ವಿಷಯಕ್ಕೆ ಹೋಗು

ಫಿರೋಝ್ ಗಾಂಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫಿರೋಝ್ ಗಾಂಧಿ
ಫಿರೋಝ್ ಗಾಂಧಿ
ಫಿರೋಝ್ ಗಾಂಧಿ

ಫಿರೋಝ್ ಗಾಂಧಿ


ಜನನ (೧೯೧೨-೦೯-೧೨)೧೨ ಸೆಪ್ಟೆಂಬರ್ ೧೯೧೨
ಮರಣ 8 September 1960(1960-09-08) (aged 47)
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಜೀವನಸಂಗಾತಿ ಇಂದಿರಾ ಗಾಂಧಿ
ಧರ್ಮ ಪಾರ್ಸಿ

ಫಿರೋಝ್ ಗಾಂಧಿ (ಸೆಪ್ಟೆಂಬರ್ ೧೨, ೧೯೧೨ - ಸೆಪ್ಟೆಂಬರ್ ೮, ೧೯೬೦) ಒಬ್ಬ ಭಾರತೀಯ ರಾಜಕಾರಣಿ ಮತ್ತು ಪತ್ರಕರ್ತರಾಗಿದ್ದರು. ಇವರು ಭಾರತದ ಸಂಸತ್ ಸದಸ್ಯರಾಗಿದ್ದು, ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಪತಿಯಾಗಿದ್ದು, ಸಂಜಯ್ ಗಾಂಧಿ ಮತ್ತು ಭಾರತದ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ತಂದೆ.

ಜೀವನದ ಮೊದಲ ಘಟ್ಟಗಳು

[ಬದಲಾಯಿಸಿ]

ಇವರು ಆಜಾದ್ ಭಾರತದ ಸಂಸತ್ತಿನ ಪ್ರಥಮ ಸದಸ್ಯರಲ್ಲೊಬ್ಬರು. ಗುಜರಾತಿ ಭಾಷೆ ಮಾತನಾಡುವ ಪಾರ್ಸಿ ಪರಿವಾರದಲ್ಲಿ ಜನಿಸಿದರು. ತಂದೆ ಝೆಹಾಂಗೀರ್ ಗಾಂಧಿ, ಆಗಿನ ಕಾಲದ ಬೇರೆ ಪಾರ್ಸಿಗಳೆಲ್ಲರ ತರಹ ಫಿರೋಝ್, ಹಿಂದೂ ಅಡ್ಡಹೆಸರನ್ನು ಇಟ್ಟುಕೊಂಡಿದ್ದರು. ಉದಾಹರಣೆಗೆ, ಪಾರ್ಸಿಗಳಲ್ಲಿ ಸಾಮಾನ್ಯವಾದ ಬಳಕೆಯಲ್ಲಿರುವ ಹೆಸರುಗಳೆಂದರೆ, ಶ್ರೋಫ್ ಪದವನ್ನು ಹಿಂದೂ ಮತ್ತು ಪಾರ್ಸಿಗಳೆರಡರಲ್ಲೂ ಬಳಸುತ್ತಾರೆ. ಫಿರೋಜ್‍ರವರ ವಿದ್ಯಾಭ್ಯಾಸವೆಲ್ಲ, ನಗರದ ಸಿಟಿ ಆಂಗ್ಲೊ-ವರ್ನ್ಯಾಕ್ಯುಲರ್ ಹೈ ಸ್ಕೂಲ್ ಮತ್ತು ಎವಿಂಗ್ ಕ್ರಿಶ್ಚಿಯನ್ ಕಾಲೇಜ್‍ನಲ್ಲಿ ನಡೆಯಿತು.[] ನಂತರದ ಓದು ಇಂಗ್ಲೆಂಡ್‍ನ ಲಂಡನ್ ಸ್ಕೂಲ್ ಆಫ್ ಎಕೊನೊಮಿಕ್ಸ್‌ನಲ್ಲಿ ನಡೆಯಿತು.[] ೧೯೩೦ ರಲ್ಲಿ, ಫಿರೋಝ್ ಗಾಂಧಿಯವರು ಕಾಲೇಜ್ ವಿದ್ಯಾಭ್ಯಾಸವನ್ನು ಬಿಟ್ಟು ದೇಶದ ಸ್ವಾತಂತ್ರ್ಯ ಸಮರದಲ್ಲಿ ಧುಮುಕಿ, ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಫಿರೋಜ್‍ಗೆ ನೆಹ್ರೂ ಪರಿವಾರದ ಜೊತೆ ಸಂಪರ್ಕ ಬೆಳೆಯಿತು. ಕಮಲಾ ನೆಹರು ಮತ್ತು ಇಂದಿರಾ ಜೊತೆ ಸಲಿಗೆ ಬೆಳೆಯಿತು.

ಲಂಡನಿನಲ್ಲಿದ್ದಾಗಲೇ ಇವರು ಭಾರತೀಯ ವಿದ್ಯಾರ್ಥಿಗಳು ಮತ್ತು ಬ್ರಿಟಿಷ್ ಬುದ್ಧಿಜೀವಿಗಳಲ್ಲಿ ಗಾಂಧೀಜಿಯವರ ವಿಚಾರಧಾರೆಯನ್ನು ಪ್ರಚಾರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಲಂಡನ್ನಿನ ಇಂಡಿಯನ್ ಮಜ್ಲಿಸ್‍ನ ಅಧ್ಯಕ್ಷರಾಗಿದ್ದರು. ಭಾರತದ ಸ್ವಾತಂತ್ರ್ಯದ ಬಗ್ಗೆ ಇವರಿಗಿದ್ದ ಅಮಿತೋತ್ಸಾಹ, ಇವರು ಮಾಡುತ್ತಿದ್ದ ಕೆಲಸ-ಇವು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಮುಂತಾದವರ ಗಮನ ಸೆಳೆದುವು.

ಇಂದಿರಾರೊಂದಿಗೆ ವಿವಾಹ

[ಬದಲಾಯಿಸಿ]

ಕಮಲಾ ನೆಹ್ರೂರವರ ಕಾಯಿಲೆಯ ಸಮಯದಲ್ಲಿ, ಅವರಿಗೆ ಸಹಾಯ ಮಾಡಲು, ನೆಹ್ರೂ ಪರಿವಾರದ ಜೊತೆ ಅವರು ಯೂರೊಪ್‍ಗೆ ಪ್ರಯಾಣಮಾಡಿದರು. ಇಂಗ್ಲೆಂಡ್‍ನಲ್ಲಿ ಕಾಲೇಜ್‍ನಲ್ಲಿ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಇಂದಿರಾ ನೆಹರು ಮತ್ತು ಫಿರೋಝ್ ಹತ್ತಿರವಾದರು. ಆ ಬೆಳವಣಿಗೆ, ಪ್ರೀತಿಯಲ್ಲಿ ತಿರುಗಿ, ಮದುವೆಯ ಬಗ್ಗೆ ಇಂದಿರಾ ಬಳಿ ಪ್ರಸ್ತಾಪಿಸಿದಾಗ, ಕಮಲಾ ನೆಹ್ರೂ ಯಾಕೋ ಇಷ್ಟಪಡಲಿಲ್ಲ. ಒಬ್ಬಳೇ ಮಗಳ ವಿವಾಹವನ್ನು ಅದ್ಧೂರಿಯಾಗಿ ನೆರವೇರಿಸುವ ಮಹದಾಶೆಯನ್ನು ಅವರು ಇಟ್ಟುಕೊಂಡಿದ್ದರೆಂದು ತೋರಿತು. ಇವರು ೧೯೪೨ರ ಮಾರ್ಚ್ ೨೬ರಂದು ನೆಹರೂ ಅವರ ಕುಮಾರಿ ಇಂದಿರಾ ಅವರನ್ನು ವಿವಾಹವಾದರು.

ಕ್ವಿಟ್ ಇಂಡಿಯಾ ಚಳುವಳಿ

[ಬದಲಾಯಿಸಿ]

ಭಾರತ ಬಿಟ್ಟು ತೊಲಗಿ ಚಳುವಳಿಯ ಸಮಯದಲ್ಲಿ ಫಿರೋಝ್ ಗಾಂಧಿಯವರನ್ನು ಬಂಧಿಸಲಾಗಿತ್ತು. ೬ ತಿಂಗಳು ಜೈಲು ವಾಸವನ್ನೂ ಫಿರೋಝ್ ಗಾಂಧಿಯವರು ಅನುಭವಿಸಿದ್ದರು. ಮದುವೆಯಾದ ಮೇಲೂ ಅಲಹಾಬಾದಿನ ನೈನಿ ಸೆಂಟ್ರೆಲ್ ಜೈಲ್‍ನಲ್ಲಿ ಅವರನ್ನು ೧ ವರ್ಷ ಕಾಲ ಬಂಧಿಸಿ ಕೈದಿಯಾಗಿ ಇಡಲಾಗಿತ್ತು.[] ಇಂದಿರಾ ಅವರನ್ನೂ ಜೈಲಿನಲ್ಲಿ ಬಂಧಿಸಲಾಗಿತ್ತು.

ಕುಟುಂಬ ಹಾಗೂ ರಾಜಕೀಯ

[ಬದಲಾಯಿಸಿ]

ಇಂದಿರಾ ಗಾಂಧಿ-ಫಿರೋಝ್ ಗಾಂಧಿ ದಂಪತಿಗಳಿಗೆ ೧೯೪೪ ರಲ್ಲಿ ಭಾರತದ ಭವಿಷ್ಯದ ಪ್ರಧಾನಿ ರಾಜೀವ್ ಗಾಂಧಿ ಜನಿಸಿದರು. ೧೯೪೬ ರಲ್ಲಿ ಸಂಜಯ್ ಗಾಂಧಿಯವರು ಹುಟ್ಟಿದರು. ಇಂದಿರಾ ಗಾಂಧಿಯವರು ತಮ್ಮ ಪತಿ ಮತ್ತು ಮಕ್ಕಳ ಜೊತೆ ಅಲಹಾಬಾದ್‍ನಲ್ಲಿ ವಾಸ್ತವ್ಯ ಹೂಡಿದರು. ಫಿರೋಜ್ ಗಾಂಧಿಯವರು ತಮ್ಮ ಮಾವ ಜವಾಹರ್ ಲಾಲ್ ನೆಹ್ರೂರವರು ಹುಟ್ಟುಹಾಕಿದ ಪತ್ರಿಕೆ ದ ನ್ಯಾಷನಲ್ ಹೆರಾಲ್ಡ್‌ನ ಸಂಪಾದಕರಾದರು. ಇವರು ಲಖನೌದಿಂದ ಪ್ರಕಟವಾಗುವ ಹಿಂದಿ ದಿನಪತ್ರಿಕೆ ನವಜೀವನ ಇವುಗಳ ಪ್ರಕಾಶನ ಸಂಸ್ಥೆಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದರು. ಇವರ ಮಾರ್ಗದರ್ಶನದಲ್ಲಿ ನ್ಯಾಷನಲ್ ಹೆರಾಲ್ಡ್ ಉತ್ತರ ಭಾರತದ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಲ್ಲಿ ಒಂದಾಯಿತು. ಇವರು ಇತರ ಪತ್ರಿಕೆಗಳೊಂದಿಗೂ, ಯುವಜನ ಚಳವಳಿಗೆ ಸಂಬಂಧಪಟ್ಟ ಹಲವಾರು ಸಾರ್ವಜನಿಕ ಸಂಘ ಸಂಸ್ಥೆಗಳೊಂದಿಗೂ ನಿಕಟ ಸಂಬಂಧ ಹೊಂದಿದ್ದರು. ಫಿರೋಜ್‍ರವರು ೧೯೫೨ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಂತು ಸ್ವತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಚುನಾಯಿತರಾದರು. ಅವರ ಪ್ರೀತಿಯ ಪತ್ನಿ ಇಂದಿರಾ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಫಿರೋಜ್ ಗಾಂಧಿ ಸಹಜವಾಗಿ ಗೆದ್ದರು. ಸ್ವತಂತ್ರ ಮನೋವೃತ್ತಿಯವರಾದ ಫಿರೋಜ್, ನೆಹ್ರುರವರ ನೀತಿಯನ್ನು ಹಲವೊಮ್ಮೆ ಖಂಡಿಸಿ ಮಾತಾಡುತ್ತಿದ್ದರು. ರಾಜಕೀಯ ವಲಯದಲ್ಲಿ ನಡೆಯುತ್ತಿದ್ದ ಹಲವಾರು, ಭ್ರಷ್ಟಾಚಾರಗಳಾದ ಲಂಚ ಹಾಗೂ ಇತರ ದುರ್ವ್ಯವಹಾರಗಳನ್ನು ಖಡಾಖಂಡಿತವಾಗಿ ವಿರೋಧಿಸಿ ಬಯಲಿಗೆಳೆಯುತ್ತಿದ್ದರು. ಇವರು ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಸದಸ್ಯರಾಗಿದ್ದರು. ಇವರು ಭಾಷಣಕಾರರೆಂದೂ, ಸಮರ್ಥರಾದ ವಾದ ಚತುರರೆಂದೂ ಖ್ಯಾತಿ ಗಳಿಸಿದ್ದರು. ಇವರ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದುವು.

ವಿತ್ತಸಚಿವ ಟಿ. ಟಿ. ಕೃಷ್ಣಮಾಚಾರಿಯವರ ರಾಜೀನಾಮೆ

[ಬದಲಾಯಿಸಿ]

ಆಗಿನ ಸಮಯದಲ್ಲಿ ವಿತ್ತಮಂತ್ರಿಯಾಗಿದ್ದ ಟಿ. ಟಿ. ಕೃಷ್ಣಮಾಚಾರಿಯವರನ್ನೂ ಮತ್ತು ಜೀವವಿಮೆ ಕಂಪೆನಿಗಳಲ್ಲಿ ಆಗಿರುವ ಹಣದ ಹೇರಾಫೇರಿಗಳನ್ನು ಧೈರ್ಯವಾಗಿ, ಬಹಿರಂಗವಾಗಿ ಅಂದಿನ ಲೋಕಸಭೆಯಲ್ಲಿ ಖಂಡಿಸಿ ಮಾತಾಡಿದರು. ಇಂತಹ ವದಂತಿಗಳನ್ನು ಬಯಲಿಗೆಳೆದು ಅವರ ತರಹ ದಿಟ್ಟವಾಗಿ ಹೊಡೆದಾಡುವ ಸಾಹಸವನ್ನು ಯಾರೂ ಮಾಡುತ್ತಿರಲಿಲ್ಲ. ಟಿ.ಟಿ.ಕೆಯವರು ರಾಜಿನಾಮೆ ಸಲ್ಲಿಸಲೇಬೇಕಾಯಿತು. ಸರ್ಕಾರದಲ್ಲಿ ಮಿತವ್ಯಯ ಸಾಧನೆ-ಇಂಥ ನಾನಾ ವಿಚಾರಗಳಲ್ಲಿ ಗಾಂಧಿಯವರು ಆಸಕ್ತಿ ತಳೆದಿದ್ದರು. ಕೇಂದ್ರ ಸರ್ಕಾರದ ಉದ್ಯೋಗಿಗಳ ಮುಷ್ಕರದಲ್ಲಿ ಇವರು ಪ್ರಭಾವಪುರ್ಣವಾದ ಮಧ್ಯಸ್ಥಿಕೆ ವಹಿಸಿದ್ದರು. ಇಂತಹ ಇನ್ನೂ ಹಲವಾರು ರಾಜಕೀಯ ಬೆಳವಣಿಗೆಗಳು ನೆಹ್ರೂರವರ ಹೆಸರನ್ನು ಹಾಗೂ ಅವರ ಜನಪ್ರಿಯತೆಯನ್ನು ಕುಲಗೆಡಿಸುತ್ತಿರುವುದೆಂಬ ಮಾತುಗಳು ಅಂದಿನ ಕಾಂಗ್ರೆಸ್ ಪಕ್ಷಕ್ಕೆ ತೋರಲಾರಂಭಿಸಿತು. ಇಂದಿರಾರವರೂ ತಂದೆಯವರನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ನೆಹ್ರೂರವರಿಗೂ ಕಸಿವಿಸಿಯಾಯಿತು. ಒಂದು ಕಡೆ, ತವರುಮನೆಯ ವಾತ್ಸಲ್ಯ, ಇನ್ನೊಂದು ಕಡೆ ಪ್ರೀತಿಯ ಪತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರಸಂಗಗಳು ಯಾವ ಹೆಣ್ಣಿಗಾದರೂ ತೊಡಕಾದ ಸಂದಿಗ್ಧ ಸನ್ನಿವೇಶಗಳು. ಇದನ್ನು ಎದುರಿಸಲು ಇಂದಿರಾ ಸ್ವಲ್ಪಕಾಲ ಹೆಣಗಬೇಕಾಯಿತು. ಕೊನೆಗೆ, ಅವರು ತಮ್ಮ ತಂದೆಯವರಿಗೇ ಹೆಚ್ಚಿನ ಸಹಕಾರ ನೀಡಲು ಮುಂದೆ ಬಂದರು. ಫಿರೋಜ್ ತಮ್ಮದೇ ಆದ ಒಂದು ಗುಂಪನ್ನು ನಿರ್ಮಿಸಿಕೊಂಡು ಸರ್ಕಾರದ ವಿರುದ್ಧ ಹೋರಾಡಲು ಶುರುಮಾಡಿದರು. ೧೯೫೭ರ ಚುನಾವಣೆಯಲ್ಲಿ ಪುನಃ ಗೆದ್ದು ಪಾರ್ಲಿಮೆಂಟ್‍ಗೆ ವಾಪಸ್ಸಾಗಿ ಬಂದರು. ಗಾಂಧಿಯವರು ಗೌಹಾತಿ (ಗುವಾಹಟಿ) ಯಲ್ಲಿರುವ ಇಂಡಿಯನ್ ಆಯಿಲ್ ರಿಫೈನರೀಸ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.

೧೯೫೮ ನೆಯ ಇಸವಿಯಲ್ಲಿ ಪ್ರಥಮ ಬಾರಿ ಅವರಿಗೆ ಹೃದಯಾಘಾತವಾಯಿತು. ಪತ್ನಿ ಇಂದಿರಾರವರು ಪತಿ ಫಿರೋಜ್‍ರವರನ್ನೂ ಇಬ್ಬರು ಪುಟ್ಟ ಮಕ್ಕಳ ಸಮೇತ ಹವಾ ಬದಲಾವಣೆಗಾಗಿ ಕಾಶ್ಮೀರಕ್ಕೆ ಕರೆದೊಯ್ದರು.[] ಆದರೆ ೧೯೬೦ ರಲ್ಲಿ, ಫಿರೋಝ್‍ರವರ ಹೃದಯರೋಗ ಮರುಕಳಿಸಿ ಮತ್ತೊಂದು ಹೃದಯಾಘಾತದಲ್ಲಿ ಫಿರೋಝ್ ಗಾಂಧಿಯವರು ಅಸುನೀಗಿದರು.

ಸ್ವಾತಂತ್ರ್ಯಪೂರ್ವದ ಭಾರತೀಯ ಪಾರ್ಲಿಮೆಂಟ್‍ನ ಸ್ವರೂಪ - ಎಲ್ಲಾ ಹೊಸದು

[ಬದಲಾಯಿಸಿ]

ಫಿರೋಝ್ ಗಾಂಧಿ, ಜವಾಹರ್ ಲಾಲ್ ನೆಹ್ರುರವರಂತಹ ಪ್ರಚಂಡ ಜನಪ್ರಿಯ ನಾಯಕನ ವಿರುದ್ಧ ಚಕಾರವೆತ್ತುವ ಸಾಹಸ ಮಾಡಿದ್ದು ಕೆಲವು ವೈಮನಸ್ಯಕ್ಕೆ ಎಡೆಮಾಡಿಕೊಟ್ಟಿತ್ತು.

ಜವಾಹರಲಾಲ್ ನೆಹರುರವರ ಪ್ರಚಂಡ ಜನಪ್ರಿಯತೆ ಹಾಗೂ ಅವರ ವರ್ಚಸ್ಸು

[ಬದಲಾಯಿಸಿ]

ನೆಹ್ರೂ ಸಮಯದ ರಾಜಕಾರಣವೆಂದರೆ, ಆಗಿನ್ನೂ ಪ್ರಜಾಪ್ರಭುತ್ವ ಮೊಳಕೆಯೊಡೆದು ಭ್ರೂಣಾಂಕುರವಾಗುತ್ತಿದ್ದ ಸಂಕೀರ್ಣ ಸಮಯ. ಭಾರತದ ಪಾರ್ಲಿಮೆಂಟ್‍ನಲ್ಲಿ ಹೆಸರಿಗೆ ವಿರೋಧಪಕ್ಷವಿತ್ತಷ್ಟೆ. ಕಾಂಗ್ರೆಸ್‍ಗೆ ಬಹುಮತವಿದ್ದದ್ದರಿಂದ ಮಸೂದೆಗಳೆಲ್ಲಾ ಸಲೀಸಾಗಿ ಕಾನೂನಿನ ರೂಪ ಪಡೆಯುತ್ತಿದ್ದವು. ನೆಹ್ರೂರವರದು ಮೇರು ವ್ಯಕ್ತಿತ್ವ. ಯಾವ ತೊಂದರೆಯೂ ಇಲ್ಲದೆ ಎಂಥಹ ಕಠಿಣ ಪರಿಸ್ಥಿತಿಯನ್ನೂ ಅವರು ಎದುರಿಸುವಷ್ಟು ಅವರಲ್ಲಿ ದಾರ್ಢ್ಯವಿತ್ತು. ಜನರು ನೆಹ್ರೂರವರ ಮಾತಿಗೆ ಅತ್ಯಂತ ಬೆಲೆಕೊಡುತ್ತಿದ್ದರು. ಈಗಿನಂತೆ, ಸದಸ್ಯರಿಗೆ ತಮ್ಮ ವಾದವನ್ನು ಮಂಡಿಸಲು, ಸಭಾತ್ಯಾಗ, ಚೀರಾಟ, ಹೊಡೆದಾಟಗಳ ಇತ್ಯಾದಿಗಳ ಅಗತ್ಯವಿರಲಿಲ್ಲ. ಆದರೆ, ಎಲ್ಲರೂ ತಮ್ಮ ಮಾತನ್ನೇ ಕೇಳಬೇಕೆನ್ನುವ ಅಹಂ ನೆಹ್ರೂರವರ ಮನಸ್ಸಿನಲ್ಲಿ ಬೇರೂರಿರಲು ಸಾಧ್ಯ. ಇಂತಹ ಸನ್ನಿವೇಶದಲ್ಲಿ ಬಿಸಿರಕ್ತದ ಫಿರೋಝ್ ಗಾಂಧಿಯವರ ಮಾತುಗಳು ಅಸಂಬದ್ಧವಾಗಿ ತೋರಿರಲೂ ಸಾಕು. ಬಹುಶಃ ಇಂತಹ ಭೂಮಿಕೆಯಲ್ಲಿ ಕೆಲಸ ಮಾಡುವಾಗ ಕೆಲವು ಅನಿವಾರ್ಯತೆಗಳು ಉದ್ಭವಿಸಿರಬಹುದು. ಇವೆಲ್ಲ ಚರಿತ್ರೆಯ ವಿರೋಧಾಭಾಸಗಳು.

ಉಲ್ಲೇಖಗಳು

[ಬದಲಾಯಿಸಿ]
  1. Frank 2002, p. 94: Feroze was a student at Bidya Mandir High School and Ewing Christian College.
  2. "Feroze Gandhi Death Anniversary: life history, career, and interesting lesser-known facts about the leader". Zee News (in ಇಂಗ್ಲಿಷ್).
  3. Gupte, Pranay (2012-02-15). Mother India: A Political Biography of Indira Gandhi (in ಇಂಗ್ಲಿಷ್). Penguin Books India. pp. 189–205. ISBN 9780143068266.
  4. "Indira Gandhi's courage was an inspiration". Samay Live. 7 November 2009.

ಗ್ರಂಥಸೂಚಿ

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: