ನಸ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಸ್ಯ - ಹದಗೊಳಿಸಿದ ಅಥವಾ ಬರೇ ಒಣಗಿಸಿದ ತಂಬಾಕಿನಿಂದ, ಕೆಲವೇಳೆ ಸುವಾಸನಾಯುಕ್ತವಾಗಿ ಸಹ ತಯಾರಿಸಿದ ಅತಿಸೂಕ್ಷ್ಮ ಚೂರ್ಣ. ಮೂಗಿಗೆ ಏರಿಸಿಕೊಳ್ಳುವುದಲ್ಲದೆ, ಕೆಲವರು ನಸ್ಯವನ್ನು ಅಪೂರ್ವವಾಗಿ ಅಗಿದು ತಿನ್ನುವುದೂ ಇದೆ.

ಅಭ್ಯಾಸದ ಹರಡುವಿಕೆ[ಬದಲಾಯಿಸಿ]

ಇದರ ಅಭ್ಯಾಸ 16ನೆಯ ಶತಮಾನದಲ್ಲಿ ಅಮೆರಿಕದಿಂದ ಯೂರೋಪಿಗೆ ಬಂದು 17ನೆಯ ಶತಮಾನದ ಸುಮಾರಿಗೆ ಇಂಗ್ಲೆಂಡನ್ನು ತಲುಪಿತು. ಮುಂದಿನ ಶತಮಾನದಲ್ಲಿ ನಸ್ಯ ಪ್ರಪಂಚದಲ್ಲಿ ಎಲ್ಲೆಲ್ಲೂ ಹರಡಿತು.

ತಯಾರಿಕೆ[ಬದಲಾಯಿಸಿ]

ಉತ್ತಮ ವರ್ಗದ ನಸ್ಯದ ತಯಾರಿಕೆಗೆ ಒಳ್ಳೆಯ ಹೊಗೆಸೊಪ್ಪಿನ ಚೆನ್ನಾದ ಭಾಗವನ್ನೇ ಆಯ್ದುಕೊಳ್ಳುವುದುಂಟು. ಆದರೆ ಅಗ್ಗದ ಸಾದಾ ಮಾಲಿಗೆ ದಪ್ಪಕಾಂಡದ ಭಾಗಗಳನ್ನೋ ಕಡ್ಡಿಗಳನ್ನೋ ಚೂರುಪಾರುಗಳನ್ನೋ ಬಳಸುವುದು ವಾಡಿಕೆ. ನಸ್ಯ ಪುಡಿಯಾಗಿರಬಹುದು ಇಲ್ಲವೇ ತೇವಗೂಡಿರಬಹುದು. ಇವೇ ಅನುಕ್ರಮವಾಗಿ ಪುಡಿ ನಸ್ಯ, ಉಂಡೆ ನಸ್ಯ.

ಫ್ರೆಂಚರ ಉಂಡೆನಸ್ಯದ ತಯಾರಿಕೆಯಲ್ಲಿ ತಂಬಾಕಿನ ಎಲೆಗಳನ್ನು ಎರಡು ಬಾರಿ ಹುಳಿ ಬರಿಸಲಾಗುತ್ತದೆ. ಇದರಿಂದ ಸುವಾಸನೆ ಮತ್ತು ಘಾಟು ಹೆಚ್ಚುತ್ತವೆ. ಅಲ್ಲದೆ ಅದರಿಂದ ತಂಬಾಕಿನ ನಿಕೊಟೀನನ್ನೂ ಆಮ್ಲಗಳನ್ನೂ ಹೆಚ್ಚಿನಪಾಲು ಕಡಿಮೆಮಾಡಬಹುದಾಗಿದೆ. ಎಲೆ ಮತ್ತು ಕಾಂಡಗಳನ್ನು ಕೊಳೆತು ಹೋಗದಂತೆ ಉಪ್ಪುನೀರಿನಲ್ಲಿ ನೆನೆಸಿ ರೊಟ್ಟಿಗಳಾಗಿ ಒತ್ತಿ ಕತ್ತರಿಸಿ, ಹುಳಿ ಹಿಡಿದು ವಾಸನೆ ಕಟ್ಟುವಂತೆ ತೆರೆದ ಪಾತ್ರೆಗಳಲ್ಲಿ 5-6 ತಿಂಗಳು ಗಾಳಿಗೊಡ್ಡುವರು. ಆಗ ಇದರ ಕಾವು ಕೆಲವೇಳೆ 36ಲಿಅಗೆ ಏರುತ್ತದೆ. ಆಮೇಲೆ ಹೊಗೆಸೊಪ್ಪನ್ನು ತೆಗೆದು, ಅದರಲ್ಲಿಯ ಸುವಾಸನೆ ಅಲ್ಲೇ ಉಳಿಯುವಂತೆ ಗಾಳಿಗೆ ಸೋಕದಂತೆ ಇರಿಸಿ, ಚೆನ್ನಾಗಿ ಕುಟ್ಟಿ ಅರೆದು ಬಂದ ಪುಡಿಯನ್ನು ಮತ್ತೆ ತನುವೇರಿಸಿ, ಮುಚ್ಚಿದ ಮರದ ಪೆಟ್ಟಿಗೆಗಳಲ್ಲಿ ಎರಡನೆಯ ಸಲ 10 ತಿಂಗಳೂ ಹುಳಿಹಿಡಿದು ಇನ್ನಷ್ಟು ಘಾಟು ಬರುವಂತೆ ಇಡುವರು. ಆ ಸಮಯದಲ್ಲಿ ಇದರ ಕಾವನ್ನು 490-550ಅಗೆ ನಿಯಂತ್ರಿಸುವರು. ನಸ್ಯ ಏಕರೀತಿಯಲ್ಲಿರುವಂತೆ, ಅದನ್ನು ಆಗಾಗ್ಗೆ ಬೆರೆಸಲು ಕಲಕುತ್ತಿರುವರು. ಕೊನೆಗೆ ಅದನ್ನು ಒಂದು ತಿಂಗಳ ಕಾಲ ಮಾಗಲು ಬಿಟ್ಟು ಬಳಿಕ ಮಾರಾಟಕ್ಕೆ ಕಳುಹಿಸಬಹುದು.

ನಸ್ಯದ ತಯಾರಿಕೆಗೆ 18-20 ತಿಂಗಳು ಬೇಕು. ಈ ನಡುವೆ ತಂಬಾಕನ್ನು ಮತ್ತೆ ಮತ್ತೆ ಹುಳಿ ಬರಿಸುವುದರಿಂದ ಅದರ ಘಟಕಗಳಾದ ಮೇಲಿಕ್, ಸಿಟ್ರಿಕ್ ಆಮ್ಲಗಳೂ ಸುಮಾರು ಮೂರನೆಯ ಎರಡರಷ್ಟು ನಿಕೊಟೀನೂ ಹಾಳಾಗುತ್ತವೆ. ಅದರಲ್ಲೇ ಹುಟ್ಟಿದ ಅಸೆಟಿಕ್ ಆಮ್ಲ ಮತ್ತು ಪ್ರತ್ಯಾಮ್ಲಗಳಿಂದ ನಸ್ಯದಲ್ಲಿ ಬಿಡಿಯಾದ ಅಮೋನಿಯ ಉಳಿಯುತ್ತದೆ. ಇದರೊಂದಿಗೆ ಬಿಡಿಯಾಗಿ ಕೊಂಚ ನಿಕೋಟೀನೂ ಘಾಟು ನಸ್ಯಕ್ಕೆ ಬೇಕಿರುವ ವಿಶೇಷ ವಿಶಿಷ್ಟ ಗುಣಗಳನ್ನು ಕೊಡುವುವು. ಸ್ಕಾಚ್ ಮತ್ತು ಇತರ ಪುಡಿ ನಸ್ಯಗಳಿಗೆ ಸಾಮಾನ್ಯವಾಗಿ ಸುಟ್ಟ ಸುಣ್ಣ ಇಲ್ಲವೇ ಮೆಗ್ನಿಷಿಯವನ್ನು ಬೆರೆಸುವುದುಂಟು. ಆಗ ಅವು ಚುರುಕಾಗಿ ಮೂಗನ್ನು ಒಣಗಿಸುವಂತಾಗುತ್ತದೆ. ನಸ್ಯಕ್ಕೆ ಕಸ್ತೂರಿ, ಲ್ಯಾವೆಂಡರ್, ಪನ್ನೀರು, ಅತ್ತರು, ಟೋಂಕ ಬೀಜ, ಲವಂಗ ಕಿತ್ತಳೆ ಹೂವು, ಮಲ್ಲಿಗೆ ಮತ್ತಿತರ ಪರಿಮಳಗಳನ್ನೂ ಸುಗಂಧ ತೈಲಗಳನ್ನೂ ಮೆಂತಾಲನ್ನೂ ಕಟ್ಟುವುದುಂಟು. ಹೀಗೆ ಸೇರಿಸುವ ಪದಾರ್ಥಗಳು ಯಾವುವು ಎಷ್ಟೆಷ್ಟು ಎನ್ನುವುದು ನಸ್ಯ ತಯಾರಕರ ಗುಟ್ಟು.

ಆರೋಗ್ಯದ ಮೇಲೆ ಪರಿಣಾಮಗಳು[ಬದಲಾಯಿಸಿ]

ನಸ್ಯ ಸೇದುವುದರಿಂದ ತಂಬಾಕಿನಲ್ಲಿರುವ ಕ್ಷಾರರೂಪಿಯಾದ (ಆಲ್ಕಲಾಯ್ಡ್) ನಿಕೊಟೀನ್ ವಿಷದ ಪರಿಣಾಮಗಳನ್ನು ಕಾಣಬಹುದು. ಆದರೆ ನಸ್ಯವನ್ನು ಮೂಗಿಗೇರಿಸುವುದೂ ಹಲ್ಲುಗಳಿಗೆ ಹಾಕಿ ತಿಕ್ಕುವುದೂ ಸಿಗರೇಟುಗಳನ್ನು ಸೇದುವಷ್ಟು ಕೆಟ್ಟದಲ್ಲ. ನಸ್ಯಸೇದಕರು ನಸ್ಯವನ್ನು ಮೂಗಿಗೇರಿಸಿಕೊಳ್ಳುವರೇ ಹೊರತು ಅದನ್ನು ಅಲ್ಲಿಂದ ಮುಂದಕ್ಕೆ ಅಂದರೆ ಫುಪ್ಪುಸಗಳಿಗೋ ಹೊಟ್ಟೆಗೋ ಸೇರಲು ಬಿಡುವುದಿಲ್ಲ. ಅಲ್ಲದೆ ವಾಯುನಾಳಕ್ಕೆ ನುಗ್ಗುವಷ್ಟು ನಸ್ಯ ನವುರು ದೂಳಾಗಿರುವುದಿಲ್ಲ. ರಕ್ತಗತವಾಗಿ ದೇಹಕ್ಕೆ ಅದರಿಂದ ಯಾವ ತೊಡಕು ಆಗದಿದ್ದರೂ ಬಹಳ ವರ್ಷಗಳ ಬಳಕೆಯಿಂದ ಮೂಗಿನ ಲೋಳೆಪೊರೆ (ಮ್ಯೂಕೋಸ್) ಹಾಳಾಗುತ್ತದೆ. ಹಾಗಾದರೂ ನಸ್ಯದಿಂದ ಮೂಗಿನಲ್ಲಿ ಏಡಿಗಂತಿ (ಕ್ಯಾನ್ಸರ್) ಎದ್ದಿರುವ ವರದಿಗಳಿಲ್ಲ. ನಸ್ಯದ ತೊಂದರೆಗಳಿಗೆಲ್ಲ ಅದರಲ್ಲಿರುವ ನಿಕೊಟೀನೇ ಕಾರಣ. ಇದರ ವಿಷ ಮೈಯಲ್ಲಿರುವ ಅನುವೇದಕ (ಸಿಂಪತೆಟಿಕ್) ನರಮಂಡಲವನ್ನು ಮೊದಮೊದಲು ಚೋದಿಸುತ್ತ ಕ್ರಮೇಣ ನಿಸ್ಸತ್ತ್ವಗೊಳಿಸುತ್ತದೆ. ಇದರಿಂದಲೇ ತಂಬಾಕಿನ ಅಭ್ಯಾಸ ಚಟ ಹಿಂದೆಂದೂ ಇಲ್ಲದವರಲ್ಲಿ ಬೆವರಿಕೆ, ಮೈಮರೆವು ಓಕರಿಕೆ, ವಾಂತಿ ಕಂಡುಬರುವುದಾಗಿದೆ. ಆದರೆ ಬರುಬರುತ್ತ ಕಾಣಬರುವ ಬೇರೂರಿದ ಪರಿಣಾಮಗಳು ನಸ್ಯ ಸಿಗರೇಟು ಎರಡರಿಂದಲೂ ಒಂದೇ ಬಗೆಯವಾಗಿರುವುವು. ಮಸಕು ನೋಟ, ಹೊಟ್ಟೆಯ ಹುಣ್ಣಿನ ಕೆರಳು, ಅಪೂರ್ವವಾಗಿ ಎದೆನೋವು ಇವೇ ಅವು. ಮೇಲಿಂದಮೇಲೆ ಹೊಗೆಸೇದುವವರಂತೆ ನಸ್ಯವನ್ನು ಹಾಕುವವರು ಯಾವಾಗಲೂ ಅಷ್ಟೇ ಚಿಟಿಕೆಗಳನ್ನು ಮೂಗಿಗೇರಿಸುತ್ತಿರಲಾರರು.

ತಂಬಾಕಿನ ಜಾತಿಗೆ ತಕ್ಕಂತೆ ನಸ್ಯಗಳಲ್ಲಿನ ನಿಕೊಟೀನಿನ ಪ್ರಮಾಣವೂ ಬೇರೆ ಬೇರೆ ಆಗಿರುತ್ತದೆ. ಸಾಮಾನ್ಯವಾಗಿ ಗ್ರಾಮ್ ತೂಕದ ಸಿಗರೇಟಿನಲ್ಲಿ 1 ಮಿಲಿಗ್ರಾಮ್, ಚುಟ್ಟಾದಲ್ಲಿ 1.5 ಮಿಲಿಗ್ರಾಮ್ ಇದ್ದರೆ ತೂಕದ ನಸ್ಯದಲ್ಲಿ ಇನ್ನೂ ಹೆಚ್ಚಾಗಿ (3-10 ಮಿಲಿಗ್ರಾಮ್) ಇರುವುದು.

ಮೂಗೇರಿಸಿದ, ಹಲ್ಲು ಒಸಡುಗಳಿಗೆ ಹಚ್ಚಿ ತಿಕ್ಕಿದ ನಸ್ಯದಲ್ಲಿನ ನಿಕೊಟೀನಿನ ಅಧಿಕಾಂಶ ಮೈಯಲ್ಲಿ ರಕ್ತಗತವಾಗುತ್ತದೆ. ಅದೇ ಸಿಗರೇಟುಗಳಿಂದ ರಕ್ತಕ್ಕೆ ಸೇರುವುದು ಒಂದೇ ಸಮನಾಗಿರುವುದಿಲ್ಲ. ಸಾಮಾನ್ಯ ಸಿಗರೇಟ್ ಒಂದರಿಂದ ಸುಮಾರು ಅರೆ ಮಿಲಿಗ್ರಾಮಿನಷ್ಟು ಒಳಸೇರಬಹುದು. ಅಂದರೆ ನಿಕೊಟೀನ್ ಮೈಗೂಡುವುದನ್ನು ಮಾತ್ರ ಲೆಕ್ಕಹಾಕಿದರೆ 3-10 ಮಿಲಿಗ್ರಾಮ್ ನಿಕೋಟೀನಿರುವ ಸುಮಾರು 10 ಬಾರಿ ಹಾಕುವಷ್ಟರ ಚಿಟಿಕೆ (ಒಂದು ಗ್ರಾಮಿನಷ್ಟು) 6-10 ಸಿಗರೇಟುಗಳ ಸೇವನೆಗೆ ಸಮವಾಗುತ್ತದೆ.\

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ನಸ್ಯ&oldid=804583" ಇಂದ ಪಡೆಯಲ್ಪಟ್ಟಿದೆ