ಆಂಡಯ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಅಚ್ಚಕನ್ನಡದ ಜೈನಕವಿ ಆಂಡಯ್ಯ ನ ಕಾಲ ಸುಮಾರಾಗಿ ಕ್ರಿ.ಶ.೧೨೩೫. ಸಂಸ್ಕೃತದ ಒಂದೂ ಪದವನ್ನು ಬೆರಸದೆ, ಅಚ್ಚ ಕನ್ನಡದಲ್ಲಿ ಕಾವ್ಯರಚನೆಯನ್ನು ಮಾಡಿದ ಹೆಗ್ಗಳಿಕೆ ಆಂಡಯ್ಯನದು. ಈ ಕಾವ್ಯದ ಹೆಸರು ಕಬ್ಬಿಗರ ಕಾವ ಅಥವಾ ಕಬ್ಬಿಗರ ಕಾವಂ (ಜಾಣ್ಣುಡಿ).

[೧]

ಕವಿಯ ಜೀವನ[ಬದಲಾಯಿಸಿ]

ಧರ್ಮಶ್ರದ್ಧೆ, ನೀತಿ ನಿಷ್ಠೆ, ದೈವ ಭಕ್ತಿ, ಕಾವ್ಯ-ಶಾಸ್ತ್ರ ವಿನೋದಾದಿ ಗುಣಗಳಿಗೆ ಕವಿಯ ಮನೆತನ ಹೆಸರಾದದ್ದು. ಅವನಲ್ಲಿ ಈ ಸದ್ಗುಣಗಳೆಲ್ಲವೂ ರಕ್ತಗತವಾಗಿ ಬೆಳೆದು ಬಂದಿದ್ದವು. ತವರು ನೆಲ, ತಾಯಿನುಡಿ, ಬಳಿಯದೈವ - ಈ ಮೂರನ್ನು ಕುರಿತು ಈ ಕವಿಯ ಒಲವು ಅಪಾರ. ಈತನ ಕಾಲ ಸು.1217. ನೆಲೆ ಬನವಾಸಿಯ ಪ್ರಾಂತ್ಯ. ರಾಜಾಶ್ರಯವಿದ್ದುದಾದರೆ ಅದು 1180-1217ರ ಅವಧಿಯಲ್ಲಿ ಆಳಿದ ಕದಂಬ ದೊರೆ ಕಾಮದೇವ. ಆಂಡಯ್ಯ ತನ್ನ ಕೃತಿಗೆ ಕಾವನ ಗೆಲ್ಲಂ (ಮದನ ವಿಜಯ, ಕಾಮದೇವಕ ವಿಜಯ ಎಂದು ಅರ್ಥ) ನಾಮಕರಣ ಮಾಡಿದ್ದಾನೆ. ಇದರ ಇನ್ನೊಂದು ಹೆಸರಾದ ಕಬ್ಬಿಗರ ಕಾವಂ ಎಂಬುದು (ಸಂಸ್ಕøತದ ಸಹಾಯವಿಲ್ಲದೆ ಅಚ್ಚ ಕನ್ನಡದಲ್ಲಿ ಬರೆದು ಕವಿಗಳನ್ನು ಕಾಪಾಡಿದವನು ಎಂಬ ಅರ್ಥ) ಕಾರಣಾಂತರಗಳಿಂದ ತಲೆಮಾರುಗಳಿಂದ ಸಂಪ್ರದಾಯವಶವಾಗಿ ಬಹು ಜನಪ್ರಿಯವಾಗಿ ನೆಲೆ ನಿಂತ ಹೆಸರು ಎಂದು ವಿದ್ವಾಂಸರು ಈಚೆಗೆ ನಿರ್ಣಯಿಸಿದ್ದಾರೆ.

ಕಬ್ಬಿಗರ ಕಾವಂ -ಕಥಾಸಾರ[ಬದಲಾಯಿಸಿ]

ಇದರ ಮೂಲ ನಾಮ ಕಾವನ ಗೆಲ್ಲ ಎಂದೂ, ಸೊಬಗಿನ ಸುಗ್ಗಿ ಎಂಬ ಪರ್ಯಾಯ ಹೆಸರಿರುವದಾಗಿಯೂ ಕೆಲವು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಇದು ಚಂಪೂಕಾವ್ಯ. ಇದರಲ್ಲಿ ನಡುನಡುವೆ ಬರುವ ಸಣ್ಣ ಸಣ್ಣ ಗದ್ಯ ಖಂಡಗಳ ಜೊತೆಗೆ ವೃತ್ತಗಳೂ ಕಂದಗಳೂ ಕೂಡಿ ಒಟ್ಟು 272 ಪದ್ಯಗಳಿವೆ. ಈ ಕೃತಿಯ ಕಥಾಸಾರ ಸ್ಥೂಲವಾಗಿ ಹೀಗಿದೆ: ಪೂವಿನ ಪೊಳಲಿನ ನನೆವಿಲ್ಲನೆಂಬ ದೊರೆ ಕನಸಿನಲ್ಲಿ ಕಂಡ ಅಪ್ಸರೆಯನ್ನೇ ಎಚ್ಚತ್ತು ವನವಿಹಾರದಲ್ಲಿ ಕಂಡಾಗ ಆಕೆ ಹೇಳಿದ ಕಥೆಯಿಂದ ತನ್ನ ನಿಜಸ್ಥಿತಿಯನ್ನು ಅರಿಯುತ್ತಾನೆ. ಆಕೆ ಹೇಳಿದ ಆ ಕಥೆ ಹೀಗಿದೆ: ಕಂಪಿನಪೊಳಲಿನ ಕರ್ವುವಿಲ್ಲನಿಗೆ ತನ್ನ ಪರಿವಾರದ ಚಂದ್ರನನ್ನು ಶಿವ ಕರೆದೊಯ್ದನೆಂಬ ಸುದ್ದಿ ಬರುತ್ತದೆ. ಚಂದ್ರನ ಬಿಡುಗಡೆಗಾಗಿ ಕರ್ವುವಿಲ್ಲ ಕಳುಹಿಸಿದ ತಂಗಾಳಿಯ ದೌತ್ಯ ವಿಫಲವಾಗುತ್ತದೆ. ಕರ್ವುವಿಲ್ಲ ಸೇನಾಸಹಿತವಾಗಿ ಶಿವನ ಮೇಲೆ ಏರಿ ಹೋಗುವಾಗ ದಾರಿಯಲ್ಲಿ ಕಂಡ ಸವಣನೊಬ್ಬನಿಗೆ ಕೈಮುಗಿದು ಸಾಗುತ್ತಾನೆ. ಕರ್ವುವಿಲ್ಲನ ಸೇನೆ ವೀರಭದ್ರನ ನಾಯಕತ್ವದಲ್ಲಿ ಹೋರಿದ ಶಿವಸೇನೆಯನ್ನು ಸೋಲಿಸುತ್ತದೆ. ಕಡೆಗೆ ಶಿವನಿಗೂ ಕರ್ವುವಿಲ್ಲನಿಗೂ ಯುದ್ಧವಾಗಿ ಕರ್ವುವಿಲ್ಲನ ಅಂಬಿನಿಂದ ಶಿವನು ಅರೆವೆಣ್ಣೆನಾಗುತ್ತಾನೆ. ಶಿವನ ಶಾಪದಿಂದ ಕರ್ವುವಿಲ್ಲನಿಗೆ ಪತ್ನಿಯ ಅಗಲಿಕೆಯುಂಟಾಗಿ ತನ್ನರಿವೇ ತನಗೆ ಮರೆತುಹೋಗುವಂಥ ಸ್ಥಿತಿ ಬರುತ್ತದೆ. ಈ ಕಥೆ ಹೇಳಿದ ಅಪ್ಸರೆ ನನೆವಿಲ್ಲನೇ ಕರ್ವುವಿಲ್ಲನೆಂಬುದನ್ನೂ ತಿಳಿಸಿ ಶಾಪವಿಮೋಚನೆಯಾದುದನ್ನು ನಿರೂಪಿಸಿ ಮತ್ತೆ ಮಾಯವಾಗುತ್ತಾಳೆ. ನನೆವಿಲ್ಲನಾಗಿದ್ದ ಕರ್ವುವಿಲ್ಲ ತನ್ನಸತಿ ಇಚ್ಚೆಗಾರ್ತಿಯನ್ನು ಕೂಡಿ ಸುಖದಿಂದಿರುತ್ತಾನೆ.

ಕಬ್ಬಿಗರ ಕಾವಂ ವೈಶಿಷ್ಟ್ಯ[ಬದಲಾಯಿಸಿ]

ಸೊಗವಿಪ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ| ಬಗೆಗೊಳೆ ಪೇಳಿಲಾರರಿನಿತುಂ ಸಲೆ ಮುನ್ನಿನ ಪೆಂಪನಾಳ್ದ ಕ||ಬ್ಬಿಗರದು ಮಾತನಾಡಿದವೊಲಂದವನಾಳ್ದಿರೆ ಪೇಳ್ವ್ ಬಲ್ಪು ನೆ||ಟ್ಟಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊಳ್ಳದಾರೊಳಂ || ಎಂದು ತಮತಮಗೆ ಬಲ್ಲವರೆಂದೊಡೆನಾನವರ ಬಯಕೆಯಂ ಸಲಿಸುವೆನಿನ್ನೆಂದಚ್ಚಗನ್ನಡಂ ಬಿಗಿವೊಂದಿರೆ ಕಬ್ಬಿಗರ ಕಾವನೊಲವಿಂದೊರೆದೆ_ಎಂದು ಹೇಳಿ ಆಂಡಯ್ಯ ತನ್ನ ಕಾವ್ಯಕ್ಕೆ ಪ್ರೇರಣೆ ಹೇಗೆ ಬಂದಿತೆಂಬುದನ್ನು ತಿಳಿಸಿದ್ದಾನೆ. ದೇಸೆ ಪೊದಳ್ದಿರೆ, ಕೊಂಕು ತೀವೆ ತಾನು ಕಾವ್ಯವನ್ನು ಬರೆವುದಾಗಿ ಹೇಳಿದ್ದಾನೆ.

                                 ಪಲವು ನಾಲಗೆಯುಳ್ಳವಂ ಬಗೆವೊಂಡೆಂದುಬಣ್ಣಿಸಲ್ಕಾನ್ ಆ ನೆಲನಂ ಮತ್ತಿನ ಮಾನಿಸರ್ ಪೊಗಳಲ್ ಏನಂ ಬಲ್ಲರ್....ಕನ್ನಡಮೆನಿಪ್ಪನಾಡು ಚಲ್ವಾಯ್ತು..... ಮೆಲ್ಲೆಲರಿಂಪೂತಕೊಳಂಗಳಿಂ ಕಾಲೂರ್ಗಳಿಂಕೆಯ್ಗಳಿಂ.                     
                           ಹೀಗೆಂಬುದಾಗಿ ಪ್ರಾರಂಭಮಾಡಿ ಕವಿ ತನ್ನ ನಾಡುನುಡಿಗಳನ್ನು ವಿಪುಲವಾಗಿ ಬಣ್ಣಿಸಿದ್ದಾನೆ. ಆಂಡಯ್ಯನ ತವರುನೆಲದ ತವರುನುಡಿಯ ಕವಡರಿಯದ ಮಮತೆ ಕಾವ್ಯದ ಉದ್ದಕ್ಕೂ ಕಂಡುಬಂದು ಸಹೃದಯರ ಮನಸ್ಸನ್ನು ಸೂರೆಗೊಳ್ಳುತ್ತದೆ.                        

ಕನ್ನಡ ಸಾಹಿತ್ಯದಲ್ಲಿ ಕಬ್ಬಿಗರ ಕಾವಂ ಒಂದು ವಿಶಿಷ್ಟ ಕೃತಿ. ಸಂಸ್ಕøತದ ಸಹಾಯವನ್ನು ಪಡೆಯದೆ ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು ಬಳಸಿಕೊಂಡು ಈ ಕೃತಿಯನ್ನು ಕಟ್ಟಲಾಗಿದೆ. ಇಲ್ಲಿ ಬರುವ ಶಿವ-ಮನ್ಮಥರ ಕಥೆಯ ಎಳೆ ನಮ್ಮ ಪುರಾಣಗಳಲ್ಲಿ ದೊರೆಯುವಂಥದೇ. ಆದರೆ ಕವಿ ಮಾಡಿಕೊಂಡ ಮಾರ್ಪಾಟು ಬೇರ್ಪಾಟುಗಳಿಂದ ಒಂದು ರೀತಿಯ ನವ್ಯತೆ ಇದಕ್ಕೆ ಒದಗಿದೆ. ಈ ಕೃತಿಯನ್ನು ಸೂಕ್ಷ್ಮವಾಗಿ ನೋಡಿದವರಿಗೆ ಕಾಮದೇವ ಎಂಬ ಹೆಸರಿನ ಒಬ್ಬ ಕದಂಬ ದೊರೆಯನ್ನು ಪುರಾಣಕಥೆಯ ಕಾಮದೇವನೊಡನೆ ಏಕೀಭವಿಸಿ ಸಮಕಾಲೀನ ಚರಿತ್ರೆಯ ಘಟನೆಗಳನ್ನು ಸೂಚಿಸಿರುವುದು ತಿಳಿಯುತ್ತದೆ. ಸ್ಮರತತ್ವ, ಶಿವತತ್ವ, ಜಿನತತ್ವಗಳು ಒಂದಕ್ಕಿಂತ ಒಂದು ಮಿಗಿಲು ಎಂಬ ಒಂದು ದರ್ಶನ ಧ್ವನಿ ಈ ಕಾವ್ಯದಲ್ಲಿ ಇದೆ ಎಂದು ಹೇಳುತ್ತಾರೆ. ವಸ್ತು ಪಾತ್ರ ರಸ ಇವುಗಳ ಆವಿಷ್ಕಾರದಲ್ಲಿ ಒಂದು ವಿನೂತನವಾದ ಚಿತ್ರಶಕ್ತಿ ಕಾಣಬರುತ್ತದೆ. ಕನ್ನಡ ನಾಡುನುಡಿಗಳ ಸಂಬಂಧದ ಪ್ರೀತ್ಯಾದರಗಳ ರಮ್ಯ ಪ್ರಕಾಶದಿಂದ ಈ ಕೃತಿ ದೀಪ್ತವಾಗಿದೆ. ಈ ಎಲ್ಲ ಗುಣಗಳಿಂದಾಗಿ ಕಬ್ಬಿಗರ ಕಾವಂ ಎಂಬುದು ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟಕೃತಿಯಾಗಿದೆ.

 1. Rice E.P. (1921), p. 44
"https://kn.wikipedia.org/w/index.php?title=ಆಂಡಯ್ಯ&oldid=803301" ಇಂದ ಪಡೆಯಲ್ಪಟ್ಟಿದೆ