ಆಟಿಸಂ

ವಿಕಿಪೀಡಿಯ ಇಂದ
Jump to navigation Jump to search

ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗುತ್ತದೆ. ಸಾವಿರ ಜನರಲ್ಲಿ ಒಬ್ಬರೋ ಇಬ್ಬರಿಗೆ ಇದು ಕಂಡು ಬರುತ್ತದೆ. ೧೯೮೦ ರಿಂದ ಇಂದು ಹೆಚ್ಹಾಗಿ ಕಂಡು ಬರುತ್ತಿದೆ. ಮೊಟ್ಟ ಮೊದಲು ಶಿಶುವಿನಲ್ಲಿ ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ ಕಾಣಿಸಿಕೊಳ್ಳಬಹುದು. ನಂತರ ೬ ತಿಂಗಳಲ್ಲಿ ತಾಯಿಗೆ ಸ್ವಲ್ಪ ಅನುಮಾನ ಬರಬಹುದು. ನಂತರ ಎರಡು ಇಲ್ಲವೇ ಮೂರು ವರ್ಷಗಳಲ್ಲಿ ಸ್ಪಷ್ಟವಾಗಿ ಅದನ್ನು ಗುರುತಿಸಬಹುದು.[೧] ಆಟಿಸಂನಲ್ಲಿ ಒಂದೇ ಲಕ್ಷಣವಿರುವುದಿಲ್ಲ. ಅನೇಕ ಲಕ್ಷಣಗಳಿಂದ ಕೂಡಿಕೊಂಡಿರುತ್ತದೆ- ಸಾಮಾಜಿಕ ಸಂವಹನ, ನಡೆವಳಿಕೆ, ನಿರಾಸಕ್ತಿ ಮತ್ತು ಮಾಡಿದ್ದನ್ನೇ ಮಾಡುವುದು. ಊಟ ಮಾಡುವ ರೀತಿ ಸಹ ವಿಭಿನ್ನವಾಗಿರುತ್ತದೆ.

ಅಟಿಸಂ ಪೀಡಿತರ ಮೆದುಳಿನ ರಚನೆ

ಚರಿತ್ರೆ[ಬದಲಾಯಿಸಿ]

ಆಟಿಸಂ ಎಂದು ಹೆಸರಿಡುವ ಬಹಳ ಮುಂಚೆಯೇ ಆಟಿಸ್ಟಿಕ್‍ನ ಲಕ್ಷಣಗಳು ಮತ್ತು ಚಿಕಿತ್ಸೆಯ ಕೆಲವು ನಿದರ್ಶನಗಳು ದೊರೆತಿವೆ. ಮಾರ್ಟಿನ್ ಲೂಥರ್ ಕಿಂಗ್ ನ ಟೇಬಲ್ ಟಾಕ್‍ನಲ್ಲಿ ಆಟಿಸ್ಟಿಕ್ ಆಗಿದ್ದ ೧೨ ವರ್ಷದ ಬಾಲಕನೊಬ್ಬನ ಕಥೆಯಿದೆ.[೨] ಲೂಥರ್‍ನ ರಚನೆಕಾರ ಮೆಥಷಿಯಸ್‍ನ ಪ್ರಕಾರ ಆ ಹುಡುಗ ಪ್ರೇತಾತ್ಮ ಪೀಡಿತ, ಆತ್ಮ ರಹಿತ, ಮಾಂಸದ ಮುದ್ದೆಯೆಂದು ಲೂಥರ್ ತಿಳಿದಿದ್ದ. ಪ್ರಾಚೀನ ಖಚಿತ ದಾಖಲೆಯುಳ್ಳ ಆಟಿಸಂ ಹ್ಯುಗ್ (ಬೋರ್ಸ್) ನದ್ದು. ೧೯೭೪ ನಲ್ಲಿ ನಡೆದ ನ್ಯಾಯಾಲಯದ ಪ್ರಕರಣದಲ್ಲಿ ಬ್ಲೇರ್‍ನ ಸಹೋದರ ಬೋರ್ಸ್‍ನ ವಿವಾಹವನ್ನು ಇದೇ ಕಾರಣದಿಂದ ಅನೂರ್ಜಿತಗೊಳಿಸಿದ್ದ[೩]. ೧೯೭೮ ರಲ್ಲಿ ಗುಡ್ಡಗಾಡು ಜನಾಂಗದ ಹುಡುಗನೊಬ್ಬನಲ್ಲಿ ಆಟಿಸಂನ ಕೆಲವು ಲಕ್ಷಣಗಲು ಗೋಚರಿಸಿದವು. ವೈದ್ಯ ವಿದ್ಯಾರ್ಥಿ ಜೀನ್ ಐಟಾರ್ಡ್ ನಡೆವಳಿಕೆ ಚಿಕಿತ್ಸೆ ಮುಖಾಂತರ ಆತನಿಗೆ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿದ ಮತ್ತು ಅನುಕರಣೆಯ ಮೂಲಕ ಸಂಭಾಷಣೆಯನ್ನು ಕಲಿಸಿದ್ದ.[೪]

ಟೆಂಪಲ್ ಗ್ರಾಂಡಿಸ್ ಎನ್ನುವ ವಿಜ್ಞಾನಿಗೆ ಮಗುವಾಗಿರುವಾಗ ಆಟಿಸಂ ಇತ್ತು ಎನ್ನಲಾಗಿತ್ತು. ಈಗಿನ ಸೂತ್ರಗಳ ಪ್ರಕಾರ ಆಕೆಗೆ ಆಸ್ಪರ್ಜರ್ ಸಿಂಡ್ರೋಮ್ ಇದ್ದಿತು.[೫] ಇದನ್ನು ಆಕೆ ತನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದಾಳೆ. ಆಟಿಸಂ ಕುರಿತು ಅನೇಕ ಲೇಖನಗಳನ್ನು ಬರೆದಿರುವ ಆಕೆ ಹೀಗೆ ಹೇಳಿದ್ದಾಳೆ. ದೊಡ್ಡಾವಳಾದ ಮೇಲೆ ಕೂಡ ಯಾವುದೇ ವಿಷಯವನ್ನು ನಾನು ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದೇ ಹೆಚ್ಚು ಸುಲಭ ಎಂದು ಕಂಡುಕೊಂಡಿದ್ದೇನೆ. ಆಕೆಯೇ ತಿಳಿಸಿರುವಂತೆ ತಿರುಗುತ್ತಿರುವ ನಾಣ್ಯ ಅಥವಾ ಮುಚ್ಚಳದ ಶಬ್ದದಲ್ಲಿ ಮುಳುಗಿ ಹೋಗಿದ್ದ ನನಗೆ ಏನೂ ಕಾಣುತ್ತಿರಲಿಲ್ಲ. ನನ್ನ ಸುತ್ತಮುತ್ತ ಇದ್ದ ಜನರೆಲ್ಲ ಪಾರದರ್ಶಕವಾಗಿದ್ದರು ಯಾವ ಶಬ್ದವು ನನ್ನನ್ನು ಮುಟ್ಟಲಿಲ್ಲ, ಎಚ್ಚರಿಸಲಿಲ್ಲ. ನಾನು ಕಿವುಡಿಯಾಗಿದ್ದೆ. ಥಟ್ಟನೆ ಬಂದ ದೊಡ್ಡ ಶಬ್ದವೂ ಯಾವ ಪರಿಣಾಮ ಉಂಟು ಮಾಡಲಿಲ್ಲ. ಆದರೆ ಜನರ ಜಗತ್ತಿನಲ್ಲಿನ ಶಬ್ದಗಳಲ್ಲಿ ನಾನು ತುಂಬ ಸೂಕ್ಷ್ಮಮತಿಯಗಿದ್ದೆ.[೬] ಆಟಿಸಂ ಮಕ್ಕಳು ಮೃದುವಾದ ಸ್ಪರ್ಶವನ್ನು ಅಥವಾ ಇತರ ಬಗೆಯ ಸ್ಪರ್ಶಗಳನ್ನು ಸಹಿಸಲಾರರು.[೭] ಕೆಲವು ಆಟಿಸಂ ಮಕ್ಕಳು ಬಟ್ಟೆ ಧರಿಸಿಕೊಳ್ಳಲು ನಿರಾಕರಿಸುತ್ತಾರೆ. ಕೆಲವು ಬಗೆಯ ಉಡುಪು ಧರಿಸಲು ಅವರಿಗೆ ಆಗುವುದಿಲ್ಲ. ಚಳಿಯಿರುವಾಗ ಕಡಿಮೆ ಉಡುಪು ಧರಿಸಿ ಹೊರಡಬಹುದು, ಬೇಸಿಗೆಯಲ್ಲಿ ಉಣ್ಣೆ ಬಟ್ಟೆ ಧರಿಸಬಹುದು. ವಾಸನೆಯ ಬಗೆಗೆ ಹೇಳಬೇಕೆಂದರೆ ಆಟಿಸಂ ಮಕ್ಕಳು ವಸ್ತುಗಳ ಮತ್ತು ಜನರ ವಾಸನೆ ನೋಡುತ್ತಾರೆ. ಸಂಶೋಧನೆಯ ಮತ್ತು ಅಧ್ಯಯನಗಳ ಪ್ರಕಾರ ಆಟಿಸಂ ಇರುವ ಹದಿಹರೆಯದವರಲ್ಲಿ ಮೂರನೆಯ ಒಂದು ಭಾಗದಷ್ಟು ಜನರು ಕೌಶಲಗಳ ಮತ್ತು ನಡವಳಿಕೆಗಳ ಕೊರತೆಯಿಂದ ಬಳಲುತ್ತಾರೆ.[೮][೯] ಪ್ರತಿ ಆರು ಮಕ್ಕಳಲ್ಲಿ ಶಾಲಾಪೂರ್ವ ಅವಧಿಯಲ್ಲಿ ಮೂರ್ಛೆರೋಗ ಇರುತ್ತದೆ. ಹಾಗೆಯೇ ಅವರಲ್ಲಿ ಹರೆಯದಲ್ಲಿ ಫಿಟ್ಸ್ ಕಾಣಿಸಿಕೊಳ್ಳಬಹುದು.[೧೦] ೧೯೧೦ರಲ್ಲಿ ಸ್ವಿಸ್ ಮನೋವೈದ್ಯ ಯೂಗನ್ ಬ್ಲೂಲರ್ (Eugen bleuler) ಇಚ್ಛಿತ್ತ ವಿಕಲತೆ (ಸ್ಕಿಜೋಫ್ರೆನಿಯಾ) ಲಕ್ಷಣಗಳನ್ನು ವಿವರಿಸುತ್ತಿದ್ದ ಸಂದರ್ಭದಲ್ಲಿ ಆಟಿಸ್ಮಸ್(Autismus ಇಂಗ್ಲಿಷ್ ಅನುವಾದ ಆಟಿಸಂ) ಲ್ಯಾಟಿನ್ ಪದವನ್ನು ಹೆಸರಿಸಿದ. ಅವನು ಗ್ರೀಕ್ ಶಬ್ದ (ಸ್ವಯಂ (R)Self) ನಿಂದ ಸ್ವ-ಕೇಂದ್ರಿತ (Self administration) ಎಂಬ ಅರ್ಥ ಬರುವಂತೆ ಬಳಸಿದ.[೧೧] ೧೯೮೩ ರಲ್ಲಿ ಆಟಿಸಂ ಪದ ಮೊದಲ ಬಾರಿ ಆಧುನಿಕ ಅರ್ಥ ಮತ್ತು ರೂಪ ಪಡೆಯಿತು.[೧೨] ೧೯೪೩ ರಲ್ಲಿ ಲಿಯೋ ಕ್ಯಾನ್ಸರ್ ಶಿಶುವಿನ ಆರಂಭಿಕ ಹಂತದ ಆಟಿಸಂ ಪರಿಚಯಿಸಿದ.[೧೩] ಕ್ಯಾನ್ಸರ್ ತಿಳಿಸಿದ ಬಹುತೇಕ ಲಕ್ಷಣಗಳು, ವಿಶೇಷವಾಗಿ ಆಟಿಸ್ಟಿಕ್ ಏಕಾಂಗಿತನ ಹಾಗೂ ಮಾಡಿದ್ದನ್ನೇ ಮಾಡುವುದು ಇವತ್ತಿಗೂ ಆಟಿಸಂನ ಮುಖ್ಯ ಗುಣಲಕ್ಷಣಗಳಾಗಿವೆ.[೧೪] ೧೯೬೦ ರಲ್ಲಿ ಕೊನೆಯಲ್ಲಿ ಆಟಿಸಂ ಸ್ವತಂತ್ರ ವಿಶೇಷ ಗುಣಲಕ್ಷಣಗಳ ಕಾಯಿಲೆ ಎಂದು ದೃಢವಾಯಿತು.[೧೫]

ಲಿಯೋ- ಕ್ಯಾನ್ಸರ್ ಶಿಶುವಿನ ಆರಂಭಿಕ ಹಂತದ ಆಟಿಸಂ ಪರಿಚಯಿಸಿದ

ಕಾರಣಗಳು[ಬದಲಾಯಿಸಿ]

ವಂಶವಾಹಿಗಳೇ ಮುಖ್ಯ ಕಾರಣವಾಗಿರುತ್ತದೆ.[೧೬] ಗರ್ಭಧಾರಣೆಯ ೮ ವಾರಗಳಲ್ಲೇ ವಿಕಲತೆ ಕಾಣಿಸಿಕೊಳ್ಳುತ್ತದೆ.[೧೭] ಪರಿಸರ ಮಾಲಿನ್ಯದ ಕಾರಣದಿಂದ ಉಂಟಾಗುತ್ತದೆಂದು ಹೇಳುತ್ತಾರಾದರೂ ಅಧ್ಯಾಯನಗಳು ಅದನ್ನು ಇನ್ನೂ ಖಚಿತಪಡಿಸಿಲ್ಲ. ಕೇವಲ ಆಹಾರ ಪದಾರ್ಥಗಳು, ಡೀಸೆಲ್ ಹೊಗೆ, ಪ್ಲಾಸ್ಟಿಕ್ ಬಳಕೆ, ಮಾದಕ ದ್ರವ್ಯಗಳು ಗರ್ಭಧಾರಣೆ ಮತ್ತು ಪ್ರಸವ ಪೂರ್ವದ ಮಾನಸಿಕ ಒತ್ತಡ, ಲಸಿಕೆಗಳು,[೧೮] ಸೋಂಕುರೋಗಗಳು, ಕೀಟನಾಶಕಗಳ ಬಳಕೆ, ಆಲ್ಕೋಹಾಲ್, ಧೂಮಪಾನ, ಸಿದ್ದಪಡಿಸಿದ ಆಹಾರ ಸಂರಕ್ಷಣೆಗೆ ಬಳಸುವ ಅಪಾಯಕಾರಿ ಸಂರಕ್ಷಕಗಳು ಮುಂತಾದವುಗಳು ಸಂಭವನೀಯ ಕಾರಣಗಳೆಂದು ಹೇಳಲಾಗುತ್ತದೆ. ತಡವಾದ ಮದುವೆ ಅದರಲ್ಲಿಯೂ ಹೆಣ್ಣಿನ ವಯಸ್ಸು ೩೫ ಮೀರಿರುವುದು ಕೂಡ ಪ್ರಮುಖ ಕಾರಣವಾಗಿದೆ. ೧೯೯೦ ಮತ್ತು ೨೦೦೦ ಆರಂಭದಲ್ಲಿ ಹೆಚ್ಚು ಮಕ್ಕಳಲ್ಲಿ ಆಟಿಸಂ ಗುರುತಿಸಲಾಯಿತು. ಇದಕ್ಕೆ ಬಹುಶಃ ಜನರಲ್ಲಿ ಆಟಿಸಂ ಕುರಿತು ಅರಿವು ಮೂಡಿದ್ದು ಕಾರಣ ಇರಬಹುದು. ಆಟಿಸಂಗೆ ಗುರಿಯಾಗುವವರಲ್ಲಿ ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳೇ ಅಧಿಕ. ಹೆಣ್ಣು ಗಂಡಿನ ಅನುಪಾತ ೧:೪ ಇದೆ.

ಆಟಿಸಂ ಪೀಡಿತರ ಗ್ರಾಫ್

ನಿಭಾಯಿಸುವಿಕೆ[ಬದಲಾಯಿಸಿ]

ಆಟಿಸಂ ಕಾಯಿಲೆ ಗುರುತಿಸಿ ೬೫ ವರ್ಷಗಳು ಕಳೆದ ನಂತರವೂ ಪೋಷಕರು ತಮ್ಮ ಮಕ್ಕಳು ಹೀಗೇಕೆ? ಎಂದಾಗ ಉತ್ತರಿಸುವುದು ಕಷ್ಟವೆಂದು ಹೆಸರಾಂತ ಮನೋವೈದ್ಯ ಡಾ. ಸಿ. ಆರ್. ಚಂದ್ರಶೇಖರ್ ಅವರ ಅಭಿಪ್ರಾಯ. ಯಾವುದೇ ನಡವಳಿಕೆಯ ಕಾರಣ ಮತ್ತು ಉದ್ದೇಶಗಳನ್ನು ಅರ್ಥ ಮಾಡಿಕೊಂಡಲ್ಲಿ ನಿಭಾಯಿಸುವುದು ಕಷ್ಟವಾಗಲಾರದು. ಅಮೆರಿಕಾಮನೋವೈದ್ಯಕೀಯ ಸಂಘದ ಡಯಗ್ನಸ್ಟಿಕ್ ಮತ್ತು ಸ್ಟಾಟಿಸ್ಟಿಕಲ್ ಮ್ಯಾನ್ಯುಯಲ್ ಆಫ್ ಮೆಂಟಲ್ ಡಿಸಾರ್ಡರ್ - ಸುಧಾರಿತ ೧೯೮೭ ನ ಪ್ರಕಾರ ಆಟಿಸಂ ಲಕ್ಷಣಗಳು ಹೀಗಿವೆ:

 1. ಪರಸ್ಪರ ವ್ಯವಹರಿಸುವಿಕೆಯಲ್ಲಿ ಗುಣಾತ್ಮಕ ನ್ಯೂನತೆಗಳು.
 2. ಮಾತಿನ ಮೂಲಕ ಮತ್ತು ಮಾತಿಲ್ಲದ ಸಂವಹನದಲ್ಲಿ ಮತ್ತು ಕಲ್ಪನಾ ಚಟುವಟಿಕೆಯಲ್ಲಿ ಗುಣಾತ್ಮಕ ನ್ಯೂನತೆಗಳು.[೧೯][೨೦]
 3. ಚಟುವಟಿಕೆಗಳಲ್ಲಿ ಮತ್ತು ಆಸಕ್ತಿಗಳಲ್ಲಿ ಬಹುಗಮನಾರ್ಹಾವಾಗಿ ಕುಗ್ಗಿದ ಸಾಮರ್ಥ್ಯಗಳು.

ಈ ಕುರಿತು ಮನೋವೈದ್ಯರು, ಸಂಶೋಧಕರು ವಿವರವಾಗಿ ತಿಳಿಸಿದ್ದಾರೆ. ಆಟಿಸಂ ಇರುವ ಮಗುವಿಗೆ ಇತರರು ಇದ್ದಾರೆ. ಅವರಿಗೂ ಭಾವನೆಗಳಿವೆ ಎಂಬ ಅರಿವು ಇದ್ದಂತೆ ಕಾಣುವುದಿಲ್ಲ. ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಮಗು ಇತರರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ.[೨೧] ಆಟಿಸಂ ಮಗುವಿನ ಸುತ್ತಲೂ ಇರುವ ಜನರಿಗೆ ಮಗುವಿನ ಪಾಲಿಗೆ ತಾವು ನಿರ್ಜೀವ ವಸ್ತು ಎಂಬ ಭಾವನೆ ಬರುತ್ತದೆ. ಅದು ಜನರನ್ನು ನೋಡಿ ನಗುವುದಿಲ್ಲ. ಶಾಲೆಗೆ ಸೇರುವ ಮುಂಚಿನ ಆಟಿಸಂ ಮಗು ಇತರರು ಆಡುವ ಆಟವನ್ನಾಗಲೀ, ತಂದೆ-ತಾಯಿ ಮಾಡುವ ಮನೆಗೆಲಸ ಚಟುವಟಿಕೆಗಳನ್ನು ಅನುಕರಿಸುವುದಿಲ್ಲ. ಶಾಲಾ ವಯಸ್ಸಿನ ಆಟಿಸಂ ಮಗು ಒಂಟಿಯಾಗಿ ಆಡುತ್ತದೆ. ಹದಿಹರೆಯದ ಆಟಿಸಂ ಹುಡುಗ ಕೂಡ ಒಂಟಿಯಾಗಿರಲು ಬಯಸುತ್ತಾನೆ. ಸಂಭಾಷಣೆಯು ಕೂಡ ಯಾಂತ್ರಿಕವಾಗಿರುತ್ತವೆ. ಆಟಿಸಂ ಮಗು ಸ್ವಕೇಂದ್ರಿತವಾಗಿದ್ದು ಇತರರ ದೃಷ್ಟಿಕೋನದಿಂದ ವಿಷಯ ವಸ್ತುಗಳನ್ನು ಅರ್ಥ ಮಾಡಿಕೊಳ್ಳಲಾರದು. ಅಧ್ಯಯನಗಳಿಂದ ತಿಳಿದು ಬಂದಿರುವುದೇನೆಂದರೆ ಆಟಿಸಂ ಮಗುವಿನ ಸಾಮಾಜಿಕ ವ್ಯವಹರಿಸುವಿಕೆಯನ್ನು, ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ಸಹವಯಸ್ಸಿನವರ ಪಾತ್ರ ಬಹಳ ಹೆಚ್ಚು. ಅದು ತನ್ನ ಸಹವಯಸ್ಸಿನವರ ಜೊತೆಗೆ ಕಾಲ ಕಳೆಯುವುದನ್ನು, ಒಡನಾಡುವುದನ್ನು ಸೇರಿಸಲೇಬೇಕು.[೨೨] ಶಾಲೆಯ ಚಟುವಟಿಕೆಗಳು, ಆಟ, ಮನರಂಜನೆಯ ಚಟುವಟಿಕೆಗಳ ಮೂಲಕವೂ ಸಾಧಿಸಬಹುದು, ಸಾಮಾಜಿಕ ಕೌಶಲ್ಯಗಳನ್ನು ಪರಿಣಾಮಕಾರಿ ವಿಧಾನಗಳ ಮೂಲಕ ಕಲಿಸಬೇಕು, ಮಾದರಿ ತಯಾರಿಕೆ, ಮಾರ್ಗದರ್ಶನದಿಂದ ಮತ್ತು ರೋಲ್ ಫ್ಲೇ ಮುಖಾಂತರ ಕಲಿಸಬೇಕು. ಬೌದ್ಧಿಕವಾಗಿ ಮೇಲ್ಮಟ್ಟದಲ್ಲಿರುವ ಮಕ್ಕಳು ತಮಗೆ ಸ್ನೇಹಿತರಿಲ್ಲವಲ್ಲ ಎಂದು ಚಿಂತಿಸದೇ ಹೋದರೂ ಹದಿ ವಯಸ್ಸಿಗೆ ಬಂದ ಮೇಲೆ ಅವರ ಬಗ್ಗೆ ಗಮನ ಕೊಡುತ್ತಾರೆ. ಆತ್ಮೀಯ ಗೆಳೆತನ ಬೆಳೆಸಲು ಇಷ್ಟಪಡುತ್ತಾರೆ. ಆಟಿಸಂ ಮಕ್ಕಳಿಗೆ ಭಾವನೆಗಳ ಪ್ರಪಂಚ ತುಂಬ ಅಪರಿಚಿತ. ಕಳೆದ ಹತ್ತು ವರ್ಷಗಳಲ್ಲಿ ಆಟಿಸಂ ಬಗ್ಗೆ ನಡೆದಿರುವ ಅಧ್ಯಯನಗಳನ್ನು ಸಾಮಾಜಿಕ ನಡವಳಿಕೆಗೆ ಪೂರಕವಾದ , ಭಾವನೆಗಳು ಮತ್ತು ಆಲೋಚನೆಗಳ ಸಂವಹನೆಯನ್ನು ಕುರಿತಾಗಿದೆ. ಉಟಾಫ್ರಿತ್(Uta frith) ಮತ್ತು ಸಹೋದ್ಯೋಗಿಗಳು ವಿವರಿಸುವ ಮನಸ್ಸಿನ ಸಿದ್ದಾಂತ (Theory of mind) ಇದನ್ನು ಮನಸ್ಸಿನ ಕುರುಡುತನ ಎಂದು ಸೈಮನ್ ಬೇರನ್ ಕೊಹಿನ್ ವಿವರಿಸುತ್ತಾರೆ.[೨೩] ಪೀಟರ್ ಹಾಬ್ ಸನ್ ವಿವರಿಸುವ ಭಾವನೆ-ಬುದ್ಧಿಯ ಸಂಬಂಧದ ನ್ಯೂನತೆ (Impaired affective-cognitive retardness) ಪುಸ್ತಕದಲ್ಲಿ ಈ ಎರಡೂ ಸಿದ್ಧಾಂತಗಳ ಸಾಧಕ-ಬಾಧಕಗಳನ್ನು ಚರ್ಚಿಸುವುದಿಲ್ಲ. ಎಲ್ಲರೂ ಒಪ್ಪಿಕೊಂಡಿರುವ ನ್ಯೂನತೆಗಳು ಹೇಗೆ ಆಟಿಸಂ ಮಗುವಿನ ನಡವಳಿಕೆಗೆ ಕಾರಣವಾಗುತ್ತದೆ ಎಂಬುದನ್ನು ವಿವರಿಸಲಾಗುತ್ತದೆ. ಆಟಿಸಂ ಮಗುವಿನೊಂದಿಗೆ ವ್ಯವಹರಿಸುವಾಗ ನಾವು ಕೂಡ ನಮ್ಮ ಭಾವನಾತ್ಮಕ ನಡವಳಿಕೆಗಳ ತೀವ್ರತೆಯನ್ನು ವ್ಯಕ್ತಪಡಿಸುವ ವಿಚಾರದಲ್ಲಿ ಮಾರ್ಪಾಟು ಮಾಡಿಕೊಳ್ಳಬೇಕಾಗುತ್ತದೆ.[೨೪] ಆಟಿಸಂ ಮಕ್ಕಳ ಸಮಸ್ಯೆಯನ್ನು ಕೆಟ್ಟುಹೋದ ಅಥವಾ ವಿಚಿತ್ರವಾಗಿ ಕೆಲಸ ಮಾಡುವ ಸ್ಟೀರಿಯೋ ಆಂಪ್ಲಿಫೈಯರ್‍ಗೆ ಹೋಲಿಸಬಹುದು. ನಿರಾಶೆ, ಹಿಂಸೆಗಳನ್ನು ದೊಡ್ಡ ಧ್ವನಿಯಲ್ಲಿ ಪ್ರಕಟಿಸುವುದು ಆಟಿಸಂನ ವೈಶಿಷ್ಟ, ಆಟಿಸಂ ಮಕ್ಕಳಲ್ಲಿ ಭಾವನೆಗಳ ಪ್ರಕಟಣೆಯಲ್ಲಿ ನಿರ್ದಿಷ್ಟತೆ, ನಿಖರತೆ ಇರುವುದಿಲ್ಲ.[೨೫] ಆತಂಕ , ಒತ್ತಡ ಉಂಟಾದಾಗ ಆಟಿಸಂ ಮಕ್ಕಳಲ್ಲಿ ಅದು ನಗುವಿನ ಪ್ರತಿಕ್ರಿಯೆಯಾಗಿ ಹೊರಹೊಮ್ಮಬಹುದು. ಆಟಿಸಂನ ವಿಚಿತ್ರವೆಂದರೆ ಪ್ರೀತಿ ತೋರುವುದು ಉದ್ದೇಶವಾದರೂ ಮಗು ಆಕ್ರಮಣಶೀಲತೆ ಪ್ರಕಟಿಸಬಹುದು. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ ಕಥೆಗಳ ಮುಖಾಂತರ, ಸಂಗೀತ, ಚಿತ್ರಕಲೆ, ಅಭಿನಯದ ಮೂಲಕ ಸಂತೋಷ, ದುಃಖ, ಪ್ರೀತಿ, ಚಿಂತೆಗಳನ್ನು ಪ್ರಕಟಿಸಲು ಕಲಿಸಬೇಕು. ಆಟಿಸಂ ವಿಶಿಷ್ಟ ಲಕ್ಷಣವೆಂದರೆ ಪರಸ್ಪರ ಒಡನಾಟ-ವ್ಯವಹಾರದಲ್ಲಿ ಗುಣಮಟ್ಟ ಕಡಿಮೆ ಇರುವುದು. ಇದಕ್ಕೆ ಕಾರಣ ಸಾಮಾಜಿಕ ವ್ಯವಹಾರಗಳನ್ನು ನಿಭಾಯಿಸುವ ಕೌಶಲ್ಯ ಈ ಮಕ್ಕಳಿಗೆ ಇರುವುದಿಲ್ಲ. ಸಂವಹನ, ಆಲೋಚನೆಗಳು ಮತ್ತು ಅನಿಸಿಕೆಗಳಲ್ಲಿ ಕೊರತೆಗಳಿರುತ್ತವೆ. ಶೇಕಡ ೨೫ ಆಟಿಸಂ ಮಕ್ಕಳು ಮಾತನಾಡುವ ಸಾಮಾರ್ಥ್ಯ ಪಡೆಯುವುದಿಲ್ಲ. ಜೊತೆಗೆ ಮೂಕಾಭಿನಯವೂ ಇರುವುದಿಲ್ಲ.[೨೬] ಆದ್ದರಿಂದ ಈ ಮಕ್ಕಳಿಗೆ ಸಂಕೇತಗಳ, ಚಿತ್ರಗಳ ಮೂಲಕ ಸಂವಹನ ಮಾಡುವುದನ್ನು ಕಲಿಸಬೇಕಾಗುತ್ತದೆ. ಕೆಲವು ಮಕ್ಕಳು ತಡವಾಗಿ ಮಾತನಾಡಲು ಸಾಮಾರ್ಥ್ಯ ಬೆಳೆಸಿಕೊಂಡರೂ ಮುಂದುವರೆಸಲು ವಿಫಲವಾಗುತ್ತಾರೆ. ಅವರು ಭಾಷೆಯನ್ನು ತಮ್ಮದೇ ಆದ ರೀತಿ ಮತ್ತು ಅರ್ಥದಲ್ಲಿ ಬಳಸುತ್ತಾರೆ. ನಾನು ಎನ್ನಬೇಕಾದ ಕಡೆ ನೀನು ಎನ್ನುತ್ತಾರೆ. ವಿಚಿತ್ರವಾದ ಉಚ್ಚಾರವಿರುತ್ತದೆ. ಇತರರು ಹೇಳಿದನ್ನು ಪುನರುಚ್ಚರಿಸುತ್ತಾರೆ. ಇದನ್ನು ಇಕೋಲೇಲಿಯಾ ಎನ್ನುತ್ತಾರೆ. ಮಾತಿನ ಬೆಳವಣಿಗೆಯಲ್ಲಿ ಇದೊಂದು ಪದವನ್ನು ಪುನರುಚ್ಚರಿಸುತ್ತಾರೆ. ವಿಶೇಷವೆಂದರೆ ಒತ್ತಡದಲ್ಲಿದ್ದರೆ ಮಗು ಪ್ರತಿಧ್ವನಿಯಂತೆ ಇಡೀ ಸಂಭಾಷಣೆಯನ್ನು ಪುನರುಚ್ಚರಿಸಬಹುದು. ಆಟಿಸಂ ಇರುವ ಮಕ್ಕಳಿಗೆ ದೃಶ್ಯ, ಧ್ವನಿ, ಸ್ಪರ್ಶ ಈ ಮೂರು ಇಂದ್ರಿಯ ಸಂವೇದನೆಗಳ ಸಮತೋಲನ ಮತ್ತು ಅವುಗಳ ನಡುವಿನ ಸಂವಹನದ ತೊಂದರೆ ಇರುತ್ತದೆ. ಒಂದು ಇಂದ್ರಿಯದಿಂದ ಬಂದ ಮಾಹಿತಿಯನ್ನು ಇನ್ನೊಂದು ಇಂದ್ರಿಯದ ಅನುಭವಕ್ಕೆ ಜೋಡಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಇಂತಹ ಮಕ್ಕಳಿಗೆ ಒಂದೇ ಇಂದ್ರಿಯದ ಮೂಲಕ ಕಲಿಸಿದಾಗ ಆ ಮಕ್ಕಳು ಬೇಗ ಕಲಿಯುತ್ತಾರೆ. ನೋಡಿ ಮಾಡುವುದು ಸುಲಭ . ಆಟಿಸಂ ಇರುವ ವ್ಯಕ್ತಿಗಳಿಗೆ ಯಾವುದಾದ ಮೇಲೆ ಯಾವುದು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಶೌಚಾಲಯಕ್ಕೆ ಹೋದಾಗ ಏನೇನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಆ ಮಕ್ಕಳಿಗೆ ಮುಂದೇನು ಮಾಡಬೇಕೆಂಬುದರ ಕುರಿತು ಸೂಚನೆ ಕೊಡಬೇಕು. ಯಾವುದೇ ಚಟುವಟಿಕೆಯ ಬಗ್ಗೆ ಸರಳ ವೇಳಪಟ್ಟಿ ಮಾಡಿಕೊಡಬೇಕು. ಸ್ನಾನ ಮಾಡುವ ವಿಧಾನ, ಬಟ್ಟೆ ಹಾಕಿಕೊಳ್ಳುವ ವಿಧಾನ, ಶೌಚಾಲಯಕ್ಕೆ ಹೋದಾಗ ಅನುಸರಿಸಬೇಕಾದ ಕ್ರಮಗಳು, ಒಂದಾದ ಮೇಲೆ ಒಂದನ್ನು ಹೇಳಿಕೊಡಬೇಕು. ಆಟಿಸಂ ಮಕ್ಕಳು ಭಾಗಷಃ ಕುರುಡರಂತೆ, ಕಿವುಡರಂತೆ ವರ್ತಿಸುತ್ತಾರೆ ಅನೇಕ ಮಕ್ಕಳು ಪ್ರಾರಂಭದಲ್ಲಿ ಕಿವುಡರೆಂದು ತಂದೆ-ತಾಯಿ ತಿಳಿಯುತ್ತಾರೆ. ವಾಸ್ತವಾಗಿ ಈ ಮಕ್ಕಳಿಗೆ ಶ್ರವಣದೋಷವಾಗಲೀ ಇರುವುದಿಲ್ಲ. ತಾವು ನೋಡಿದ್ದನ್ನು, ಕೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೇ ಸಮಸ್ಯೆ. ಆಟಿಸಂ ವಯಸ್ಕರು ಸ್ವಕೇಂದ್ರಿತ ವ್ಯಕ್ತಿತ್ವವುಳ್ಳವರಾಗಿರುವುದರಿಂದ ಸಹವಯಸ್ಸಿನ ಹುಡುಗ/ಹುಡುಗಿಯರೊಂದಿಗೆ ಆಕರ್ಷಿತರಾಗುವುದಿಲ್ಲ. ಹಸ್ತಮೈಥುನ ಮಾಡಿಕೊಳ್ಳುತಾರಷ್ಟೆ. ಆದರೆ ಪ್ರೇಮ, ಕಾಮಗಳ ಗೊಡವೆಯೆ ಇರುವುದಿಲ್ಲ.

ಚಿಕಿತ್ಸೆ[ಬದಲಾಯಿಸಿ]

ಮನೋವೈದ್ಯರು, ವೃತ್ತಿಪರ ಚಿಕಿತ್ಸಾ ತಜ್ಞರು, ಫಿಸಿಯೋಥೆರೆಪಿಸ್ಟ್, ಆಪ್ತ ಸಲಹೆಗಾರರು ಎಲ್ಲರೂ ಒಗ್ಗೂಡಿ ನಡವಳಿಕೆ ಚಿಕಿತ್ಸೆ ನೀಡಿದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.[೨೭] ಆಟಿಸಂ ಕಾಯಿಲೆ ಮಕ್ಕಳ ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ತಡೆಹಿಡಿಯುತ್ತದೆ. ಸೂಕ್ತ ಚಿಕಿತ್ಸಾ ವಿಧಾನಗಳನ್ನು ಅನುಸರಿಸದೇ ಹೋದರಂತೂ ಅವರು ಪರಾವಲಂಬಿಯಾಗುವ ಅಪಾಯವಿರುತ್ತದೆ. ಇದನ್ನು ಗುಣಪಡಿಸಲು ಸದ್ಯಕ್ಕೆ ಯಾವುದೇ ಔಷಧಿಗಳಾಗಲೀ, ಶಸ್ತ್ರಚಿಕಿತ್ಸೆಗಳಾಗಲೀ ಇಲ್ಲ. ನಿರಂತರ ಕಲಿಕೆ, ವರ್ತನಾ ಚಿಕಿತ್ಸಾ ತರಬೇತಿ, ಶಿಕ್ಷಣ ಇವುಗಳ ಮೂಲಕವೇ ಹಂತಹಂತವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಹಂತಹಂತವಾಗಿ ನಿಧಾನವಾಗಿ ತರಬೇತಿ ನೀಡಿದಲ್ಲಿ ಮಗು ಯಾರಿಗೂ ಹೊರೆಯಾಗದೆ ಬಾಳಬಹುದು. ದೀರ್ಘವಾದ ಉಸಿರಾಟ, ಮಸಾಜ್, ಆಟಿಸಂ ರಿಲ್ಯಾಕ್ಸ್ ಮಾಡಲು ಸಹಾಯ ಮಾಡುತ್ತದೆ.

ಆಟಿಸಂನ ಜಾಗೃತಿ ರಿಬ್ಬನ್

ವ್ಯಾಯಾಮ[ಬದಲಾಯಿಸಿ]

ಆಟಿಸಂ ವ್ಯಕ್ತಿಗಳ ತಳಮಳ-ಚಡಪಡಿಕೆ ಕಡಿಮೆ ಮಾಡಲು ಕ್ರಮಬದ್ಧ ಶಾರೀರಿಕ ವ್ಯಾಯಾಮ/ಚಟುವಟಿಕೆಗಳು ಉಪಯುಕ್ತ ಎಂಬುದನ್ನು ಅನೇಕ ಅಧ್ಯಯನಗಳು ಖಚಿತಪಡಿಸಿವೆ.

ಆಯುರ್ವೇದ ಚಿಕಿತ್ಸೆ[ಬದಲಾಯಿಸಿ]

ಪಂಚಕರ್ಮ ಚಿಕಿತ್ಸೆಯಲ್ಲಿ ನಸ್ಯ, ಅಭ್ಯಂಗ, ಶಿರೋಬಸ್ತಿಯಂತಹ ಚಿಕಿತ್ಸೆಗಳು ಆಟಿಸಂ ಮಕ್ಕಳಲ್ಲಿ ಪ್ರಯೋಜನಕಾರಿಯಾಗಿವೆ.[೨೮] ಬ್ರಾಹ್ಮೀ, ಜೋತಿಷ್ಮತಿ, ಶಂಖಪುಷ್ಟಿ ಮೊದಲಾದ ಔಷಧಿಗಳು ಕೂಡ ಉಪಯುಕ್ತವಾಗಿವೆ. ವೈದ್ಯರ ಸಲಹೆಯೊಡನೆಯೇ ಅವುಗಳನ್ನು ನೀಡಬೇಕು. ಅಭ್ಯಂಗ: ಇಡೀ ದೇಹಕ್ಕೆ ಕ್ಷೀರಬಲಾ ತೈಲದಿಂದ ಅಭ್ಯಂಗ ಮಾಡಿಸಬೇಕು(ಮಸಾಜ್) ಇದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಮಾಂಸಖಂಡಗಳಲ್ಲಿ ದೃಢತೆ, ಸ್ನಾಯುಗಳ ಚಲನೆ ಉತ್ತಮಗೊಳ್ಳುತ್ತದೆ. ಸ್ವೇದನ[೨೯]: ಸರ್ವಾಂಗ ಸ್ವೇದದ ಮೂಲಕ ಬೆವರಿಳಿಸುವುದರಿಂದ ಮೃದುತ್ಮ ಉಂಟಾಗುತ್ತದೆ, ಜಡತ್ವ ದೂರವಾಗುತ್ತದೆ. ಕೀಲುಗಳು ಚಲನಶಕ್ತಿ ಹೆಚ್ಚುತ್ತದೆ. ನಸ್ಯ: ಏಳು ವರ್ಷ ತುಂಬಿದ ಮಕ್ಕಳಿಗೆ ಮಾಡಬೇಕು. ಮೂಗಿನ ರಂಧ್ರಗಳ ಮೂಲಕ ಔಷಧ ಅಥಾವ ಔಷಧದಿಂದ ತಯಾರಿಸಿದ ಸ್ನೇಹವನ್ನು ನೀಡುವ ಚಿಕಿತ್ಸೆ. ಕೆನ್ನೆ ಭಾಗ, ಹಣೆ ಪ್ರದೇಶಗಳನ್ನು ತೈಲದಿಂದ ಮಸಾಜ್ ಮಾಡಿ, ಬಿಸಿ ಶಾಖ ನೀಡಿ ಬೆವರಿಸಬೇಕು. ತಲೆಯನ್ನು ಸ್ವಲ್ಪ ಮುಂದಕ್ಕೆ ಬಾಗಿರುವಂತೆ ಮಲಗಿಸಿ, ಮೂಗಿನ ರಂಧ್ರದಲ್ಲಿ ಹನಿಹನಿ ಔಷಧಿಯ ತೈಲ ಹಾಕಬೇಕು. ಇದನ್ನು ಏಳು ದಿನಗಳ ಕಾಲ ನೀಡಬೇಕು. ಶಿರೋಧಾರ: ಧಾರಾ ಪಾತ್ರೆಯಲ್ಲಿ ಔಷಧೀಯ ತೈಲ ಹಾಕಿ ನಿಧಾನವಾಗಿ ಧಾರಾಧಾರೆಯನ್ನು ಹಣೆಯ ಭಾಗದಲ್ಲಿ ಬೀಳುವಂತೆ ಮಾಡಬೇಕು. ದೊಡ್ಡ ವಯಸ್ಸಿನ ಮಕ್ಕಳಿಗೆ ಮತ್ತು ವಯಸ್ಕರಿಗೆ ಮಾಡಬೇಕು. ಇದನ್ನು ೩೦ ರಿಂದ ೪೫ ನಿಮಿಷಗಳ ಕಾಲ ಮಾಡಬೇಕು. ಒಂದು ವಾರ ಮಾಡಬೇಕಾಗುತ್ತದೆ. ಶಿರೋಪಿಚು ; ಔಷಧೀಯ ತೈಲದಿಂದ ಅದ್ದಿದ ಹತ್ತಿಯನ್ನು ನೆತ್ತಿಯ ಮೇಲಿರಿಸಿ ಬಟ್ಟೆಯನ್ನು ಕಟ್ಟಬೇಕು.

ಉಪಯುಕ್ತ ವಿಳಾಸಗಳು[ಬದಲಾಯಿಸಿ]

