ವಿಷಯಕ್ಕೆ ಹೋಗು

ಉದಯಗಿರಿ ಮತ್ತು ಖಂಡಗಿರಿ ಗುಹೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭುವನೇಶ್ವರದಲ್ಲಿ ಉದಯಗಿರಿ ಮತ್ತು ಖಂಡಗಿರಿ ಗುಹೆಗಳು

ಉದಯಗಿರಿ ಮತ್ತು ಖಂಡಗಿರಿ ಒಡಿಶಾ ರಾಜ್ಯದಲ್ಲಿ ಭುವನೇಶ್ವರದಿಂದ ವಾಯವ್ಯಕ್ಕೆ 5 ಮೈ. ದೂರದಲ್ಲಿರುವ ಸಣ್ಣ ಗುಡ್ಡಗಳು (ಉ.ಅ. 200 16'; ಪೂ.ರೇ. 850 47').

ಉದಯಗಿರಿ

[ಬದಲಾಯಿಸಿ]

ಉದಯಗಿರಿಯ ಬೌದ್ಧ ಗುಹೆಗಳಲ್ಲಿ ಹಲವು ಕಲಿಂಗ ರಾಜ ಖಾರವೇಲನ ಕಾಲದ್ದವೆಂದು (ಸು. 2ನೆಯ ಶತಮಾನ) ತರ್ಕಿಸಲಾಗಿದೆ.[] ಒರಿಸ್ಸದ ಉದಯಗಿರಿ ಗುಹೆಗಳಲ್ಲಿ ಮಂಚಪುರಿ ಗುಹೆಯನ್ನು ಆರ್ಯ ಮಹಾಮೇಘವಾಹನ ಮಹಾರಾಜ ವಕ್ರದೇವನು ಕೊರೆಯಿಸಿದ. ಉದಯಗಿರಿಯ ಗವಿಗಳಲ್ಲಿ ರಾಣಿಗುಂಫ ಎಂಬ ಗವಿ ಎಲ್ಲಕ್ಕೂ ದೊಡ್ಡದಿದ್ದು[] ಅದರ ಒಳಭಾಗದಲ್ಲಿ ಅನೇಕ ಮೂರ್ತಿಗಳ ಸಾಲುಗಳನ್ನು ಕೆತ್ತಲಾಗಿದೆ. ಇವು ಭವ್ಯ ಮತ್ತು ಚೈತನ್ಯಪೂರ್ಣ ಕಲಾಕೃತಿಗಳು. ಇವುಗಳಲ್ಲಿನ ಬೌದ್ಧ ಶಿಲ್ಪಗಳ ಪೈಕಿ ಬೋಧಿವೃಕ್ಷದ ಸುತ್ತ ಸ್ತ್ರೀಪುರುಷರು ವಾದ್ಯಗಳನ್ನು ನುಡಿಸಿ ಹಾಡಿ ನರ್ತಿಸುತ್ತಿರುವ ಚಿತ್ರ ಅತ್ಯಂತ ಆಕರ್ಷಕವಾದದ್ದು.

ರಾಣಿಗುಂಫಾದ ಸಮಗ್ರ ನೋಟ

ಖಂಡಗಿರಿ

[ಬದಲಾಯಿಸಿ]

ಮರಳು ಶಿಲೆಗಳಿಂದಾದ ಖಂಡಗಿರಿ ಗುಡ್ಡದಲ್ಲಿ ಕೊರೆಯಲಾಗಿರುವ ಜೈನವಿಹಾರಗಳು ಪಾಚೀನ ಕಾಲದಿಂದಲೂ ಜೈನರಿಗೆ ಪವಿತ್ರವಾದವು. ಇಲ್ಲಿಯ ಕೆಲವು ಗುಹೆಗಳನ್ನು ಬಿಟ್ಟರೆ ಉಳಿದ ಎಲ್ಲ ಗುಹೆಗಳೂ ಕ್ರಿ.ಶ.ದ ಪ್ರಾರಂಭಕ್ಕೆ ಸೇರಿದವು.

ಈ ಗುಡ್ಡ ಚಿಕ್ಕದಾದ್ದರಿಂದ ಇಲ್ಲಿಯ ವಿಹಾರಗಳು ಪಶ್ಚಿಮ ಘಟ್ಟಗಳಲ್ಲಿ ಕೊರೆಯಲಾಗಿರುವ ವಿಹಾರಗಳಷ್ಟು ವಿಶಾಲವಾಗಿಲ್ಲ. ಇವುಗಳ ರಚನಾಕ್ರಮ ಅತ್ಯಂತ ಸರಳವಾಗಿದೆ. ಸಾಮಾನ್ಯವಾಗಿ ಒಂದು ಸಣ್ಣ ಕೋಣೆಯಿದ್ದು ಅದರ ಮುಂಭಾಗದಲ್ಲಿ ಸ್ತಂಭಗಳುಳ್ಳ ಒಂದು ಕೈಸಾಲೆ ಇರುತ್ತದೆ.

ಅನಂತಗುಂಫಾ

[ಬದಲಾಯಿಸಿ]
ಅನಂತಗುಂಫಾ ಗುಹೆ

ಖಂಡಗಿರಿಯಲ್ಲಿರುವ ಗುಹೆಗಳ (ಗುಂಫಾ) ಸಂಖ್ಯೆ ಸುಮಾರು ಹದಿನೈದು.[] ಇವುಗಳ ಪೈಕಿ ಅನಂತಗುಂಫಾ ಮುಖ್ಯವಾದ್ದು. ಇದು ಕ್ರಿ.ಶ. ಒಂದನೆಯ ಶತಮಾನಕ್ಕೆ ಸೇರಿದ್ದು. ಇತರ ಗುಹೆಗಳಂತೆ ಇದು ಕೂಡ ಅತ್ಯಂತ ಸರಳವಾಗಿದ್ದರೂ ಇಲ್ಲಿಯ ಮತೀಯ ಹಾಗೂ ಅಲಂಕಾರಿಕ ಶಿಲ್ಪಗಳು ಸಾಂಚಿಯ ಶಿಲ್ಪಗಳನ್ನು ಹೋಲುವುದು ಇದರ ವೈಶಿಷ್ಟ್ಯ. ಈ ಗುಹೆಯಲ್ಲಿ ಸ್ತ್ರೀಯರು, ಆನೆಗಳು, ಹೆಬ್ಬಾತು, ಇತ್ಯಾದಿಗಳ ಶಿಲ್ಪಗಳಿವೆ.[] ಕೈಸಾಲೆಯ ಗೋಡೆಯ ಮೇಲೆ ಸಾಲಾಗಿ ಕಡೆದಿರುವ ಕಟಕಟೆಗಳು, ನಡುನಡುವೆ ಕಮಲದ ಹೂವುಗಳು, ಬಾಗಿಲ ಕಮಾನುಗಳ ಮೇಲಿರುವ ತ್ರಿರತ್ನ ಚಿಹ್ನೆಗಳು, ಬಾಲವನ್ನು ಹೆಣೆದುಕೊಂಡಿರುವ ನಾಗಗಳು, ಕೈಯಲ್ಲಿರುವ ಪಾತ್ರೆಯಿಂದ ಹೂವನ್ನು ಸುರಿಯುತ್ತ ಹಾರುತ್ತಿರುವ ವಿದ್ಯಾಧರರು, ಕಂಬದ ಮೇಲೆ ತಲೆಕೆಳಗಾಗಿ ಇಟ್ಟಿರುವ ಕಮಲಗಳು, ಸುಂದರ ಶಿಲ್ಪಗಳುಳ್ಳ ಬೋದಿಗೆಗಳು, ಇಷ್ಟಲ್ಲದೆ ಅನೇಕ ಗಿಡಮರಗಳ ಮತ್ತು ಪ್ರಾಣಿಗಳ ಶಿಲ್ಪಗಳು ಮಧ್ಯಭಾರತದ ಶುಂಗರ ಕಾಲದ ಸ್ತೂಪಗಳ ಮತ್ತು ವಿಹಾರಗಳ ಶಿಲ್ಪಗಳನ್ನು ಹೋಲುತ್ತವೆ. ಇದೇ ಶೈಲಿಯ ಬೋದಿಗೆಗಳು ಮತ್ತು ಅದರ ಮೇಲೆ ಕಡೆದಿರುವ ಶಿಲ್ಪಗಳು ಆರು ಶತಮಾನಗಳ ಅನಂತರ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ ಕಂಡುಬರುವುದು ಗಮನಾರ್ಹ. ಈ ಗುಹೆಯ ಬಾಗಿಲುಗಳ ಚೌಕಟ್ಟಿನ ಮೇಲುಭಾಗದಲ್ಲಿ ಕೆತ್ತಿರುವ, ಕಮಲಾಸೀನಳಾದ ಲಕ್ಷ್ಮಿ, ರಥಾರೂಢನಾದ ಸೂರ್ಯ ಇವನ್ನು ವಿಶೇಷವಾಗಿ ಗಮನಿಸಬೇಕು.

ಖಂಡಗಿರಿಯ ಜೈನರ ಈ ನಿರ್ಮಾಣಗಳು ವಾಸ್ತುಶಿಲ್ಪದ ದೃಷ್ಟಿಯಲ್ಲಿ ಅಷ್ಟೊಂದು ಶ್ರೇಷ್ಠ ಸ್ಥಾನವನ್ನು ಗಳಿಸದಿದ್ದರೂ ಅವು ತಮ್ಮದೇ ಆದ ಒಂದು ಸ್ಥಳೀಯ ರೀತಿಯನ್ನು ಪ್ರತಿನಿಧಿಸುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Krishan & Tadikonda 1996, p. 23.
  2. Allen 1991, p. 65.
  3. "Inside Bhubaneswar". Archaeological Sites of Orissa. Archived from the original on 28 ಜೂನ್ 2011. Retrieved 16 ಸೆಪ್ಟೆಂಬರ್ 2011.
  4. Senapati 2019, p. 184.


ಗ್ರಂಥಸೂಚಿ

[ಬದಲಾಯಿಸಿ]


ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: