ಅಬ್ದುಲ್ಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್
عبد الله بن عبد المطلب
Bornಕ್ರಿ.ಶ. 546
Diedಕ್ರಿ.ಶ. 570
ಯಸ್ರಿಬ್ (ಮದೀನಾ)
Occupationವ್ಯಾಪಾರ
Spouseಆಮಿನ ಬಿಂತ್ ವಹಬ್
Childrenಮುಹಮ್ಮದ್ ಬಿನ್ ಅಬ್ದುಲ್ಲಾ
Parents
Familyಕುರೈಷ್ ಬುಡಕಟ್ಟಿನ ಬನೂ ಹಾಶಿಂ ಗೋತ್ರ

ಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್ (ಅರೇಬಿಕ್ عبد الله بن عبد المطلب) (c. 546 – 570) — ಪ್ರವಾದಿ ಮುಹಮ್ಮದ್ ಪೈಗಂಬರರ ತಂದೆ ಮತ್ತು ಕುರೈಷ್ ಮುಖಂಡ ಅಬ್ದುಲ್ ಮುತ್ತಲಿಬ್‌ರ ಮಗ.

ವಂಶಾವಳಿ[ಬದಲಾಯಿಸಿ]

ಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಂ ಬಿನ್ ಅಬ್ದ್ ಮನಾಫ್ ಬಿನ್ ಕುಸಯ್ ಬಿನ್ ಕಿಲಾಬ್ ಬಿನ್ ಮುರ್‍ರ ಬಿನ್ ಕಅಬ್ ಬಿನ್ ಲುಅಯ್ ಬಿನ್ ಗಾಲಿಬ್ ಬಿನ್ ಫಿಹ್ರ್ ಬಿನ್ ಮಾಲಿಕ್ ಬಿನ್ ನದ್ರ್ ಬಿನ್ ಕಿನಾನ ಬಿನ್ ಖುಝೈಮ ಬಿನ್ ಮುದ್ರಿಕ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ದ್ ಬಿನ್ ಅದ್ನಾನ್.

ಜನನ[ಬದಲಾಯಿಸಿ]

ಅಬ್ದುಲ್ಲಾ ಅರೇಬಿಯನ್ ಪರ್ಯಾಯ ದ್ವೀಪದ ಮಕ್ಕಾ ನಗರದಲ್ಲಿ ಕ್ರಿ.ಶ. 546 ರಲ್ಲಿ ಹುಟ್ಟಿದರು. ತಂದೆಯ ಹೆಸರು ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಂ. ಮಕ್ಕಾದ ಪ್ರಭಾವೀ ಕುರೈಷ್ ಬುಡಕಟ್ಟಿನ ಮುಖಂಡರಲ್ಲಿ ಒಬ್ಬರು. ತಾಯಿಯ ಹೆಸರು ಫಾತಿಮ ಬಿಂತ್ ಅಮ್ರ್. ಇವರು ಕೂಡ ಕುರೈಷ್ ಬುಡಕಟ್ಟಿಗೆ ಸೇರಿದವರು. ಅಬ್ದುಲ್ ಮುತ್ತಲಿಬ್‌ರಿಗೆ ಈಕೆಯ ಮೂಲಕ ತಲಾ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಜನಿಸಿದ್ದರು. ಗಂಡು ಮಕ್ಕಳು - ಝುಬೈರ್, ಅಬೂ ತಾಲಿಬ್ ಮತ್ತು ಅಬ್ದುಲ್ಲಾ. ಹೆಣ್ಣು ಮಕ್ಕಳು - ಆತಿಕ, ಬರ್‍ರ ಮತ್ತು ಉಮೈಮ.[೧]

ಹರಕೆ[ಬದಲಾಯಿಸಿ]

ಅಬ್ದುಲ್ಲಾರನ್ನು ದೇವರಿಗೆ ಬಲಿ ಕೊಡುವ ಒಂದು ಸುಪ್ರಸಿದ್ಧ ಐತಿಹ್ಯ ಎಲ್ಲಾ ಚರಿತ್ರೆ ಗ್ರಂಥಗಳಲ್ಲೂ ಕಂಡು ಬರುತ್ತದೆ.[೨]ಐತಿಹ್ಯದ ಪ್ರಕಾರ ತನಗೆ ಹತ್ತು ಗಂಡು ಮಕ್ಕಳು ಹುಟ್ಟಿ ಎಲ್ಲರೂ ಬೆಳೆದು ದೊಡ್ಡವರಾದರೆ, ಒಬ್ಬನನ್ನು ಕಅಬಾದಲ್ಲಿ ದೇವರಿಗೆ ಬಲಿ ಕೊಡುತ್ತೇನೆ ಎಂದು ಅಬ್ದುಲ್ ಮುತ್ತಲಿಬ್ ಹರಕೆ ಹೊತ್ತಿದ್ದರು.[೩] ಅವರ ಕೋರಿಕೆಯಂತೆ ದೇವರು ಅವರಿಗೆ ಹತ್ತು ಗಂಡು ಮಕ್ಕಳನ್ನು ಕೊಟ್ಟನು. ಮಕ್ಕಳು ಬೆಳೆದು ಪ್ರೌಢರಾದರು. ಅವರು ಮಕ್ಕಳಿಗೆ ಹರಕೆಯ ಬಗ್ಗೆ ತಿಳಿಸಿದಾಗ, ಮಕ್ಕಳಿಗೆ ಒಪ್ಪಿಕೊಳ್ಳದೆ ಬೇರೆ ದಾರಿಯಿರಲಿಲ್ಲ.[೪] ಅಬ್ದುಲ್ ಮುತ್ತಲಿಬ್ ಬಾಣದ ಮೂಲಕ ಅದೃಷ್ಟ ಪರೀಕ್ಷಿಸುವ ಅರ್ಚಕರನ್ನು ಕಅಬಾಗೆ ಬರ ಹೇಳಿ, ಹತ್ತು ಮಕ್ಕಳ ಹೆಸರುಗಳನ್ನು ಬಾಣಗಳಲ್ಲಿ ಬರೆದಿಟ್ಟು, ಕಅಬಾದಲ್ಲಿದ್ದ ಪ್ರಮುಖ ಮತ್ತು ಅತಿದೊಡ್ಡ "ಹುಬಲ್" ವಿಗ್ರಹದ ಮುಂದೆ ಅರ್ಚಕರ ಕೈಗೆ ಕೊಟ್ಟರು.[೪] ಅರ್ಚಕರು ಬಾಣಗಳನ್ನು ಬತ್ತಳಿಕೆಯಲ್ಲಿ ಹಾಕಿ ಕುಲುಕಿ ಒಂದನ್ನು ಹೊರತೆಗೆದಾಗ, ಅಬ್ದುಲ್ಲಾರ ಹೆಸರು ಬಂತು.[೪] ಅಬ್ದುಲ್ ಮುತ್ತಲಿಬ್ ಚೂರಿ ಹಿಡಿದು ಅಬ್ದುಲ್ಲಾರನ್ನು ಬಲಿಗೊಡಲು ಹೊರಟಾಗ, ಕುರೈಷ್ ಮುಖಂಡರು, ವಿಶೇಷವಾಗಿ ಮಖ್ಝೂಮ್ ಗೋತ್ರದ ಅಬ್ದುಲ್ಲಾರ ಸೋದರ ಮಾವಂದಿರು ಮತ್ತು ಅವರ ಸಹೋದರ ಅಬೂ ತಾಲಿಬ್, ಅಬ್ದುಲ್ ಮುತ್ತಲಿಬ್‌ರೊಂದಿಗೆ ಬಲಿ ನೀಡದಂತೆ ಅಂಗಲಾಚಿದರು. ಈ ಹರಕೆಯಿಂದ ಹಿಂಜರಿಯುವಂತೆ ಮನವೊಲಿಸಿದರು. ಅಬ್ದುಲ್ ಮುತ್ತಲಿಬ್ ಒಪ್ಪಿಕೊಂಡರು.[೫] ಆದರೆ ನನ್ನ ಹರಕೆಯ ಸ್ಥಿತಿಯೇನು ಎಂದು ಅಬ್ದುಲ್ ಮುತ್ತಲಿಬ್ ಕೇಳಿದಾಗ, ಯಸ್ರಿಬ್‌ನಲ್ಲಿರುವ ಒಬ್ಬ ಮಹಿಳಾ ಜ್ಯೋತಿಷಿಯೊಡನೆ ವಿಧಿ ಕೇಳುವಂತೆ ಸಲಹೆ ನೀಡಲಾಯಿತು. ಜ್ಯೋತಿಷಿಯೊಡನೆ ವಿಧಿ ಕೇಳಿದಾಗ, ಬಾಣಗಳಲ್ಲಿ ಅಬ್ದುಲ್ಲಾ ಮತ್ತು ಹತ್ತು ಒಂಟೆಗಳ ಹೆಸರು ಬರೆದು ಒಂದನ್ನು ಎತ್ತಬೇಕು, ಎತ್ತಿದ ಬಾಣ ಅಬ್ದುಲ್ಲಾರ ಹೆಸರನ್ನೇ ಸೂಚಿಸಿದರೆ, ಬಲಿ ನೀಡುವುದಕ್ಕೆ ಹತ್ತು ಒಂಟೆಗಳನ್ನು ಸೇರಿಸಬೇಕು, ಅಬ್ದುಲ್ಲಾರ ಹೆಸರು ಬರುವವರೆಗೂ ಹತ್ತು ಒಂಟೆಗಳನ್ನು ಸೇರಿಸುತ್ತಲೇ ಇರಬೇಕು ಎಂದು ಅವಳು ವಿಧಿ ಹೇಳಿದಳು.[೫] ಜ್ಯೋತಿಷಿ ಹೇಳಿದಂತೆ ಬಾಣಗಳನ್ನು ಕುಲುಕಿ ಒಂದನ್ನು ಎತ್ತಲಾದಾಗ ಅಬ್ದುಲ್ಲಾರ ಹೆಸರು ಬಂತು. ಎರಡನೇ ಬಾರಿಯೂ ಅವರ ಹೆಸರೇ ಬಂತು. ಹೀಗೆ ಹತ್ತು ಬಾರಿ ಅಬ್ದುಲ್ಲಾರ ಹೆಸರೇ ಬಂತು. ಒಂಟೆಯ ಸಂಖ್ಯೆ ನೂರಕ್ಕೆ ತಲುಪಿತು. ಹನ್ನೊಂದನೇ ಬಾರಿ ಒಂಟೆಯ ಹೆಸರು ಬಂತು.[೬]

ಈ ಘಟನೆಯನ್ನು ದೃಢೀಕರಿಸುತ್ತಾ ಮುಹಮ್ಮದ್, "ನಾನು ಇಬ್ಬರು ಬಲಿಗೊಡಲಾದ ವ್ಯಕ್ತಿಗಳ ಮಗ" ಎಂದು ಹೇಳಿದ್ದಾಗಿ ವರದಿಯಾಗಿದೆ. ಅದೇ ರೀತಿ ಒಬ್ಬ ಗ್ರಾಮೀಣ ಅರಬ್ಬ ಮುಹಮ್ಮದರ ಬಳಿಗೆ ಬಂದು, "ಓ ಇಬ್ಬರು ಬಲಿಗೊಡಲಾದ ವ್ಯಕ್ತಿಗಳ ಮಗನೇ!" ಎಂದು ಕರೆದಾಗ ಮುಹಮ್ಮದ್ ಮುಗುಳ್ನಕ್ಕರೇ ವಿನಾ ಅದನ್ನು ನಿರಾಕರಿಸಲಿಲ್ಲ ಎಂದು ವರದಿಯಾಗಿದೆ. ಇಬ್ಬರು ಬಲಿಗೊಡಲಾದ ವ್ಯಕ್ತಿಗಳು ಎಂದರೆ ಮುಹಮ್ಮದ್‌ರ ತಂದೆ ಅಬ್ದುಲ್ಲಾ ಮತ್ತು ಮುಹಮ್ಮದ್‌ರ ಪೂರ್ವಜರಲ್ಲಿ ಸೇರಿದ ಅಬ್ರಹಾಮರ ಮಗ ಇಷ್ಮಾಯೇಲ್ ಎಂದು ಹೇಳಲಾಗುತ್ತದೆ. ಆದರೆ ಈ ವರದಿಗಳು ಅಧಿಕೃತವಲ್ಲ ಮತ್ತು ಇದರಲ್ಲಿ ಹಲವಾರು ನ್ಯೂನತೆಗಳಿರುವ ಕಾರಣ ಇದನ್ನು ನಿಜವೆಂದು ಒಪ್ಪಲಾಗದು ಎಂದು ಅನೇಕ ಹದೀಸ್ ವಿದ್ವಾಂಸರು ಇದನ್ನು ತಿರಸ್ಕರಿಸಿದ್ದಾರೆ.[೭]

ವಿವಾಹ[ಬದಲಾಯಿಸಿ]

ಅಬ್ದುಲ್ಲಾ ಯಸ್ರಿಬ್‌ನ ಮಖ್ಝೂಮ್ ಗೋತ್ರಕ್ಕೆ ಸೇರಿದ ವಹಬ್‌ರ ಪುತ್ರಿ ಆಮಿನರನ್ನು ವಿವಾಹವಾದರು. ಆಮಿನರ ತಂದೆ ವಹಬ್ ಕುರೈಷ್ ಬುಡಕಟ್ಟಿನ ಬನೂ ಝುಹ್ರ ಗೋತ್ರದ ಮುಖಂಡರು. ಇವರಿಬ್ಬರ ವಿವಾಹ ಮಕ್ಕಾದಲ್ಲಿ ನೆರವೇರಿತು.[೮]

ಮರಣ[ಬದಲಾಯಿಸಿ]

ವಿವಾಹವಾದ ಕೆಲವೇ ತಿಂಗಳಲ್ಲಿ ಅಬ್ದುಲ್ಲಾ ವ್ಯಾಪಾರ ನಿಮಿತ್ತ ಸಿರಿಯಾಗೆ ಹೊರಟರು. ಆಗ ಆಮಿನ ಬಸುರಿಯಾಗಿದ್ದರು. ಅಬ್ದುಲ್ಲಾ ದಾರಿ ಮಧ್ಯೆ ಮದೀನದಲ್ಲಿ ಕಾಯಿಲೆ ಬಿದ್ದು ನಿಧನರಾದರು.[೯] ಅವರನ್ನು ಮದೀನದ ನಾಬಿಗ ಜುಅದಿ ಎಂಬವರ ಮನೆಯಲ್ಲಿ ದಫನ ಮಾಡಲಾಯಿತು. ಅಬ್ದುಲ್ಲಾ 25ನೇ ವಯಸ್ಸಿನಲ್ಲಿ ನಿಧನರಾದರು ಎಂದು ಹೇಳಲಾಗುತ್ತದೆ.[೮] ಹೆಚ್ಚಿನ ಇತಿಹಾಸಕಾರರ ಪ್ರಕಾರ ಮುಹಮ್ಮದ್ ಜನಿಸುವುದಕ್ಕೆ ಎರಡು ತಿಂಗಳು ಮೊದಲು ಅಬ್ದುಲ್ಲಾ ನಿಧನರಾದರು. ಆದರೆ ಕೆಲವರು ಮುಹಮ್ಮದ್ ಹುಟ್ಟಿದ ಎರಡು ತಿಂಗಳುಗಳ ಬಳಿಕ ಮರಣಹೊಂದಿದರೆಂದು ಹೇಳುತ್ತಾರೆ.[೮]

ಉಲ್ಲೇಖಗಳು[ಬದಲಾಯಿಸಿ]

  1. Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 53.
  2. The Encyclopaedia of Islam. Vol. 1. E. J. Brill. 1986. p. 42. ISBN 9004081143.
  3. Lings, Martin (2006). Muhammad: His Life Based on the Earliest Sources. Inner Traditions. p. 12. ISBN 978-0946621330.
  4. ೪.೦ ೪.೧ ೪.೨ Lings, Martin (2006). Muhammad: His Life Based on the Earliest Sources. Inner Traditions. p. 13. ISBN 978-0946621330.
  5. ೫.೦ ೫.೧ Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 54.
  6. Lings, Martin (2006). Muhammad: His Life Based on the Earliest Sources. Inner Traditions. pp. 13–14. ISBN 978-0946621330.
  7. "ما صحة حديث: أنا ابن الذبيحين؟". ar.islamway.net (in Arabic). Retrieved 18-02-2023. {{cite web}}: Check date values in: |access-date= (help)CS1 maint: unrecognized language (link)
  8. ೮.೦ ೮.೧ ೮.೨ Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 55.
  9. Haykal, Mohammad Husayn (1997). The Life of Muhammad. American Trust Publications. p. 47. ISBN 0-89259-137-4.