 1. ಆಶಾ ಇಂಡಿಯಾ ಆಟಿಸಂ ಫೋರಂ, ಕಿರ್ಲೋಸ್ಕರ್ ಕಾಲೋನಿ, ೩ನೇ ಸ್ತೇಜ್, ೪ನೇ ಬ್ಲಾಕ್, ಬಸವೇಶ್ವರ ನಗರ, ಬೆಂಗಳೂರು - ೫೬೦ ೦೭೯ ದೂರವಾಣಿ - ೯೩೪೩೭೬೪೪೧೫
 2. ಡಾ. ಎಸ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ, ಹೆಣ್ಣೂರು ಸಂಸ್ಥೆ, ಲಿಂಗರಾಜಪುರಂ, ಬೆಂಗಳೂರು - ೫೬೦ ೦೮೪
 3. ಮೂವ್ ಮೆಂಟ್ ಫಾರ್ ಆಟಿಸಂ, ಮನೆ ನಂ. ೨೧೬, ರಾಮಚಂದ್ರಪುರ, ಎಲ್ಲಹಳ್ಳಿ ಪೋಸ್ಟ್, ಬೆಂಗಳೂರು - ೫೬೦ ೦೧೩ ದೂರವಾಣಿ - ೨೮೩೯೧೦೫೦
 4. ಸೊಸೈಟಿ ಫಾರ್ ಆಟಿಸ್ಟಿಕ್ ಇನ್ ಇಂಡಿಯಾ, ನಂ. ೫೪೪, ೧೬ಎ ಮುಖ್ಯ ರಸ್ತೆ, ೩ನೇ ಬ್ಲಾಕ್, ಕೋರಮಂಗಲ, ಬೆಂಗಳೂರು - ೫೬೦ ೦೧೩ ದೂರವಾಣಿ - ೨೫೫೩೫೨೮೧/ ೨೫೫೪೨೭೩೪
 5. ಮಕ್ಕಳು ಮತ್ತು ಹರೆಯದವರ ಮನೋವೈದ್ಯ ವಿಭಾಗ, ನಿಮ್ಹಾನ್ಸ್, ಹೊರರೋಗಿ ಘಟಕ, ಹೊಸೂರು ರಸ್ತೆ, ಬೆಂಗಳೂರು - ೫೬೦ ೦೨೯ ದೂರವಾಣಿ - ೨೬೯೯೫೫೪೯/ ೨೬೯೯೫೨೬೫/ ೨೬೯೯೫೫೫೧
 6. ಮಕ್ಕಳ ಮಾರ್ಗದರ್ಶನ ಕೇಂದ್ರ, ಪ್ರಸನ್ನ ಆಪ್ತ ಸಲಹಾ ಕೇಂದ್ರ ಅಜಿತ ಶ್ರೀ, ಸಾಯಿರಂಗ ಕಲ್ಯಾಣ ಮಂಟಪದ ಎದುರು, ಬಸವನಗುಡಿ ಮುಖ್ಯ ರಸ್ತೆ, ಬೆಂಗಳೂರು - ೫೬೦ ೦೦೪ ದೂರವಾಣಿ - ೨೬೬೦೮೯೨೬
 7. ಅಖಿಲಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. Myers SM, Johnson CP (2007). "Management of children with autism spectrum disorders". Pediatrics 120 (5): 1162–82. doi:10.1542/peds.2007-2362. PMID 17967921.
 2. Wing L (1997). "The history of ideas on autism: legends, myths and reality". Autism 1 (1): 13–23. doi:10.1177/1362361397011004.
 3. Houston R, Frith U. Autism in History: The Case of Hugh Blair of Borgue. Blackwell; 2000. ISBN 978-0-631-22089-3.
 4. Wolff S (2004). "The history of autism". Eur Child Adolesc Psychiatry 13 (4): 201–8. doi:10.1007/s00787-004-0363-5. PMID 15365889
 5. Wolff S (2004). "The history of autism". Eur Child Adolesc Psychiatry 13 (4): 201–8. doi:10.1007/s00787-004-0363-5. PMID 15365889.
 6. Grandin T (2009). "How does visual thinking work in the mind of a person with autism? A personal account". Philos Trans R Soc Lond B Biol Sci 364 (1522): 1437–42. doi:10.1098/rstb.2008.0297. PMC 2677580. PMID 19528028
 7. Geschwind DH (2009). "Advances in autism". Annu Rev Med 60: 367–80. doi:10.1146/annurev.med.60.053107.121225. PMC 3645857. PMID 19630577.
 8. Rapin I, Tuchman RF (2008). "Autism: definition, neurobiology, screening, diagnosis". Pediatr Clin North Am 55 (5): 1129–46. doi:10.1016/j.pcl.2008.07.005. PMID 18929056.
 9. Noens I, van Berckelaer-Onnes I, Verpoorten R, van Duijn G (2006). "The ComFor: an instrument for the indication of augmentative communication in people with autism and intellectual disability". J Intellect Disabil Res 50 (9): 621–32. doi:10.1111/j.1365-2788.2006.00807.x. PMID 16901289.
 10. Spence SJ, Schneider MT (2009). "The role of epilepsy and epileptiform EEGs in autism spectrum disorders". Pediatr Res 65 (6): 599–606. doi:10.1203/PDR.0b013e31819e7168. PMC 2692092. PMID 19454962.
 11. Kuhn R (2004). "Eugen Bleuler's concepts of psychopathology". Hist Psychiatry 15 (3): 361–6. doi:10.1177/0957154X04044603. PMID 15386868. The quote is a translation of Bleuler's 1910 original.
 12. Asperger H (1938). "Das psychisch abnormale Kind" [The psychically abnormal child]. Wien Klin Wochenschr (in German) 51: 1314–7.
 13. Kanner L (1943). "Autistic disturbances of affective contact". Nerv Child 2: 217–50. Reprinted in Kanner L (1968). "Autistic disturbances of affective contact". Acta Paedopsychiatr 35 (4): 100–36. PMID 4880460.
 14. Happé F, Ronald A, Plomin R (2006). "Time to give up on a single explanation for autism". Nature Neuroscience 9 (10): 1218–20. doi:10.1038/nn1770. PMID 17001340. Vancouver style error (help)
 15. Fombonne E (2003). "Modern views of autism". Can J Psychiatry 48 (8): 503–5. PMID 14574825. Archived from the original on 2013-05-26
 16. Abrahams BS, Geschwind DH (2008). "Advances in autism genetics: on the threshold of a new neurobiology". Nature Reviews Genetics 9 (5): 341–55. doi:10.1038/nrg2346. PMC 2756414. PMID 18414403.
 17. Arndt TL, Stodgell CJ, Rodier PM (2005). "The teratology of autism". Int J Dev Neurosci 23 (2–3): 189–99. doi:10.1016/j.ijdevneu.2004.11.001. PMID 15749245.
 18. Newschaffer CJ, Croen LA, Daniels J, Giarelli E, Grether JK, Levy SE et al. (2007). "The epidemiology of autism spectrum disorders" (PDF). Annu Rev Public Health 28: 235–58. doi:10.1146/annurev.publhealth.28.021406.144007. PMID 17367287. Archived from the original on 2013-09-03
 19. Landa R (2007). "Early communication development and intervention for children with autism". Ment Retard Dev Disabil Res Rev 13 (1): 16–25. doi:10.1002/mrdd.20134. PMID 17326115
 20. Tager-Flusberg H, Caronna E (2007). "Language disorders: autism and other pervasive developmental disorders". Pediatr Clin North Am 54 (3): 469–81. doi:10.1016/j.pcl.2007.02.011. PMID 17543905.
 21. Handbook of Autism and Pervasive Developmental Disorders, Assessment, Interventions, and Policy. John Wiley & Sons; 2014 [Retrieved December 24, 2014]. ISBN 1118282205. p. 301.
 22. Burgess AF, Gutstein SE (2007). "Quality of life for people with autism: raising the standard for evaluating successful outcomes" (PDF). Child Adolesc Ment Health 12 (2): 80–6. doi:10.1111/j.1475-3588.2006.00432.x. Archived from the original on 2013-12-21
 23. Baron-Cohen, Simon; Leslie, Alan M.; Frith, Uta (1985). "Does the autistic child have a "theory of mind" ?". Cognition 21 (1): 37–46. doi:10.1016/0010-0277(85)90022-8. PMID 2934210.
 24. Myers SM, Johnson CP (2007). "Management of children with autism spectrum disorders". Pediatrics 120 (5): 1162–82. doi:10.1542/peds.2007-2362. PMID 17967921.
 25. Sigman M, Dijamco A, Gratier M, Rozga A (2004). "Early detection of core deficits in autism". Ment Retard Dev Disabil Res Rev 10 (4): 221–33. doi:10.1002/mrdd.20046. PMID 15666338.
 26. Rapin I, Tuchman RF (2008). "Autism: definition, neurobiology, screening, diagnosis". Pediatr Clin North Am 55 (5): 1129–46. doi:10.1016/j.pcl.2008.07.005. PMID 18929056.
 27. Myers SM, Johnson CP (2007). "Management of children with autism spectrum disorders". Pediatrics 120 (5): 1162–82. doi:10.1542/peds.2007-2362. PMID 17967921.
 28. Sharma, A. K. (2003). "Panchkarma Therapy in Ayurvedic Medicine". In Mishra, Lakshmi Chandra. Scientific Basis for Ayurvedic Therapies. Boca Raton, FL: CRC Press. p. 43. ISBN 0-8493-1366-X.
 29. Frawley, David (2000). Ayurvedic Healing. Twin Lakes WI: Lotus Press. pp. 129–130. ISBN 978-0-914955-97-9. Retrieved May 17, 2011.
"https://kn.wikipedia.org/w/index.php?title=ಆಟಿಸಂ&oldid=714833" ಇಂದ ಪಡೆಯಲ್ಪಟ್ಟಿದೆ