ಮದನಲಾಲ್ ಧಿಂಗ್ರಾ
Madan Lal Dhingra | |
---|---|
Born | |
Died | 17 ಆಗಸ್ಟ್ 1909 Pentonville Prison, London, Britain |
Organization | India House |
Movement | Indian Independence movement |
ಸ್ವಾಮಿ ವಿವೇಕಾನಂದರು “ದೇಶದ ಯುವ ಜನತೆಗೆ ಆ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದಿರಬೇಕು. ನೀವು ಯುವಜನತೆಯನ್ನ ಆ ದೇಶದ ಇತಿಹಾಸ ಅಥವಾ ಸಂಸ್ಕೃತಿಯಿಂದ ದೂರ ಮಾಡಿದರೆ, ಕೆಲವೇ ವರ್ಷಗಳಲ್ಲಿ ಆ ದೇಶ ಅಥವಾ ಆ ಸಂಸ್ಕೃತಿ ತನ್ನಷ್ಟಕ್ಕೆ ತಾನೇ ಅವನತಿಯನ್ನ ಹೊಂದುತ್ತದೆ” ಎಂದು ಹೇಳುತ್ತಿದ್ದರು. ಈಗಿನ ಯುವಜನತೆಗೆ ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ ವೀರರ, ಶೂರರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ಮತ್ತು ಅನಿವಾರ್ಯ, ಹಾಗಾದಾಗ ಮಾತ್ರ ನಮ್ಮ ಸ್ವಾತಂತ್ರ್ಯಕ್ಕೆ ಒಂದು ಬೆಲೆ ಹಾಗೂ ಘನತೆ ಬರುವದು. ನಮ್ಮ ದೇಶವನ್ನು ದಾಸ್ಯದಿಂದ ಬಿಡಿಸಲು ಅನೇಕರು ತಮ್ಮ ಯೌವ್ವನವನ್ನು ಬಲಿದಾನ ಮಾಡಿದರು. ಅಂಥ ಬಲಿದಾನ ಮಾಡಿದವರ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ಸಲ್ಲುವ ಒಂದು ಹೆಸರು ಮಧನಲಾಲ ಧಿಂಗ್ರಾ. ಅಗಷ್ಟ ೧೭, ೧೯೦೯ ಇಂಗ್ಲೆಂಡಿನ ಪೆಂಟೋನವಿಲ್ಲ ಜೈಲಿನಲ್ಲಿ ಅವರು ನಗುನಗುತ್ತಾ ಗಲ್ಲುಗಂಬವನ್ನು ಏರಿದರು.
ಬ್ರಿಟನನಲ್ಲಿ ಧಿಂಗ್ರಾ
[ಬದಲಾಯಿಸಿ]ಭಾರತದಲ್ಲಿ ಬ್ರಿಟೀಷರ ದಬ್ಬಾಳಿಕೆ, ಅತ್ಯಾಚಾರ ಮುಗಿಲು ಮುಟ್ಟಿದ ದಿನಗಳು. ೧೯೦೬ನೇ ಇಸ್ವಿ ಪಂಜಾಬಿನ ಅಮೃತಸರದ ಯುವಕ ಮಧನಲಾಲ ಧಿಂಗ್ರಾ ಇಂಜನೀಯರಿಂಗ ಅಭ್ಯಾಸ ಮಾಡಲು ಇಂಗ್ಲೆಂಡಿಗೆ ಹೋದ. ಮನೆಯಲ್ಲಿ ಶ್ರೀಮಂತಿಕೆ ಇತ್ತು ಐಷಾರಾಮಿ ಜೀವನವನ್ನೇ ಯುವಕ ಕಂಡಿದ್ದ. ಧಿಂಗ್ರಾ ಅವರ ತಂದೆ ಅಮೃತಸರದಲ್ಲಿ ಪ್ರಸಿದ್ಧ ವೈದ್ಯರಾಗಿದ್ದರು. ಬ್ರಿಟಿಷರನ್ನು ಹಾಡಿ ಹೊಗಳುತ್ತಿದ್ದರು. ಇವರ ಅಣ್ಣ ಕೂಡ ಇಂಗ್ಲೆಂಡಿನಲ್ಲಿ ವೈದ್ಯನಾಗಿದ್ದ, ಅವನಿಗೂ ಅಪ್ಪನಂತೆ ಬ್ರಿಟಿಷರೆಂದರೆ ಪಂಚಪ್ರಾಣ.
