ವಿಷಯಕ್ಕೆ ಹೋಗು

ಶುಂಠಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶುಂಠಿ
Conservation status
Secure
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
Z. officinale
Binomial name
Zingiber officinale

ಶುಂಠಿ ಆಹಾರದಲ್ಲಿ ಬಳಸಲಾಗುವ ಒಂದು ಸಂಬಾರ ವಸ್ತು. ಶುಂಠಿಯನ್ನು ಔಷಧಿಗಳಲ್ಲಿ ಸಹ ಬಳಸುವರು. ಶುಂಠಿಯ ಗಿಡದ ನೆಲದೊಳಗಿನ ಭಾಗದ ಕಾಂಡವು ಶುಂಠಿಯೆನಿಸಿಕೊಳ್ಳುತ್ತದೆ. ಶುಂಠಿಯ ಕೃಷಿಗೆ ಸುದೀರ್ಘ ಇತಿಹಾಸವಿದೆ. ಏಷ್ಯಾ ಮೂಲದ ಶುಂಠಿಯನ್ನು ಭಾರತ, ಆಗ್ನೇಯ ಏಷ್ಯಾ, ಪಶ್ಚಿಮ ಆಫ್ರಿಕಾ ಮತ್ತು ಕೆರಿಬ್ಬಿಯನ್ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.

ಶುಂಠಿಯ ತೀಕ್ಷ್ಣ ಘಾಟು ಮತ್ತು ರುಚಿಗಳು ಅದರಲ್ಲಿನ ಜಿಂಜೆರೋಲ್‌, ಶೊಗಾಲ್‌ ಮತ್ತು ಜಿಂಜೆರೋನ್‌ಗಳೆಂಬ ಸಸ್ಯತೈಲಗಳ ಮಿಶ್ರಣದಿಂದ ಉಂಟಾಗುತ್ತದೆ. ಈ ತೈಲಗಳು ತಾಜಾ ಶುಂಠಿಯ ಒಟ್ಟು ತೂಕದ ೧ ರಿಂದ ೩ ಶೇಕಡಾದಷ್ಟು ಇರುತ್ತವೆ. ಸುಗಂಧ ಬೀರುವ ಜಿಂಜರಾಲ್ ಹಳದಿ ಬಣ್ಣದ ಎಣ್ಣೆ. ಅದರಲ್ಲಿ ಕಾಂಫೀನೆ, ಫೆಲ್ಲಾಂಡ್ರಮ್, ಜಿಂಜಿಬೆನೈನ್, ಸೈನಿಯಾಲ್, ಬೊರ್ನಿಯಾಲ್ ಎಂಬ ಘಟಕಗಳಿವೆ. ವಿವಿಧ ರೆಸಿನ್‌ಗಳು, ಪಿಷ್ಟಪದಾರ್ಥ, ಪೊಟಾಸಿಯಮ್ ಆಕ್ಸಲೇಟ್ ಮತ್ತು ಕೆಲವು ಆವಶ್ಯಕ ತೈಲಗಳೂ ಇರುವುವು.

ಹಸಿ ಶುಂಠಿ ಮತ್ತು ಒಣಶುಂಠಿಗಳನ್ನು ಅಡುಗೆಯಲ್ಲಿ ಸಂಬಾರ ಪದಾರ್ಥವನ್ನಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.[]

ಶುಂಠಿಯ ದೊಡ್ಡದೊಂದು ತುಣುಕು

ಸಸ್ಯ ವಿವರಣೆ

[ಬದಲಾಯಿಸಿ]

ಸುಮಾರು ೩ ರಿಂದ ೪ ಅಡಿ ಎತ್ತರಕ್ಕಿರುವ ಶುಂಠಿಯ ಗಿಡವು ತೆಳ್ಳಗೆ ನೇರವಾಗಿರುತ್ತದೆ. ಗಿಡದ ಬಿಳಿ ಮತ್ತು ರೋಜಾ ಬಣ್ಣದ ಮೊಗ್ಗುಗಳು ಹಳದಿ ಬಣ್ಣದ ಹೂವಾಗಿ ಅರಳುತ್ತವೆ.

ಭಾರತದ ಅನೇಕ ಕಡೆಗಳಲ್ಲಿ, ವಿಶೇಷವಾಗಿ ತಮಿಳುನಾಡು, ಕೇರಳ ಮತ್ತು ಕೊಡಗಿನ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಇದರ ಬೇಸಾಯ ಮಾಡುತ್ತಾರೆ. ಹಿತೋಷ್ಣ ತಂಪು ಹವಾಮಾನವಿರುವ ಸ್ಥಳ ಶುಂಠಿ ಕೃಷಿಗೆ ಯೋಗ್ಯವಾದುದು. ಮೊಳಕೆಗಳಿರುವ ಬೇರು, ಕಾಂಡ ಅಥವಾ ರೈಜೋಮ್‌ಗಳನ್ನು ಮೆದುಮಣ್ಣಿನ ನೆಲದಲ್ಲಿ ನಾಟಿಮಾಡಿ ಇದರ ಗಿಡಗಳನ್ನು ಬೆಳೆಸುತ್ತಾರೆ. ಚಿಗುರೊಡೆದು ಪೂರ್ತಿ ಬೆಳೆದ ಸಸ್ಯದ ಮೇಲ್ಭಾಗದಲ್ಲಿ ಅಗಲವಾದ ದೊಡ್ಡ ಎಲೆಗಳು ಬೇರುಕಾಂಡದಿಂದ ಚಿಗುರಿ ನೆಲದ ಮೇಲ್ಭಾಗಕ್ಕೆ ಬರುತ್ತವೆ. ಶುಂಠಿ ವಾರ್ಷಿಕ ಸಸ್ಯವಾಗಿದೆ. ಇದರ ಬೇರುಕಾಂಡವೇ ಉಪಯೋಗ ಭಾಗ.

ಶುಂಠಿಯ ಉತ್ಪಾದನೆ

[ಬದಲಾಯಿಸಿ]

ಜಗತ್ತಿನ ಒಟ್ಟು ಶುಂಠಿಯ ಉತ್ಪಾದನೆಯ ೩೦% ಪಾಲನ್ನು ಬೆಳೆಯುವ ಭಾರತ ಮೊದಲ ಸ್ಥಾನದಲ್ಲಿದೆ.

ವಿಶ್ವದ ಮೊದಲ ಹತ್ತು ಶುಂಠಿ ಉತ್ಪಾದಕ ದೇಶಗಳು — 11 ಜೂನ್ 2008ರಂತೆ
ದೇಶ ಉತ್ಪಾದನೆ (ಟನ್ನುಗಳಲ್ಲಿ)
ಭಾರತ ೫೦೦೦೦೦
ಚೀನಾ 285000
ಇಂಡೋನೇಷ್ಯಾ 177000
ನೇಪಾಳ 158905
ನೈಜೀರಿಯ 138000
ಬಾಂಗ್ಲಾದೇಶ 57000
ಜಪಾನ್‍‍ 42000
ಥೈಲ್ಯಾಂಡ್‍‍ 34000
ಫಿಲಿಪ್ಪೀನ್ಸ್‍‍ 28000
ಶ್ರೀಲಂಕಾ 8270
ಒಟ್ಟು ವಿಶ್ವ 1387445

ಔಷಧೀಯ ಗುಣಗಳು

[ಬದಲಾಯಿಸಿ]

ಶುಂಠಿ ಹಸಿವನ್ನು ಜಾಗೃತಗೊಳಿಸಿ ಮಲಬದ್ಧತೆಯನ್ನು ನಿವಾರಿಸಿ, ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆ ಸಹ ಹೋಗಿಸುತ್ತದೆ. ಶುಂಠಿಯನ್ನು ಬಹಳ ಒಳ್ಳೆಯ ಮೂಲಿಕೆ ಎಂದು ಕರೆಯಲಾಗುತ್ತದೆ. ಶುಂಠಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಬಿ ಕಾಂಪ್ಲೆಕ್ಸ್ ಇದೆ. ಇದು ಮೆಗ್ನೀಸಿಯಮ್, ಫಾಸ್ಪರಸ್, ಸಿಲಿಕಾನ್, ಸೋಡಿಯಂ, ಕಬ್ಬಿಣ, ಸತು, ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. []

  1. ಶುಂಠಿಯಲ್ಲಿರುವ ಜಿಂಜೆರೋಲ್‌ಗಳು ನೋವುನಿವಾರಕ, ಉದ್ವೇಗಶಾಮಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಜೊತೆಗೆ ಇವು ಜೀರ್ಣಶಕ್ತಿಯನ್ನು ಹೆಚ್ಚಿಸುವ ವಿಶೇಷ ಗುಣವನ್ನು ಸಹ ಹೊಂದಿವೆ.
  2. ಶುಂಠಿಯು ಕೆಲ ಬಗೆಯ ಅತಿಸಾರಕ್ಕೆ ಪರಿಣಾಮಕಾರಿ ಔಷಧಿಯೆಂದು ಕಂಡುಕೊಳ್ಳಲಾಗಿದೆ.
  3. ಸಮುದ್ರಯಾನದಿಂದ ಉಂಟಾಗುವ ತಲೆಸುತ್ತುವಿಕೆ, ಹೊಟ್ಟೆ ತೊಳಸುವಿಕೆಗಳಿಗೆ ಉತ್ತಮ ಶಮನವೆಂದು ಸಿದ್ಧವಾಗಿದೆ.
  4. ಉರಿಯೂತ ನಿವಾರಕ
  5. ಮುಟ್ಟಿನ ನೋವನ್ನು ಶಮನಗೊಳಿಸಲು ಸಹಕಾರಿ.
  6. ರಕ್ತದಲ್ಲಿನ ಕೆಟ್ಟ ಕೊಬ್ಬನ್ನು ಕಡಿತಗೊಳಿಸುತ್ತದೆ.
  7. ನರಮಂಡಲದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
  8. ಜೇನುತುಪ್ಪ, ತುಳಸಿ ರಸವನ್ನು ಶುಂಠಿರಸದೊಂದಿಗೆ ಬೆರೆಸಿ ಕುಡಿದರೆ ಕಫ ನಿವಾರಣೆಯಾಗುತ್ತದೆ.

ಚಿತ್ರಸಂಪುಟ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Ginger, NCCIH Herbs at a Glance". US NCCIH. 1 September 2016. Retrieved 2 February 2019.
  2. "ಶುಂಠಿಯ ಆರೋಗ್ಯ ಪ್ರಯೋಜನಗಳು". kannadanews.today.


ಬಾಹ್ಯ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಶುಂಠಿ&oldid=1170639" ಇಂದ ಪಡೆಯಲ್ಪಟ್ಟಿದೆ