ಲ್ಯಾವೆಂಡರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Lavande off FR 2012.jpg

ಲ್ಯಾವೆಂಡರ್ ಲ್ಯಾಮಿನೇಸೀ ಅಥವಾ ಲೆಬಿಯೆಟೆ ಕುಟುಂಬದ ಲ್ಯಾವೆಂಡ್ಯುಲಾ ಅಫಿಸಿನಾಲಿಸ್ ಪ್ರಭೇದದ ಸುವಾಸನಾಭರಿತ ಹೂಬಿಡುವ ಒಂದು ಸಣ್ಣ ಸಸ್ಯ (ಲ್ಯಾವೆಂಡ್ಯುಲಾ ಅಂಗುಷಿಟಪೋಲಿಯ). ಎಲೆಯ ಅಂಚು ಪೂರ್ಣವಾಗಿರುವುದು. ಹೂಗಳು ಗೊಂಚಲಾಗಿದ್ದು ಬಿಡಿ ಹೂವಿಗೆ ತೊಟ್ಟು ಇರುವುದಿಲ್ಲ. ಪುಷ್ಪಪಾತ್ರೆ ಕೊಳವೆಯಂತಿದೆ. ಇದರಲ್ಲಿ ೧೩-೧೫ ನರಗಳಿರುತ್ತವೆ. ಹೂವಿನ ಬಣ್ಣ ನೀಲಿ. ಹೂವಿನಲ್ಲಿ ೫ ದಳಗಳಿದ್ದು, ಇವು ಎರಡು ತುಟಿಗಳಂತೆ ಕಾಣುವುವು. ಕೆಳತುಟಿಯ ಭಾಗದಲ್ಲಿ ೩ ದಳಗಳಿವೆ. ೪ ಕೇಸರ ದಳಗಳು ಒಳ ಅಂಚಿಗೆ ಅಂಟಿಕೊಂಡಿರುವುವು. ಶಲಾಕೆ ಅಂಡಾಶಯದ ತಳಭಾಗದಿಂದ ಬಂದಿರುತ್ತದೆ.

ಬೆಳೆಯುವ ಪ್ರದೇಶ ಮತ್ತು ಬೇಸಾಯ[ಬದಲಾಯಿಸಿ]

ಇದರ ಮೂಲ ಸ್ಥಾನ ಯುರೋಪಿನ ಪರ್ವತ ಪ್ರದೇಶ, ಸ್ಪೇನಿನ ಪೂರ್ವ ಸಮುದ್ರದ ದಡ, ಇಟಲಿ ಮತ್ತು ಉತ್ತರ ಆಫ್ರಿಕ. ಇದನ್ನು ದಕ್ಷಿಣ ಫ್ರಾನ್ಸ್ ಮತ್ತು ಕಾಶ್ಮೀರದಲ್ಲಿ ಕೃಷಿ ಮಾಡಿ ಬೆಳೆಸುತ್ತಾರೆ. ಸಸ್ಯಗಳನ್ನು ಬೀಜ ಅಥವಾ ತುಂಡರಿಸಿದ ಕೊಂಬೆಗಳಿಂದ ವೃದ್ಧಿಮಾಡಲಾಗುವುದು. ಮೊದಲು ಸಸ್ಯವಾಟಿಯಲ್ಲಿ (ನರ್ಸರಿ) ಬೆಳೆಸಿ ಬಳಿಕ ಹದಮಾಡಿದ ಜಮೀನಿಗೆ ವರ್ಗ ಮಾಡುತ್ತಾರೆ. ಸಸ್ಯಗಳ ನಡುವಿನ ಅಂತರ ೦.೬೬ ಮೀ ಇರಬೇಕು. ಮೂರು ವರ್ಷಗಳ ತರುವಾಯ ಹೂಗೊಂಚಲಿನಿಂದ ಎಣ್ಣೆಯನ್ನು ಭಟ್ಟಿಯಿಳಿಸುತ್ತಾರೆ.

ಉಪಯೋಗಗಳು[ಬದಲಾಯಿಸಿ]

ಅರ್ಧ ಒಣಗಿದ ಹೂಗೊಂಚಲುಗಳಿಂದ ಲ್ಯಾವೆಂಡರ್ ಎಣ್ಣೆಯನ್ನು ಬೆಂಜೀನ್ ದ್ರವ ಬಳಸಿ ಬೇರ್ಪಡಿಸುತ್ತಾರೆ. ಎಣ್ಣೆಯಲ್ಲಿಯ ಮುಖ್ಯ ಪದಾರ್ಥ ಲಿನಾಯಿಲ್ ಅಸಿಟೇಟ್ ಲ್ಯಾವೆಂಡರ್ ಘಟಕ. ಇದರ ಕಾರಣವಾಗಿ ಎಣ್ಣೆ ಸುವಾಸನಾಯುಕ್ತವಾಗಿರುವುದು. ರುಚಿ ಘಾಟು ಸಹಿತ ಕಹಿ. ಎಣ್ಣೆಯಲ್ಲಿ ಲ್ಯಾವೆಂಡರ್ ವಾಟರ್ ಮತ್ತು ಯುಡಿಕೊಲೊನ್ ಎಂಬ ಘಟಕಗಳೂ ಇವೆ.

ಲ್ಯಾವೆಂಡರ್ ಎಣ್ಣೆಯ ಹೆಚ್ಚು ಭಾಗ ಸಾಬೂನುಗಳ ತಯಾರಿಕೆಯಲ್ಲಿ ಬಳಕೆ ಆಗುತ್ತದೆ. ಸುವಾಸನಾಭರಿತ ಹೂಗಳನ್ನು ಕಿರು ಚೀಲಗಳಲ್ಲಿ ಇಟ್ಟು ಬಟ್ಟೆ ದಾಸ್ತಾನು ಬೀರುಗಳಲ್ಲಿಡುವ ರೂಢಿ ಉಂಟು. ಎಣ್ಣೆಗೆ ಪೂತಿನಾಶಕಗುಣವಿದೆ. ಲ್ಯಾವೆಂಡರ್ ಸುವಾಸನೆಯನ್ನು ಕ್ಯಾಂಡಿ ಮತ್ತು ಕೇಕ್‍ಗಳಲ್ಲಿ ಬಳಸುತ್ತಾರೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: