ಐತಿಹ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾರಿತ್ರಿಕವೆಂದು ಜನ ಸಾಮಾನ್ಯವಾಗಿ ಅಂಗೀಕರಿಸಿದ್ದು ಪರಂಪರಾಗತವಾದ ವಿಶೇಷ ಘಟನೆ (ಲೆಜೆಂಡ್). ಇಲ್ಲಿನ ಸಂಗತಿಗಳನ್ನು ಇತಿಹಾಸದ ಸಂಗತಿಗಳಂತೆ ತಾಳೆ ನೋಡಲು ಆಗುವುದಿಲ್ಲವಾದರೂ ವಸ್ತು ಸಾಕಷ್ಟು ಪ್ರಾಚೀನ ಮೂಲದ್ದಾಗಿರುತ್ತದೆ. ಪ್ರಾಚೀನ ಕಾಲದ ಚಾರಿತ್ರಿಕ ಸಂಗತಿಯೊಂದು ಕ್ರಮೇಣ ಅಪುರ್ವವೂ ಅದ್ಭುತವೂ ಆದ ಸನ್ನಿವೇಶಗಳನ್ನು ಒಳಗೊಳ್ಳುತ್ತ ತಲೆಮಾರುಗಳ ಮೂಲಕ ಹರಿದು ಬರುವಾಗ ಐತಿಹ್ಯ ಬಹುಶಃ ರೂಪುಗೊಂಡಿರಬೇಕೆಂದು ತೋರುತ್ತದೆ. ಐತಿಹ್ಯದಲ್ಲಿ ಚಾರಿತ್ರಿಕ ಅಂಶ ಎಷ್ಟು, ಕಾಲ್ಪನಿಕ ಅಂಶ ಎಷ್ಟು ಎಂದು ಗೆರೆಯೆಳೆದು ತೋರಿಸಲುಬಾರದು. ಐತಿಹ್ಯಗಳು ವ್ಯಕ್ತಿಗಳ ಸ್ಥಳಗಳ ಅಥವಾ ಘಟನೆಗಳ ವಾಸ್ತವ ಅಥವಾ ತೋರ್ಕೆಯ ನಂಬಿಕೆಗಳನ್ನೊಳಗೊಂಡ ಕಥನಗಳು. ಇವು ನಡೆದ ಘಟನೆಗಳ ಪಳೆಯುಳಿಕೆಗಳೆನ್ನಬಹುದು. ಹೇಳುವವರ ನಂಬಿಕೆಯಂತೆ ಉಳಿದುಬಂದವು. ಪ್ರಥಮತಃ ಗೊತ್ತಾದ ಸ್ಥಳಗಳಿಗೆ ಸಂಬಂಧಿಸಿದವು. ಆದರೆ ಬೇರೆ ಬೇರೆ ಸ್ಥಳಗಳಲ್ಲಿ ಇಂಥದೇ ರೀತಿಯ ಕಥನನಂಬಿಕೆ ಕಂಡುಬಂದಲ್ಲಿ ಆಶ್ಚರ್ಯಪಡಬೇಕಾದುದಿಲ್ಲ.

ಲೆಜೆಂಡ್[ಬದಲಾಯಿಸಿ]

ಮೂಲತಃ ಲೆಜೆಂಡ್ ಪದ ಧಾರ್ಮಿಕ ರೀತಿಯ ಕಥನವೊಂದಕ್ಕೆ ಅನ್ವಯಿಸುತ್ತಿದ್ದು ಆಮೇಲೆ ಚಾರಿತ್ರಿಕ ಆಧಾರವಿರದಿದ್ದರೂ ಜನಾದರಣೀಯ ಸತ್ಯವಾಗಿ ತಲೆಮಾರಿನಿಂದ ತಲೆಮಾರಿಗೆ ಬಂದಿರುವ ಕಥೆಗೂ ಬಳಕೆಯಾಯಿತು. ಪ್ರಥಮ ಹಂತದಲ್ಲಿ ಈ ಪದ ಸಾಧುಜೀವನಕ್ಕೆ ಸಂಬಂಧಿಸಿದ ಕಥೆಗಳನ್ನು ಸೂಚಿಸುತ್ತಿದ್ದಂತೆ ತೋರುತ್ತದೆ. ಉದಾಹರಣೆಗೆ, ಜಾಕಬ್ಸ್‌ ಡೇ ವರಾಗಿನೆ ಅವರ ಗೋಲ್ಡನ್ ಲೆಜೆಂಡ್[೧] ಎಂಬ ಸಾಧುಕಥೆಗಳ ಸಂಗ್ರಹ (ಇಂಗ್ಲಿಷ್ ಭಾಷಾಂತರ ಪ್ರ.ಶ.1483ರಲ್ಲಿ ಪ್ರಕಟವಾಯಿತು.) ಲೆಜೆಂಡ್ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜೆಂಡಾ ಎಂಬುದರಿಂದ ನಿಷ್ಪನ್ನವಾದುದು. ಇದರ ಅರ್ಥ ಪಠಿಸಬಹುದಾದದ್ದು-ಎಂದು. ಆದ್ದರಿಂದ ಆರಾಧನಾ ಮಂದಿರಗಳಲ್ಲಿ ಪಠನೆಗಳಿಗಾಗಿ ಉಪಯೋಗಿಸುತ್ತಿದ್ದ, ಬೈಬಲ್ಲಿನಿಂದ ಮತ್ತು ಸಾಧುಜೀವನದಿಂದ ತೆಗೆದ ಭಾಗಗಳಿಗೆ ಈ ಪದವನ್ನು ಬಳಸಲಾಯಿತು. ಪಾಶ್ಚಾತ್ಯ ಸಂಸ್ಕೃತಿಯಲ್ಲಿನ ಕ್ರೈಸ್ತ ಸಾಧುಗಳನ್ನು ಕುರಿತ ಐತಿಹ್ಯಗಳನ್ನು ನೋಡಿಯೇ ಯುರೋಪಿನ ಕೆಲವು ಲೇಖಕರು ಲೆಜೆಂಡ್ ಪದವನ್ನು ಸಾಧು ಐತಿಹ್ಯಕ್ಕೆ ನಿಶ್ಚಿತಗೊಳಿಸಿದ ಹಾಗೆ ಕಾಣುತ್ತದೆ.

ಇತರ ಮಧ್ಯಯುಗದ ಐತಿಹ್ಯಗಳಲ್ಲಿ ಇತಿಹಾಸ ಮತ್ತು ನೀತಿಕಥೆಗಳು ಬಿಡಿಸಲಾಗದ ರೀತಿಯಲ್ಲಿ ಸೇರಿಕೊಂಡಿರುವುದನ್ನು ಕಾಣಬಹುದು. ಇತಿಹಾಸದ ಬರೆವಣಿಗೆ ಹೆಚ್ಚು ವ್ಯವಸ್ಥಿತವಾಗಿ ಬಂದು, ತನ್ನ ವಸ್ತುವಿನ ನಿಜತ್ವವನ್ನು ದೃಢಪಡಿಸಿಕೊಂಡ ಮೇಲೆ, ಉಳಿದ ನೀತಿಕಥೆಗಳು ಮತ್ತು ನಂಬಲಾಗದ ಕಥೆಗಳು ಐತಿಹ್ಯದ ಕ್ಷೇತ್ರಕ್ಕೆ ಬಂದುವೆಂದು ಕೆಲವರ ಅಭಿಪ್ರಾಯ. ಆಧುನಿಕ ಬಳಕೆಯಲ್ಲಿ ಈ ಪದಕ್ಕೆ ಪ್ರಧಾನವಾಗಿ ಎರಡು ಅರ್ಥವಿದೆ: ಒಂದು-ನಾಣ್ಯ, ಸ್ಮಾರಕಪದಕ ಇತ್ಯಾದಿಗಳ ಮೇಲಿನ ಶಾಸನ; ಮತ್ತೊಂದು-ಇತಿಹಾಸದ ಹಾಗೆ ತಾಳೆನೋಡಲಾಗದ ಮತ್ತು ಪುರಾತನ ಮೂಲವುಳ್ಳದ್ದೆಂದು ಗ್ರಹಿಕೆಯಾಗಿರುವ ಬರೆವಣಿಗೆಯ ಕಥನ. ಕೆಲವು ಆಧುನಿಕ ಲೇಖಕರು ಆರ್ಷೇಯ ಶೈಲಿಯಲ್ಲಿ ಶುದ್ಧ ಕಲ್ಪನಾತ್ಮಕ ಕಥೆಗಳನ್ನು ಬರೆದು, ಅವನ್ನು ಲೆಜೆಂಡ್ಗಳೆಂದು ಕರೆದಿರುವುದೂ ಉಂಟು. ಇದರಿಂದಾಗಿ, ಅಕ್ಷರಸ್ಥರ ನಡುವೆ, ಈ ಪದ ಜಾನಪದಕ್ಕಿಂತ ಭಿನ್ನವಾದ ಪುರಾತನ ಗ್ರಂಥವೊಂದರಿಂದ ಬಂದ ಕಥೆಯೊಂದಕ್ಕೆ ಅನ್ವಯಿಸುತ್ತಿದ್ದಂತೆ ತಿಳಿಯುತ್ತದೆ. ಆದರೆ ಇತ್ತೀಚೆಗೆ ಜಾನಪದ ವಿದ್ವಾಂಸರು ಇದನ್ನು ಕಂಠಸ್ಥವಾಗಿ ಸಂವಹನಗೊಂಡ ಕಥೆಗಳಿಗೆ ಅನ್ವಯಿಸಿ, ಇದರ ಅರ್ಥವನ್ನು ನಿಗದಿಪಡಿಸಿದ್ದಾರೆ. ಈ ದೃಷ್ಟಿಯಲ್ಲಿ ಐತಿಹ್ಯವೆಂದರೆ, ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದನ್ನು ಕುರಿತಂತೆ ಸಾಂಪ್ರದಾಯಿಕ ಮೂಲವಸ್ತುಗಳೊಡನೆ ನಿಜಾಂಶವೊಂದರ ಮೇಲೆ ಆಧಾರಿತವಾಗಿದೆಯೆಂದು ಭಾವಿಸುವ ಕಥನವೇ ಆಗಿದೆ.

ಐತಿಹ್ಯಗಳು ಮೊದಮೊದಲು ಸಂಕ್ಷಿಪ್ತವೂ ಸರಳವೂ ಆಗಿದ್ದು, ಕ್ರಮೇಣ ಉತ್ಪ್ರೇಕ್ಷಿತ ವಿವರಣೆಗಳ ದೀರ್ಘ ಹಾಗೂ ಕಲ್ಪನಾತ್ಮಕ ಕಥೆಗಳಾಗಿ ಬೆಳೆವಣಿಗೆ ಹೊಂದಿದುವು. ಮೂಲದಲ್ಲಿ ಇವು ಚಾರಿತ್ರಿಕವೆನಿಸಿದರೂ ಅನಂತರದಲ್ಲಿ ಸಾಂಪ್ರದಾಯಿಕವೆನಿಸಿದುವು. ಕೆಲವರು ಐತಿಹ್ಯ ಮತ್ತು ಸಂಪ್ರದಾಯಗಳನ್ನು ಜೊತೆಜೊತೆಯಲ್ಲಿ ನೋಡಿರಲು ಈ ದೃಷ್ಟಿಯೇ ಕಾರಣವಾಗಿರಬೇಕು. ಸಾಮಾನ್ಯವಾಗಿ ಐತಿಹ್ಯದಲ್ಲಿ ಏಕಮಾತ್ರ ಕಥನಾಶಯ ಕಂಡುಬರುತ್ತದೆ.

ಐತಿಹ್ಯದ ಮೂರು ಪ್ರಧಾನ ಗುಂಪುಗಳು[ಬದಲಾಯಿಸಿ]

ವಸ್ತುವಿನ ದೃಷ್ಟಿಯಿಂದ ಐತಿಹ್ಯಗಳನ್ನು ಮೂರು ಪ್ರಧಾನ ಗುಂಪುಗಳಾಗಿ ವಿಂಗಡಿಸಬಹುದು:

  • 1 ಸೃಷ್ಟಿ ಅಥವಾ ಜಗತ್ತಿನ ಮೂಲವನ್ನು ಕುರಿತಾದ ವಿವರಣಾತ್ಮಕ ಐತಿಹ್ಯಗಳು;
  • 2 ಅತಿಮಾನುಷ ವ್ಯಕ್ತಿಗಳನ್ನು ಕುರಿತ ಐತಿಹ್ಯಗಳು;
  • 3 ಐತಿಹಾಸಿಕ ಅಥವಾ ಮಿಥ್ಯೈತಿಹಾಸಿಕ ಐತಿಹ್ಯಗಳು.

ಸೃಷ್ಟಿಕಾರ್ಯದ ಉಗಮ, ಭೂಮಿ ರೂಪಿತವಾದ ಬಗೆ ಮೊದಲಾದ ವಿಷಯಗಳನ್ನೊಳಗೊಂಡ ಐತಿಹ್ಯಗಳು ಬಹುಮಟ್ಟಿಗೆ ಪುರಾಣದ ಸಂಪರ್ಕವನ್ನು ಪಡೆದಿರುತ್ತವೆ. ಈ ಬಗೆಗಿನ ಕಥೆಗಳು ಜಗತ್ತಿನ ಎಲ್ಲ ಕಡೆಯಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ದೊರಕುತ್ತವೆ. ಇವುಗಳ ಮೇಲೆ ಆಯಾ ದೇಶದ ಪವಿತ್ರ ಧಾರ್ಮಿಕ ಗ್ರಂಥಗಳು ಪ್ರಭಾವ ಬೀರಿರುವುದನ್ನು ಕಾಣಬಹುದು. ಜನಪದ ಇನ್ನೂ ನಂಬಿಕೊಂಡಿರುವ ಕಿನ್ನರ, ದೆವ್ವ, ಪಿಶಾಚಿ, ರಾಕ್ಷಸ ಮೊದಲಾದ ಅದ್ಭುತಗಳನ್ನು ಒಳಗೊಂಡಿರುವ ಕಥೆಗಳೇ ಎರಡನೆಯ ವಿಭಾಗದ ಐತಿಹ್ಯಗಳು. ಇದರಲ್ಲಿ ಕಿನ್ನರ ಕಥೆಗಳಿಗೂ ಐತಿಹ್ಯಗಳಿಗೂ ಇರುವ ಸಂಬಂಧವನ್ನು ಅವುಗಳಲ್ಲಿರುವ ಸಮಾನಾಂಶವಾದ ಅದ್ಭುತಗಳಿಂದ ಗುರುತಿಸಬಹುದು. ಇನ್ನು ಮೂರನೆಯ ವಿಭಾಗದ ಐತಿಹ್ಯಗಳು ಚಾರಿತ್ರಿಕ ಲಕ್ಷಣಗಳನ್ನು ಆಶ್ರಯಿಸಿರುವ ರಚನೆಗಳನ್ನು ತಿಳಿಸುತ್ತವೆ. ಐತಿಹ್ಯದ ವಸ್ತು ಸಮಗ್ರವಾಗಿ ಕಲ್ಪನಾತ್ಮಕವೆಂದು ಕರೆಯಬೇಕಾಗಿಲ್ಲ, ಕಲ್ಪನೆಗೆ ಆಧಾರ ಕೊಡುವ ಸತ್ಯಾಂಶಗಳೂ ಅಲ್ಲಿರುತ್ತವೆ. ಐತಿಹ್ಯಗಳು ಐತಿಹಾಸಿಕ ಗಣ್ಯವ್ಯಕ್ತಿಗಳ ಸುತ್ತ ಗುಂಪುಗೂಡಿ ಬೆಳೆದಿರುವ ಹಾಗೆ ಕಾಣುತ್ತದೆ. ಪುರಾತನ ಐತಿಹಾಸಿಕ ವ್ಯಕ್ತಿ ಕ್ರಮೇಣ ಐತಿಹ್ಯದ ವಸ್ತುವಾಗಿ, ಅವನ ಗುಣಗೌರವ ವೈಶಿಷ್ಟ್ಯಗಳ ಮೇಲೆ ಐತಿಹ್ಯದ ಕಥೆಗಳು ರೂಪುಗೊಂಡಿರಬೇಕು. ಜನ ಸಾಮಾನ್ಯರಲ್ಲಿ ಐತಿಹ್ಯವನ್ನು ಇತಿಹಾಸದ ಜೊತೆಗೆ ತಪ್ಪು ಕಲ್ಪಿಸಿಕೊಳ್ಳುವುದೂ ಒಂದು ಸಾಮಾನ್ಯ ಪ್ರವೃತ್ತಿ. ಅಂತೂ, ಕಾಲದಿಂದ ಕಾಲಕ್ಕೆ ನೆನಪಾಗಿ ಉಳಿದುಕೊಂಡಿರುವ ಕೆಲವು ಐತಿಹಾಸಿಕ ಲಕ್ಷಣಗಳನ್ನು ಐತಿಹ್ಯಗಳು ವ್ಯಕ್ತಪಡಿಸುತ್ತವೆ. ಆದರೆ ಕೆಲವುಸಾರಿ ಇವು ಭ್ರಾಂತಿಮೂಲವೂ ಅಸಂಬದ್ಧವೂ ಆಗಿರುವುದುಂಟು. ಉದಾಹರಣೆ-ಪೈಡ್ ಪೈಪರ್ ಆಫ್ ಹ್ಯಾಮಲಿನ್-ಎಂಬ ಕಿನ್ನರಿ ಜೋಗಿಯ ಕಥೆ.

ವಿತರಣೆಯ ದೃಷ್ಟಿಯಿಂದ ಐತಿಹ್ಯದ ಎರಡು ಗುಂಪುಗಳು[ಬದಲಾಯಿಸಿ]

ವಿತರಣೆಯ ದೃಷ್ಟಿಯಿಂದ ಐತಿಹ್ಯಗಳನ್ನು ಸ್ಥಳೀಯ ಐತಿಹ್ಯ ಮತ್ತು ವಲಸೆಯ ಐತಿಹ್ಯಗಳೆಂದು ಎರಡು ದೊಡ್ಡ ಗುಂಪುಗಳಾಗಿ ವಿಂಗಡಿಸಬಹುದು. ಸ್ಥಳೀಯ ಐತಿಹ್ಯಗಳು ಗೊತ್ತಾದ ಸ್ಥಳವೊಂದಕ್ಕೆ ಸಂಬಂಧಿಸಿದವು. ಭೂವಲಯದ ಅಥವಾ ಹೆಸರಿನ ಕೆಲವು ಸ್ಥಳೀಯ ವೈಲಕ್ಷಣ್ಯಗಳನ್ನು ವಿವರಿಸುವುದಕ್ಕಾಗಿಯೊ ಸ್ಥಳೀಯ ಸಂಪ್ರದಾಯದ ಕಥೆಯೊಂದನ್ನು ಹೇಳುವುದಕ್ಕಾಗಿಯೊ ಅವು ಸೃಷ್ಟಿಯಾಗಿರುತ್ತವೆ. ಸಂಗ್ರಹವಾಗಿ ಹೇಳುವುದಾದರೆ, ಸ್ಥಳೀಯ ಐತಿಹ್ಯ ಚಿಕ್ಕದಾದುದು, ಘಟನಾತ್ಮಕವಾದುದು, ವಿವರಣಾತ್ಮಕವಾದುದು. ಇದರ ರಚನೆ ಸರಳ, ತಂತ್ರದಲ್ಲಿ ಕಿನ್ನರಕಥೆಯನ್ನು ಇದು ಹೋಲುತ್ತದೆ. ಇದರ ಕ್ಷೇತ್ರ ತುಂಬ ಪರಿಮಿತ. ಬಹು ಹಿಂದಿನ ಸಂಪ್ರದಾಯಗಳನ್ನೂ ನೀತಿಪದ್ಧತಿಗಳನ್ನೂ ಹೊಂದಿ ಪುರಾತನತ್ವದ ಸೂಚಿಯಾಗಿರುತ್ತದೆ. ಸಾಮಾನ್ಯವಾಗಿ ಹರ್ಷಾಂತವಾದರೂ ದುಃಖಾಂತವಾಗಿಯೂ ಕೊನೆಗೊಳ್ಳುವ ಐತಿಹ್ಯಗಳು ಹಲವಾರಿವೆ. ಇವುಗಳ ಇನ್ನೊಂದು ಗುಣ ಬೋಧಪರತೆ ಮತ್ತು ನೀತಿಪರತೆ. ಭೂತ, ಪ್ರೇತ ಮೊದಲಾದವುಗಳಲ್ಲಿನ ನಂಬಿಕೆ ಇವುಗಳ ಮತ್ತೊಂದು ಲಕ್ಷಣ. ಸ್ಥಳೀಯ ಐತಿಹ್ಯಗಳು ವಲಸೆ ಹೋಗುವುದಿಲ್ಲ. ಅವು ಸಂಕ್ಷಿಪ್ತವಾಗಿದ್ದು ಕೆಲವು ಆಶಯಗಳನ್ನು ಒಳಗೊಂಡಿರುತ್ತವೆ. ಈ ಪರಿಮಿತ ಆಶಯಗಳೇ ಯಾವಾಗಲೂ ಆವರ್ತನಗೊಳ್ಳುತ್ತಿರುತ್ತವೆ.

ಸ್ಥಳೀಯ ಐತಿಹ್ಯಗಳ ಪ್ರಕಾರಗಳು[ಬದಲಾಯಿಸಿ]

ಸ್ಥಳೀಯ ಐತಿಹ್ಯಗಳಲ್ಲಿ ಹಲವಾರು ಪ್ರಕಾರಗಳಾಗಿವೆ. ಮುಖ್ಯವಾದವನ್ನು ಮಾತ್ರ ಇಲ್ಲಿ ಹೆಸರಿಸಲಾಗಿದೆ. ಜಗತ್ತಿನಾದ್ಯಂತ ಕಂಡುಬರುವ ಇಂಥದೊಂದು ಪ್ರಕಾರವೆಂದರೆ, ಪ್ರವಾಹ ಐತಿಹ್ಯ, ಕೆರೆ, ಕೊಳ, ಸರೋವರಗಳು ಇರುವಲ್ಲೆಲ್ಲ ಈ ರೀತಿಯ ಐತಿಹ್ಯಗಳು ಪ್ರಚಲಿತವಾಗಿವೆ. ಇವುಗಳಿಗೆ ಆಳವನ್ನು ಕಂಡರಿಯೆವೆಂದೂ ಕಂಡುಹಿಡಿಯಲು ಹೊರಟರೆ ವಿಪತ್ತು ತಪ್ಪಿದ್ದಲ್ಲವೆಂದೂ ನಂಬಿಕೆ ಇದೆ. ಕೆರೆ ಅಥವಾ ಸರೋವರದ ಮಧ್ಯಭಾಗದಲ್ಲಿ ಭೂಭಾಗವೊಂದು ಇದ್ದು, ಅಲ್ಲಿಯ ನಿವಾಸಿಗಳ ನಾಸ್ತಿಕತೆಯಿಂದಾಗಿ ಪ್ರವಾಹ ಬಂದು ಮುಳುಗಿಹೋಯಿತೆಂದು ಕಥೆಯುಂಟು. ಈ ಬಗೆಯ ಐತಿಹ್ಯಗಳಲ್ಲಿ ಪ್ರಮುಖವಾದುದು ನೋಹ ಮತ್ತು ಅವನ ದೋಣಿಯ ಕಥೆ. ಇದಲ್ಲದೆ ಆಲ್ಬನ್ ಲೇಕ್ ಐತಿಹ್ಯವನ್ನೆ ತೆಗೆದುಕೊಳ್ಳಬಹುದು. ಆಲ್ಬಲಾಂಗಾ ಎಂಬುವನೊಬ್ಬ ಮಾನವ ರೂಪದಲ್ಲಿ ದೇವತೆಯನ್ನು ನಿರ್ಮಿಸಿ, ಜುಪಿಟರ್ ದೇವತೆಯ ಗುಡುಗು ಮಿಂಚುಗಳನ್ನು ಅಣಕಿಸಿದನಂತೆ. ಈ ಅನೀತಿವರ್ತನೆಗಾಗಿ ಈತನ ಮತ್ತು ಅರಮನೆ ಬರಸಿಡಿಲಿಗೆ ತುತ್ತಾದುದಲ್ಲದೆ, ಆಲ್ಬನ್ ಸರೋವರ ಉಕ್ಕಿಬಂದು ಅರಮನೆಯನ್ನು ಮುಳುಗಿಸಿದಂತೆ ಕಥೆ ಇದೆ. ನಾಶಹೊಂದಿದ ಅರಮನೆಯನ್ನು ಆ ಸರೋವರದ ತಳಭಾಗದಲ್ಲಿ ಇವತ್ತಿಗೂ ನೋಡಬಹುದೆಂದು ಪ್ರಾಚೀನ ಉದಂತಕಾರನೊಬ್ಬ ಹೇಳಿದ್ದಾನೆ. ಪ್ರಳಯದ ಈ ಪ್ರಧಾನಾಶ್ರಯ ಮತ್ತು ನಿವಾಸಿಗಳ ನಿರೀಶ್ವರವಾದ ಮಧ್ಯಯುಗದ ಮಾದರಿಯೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅಂಥ ಅನೇಕ ಐತಿಹ್ಯಗಳು ಸ್ವತಂತ್ರ ಬೆಳೆವಣಿಗೆಗಳಾಗಿರುವುದಲ್ಲದೆ, ಕೆಲವು ವೇಳೆ ನಿಜವಾದ ಸ್ಥಳಗಳು ದುರಂತಗಳ ಜ್ಞಾಪಕಗಳಾಗಿಯೂ ಉಳಿದಿವೆ. ಈ ಚಾರಿತ್ರಿಕ ಜ್ಞಾಪಕಾಂಶಗಳ ಜೊತೆಗೆ ಭೂಗರ್ಭವಿಜ್ಞಾನಿಯ ಊಹೆಗಳು, ಆಶಯಗಳು, ವಲಸೆ ಹೋಗುವಿಕೆ-ಈ ಎರಡು ವಿಷಯಗಳನ್ನು ಗಮನಿಸಬೇಕಾಗುತ್ತದೆ.

ಐತಿಹ್ಯದ ಮತ್ತೊಂದು ಜನಪ್ರಿಯಪ್ರಕಾರ ಬಲಿಕೊಡುವ ವಿಷಯವನ್ನು ಕುರಿತದ್ದು. ಕಟ್ಟಡ, ಕೋಟೆ, ಆರಾಧನಮಂದಿರ, ಸೇತುವೆ ಹಾಗೂ ಕೆರೆಗಳ ಏರಿಗಳು ಶಾಶ್ವತವಾಗಿ ನಿಲ್ಲಲು ಕೊಡುತ್ತಿದ್ದ ಆಸ್ತಿಭಾರ-ಬಲಿಗಳನ್ನು ಇವು ತಿಳಿಸುತ್ತವೆ. ಕೆರೆಯ ಏರಿ ನಿಲ್ಲಲು ಬಲಿ ಅರ್ಪಿಸಿದ ಕಥೆಯೊಂದು ನಾಗಮಂಡಲದ ಸಮೀಪದ ಸೂಳೆಕೆರೆಯ ಬಗ್ಗೆ ಪ್ರಚಲಿತವಾಗಿದೆ. ರಾಜ ಕಟ್ಟಿಸುತ್ತಿದ್ದ ಕೆರೆಯ ಏರಿ ನಿಲ್ಲದಿದ್ದಾಗ ರಾಜನ ಸೂಳೆಯೊಬ್ಬಳು ಅದಕ್ಕೆ ತಾನೇ ಬಲಿಯಾದ ಪ್ರಸಂಗ ಇಲ್ಲಿದೆ. ಕೆರೆ ತೋಡಿ ನೀರು ಬರದಿದ್ದಾಗಲೂ ಬಲಿಕೊಟ್ಟ ಪ್ರಸಂಗಗಳನ್ನು ಹೇಳುವ ಹಲವಾರು ಐತಿಹ್ಯಗಳು ಪ್ರಚುರವಾಗಿದೆ. ಸಾಮಾನ್ಯವಾಗಿ ಇಲ್ಲಿ ಬಲಿಯಾಗುವವಳು ಕಿರಿಯ ಸೊಸೆ. ಕೆರೆಗೆ ಹಾರ ಎಂಬ ಕಥೆಯನ್ನೇ ಇಲ್ಲಿ ಉದಾಹರಿಸಬಹುದು. ಇದನ್ನೆ ಬಹುಮಟ್ಟಿಗೆ ಹೋಲುವಂಥ ಐತಿಹ್ಯವೊಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಳ್ತೆಗ್ರಾಮದ ಹೊನ್ನಮ್ಮನ ಕೆರೆಯ ಬಗ್ಗೆ ಇರುವುದನ್ನು ಶ್ರೀ ಟಿ.ಎಸ್. ರಾಜಪ್ಪ ಅವರು ಸಂಗ್ರಹಿಸಿದ್ದಾರೆ. ಹೊನ್ನಮ್ಮನ ಬಗೆಗಿನ ಇಂಥ ಐತಿಹ್ಯಗಳು ಹಲವು ಕಡೆ ಹರಡಿಕೊಂಡಿವೆ. ಈ ರೀತಿಯ ಕಥೆಯೊಂದು ಮಂಡ್ಯಜಿಲ್ಲೆಯ ಮದ್ದೂರು ಕೆರೆಯ ಬಗ್ಗೆಯೂ ಇದೆ. ಇವುಗಳಲ್ಲಿ ಕಾಣಬರುವ ಮತ್ತೊಂದು ಆಶಯವೆಂದರೆ, ಬಲಿಯಾದವರು ದೇವತೆಗಳಾಗಿ ಬಡಬಗ್ಗರಿಗೆ ವಿಶೇಷ ಸಂದರ್ಭಗಳಲ್ಲಿ ಒಡವೆ ಕೊಡುತ್ತಿದ್ದುದು, ಮಾತನಾಡುತ್ತಿದ್ದುದು, ಆಮೇಲೆ ಒಮ್ಮೆ ಶೂದ್ರನೊಬ್ಬ ನಿನ್ನ ಸೊಲ್ಲು ಬೆಲ್ಲವಾಗಲಿಲ್ಲವೆ-ಎಂದಮೇಲೆ ಅದು ನಿಂತು ಹೋದದ್ದು.

ಬಲಿ ಐತಿಹ್ಯಗಳ ಐತಿಹಾಸಿಕತೆಯ ಬಗ್ಗೆ ಒಂದು ಮಾತು. ಹಲವಾರು ಕಟ್ಟಡಗಳನ್ನು ಕೆಡವಿ ಶೋಧಿಸಿ ತೆಗೆದಾಗ ಅನೇಕ ಆಸ್ತಿಭಾರದಲ್ಲಿ ಅಸ್ಥಿಪಂಜರುಗಳು ದೊರೆತಿವೆ. 19ನೆಯ ಶತಮಾನದಲ್ಲಿ ಉತ್ತರ ಜರ್ಮನಿಯಲ್ಲಿ ಇಂಥದೊಂದು ಸಂಶೋಧನೆ ನಡೆದು ಆಸ್ತಿಭಾರ-ಬಲಿಯ ಉಳಿಕೆಯೊಂದು ಪತ್ತೆಯಾಗಿರುವುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಇವನ್ನು ಗಮನಿಸಿದರೆ ಬಲಿ ಕಥೆಗಳ ಪ್ರಚುರ್ಯಕ್ಕೆ ಜನಪ್ರಿಯತೆಗೆ ಬೆಂಬಲ ಸಿಕ್ಕಂತಾಗುತ್ತದೆ. ಕಟ್ಟಡದ ಬಲಿಗೆ ಸಂಬಂಧಿಸಿದ ಮತ್ತೊಂದು ಪ್ರಕಾರವೆಂದರೆ, ವೀರನೊಬ್ಬ ಸತ್ತ ಅನಂತರ ಅವನನ್ನು ನಗರದ ಹೆಬ್ಬಾಗಿಲು ಅಥವಾ ದೇಶದ ಗಡಿಗಳಲ್ಲಿ ಹೂಳುವುದರಿಂದ ಆಕ್ರಮಣವನ್ನು ತಪ್ಪಿಸಬಹುದು-ಎಂಬುದು.

ಪರ್ವತ ಕಂದರಗಳಲ್ಲಿ ಶತ್ರುಗಳು ಬೆನ್ನಟ್ಟಿಬಂದಾಗ ವೀರನೊಬ್ಬ ಮತ್ತು ಸೆರೆಯಿಂದ ಬಿಡಿಸಿಕೊಂಡು ಬಂದ ಕನ್ಯೆಯೊಬ್ಬಳು ಹಾರಿ ಬಿದ್ದು ಪಾರಾದ ಬಗ್ಗೆ, ಸತ್ತ ಬಗ್ಗೆ ಅನೇಕ ಬಗೆಯ ಐತಿಹ್ಯಗಳು ಬೆಳೆದಿವೆ. ಈ ತೆರದ ಐತಿಹ್ಯದ ಜನನಕ್ಕೆ ಸಮಾನ ಸಂಪ್ರದಾಯವೊಂದು ಕಾರಣವಾಗಿರಬೇಕೆನಿಸುತ್ತದೆ.

ಐತಿಹ್ಯದ ಮತ್ತೊಂದು ಪ್ರಕಾರ ಕೌಟುಂಬಿಕ ಐತಿಹ್ಯ. ಕೆಲವು ಕುಟುಂಬಗಳಲ್ಲಿ ಸಾವು ಸೂಚಿಸಿ ಅಳುವ ದೆವ್ವಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವಂತೆ. ಈ ದೆವ್ವ ನಿರಾಕರಿಸಿದ ಪತ್ನಿಯಾಗಿದ್ದು, ತನ್ನ ಪ್ರೀತಿಯ ಮೊದಲ ವಸ್ತುವಾಗಿದ್ದವರ ಮೇಲೆ ಸೇಡು ತೀರಿಸಿಕೊಳ್ಳುವುದೇ ಆಗಿದೆ. ಕ್ರಾಪ್ಪೆಯವರ ಅಭಿಪ್ರಾಯದಂತೆ ದೆವ್ವದ ಅಸ್ತಿತ್ವ ಹಾಗೂ ಅದು ನಿಯತಕಾಲಿಕವಾಗಿ ಕಾಣಿಸಿಕೊಳ್ಳುವಿಕೆ ಐತಿಹ್ಯದ ಜನಪ್ರಿಯ ಭಾಗವಾಗಿದೆ.

ಇತಿಹಾಸದ ಘಟನೆಯಂತೆ ತೋರುವ ಐತಿಹ್ಯಗಳು[ಬದಲಾಯಿಸಿ]

ವ್ಯಾಪಕವಾಗಿ ಹರಡಿಕೊಂಡಿರುವ ಮತ್ತೊಂದು ಐತಿಹ್ಯದ ಪ್ರಕಾರವೆಂದರೆ, ಇತಿಹಾಸದ ಘಟನೆಯಂತೆ ತೋರುವ ಐತಿಹ್ಯಗಳು. ಇವು ನಿಜವಾಗಿ ಹೆಸರಾಂತಿದ್ದರೂ ಇವನ್ನು ಕುರಿತ ಸ್ಪಷ್ಟವಾದ ಇತಿಹಾಸವಾವುದೂ ಸಿಕ್ಕದು. ಉದಾಹರಣೆಗೆ, ಅಲೆಗ್ಸಾಂಡರ್ ಬಗೆಗಿನ ಕಥೆಗಳು. ಐತಿಹಾಸಿಕ ಐತಿಹ್ಯಗಳಲ್ಲಿರುವ ಅರ್ಧ ಸಾಹಿತ್ಯಕ ಲಕ್ಷಣಕ್ಕೆ ಪ್ರಖ್ಯಾತ ರಾಜರ ಹೆಸರಿನ ಜೊತೆಗೆ ಸೇರಿಕೊಂಡಿರುವ ಐತಿಹ್ಯಗಳು ನಿದರ್ಶನವಾಗುತ್ತವೆ. ಸೈನ್ಯ, ವೀರರು, ಮನೆತನದ ಬಿರುದುಗಳು, ಲಾಂಛನಗಳು, ಧ್ವಜಗಳು ಮೊದಲಾದ ಯುದ್ಧವಿಷಯಿಕ ಕಥೆಗಳೂ ಕೆಲಮಟ್ಟಿಗೆ ಐತಿಹಾಸಿಕ ಐತಿಹ್ಯಗಳಿಗೆ ಸಂಬಂಧಪಟ್ಟಿವೆ. ಇವುಗಳ ಹಿಂದಿನ ಸತ್ಯಾಂಶಗಳನ್ನು ತಿಳಿಯಬಯಸುವ ಸಂಶೋಧಕರಿಗೆ ಸ್ವಲ್ಪವಾದರೂ ಇವುಗಳಿಂದ ವಿವರಣೆ ದೊರೆಯಬಹುದು, ಅಷ್ಟೆ ವಿನಾ ಇವೆಲ್ಲ ಪೂರ್ಣ ನಡೆದ ಘಟನೆಗಳಲ್ಲ. ಸಾರ್ವತ್ರಿಕ ಆಧಾರದ ಮೇಲೆ ನಿಂತಿರುವ ಐತಿಹ್ಯಗಳಲ್ಲಿ ನಿಕ್ಷೇಪದ ಕಥೆಗಳು ಮತ್ತು ಗಡೀಪಾರಿಗೆ ಸಂಬಂಧಿಸಿದ ಕಥೆಗಳು ಮುಖ್ಯವೆನಿಸಿವೆ. ಪ್ರತಿಮೆಯ ಐತಿಹ್ಯಗಳನ್ನೂ ಇಲ್ಲೇ ಹೇಳಬೇಕು.

ಸ್ಥಳೀಯ ಐತಿಹ್ಯಗಳಲ್ಲಿ ಅತ್ಯಂತ ದೊಡ್ಡ ಗುಂಪೆಂದರೆ ಜನಪದ ನಿರುಕ್ತಿಗೆ ಸಂಬಂಧಿಸಿದವು. ಸ್ಥಳದ ಹೆಸರೊಂದಕ್ಕೆ ನಿಜವಾದ ನಿಷ್ಪತ್ತಿ ತಿಳಿಯದಿದ್ದಾಗ, ತಪ್ಪು ವ್ಯಾಖ್ಯಾನ ಮಾಡುವುದೇ ಇದು. ಈ ತಪ್ಪು ನಿಷ್ಪತ್ತಿ ಅಪರಿಚಿತ ಹೆಸರಿಗೆ ವಿವರಣೆ ಕೊಡಲು ಕಾರ್ಯಕಾರಣ ಕಥೆಯೊಂದನ್ನು ಸೃಜಿಸುತ್ತದೆ. ಉದಾಹರಣೆಗೆ, ಬೆಂದಕಾಳೂರು ಎಂಬುದರಿಂದಲೇ ಬೆಂಗಳೂರು ಎಂಬ ಹೆಸರು ಬಂತೆಂದು ಹೇಳುವ, ಕೆಂಪೇಗೌಡನಿಗೆ ಸಂಬಂಧಿಸಿದ ಐತಿಹ್ಯಗಳು.

ಸ್ಥಳೀಯ ಐತಿಹ್ಯಕ್ಕೆ ತುಂಬ ಸಂಬಂಧವಿರುವ ಮತ್ತೊಂದು ಭಾಗ ವಿವರಣಾತ್ಮಕ ಐತಿಹ್ಯ. ಒಂದಲ್ಲ ಒಂದು ರೀತಿಯಲ್ಲಿ ಎಲ್ಲ ಸ್ಥಳೀಯ ಐತಿಹ್ಯಗಳಲ್ಲಿಯೂ ಈ ಕಾರ್ಯಕಾರಣ ಅಂಶ ಇರುವುದಾದರೂ ಇದರಲ್ಲಿ ಅದೇ ಪ್ರಧಾನ. ಪ್ರಾಣಿಗಳ, ಸಸ್ಯಗಳ, ನಕ್ಷತ್ರಗಳ ಮಾನವಕುಲದ ಮೂಲ ಮತ್ತು ವೈಲಕ್ಷಣ್ಯಗಳನ್ನು ವಿವರಿಸುವುದಕ್ಕಾಗಿ ಹುಟ್ಟಿಕೊಂಡವು ಇವು. ಕ್ರಮೇಣ ಈ ವಿವರಣೆಗಳೇ ಕಥೆಗಳ ರೂಪವನ್ನು ತಾಳಿರಬಹುದು ಅಥವಾ ಕಥೆಯೊಂದಕ್ಕೆ ಸೇರಿಕೊಂಡಿರಲೂಬಹುದು. ಅಂತೂ ಯಾವುದಾದರೂ ವಿಶೇಷ ಲಕ್ಷಣಕ್ಕೆ ವಿವರಣೆ ನೀಡುವುದು ಇವುಗಳ ಕೆಲಸ.

ಎಲ್ಲೆಲ್ಲಿ ಒಂಟಿಯಾದ ಬಂಡೆಗಳು ಬಿದ್ದಿರುತ್ತವೆಯೋ ಅಲ್ಲೆಲ್ಲ ಅವನ್ನು ಬೃಹದ್ದೇಹಿಯೊಬ್ಬನು ಯಾವುದಾದರೂ ಉದ್ದೇಶಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಬಿದ್ದವೆಂದು ಹೇಳುತ್ತಾರೆ. ಸಾಲಿಗ್ರಾಮದ ಸಮೀಪದಲ್ಲಿ ಒಂದು ಬಂಡೆಯಿದೆ. ಇದು ಹಿಂದೆ ರಾಮಚಂದ್ರ ಸಮುದ್ರಕ್ಕೆ ಸೇತುವೆ ಕಟ್ಟಿದ ಸಂದರ್ಭದಲ್ಲಿ, ಆಂಜನೇಯನ ಕೈಯಿಂದ ಜಾರಿ ಬಿದ್ದಿತೆಂದೂ ಇವತ್ತಿಗೂ ಜನ ನಂಬಿಕೊಂಡಿದ್ದಾರೆ. ಆ ಕಲ್ಲು ಭೂಮಿಯ ಮೇಲೆ ಕುಳಿತಿಲ್ಲವೆಂದೂ ಮಧ್ಯೆ ತೆಳುವಾದ ಬಟ್ಟೆಯೊಂದನ್ನು ತೂರಿಸಬಹುದೆಂದೂ ಹೇಳುತ್ತಾರೆ. ಇದಕ್ಕೆ ಆಂಜನೇಯ ಕಲ್ಲು ಎಂದೇ ಹೆಸರಿದೆ. ಇದಲ್ಲದೆ ಸೀತೆ ಸ್ನಾನ ಮಾಡಿದಳೆಂದು ಹೇಳುವ, ಶ್ರೀರಾಮನ ಹೆಜ್ಜೆ ಗುರುತುಗಳೆಂದು ತೋರಿಸುವ ಜಾಗಗಳು ನಾಡಿನ ಬೇರೆ ಬೇರೆ ಕಡೆಗಳಲ್ಲಿ ಹರಡಿಕೊಂಡಿವೆ. ಇವುಗಳಲ್ಲದೆ ಸ್ಮಾರಕ ಐತಿಹ್ಯಗಳು, ಮತಾನುಚರಣೆಯ ಐತಿಹ್ಯಗಳು, ಮೂಢಾಚರಣೆಯ ಐತಿಹ್ಯಗಳು, ಸ್ವಪ್ನಾನುಭವದ ಐತಿಹ್ಯಗಳು-ಇತ್ಯಾದಿಯಾಗಿ ಇನ್ನೂ ಹಲವಾರು ಪ್ರಕಾರಗಳು ಸ್ಥಳೀಯ ಐತಿಹ್ಯಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಸ್ಥಳೀಯ ಐತಿಹ್ಯಗಳಲ್ಲಿನ ಕೆಲವು ವರ್ಗಗಳಿಗೆ ಖಂಡಿತವಾಗಿಯೂ ಮೂಲವನ್ನು ಹೇಳಲು ಸಾಧ್ಯವಿದೆ. ಯಾವುದೇ ಐತಿಹ್ಯ-ಅದು ಏನೇ ಆಗಿರಲಿ-ಮೂಲತಃ ಅದು ಚಾರಿತ್ರಿಕವಾದುದೆಂಬುದನ್ನು ಮರೆಯುವಂತಿಲ್ಲ. ಆದರೆ ಜನತೆಯ ಮೇಲಿನ ಧಾರ್ಮಿಕ ಗ್ರಂಥಗಳ ಪ್ರಭಾವದಿಂದಾಗಿ, ಅಲ್ಲಿನ ಎಷ್ಟೋ ಕಥೆಗಳು ಐತಿಹ್ಯಗಳಾಗಿ ಚಾಲ್ತಿಯಲ್ಲಿರುವುದನ್ನೂ ದೂರೀಕರಿಸುವ ಹಾಗಿಲ್ಲ. ಯುರೋಪಿನ ಎಷ್ಟೋ ಐತಿಹ್ಯ ಕಥೆಗಳು ಬೈಬಲಿನ ಯಥಾವತ್ತಾದ ಪ್ರತಿಗಳಾಗಿವೆ. ಅಂಥ ಜನಪ್ರಿಯ ಕಥನಗಳ ಎಲ್ಲ ವರ್ಗಗಳಿಗಿಂತಲೂ ಸ್ಥಳೀಯ ಐತಿಹ್ಯ ತನ್ನ ವಿಶೇಷ ಅವಶೇಷಗಳಿಂದಾಗಿ ಮಾನವಶಾಸ್ತ್ರೀಯ ಪಂಥದ ವಾದಗಳನ್ನು ಸಮರ್ಥಿಸುತ್ತದೆ ಎಂಬುದನ್ನು ಒಪ್ಪಬಹುದು.

ವಲಸೆಯ ಐತಿಹ್ಯ[ಬದಲಾಯಿಸಿ]

ಪ್ರಸಾರದ ದೃಷ್ಟಿಯಿಂದ ಅತ್ಯಂತ ಮಹತ್ತ್ವದ್ದೆಂದರೆ ಎರಡನೆಯ ವರ್ಗದ ವಲಸೆಯ ಐತಿಹ್ಯ. ಯಾವುದೋ ಒಂದು ಸ್ಥಳದಲ್ಲಿ ಹುಟ್ಟಿ ಅನಂತರ ವಿಶ್ವವ್ಯಾಪಕತೆಯನ್ನು ಪಡೆದುಕೊಂಡದ್ದು ಇದು. ವಲಸೆಯ ಐತಿಹ್ಯ ಕೆಲಮಟ್ಟಿಗೆ ದೀರ್ಘವಿರುವ ಆದರೆ ಕಿನ್ನರ ಕಥೆಗಿಂತ ಚಿಕ್ಕದಾದ ಗದ್ಯಕಥನ. ಪಾಠಾಂತರಗಳು ಪರಿಮಿತ ಸಂಖ್ಯೆಯವು, ಆಶಯಗಳು ಬಹಳ ಸಂಖ್ಯೆಯಲ್ಲಿದ್ದರೂ ಸ್ಥಿರವಾದವು ಮತ್ತು ವಲಸೆಯಿಂದ ಅವು ವ್ಯತ್ಯಾಸವಾಗವು. ಆದ್ದರಿಂದ ಬಹುಮೂಲ ಸಿದ್ಧಾಂತ ಇಲ್ಲಿ ಅನ್ವಯವಾಗುವುದಿಲ್ಲ. ಈ ಐತಿಹ್ಯ ಮೂಲತಃ ಸ್ಥಳೀಕೃತ ಕಥೆಯಾದುದಾದರೂ ವಿಸ್ತಾರವಾಗಿ ಹರಡಿಕೊಂಡಿರುವುದರಿಂದ ಕೆಲವು ಸಮಯದಲ್ಲಿ ಮೂಲವನ್ನು ಪತ್ತೆಹಚ್ಚಲು ಕಷ್ಟವಾಗಬಹುದು. ಆದರೆ ಉಳಿದವುಗಳಿಗಿಂತ ಇಲ್ಲಿ ಅನ್ವೇಷಣೆ ಸುಲಭ. ಇದರ ಹರಡುವಿಕೆ ದುರ್ಗಾಭಾಗವತರು ಹೇಳುವಂತೆ ಸ್ಥಳೀಯ ಐತಿಹ್ಯಕ್ಕಿಂತ ವಿಸ್ತಾರವಾದುದು, ಕಿನ್ನರಕಥೆಗಿಂತ ಪರಿಮಿತವಾದುದು. ಇದರ ಕ್ಷಿಪ್ರಗತಿಯ ಪ್ರಸಾರಕ್ಕೆ ಎಲ್ಲ ಕಡೆಯೂ ಕಾಣಬರುವ ಮೂಲಭೂತ ಭಾವನೆ ಕಾರಣವೆನ್ನಬಹುದು. ವಲಸೆಯ ಐತಿಹ್ಯಕ್ಕೆ ಅತ್ಯುತ್ತಮ ಉದಾಹರಣೆ ವಿಕ್ಟಿಮ್ಸ್‌ ಲಾಸ್ಟ್‌ ವಡ್ರ್ಸ್‌ ಎಂಬ ಕಥೆ. ಬೌದ್ಧ ಧರ್ಮದ ಮೂಲಭೂತ ತತ್ತ್ವವನ್ನು ಆಧರಿಸಿರುವ ಇದು ಭಾರತದಲ್ಲಿ ಹುಟ್ಟಿ ಅನಂತರ ಇತರ ಕಡೆಗೆ ಹರಡಿರಬೇಕೆಂದು ವಿದ್ವಾಂಸರ ಅಭಿಪ್ರಾಯ. ಚಂದ್ರಹಾಸನ ಕಥೆ ಮತ್ತೊಂದು ನಿದರ್ಶನ.

ವಲಸೆಯ ಐತಿಹ್ಯ ದೇಶ, ಧರ್ಮಗಳ ತಾರತಮ್ಯವಿಲ್ಲದ ವಿಸ್ತೃತ ಆಧಾರದ ಸಾಮಾನ್ಯ ಮಾನವಮೂಲವಸ್ತುವನ್ನು ಒಳಗೊಂಡಿರುವುದಿಲ್ಲ. ಅವು ಒಂದು ಕಡೆ ಹುಟ್ಟುತ್ತಲೇ ಅಲ್ಲಿನ ಸ್ಥಿತಿ ಅನುಷ್ಠಾನ ನಂಬಿಕೆ ಹಾಗೂ ಸಾಂಪ್ರದಾಯಿಕ ಪದ್ಧತಿಗಳನ್ನು ಮೈಗೂಡಿಸಿಕೊಳ್ಳುತ್ತವೆ. ಬೇರೆ ಕಡೆಗೆ ವಲಸೆ ಹೋದಾಗ ಅಲ್ಲಿನ ಪರಿಸ್ಥಿತಿಗೆ ಅನಾಮತ್ತಾಗಿ ಒಪ್ಪಿಗೆಯಾಗಬಹುದು ಅಥವಾ ಅಲ್ಲಿನ ಧಾರ್ಮಿಕ ಪದ್ಧತಿಗಳಲ್ಲಿ ವಿಲೀನವಾಗಬಹುದು. ಕೆಲವು ವೇಳೆ ಹೆಸರಿನ ಆಕಸ್ಮಿಕ ಉಲ್ಲೇಖ ತನ್ನ ಎಲ್ಲ ಪರ್ಯಾಯಗಳ ಮೂಲಕ ಪಟ್ಟು ಹಿಡಿದು ಅಂಟಿಕೊಂಡಿದ್ದು ಬೆಲೆಯುಳ್ಳ ಸೂಚನೆಯನ್ನು ಒದಗಿಸುತ್ತದೆ. ಕಥೆಗಳನ್ನು ಮತ್ತೆ ಮತ್ತೆ ಹೇಳುವಾಗ ಕಥಾವಕ್ತೃಗಳ ಔದಾಸೀನ್ಯದಿಂದಾಗಿ ಕಥೆಗಳು ಆಗಾಗ್ಗೆ ಬದಲಾಗುವುದುಂಟು.

ಇಲ್ಲಿನ ಪ್ರಮುಖ ಸಮಸ್ಯೆಯೊಂದೆಂದರೆ, ಈ ಕಥೆಗಳು ಕೆಲವು ದೇಶಗಳಿಂದ ಮತ್ತೆ ಕೆಲವಕ್ಕೆ ಏಕೆ ವಲಸೆ ಹೋಗುತ್ತವೆ ಎಂಬುದು. ಇದಕ್ಕೆ ಬೆನ್ಫೆ ಭಾರತೀಯ-ಮೂಲವಾದದ ಮೂಲಕ ಕೆಲಮಟ್ಟಿಗೆ ಉತ್ತರ ಕೊಟ್ಟಿದ್ದಾನೆ. ಅವನ ಅಭಿಪ್ರಾಯ ಪ್ರಚಾರಕರು ಕಾರಣವಾಗಿರಬೇಕೆಂಬುದು. ಆದರೆ ಈತ ಆಧರಿಸಿದುದು ಬರೆವಣಿಗೆಯ ರೂಪದ ಕಥೆಗಳನ್ನು-ಎಂಬುದನ್ನು ಮರೆಯಬಾರದು. ಆದ್ದರಿಂದ ವಾಕ್ ಸಂಪ್ರದಾಯದ ಕಥೆಗಳಿಗೆಲ್ಲ ಪ್ರಚಾರವೇ ಕಾರಣವಾಯಿತೆಂದು ಹೇಳಲಾಗುವುದಿಲ್ಲ. ಕಥೆಗಳ ಪ್ರಸಾರಕ್ಕೆ ಧಾರ್ಮಿಕ ಚಳವಳಿ ಒಂದು ಕಾರಣವಾಗಿರುವಂತೆ, ಇದಕ್ಕಿಂತಲೂ ಆಳವಾದ ಮತ್ತೊಂದು ಕಾರಣ ಇರಬೇಕು. ಅಂತೂ ಸಾಕಷ್ಟು ಸಂಖ್ಯೆಯ ಐತಿಹ್ಯಗಳ ಪ್ರಸಾರಕ್ಕೆ ಪ್ರತ್ಯೇಕ ಜನವರ್ಗವೊಂದು ಕಾರಣವಾಗಿದ್ದು ಇವರು ಧರ್ಮ ಪ್ರಚಾರಕರೇ ಆಗಿರಬೇಕೆಂದು ತೋರುತ್ತದೆ.

ಹೀಗೆ ಐತಿಹ್ಯಗಳನ್ನು ಸ್ಥಳೀಯ ಮತ್ತು ವಲಸೆಯ ಐತಿಹ್ಯಗಳೆಂದು ಎರಡು ವಿಧವಾಗಿ ವಿವೇಚಿಸಬಹುದು. ಇವುಗಳಿಗೆ ಪರಸ್ಪರ ವ್ಯತ್ಯಾಸವಿರುವಂತೆ ಇವುಗಳಲ್ಲಿ ಆಂತರಿಕ ಸಂಬಂಧವೂ ಇದೆ. ಸ್ಥಳೀಯ ಐತಿಹ್ಯ, ತಾನು ಸಂಯೋಜಿಸಿರುವ ಆಶಯಗಳಲ್ಲಿ ಪರಿಮಿತಿ ಪ್ರದೇಶದಲ್ಲಿ ವಲಸೆಬಂದಂತೆ ಕಾಣಬಂದರೂ ಒಂದು ಕಡೆ ನೆಲೆಯಾಗಿ ನಿಂತುಕೊಂಡದ್ದು, ವಲಸೆಯ ಐತಿಹ್ಯ ವಿಸ್ತಾರವಾದ ಭೂ ಪ್ರದೇಶದಲ್ಲಿ ಸರ್ವ ಕಡೆಗೂ ವಲಸೆ ಹೋದದ್ದೇ ಆಗಿದೆ. ಒಂದು ಬಹುಮೂಲಕ್ಕೆ ಸಂಬಂಧಿಸಿದುದು, ಇನ್ನೊಂದರಲ್ಲಿ ಅದನ್ನು ಹೇಳಲಾಗುವುದಿಲ್ಲ. ಹೀಗೆ ಇವೆರಡಕ್ಕೂ ಇರುವ ವ್ಯತ್ಯಾಸವನ್ನು ತೋರಿಸುವುದಾದರೂ ವಲಸೆಯ ಐತಿಹ್ಯ ಸ್ಥಳೀಕೃತವಾಗಿರುವುದಿಲ್ಲವೆಂದಾಗಲಿ, ವ್ಯಕ್ತಿಗಳಿಗೆ ಸಂಬಂಧಿಸಿರುವುದಿಲ್ಲವೆಂದಾಗಲಿ ಹೇಳಲಾಗದು. ಅಂತು ಇವುಗಳ ನಡುವಣ ಗಡಿರೇಖೆಯನ್ನು ನಿರ್ಮಿಸುವುದು ಕಷ್ಟಸಾಧ್ಯವಾದ ಕೆಲಸ.

ಐತಿಹ್ಯಕ್ಕೆ ಸಂಬಂಧಿಸಿದ ಇನ್ನೆರಡು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಬೇಕು. ಮೊದಲನೆಯದಾಗಿ ಐತಿಹ್ಯಕ್ಕೂ ಸಾಹಿತ್ಯಕ್ಕೂ ಇರುವ ಸಂಬಂಧ. ಸಾಹಿತ್ಯದಲ್ಲಿ ಐತಿಹ್ಯದ ಪಾತ್ರ ಮಹತ್ತ್ವಪುರ್ಣವಾದುದು. ಚಾರಿತ್ರಿಕ ಆಭಾಸದ ಸಾಹಿತ್ಯ ವಿಶೇಷವಾಗಿ ಐತಿಹ್ಯದ ಮೂಲವಸ್ತುವನ್ನು ಅವಲಂಬಿಸಿರುತ್ತದೆ. ಇತಿಹಾಸ ದಾಖಲೆಗಳಿಗಿಂತ ಸಂಪ್ರದಾಯದ ಮೇಲೆ ಅವಲಂಬಿತವಾದಾಗ ಚರಿತ್ರೆಗೂ ಐತಿಹ್ಯಕ್ಕೂ ಇರುವ ವ್ಯತ್ಯಾಸ ಅಸ್ಪಷ್ಟವಾಗಿದೆ. ಕುಮಾರರಾಮನ ಬಗೆಗಿನ ಕಥೆಗಳನ್ನೇ ಇಲ್ಲಿ ಉಲ್ಲೇಖಿಸಬಹುದು. ಇವನ ವೀರ್ಯವತ್ತಾದ ಜೀವನವನ್ನೂ ಪರನಾರೀಸೋದರತ್ವವನ್ನೂ ಪ್ರಕಾಶಗೊಳಿಸಲು ಇಂಥ ಕಥೆಗಳು ಆಮೇಲೆ ಹುಟ್ಟಿಕೊಂಡಿರಬೇಕೆಂದು ತೋರುತ್ತದೆ. ಆದರೆ ಬಹಳ ವರ್ಷಗಳ ತರುವಾಯ ಬಂದ ನಂಜುಂಡ ಕವಿಗೆ ಚಾರಿತ್ರಿಕ ಹಾಗೂ ಚಾರಿತ್ರಿಕ ಆಭಾಸದ ಸಂಗತಿಗಳೆಲ್ಲ ಕಾವ್ಯಕ್ಕೆ ವಸ್ತುವಾದುವು; ಮಾತ್ರವಲ್ಲ, ಐತಿಹ್ಯವೆನಿಸಿರುವ ಕಥೆಗಳೇ ಕಾವ್ಯದಲ್ಲಿ ಮನಸೆಳೆಯುವ ಪ್ರಸಂಗಗಳಾಗಿವೆ. ಅಲ್ಲದೆ, ಇಡೀ ರಾಮಾಯಣ ಭಾರತಗಳೇ ಒಂದು ಕಾಲಕ್ಕೆ ಚಾರಿತ್ರಿಕವಾಗಿದ್ದು, ಕ್ರಮೇಣ ಐತಿಹ್ಯದ ಹಲವು ಕಥೆಗಳಿಂದ ಮುಂದೆ ಬೆಳೆವಣಿಗೆಯಾಗಿರಬೇಕೆಂದು ತೋರುತ್ತದೆ. ಸಾಹಿತ್ಯಕ್ಕೆ ಐತಿಹ್ಯ ಹೇಗೆ ಮಹತ್ತ್ವದ ವಸ್ತುವಾಗುತ್ತದೆ ಎಂಬುದನ್ನಿಲ್ಲಿ ಕಾಣಬಹುದು.

ಪರಿಶೀಲಿಸಬೇಕಾದ ಎರಡನೆಯ ವಿಚಾರವೆಂದರೆ, ಐತಿಹ್ಯಕ್ಕೂ ಪುರಾಣಕ್ಕೂ ಇರುವ ವ್ಯತ್ಯಾಸ ಹಾಗೂ ಸಂಬಂಧಗಳು. ಐತಿಹ್ಯದ ಮೂಲ ಸಂಪ್ರದಾಯದ ಸಂಬಂಧವನ್ನು ಹೊಂದಿದುದಾದರೂ ಅಲ್ಲಿಯ ವೀರನ ದೊಡ್ಡತನವನ್ನು ಮತ್ತಷ್ಟು ಆಶಯಗೊಳಿಸುವ ಸಲುವಾಗಿ ಪೌರಾಣಿಕ ಲಕ್ಷಣಗಳನ್ನು ಆರೋಪಿಸುವುದು ಸಾಮಾನ್ಯ. ಈ ರೀತಿಯಾಗಿಯೇ ರಾಮ, ಕೃಷ್ಣ ಮೊದಲಾದವರು ಪುರಾಣ ಕಥೆಗಳ ವೀರರಾಗಿ ಮಾರ್ಪಾಡಾಗಿರುವುದು. ಇದೇ ಪ್ರವೃತ್ತಿಯನ್ನು ಜನಪದ ಐತಿಹ್ಯಗಳಲ್ಲಿಯೂ ಕಾಣುತ್ತೇವೆ. ಬಹುತೇಕ ಸಾಂಸ್ಕೃತಿಕ ವೀರರು ಪೌರಾಣಿಕ ವೀರರಾದುದೂ ಕೂಡ ಇದೇ ರೀತಿಯಲ್ಲಿ. ಆದ್ದರಿಂದಲೇ ಐತಿಹ್ಯಕ್ಕೂ ಪುರಾಣಕ್ಕೂ ಇರುವ ಗಡಿರೇಖೆಯನ್ನು ಗುರುತಿಸುವುದು ಸುಲಭವಲ್ಲ.

ಅಂತು ಐತಿಹ್ಯ ಮತ್ತು ಪುರಾಣಗಳಿಗಿರುವ ಸಂಬಂಧ ತುಂಬ ಸಮಸ್ಯಾತ್ಮಕವಾದುದು. ಪುರಾಣಕಥೆಯ ಪ್ರಧಾನ ಪಾತ್ರಗಳು ದೇವತೆಗಳು ಮತ್ತು ಪ್ರಕೃತಿ ಶಕ್ತಿಗಳು. ಉದ್ದೇಶವಿವರಣೆ ಐತಿಹ್ಯಗಳು ಪ್ರಾಚೀನ ವೀರರನ್ನು ಕುರಿತವು. ಈ ವೀರರ ಕಥೆಗಳು ಆಗಾಗ್ಗೆ ಪೌರಾಣಿಕ ಹಾಗೂ ಭ್ರಾಮಕ ಅಂಶಗಳನ್ನು ಒಳಗೊಂಡಿರುತ್ತವೆ; ಸತ್ಯಾಂಶವೆಲ್ಲಿ ಕೊನೆಗೊಳ್ಳುತ್ತದೆ ಮತ್ತು ಕಲ್ಪನೆ ಎಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ತೀರ್ಮಾನಿಸಲು ಕೆಲವು ಸಾರಿ ಅಸಾಧ್ಯವಾಗಬಹುದು. ಆದರೆ ಐತಿಹ್ಯಗಳು ಸಾಕಷ್ಟು ಪ್ರಮಾಣದ ವಾಸ್ತವಿಕ ಅಥವಾ ಚಾರಿತ್ರಿಕ ಸತ್ಯದ ಆಧಾರಗಳ ಮೇಲೆ ರೂಪಿತವಾಗಿರುತ್ತವೆ ಎಂಬುದನ್ನು ಮರೆಯಬಾರದು.

ಉಲ್ಲೇಖಗಳು[ಬದಲಾಯಿಸಿ]

  1. https://books.google.com/books?id=99I3AAAAIAAJ&pg=PA8
"https://kn.wikipedia.org/w/index.php?title=ಐತಿಹ್ಯ&oldid=1118469" ಇಂದ ಪಡೆಯಲ್ಪಟ್ಟಿದೆ