ಶೋಕಿಲಾಲ್ ಧಿಂಗ್ರಾ
[ಬದಲಾಯಿಸಿ]ಶ್ರೀಮಂತಿಕೆಯ ವಾತಾವರಣದಲ್ಲಿ ಬೆಳೆದ ಮದನಗೆ ಹಣದ ತೊಂದರೆ ಇರಲಿಲ್ಲ. ಇಂಜನೀಯರಿಂಗ್ ವಿದ್ಯಾಭ್ಯಾಸಕ್ಕೆ ಇಂಗ್ಲೆಂಡನ ಲಂಡನ್ನಿಗೆ ಆಗಮಿಸಿದ ಇವನು, ಒಳ್ಳೆ ಬಟ್ಟೆ ಧರಿಸಿ ಲಂಡನ್ನಿನ ಬೀದಿಗಳಲ್ಲಿ ಶೋಕಿಲಾಲ ನಂತೆ ಸುತ್ತುತ್ತಿದ್ದ. ಗಂಟೆಗಟ್ಟಲೇ ಕನ್ನಡಿಯ ಮುಂದೆ ನಿಂತು ತಯಾರಾಗುತ್ತಿದ್ದ. ಹೀಗೆ ಲಂಡನ್ನಿನಲ್ಲಿ ದಿನನಿತ್ಯದ ಜೀವನವನ್ನು ನಡೆಸುತ್ತಿದ್ದ, ಮದನಲಾಲ ಅಲ್ಲಿಯ “ಭಾರತ ಭವನ”ದ ಬಗ್ಗೆ ಕೇಳಿದ. ಈ ಭಾರತ ಭವನವನ್ನು ಸಾವರ್ಕರ ಅವರು ಆರಂಭಿಸಿದ್ದರು. ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕೆ ಬರುವ ಭಾರತೀಯ ವಿದ್ಯಾರ್ಥಿಗಳನ್ನು ಸೇರಿಸಿ “ಬ್ರಿಟಿಷರ ಹಿಡಿತದಲ್ಲಿ ಸಿಕ್ಕು ನಲುಗುತ್ತಿರುವ ಭಾರತಮಾತೆಯನ್ನು, ಬಂಧ ಮುಕ್ತಗೊಳಿಸಬೇಕು. ಅದಕ್ಕಾಗಿ ನಾವು ಯಾವುದೇ ಬಲಿದಾನಕ್ಕೂ ಸಿದ್ಧರಾಗಿರಬೇಕೆಂದು” ಆ ಯುವಕರ ಹೃದಯಗಳಲ್ಲಿ ದೇಶಪ್ರೇಮವನ್ನು ತುಂಬುತ್ತಿದ್ದರು.
ಶೋಕಿಲಾಲನಿಂದ ದೇಶ ಭಕ್ತ ನಾದ ಧಿಂಗ್ರಾ
[ಬದಲಾಯಿಸಿ]ಒಂದು ದಿನ ಭಾರತಭವನಕ್ಕೆ ಧಿಂಗ್ರ ಹೋದ. ಅಲ್ಲಿ ವಿನಾಯಕ ದಾಮೋದರ ಸಾವರ್ಕರ ಭಾಷಣ ನಡೆದಿತ್ತು. ಆ ಭಾಷಣವನ್ನು ಭಾರತದೇಶದ ಘೋರ ಪರಿಸ್ಥಿತಿಯ ಬಗ್ಗೆ ಕೇಳಿ ಮದನನ ರಕ್ತ ಕುದಿಯಲಾರಂಭಿಸಿತು. ಮನಸ್ಸಿನಲ್ಲಿ ಅದೇನೋ ತಳಮಳ ಆರಂಭವಾಯಿತು. ಅಂದಿನಿಂದ ಧಿಂಗ್ರನಿಗೆ ಸಾವರ್ಕರ ಬಗ್ಗೆ ಗೌರವ ಭಕ್ತಿ, ಪೂಜ್ಯ ಭಾವನೆ ಮೂಡಿತು. ೧೮೫೭ರ “ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸವಿನೆನಪಿಗಾಗಿ ೧೯೦೮ರ ಮೇ ತಿಂಗಳಲ್ಲಿ ಬಹುದೊಡ್ಡ ಕಾರ್ಯಕ್ರಮವನ್ನು ಲಂಡನ್ನಿನಲ್ಲಿ ನಡೆಸಲಾಯಿತು. ಆ ಸಂದರ್ಭದಲ್ಲಿ ಭಾರತೀಯ ತರುಣರು “ಸ್ಮೃತಿ ಮುದ್ರೆ”ಗಳನ್ನು ಧರಿಸಿ ಕಾಲೇಜುಗಳಿಗೆ ಹೋಗುತ್ತಿದ್ದರು ಅದೇ ರೀತಿ ಒಂದು ದಿನ ಧಿಂಗ್ರ ಕಾಲೇಜಿಗೆ ಹೋದಾಗ ಅಲ್ಲಿನ ಬ್ರಿಟಿಷ ತರುಣ ಧಿಂಗ್ರ ಎದೆಯ ಮೇಲಿನ ಮುದ್ರೆಯನ್ನು ಕಿತ್ತಿಹಾಕಲು ಕೈಹಾಕಿದ. ಧಿಂಗ್ರ ಅವನಿಗೆ ಬಲವಾದ ಎಟು ಹಾಕಿದ್ದಲ್ಲದೇ “ನನ್ನ ದೇಶದ ಗೌರವದ ಚಿಹ್ನೆಗೆ ಕೈ ಹಾಕ್ತಿಯಾ” ಎಂದು ಚೂರಿಯನ್ನೇ ಹೊರತೆಗೆದ ಇದನ್ನು ನೋಡಿ ಆ ಯುವಕ ಬಿದ್ದೆನೋ ? ಸತ್ತೆನೋ ಎಂದು ಓಡಿಹೋದ. ಒಂದು ಸಲ ಜಪಾನಿನ ಯುವಕರು ಕಷ್ಟವನ್ನು ಸಹಿಸಿಕೊಳ್ಳುತ್ತಾರೆ ಧೈರ್ಯವಂತರು ಎಂದು ಕೆಲವರು ಹೋಗಳುತ್ತಿದ್ದರು. ಆಗ ಧಿಂಗ್ರ “ಹಿಂದುಗಳಾದ ನಾವು ಕೂಡ ಧೈರ್ಯವಂತರೇ” ಎಂದು ಹೇಳಿದಾಗ ನಕ್ಕುಬಿಟ್ಟರು. ಆದರೆ ಧಿಂಗ್ರ ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಒಬ್ಬ ತರುಣ ಉದ್ಧನೆಯ ಸೂಜಿ ತಂದು, ಧಿಂಗ್ರನ ಕೈಯನ್ನು ಮೇಜಿನ ಮೇಲಿಟ್ಟು ಮೆಲ್ಲನೆ ಅಮ್ಮುಕತೊಡಗಿದ, ಸೂಜಿ ಅಂಗೈ ದಾಟಿ ಮೇಜಿನ ಹಲಗೆಯೊಳಗೆ ನುಗ್ಗಿ, ಧಿಂಗ್ರನ ಕೈಯಿಂದ ರಕ್ತ ಚಿಮ್ಮುತ್ತಿದ್ದರು, ಇವನು ಮಾತ್ರ ನಗುತ್ತಲೇ ಇದ್ದ. ಶೋಕಿಲಾಲನಾಗಿ ಇಂಗ್ಲೆಂಡಿಗೆ ಬಂದಿದ್ದ ಈ ಯುವಕ ಭಾರತ ತರುಣರ ಧೈರ್ಯಕ್ಕೆ ಹೊಸ ಭಾಷೆಯನ್ನು ಬರೆದ. ಒಂದು ಸಲ ಗುಟ್ಟಾಗಿ ಬಾಂಬ್ ತಯಾರಿಸುವ ಸಂದರ್ಭದಲ್ಲಿ ಗಾಜಿನ ಪಾತ್ರೆಯಲ್ಲಿ ರಾಸಾಯನಿಕ ವಸ್ತುಗಳನ್ನು ಕುದಿಸುತ್ತಿದ್ದರು. ಆಗ ಆ ಕೆಲಸದಲ್ಲಿ ತೊಡಗಿದವರು ಗಂಭೀರವಾದ ಚರ್ಚೆಯಲ್ಲಿ ತೊಡಗಿದ್ದಾಗ, ಪಾತ್ರೆಯಲ್ಲಿದ್ದ ರಾಸಾಯನಿಕ ಉಕ್ಕಿ ಬೀಳುವುದರಲ್ಲಿತ್ತು, ಅದು ಲಂಡನ್ನಿನ್ನಲ್ಲಿ, ಹಾಗಾದರೆ ದೊಡ್ಡ ಅವಗಡವೇ ನಡೆಯುತ್ತಿತ್ತು, ಉಳಿದವರೆಲ್ಲರೂ ಪಾತ್ರೆಯನ್ನು ಇಳಿಸಲು ಇಕ್ಕಳ ಹುಡುಕುತ್ತಿದ್ದರೆ, ಈ ಧಿಂಗ್ರ ಎರಡು ಕೈಗಳಿಂದ ಆ ಪಾತ್ರೆಯನ್ನು ಇಳಿಸಿದ, ಕೈ ಚರ್ಮ ಸುಟ್ಟು ಹೋಗಿತ್ತು. ಆದರೆ ಧಿಂಗ್ರನಿಗೆ ಅದಾವುದರ ನೋವೇ ಇರಲಿಲ್ಲ. ಹೀಗೇ ಸಾವರ್ಕರರ ಸಂಪರ್ಕಕ್ಕೆ ಬಂದ ಧಿಂಗ್ರನ ಮನಸ್ಸಿನಲ್ಲಿ ದೇಶಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿ ಬೆಳೆಯುತ್ತಿತ್ತು. ಒಂದು ದಿನ ಭಾರತಭವನಕ್ಕೆ ಧಿಂಗ್ರ ಬಂದಾಗ ಗಂಭೀರವಾದ ಚರ್ಚೆ ನಡೆದಿತ್ತು, ಆ ಸಭೆಗೆ ಹೊಗಲು ಇವನಿಗೆ ಇಷ್ಟವಿರಲಿಲ್ಲ. ಆಗ ಒಂದು ಗ್ರಾಮಾಪೋನ ಹಾಕಿ ಹಾಡು ಕೇಳಲಾರಂಭಿಸಿದ. ಅನೇಕ ಹುಡುಗಿಯರು ರಸ್ತೆ ಬೀದಿಯಲ್ಲಿ ನಿಂತು ಕುಣಿಯಲಾರಂಭಿಸಿದರು. ಇವನು ಶಿಳ್ಳೆ ಹಾಕಲಾರಂಭಿಸಿದ. ಗದ್ದಲವನ್ನು ಕೇಳಿ ಸಾವರ್ಕರ ಹೊರಗೆ ಬಂದು ನೋಡಿ ಮದನನಿಗೆ ನಿನಗೆ ನಾಚಿಕೆಯಾಗುದಿಲ್ಲವೇ ? ಅಲ್ಲಿ ಸಭೆ ನಡೆದಿರುವಾಗ ಈ ರೀತಿ ಮೋಜು ಮಾಡುತ್ತಿದ್ದೀಯಾ ? ಬಾಯಲ್ಲಿ ಮಾತ್ರ ಬಲಿದಾನ, ಹೋರಾಟ ಅಂತೀಯಾ ? ಎಂದು ಛೀಮಾರಿ ಹಾಕಿದರು. ಈ ಘಟನೆಯಿಂದ ಧಿಂಗ್ರ ಎರಡು ದಿನ ಭಾರತಭವನದ ಕಡೆಗೆ ಸುಳಿಯಲಿಲ್ಲ.
ಬಲಿದಾನಕ್ಕೆ ಸಿದ್ಧವಾದ ಧಿಂಗ್ರಾ
[ಬದಲಾಯಿಸಿ]ಒಂದು ಸಂಜೆ ಪ್ರತ್ಯಕ್ಷನಾದ ಧಿಂಗ್ರ, ಸಾವರ್ಕರರಿಗೆ ನೇರವಾಗಿ “ನಾನು ಬಲಿದಾನ ಮಾಡಬೇಕಾದ ಸಮಯ ಬಂದಿದೆಯೋ ? ಎಂದು ಕೇಳಿದ ಆಗ ಸಾವರ್ಕರರು “ಬಲಿದಾನ ಮಾಡುವವನ ಮನಸ್ಸಿನಲ್ಲಿ ಆ ಭಾವನೆ ಬಂದಿದ್ದರೆ ಬಲಿದಾನದ ಸಮಯ ಬಂದಿದೆ ಎಂದೇ ಅದರ ಅರ್ಥ, ಎಂದರು ಹಾಗಾದರೆ ನಾನು ಬಲಿದಾನಕ್ಕೆ ಸಿದ್ಧ ಎಂದು ಸಾವರ್ಕರರಿಗೆ ಧಿಂಗ್ರ ಹೇಳಿದ. ೧೯೦೯, ಜುಲೈ ೧ನೇ ತಾರೀಖು ಭಾರತದ ಅಪಮಾನ ಸೇಡನ್ನು ತೀರಿಸಿಕೊಳ್ಳಲು ಧಿಂಗ್ರ ನಿರ್ಧರಿಸಿದ. ಲಂಡನ್ನಿನಲ್ಲಿ “ನ್ಯಾಶನಲ್ ಇಂಡಿಯನ್ ಅಸೋಸಿಯೇಷನ್” ಎಂಬ ಸಂಸ್ಥೆ ಇತ್ತು. ಅದರ ಉದ್ದೇಶ ಭಾರತದಿಂದ ಬಂದ ತರುಣರಲ್ಲಿ ಬ್ರಿಟಿಷರ ಹೊಗಳಬಟ್ಟರನ್ನಾಗಿ ಮಾಡುವುದು. ಅಲ್ಲಿ ಕರ್ಜನವ್ಯಾಲಿ ಎಂಬ ಬ್ರಿಟಿಷ ಮಂತ್ರಿ ಮಂಡಳದ ಸಲಹೆಗಾರನಾಗಿದ್ದ ವ್ಯಕ್ತಿ, ಬಂದು ಭಾರತೀಯರ ಕುರಿತಂತೆ ಕೆಟ್ಟ ಮಾತುಗಳನ್ನು ಆಡುತ್ತಿದ್ದ. ಧಿಂಗ್ರನ ತಂದೆಯವರಿಗೂ ಈ ಬ್ರಿಟಿಷ ಅಧಿಕಾರಿಗೂ ಒಳ್ಳೆಯ ಸ್ನೇಹವಿತ್ತು. ಆ ವ್ಯಕ್ತಿಯನ್ನೆ ಬೇಟೆಯಾಡಲು ಧಿಂಗ್ರ ಆ ದಿನ ನಿಶ್ಚಯಿಸಿದ್ದ. ಅಂದು “ನ್ಯಾಷನಲ್ ಇಂಡಿಯನ್ ಅಸೋಸಿಯೆಷನ್ನಿನ ವಾರ್ಷಿಕೊತ್ಸವವನ್ನು ಲಂಡನ್ನಿನ ಜಂಹಗೀರ ಹಾಲಿನಲ್ಲಿ ಆಚರಿಸಲು ನಿರ್ಧರಿಸಲಾಗಿತ್ತು. ಧಿಂಗ್ರ ಒಂದು ರಿವಾಲ್ವರ, ೨ ಪಿಸ್ತೂಲ ೨ ಚೂರಿಗಳೊಂದಿಗೆ ಆ ಸಭೆಗೆ ಬಂದ. ರಾತ್ರಿ ಹತ್ತೂವರೆ ಗಂಟೆಗೆ ಕರ್ಜನವ್ಯಾಲಿ ಆ ಸಭೆಗೆ ಬಂದ, ಧಿಂಗ್ರನಿಗೆ ಅವನು “ಹಲೋ” ಎಂದ, ಮೊದಲೇ ಪರಿಚಯವಿದ್ದದರಿಂದ ಧಿಂಗ್ರ ಅವನ ಬಳಿ ಮಾತನಾಡಲು ಹೋದಂತೆ ಮಾಡಿ ಕರ್ಜನ್ನಿನ ಕುತ್ತಿಗೆಗೆ ಎರಡು ಗುಂಡು ಹೊಡೆದ, ಕರ್ಜನ ಗಟ್ಟಿಯಾಗಿ ಚೀರುತ್ತಾ ನೆಲಕ್ಕುರುಳಿದ, ಮತ್ತೆರೆಡು ಗುಂಡುಗಳನ್ನು ಧಿಂಗ್ರ ಹೊಡೆದ. ಸೂರ್ಯಮುಳುಗದ ಸಾಮ್ರಾಜ್ಯ ಎಂದು ಹೆಮ್ಮೆಯಿಂದ ಬೀಗುತ್ತಾ ಇದ್ದ ಬ್ರಿಟಿಷರಿಗೆ ಈ ಸುದ್ದಿಯನ್ನು ನಂಬಲಿಕ್ಕೆ ಆಗಲಿಲ್ಲ. ಹುಲಿಯ ಬೋನಿನೊಳಕ್ಕೆ ಒಳಗೆ ನುಗ್ಗಿ, ಹುಲಿಯನ್ನೆ ಧಿಂಗ್ರ ಕೊಂದು ಹಾಕಿದ್ದ, ಪೋಲೀಸರು ಅವನನ್ನ ಹಿಡಿದುಕೊಂಡರು, ಅಲ್ಲಿದ್ದ ಡಾಕ್ಟರರೊಬ್ಬರು ಧಿಂಗ್ರನ ನಾಡಿ ಬಡಿತ ಪರೀಕ್ಷಿಸಿದರು. ಅವನ ನಾಡಿ ಸಹಜವಾಗಿಯೇ ಇತ್ತು. ಪೋಲೀಸ ಸ್ಟೇಷನ್ನಿಗೆ ಕರೆದುಕೊಂಡು ಹೋದರು, ಅಲ್ಲಿ ಅವನು ಗಾಡ ನಿದ್ರೆ ಮಾಡಿದ. ಈ ಘಟನೆ ಕೇಳಿದ ಧಿಂಗ್ರನ ತಂದೆ “ಅವನು ನನ್ನ ಮಗನೇ ಅಲ್ಲ ಎಂದು ಹೇಳಿದ ಅವನ ಸಹೋದರ ಕೂಡ ಅವನಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ. ಆದರೆ ಇಡೀ ದೇಶ ಧಿಂಗ್ರನ ಸಾಹಸವನ್ನು ಮೆಚ್ಚಿ, ದೇಶದ ಹೆಮ್ಮೆಯ ಸುಪುತ್ರ ಎಂದು ಹೆಮ್ಮೆ ಪಟ್ಟಿತು. ಜುಲೈ ೫, ೧೯೦೯ ಈ ಕೃತ್ಯವನ್ನು ಖಂಡಿಸಿ ಲಂಡನ್ನಿನ ಕಾಕ್ಸ್‌ಟನ್ ಸಭಾಂಗಣದಲ್ಲಿ ಸರ್ವಾನುಮತದ ನಿರ್ಣಯ ಮಂಡಿಸುವ ಸಭೆಯಲ್ಲಿ ಸಾವರ್ಕರ ತಮ್ಮ ಸ್ನೇಹಿತರೊಂದಿಗೆ ಹೋಗಿ ಆ ನಿರ್ಣಯವನ್ನು ವಿರೋಧಿಸಿದರು ಸಾವರ್ಕರರು, ಬ್ರಿಕ್ಸಟನ್ ಜೈಲಿನಲ್ಲಿ ಧಿಂಗ್ರವನ್ನು ಭೆಟ್ಟಿಯಾಗಲು ಹೋದಾಗ “ನಾನು ಸತ್ತಮೇಲೆ ನನ್ನ ಸಂಸ್ಕಾರವನ್ನು ಹಿಂದೂ ಪದ್ಧತಿಯಲ್ಲೇ ನಡೆಯಬೇಕು ನನ್ನ ಸೋದರ ನನ್ನ ಶವವನ್ನು ಮುಟ್ಟಕೂಡದು, ನನ್ನ ಸಾಮಾನುಗಳನ್ನೆಲ್ಲ ಹರಾಜುಹಾಕಿ ಬಂದ ಹಣವನ್ನು “ರಾಷ್ಟ್ರೀಯ ನಿಧಿ”ಗೆ ಕೊಡಿ ಎಂದು ಹೇಳಿದ. ಜುಲೈ ೧೦ ರಂದು ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯಲ್ಲಿ “ಹೇಗೆ ಜರ್ಮನರಿಗೆ ಇಂಗ್ಲೆಂಡನ್ನು ಆಕ್ರಮಿಸಲು ಅಧಿಕಾರವಿಲ್ಲವೋ, ಅದೇ ರೀತಿ ಹಿಂದುಸ್ಥಾನವನ್ನು ಆಕ್ರಮಿಸುವ ಅಧಿಕಾರ ಆಂಗ್ಲರಿಗೆ ಇಲ್ಲ, ನಮ್ಮ ಪವಿತ್ರ ಭೂಮಿಯನ್ನು ಅಪವಿತ್ರಗೊಳಿಸಿರುವ ಆಂಗ್ಲರನ್ನು ಸಂಹರಿಸುವುದು ನ್ಯಾಯ ಸಮ್ಮತವಾಗಿದೆ. ನನಗೆ ಮರಣದಂಡನೆ ವಿಧಿಸಿ, ಅದೇ ನನ್ನ ಆಶೆ ಅದರಿಂದ ನನ್ನ ದೇಶಬಾಂಧವರ ಸೇಡಿನ ಕಿಡಿ ಹೆಚ್ಚು ಉಗ್ರವಾಗುತ್ತದೆ. ಧಿಂಗ್ರನು ಸಿದ್ಧಪಡಿಸಿಕೊಂಡಿದ್ದ ಹೇಳಿಕೆಯನ್ನು ಪೋಲೀಸರು ಕದ್ದು ಮುಚ್ಚಿಟ್ಟಿದ್ದರು. ಅದರ ಒಂದು ಪ್ರತಿ ಸಾವರ್ಕರ ಬಳಿಯಿತ್ತು. ಸಾವರ್ಕರ ಈ ಪ್ರತಿಯನ್ನು ಲಂಡನ್ನಿನ “ಡೈಲಿ ನ್ಯೂಸ”ನಲ್ಲಿ ಅಗಷ್ಟ ೧೬ ರಂದು ಪ್ರಕಟವಾಗುವಂತೆ ಮಾಡಿದರು. ಆ ಹೇಳಿಕೆಯಲ್ಲಿ ಧಿಂಗ್ರ “ನನ್ನ ದೇಶಕ್ಕೆ ಅವಮಾನವಾದರೆ ಅದು ನನ್ನ ದೇವರಿಗೆ ಅಪಮಾನವಾದಂತೆ ಎಂಬುದು ಹಿಂದುವಾದ ನನ್ನ ನಂಬಿಕೆ, ನನ್ನಂಥ ದಡ್ಡ ಮಗ, ನನ್ನ ತಾಯಿಗೆ ನನ್ನ ರಕ್ತವನ್ನಲ್ಲದೆ ಇನ್ನೆನು ತಾನು ಕೊಡಬಲ್ಲೆ ? ಆದುದರಿಂದ ನನ್ನ ರಕ್ತವನ್ನು ಮಾತೃಭೂಮಿಗೆ ಅರ್ಪಿಸಿದ್ದೇನೆ. ನನ್ನ ತಾಯಿನಾಡು ಸ್ವತಂತ್ರವಾಗುವವರೆಗೂ ನನ್ನ ತಾಯಿಯ ಹೊಟ್ಟೆಯಲ್ಲಿ ಮತ್ತೆ ಮತ್ತೆ ಹುಟ್ಟಬೇಕು. ಇದೇ ಧ್ಯೇಯಕ್ಕಾಗಿ ಬಲಿದಾನ ನೀಡುವಂತಾಗಬೇಕೆಂದು ಹೇಳಿದ್ದ.
ಗಲ್ಲಿಗೇರಿದ ಧಿಂಗ್ರಾ
[ಬದಲಾಯಿಸಿ]ಮದನಲಾಲ ಧಿಂಗ್ರನಿಗೆ ಅಗಷ್ಟ ೧೭, ೧೯೦೯ ರಂದು ಲಂಡನ್ನಿನ ಫೆಂಟೋನವಿಲ್ಲ ಜೈಲಿನಲ್ಲಿ ಗಲ್ಲಿಗೆ ಎರಿಸಲಾಯಿತು. ಇಂಜನೀಯರಿಂಗ್ ಪದವಿ ಪಡೆಯಲು ಲಂಡನ್ನಿಗೆ ಬಂದು, ಸ್ನೋ ಪೌಡರ್, ಕನ್ನಡಿ, ಸೊಗಸಾಗಿ ಇಸ್ತ್ರಿ ಮಾಡಿದ ಬಟ್ಟೆ ಧರಿಸಿ ಶೋಕಿಲಾಲ ನಾಗಿದ್ದ ಧಿಂಗ್ರ ಆದರೆ ಮೂರೇ ವರ್ಷಗಳಲ್ಲಿ ದೇಶಪ್ರೇಮದ ಜ್ವಾಲೆಯನ್ನು ತನ್ನಲ್ಲಿ ಬೆಳಗಿಸಿಕೊಂಡು ದೇಶಕ್ಕಾಗಿ ಬಲಿದಾನ ಮಾಡಿ, ದೇಶದ ಮನೆ ಮನೆಗಳಲ್ಲಿ ಸ್ವಾತಂತ್ರ ದೀಪದ ಜ್ವಾಲೆಯನ್ನು ಪ್ರಜ್ವಲಗೊಳಿಸಿದ, ಧಿಂಗ್ರ ಹಾಗೆಯೇ ಉಳಿದು ಬಿಟ್ಟಿದ್ದರೆ ಅವನ ಹೆಸರನ್ನು ಇಂದು ಯಾರೂ ಸ್ಮರಿಸುತ್ತಿರಲ್ಲಿಲ್ಲ. ತಾನು ಬದುಕಿದ್ದು ಸಾರ್ಥಕವಾಗಬೇಕು, ಪ್ರಯೋಜನವಾಗಬೇಕೆಂದು, ತನ್ನ ದೇಶಬಾಂಧವರು ಸ್ವತಂತ್ರವಾಗಿ ಬದುಕಲಿ ಎಂದು ಧಿಂಗ್ರ ಬಲಿದಾನವಾದ. ಅಗಷ್ಟ ೧೭, ಈ ದಿನ ನಾವೊಂದು ಕ್ಷಣ, ಈ ಬಲಿದಾನವನ್ನ ನೆನಪಿಸಿಕೊಂಡರೆ, ಅದುವೇ ಈ ದೇಶಭಕ್ತ ಧಿಂಗ್ರನಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿ.