಿದೆ. ಆದರೆ ಈ ಸಮಸ್ಯೆಯ ಕೆಲವಂಶಗಳು ಬಹುಮಂದಿ ಸಂಶೋಧಕರಿಗೆ ಸಮ್ಮತವಾಗಿರುವುದು ಕಾಣುತ್ತದೆ. ಕರ್ನಾ(ರ್ಣಾ)ಟ(ಕ) ಎಂಬ ಸಂಸ್ಕೃತ ಪದದ ಮೂಲ ದೇಶೀಯವಾದುದು. ದೇಶೀಯವಾದುದೊಂದು ಪದದಿಂದ ಸಂಸ್ಕೃತ ರೂಪ ಹುಟ್ಟಿತಲ್ಲದೆ ಸಂಸ್ಕೃತರೂಪ ತದ್ಭವವಾಗಿ ದೇಶೀಯ ಪದ ಹುಟ್ಟಲಿಲ್ಲ. ಅದು ಒಂದು ಸಮಾಸಪದ. ಅದರ ಉತ್ತರಪದ ನಾಡು ಮತ್ತು ಅದರ ಜನ್ಯ ರೂಪಗಳು. ಇನ್ನು ಪೂರ್ವಪದದ ರೂಪ ಎತ್ತರ, ದೊಡ್ಡ , ಮಹಾ ಎಂಬರ್ಥಗಳಿರುವ ಕರು ಎಂಬುದಾಗಿದ್ದರಬೇಕೆಂಬುದು ಹಲವರಿಗೆ ಒಪ್ಪಿಗೆಯಾಗಿರುವಂತೆ ತೋರುತ್ತದೆ. ಕಪ್ಪು ಎಂಬರ್ಥದ ಕರ್ ಎಂಬುದನ್ನೂ ಕೆಲವರು ಒಪ್ಪಿದ್ದಾರೆ. ಜನಾಂಗವಾಚಕವಾದ ಕಳ್, ಕಣ್, ಕರ್, ಕನ್ ಎಂಬುವನ್ನು ಪೂರ್ವಪದವಾಗಿ ತೋರಿಸಲು ಶಂ.ಬಾ. ಜೋಶಿ ಮೊದಲಾದ ವಿದ್ವಾಂಸರು ತುಂಬ ಶ್ರಮಿಸಿದ್ದರೂ ಒದಗಿಸಿರುವ ಪ್ರಮಾಣಗಳು ಪ್ರಾಯಃ ಗಟ್ಟಿಯಾದವಲ್ಲವಾಗಿ ಅವು ಸಾರ್ವತ್ರಿಕ ವಾದ ಮಾನ್ಯತೆ ಪಡೆದುಕೊಂಡಿರುವಂತೆ ತೋರುವುದಿಲ್ಲ. ಉಳಿದ ಕೆಲವು ಸೂಚನೆಗಳು ಹೆಚ್ಚಾಗಿ ಉಹಾಜನ್ಯವಾಗಿಯೇ ಕಾಣುತ್ತವೆ. ಬಹುಜನಸಮ್ಮತವಾಗಿ ತೋರುವ ವ್ಯುತ್ಪತ್ತಿಗಳು ಕೆಲವರು ಸಂಯುಕ್ತವಾದ ಆಕ್ಷೇಪಣೆಗಳನ್ನು ಒಡ್ಡಿರುವುದು ಕಾಣುತ್ತದೆ. ಕರು ಪದಕ್ಕೆ ವಿಸ್ತಾರವಾದ, ಎತ್ತರವಾದ ಮೊದಲಾದ ಅರ್ಥಗಳು ಇಲ್ಲವೆಂದೂ ತಮಿಳು ಉಲ್ಲೇಖಗಳಲ್ಲಿ ಅಲ್ಲದೆ ಕರುನಾಡು ಎಂಬ ಮಾತು ಕನ್ನಡದಲ್ಲಿ ಎಲ್ಲೂ ಬಳಕೆಯಾಗಿಲ್ಲವೆಂದೂ ಎತ್ತರವಲ್ಲದ ಬಯಲು ಸೀಮೆಯೂ ಕನ್ನಡನಾಡಿನಲ್ಲಿ ಉಂಟೆಂದೂ ಮುಂತಾಗಿ ವಾದಿಸಿದ್ದಾರೆ. ಹೀಗೆಯೇ ಕನ್ನಡದ ನೆಲದಲ್ಲಿ ಕಪ್ಪುಮಣ್ಣಿನ ನೆಲವಲ್ಲದ ಭಾಗಗಳೂ ಬಹುವಾಗಿರುವುದರಿಂದ ಕರ್ (ಕರಿದು)-ನಾಡು=ಕನ್ನಾಡು ಆಯಿತೆಂದು ಒಪ್ಪುವುದಕ್ಕೆ ಆಗದೆಂದಿದ್ದಾರೆ. ಈಚೆಗೆ ಈ ವಿಷಯದಲ್ಲಿ ಹೆಚ್ಚಿನ ವಿಚಾರ ವಿಮರ್ಶೆಗಳೇನೂ ಆಗಿಲ್ಲ; ಪೂರ್ವೋಕ್ತವಾದ ಎರಡು ನಿಷ್ಪತ್ತಿಗಳಲ್ಲಿ ವಿಮರ್ಶಕರು ಯಾವುದಾದರೊಂದರ ಕಡೆಗೆ ಒಲವನ್ನು ತೋರುವಂತೆ ಕಾಣುತ್ತದೆ.
- ಶಬ್ದಾರ್ಥದ ವಿಚಾರದಲ್ಲಿ ವಿವಿಧಾಭಿಪ್ರಾಯಗಳು ವ್ಯಕ್ತವಾಗಿರುವಂತೆಯೇ ಶಬ್ದರೂಪದ-ಮುಖ್ಯವಾಗಿ ಕರ್ನಾಟ(ಕ) - ಕರ್ಣಾಟ(ಕ) ಎಂಬ ರೂಪಗಳ-ವಿಚಾರದಲ್ಲಿಯೂ ಬಹುವಾಗಿ ಚರ್ಚೆ ನಡೆದಿರುವುದು ಕಾಣುತ್ತದೆ. ಈ ಚರ್ಚೆಯಲ್ಲಿ ಶ್ರೀಯುತರಾದ ತೋಗೆರೆ ನಂಜುಂಡಶಾಸ್ತ್ರಿ, ಎಚ್. ನಾರಾಯಣರಾವ್, ಆರ್. ತಾತಾಚಾರ್ಯ, ರಾ.ಹ. ದೇಶಪಾಂಡೆ, ತೀ.ನಂ. ಶ್ರೀಕಂಠಯ್ಯ, ಜಿ.ಪಿ. ರಾಜರತ್ನಂ ಮೊದಲಾದ ವಿದ್ವಾಂಸರು ಪಾಲ್ಗೊಂಡಿದ್ದಾರೆ. ಕರ್ಣಾಟ(ಕ) ಶುದ್ಧ ಸಂಸ್ಕೃತ ಪದವೆಂದೂ ಅದಕ್ಕೆ ಸಂಸ್ಕೃತದಲ್ಲಿ ವ್ಯುತ್ಪತ್ತಿ ಕೊಡಬಹುದೆಂದೂ ಕನ್ನಡ ಅದರ ತದ್ಭವವೆಂದೂ ಆದ್ದರಿಂದ ಕರ್ಣಾಟ(ಕ)ವೇ ಸಾಧುವೆಂದೂ ಎನ್ನುವವರು ಸಾಮಾನ್ಯವಾಗಿ ಶಬ್ದರತ್ನಾವಲಿಯಲ್ಲಿ ಉಕ್ತವಾದ ವ್ಯುತ್ಪತ್ತಿಯನ್ನೂ ಕೇಶಿರಾಜ ಅಪಭ್ರಂಶ ಪ್ರಕರಣದಲ್ಲಿ ಕರ್ಣಾಟದ ತದ್ಭವ ಕನ್ನಡ ಎಂದು ಹೇಳಿರುವುದನ್ನೂ ಸಂಸ್ಕೃತ ಕನ್ನಡ ಗ್ರಂಥಗಳಲ್ಲಿ ಕರ್ಣಾಟ(ಕ) ಪದದ ಪ್ರಾಚುರ್ಯವನ್ನೂ ಆಧಾರವಾಗಿ ತೋರಿಸುತ್ತಾರೆ. ಪೂರ್ವೋಕ್ತವಾದ ಸಂಸ್ಕ್ರತ ಗ್ರಂಥದ ವ್ಯುತ್ಪತ್ತಿಯನ್ನು ಯಾವ ದೇಶಕ್ಕಾಗಲಿ ಭಾಷೆಗಾಗಲಿ ಅನ್ವಯಿಸಬಹುದೆಂದೂ ಕೇಶಿರಾಜ ಕೆಲವು ದ್ರಾವಿಡ ಶಬ್ದಗಳನ್ನೂ ಸಂಸ್ಕ್ರತದ ತದ್ಭವವಾಗಿ ಹೇಳಿರುವುದರಿಂದ ಆತನ ಸೂಚನೆ ಪ್ರಮಾಣವಾಗದೆಂದೂ ಮುಂತಾದ ಆಕ್ಷೇಪಗಳಿವೆ. ಎರಡನೆಯ ಪಂಥದವರು ಕರ್ಣಾಟ(ಕ)ಕ್ಕೆ ಮೂಲ ಕನ್ನಡ ಅಥವಾ ಕರ್ನಾಟ(ಕ) ಯಾವುದೇ ಇರಲಿ, ರಕಾರ ಸಂಪರ್ಕವಿರುವ ನಕಾರ ಣಕಾರವಾಗಿ ಮಾರ್ಪಡಬೇಕಾದ್ದು ಸಂಸ್ಕೃತ ವ್ಯಾಕರಣದ ಮರ್ಯಾದೆ ಯಾದ್ದರಿಂದ ಕರ್ಣಾಟ(ಕ) ಎಂಬ ಶಬ್ದರೂಪವೇ ಸಾಧು ಎನ್ನುತ್ತಾರೆ. ಇದನ್ನು ಆಕ್ಷೇಪಿಸುವವರು, ದುರ್ನಯ ದುರ್ನೀತಿ ಇತ್ಯಾದಿ ಸಂಸ್ಕೃತ ಪದಗಳಲ್ಲಿ ರಕಾರ ಸಂಪರ್ಕದ ನಕಾರಣಕಾರವಾಗದಿರುವುದನ್ನು ತೋರಿಸಿ, ಕರ್ನಾಟ(ಕ) ತಪ್ಪೆಂದು ಹೇಳುವುದಕ್ಕಾಗುವುದಿಲ್ಲ ಎನ್ನುತ್ತಾರೆ. ಕರ್ನಾಟ(ಕ) ಅಚ್ಚಕನ್ನಡ ಶಬ್ದ; ಅದಕ್ಕೆ ಕನ್ನಡದಲ್ಲಿಯೇ ವ್ಯುತ್ಪತ್ತಿಯುಂಟು. ಸಂಸ್ಕೃತಜ್ಞರು ಅವರ ಭಾಷಾ ಮರ್ಯಾದೆಗೆ ಅನುಸಾರವಾಗಿ ಅದನ್ನು ಕರ್ಣಾಟ(ಕ)ವೆಂದು ಮಾಡಿದ್ದಾರೆ ಎನ್ನುವುದು ಇನ್ನೊಂದು ಪಂಥ. ಕರ್ನಾಟ(ಕ) ಅಚ್ಚಕನ್ನಡ ಎನ್ನುವವರ ವಾದವನ್ನು ಆಧುನಿಕ ಭಾಷಾ ಶಾಸ್ತ್ರಜ್ಞರ ಮತ್ತು ಇತರರ ನಿರೂಪಣೆಯಲ್ಲಿ ಕಾಣುತ್ತೇವೆ. ಈ ಜಿಜ್ಞಾಸೆ ಪ್ರಬಲವಾಗಿದ್ದ ಕಾಲದಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಹೆಸರನ್ನು ಕರ್ಣಾಟಕ ಸಾಹಿತ್ಯ ಪರಿಷತ್ತು ಎಂಬುದರಿಂದ ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಿಸಿ ಕೊಂಡಿತೆಂಬುದನ್ನು ಇಲ್ಲಿ ನೆನೆಯಬಹುದು. ಕರ್ಣಾಟಕ, ಕರ್ನಾಟಕ ಎರಡು ರೂಪ ಗಳನ್ನೂ ಭಾಷಾಶಾಸ್ತ್ರದ ತತ್ತ್ವಗಳಿಗೆ ಅನುಸಾರವಾಗಿ ವಿಮರ್ಶಿಸಿ, “ಒಂದು ಶಬ್ದರೂಪ ಸಾಧುವೆ ಅಸಾಧುವೆ ಎಂದು ನಿರ್ಣಯಿಸುವುದರಲ್ಲಿ ಶಿಕ್ಷಾಶಾಸ್ತ್ರ, ಭಾಷಾಗತಿ, ಶಿಷ್ಟಸಮ್ಮತಿ ಇವೆಲ್ಲವನ್ನೂ ಗಮನಕ್ಕೆ ತಂದುಕೊಳ್ಳಬೇಕು. ಕರ್ಣಾಟಕ ಎಂಬ ಮೂರ್ಧನ್ಯಸಹಿತ ರೂಪ ಪಾಣಿನಿ ಸಮ್ಮತವಾದದ್ದು. ಕನ್ನಡನಾಡಿನ ಒಂದು ಭಾಗದಲ್ಲಿ (ಮುಖ್ಯವಾಗಿ, ಮೈಸೂರಿನಲ್ಲಿ) ಬಹುಮಟ್ಟಿಗೆ ಬಳಕೆಯಾಗಿರತಕ್ಕದ್ದು. ಆದಕಾರಣ ಅದರ ಉಚ್ಚಾರಣೆ ಕಠಿಣವಾದರೂ ಶಿಕ್ಷಾಶಾಸ್ತ್ರದ ಬೆಂಬಲ ಅದಕ್ಕಿಲ್ಲದೆ ಹೋದರೂ ಅದು ಸರ್ವಥಾ ತ್ಯಾಜ್ಯವೆಂದು ಹೇಳಲಾಗುವುದಿಲ್ಲ. ಕರ್ನಾಟಕವೆಂಬ ರೂಪವಾದರೋ ಹೆಚ್ಚುಯುಕ್ತ ವಾದದ್ದು, ಉಚ್ಚಾರಣೆಗೆ ಸುಲಭವಾದದ್ದು, ಕನ್ನಡನಾಡಿನ ಉತ್ತರ ಭಾಗದಲ್ಲೆಲ್ಲಾ ರೂಢಿಯಾಗಿರತಕ್ಕದ್ದು. ಇದನ್ನು ಅಸಾಧುವೆಂದು ಹೊರದೂಡುವುದು ಹಾಗಿರಲಿ; ಮೂರ್ಧನ್ಯಸಹಿತ ರೂಪಕ್ಕಿಂತ ಹೆಚ್ಚು ಉಪಾದೇಯವೆಂದು ಹೇಳಲು ಮನಸಿಲ್ಲದಿದ್ದರೆ ಅದರಷ್ಟೇ ಸಾಧುವೆಂದಾದರೂ ಒಪ್ಪಲೇಬೇಕು. ಸದ್ಯಕ್ಕೆ ಎರಡು ರೂಪಗಳನ್ನೂ ಅಂಗೀಕರಿಸೋಣ. ಸಂಸ್ಕೃತದಲ್ಲೇ ಕೋಷ-ಕೋಶ, ಪೃಥ್ವೀ-ಪೃಥಿವೀ ಮೊದಲಾದ ಜೋಡಿಗಳಿಲ್ಲವೆ? ಕರ್ಣಾಟಕ-ಕರ್ನಾಟಕಗಳಲ್ಲಿ ಕೊನೆಗೆ ಯಾವುದು ನಿಲ್ಲಬೇಕೆಂಬುದನ್ನು ಕಾಲಪುರುಷ ನಿರ್ಣಯಿಸಲಿ.” ತೀ.ನಂ. ಶ್ರೀಕಂಠಯ್ಯನವರ ಈ ಅಭಿಪ್ರಾಯ ಈ ಸಮಸ್ಯೆಯ ಜಿಜ್ಞಾಸುಗಳಿಗೆ ತಕ್ಕ ಸಮಾಧಾನವನ್ನು ನೀಡಬಹುದೆಂದು ತೋರುತ್ತದೆ.
- ಶಬ್ದರೂಪದ ಬಗ್ಗೆ ವಿದ್ವಾಂಸರ ಚರ್ಚೆಗಳು ಏನೇ ಇದ್ದರೂ ಕನ್ನಡನಾಡಿಗೆ ಕರ್ನಾಟಕ ಎಂಬ ಹೆಸರು ಇರಬೇಕೆಂದು ವಿಧಾನಮಂಡಲಗಳಲ್ಲಿ ತೀರ್ಮಾನವಾಗಿ (1973) ಈಗ "ಕರ್ನಾಟಕ" ಎಂಬ ರೂಪವೇ ಸರ್ವ ಮಾನ್ಯವಾಗಿದೆ.[೩]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: