ವಿಷಯಕ್ಕೆ ಹೋಗು

ಘರ್ಷಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರಳು ಕಾಗದ

ಘರ್ಷಕ ಎಂದರೆ ಪದಾರ್ಥಗಳನ್ನು ಉಜ್ಜಿ ಇಲ್ಲವೇ ಸಾಣೆ ಹಿಡಿದು ನಯಮಾಡಲು ಅಥವಾ ನಿಶ್ಚಿತ ರೂಪಕ್ಕೆ ತರಲು ಬಳಸುವ ಅತ್ಯಂತ ಕಠಿಣವಾದ ವಸ್ತು (ಅಬ್ರೇಸಿವ್). ಘರ್ಷಕಗಳು ಬಿಡಿ ಹರಳುಗಳಾಗಬಹುದು, ಸಾಣೆ ಚಕ್ರವಾಗಬಹುದು, ಮರಳು ಕಾಗದವಾಗಬಹುದು; ಅಥವಾ ಕರ್ತನೋಪಕರಣಗಳೂ ಆಗಬಹುದು. ವಜ್ರ, ಕುರಂದ,[] ಎಮರಿ, ಬೀಸುವ ಕಲ್ಲು, ಸಾಣೆ ಹಿಡಿಯುವ ತಿರುಗುಚಕ್ರ ಇವೆಲ್ಲವೂ ಬಳಕೆಯಲ್ಲಿರುವ ಘರ್ಷಕಗಳು. ಸಾಣೆ ವಸ್ತುವಾಗಲು ಯೋಗ್ಯತೆ ಇರುವಂಥ ಖನಿಜಗಳು ಸ್ವಾಭಾವಿಕವಾಗಿ ಸಿಕ್ಕುತ್ತವೆ. ಅವನ್ನು ಕೃತಕವಾಗಿಯೂ ತಯಾರಿಸಬಹುದು. ಆಧುನಿಕ ಕೈಗಾರಿಕೋದ್ಯಮಗಳಲ್ಲಿ ಕೃತಕ ಸಾಣೆ ವಸ್ತುಗಳ ಪಾತ್ರವೇ ಹೆಚ್ಚಿನದು. ಇವನ್ನು ನಾಲ್ಕು ಮುಖ್ಯ ವರ್ಗಗಳಾಗಿ ವಿಂಗಡಿಸಿದೆ.

ಸ್ವಾಭಾವಿಕ ಸಾಣೆ ವಸ್ತುಗಳು

[ಬದಲಾಯಿಸಿ]

ವಜ್ರ, ಕುರಂದ, ಎಮರಿ ಮತ್ತು ಗಾರ್ನೆಟ್[] ಇವುಗಳು ಸ್ವಾಭಾವಿಕ ಸಾಣೆ ವಸ್ತುಗಳು. ಇವುಗಳ ಪೈಕಿ ಅತಿ ಮುಖ್ಯವಾದದ್ದು ವಜ್ರ. ಇದಕ್ಕಿಂತ ಕಠಿನ ವಸ್ತು ಇನ್ನೊಂದಿಲ್ಲ. ವಜ್ರದ ಚೂರುಗಳನ್ನು ಜೋಡಿಸಿರುವ ಆಯುಧದಿಂದ ಎಂಥ ಗಡಸು ಕಲ್ಲನ್ನೂ ಕೊರೆಯಬಹುದು. ಭೂಮಿಯಲ್ಲಿ ಅತಿ ಆಳದಲ್ಲಿ ದೊರೆಯುವ ಖನಿಜಗಳ ಅನ್ವೇಷಣೆಗೆ ವಜ್ರಾಯುಧಗಳು ಸಹಕಾರಿ. ಹಾಗೆಯೇ ಕಲ್ಲುಗಳನ್ನು ನಯಮಾಡುವುದಕ್ಕೂ, ಗಾಜುಗಳನ್ನು ಸೀಳುವುದಕ್ಕೂ ವಜ್ರಮಿಶ್ರಿತ ಆಯುಧಗಳನ್ನು ಉಪಯೋಗಿಸುತ್ತಾರೆ.[] ಕಾರ್ಬೊನಾಡೋ ಮತ್ತು ಬೊರ್ಟ್ ಎಂಬ ಎರಡು ಬಗೆಯ ವಜ್ರರೂಪಗಳು ಈ ಕೆಲಸಕ್ಕೆ ಉಪಯೋಗವಾಗುತ್ತವೆ.[] ಇವು ಪಾರದರ್ಶಕವಲ್ಲದವು. ಅವುಗಳಿಗೆ ಕಾಠಿಣ್ಯ ಬಿಟ್ಟು ಹೊಳಪಾಗಲಿ, ಪಾರದರ್ಶಕತೆಯಾಗಲಿ ಇರುವುದಿಲ್ಲ. ಕುರಂದ ಸ್ವಾಭಾವಿಕವಾಗಿ ಸಿಕ್ಕುವ ಖನಿಜ. ಇದು ಆರು ಮೂಲೆಯ ಹರಳುಗಳಾಗಿ ದೊರೆಯುತ್ತದೆ. ಕುರಂದ ಕಲ್ಲಿನಲ್ಲಿ ಮೂರು ಮುಖ್ಯ ರೂಪಗಳನ್ನು ಗುರುತಿಸಬಹುದು; (i) ವೈಢೂರ್ಯ, (ii) ಕುರಂದ ಮತ್ತು (iii) ಎಮರಿ. ಪಾರದರ್ಶಕವಾಗಿದ್ದು ಹೊಳಪುಳ್ಳ ರತ್ನ ಯೋಗ್ಯವಾದ ಕುರಂದ ವೈಡೂರ್ಯವೆಂದೆನಿಸಿಕೊಳ್ಳುತ್ತದೆ. ಪಾರದರ್ಶಕವಲ್ಲದ ಸಾಮಾನ್ಯ ಖನಿಜಕ್ಕೆ ಕುರಂದವೆಂದು ಹೆಸರು. ಕುರಂದದೊಡನೆ ಮ್ಯಾಗ್ನಟೈಟ್, ಹೀಮಟೈಟ್ ಮುಂತಾದ ಕಬ್ಬಿಣ ಸಂಬಂಧದ ಹರಳುಗಳು ಸೇರಿದಾಗ ಅದಕ್ಕೆ ಎಮರಿ ಎಂದು ಹೆಸರು.[] ಕುರಂದ ಮತ್ತು ಎಮರಿ ಕಠಿನವಾದ ಉತ್ತಮ ದರ್ಜೆಯ ಸಾಣೆ ವಸ್ತುಗಳು. ಇವು ಬಣ್ಣದಲ್ಲಿ ಬೂದು ಅಥವಾ ಕೆಂಪು ಛಾಯೆಯನ್ನು ಪ್ರದರ್ಶಿಸುತ್ತವೆ. ಕುರಂದದ ಪುಡಿ ಇಲ್ಲವೆ ಅಂಟು ಪದಾರ್ಥ ಸೇರಿಸಿ ತಯಾರಿಸಿದ ಕುರಂದ ಕಾಗದ (ಮರಳು ಕಾಗದ) ಅಥವಾ ವಿವಿಧ ಆಕಾರದ ಅಳತೆಯ ಕುರಂದದ ಸಾಣೆ ಚಕ್ರವನ್ನು ಸಾಣೆ ಕೆಲಸಕ್ಕೆ ಉಪಯೋಗಿಸುತ್ತಾರೆ. ಗಾರ್ನೆಟ್ ಅಥವಾ ಕೆಂಪು ಕೂಡ ಸಾಣೆಗೆ ಯೋಗ್ಯವಾದ ಖನಿಜ. ಇದು ಪಾರದರ್ಶಕವಾಗಿದ್ದರೆ ಮಾತ್ರ ರತ್ನವೆಂದು ಪರಿಗಣಿಸಲ್ಪಡುತ್ತದೆ. ಸಾಧಾರಣವಾದ ಗಾರ್ನೆಟ್ ಸಾಣೆ ಕೆಲಸಕ್ಕೆ ಉಪಯೋಗವಾಗುತ್ತದೆ. ಗಾರ್ನೆಟ್ ಪುಡಿ ಅಂಟಿಸಿ ಮಾಡಿರುವ ಮರಳು ಕಾಗದಗಳನ್ನು ಮರಗೆಲಸದಲ್ಲಿಯೂ, ಚರ್ಮವನ್ನು ನುಣುಪು ಮಾಡುವುದರಲ್ಲಿಯೂ ಉಪಯೋಗಿಸುತ್ತಾರೆ.

ಸಿಲಿಕಾಂಶವಿರುವ ಘರ್ಷಕ ವಸ್ತುಗಳು

[ಬದಲಾಯಿಸಿ]

ಬೀಸುಕಲ್ಲು, ಫ್ಲಿಂಟ್ ಗುಂಡುಗಳು ಮತ್ತು ಬೆಣಚು ಇವು ಸಿಲಿಕಾಂಶವಿರುವ ಘರ್ಷಕ ವಸ್ತುಗಳು. ಪ್ರತಿ ಮನೆಯಲ್ಲಿಯೂ ಬೀಸುವುದಕ್ಕಾಗಿ ಉಪಯೋಗಿಸುವ ಬೀಸುಕಲ್ಲುಗಳೂ ಒಂದು ಬಗೆಯ ಘರ್ಷಕ ವಸ್ತುಗಳೇ. ಕಠಿನ ಮತ್ತು ತೂಕವಾಗಿರುವ ಬೆಣಚು ಹರಳುಗಳನ್ನು ಒಳಗೊಂಡ ಕಲ್ಲುಗಳು ಬೀಸುವ ಕೆಲಸಕ್ಕೆ ಹೇಳಿದಂಥವು. ಹೊನ್ನಾಳಿ ತಾಲ್ಲೂಕಿನಲ್ಲಿ ಇಂಥ ಬಗೆಯ ಕಲ್ಲು ದೊರೆಯುವ ಗುಡ್ಡ ಉಂಟು. ಅದಕ್ಕೆ ಬೀಸೊಕಲ್ ಮಟ್ಟಿ ಎಂದೇ ಹೆಸರು. ಕತ್ತಿ ಮತ್ತು ಚಾಕುಗಳನ್ನು ಸಾಣೆ ಹಿಡಿಯುವುದಕ್ಕೆ ಸ್ಲೇಟುಕಲ್ಲನ್ನು ಉಪಯೋಗಿಸುತ್ತಾರೆ.[][] ಫ್ಲಿಂಟ್ ಎಂಬುದು ಗಡುಸಾದ ಬೆಣಚುಕಲ್ಲಿನ ಒಂದು ರೂಪ. ಫ್ಲಿಂಟ್‌ನಿಂದಾದ ಕಲ್ಲು ಗುಂಡುಗಳನ್ನು ಉರುಳುವ ಬಾಲ್ ಮಿಲ್ಲುಗಳಲ್ಲಿ ಉಪಯೋಗಿಸುತ್ತಾರೆ.[] ಫ್ಲಿಂಟ್ ಗುಂಡುಗಳ ಘರ್ಷಣೆಯಿಂದ ಎಂಥ ಕಠಿನ ಕಲ್ಲನ್ನೂ ದೂಳಿನ ಗಾತ್ರಕ್ಕೆ ಚೂರ್ಣಿಸಬಹುದು. ಖನಿಜ ಸಾಮಗ್ರಿಯನ್ನು ನುಣ್ಣಗೆ ಅರೆಯುವುದಕ್ಕೆ ಫ್ಲಿಂಟ್ ಗುಂಡುಗಳನ್ನು ವಿಶೇಷವಾಗಿ ಉಪಯೋಗಿಸುತ್ತಾರೆ.

ಮೃದು ಸಾಣೆ ವಸ್ತುಗಳು

[ಬದಲಾಯಿಸಿ]

ಕೆಯೊಲಿನ್, ಫೆಲ್‍ಸ್ಪಾರ್,[] ಬಳಪದ ಕಲ್ಲು ಮತ್ತು ಟಾಲ್ಕ್ ಇವುಗಳಲ್ಲಿ ಸೇರುತ್ತವೆ. ಮುಖ್ಯವಾಗಿ ವಸ್ತುಗಳಿಗೆ ಮೆರುಗು ಕೊಡಲು ಇವನ್ನು ಬಳಸುತ್ತಾರೆ. ಮೋಟಾರು ಗಾಡಿಯ ಎಂಜಿನಿನ ಸಿಲಿಂಡರನ್ನು ಬಹು ಹೊಳಪಾಗಿಯೂ, ಸಮಂಜಸವಾಗಿಯೂ ಕೂಡಿಸಲು ಇಂಥ ಮೃದು ಸಾಣೆ ವಸ್ತುಗಳ ಉಪಯೋಗ ಉಂಟು.

ಕೃತಕ ಘರ್ಷಕ ವಸ್ತುಗಳು

[ಬದಲಾಯಿಸಿ]

ಇವುಗಳಲ್ಲಿ ಕಾರ್ಬೋರಂಡಮ್ ಅಥವಾ ಸಿಲಿಕಾನ್ ಕಾರ್ಬೈಡ್,[೧೦] ಆಲುಂಡಮ್ ಮತ್ತು ಲೋಹ ಘರ್ಷಕಗಳು ಸೇರಿವೆ. ಇವು ಈಚಿನ ವರ್ಷಗಳಲ್ಲಿ ಬಹಳ ಪ್ರಾಮುಖ್ಯಕ್ಕೆ ಬಂದಿವೆ. ಉತ್ತಮ ಸಿಲಿಕ ಮತ್ತು ಇದ್ದಲು, ಸ್ವಲ್ಪ ಮಟ್ಟಿಗೆ ಮರದ ಹೊಟ್ಟು, ಉಪ್ಪು ಇವನ್ನು ಸೇರಿಸಿ ಅತ್ಯುಷ್ಣತೆಗೆ ಗುರಿಪಡಿಸಿದರೆ ಇವುಗಳ ಸಂಯೋಗ ನಡೆದು ಸಿಲಿಕಾನ್ ಕಾರ್ಬೈಡ್ ಉತ್ಪತ್ತಿಯಾಗುತ್ತದೆ. ಉಷ್ಣತೆ ಸುಮಾರು 30000C ಬೇಕಾಗಿರುವುದರಿಂದ ವಿದ್ಯುತ್ ಒಲೆಯನ್ನೇ ಉಪಯೋಗಿಸಬೇಕು. ಕಾರ್ಬೊರಂಡಮ್ ಸುಮಾರು ವಜ್ರದಷ್ಟೇ ಕಠಿನವಾಗಿದೆ. ಇದರ ಹರಳುಗಳು ಬಹು ಪೆಡಸು, ಇದರ ಉಷ್ಣತಾಸಹಿಷ್ಣುತೆ ಕೂಡ ಅತಿ ಹೆಚ್ಚು. ಇದರಿಂದಲೇ ಈ ವಸ್ತುವನ್ನು ಬೀಡುಕಬ್ಬಿಣ, ಸತು, ತಾಮ್ರ, ಕಲ್ಲು, ಗಾಜು ಮೊದಲಾದವನ್ನು ಉಜ್ಜಿ ಹರಿತಗೊಳಿಸಲು ಮತ್ತು ನಯಮಾಡಲು ಉಪಯೋಗಿಸುತ್ತಾರೆ. ಏಕೀಕರಿಸಿದ ಅಲ್ಯೂಮಿನಿಯಮ್ ಆಕ್ಸೈಡ್‍ನ್ನು ಅದುರಿನಿಂದ ತಯಾರಿಸುತ್ತಾರೆ. ಬಾಕ್ಸೈಟ್ ಅದುರು, ಕೋಕ್ ಮತ್ತು ಕಬ್ಬಿಣದ ಚೂರುಗಳನ್ನು ಸೇರಿಸಿ ಒಂದು ವಿದ್ಯುತ್ ಒಲೆಯಲ್ಲಿ ಕರಗಿಸಿದಾಗ ರಸಾಯನಕ್ರಿಯೆಗಳು ನಡೆದು ನೀರು ಮತ್ತು ಇತರ ಕಲ್ಮಷಗಳು ಕೆಳಗೆ ನಿಂತು, ಮೇಲೆ ಏಕೀಕರಿಸಿದ ಅಲ್ಯೂಮಿನಿಯಮ್ ಆಕ್ಸೈಡ್ ಉತ್ಪನ್ನವಾಗುತ್ತದೆ. ಅದನ್ನು ಹೊರಕ್ಕೆ ತೆಗೆದು ಪುಡಿಮಾಡಿ ಸಲ್ಫ್ಯೂರಿಕ್ ಆಮ್ಲದಲ್ಲೂ, ಬಳಿಕ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲೂ ಶುದ್ಧೀಕರಿಸಿ ನೀರಿನಲ್ಲಿ ತೊಳೆಯುತ್ತಾರೆ. ಹೀಗೆ ಉತ್ಪಾದನೆಯಾದ ಏಕೀಕರಿಸಿದ ಅಲ್ಯೂಮಿನಿಯಮ್ ಆಕ್ಸೈಡ್‌ನ್ನು ಸಾಣೆಕಲ್ಲು ಮಾಡುವುದಕ್ಕೂ ಹೇರಳವಾಗಿ ಉಪಯೋಗಿಸುತ್ತಾರೆ.

ಕರಗಿರುವ ಉಕ್ಕನ್ನು ಒಮ್ಮೆಗೇ ತಣ್ಣಗಾಗುವಂತೆ ಮಾಡಿದಾಗ ಅದು ಅತಿ ಗಡುಸಾಗುತ್ತದೆ. ಇಂಥ ಗಡುಸಾದ ಉಕ್ಕಿನ ಗೋಲಿಗಳನ್ನು ಬಾಲ್ ಮಿಲ್ಲುಗಳಲ್ಲಿ ಹೇರಳವಾಗಿ ಉಪಯೋಗಿಸುತ್ತಾರೆ. ಗಡುಸಾದ ಎಂಥ ಕಲ್ಲನ್ನಾಗಲಿ ಈ ಬಾಲ್ ಮಿಲ್ಲುಗಳಲ್ಲಿ ಹಿಟ್ಟಿನಂತೆ ನುಣ್ಣಗೆ ಮಾಡಿಬಿಡಬಹುದು. ಉಕ್ಕಿನ ತಂತಿಗಳನ್ನು ಹೆಣೆದು ನಾರಿನಂತೆ ಮಾಡಿ ಅದನ್ನು ಮರದ ಸಾಮಾನುಗಳನ್ನು ಹೆರೆಯುವುದಕ್ಕೂ, ನಯ ಮಾಡುವುದಕ್ಕೂ ಬಳಸುವುದುಂಟು.

ಉಲ್ಲೇಖಗಳು

[ಬದಲಾಯಿಸಿ]
  1. "Abrasives engineering glossary". Archived from the original on 2 April 2007. Retrieved 2007-04-06.
  2. Perec, Andrzej (1 October 2017). "Disintegration and recycling possibility of selected abrasives for water jet cutting". DYNA. 84 (203): 249–256. doi:10.15446/dyna.v84n203.62592.
  3. Holtzapffel C (1856). Turning And Mechanical Manipulation. Holtzapffel & Co. pp. 176–178. ISBN 978-1-879335-39-4.
  4. MINES BUREAU (2010). Minerals Yearbook Metals and Minerals 2010 Volume I. pp. 21–22. ISBN 978-1-4113-3449-6. Archived from the original on December 30, 2018. Retrieved December 30, 2018.{{cite book}}: CS1 maint: multiple names: authors list (link)
  5. Hurlbut, Cornelius S.; Klein, Cornelis (1985). Manual of Mineralogy (20th ed.). Wiley. pp. 300–302. ISBN 0-471-80580-7.
  6. Taylor, William B. (2009). "Whetstones Found in Southeastern Massachusetts" (PDF). Bulletin of the Massachusetts Archaeological Society. 70 (2): 79–80. Archived (PDF) from the original on 2021-06-28. Retrieved 28 June 2021.
  7. Arbel, Yoav (2020). "Miscellaneous Finds from the Magen Avraham Compound, Yafo (Jaffa)". 'Atiqot. 100: 363–372. JSTOR 26954598.
  8. Sawyer, J.D. (2007). Thoroughly Modern Milling. American Ceramic Society Bulletin. Vol. Bulletin 86, No. 6.
  9. Neufeld, Rob (4 August 2019). "Visiting Our Past: Feldspar mining and racial tensions". Asheville Citizen-Times. Retrieved 4 August 2019.
  10. "The Manufacture of Carborundum- a New Industry". Scientific American. April 7, 1894. Archived from the original on January 23, 2009. Retrieved 2009-06-06.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಘರ್ಷಕ&oldid=1272545" ಇಂದ ಪಡೆಯಲ್ಪಟ್ಟಿದೆ